close logo

ಋಗ್ವೇದದಲ್ಲಿ ಸೋಮ

ಋಗ್ವೇದದ ಒಂಭತ್ತನೇ ಮಂಡಲದಲ್ಲಿ 114 ಸೂಕ್ತಗಳು, 7 ಅನುವಾಕಗಳಲ್ಲಿ ಇವೆ. ಇವೆಲ್ಲವೂ ಸೋಮದೇವತೆಯನ್ನು ಪ್ರಶಂಸಿಸುತ್ತವೆ. ಮೇಲುನೋಟಕ್ಕೆ ಇವು ಯಾವುದೋ ದೇವತೆಯ ಸ್ತುತಿ ಎಂಬಂತೆ ಕಾಣುತ್ತವೆ. ಇದರಲ್ಲಿ ಹೆಚ್ಚಿನ ವೈಶಿಷ್ಟ್ಯ ಇದ್ದಂತೆ ತೋರುವುದಿಲ್ಲ. ಆದರೆ ಶಬ್ದ ಮತ್ತು ಅರ್ಥಗಳ ಆಳಕ್ಕೆ ಇಳಿದಾಗ, ಇವು ಸಾಮಾನ್ಯವಲ್ಲ, ಯಾವುದೋ ಗೂಢಾರ್ಥವನ್ನು ಒಳಗೊಂಡಿವೆ, ಮತ್ತೂ ಆಳವಾದ ಚಿಂತನೆಯ ಭಾವರೂಪವಾಗಿದೆ, ಎಂದು ತಿಳಿಯುತ್ತದೆ.

ಆಗ, ಇದರ ಗೂಢಾರ್ಥ ಏನಿರಬಹುದು? ಯಾವ ಪರಿಕಲ್ಪನೆಗೆ ಇದು ಪ್ರತೀಕವಾಗಿದೆ, ಎಂಬ ಪ್ರಶ್ನೆಗಳು ತಲೆದೋರುತ್ತವೆ. ಲೇಖನ ಇವನ್ನು ಉತ್ತರಿಸುವ ಪ್ರಯತ್ನ ಮಾಡುತ್ತದೆ.

ಸೋಮನ ಸ್ವರೂಪ

ಸೋಮನೆಂದರೆ ಯಾರು? ಯಾವುದೋ ದೇವತೆಯೇ, ಚಂದ್ರನೇ, ಅಥವಾ ಪಾನೀಯವೇ? ಋಗ್ವೇದದಲ್ಲಿ, ಇವೆಲ್ಲಕ್ಕೂ ಸರಿಹೊಂದುವ ವರ್ಣನೆಗಳು ಕಾಣಬರುತ್ತವೆ. ಋಗ್ವೇದದಲ್ಲಿ ಸೋಮನ ಸ್ವರೂಪವನ್ನು ಲೌಕಿಕ ಮತ್ತು ಅಲೌಕಿಕ ಭಾಗಗಳಲ್ಲಿ ವಿಂಗಡಿಸುತ್ತಾರೆ. ಅಲೌಕಿಕವಾದ ಸ್ವರೂಪವನ್ನು ದೇವತೆಯೆಂದೂ, ಲೌಕಿಕವಾದ ಸ್ವರೂಪವನ್ನು ರಸಾತ್ಮಕವೆಂದೂ ಸ್ಥೂಲವಾಗಿ ಹೇಳಬಹುದು.

ಮೊದಲನೆಯದಾಗಿ, ಸೋಮನ ದೇವತಾ ಸ್ವರೂಪ. ಸೋಮನು ಕೆಲವು ಬಾರಿ ಚಂದ್ರನಂತೆ, ಇತರ ಸಮಯದಲ್ಲಿ ಚಂದ್ರನಿಗಿಂತ ಬೇರೆಯಾಗಿ ಉಲ್ಲೇಖಗೊಂಡಂತೆ ಕಾಣಬರುತ್ತದೆ. ಚಂದ್ರನು ಓಷಧಿಗಳ ಪತಿ. ಬ್ರಾಹ್ಮಣಗಳು ಸೋಮ ಮತ್ತು ಚಂದ್ರರ ತಾದಾತ್ಮ್ಯವನ್ನು ಬಣ್ಣಿಸುತ್ತದೆ.

ಶತಪಥ ಬ್ರಾಹ್ಮಣದ ಪ್ರಕಾರ ಚಂದ್ರನು ದೇವತೆಗಳಿಗೆ ಅನ್ನವು [… ಸೋಮೋ ರಾಜಾ ದೈವಮಾಮನ್ನಂ. ಬ್ರಾ. 1.6.4.5] ದೇವತೆಗಳು ಚಂದ್ರನನ್ನು ಪಾನಮಾಡಿ ಇವನು ಕ್ಷಯಿಸಿದಾಗ, ಸೂರ್ಯನು ಇವನನ್ನು ಪೂರ್ಣಮಾಡುತ್ತಾನೆ! ಚಂದ್ರನು ಅಂತರಿಕ್ಷದಲ್ಲಿ ಕಾಣದಿದ್ದಾಗ ಭೂಮಿಗಿಳಿದು ನೀರಿನಲ್ಲಿಯೂ ಓಷಧಿಗಳಲ್ಲಿಯೂ ಅಂಶರೂಪದಲ್ಲಿ ಪ್ರವೇಶಿಸುತ್ತಾನೆ, ದೇವತೆಗಳಿಗೆ ಮಾತ್ರವಲ್ಲ, ಪೃಥ್ವಿಯ ಪ್ರಜೆಗಳಿಗೂ ಅನ್ನರೂಪನೂ ಅನ್ನಕಾರಣನೂ ಆಗಿದ್ದಾನೆ. ಅಂತರಿಕ್ಷದಲ್ಲಿ ಕಾಣದಿರುವ ದಿನಗಳಲ್ಲಿ ಪೃಥ್ವಿಯಲ್ಲಿ ನಮ್ಮೊಡನೆ ವಾಸವಾಗಿರುವುದರಿಂದ ದಿನಗಳಿಗೆ (ಅಮಾವಸ್: ಜೊತೆಯಲ್ಲಿ ವಾಸವಾಗಿರುವುದು) ಅಮಾವಾಸ್ಯೆ ಎನ್ನುತ್ತಾರೆ.

ಆದರೆ, ಇನ್ನೊಂದು ಸಂದರ್ಭದಲ್ಲಿ, ಸೋಮನು ಸವಿತೃವಿನ ಮಗಳಾದ ಸೂರ್ಯೆಯನ್ನು ವರಿಸುತ್ತಾನೆ. ಮದುವೆಯಲ್ಲಿ ಅಶ್ವಿನೀ ದೇವತೆಗಳು ವರನ ಕಡೆ. ಅಗ್ನಿಯು ವಿವಾಹೋತ್ಸವದಲ್ಲಿ ಮಾರ್ಗದರ್ಶಕನು. ಮನಸ್ಸೇ ರಥವು (ಯಾರ ಮನಸ್ಸು ಎಂಬ ಕೌತುಕ ಉಂಟಾಗುವುದಿಲ್ಲವೇ?!) ಸೂರ್ಯ ಚಂದ್ರರು ರಥ ನಡೆಸುವವರು. ಇಲ್ಲಿ ಸೋಮ ಮತ್ತು ಚಂದ್ರರು ಬೇರೆ ದೇವತೆಗಳು ಎನ್ನುವ ನಿರ್ಣಯಕ್ಕೆ ಬರುತ್ತೇವೆ.

ಎರಡನೆಯದಾಗಿ, ಸೋಮದ ಲೌಕಿಕ ಸ್ವರೂಪಕ್ಕೆ ಬರೋಣ. ಸೋಮವು ಒಂದು ಲತೆಯನ್ನು ಜಜ್ಜಿ ತೆಗೆದ ರಸ. ಸೋಮವು ಲತೆಗಳ ರಾಜ.

ಋಗ್ವೇದದ ಉಲ್ಲೇಖಗಳ ಪ್ರಕಾರ, ಸೋಮನಿಗೆ ಪರ್ಜನ್ಯನೇ ತಂದೆ, ಉದಕಗಳೇ ಸಹೋದರಿಯರು. ಪಾರ್ಥಿವನಾದ ಸೋಮನನ್ನು ವರುಣನು ಪರ್ವತಗಳಲ್ಲಿ ಸ್ಥಾಪಿಸಿದ್ದಾನೆ. ಅರುಣ ವರ್ಣವುಳ್ಳ ವೃಕ್ಷದ ಶಾಖೆಗಳನ್ನು ಭಕ್ಷಿಸುತ್ತ ಸೋಮಲತೆಗಳು ಪುಷ್ಟಿಗೊಳ್ಳುತ್ತವೆ.

ಸೋಮರಸದ ಅದ್ಭುತವಾದ ಅನುಭವವು ಕೆಲವು ಮಹಾನುಭಾವರಿಗೆ ಮಾತ್ರ ಲಭಿಸುತ್ತದೆ. ಅದನ್ನು ತಯಾರು ಮಾಡುವುದಕ್ಕೂ ಒಂದು ನಿಯಮವಾದ ವಿಧಿ ಇದೆ. ಇಂತಹ ಮಹತ್ತಾದ ಲತೆಯಾದುದರಿಂದ, ಸೋಮವನ್ನು ಸಸ್ಯಗಳ ಅಧಿಪತಿ, ರಾಜ, ವನಸ್ಪತಿ ಇತ್ಯಾದಿಯಾಗಿ ಸಂಬೋಧಿಸುತ್ತಾರೆ. ಬ್ರಾಹ್ಮಣಗಳಲ್ಲಿ ವೃಕ್ಷಗಳನ್ನು ಸೌಮ್ಯ, ಎಂದರೆ, ಸೋಮಸಂಬಧವುಳ್ಳವು ಎನ್ನುತ್ತಾರೆ.

