Close

ಸತ್ಯಪಾಲನೆ ಮತ್ತು ಧರ್ಮಪಾಲನೆಯ ಮರ್ಮ


ಸ್ನೇಹಿತನ ಮಗಳ ಮದುವೆ. ತುಂಬಾ ಬಡ ಕುಟುಂಬ. ಸಾಲ ಮಾಡಿ ಮದುವೆಯ ತಯಾರಿ ಮಾಡಿದ್ದಾರೆ. ಇನ್ನೇನು ಮದುವೆ ಮನೆಗೆ ತೆರಳಬೇಕು. ವಧುವಿನ ಅಜ್ಜಿ ಜಾರಿ ಬಿದ್ದರು. ಆಸ್ಪತ್ರೆಗೆ ಸಾಗಿಸಿದ್ದೂ ಆಯಿತು. ಮದುವೆಯ ದಿನ. ಮುಹೂರ್ತ ಹತ್ತಿರ ಬರುತ್ತಾ ಇದೆ. ನಿಮ್ಮನ್ನು ಕಳುಹಿಸಿ – “ಅಜ್ಜಿ ಹೇಗಿದ್ದಾರೆ ಸ್ವಲ್ಪ ನೋಡಿಕೊಂಡು ಬನ್ನಿಅಂದರು. ಆಸ್ಪತ್ರೆಯಲ್ಲಿ ವೈದ್ಯರು ನಿಮಗೆ ಸುದ್ದಿ ಕೊಟ್ಟರು. ಅಜ್ಜಿ ಸ್ವಲ್ಪ ಹೊತ್ತು ಮುಂಚೆಯಷ್ಟೇ ತೀರಿಕೊಂಡರು. “ಛೇ! ಎಂತಹ ದುರ್ದೈವಎನ್ನುವಷ್ಟರಲ್ಲಿ ಸ್ನೇಹಿತನ ಫೋನ್ ಬಂದೇ ಬಿಟ್ಟಿತು. “ಹೇಗಿದ್ದಾರೆ ಅಮ್ಮ?” – ಆತ ಕೇಳಿದ.

ನಿಮ್ಮದೋ ಏನೇ ಆಗಲಿ ಸತ್ಯವನ್ನೇ ಹೇಳುತ್ತೇನೆಎಂಬ ವ್ರತ. ಅಜ್ಜಿ ತೀರಿಕೊಂಡರು ಎಂದು ಹೇಳಿದರೆ ಮದುವೆ ನಿಂತೇ ಹೋಗುತ್ತದೆ.

ಏನು ಹೇಳುವುದು? ಧರ್ಮ ಸಂಕಟ.

ಶ್ರೀ ಕೃಷ್ಣ ಧರ್ಮ ಸಂಕಟ ಪರಿಹಾರ ಮಾಡುತ್ತಾನೆ – “ಸತ್ಯ ಹೇಳಿಬಿಡು. ಮದುವೆ ಉಳಿಸು“.

ಅರೆ! ಸತ್ಯ ಹೇಳಿದರೆ ಮದುವೆ ನಿಲ್ಲುತ್ತದೆ ಎನ್ನುವ ತಲೆ ನೋವು ನಮಗೆ. ಆದರೆ ಪರಮಾತ್ಮ ಸತ್ಯ ಹೇಳಿ ಮದುವೆ ನಡೆಸು ಎನ್ನುತ್ತಾನಲ್ಲಾ?

ನಿನಗೆ ಸತ್ಯದ ಅರಿವೇ ಇಲ್ಲ ಎನ್ನುತ್ತಾನೆ ಕೃಷ್ಣ. ಇದ್ದದ್ದನ್ನು ಇದ್ದ ಹಾಗೆ ಹೇಳುವುದು ಸತ್ಯವಲ್ಲ ಎಂದು ಸಾರುತ್ತಾನೆ ಸತ್ಯಮೂರ್ತಿ ಕೃಷ್ಣ.

ಹಾಗಾದರೆ ಸತ್ಯ ಎಂದರೇನು?