ಸೋಮಲತೆ ಯಾವುದು? ಎಲ್ಲಿ ಬೆಳೆಯುತ್ತದೆ? ಇತ್ಯಾದಿ ಪ್ರಶ್ನೆಗಳ ಬಗ್ಗೆ ನಮ್ಮ ದೇಶದ ಮತ್ತು ಪ್ರಪಂಚದ ಎಲ್ಲ ವಿದ್ವಾಂಸರೂ ದೀರ್ಘವಾಗಿ ಚಿಂತನ ಮಂಥನಗಳನ್ನು ನಡೆಸಿದ್ದಾರೆ.

ಸೋಮಲತೆಯ ಸಸ್ಯಶಾಸ್ತ್ರೀಯ ಹೆಸರು ಯಾರಿಗೂ ತಿಳಿದಿಲ್ಲ. ರಾತ್ ಎಂಬ ವಿದ್ವಾಂಸನೊಬ್ಬನು ಇದು ಸಾರ್ಕೊಸ್ಟೆಮಾ ಆಸಿಡಿಮ್ ಎಂದು ಊಹಿಸಿದ್ದಾನೆ. ವ್ಯಾಟ್ ಎಂಬುವನು ಅಫ್ಘಾನಿಸ್ತಾನದಲ್ಲಿ ಬೆಳೆಯುವ ಒಂದು ಜಾತಿಯ ದ್ರಾಕ್ಷಿಯನ್ನು ಸೂಚಿಸಿದ್ದಾನೆ. ರೈಸ್ ಎಂಬುವನು ಇದು ಕಬ್ಬು ಎಂದು ಭಾವಿಸಿದರೆ, ಮ್ಯಾಕ್ಸ್ ಮುಲ್ಲರ್ ಮತ್ತು ರಾಜೇಂದ್ರಾಲಾ ಮಿತ್ರ ಇದು ಒಂದು ಜಾತಿಯ ಹಾಪ್ ಇರಬಹುದು ಎಂದು ಊಹಿಸಿದ್ದಾರೆ.

ಅವೆಸ್ತನ್ ಭಾಷೆಯಲ್ಲಿ, ಸೋಮವನ್ನು ಹೋಮ ಎನ್ನುತ್ತಿದ್ದರು. ಝೋರಾಷ್ಟ್ರಿಯನ್ನರು ಬಳಸುವ ಹೋಮ್ಅನ್ನು ಎಫಿಡ್ರಾ ಎಂದು ಗುರುತಿಸಲಾಗಿದೆ. ಇದನ್ನು ಉಪಯೋಗಿಸುವ ಅಡ್ಡಪರಿಣಾಮಗಳಲ್ಲಿ ಭ್ರಮೋತ್ಪನ್ನಗಳೂ ಇವೆ ಎನ್ನುತ್ತಾರೆ. ಆದರೆ ಸೋಮ ಮತ್ತು ಹೋಮ ಒಂದೇ ಎಂಬುದನ್ನು ಕಡ್ಡಾಯವಾಗಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಡಾ. ಡೇವಿಡ್ ಫ್ರಾಲಿಯವರು ಎಫಿಡ್ರಾದಲ್ಲಿ ದ್ರವ ಪ್ರಮಾಣ ತುಂಬಾ ಕಡಿಮೆ ಇರುವ ಕಾರಣ, ಎಫಿಡ್ರಾ ಸೋಮವು ಆಗಲು ಸಾಧ್ಯವಿಲ್ಲ, ಎನ್ನುತ್ತಾರೆ.

ಜನಾಂಗೀಯ ವಿಜ್ಞಾನದಲ್ಲಿ ಆಸಕ್ತಿಯನ್ನು ಹೊಂದಿರುವ ಜೆಪಿ ಮೋರ್ಗನ್ ಬ್ಯಾಂಕಿನ ಉದ್ಯೋಗಿ, ರಾಬರ್ಟ್ ಗಾರ್ಡನ್ ವಾಸನ್, ಎಂಬುವಾತ ತನ್ನ ಸೋಮಾ ಡಿವೈನ್ ಮಶ್ರೂಮ್ ಆಫ್ ಇಮ್ಮಾರ್ಟಲಿಟಿ (Soma, the divine Mushroom of Immortality) ಎಂಬ ಪುಸ್ತಕದಲ್ಲಿ ಸೋಮವು ಅಮಾನಿತಾ ಮಸ್ಕರಿಯಾ (Amanita muscaria, or the fly agaric) ಅನ್ನು ಮುಖ್ಯ ಅಂಶವಾಗಿ ಹೊಂದಿದೆ, ಮತ್ತು ಅದನ್ನು ಕುಡಿದವರು ಅಸಾಧಾರಣವಾಗಿ ಜಾಗೃತವಾದ ಪ್ರಜ್ಞೆಯನ್ನು ಹೊಂದುತ್ತಾರೆ, ಎಂದು 1968ರಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿದನು. ಆದರೆ, ಸೋಮವು ಒಂದು ಅಣಬೆ ಎಂಬುವ ಮಾತನ್ನು ಅಲ್ಲಗಳೆಯಲಾಗಿದೆ. ಮೇಲಾಗಿ, ಅಣಬೆಯನ್ನು ತಿನ್ನುವ ಸಂಗತಿ ಎಲ್ಲೂ ಉಲ್ಲೇಖದಲ್ಲಿ ಇಲ್ಲ. ಆದರೆ, ಸೋಮದಿಂದ ಆಧ್ಯಾತ್ಮ ವಿವೇಕ ಉಂಟಾಗುತ್ತದೆ, ಎಂಬ ಮಾತನ್ನು ಈತ ಪರಿಶೋಧಿಸಿದ್ದಾನೆ. ಸೋಮಯಾಗವನ್ನು ನಿರ್ವಹಿಸಲು ಸಾಧ್ಯವಾಗುವಂತೆ ಸೋಮವನ್ನು ಬೆಳೆಸಲು ರಾಜರು ಬ್ರಾಹ್ಮಣರಿಗೆ ಭೂಮಿಯನ್ನು ಅನುದಾನವಾಗಿ ನೀಡುತ್ತಿದ್ದರು, ಎಂದು ಅರ್ಥಶಾಸ್ತ್ರದಲ್ಲಿ ಉಲ್ಲೇಖವಿದೆ.

ಸೋಮಲತೆಯು ಈಗ ಭಾರತದಲ್ಲಿ ಎಲ್ಲಿಯೂ ದೊರಕುವುದಿಲ್ಲ. ಸಾಧಾರಣವಾಗಿ ಬೆಟ್ಟಪ್ರದೇಶದಲ್ಲಿ ಬೆಳೆಯುವ ಲತೆ, 7000 ಅಡಿ ಎತ್ತರದಲ್ಲೂ ಬೆಳೆಯುತ್ತದೆ, ಎನ್ನುತ್ತಾರೆ. ಮೌಜವತವೆಂಬ ಪರ್ವತವು ಸೋಮಲತೆಗೆ ಪ್ರಸಿದ್ಧವಾಗಿದ್ದಿತು. ಶರ್ಯಣಾವತ್ ಎಂಬ ಸರೋವರದ ದಡದಲ್ಲಿ ಸೋಮ ದೊರಕುತ್ತದೆ, ಎಂದು ಋಗ್ವೇದದಲ್ಲಿ ಉಲ್ಲೇಖವಿದೆ. ಆರ್ಜಿಕ ಎಂಬ ಸ್ಥಳದಲ್ಲಿಯೂ, ಸುಷೋಮಾ ಎಂಬ ನದಿಯ ಸುತ್ತಮುತ್ತಲ ಪ್ರದೇಶದಲ್ಲಿಯೂ ಸೋಮವು ದೊರಕುವ ಉಲ್ಲೇಖವಿದೆ. ಸುಷೋಮಾ ಎಂಬ ಹೆಸರು ಬಂದುದೇ ಒಳ್ಳೆಯ ಸೋಮ ದೊರಕುವ ಪ್ರದೇಶ ಎಂಬುದಕ್ಕಾಗಿ.

ಅವೆಸ್ತಾ ಮತ್ತು ವೇದಗಳಲ್ಲಿ ಹಿಂದೂಕುಶ್ ಪರ್ವತಕ್ಕೆ ಉಪರಿಶ್ಯೇನ (ಶ್ಯೇನ ಪಕ್ಷಿಯು ಹಾದುಹೊದ ಪರ್ವತ) ಎಂಬ ಹೆಸರಿತ್ತು. (ಮುಂದಿನ ಭಾಗದಲ್ಲಿ ಕಥೆಯನ್ನು ದೀರ್ಘವಾಗಿ ಬಣ್ಣಿಸಲಾಗಿದೆ.)

ಸೋಮಲತೆಗಳು ಬೇರೆ ಬೇರೆ ಜಾತಿಯವು ಇರಬಹುದೇ? ಬೇರೆ ಬೇರೆ ಜಾತಿಯ ವಿಸ್ತೃತ ವರ್ಣನೆ ಶತಪಥ ಬ್ರಾಹ್ಮಣದಲ್ಲಿ ದೊರಕುತ್ತದೆ. ಸೋಮಲತೆ ದೊರಕದಿದ್ದಲ್ಲಿ, ಅದೇ ಶಕ್ತಿಯನ್ನು ಕೊಡಬಲ್ಲ ಬೇರೆ ಲತೆಗಳು ಕೆಲವು ಉಂಟು. ಕೆಂಪುಬಣ್ಣದ ಹೂವುಗಳನ್ನು ಕೊಡುವ ಫಾಲ್ಗುಣ ಲತೆಯನ್ನು ಸೋಮಲತೆಯ ಬದಲು ಉಪಯೋಗಿಸಬಹುದು. ಇದೂ ಸಿಗದಿದ್ದಲ್ಲಿ, ಶ್ಯೆನಹೃತ ಲತೆಯನ್ನು ಉಪಯೋಗಿಸಬಹುದು. ಗಾಯತ್ರಿಯು ಸೋಮದೊಡನೆ ಹಾರಿ ಬರುತ್ತಿದ್ದಾಗ ಲತೆಯ ಒಂದು ಭಾಗವು ಮುರಿದು ಕೆಳಗೆ ಬಿದ್ದು ಶ್ಯೆನಹೃತಲತೆಯಾಗಿ ಬೆಳೆಯಿತು, ಎಂದು ಪ್ರತೀತಿ. ( ಕಥೆಯನ್ನು ಮುಂದಿನ ವಾಕ್ಯಖಂಡದಲ್ಲಿ ಹೇಳಿದ್ದೇನೆ.) ಇದೂ ದೊರಕದಿದ್ದರೆ, ಹೊಂಬಣ್ಣದ ದೂರ್ವಾಲತೆ, ಹಳದಿಬಣ್ಣದ ಕುಶ ಇತ್ಯಾದಿ ಲತೆಗಳನ್ನು ಬಳಸಬಹುದು.

ಸೋಮವೇ ಬೇರೆ ಬೇರೆ ಬಣ್ಣಗಳಲ್ಲಿ ದೊರಕುತ್ತದೆ, ಎಂದು ವರ್ಣನೆ. ಆದರೆ, ಪರಿಶುದ್ಧವಾದ ಸೋಮರಸವು ಕ್ಷೀರವರ್ಣದ್ದಾಗಿದೆ.

ಮೂರನೆಯದಾಗಿ, ಸೋಮವನ್ನು ಉಪಯೋಗ ಮಾಡುವುದು ಎಲ್ಲಿ, ಹೇಗೆ?

ಸೋಮವನ್ನು ಸೋಮಯಜ್ಞದಲ್ಲಿ ದೇವತೆಗಳಿಗೆ, ಮುಖ್ಯವಾಗಿ, ಇಂದ್ರನಿಗೆ ಆಹುತಿಯನ್ನಾಗಿ ನೀಡುತ್ತಾರೆ. ಇಂದ್ರನಿಗೆ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಕೊಟ್ಟು ಉತ್ಸಾಹ ಚೈತನ್ಯಗಳನ್ನು ಕೊಡುವುದು ಸೋಮರಸ. ಇಂದ್ರನಿಗೆ ಶಕ್ತಿಯನ್ನು ಕೊಡುವುದು ಸೋಮರಸ. ಇಲ್ಲಿ ಸೋಮರಸವು ಇಂದ್ರಾಯುಧದಂತೆ ಚೈತನ್ಯದಾಯಿ ಎಂಬ ತುಲನೆ ಕಾಣಬರುತ್ತದೆ.

ಆತ್ಸೊಮ ಇಂದ್ರಿಯೋ ರಸೋ ವಜ್ರಸ್ಸಹಸ್ರಸಾ ಭುವತ್ ಉಕ್ತಮ್ ಯದಸ್ಯ ಜಾಯತೇ ।। (. ಸಂ. 9.47.3), ಎಂದರೆ, ಸೋಮರೂಪವಾದ ವಜ್ರಾಯುಧವು ಅತಿ ಸುಂದರವಾದ ವಸ್ತುವಿಗಿಂತ ಮೀರಿ ಸುಂದರವಾಗಿದೆ. ಸೋಮವು ವೃತ್ರಹನನಕ್ಕೆ ವಜ್ರಾಯುಧಕ್ಕಿಂತ ಹೆಚ್ಚು ಸಹಾಯಕವಾಗಿದೆ.

ಸೋಮಯಾಗದ ಕಡೆಯಲ್ಲಿ ರುದ್ರನಿಗೆ ಸೋಮದ ಹವಿಸ್ಸನ್ನು ಸಲ್ಲಿಸಲಾಗುತ್ತದೆ. ಸೋಮಲತೆಯನ್ನು ಅಂಧಸ ಎಂದು ಕರೆಯುವುದರಿಂದ, ರುದ್ರನನ್ನು ಅಂಧಸಸ್ಪತಿ ಎಂದು ಸಂಬೋಧಿಸಲಾಗುತ್ತದೆ.

ದೇವತೆಗಳಲ್ಲಿ ಮೂರು ವಿಧ: ವಸುಗಳು, ರುದ್ರರು, ಆದಿತ್ಯರು. ವಸುಗಳಿಗೆ ಸೋಮವು ಪ್ರಾತಃಕಾಲದಲ್ಲಿ ಅರ್ಪಿತವಾಗುತ್ತದೆ. ರುದ್ರರಿಗೆ ಮಾಧ್ಯಂದಿನ, ಮತ್ತು ಆದಿತ್ಯರಿಗೆ ತೃತೀಯ ಸವನ. ಮೂರನ್ನೂ ವಿಧ್ಯುಕ್ತವಾಗಿ ಆಚರಿಸುತ್ತಾರೆ. ಮಾಧ್ಯಂದಿನ, ಅಥವಾ ಎರಡನೆಯ ಸವನದಲ್ಲಿ, ಮೊದಲನೆಯ ಸವನದಲ್ಲಿ ಮಿಕ್ಕ ಸೋಮಲತೆಯ ಸಿಪ್ಪೆಯನ್ನು ಮತ್ತೊಮ್ಮೆ ಹಿಂಡಿ ರಸ ತೆಗೆಯಲಾಗುತ್ತದೆ. ತೃತೀಯ ಸವನವನ್ನು ತಯಾರಿಸುವಾಗ ಪ್ರಾತಃಸವನ ಮತ್ತು ಮಾಧ್ಯಂದಿನ ಸವನಗಳನ್ನು ಹಿಂಡಿ ಮಿಕ್ಕ ಸಿಪ್ಪೆಯಿಂದ (ಋಜೀಶ) ತಯಾರಿಸಿ, ಬೇರೆ ದ್ರಾವಣಗಳೊಡನೆ ಮಿಶ್ರಣ ಮಾಡುತ್ತಿದ್ದರು. ಸೋಮವನ್ನು ಮೂರು ವಿವಿಧ ರೀತಿಯಲ್ಲಿ ಮಿಶ್ರಣ ಮಾಡುವ ಉಲ್ಲೇಖವಿದೆ. ಕ್ಷೀರ ಮಿಶ್ರಿತ (ಗವಾಶಿರ,) ದಧಿಮಿಶ್ರಿತ (ದಧ್ಯಾಶಿರ,) ಮತ್ತು ಬಾರ್ಲಿಮಿಶ್ರಿತ (ಯಾವಾಶಿರ).

ಸೋಮವನ್ನು ಹಿಂಡಲು ಬೇಕಾದ ಉಪಕರಣಗಳ ಬಗ್ಗೆ ಕೂಡ ಐತರೇಯ ಭಾಹ್ಮಣದಲ್ಲಿ ಹೇಳಿದ್ದಾರೆ. ಇವನ್ನೂ ವಿಧ್ಯುಕ್ತವಾಗಿಯೇ ಸಂಪಾದಿಸಬೇಕು. ಇವು, ಹಿಂಡಲು ಬೇಕಾದ ಚರ್ಮ (ಅಧಿಷವಣ ಚರ್ಮ,) ಹಿಂಡಲು ಬೇಕಾದ ಹಲಗೆಗಳು (ಫಲಕೇ,) ದ್ರೋಣಕಲಶ, ಜಾಲರಿಬಟ್ಟೆ (ದಶಾಪವಿತ್ರ,) ಹಿಂಡುವ ಕಲ್ಲು (ಅದ್ರಿ,) ಶೋಧಿಸುವ ಪಾತ್ರೆಗಳು (ಪೂತಭೃತ್, ಆಧವನೀಯ) ಸುರಿಯುವ ಪಾತ್ರೆ (ಸ್ಥಾಲಿ, ಉದಂಚನ,) ಮತ್ತು ಆಹುತಿಯನ್ನು ಅರ್ಪಿಸುವ ಸೌಟು (ಚಮಸ.) ರುದ್ರಪಾಠದ ಚಮಕದಲ್ಲಿ ಇವೆಲ್ಲದರ ಉಲ್ಲೇಖ ಬರುತ್ತದೆ.

ಸೋಮನ ಕಥೆಗಳು

ಸೋಮನ ಬಗ್ಗೆ ಎಷ್ಟೋ ಕಥೆಗಳಿವೆ. ಇವೆಲ್ಲ ರೂಪಕಗಳು. ನಮ್ಮ ಗ್ರಂಥಗಳಲ್ಲಿ ಗಹನವಾದ ಅಂತರಾರ್ಥವನ್ನು ಮನಗಾಣಿಸುವುದರಲ್ಲಿ ಕಥೆಗಳ ಪಾತ್ರ ತುಂಬಾ ದೊಡ್ಡದು. ಹೀಗೆ ಸೋಮಲತೆಯ ಕಥೆಗಳು ಮೇಲ್ನೋಟಕ್ಕೆ ರೋಚಕವಾಗಿದ್ದು, ಅದರ ಒಳಗಿನ ಅರ್ಥವನ್ನು ತಿಳಿಯಬೇಕಾದರೆ ಗಮನಕೊಟ್ಟು ಚಿಂತಿಸಬೇಕು, ಎನ್ನುವಂತೆ ಇದೆ. ಅದರಲ್ಲಿ ಕೆಲವನ್ನು ಇಲ್ಲಿ ನೋಡೋಣ.

ಇಂದ್ರನು ಋಷಿಗಳ ಬಳಿಬಂದು ಅತ್ಯಂತ ಪ್ರಭಾವ ಇರುವ ಹಾಗೆ ತಪಸ್ಸನ್ನು ಆಚರಿಸಬೇಕು, ಎಂದನಂತೆ. ಅವರು ಉತ್ತಮವಾದ ಲೋಕವನ್ನು ಇಚ್ಛಿಸಿ ತಪಸ್ಸು ಮಾಡಲು, ಸೋಮನನ್ನು ಪ್ರಶಂಸಿಸುವ ಪಾವಮಾನಿ ಸೂಕ್ತಗಳನ್ನು ರಚಿಸಿ, ಪಠಿಸಿದರಂತೆ. ಪಾವಮಾನಿ ಸೂಕ್ತಗಳನ್ನು ಪಠಿಸುವವರು ಸದ್ಗತಿಗೆ ಪಾತ್ರರಾಗುತ್ತಾರೆ, ಎಂದು ಬೃಹದ್ದೇವತಾ ವಾಕ್ಯಗಳು ಹೇಳುತ್ತವೆ.