ಯತ್ ಸತಾಂ ಹಿತಮತ್ಯಂತಂ

ಮಹಾಭಾರತ ಯುದ್ಧದ 17ನೇ ದಿನ. ಕರ್ಣನ ಕೈಯಲ್ಲಿ ತುಂಬಾ ಪೆಟ್ಟು ತಿಂದ ಧರ್ಮರಾಜ ನೋವು ತಡೆಯಲಾರದೆ ಶಿಬಿರಕ್ಕೆ ಹಿಂದಿರುಗಿದ. ಎಷ್ಟು ಹೊತ್ತಾದರೂ ಅಣ್ಣ ಹಿಂದಿರುಗಲಿಲ್ಲ ಎಂಬ ಚಿಂತೆ ಅರ್ಜುನನಿಗೆ ಕಾಡತೊಡಗಿತು. ಅಲ್ಲೇ ಇದ್ದ ಭೀಮನನ್ನು ಕೇಳಿಕೊಂಡ.

ಅಣ್ಣ ಭೀಮ. ನಮ್ಮ ದೊಡ್ಡಣ್ಣ ಹೇಗಿದ್ದಾನೆ ಸ್ವಲ್ಪ ನೋಡಿಕೊಂಡು ಬಾ” – ಎಂದ.

ಧರ್ಮರಾಜನಿಗೆ ಏನೂ ಆಗಿರುವುದಿಲ್ಲ. ಅಷ್ಟೂ ಚಿಂತೆ ಇದ್ದರೆ ನೀನೇ ಹೋಗಿ ಬಾ. ನಾನೇದಾರೂ ಶಿಬಿರಕ್ಕೆ ಹೊರಟರೆ ಯುದ್ಧಕ್ಕೆ ಅಂಜಿ ಹಿಂದಿರುಗಿದ ಎಂಬ ಆಪಾದನೆ ಬರಬಹುದು. ನನ್ನ ಶುದ್ಧ ಭಾಗವತ ಧರ್ಮದ ವ್ರತಕ್ಕೆ ಲೋಪ ಬಂದೀತು” – ಎಂದ ವೃಕೋದರ.

ಅರ್ಜುನ ಕೃಷ್ಣನೊಟ್ಟಿಗೆ ಶಿಬಿರಕ್ಕೆ ಬಂದ. ಅನಿರೀಕ್ಷಿತವಾಗಿ ಅರ್ಜುನ ಬಂದದ್ದನ್ನು ನೋಡಿ ಧರ್ಮರಾಜ ಒಹೋ! ಕರ್ಣನ ವಧೆಯಾಗಿರಬೇಕು. ಸಿಹಿ ಸುದ್ದಿ ತಿಳಿಸಲು ಖುದ್ದಾಗಿ ಕೃಷ್ಣಾರ್ಜುನರು ಬಂದಿರುವರುಎಂದು ಸಂತೋಷಪಟ್ಟು ಅರ್ಜುನನನ್ನು ಅಭಿನಂದಿಸಿ ಹೊಗಳಿದ.

ತಕ್ಷಣ ಅಣ್ಣನನ್ನು ತಡೆದು ಕರ್ಣನನ್ನು ಇನ್ನು ಮುಂದೆ ಕೊಲ್ಲಲಿದ್ದೇನೆ. ಈಗ ಕೇವಲ ನಿನ್ನ ಕ್ಷೇಮದ ಚಿಂತೆಯಿಂದ ಇಲ್ಲಿಗೆ ಬಂದೆ ಎಂದ ಅರ್ಜುನ.

ಧರ್ಮರಾಜನಿಗೆ ಬೇಸರ, ಸಿಟ್ಟು ಒಟ್ಟಿಗೆ ಏರಿತು. ಅರ್ಜುನನಿಗೆ ಬಾಯಿಗೆ ಬಂದ ಹಾಗೆ ತೆಗಳಿದ. ಕೊನೆಗೆ ತಡೆಯಲಾರದೆ ನಿನ್ನ ಗಾಂಡೀವವನ್ನು ಬೇರೆ ಯಾರಿಗಾದರೂ ಕೊಟ್ಟುಬಿಡುಎಂದ.

ಅಷ್ಟೇ ಹೇಳಿದ್ದು. ಅರ್ಜುನ ಕೃಷ್ಣ ನೋಡುತ್ತಿದ್ದಂತೆಯೇ ವರಸೆಯಿಂದ ಕತ್ತಿಯನ್ನು ತೆಗೆದೇ ಬಿಟ್ಟ. ಕೋಪದಿಂದ ಬುಸುಗುಟ್ಟುತ್ತಾ ಅಣ್ಣನ ಕಡೆಗೆ ಹೆಜ್ಜೆ ಹಾಕತೊಡಗಿದ.

ತನ್ನ ಶಿಷ್ಯನ ಈ ರೀತಿಯ ಪ್ರತಿಕ್ರಿಯೆ ನೋಡಿ ಶ್ರೀ ಕೃಷ್ಣನಿಗೆ ಆಶ್ಚರ್ಯ. ಅವನ್ನನ್ನು ತಡೆಹಿಡಿದು – “ಏನು ಅರ್ಜುನ ನಿನ್ನ ಆಲೋಚನೆ? ಕೈಯಲ್ಲಿ ಕತ್ತಿ ಹಿಡಿದು ಅಣ್ಣನನ್ನು ಮುಗಿಸುವ ತಯಾರಿ ಇದ್ದ ಹಾಗೆ ಇದೆ?” ಎಂದ.

ಅರ್ಜುನ ಗುಟ್ಟನ್ನು ರಟ್ಟು ಮಾಡಿದ – “ಶಸ್ತ್ರಾಭ್ಯಾಸದ ಸಮಯದಲ್ಲೇ ಗುರು ದ್ರೋಣರು ನಮ್ಮೆಲ್ಲರ ಹತ್ತಿರ ಒಂದೊಂದು ರಹಸ್ಯ ವ್ರತ ಕೈಗೊಳ್ಳುವಂತೆ ಪ್ರತಿಜ್ಞೆ ಮಾಡಿಸಿದ್ದರು. ಆ ವ್ರತವನ್ನು ನಾವ್ಯಾರೂ ಯಾವ ಕಾರಣಕ್ಕೂ ಮುರಿಯುವ ಹಾಗಿಲ್ಲ“.

ಅಣ್ಣ ಭೀಮನನ್ನು ಯಾರಾದರೂ ತೂಬರ ಗಡ್ಡ ಮೀಸೆ ಇಲ್ಲದವ ಎಂದು ಕರೆದರೆ ಅಂತಹವರನ್ನು ಕೊಲ್ಲದೆ ಬಿಡುವುದಿಲ್ಲ ಎಂಬ ಪಣ ತೊಟ್ಟ. ಅದೇ ರೀತಿ ನಾನು ಯಾರಾದರೂ ನನ್ನನ್ನು ಗಾಂಡೀವ ಧನಸ್ಸನ್ನು ಕೈಬಿಡು ಎಂದು ಅಪಹಾಸ್ಯ ಮಾಡಿದರೆ ಆ ಮನುಷ್ಯನನ್ನು ಕೊಲ್ಲುತ್ತೇನೆ ಎಂಬ ವ್ರತದ ಪಣ ತೊಟ್ಟಿದ್ದೇನೆ. ವ್ರತ ಬಿಡುವ ಹಾಗಿಲ್ಲ. ನನ್ನ ಮಾತು ಅಸತ್ಯವಾಗಿಬಿಡುತ್ತದೆ. ಅದಕ್ಕಾಗಿ ಈ ನನ್ನ ಉದ್ಯೋಗ” – ಎಂದು ಉತ್ತರಿಸಿದ.

ನಿತ್ಯ ಸತ್ಯವ್ರತನಾದ ಶ್ರೀಕೃಷ್ಣನಿಗೆ ಆಶ್ಚರ್ಯ. ಜೊತೆಗೆ ಅರ್ಜುನನ ಧರ್ಮ ಪ್ರಜ್ಞೆಯ ಬಗ್ಗೆ ಬೇಸರ.