ಇನ್ನೊಂದು ಕಥೆಯ ಪ್ರಕಾರ, ಹಿಂದೆ ಸೋಮಲತೆಯು ಸ್ವರ್ಗದಲ್ಲಿತ್ತು, ಎಂದು ಪ್ರತೀತಿ. ಇದನ್ನು ಭೂಮಿಗೆ ತರುವುದು ಹೇಗೆ ಎಂದು ಋಷಿಗಳು ಆಲೋಚಿಸಿ, ಕಡೆಗೆ ಛಂದಸ್ಸುಗಳ ಬಳಿಸಾರಿ ಸೋಮವನ್ನು ಭೂಮಿಗೆ ತರಬೇಕೆಂದು ಪ್ರಾರ್ಥಿಸಿದರು. ಇದಕ್ಕೆ ಒಪ್ಪಿದ ಛಂದಸ್ಸುಗಳು ಪಕ್ಷಿಗಳ ರೂಪವನ್ನು ಧರಿಸಿ ಸ್ವರ್ಗಕ್ಕೆ ಹಾರಿದವು. ಕಾಲದಲ್ಲಿ ಎಲ್ಲ ಛಂದಸ್ಸುಗಳಿಗೂ ನಾಲ್ಕೇ ಅಕ್ಷರಗಳು ಇದ್ದವು.

ಮೊದಲು ಜಗತೀ ಛಂದಸ್ಸು ಸ್ವರ್ಗವನ್ನು ಕುರಿತು ಹಾರಿತು. ಅರ್ಧದಾರಿ ಹಾರುವಷ್ಟರಲ್ಲಿ ಆಯಾಸವಾಗಿ ಹಿಂತಿರುಗಿ ಬಂದಿತು. ಹೀಗೆ ಹಿಂತಿರುಗುತ್ತಾ ಅದು ಮೂರು ಅಕ್ಷರಗಳನ್ನು ಕಳೆದುಕೊಂಡು ಒಂದೇ ಅಕ್ಷರದೊಂದಿಗೆ ಬಂದಿತು. ಆದರೆ, ಜೊತೆಯಲ್ಲಿ ಸೋಮಯಾಗ ಸಂಬಂಧವಾದ ದೀಕ್ಷೆಯನ್ನೂ, ಕ್ಷೀರಪಾನಾದಿ ರೂಪವಾದ ತಪಸ್ಸನ್ನೂ ತಂದಿತು. ಹೀಗೆ, ಜಗತೀ ಛಂದಸ್ಸಿನ ಋಕ್ಕುಗಳಿಂದ ದೀಕ್ಷೆಯನ್ನು ಕೈಗೊಳ್ಳುವವರು ಪಶುಸಂಪತ್ತು, ಧನ, ಮತ್ತು ದೀಕ್ಷೆಗಳನ್ನು ಪಡೆಯುತ್ತಾರೆ, ಎಂದು ಹೇಳಿದೆ.

ನಂತರ, ತ್ರಿಷ್ಟುಪ್ ಛಂದಸ್ಸು ತಾನು ಸೋಮವನ್ನು ತರುತ್ತೇನೆಂದು ಪಕ್ಷಿರೂಪವನ್ನು ಧರಿಸಿ, ಅಂತರಿಕ್ಷಕ್ಕೆ ನೆಗೆಯಿತು. ಆದರೆ, ಅರ್ಧದಾರಿಗೆ ಹೋಗುವಷ್ಟರಲ್ಲಿ, ಆಯಾಸದಿಂದ ಬಳಲಿ, ಒಂದು ಅಕ್ಷರವನ್ನು ಬಿಟ್ಟು, ಮಿಕ್ಕ ಮೂರರೊಡನೆ ಹಿಂತಿರುಗಿತು. ಬರುವಾಗ ಯಜ್ಞದಲ್ಲಿ ಋತ್ವಿಕರಿಗೆ ನೀಡುವ ದಕ್ಷಿಣಾಕ್ರಮದೊಡನೆ ಹಿಂತಿರುಗಿತು. ಮಾಧ್ಯಂದಿನ ಸವನಗಳನ್ನು ತ್ರಿಷ್ಟುಪ್ ಛಂದಸ್ಸಿನಲ್ಲಿ ನಡೆಸುತ್ತಾರೆ. ಯಜ್ಞವನ್ನು ನಡೆಸುವ ಋತ್ವಿಕರಿಗೆ ಸಂಭಾವನೆ ನೀಡುವ ಪದ್ಧತಿ ಇದೆ.

ಇವೆರಡೂ ಛಂದಸ್ಸುಗಳು ಸೋತು ಹಿಂತಿರುಗಿದ ನಂತರ, ಋಷಿಗಳು ಗಾಯತ್ರಿ ಛಂದಸ್ಸಿನ ಬಳಿ ಬಂದು, ತಮಗಾಗಿ ಸೋಮವನ್ನು ಸ್ವರ್ಗದಿಂದ ತರಬೇಕೆಂದು ಪ್ರಾರ್ಥಿಸಿದರು. ಗಾಯತ್ರಿಯು ಒಪ್ಪಿ, ತನ್ನ ಕ್ಷೇಮಕ್ಕಾಗಿ ಪ್ರಾರ್ಥಿಸಬೇಕೆಂದು ಋಷಿಗಳಿಗೆ ಹೇಳಿ, ಶ್ಯೇನ (ಗರುಡ) ಪಕ್ಷಿಯ ರೂಪವನ್ನು ಧರಿಸಿ ಸ್ವರ್ಗಕ್ಕೆ ಹಾರಿದಳು. ಋಷಿಗಳು ಗಾಯತ್ರಿಯ ರಕ್ಷಣೆಗಾಗಿ ಮಂತ್ರಪಠನೆಯನ್ನು ಆರಂಭಿಸಿದರು.

ಸ್ವರ್ಗದಲ್ಲಿ ಸ್ವಾನ, ಭ್ರಾಜ, ಅಂಘಾರಿ, ಬಂಭಾರಿ, ಹಸ್ತ, ಸುಹಸ್ತ, ಕೃಶಾನು ಎಂಬ ಸೋಮಪಾಲಕರು ಸೋಮವನ್ನು ಕಾಯುತ್ತಿದ್ದರು. ಗಾಯತ್ರಿಯು ಇವರನ್ನು ತನ್ನ ಕರ್ಕಶವಾದ ಧ್ವನಿ ಮತ್ತು ತನ್ನ ತೀಕ್ಷ್ಣವಾದ ಉಗುರು, ಕೊಕ್ಕಿನಿಂದ ಬೆದರಿಸಿ ಓಡಿಸಿದಳು. ನಂತರ, ಸೋಮಲತೆಯನ್ನು ತನ್ನ ಕಾಲಿನ ಉಗುರು ಮತ್ತು ಕೊಕ್ಕಿನಿಂದ ಹಿಡಿದು ಹಿಂತಿರುಗಿ ಬರುತ್ತಾ, ಜಗತೀ ಮತ್ತು ತ್ರಿಷ್ಟುಪ್ ಛಂದಸ್ಸುಗಳು ಕಳೆದುಕೊಂಡಿದ್ದ ಅಕ್ಷರಗಳನ್ನೂ ಹಿಂದಕ್ಕೆ ತಂದಳು. ಹೀಗೆ ಗಾಯತ್ರಿ ಛಂದಸ್ಸಿಗೆ ಎಂಟು ಅಕ್ಷರಗಳಾದವು.

ಸೋಮಪಾಲಕರು ಗಾಯತ್ರಿಯನ್ನು ಬೆನ್ನಟ್ಟಿದರು. ಕೃಶಾನುವು ಶ್ಯೇನ ರೂಪದಲ್ಲಿದ್ದ ಗಾಯತ್ರಿಯ ಮೇಲೆ ಬಾಣ ಪ್ರಯೋಗ ಮಾಡಿದನು. ಅದು ಶ್ಯೇನ ಪಕ್ಷಿಯ ಎಡಗಾಲಿನ ಉಗುರನ್ನು ಕತ್ತರಿಸಿತು. ಕತ್ತರಿಸಿದ ನಖವು ಒಂದು ಮುಳ್ಳುಹಂದಿಯ (ಶಲ್ಯಕ) ರೂಪವನ್ನು ಧರಿಸಿತು. ನಖವನ್ನು ಕತ್ತರಿಸಿದಾಗ ಸ್ವಲ್ಪ ಮೇದಸ್ಸು ಕೂಡ ಸ್ರವಿಸಿ, ಅದು ಒಂದು ಹೆಣ್ಣು ಆಡಾಗಿ (ಅಜಾ) ರೂಪಾಂತರಗೊಂಡಿತು. ಗಾಯತ್ರಿಯಿಂದ ಉತ್ಪನ್ನವಾದ ಕಾರಣ ಇದು ಯಜ್ಞಕ್ಕೆ ಯೋಗ್ಯವಾದ ಹವಿಸ್ಸು ಎಂದು ನಿಶ್ಚಯಿಸಲಾಯಿತು. ಗಾಯತ್ರಿಯ ಉಗುರಿಗೆ ತಗಲಿ ಬಾಣದ ಮೊನಚು ಮೊಂಡಾಯಿತು. ಬಾಣವು ದುಂಧುಭವೆಂಬ ಕಚ್ಚಲು ಶಕ್ತಿಯಿಲ್ಲದ ಹಾವಾಗಿ ರೂಪಾಂತರವಾಯಿತು. ಬಾಣದ ಹಿಂದೆ ಇರುವ ರೆಕ್ಕೆಗಳು ಆಲದಮರದ ಬೀಳುಗಳಾದವು. ಬಾಣದ ರೆಕ್ಕೆಗೆ ಕಟ್ಟಿದ ದಾರವು ಗುಂಡೂಪವೆಂಬ ಕ್ರಿಮಿಗಳಾದವು. ಹೀಗೆ ಕೃಶಾನುವಿನ ಬಾಣ ವಿವಿಧ ಪ್ರಾಣಿಗಳ ಜನ್ಮಕ್ಕೆ ಕಾರಣವಾಯಿತು.