ಎಂತಹ ದುರಂತದ ಕಾರ್ಯಕ್ಕೆ ಕೈ ಹಾಕಿರುವೆ ಅರ್ಜುನ. ಧರ್ಮರಾಜ ತನ್ನ ಜೀವನವನ್ನೆಲ್ಲಾ ಧರ್ಮಕ್ಕೆ ಮೀಸಲಾಗಿಟ್ಟುರುವ ಮಹಾತ್ಮ. ರಾಜಸೂಯ ಯಾಗ ಮಾಡಿರುವ ಚಕ್ರವರ್ತಿ. ಶ್ರೀರಾಮಚಂದ್ರನ ನಂತರ ಯಾರೂ ಮಾಡಿಲ್ಲದಷ್ಟು ದಾನ ಮಾಡಿರುವ ಮಹಾನ್ ಹಸ್ತ. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಅಣ್ಣ. ಅಂದರೆ ನಿನ್ನ ತಂದೆಯ ಸಮಾನ. ಅವನ ವಧೆ ಮಾಡುತ್ತೇನೆ ಎಂದು ಹೊರಟಿರುವೆಯಲ್ಲ, ನಿನ್ನ ಸತ್ಯ ಪ್ರಜ್ಞೆಯ ಬಗ್ಗೆ ಏನು ಹೇಳಲಿ ನಾನು!” – ಎಂದ ಪರಮಾತ್ಮ.

ಸಂದಿಗ್ದಲ್ಲಿದ್ದೇನೆ ಮಿತ್ರ. ಸತ್ಯ ಪಾಲನೆ ನನ್ನ ಮುಖ್ಯ ತಪಸ್ಸು. ಅದನ್ನು ಬಿಡುವಹಾಗಿಲ್ಲ. ನಾನೇನು ಮಾಡಲಿ ನೀನೇ ಮಾರ್ಗತೋರಿಸು” – ಬೇಡಿಕೊಂಡ ಅರ್ಜುನ.

ನಿನಗೆ ಸತ್ಯ ಎಂದರೇನು ಎಂಬುದರ ಅರಿವೇ ಇಲ್ಲ. ಧರ್ಮ ಎಂದರೇನು ಎಂಬುದರ ಸೂಕ್ಷ್ಮವೇ ತಿಳಿದಿಲ್ಲ” – ಶ್ರೀ ಕೃಷ್ಣ ಹೇಳಿದ.

ಸತ್ಯಸ್ಯ ವಚನಂ ಶ್ರೇಯಃ ಸತ್ಯಜ್ಞಾನಂ ತು ದುಷ್ಕರಮ್।

ಸತ್ಯವನ್ನು ನುಡಿಯುವುದು ಶ್ರೇಯಸ್ಕರ. ಆದರೆ ಸತ್ಯವೆಂದರೇನು ಎಂದು ತಿಳಿಯುವುದು ತುಂಬಾ ಕಷ್ಟ.

ಧರ್ಮಸ್ಯ ಚರಣಂ ಶ್ರೇಯೋ ಧರ್ಮಜ್ಞಾನಂ ತು ದುಷ್ಕರಮ್।

ಧರ್ಮದ ಆಚರಣೆ ಶ್ರೇಯಸ್ಕರ. ಆದರೆ ಧರ್ಮದ ಪರಿಜ್ಞಾನ ದುಷ್ಕರ.

ಅರ್ಜುನನಿಗೆ ತಾನೆಂತಹ ಮಹಾಪಾಪ ಎಸಗಲಿದ್ದೆ ಎಂಬುದರ ಅರಿವಾಗತೊಡಗಿತು. “ಹಾಗಾದರೆ ಸತ್ಯ ಎಂದರೇನು? ಧರ್ಮವನ್ನು ತಿಳಿಯುವುದು ಹೇಗೆ?” – ಕೇಳಿಯೇಬಿಟ್ಟ.

ಸತ್ಯಸಂಧನಾದ ಶ್ರೀ ಕೃಷ್ಣ ಉತ್ತರ ಕೊಟ್ಟ.

ಯತ್ ಸತಾಂ ಹಿತಮತ್ಯಂತಂ ತತ್ ಸತ್ಯಮಿತಿ ನಿಶ್ಚಯಃ ।
ಯಃ ಸತಾಂ ಧಾರಕೋ ನಿತ್ಯಂ ಸ ಧರ್ಮ ಇತಿ ನಿಶ್ಚಯಃ ॥

ಯಾವುದನ್ನು ಹೇಳುವುದರಿಂದ ಸಜ್ಜನರಿಗೆ ಹಿತವೋ ಅದೇ ಸತ್ಯ. ಯಾವುದು ಸಜ್ಜನರ ಪೋಷಣೆಗೆ ಕಾರಣವಾಗುವುದೋ ಅದೇ ಧರ್ಮ” – ಎಂದ ಕೃಷ್ಣ.

ಅರ್ಜುನ, ಹಾಗೂ ನಮಗೂ, ಅರ್ಥವಾಗಲಿ ಎಂದು ಪರಮಾತ್ಮ ಅದೇ ಸಂದರ್ಭದಲ್ಲಿ ಕೌಶಿಕ ಬ್ರಾಹ್ಮಣನ ಕಥೆಯನ್ನು ಹೇಳಿದ.

ಕೌಶಿಕನೆಂಬ ಬ್ರಾಹ್ಮಣನೊಬ್ಬ ಸತ್ಯವ್ರತವನ್ನು ತೊಟ್ಟಿದ್ದ. ಯಾವುದೇ ಸಂದರ್ಭದಲ್ಲೂ ಸತ್ಯವನ್ನಲ್ಲದೇ ಬೇರೆ ಮಾತಾಡುವುದಿಲ್ಲ ಎಂದು ನಿರ್ಧರಿಸಿದ್ದ. ಒಮ್ಮೆ ಹಳ್ಳಿಯೊಂದಕ್ಕೆ ಕಳ್ಳರ ಗುಂಪೊಂದು ದಾಳಿ ಮಾಡಿತು. ಹೆದರಿದ ಗ್ರಾಮಸ್ಥರು ಓಡಿ ಬಂದು ಕೌಶಿಕನ ಆಶ್ರಮ ಹೊಕ್ಕರು. ಅವನ ರಕ್ಷಣೆ ಬೇಡಿ ಆಶ್ರಮದಲ್ಲೇ ಅಡಗಿ ಕುಳಿತರು. ಸ್ವಲ್ಪ ಸಮಯದ ನಂತರ ಕಳ್ಳರು ಆಶ್ರಮಕ್ಕೆ ಬಂದು ಹಳ್ಳಿಯ ಜನ ಎಲ್ಲಿ?ಎಂದು ಕೌಶಿಕನನ್ನು ಕೇಳಿದರು. ಮೌನವ್ರತದಲ್ಲಿದ್ದ ಬ್ರಾಹ್ಮಣ ಸತ್ಯವ್ರತ ಬಿಡಬಾರದು ಎಂದು ತಿಳಿದು ಕೈ ಸಂಜ್ಞೆ ಮಾಡಿ ಅವರು ಅವತಿಕೊಂಡಿದ್ದ ಸ್ಥಳ ತೋರಿಸಿದ. ಕಳ್ಳರು ಗ್ರಾಮಸ್ಥರೆಲ್ಲರನ್ನೂ ದರೋಡೆ ಮಾಡಿ ನಡೆದರು.