ಶ್ಯೇನ ಪಕ್ಷಿಯ ಬಲಗಾಲಿನಲ್ಲಿ ಹಿಡಿದ ಸೋಮಲತೆಯು ಪ್ರಾತಃಸವನವಾಯಿತು. ಗಾಯಗೊಂಡ ಎಡಕಾಲಿನಲ್ಲಿ ಹಿಡಿದ ಸೋಮಲತೆಯು ಸ್ವಲ್ಪ ಬಲಹೀನವಾದ ಮಾಧ್ಯಂದಿನ ಸವನವಾಯಿತು. ಕೊಕ್ಕಿನಿಂದ ಕಚ್ಚಿತಂದ ಸೋಮದ ಭಾಗವು ತೃತೀಯ ಸವನವಾಯಿತು. ಗಾಯತ್ರಿಯು ಸೋಮವನ್ನು ಸ್ವಲ್ಪ ಕಚ್ಚಿ ಹೀರುತ್ತಾ ಇದ್ದಳು. ಲತೆಯ ಶಕ್ತಿ ಕಡಿಮೆಯಾದ ಕಾರಣ, ತೃತೀಯ ಸವನದಲ್ಲಿ ಹಾಲು ಮೊದಲಾದ ಆಶಿರ ದ್ರವ್ಯಗಳನ್ನು ಮಿಶ್ರಣ ಮಾಡುವ ಪದ್ಧತಿ ಬಂದಿತು.

ತಮ್ಮ ಅಕ್ಷರಗಳನ್ನು ಕಳೆದುಕೊಂಡ ಜಗತೀ ಮತ್ತು ತ್ರಿಷ್ಟುಪ್ ಛಂದಸ್ಸುಗಳು ಗಾಯತ್ರಿಯ ಬಳಿ ಬಂದು, ತಮ್ಮ ಅಕ್ಷರಗಳನ್ನು ಹಿಂತಿರುಗಿಸುವಂತೆ ಕೇಳಿಕೊಂಡರು. ಗಾಯತ್ರಿಯು ನಿರಾಕರಿಸುತ್ತ, ತಾನು ಸಂಪಾದಿಸಿದ ಅಕ್ಷರಗಳು ತನಗೇ ಸೇರಬೇಕೆಂದಳು. ಜಗತೀ ಮತ್ತು ತ್ರಿಷ್ಟುಪ್ ಛಂದಸ್ಸುಗಳು ದೇವತೆಗಳ ಬಳಿ ಹೋಗಿ ಗಾಯತ್ರಿಯ ಬಗ್ಗೆ ದೂರಿದವು. ದೇವತೆಗಳು ಗಾಯತ್ರಿ ಹೇಳುವುದೇ ಸರಿ ಎಂದು ಹೇಳಿ, ಶತ್ರುಸೇನೆಗಳು ಬಿಟ್ಟು ಹೋದ ವಸ್ತುವು ಯಾರಿಗೆ ಸಿಕ್ಕಿದರೆ ಅವರದ್ದೇ ಎಂದು ಪ್ರತಿಪಾದಿಸಿದರು.

ವಿಧಿಯ ಪ್ರಕಾರ ಗಾಯತ್ರಿಯನ್ನು ಪ್ರಾತಃಸವನದ ಕಲಾಪಗಳಲ್ಲೂ, ಮಾಧ್ಯಂದಿನ ಕಲಾಪಗಳಲ್ಲಿ ತ್ರಿಷ್ಟುಪ್ಅನ್ನೂ, ಮತ್ತು ಜಗತೀ ಛಂದಸ್ಸನ್ನು ತೃತೀಯ ಸವನದಲ್ಲೂ ನೆರವೇರಿಸುತ್ತಾರೆ. ಬೇರೆ ಸವನಗಳು ಕಾರ್ಯಕಲಾಪಗಳನ್ನು ನೆರೆವೇರಿಸುವ ಸಾಮರ್ಥ್ಯವನ್ನು ಕಳೆದು ಕೊಂಡದ್ದನ್ನು ನೋಡಿ ಗಾಯತ್ರಿಯು ಇವೆರಡಕ್ಕೂ ಸಹಾಯ ಮಾಡುವುದಾಗಿ ಹೇಳಿದಳು. ಗಾಯತ್ರಿಯು ತನ್ನ ಎಂಟು ಅಕ್ಷರಗಳನ್ನು ತ್ರಿಷ್ಟುಪ್ ಛಂದಸ್ಸಿನ ಮೂರು ಅಕ್ಷರಗಳ ಜೊತೆ ಸೇರಿಸಿದಳು. ಹನ್ನೊಂದು ಅಕ್ಷರಗಳಾದ ತ್ರಿಷ್ಟುಪ್ ಸಂತೋಷದಿಂದ ಮಾಧ್ಯಂದಿನ ಸವನದಲ್ಲಿ ಗಾಯತ್ರಿಗೆ ಭಾಗವನ್ನು ಕೊಟ್ಟಳು. ಹೀಗೆಯೇ ಜಗತೀ ಛಂದಸ್ಸು ಕೂಡ ಗಾಯತ್ರಿ ಮತ್ತು ತ್ರಿಷ್ಟುಪ್ ಗಳ ಜೊತೆ ಸೇರಿ ಹನ್ನೆರಡು ಅಕ್ಷರಗಳಾದವು.

ಕಥೆ ಗಾಯತ್ರೀ, ತ್ರಿಷ್ಟುಪ್, ಮತ್ತು ಜಾಗತೀ ಛಂದಸ್ಸುಗಳ ಬಗ್ಗೆ ತಿಳಿಸುತ್ತದೆ. ಮೂರೂ ಸವನಗಳಲ್ಲಿ ನಡೆಸುವ ವಿಧಿ, ಮತ್ತು ಉಪಯೋಗಿಸುವ ಛಂದಸ್ಸು ಇವುಗಳ ಮಾಹಿತಿ ಕೊಡುತ್ತದೆ. ಸೋಮಲತೆಯ ದೊರಕುವ ಸ್ಥಳದ ಬಗ್ಗೆ ಅರಿವು ನೀಡುತ್ತದೆ.

ಸೋಮಪಾನ ಎಂದರೆ ಇಂದ್ರನಿಗಿರುವ ಆದರದ ಬಗ್ಗೆ ಕೂಡ ಕೆಲವು ಕಥೆಗಳಿವೆ. ವೃತ್ರನೊಡನೆ ಯುದ್ಧ ಮಾಡುವ ಸಮಯದಲ್ಲಿ ದೇವತೆಗಳೆಲ್ಲ ಅವನ ಭಯಂಕರ ರೂಪಕ್ಕೆ ಹೆದರಿ ಇಂದ್ರನನ್ನು ಬಿಟ್ಟು ಓಡಿಹೋದರಂತೆ. ಮರುತ್ತುಗಳು ಮಾತ್ರ ಇಂದ್ರನೊಡನೆ ನಿಂತು ವೃತ್ರನ ಜೊತೆ ಕಾದಿದರಂತೆ. ಇಂದ್ರನು ಮರುತ್ತುಗಳನ್ನು ಹೊಗಳುತ್ತಾ, ಅವರಿಗೆ ತನಗೆ ಸಲ್ಲುವ ಸೋಮದ ಪಾಲನ್ನು ಕೊಡುತ್ತೇನೆಂದು ಹೇಳಿದನಂತೆ.

ಇನ್ನೊಂದು ಕಥೆಯ ಪ್ರಕಾರ, ಅಸುರ ನಮುಚಿಯು ಒಂದು ಸಲ ಇಂದ್ರನ ವೀರ್ಯವನ್ನೂ, ಅನ್ನವನ್ನೂ, ಸೋಮವನ್ನೂ, ಸುರೆಯನ್ನೂ ಅಪಹರಿಸಿದನು. ಇಂದ್ರನು ಅಶ್ವಿನೀ ದೇವತೆಗಳು ಮತ್ತು ಸರಸ್ವತಿಯಲ್ಲಿ ಹೋಗಿ, “ನಾನು ನಮುಚಿಯನ್ನು ಹಗಲಿನಲ್ಲಾಗಲಿ, ರಾತ್ರಿಯಲ್ಲಾಗಲಿ ಕೊಲ್ಲುವುದಿಲ್ಲವೆಂದು ಭರವಸೆ ನೀಡಿದ್ದೇನೆ. ಕಾಷ್ಠದಿಂದಾಗಲಿ, ಕೈಯಿಂದಾಗಲಿ, ಮುಷ್ಠಿಯಿಂದಾಗಲಿ, ಶುಷ್ಕವಾದ ಅಥವಾ ಹಸಿಯಾದ ಸಾಧನಗಳಿಂದಾಗಲಿ ಅವನನ್ನು ಕೊಲ್ಲುವುದಿಲ್ಲವೆಂದು ಭರವಸೆ ಕೊಟ್ಟಿದ್ದೇನೆ. ಅದರಿಂದಲೇ ಅವನು ನನ್ನ ಶಕ್ತಿಯನ್ನು ಅಪಹರಿಸಿದ್ದಾನೆ. ಅದನ್ನು ತಂದು ಕೊಡಿ.” ಅವರು ವೀರ್ಯದಲ್ಲೂ ಸೋಮಾದಿಗಳಲ್ಲೂ ತಮಗೆ ಭಾಗ ಕೊಟ್ಟರೆ ಆಗಬಹುದೆಂದು ಹೇಳಿದರು. ಅಶ್ವಿನೀ ದೇವತೆಗಳೂ, ಸರಸ್ವತಿಯೂ ವಜ್ರಾಯುಧವನ್ನು ನೊರೆಯಿಂದ ಬಳಿದರು. ಅದು ಶುಷ್ಕವೂ ಅಲ್ಲ, ಆರ್ದ್ರವೂ ಅಲ್ಲ. ಇದರಿಂದ ಇಂದ್ರನು ನಮುಚಿಯನ್ನು ಹೊಡೆದನು. ನಮುಚಿಯ ಶಿರಸ್ಸು ಭಿನ್ನವಾಗಿ ಸೋಮವು ರಕ್ತದಿಂದ ಮಿಶ್ರಿತವಾಗಿ ಅಸಹ್ಯವಾಯಿತು. ಆದರೆ, ಸೋಮರಾಜನು ಸಿಕ್ತನಾದರೂ ಅಮೃತರೂಪನು ಎಂದು ದೇವತೆಗಳು ಅದನ್ನು ಪಾನಮಾಡಿದರು, ಎಂಬ ವರ್ಣನೆ ಇದೆ.

ಸೋಮಪಾನದ ಪರಿಣಾಮಗಳು ಮತ್ತು ಫಲಗಳು

ಸೋಮನು ಪಾರ್ಥಿವವಾದ ರಸ ಮಾತ್ರವಲ್ಲ. ಅವನ ದಿವ್ಯರೂಪವು ಕೆಲವರಿಗೆ ಮಾತ್ರ ಸಾಕ್ಷಾತ್ಕಾರವಾಗುತ್ತದೆ. ಸೋಮವು ಚೈತನ್ಯದಾಯಿ. ಯಜ್ಞವನ್ನು ಆಚರಿಸುವ ಯಜಮಾನನ ಸ್ವರೂಪವನ್ನು ಆಕರ್ಷಕವಾಗಿ ಮಾಡುತ್ತದೆ. ಉತ್ತಮವಾದ ಜ್ಞಾನಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ,

ದೇವೋ ದೇವಾನಾಮ್ ಗುಹ್ಯಾನಿ ನಾಮಾವಿಷ್ಕೃಣೋತಿ ಬರ್ಹಿಷಿ ಪ್ರವಾಚೇ (. ಸಂ. 9.95.2), ಎಂದರೆ, ದೇವತಾತ್ಮನಾದ ಸೋಮರಸವು ಇಂದ್ರಾದಿದೇವತೆಗಳ ರಹಸ್ಯ ಸ್ವರೂಪವನ್ನು ಪ್ರಕಾಶಪಡಿಸಿ ಯಜಮಾನನಿಗೆ ಗೋಚರವಾಗುವಂತೆ ಮಾಡುತ್ತದೆ.

ಭೌತಿಕ ದೃಷ್ಟಿಯಲ್ಲಿ ನೋಡಿದರೆ, ಸೋಮರಸವು ವಯಸ್ಕೃತ್, ವಯೋಧಾಃ, ಎಂದರೆ, ಆಯುಸ್ಸನ್ನು ವೃದ್ಧಿ ಮಾಡತಕ್ಕದ್ದು. ಯುದ್ಧರಂಗದಲ್ಲಿ ಚೈತನ್ಯ ನೀಡುವಂತಹುದು, ವೀರ್ಯವೃದ್ಧಿ ಮಾಡುವಂತಹುದು. ಸೋಮರಸದಿಂದ ಅಧ್ಯಾತ್ಮ ವಿವೇಕವೂ ಅತೀಂದ್ರಿಯ ಜ್ಞಾನವೂ ಲಭಿಸುತ್ತದೆ ಎಂದು ಕೂಡ ಎಲ್ಲೆಡೆ ಉಲ್ಲೇಖವಾಗಿದೆ. ಸಾಧಾರಣವಾದ ಆಹಾರ, ಪಾನೀಯಗಳಲ್ಲಿ ಇರದ ಅನಿರ್ವಚನೀಯವಾದ ಒಂದು ಶಕ್ತಿ ಸೋಮಕ್ಕೆ ಇದೆ; ಶಕ್ತಿಯು ಅದನ್ನು ಪಾನ ಮಾಡಿದವರನ್ನು ಚೇತನಗೊಳಿಸಿ, ಅಸಾಧಾರಣವಾದ ಕಾರ್ಯಗಳನ್ನು ಮಾಡಿಸುತ್ತದೆ, ಅದರಿಂದಲೇ ಇದು ಅಮೃತಕ್ಕೆ ಸಮಾನವಾದ ದಿವ್ಯವಾದ ಪಾನೀಯ, ಇದನ್ನು ಪಾನಮಾಡಿದವರು ಅಮರರಾಗುತ್ತಾರೆ, ಎನ್ನುವ ಭಾವನೆ ಇದೆ.

ಸೋಮದ ವಿವಿಧ ಆಯಾಮಗಳು

ನಮ್ಮ ದೇಶದ ಪುರಾತನ ಮತ್ತು ನವೀನ ತತ್ತ್ವಜ್ಞಾನಿಗಳು ಸೋಮದ ವಿವಿಧ ಪ್ರತೀಕ ಮತ್ತು ಅನುಭೂತಿಗಳ ಬಗ್ಗೆ ತಮ್ಮ ವಿಶ್ಲೇಷಣೆಗಳನ್ನು ಬರೆದಿದ್ದಾರೆ. ಸಾಯಣರು ಭಾಷಾ ವಿಜ್ಞಾನ ಮತ್ತು ಪದಗಳ ವ್ಯುತ್ಪತ್ತಿಯ ದೃಷ್ಟಿಯಿಂದ ಋಗ್ವೇದವನ್ನು ವಿಶ್ಲೇಷಿಸಿದ್ದಾರೆ.

ನಿರುಕ್ತಕಾರರಾದ ಯಾಸ್ಕರು ಕೂಡ ಋಗ್ವೇದವನ್ನು ವ್ಯಾಕರಣ ಮತ್ತು ಶಬ್ದಾರ್ಥ ವಿವರಣೆಯ ದೃಷ್ಟಿಕೋಣದಿಂದ ವಿಶ್ಲೇಷಿಸಿದ್ದಾರೆ. ಪ್ರಸಿದ್ಧನಾದ ಚಂದ್ರನಿಗಿಂತ ಸೋಮನಿಗೆ ಪ್ರಾಧಾನ್ಯತೆ ಕೊಡುತ್ತ, ಯಾಸ್ಕರು ಹೀಗೆ ಹೇಳುತ್ತಾರೆ. ರಸಾಯನಾದಿಗಳನ್ನು ತಯಾರಿಸುವವರು ಸೋಮವನ್ನು ಪಾನ ಮಾಡಿದರೂ, ಅವರನ್ನು ಸೋಮಪಾ ಎನ್ನುವುದಿಲ್ಲ. ಯಜ್ಞದಲ್ಲಿ ಸೋಮವು ಹವಿಸ್ಸಾಗಿ ಉಪಯೋಗಿಸಲ್ಪಡುವ ಕಾರಣ ಯಜಮಾನರು ಮಾತ್ರ ಸೋಮಪಾ ಎಂದು ಪ್ರಸಿದ್ಧರಾಗುತ್ತಾರೆ. ‘ಸೋಮೋ ನೂನಮೇಷ ಯದ್ದೇವಾಮನ್ನಂ’ ಎಂಬ ಶ್ರುತಿವಾಕ್ಯದ ಪ್ರಕಾರ, ಚಂದ್ರನು ಸೋಮಪದ ವಾಚ್ಯನಾಗಿದ್ದರೂ ಅವನು ದೇವತೆಗಳಿಗೆ ಮಾತ್ರವೇ ಅನ್ನವಾಗಿರುವನು. ಹೀಗೆಸೋಮಂ ಮನ್ಯತೇ’ ಎಂಬ ಮಂತ್ರದಿಂದ ಸೋಮಪಾದಕ್ಕೆ ಎರಡು ವಿಧವಾದ ಅರ್ಥವನ್ನು ಹೇಳಿದರೂ, ಓಷಧೀರೂಪವಾದ ಸೋಮಕ್ಕೇ ಯಾಜ್ಞಿಕರು ಯಜ್ಞದಲ್ಲಿ ಪ್ರಾಧಾನ್ಯತೆ ನೀಡುತ್ತಾರೆ.

ಮಹರ್ಷಿ ಅರವಿಂದರು ಸೋಮಕ್ಕೆ ಒಂದು ಆಧ್ಯಾತ್ಮಿಕ ಆಯಾಮವನ್ನು ನೀಡಿದ್ದಾರೆ. ಅವರ ದಿ ಸೀಕ್ರೆಟ್ ಆಫ್ ದಿ ವೇದಾಸ್ (The Secret of the Vedas) ಎಂಬ ಪುಸ್ತಕದಲ್ಲಿ, ಸೋಮ, ಆನಂದ ಮತ್ತು ಅಮರತ್ವ ಎಂಬ ಅಧ್ಯಾಯವು ಸೋಮನ ವಿಶ್ಲೇಷಣೆಗೆ ಮೀಸಲಾಗಿದೆ. ಅರವಿಂದರ ಪ್ರಕಾರ, ಸೋಮನು ಅಮೃತತ್ವ ಮತ್ತು ಆನಂದ ಎಂಬ ಮಧುವಿನ ಅಧಿಪತಿ. ಅಗ್ನಿಯ ತರಹ ಸೋಮನು ಕೂಡ ಭೂಮಿಯಿಂದ ಹೊಮ್ಮಿ, ವರುಣನಿಂದ (ನೀರಿನಿಂದ) ಪೋಷಣೆಗೊಂಡು ಸಸ್ಯಗಳಿಂದ ಹುಟ್ಟುತ್ತಾನೆ. ಅದ್ರಿ ಅಥವಾ ಬೆಟ್ಟದ ಅಂಶದಿಂದ ಹುಟ್ಟಿದವನು, ಸೋಮ. ವೇದದ ಸೂಕ್ತಗಳು ಸೋಮನು ಉಗಮವಾಗುವಾಗ ಅದ್ರಿಯ, ಎಂದರೆ ಸೋಮವನ್ನು ಹಿಂಡುವ ಕಲ್ಲಿನ ಗರ್ಜನೆಯನ್ನು ಇಂದ್ರನ ವಜ್ರಾಯುಧದೊಡನೆ ಹೋಲಿಸಿ ವರ್ಣಿಸುತ್ತವೆ. ಹೀಗೆ ಹೊರಬಂದ ಸೋಮವು ಆಧವನೀಯದ (ಪವಿತ್ರ) ಮೂಲಕ ಶೋಧಿಸಲ್ಪಟ್ಟು ಶುದ್ಧವಾಗುತ್ತದೆ. ಎಲ್ಲ ಕಲ್ಮಷಗಳನ್ನು ತೆಗೆದ ನಂತರ ಶುದ್ಧವಾದ ಸೋಮವನ್ನು ಚಮೂ ಎಂಬ ಪಾತ್ರೆಯಲ್ಲಿ ಸಂಗ್ರಹಿಸಿ ಕಲಶಗಳಲ್ಲಿ ಇಂದ್ರನಿಗಾಗಿ ಯಜ್ಞಕ್ಕೆ ಆಹುತಿಗಾಗಿ ತರುತ್ತಾರೆ.