ಮುಂದೆ ಹಲವಾರು ವರ್ಷಗಳ ನಂತರ ಕೌಶಿಕ ಮರಣವನ್ನಪ್ಪಿ ಭಯಂಕರ ನರಕ ಸೇರಿದ. ಯಾವಾಗಲೂ ಸತ್ಯವನ್ನೇ ಹೇಳಿದ ನನಗೆ ಈ ನರಕ ಹೇಗೆ ಎಂದು ಕೇಳಿದಾಗ ನೀನು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದರಿಂದ ಇಡೀ ಹಳ್ಳಿಯ ಜನರಿಗೆ ತೊಂದರೆಯಾಯಿತು. ಅನೇಕ ಸಜ್ಜನರು ತಮ್ಮ ಸಂಪತ್ತನ್ನು ಕಳೆದುಕೊಂಡರು. ಆದ್ದರಿಂದ ನೀನು ಅಂದು ಹೇಳಿದ್ದು ಸತ್ಯವಲ್ಲ. ಅಂದು ಮಾಡಿದ್ದು ಧರ್ಮವಲ್ಲ. ಅದಕ್ಕೇ ಈ ನರಕಎಂಬ ಉತ್ತರ ದೊರಕಿತು.

ಶ್ರೀ ಕೃಷ್ಣನ ಈ ಮಾತುಗಳನ್ನು ಕೌಶಿಕನ ಕಥೆಯನ್ನೂ ಕೇಳಿ ಅರ್ಜುನನಿಗೆ ಜ್ಞಾನೋದಯವಾಯಿತು. ದೊಡ್ಡ ಅಪಚಾರ ಮಾಡಹೊರಟಿದ್ದೆ ಎಂಬ ಅರಿವಾಯಿತು.

ಅಸತ್ಯ ನುಡಿದಂತಾಗಬಾರದು. ಅಧರ್ಮವೆಸಗಿದಂತಾಗಬಾರದು. ಅದೇ ವೇಳೆ ವ್ರತಲೋಪವೂ ಆಗಕೂಡದು. ಕಾಪಾಡು ಕೃಷ್ಣ” – ಬೇಡಿಕೊಂಡ ಧನಂಜಯ.

ಸರ್ವಸಮರ್ಥನಾದ ಕೃಷ್ಣ ಸಮಾಧಾನ ತಿಳಿಸಿದ – “ಈ ಲೋಕದಲ್ಲಿ ಹಿರಿಯರಿಗೆ ಬಯ್ಯುವುದೇ ಅತ್ಯಂತ ಕ್ರೂರ ಶಿಕ್ಷೆ. ತೆಗಳಿದರೆ ಅವರನ್ನು ಕೊಂದಂತೆ. ಆದ್ದರಿಂದ ಧರ್ಮರಾಜನ್ನನ್ನು ಬಾಯ್ತುಂಬಾ ತೆಗಳು“.

ಅವನ ಮಾತಿನಂತೆ ಅರ್ಜುನ ದೊಡ್ಡಣ್ಣನ್ನು ಮನ ಬಿಚ್ಚಿ ತೆಗಳಿ ಅವನ ಕೊಲೆಮಾಡಿದ. ತಕ್ಷಣ ಕತ್ತಿಯನ್ನು ಮತ್ತೆ ಹೊರ ತೆಗೆದ.

ಮತ್ತೇನು ನಿನ್ನ ತಯಾರಿ ಮಹರಾಯ?” – ಶ್ರೀಕೃಷ್ಣ ಕೇಳಿದ.

ಅಣ್ಣನನ್ನು ಕೊಂದಮೇಲೆ ನಾನು ಬದುಕಿದ್ದು ಏನು ಪ್ರಯೋಜನ. ಆದ್ದರಿಂದ ಆತ್ಮಹತ್ಯ ಮಾಡಿಕೊಳ್ಳುತ್ತೇನೆ. ಅದಕ್ಕಾಗಿಯೇ ಈ ಕತ್ತಿ” – ತಟ್ಟನೆ ಉತ್ತರಕೊಟ್ಟ ಅರ್ಜುನ.

ಪುನಃ ತಪ್ಪು ತಿಳುವಳಿಕೆ. ಪುನಃ ಆಪತ್ತು. ಆದರೆ ಪಾರ್ಥಸಾರಥಿ ಇರುವವರೆಗೂ ಪಾರ್ಥನಿಗೆಲ್ಲಿಯ ತೊಂದರೆ. ತಕ್ಷಣ ಸಮಾಧಾನ ತಿಳಿಸಿದ.