ದೇವತೆಗಳನ್ನು ಸಂತೋಷಪಡಿಸಲು ಸೋಮನು ಅಮರತ್ವದೆಡೆಗೆ ನದಿಯಂತೆ ಹರಿಯುವ ಉಲ್ಲೇಖಗಳೆಡೆ ಅರವಿಂದರು ಗಮನ ಸೆಳೆದಿದ್ದಾರೆ. ಇವೆಲ್ಲ ವರ್ಣನೆಗಳೂ ಅಮರತ್ವವನ್ನು ಸೂಚಿಸುತ್ತವೆ. ಒಂಭತ್ತನೆಯ ಮಂಡಲದ ಸೂಕ್ತಗಳೆಲ್ಲವೂ ಸೋಮನನ್ನು ಸ್ತುತಿಸುವ, ಒಂದಲ್ಲ ಒಂದು ರೀತಿ, ಆನಂದದ, ಅಮರತ್ವದ ಉಪಾಸನೆಯ ಪ್ರತೀಕಗಳು. ಒಂದು ಸ್ತುತಿಯಲ್ಲಿ ಭೌತಿಕ ಕಾಯವನ್ನು ಚಮೂ ಮತ್ತು ಪವಿತ್ರಗಳಿಗೆ ಹೋಲಿಸಲಾಗಿದೆ. ಸೂಕ್ತವು ಮೊದಲು ಸೋಮಲತೆಯನ್ನು ಹಿಂಡಿ, ಸೋಸಿ, ಶುದ್ಧಮಾಡಿ, ಚಮುವಿನಲ್ಲಿ ಸಂಗ್ರಹಿಸುವ ಪ್ರಕ್ರಿಯೆಯಿಂದ ಮೊದಲುಗೊಳ್ಳುತ್ತದೆ. ಸೋಸುವ ಉಪಕರಣಗಳು ಸ್ವರ್ಗದ ಹಾದಿಯನ್ನೆಲ್ಲ ವ್ಯಾಪಿಸಿರುವ ಕಲ್ಪನೆಯಿಂದ, ಜ್ಞಾನದಿಂದ ಪವಿತ್ರವಾದ ಮನಸ್ಸುಚೇತನಗಳ ಕಲ್ಪನೆಗೆ ಎಡೆಮಾಡಿ ಕೊಡುತ್ತದೆ.

ಪವಿತ್ರಂ ವಿತತೇ ಬ್ರಹ್ಮಣಸ್ಪತೇ,’ ಎಂದರೆ, ಪವಿತ್ರವನ್ನು ನಿನಗಾಗಿ ಹರಡಲಾಗಿದೆ, ನನ್ನ ಮನಸ್ಸಿನ ಒಡೆಯನೇ, ‘ಪ್ರಭಾರ್ಗಾತ್ರಾಣಿ ಪರ್ಯೇಸಿ ವಿಶ್ವತಃ,’ – ನೀನು ಪ್ರಕಟಗೊಂಡು ನಿನ್ನ ಅಂಗಾಂಗಗಳು ಸರ್ವತ್ರ ವ್ಯಾಪಿಸಿವೆ. ಸೋಮನನ್ನು ಇಲ್ಲಿ ಬ್ರಹ್ಮಣಸ್ಪತಿ, ಎಂದು ಸಂಬೋಧಿಸಲಾಗಿದೆ. ಸಂಬೋಧನೆಯನ್ನು ಎಲ್ಲ ದೇವತೆಗಳಿಗೂ, ಅದರಲ್ಲೂ ಬೃಹಸ್ಪತಿಗೆ, ಉಪಯೋಗಿಸುತ್ತಾರೆ. ಬ್ರಹ್ಮಣಸ್ಪತಿ ಎಂದರೆ, ಲೋಕಸೃಷ್ಟಿಯ ಅಧಿಪತಿ. ಬ್ರಹ್ಮವೆಂದರೆ, ನಮ್ಮೊಳಗಿನ ಆತ್ಮ; ಇಡೀ ಲೋಕದ ಆತ್ಮ. ಅಷ್ಟೇ ಅಲ್ಲ, ನಮ್ಮೊಳಗಿನ ಕಲ್ಪನಾಶಕ್ತಿ, ಸೃಜನಶೀಲತೆ, ಚೈತನ್ಯಸ್ರೋತ. ನಮ್ಮ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳ ಮೂಲ.

ಸೋಮನು ಆನಂದದ ಅಧಿಪತಿ ಮತ್ತು ಪ್ರತೀಕ. ಇವನೇ ನಮ್ಮ ಆತ್ಮದ ಅಧಿಪತಿ; ದೈವಸೃಷ್ಟಿಯನ್ನು ಸಾಕಾರಗೊಳಿಸುವ ಶಕ್ತಿ. ನಮ್ಮ ಮನಸ್ಸು ಬುದ್ಧಿಗಳು ಇವನಿಂದ (ಇವನಿಗಾಗಿ) ಉದ್ದೀಪನಗೊಂಡು, ಸಣ್ಣತನ, ದ್ವಂದ್ವಗಳನ್ನು ನಿರ್ಮೂಲಮಾಡಿ, ಎಲ್ಲ ಇಂದ್ರಿಯಗಳನ್ನು ಉತ್ತೇಜಿಸಿ, ಜೀವನದ ಸಂಪೂರ್ಣ ಆನಂದವನ್ನು ಗ್ರಹಿಸುವುದಕ್ಕಾಗಿ ಪವಿತ್ರಗೊಳಿಸುವ ಸಾಧನಗಳಾಗಿವೆ. ಹೀಗೆ, ಪವಿತ್ರವಾದ ಸೋಮವು ಚಮುವಿನ ಒಳಗೆ ಸಂಗ್ರಹವಾಗುವ ರೀತಿಯಲ್ಲೇ, ಶುದ್ಧವಾದ ಸೋಮವನ್ನು ಪರಿಗ್ರಹಿಸಿದಾಗ ನಮ್ಮೊಳಗೆ ಉಂಟಾಗುವ ಆನಂದ ಕೂಡ ನಮ್ಮ ಸ್ವರೂಪದ ಕಣಕಣದಲ್ಲೂ ಅನುಭವಕ್ಕೆ ಬರುತ್ತದೆ. ಮಾನವನ ದೇಹದ ಪ್ರತಿ ಅಣುವೂ ಸೋಮಸ್ಪರ್ಶದ ಅನುಭವವನ್ನು ಗ್ರಹಿಸುತ್ತಾ ಇದ್ದಂತೆ, ದೈವೀ ಆನಂದವನ್ನು ಅನುಭವಿಸುತ್ತದೆ.

ಅರವಿಂದರು ವೇದದಲ್ಲಿ ಬರುವ ಪ್ರಭು ಮತ್ತು ವಿಭು ಶಬ್ದಗಳ ಅರ್ಥವನ್ನು ಕೂಡ ವಿಶ್ಲೇಷಿಸಿದ್ದಾರೆ. ವಿಭು ಎಂದರೆ, ಸರ್ವವ್ಯಾಪಿ ಎಂದರ್ಥ. ಪ್ರಭು ಎಂದರೆ, ಯಾವುದೋ ಒಂದು ಅನುಭೂತಿಯ ನಂತರ ಅಸ್ತಿತ್ವಕ್ಕೆ ಬರುವುದು. ಸೋಮವು ಪವಿತ್ರದಿಂದ ಹೊರಬಂದು ಚಮುವನ್ನು ವ್ಯಾಪಿಸುತ್ತದೆ. ಒಂದು ಹಂತದಲ್ಲಿ ಸಾಂದ್ರಗೊಂಡು, ತನ್ನದೇ ಆದ ಆನಂದದ ಅನುಭವದ ಅಭಿವ್ಯಕ್ತಿಯು, ದೇಹದ ಅಣುಅಣುವನ್ನೂ ವ್ಯಾಪಿಸುತ್ತದೆ.

ಆದರೆ, ಎಲ್ಲ ಮನುಷ್ಯರೂ ದಿವ್ಯವಾದ, ಆದರೆ, ಪ್ರಚಂಡವಾದ, ಮತ್ತು ಕೆಲವೊಮ್ಮೆ ಅತೀವ ತುಮುಲದಿಂದ ಕೂಡಿದ ಆನಂದದ ಹೊಡೆತವನ್ನು ತಾಳಲಾರರು. ‘ಅತಪ್ತತನೂರ್ ತದ್ ಆಮೋ ಅಷ್ನುತೇ,’ ಎಂದರೆ, ಇನ್ನೂ ಪಕ್ವವಾಗದ ಶರೀರದವನು ಸೋಮವನ್ನು ರುಚಿನೋಡಿ ಆನಂದಿಸಲಾರ. ‘ಶೃತಾಸ ಇದ್ ಹನ್ತಾಸ್ ತತ್ ಸಮಾಶತ’: ಅಗ್ನಿಯಲ್ಲಿ ಬೆಂದು ಪಕ್ವವಾದವರು ಮಾತ್ರ ಸೋಮವನ್ನು ಸೇವಿಸಬಲ್ಲರು.