ಆತ್ಮಹತ್ಯೆ ಮಹಾಪಾಪ. ದೈವದತ್ತವಾದ ಈ ಸಾಧನ ಶರೀರ ಧರ್ಮಸಾಧನೆಗೆ ಉಪಯೋಗವಾಗಬೇಕು. ದೇವರು ಕೊಟ್ಟ ಈ ದೇಹದ ಮೇಲೆ ಹೇಗೆ ಮೋಹಪಡುವ ಅಧಿಕಾರ ಮನುಷ್ಯನಿಗಿಲ್ಲವೋ ಅದೇ ರೀತಿ ದೇಹತ್ಯಾಗ ಮಾಡುವ ಅಧಿಕಾರವೂ ಇಲ್ಲ. ಆದ್ದರಿಂದ ಆತ್ಮಹತ್ಯೆಯ ಯೋಚನೆ ಕೈಬಿಡು. ಸ್ವಪ್ರಶಂಸೆ ಮಾಡಿಕೊ. ಮನುಷ್ಯನಿಗೆ ಆತ್ಮಪ್ರಶಂಸೆಯೇ ಆತ್ಮಹತ್ಯೆಗೆ ಸಮಾನ” – ಎಂದ ಸರ್ವಸ್ತುತ್ಯನಾದ ಅಚ್ಯುತ.

ಅರ್ಜುನ ಮತ್ತೊಮ್ಮೆ ಕೃಷ್ಣನಿಗೆ ವಂದಿಸಿ ತನ್ನ ಸಾಧನೆಗಳ ಪಟ್ಟಿಮಾಡಹೊರಟ. ತನ್ನ ಅಸ್ತ್ರ ಸಂಪಾದನೆಯ ಸಾಧನೆ, ನಿವಾತಕವಚರ ವಧೆ, ಕೌರವರೆಲ್ಲರನ್ನೂ ಒಬ್ಬನೇ ಸೋಲಿಸಿದ ದಕ್ಷಿಣ ಗೋಗ್ರಹಣ ಪ್ರಸಂಗ ಎಲ್ಲವನ್ನೂ ನೆನೆಸಿಕೊಂಡ. “ಆತ್ಮಹತ್ಯೆಮಾಡಿಕೊಂಡು ಪ್ರಾಯಶ್ಚಿತ್ತವಾಯಿತು ಎಂದು ಸಮಾಧಾನಗೊಂಡ.

ಸತ್ಯಧರ್ಮನ ಸಂದೇಶ

ಈ ಇಡೀ ಪ್ರಸಂಗ ಕೃಷ್ಣ ಏರ್ಪಡಿಸಿದ ಒಂದು ನಾಟಕ. ಅರ್ಜುನನಿಗೆ ಹಾಗೂ ನಮಗೆ ಇಬ್ಬರಿಗೂ ಪಾಠ ಹೇಳಲಿಕ್ಕೊಂದು ನೆಪ. ಅದಕ್ಕಾಗಿಯೇ ಈ ಸಂದರ್ಭ ಸೃಷ್ಟಿ.

ಗೀತೋಪದೇಶದ ನಂತರ ಯುದ್ಧ ಅವಶ್ಯ ಹಾಗೂ ಕರ್ತವ್ಯ ಎಂಬುದು ಅರ್ಜುನನಿಗೆ ಮನವರಿಕೆಯಾಗಿತ್ತು. ಆದರೆ ಭೀಷ್ಮಪಾತ, ದ್ರೋಣ ನಿರ್ಯಾಣದ ನಂತರ ಅರ್ಜುನನಲ್ಲಿ ಸಂಶಯದ ಬೀಜ ಮೊಳಕೆಯಾಗಿತ್ತು. “ಈ ರೀತಿಯಾಗಿ ಎಲ್ಲಾ ಕೌರವ ವೀರರನ್ನು ಹತ್ಯೆಮಾಡುತ್ತ್ರಿರುವ ನಮ್ಮ ಕ್ರಮ ಧರ್ಮವೋ ಅಧರ್ಮವೋ?ಎಂದು. ಈ ಸಂಶಯದ ಬೀಜವನ್ನು ಮೊಳಕೆಯಲ್ಲೇ ಕೀಳದೇ ಬಿಟ್ಟರೆ ಅರ್ಜುನ ಅಂದು ಸಂಜೆ ಕರ್ಣನನ್ನು ಕೊಲ್ಲುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ಕರ್ಣವಧೆಯಾಗದೇ ಯುದ್ಧ ಮುಗಿಯುತ್ತಿರಲಿಲ್ಲ. ಆದ್ದರಿಂದ ಅರ್ಜುನನಿಗೆ ಸತ್ಯ, ಧರ್ಮಗಳ ಸೂಕ್ಷ್ಮವಿಚಾರದ ಬೋಧನೆಯಾಗಬೇಕಿತ್ತು. ಅದಕ್ಕೆಂದೇ ಈ ಸಂದರ್ಭ.

ಅರ್ಜುನನಂತೆಯೇ ನಮಗೂ ನಿಮಗೂ ಕೂಡ ವ್ಯಾಸರು ಹಾಗೂ ಕೃಷ್ಣನು ಸಂದೇಶವನ್ನು ನೀಡಿದ್ದಾರೆ. ನಮ್ಮ ಮಾತು ಪ್ರಿಯವಾಗಿರಬೇಕೋ ಅಥವಾ ಅಪ್ರಿಯಆದರೆ-“ನಿಜ“-ವಾಗಿರಬೇಕೋ? ನಮ್ಮ ಕಾರ್ಯ ಧರ್ಮಗ್ರಂಥಗಳಲ್ಲಿ ಅಚ್ಚಾಗಿರುವ ಹಾಗಿರಬೇಕೋ ಅಥವಾ ನಮಗೆ ಇಷ್ಟವಾದಂತಿರಬೇಕೋ?

ಎರಡೂ ಅಲ್ಲ ಅನ್ನುತ್ತಾನೆ ಕೃಷ್ಣ.

ನಮ್ಮ ಮಾತಿನಿಂದ ಸಜ್ಜನರಿಗೆ ಹಿತವೆನಿಸಬೇಕು. ಒಳ್ಳೆಯವರ ಮನ ನೋಯಬಾರದು. ಅಂತಹ ಮಾತೇ ಸತ್ಯ. ನಮ್ಮ ನಡವಳಿಕೆಯಿಂದ ಸಜ್ಜನರಿಗೆ ಉಪಕಾರವಾಗಬೇಕು. ನಮ್ಮ ಕೆಲಸದಿಂದ ಅಮಾಯಕರಿಗೆ ತೊಂದರೆ ಆಗಬಾರದು. ಆಂತಹ ನಡವಳಿಕೆಯೇ ಧರ್ಮ.

ಹಾಗಾದರೆ ಯಾವುದು ಸಜ್ಜನರಿಗೆ ಹಿತ, ಯಾವುದು ಪ್ರಿಯ, ಯಾವುದರಿಂದ ಉಪಕಾರ? ಇವನ್ನು ಅರಿಯುವುದು ಹೇಗೆ?

ಇದರ ತಿಳುವಳಿಕೆ ಬೆಳೆಸಿಕೊಳ್ಳುವುದೇ ಸತ್ಯಶೋಧನೆ. ಈ ಮಾರ್ಗ ಕಂಡುಕೊಳ್ಳುವುದೇ ಧರ್ಮ ಜಿಜ್ಞಾಸೆ. ಇವನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಜೀವನದ ದೊಡ್ಡ ತಪಸ್ಸು.

ಬನ್ನಿ ಈ ತಪವನ್ನಾಚರಿಸೋಣ. ಬನ್ನಿ ಸಜ್ಜನ ಹಿತವುಳ್ಳ ಸತ್ಯಧರ್ಮದ ಮಾರ್ಗ ಹಿಡಿಯೋಣ.

ಶ್ರೀ ಕೃಷ್ಣಾರ್ಪಣಮಸ್ತು॥

(Image credit: mygodpictures.com)


We welcome your comments at feedback@indictoday.com