ನಮ್ಮ ಅಸ್ತಿತ್ವವೆಂಬ ಪಾತ್ರೆಯಲ್ಲಿ ಸುರಿದ ದೈವೀ ಜೀವನದ ಮಧುವು ಅತಿ ಶಕ್ತಿಯುತವಾಗಿದ್ದು, ಗುರುತರವಾದ, ಉಗ್ರವಾದ ಭಾವೋತ್ಕರ್ಷವನ್ನು ಉಂಟುಮಾಡುತ್ತದೆ. ಇದನ್ನು ತಡೆಯುವ ಶಕ್ತಿ ಇರಬೇಕಾದರೆ, ಸಾಧನೆ ಇರಬೇಕು, ಜೀವನದ ಸುಖದುಃಖಗಳನ್ನು ಅನುಭವಿಸಿ ಪಕ್ವವಾಗಿರಬೇಕು. ಹಸಿ ಮಡಕೆಯಲ್ಲಿ ಸೋಮವನ್ನು ಸುರಿದರೆ, ಅರ್ಥವಿದೆಯೇ? ಅದು ಮಡಕೆಯನ್ನೇ ಒಡೆದುಹಾಕಿ, ಅಮೂಲ್ಯವಾದ ಸೋಮವನ್ನು ಚೆಲ್ಲುವಂತೆ ಮಾಡುತ್ತದೆ. ಸೋಮಪಾನ ಮಾಡುವ ಅರ್ಹತೆ ಬರಲು ಭೌತಿಕ ಕಾಯಜೀವಗಳು ಬೆಂಕಿಯಲ್ಲಿ ಸುಟ್ಟು ಪಕ್ವವಾಗಬೇಕು. ಇಲ್ಲವಾದರೆ, ಅವನು ಜಾಗೃತಾವಸ್ಥೆಯಲ್ಲಿ ಸೋಮದ ಶಕ್ತಿಯನ್ನು ತಡೆಯಲಾರದೆ, ಅವನ ಕಾಯ ಮತ್ತು ಮನಸ್ಸುಗಳು ಇದರ ಹೊಡೆತದಿಂದ ಮುರಿದು ಬೀಳುತ್ತವೆ.

ಸೋಮನು ಗಂಧರ್ವನಂತೆ, ಆನಂದೋತ್ಕರ್ಷಗಳನ್ನು ಉಂಟುಮಾಡುವವನು. ‘ಗಂಧರ್ವ ಇತ್ಥ ಪದಮದ್ಯ ರಕ್ಷತಿ,’ ಎಂದರೆ ಆನಂದಪದವನ್ನೇ ರಕ್ಷಿಸುವಾತ. ಸಮಸ್ತ ಲೋಕಗಳಲ್ಲೂ, ಸಮಸ್ತಲೋಕಗಳನ್ನೂ ಮೀರಿ ಇರುವಾತ. ‘ಪತಿ ದೇವಾನಾಂ ಜನ್ಮಾನಿ ಅದ್ಭುತಃ,’ ಎಂದರೆ ಲೋಕಗಳಲ್ಲಿ ದೇವತೆಗಳ ಜನ್ಮವನ್ನು ಸಂರಕ್ಷಿಸುವಾತ. ಅರವಿಂದರ ಪ್ರಕಾರ, ದೇವತೆಗಳ ಜನ್ಮ ಎನ್ನುವುದು ಸಮಷ್ಟಿಯಾದ್ಯಂತ, ಮತ್ತು ನಮ್ಮ ಒಳಗೆ, ದೈವೀತತತ್ವಗಳ ಪ್ರಕಟೀಕರಣ. ಸೋಮನು ಆನಂದ ಪ್ರಪಂಚವನ್ನು ರಕ್ಷಿಸುತ್ತಾ, ಮನುಷ್ಯನೊಳಗೆ ಜ್ಞಾನದಿಂದ ಹುಟ್ಟುವ ದೈವತ್ವವನ್ನು ಅದರ ಶತ್ರುಗಳಾದ ಮಾಯೆಅವಿದ್ಯೆಗಳಿಂದ ಜನಿಸುವ ದುಃಖ ಮತ್ತು ಭೇದಗಳಿಂದ ರಕ್ಷಿಸುತ್ತಾನೆ.

ಸೋಮನು ದೇವತೆಗಳ ಹವಿಸ್ಸು; ಅಮರತ್ವವನ್ನು, ಆನಂದೋತ್ಸಾಹಗಳನ್ನು ಉಂಟುಮಾಡುವ ಮಧುವಾಗಿ ಅವನು ಯಜ್ಞವನ್ನು ಪ್ರವೇಶಿಸುತ್ತಾನೆ. ಇದು ಭೌತಿಕ ಸ್ತರದಿಂದ ತೀವ್ರ ಜಾಗೃತಾವಸ್ಥೆಯವರೆಗೆ ಮಾನವನ ಉತ್ಥಾನದ ಪ್ರತೀಕ. ಇಂತಹ ಜಾಗೃತಾವಸ್ಥೆಯಲ್ಲಿ ಅವನು ನಭವನ್ನು, ಅಂದರೆ, ಮನೋತತ್ವವನ್ನು ಧರಿಸಿ ಪ್ರಕಟವಾಗುತ್ತಾನೆ. ‘ಹವಿರ್ಹವಿಶ್ಮೋ ಮಹಿ ಸದ್ಮ ದೈವ್ಯಮ್, ನಭೋ ವಸಾನಃ ಪರಿ ಯಾಸಿ ಅಧ್ವರಮ್,’ ಎಂದರೆ, ದೈವೀ ಆನಂದವು ಪ್ರಕಾಶಮಾನವಾದ ಮೋಡಗಳನ್ನು ಧರಿಸಿ ಮನೋತತ್ವದಲ್ಲಿ ಪ್ರಕಟವಾಗುತ್ತದೆ.

ಸೂರ್ಯ ಮತ್ತು ಅಗ್ನಿಗಳಂತೆ, ಸೋಮನು ಸಹಸ್ರ ಶಕ್ತಿಗಳಿಂದ ಸನ್ನದ್ಧನಾಗಿ ಸತ್ಯಜ್ಞಾನಗಳನ್ನು ಗೆಲ್ಲುತ್ತಾನೆ. ‘ರಾಜಾ ಪವಿತ್ರರಥೋ ವಾಜಾಂ ಆರುಹಃ, ಸಹಸಭೃಸ್ಥಿರ್ ಜಯಸಿ ಶ್ರವೋ ಬೃಹತ್,’ ಎಂದರೆ, ಸೂರ್ಯನಂತೆ ತೇಜೋವಂತನಾದ ವಿಜಯಶಾಲೀ ರಾಜನಂತೆ ಮಾನವನಿಗಾಗಿ ಸತ್ಯಜ್ಞಾನಗಳನ್ನು, ಅಮರತ್ವವನ್ನು ಗೆದ್ದುಕೊಡುತ್ತಾನೆ. ಮಾನವನಲ್ಲಿ ಇರುವ ದೈವೀಶಕ್ತಿಯು ಬಾಲಸೂರ್ಯನಂತೆ ಅಂಧಕಾರವನ್ನು ತೊಲಗಿಸುತ್ತದೆ.

ಹೀಗೆ, ಅರವಿಂದರು ಸೋಮನು ದೈವೀ ಶಕ್ತಿಯ ವಾಹನವೆಂದೂ, ಮನುಷ್ಯನ ಕಾಯಮನಸ್ಸುಬುದ್ಧಿಗಳು ಸೋಮಪಾತ್ರೆಯೆಂದೂ, ಬೇರೆ ಬೇರೆ ಉಕ್ತಿಗಳನ್ನು ಉದಾಹರಿಸಿ ವಿವರಿಸುತ್ತಾರೆ. ಅಮರತ್ವ, ಆನಂದ, ಆತ್ಮೋಕರ್ಷಗಳನ್ನು ಪಡೆಯಲು ಪಾತ್ರನು ಮೊದಲು ಸಾಧನೆಯಿಂದ ಶಕ್ತನಾಗಬೇಕು.

ಇಂದುಮುಂದೆ

ಆಂಧ್ರದ ಸೋಮಯಾಜಿಗಳು ಹಿಮಾಲಯ ಪ್ರದೇಶದಿಂದ ಸೋಮವನ್ನು ತರಿಸಿಕೊಳ್ಳುತ್ತಿದ್ದರಂತೆ. ಗೋಲ್ಕೊಂಡ ಸುಲ್ತಾನನು ಅದರ ಮೇಲೆ ಪ್ರತಿಬಂಧ ಹೇರಿದನಂತೆ. ಬ್ರಿಟಿಷರ ಆಕ್ರಮಣದ ನಂತರ ಮರಾಠರ ರಾಜ್ಯದಲ್ಲಿ ಮೂರು ಬಾರಿ ಸೋಮಯಾಗ ನಡೆದು ನಂತರ ಸಂಪೂರ್ಣವಾಗಿ ನಿಂತುಹೋಯಿತಂತೆ. ಸೋಮಯಾಜ್ಞವನ್ನು ನಡೆಸುವ ಪಾತ್ರತೆ ಪಡೆಯಲು ಸೋಮಯಾಜಿಗಳು ಹದಿಮೂರು ದಿನಗಳ ಕಾಲ ವ್ರತಉಪವಾಸಗಳನ್ನು ಮಾಡುತ್ತಿದ್ದರಂತೆ.

ಏನೇ ಆಗಲಿ, ಸೋಮನ ಬಗೆಗಿನ ತಿಳುವಳಿಕೆ ಇಂದು ನಷ್ಟವಾಗಿದೆ. ಸೋಮನು ಬ್ರಹ್ಮಜ್ಞಾನದ ಪ್ರತೀಕಸಾಧನಗಳೆರಡೂ ಹೌದು. ತಿಳುವಳಿಕೆಯನ್ನು ರಕ್ಷಿಸಿಕೊಳ್ಳಲು ಹಿಂದಿನ ಮತ್ತು ಇಂದಿನ ಋಷಿಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಅತಿ ಅವಶ್ಯಕ.

(ಮುಂದಿನ ಭಾಗವನ್ನು ಇಲ್ಲಿ ಓದಿ- ಭಾಗ 2, ಭಾಗ 3)

ಆಕರಗಳು:
http://www.vyasaonline.com/rig-veda/
https://twitter.com/priya_27_/status/1322098282919682049?s=21
Soma: Divine Mushroom of Immortality: https://archive.org/details/in.ernet.dli.2015.449342
The Secret of the Veda, by Sri Aurobindo: https://archive.org/details/15thesecretofthevedasriaurobindosriaurobindo_563_w
https://en.wikipedia.org/wiki/Sarcostemma_acidum
About Hop – https://en.wikipedia.org/wiki/Humulus_lupulus

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply