close logo

ಸೋಮ: ವಿದ್ವಾಂಸರ ಅಭಿಮತ

ಅನಾದಿಕಾಲದಿಂದಲೂ ಮಾನವಜನಾಂಗ ಅಜರತ್ವ, ಅಮರತ್ವಗಳ ಅನ್ವೇಷಣೆಯಲ್ಲಿ ವ್ಯಸ್ತವಾಗಿದೆ. ಸೋಮನು (ಸೋಮವು) ಅಜರತ್ವ, ಅಮರತ್ವಗಳ ಪ್ರತೀಕ. ನಮ್ಮ ವೇದಪುರಾಣಯೋಗಇತಿಹಾಸಗಳ ಸಾಹಿತ್ಯದಲ್ಲಿ ಸೋಮನ ಬಗ್ಗೆ ಅಸಂಖ್ಯ ಉಲ್ಲೇಖಗಳಿವೆ. ಇಂದಿನ ಸಂಶೋಧನಾಕಾರರು ಯಾವುದೇ ವಿಷಯನ್ನು ಪ್ರತ್ಯೇಕವಾದ ತಮ್ಮದೇ ದೃಷ್ಟಿಕೋಣಗಳಿಂದ ವಿಶ್ಲೇಷಿಸುತ್ತಾರೆ. ತಪ್ಪಿಲ್ಲ. ಆದರೆ, ಇದರಲ್ಲಿ ಒಂದು ಸಮಗ್ರ ವಿಶ್ಲೇಷಣೆಯ ಭಾವ, ಉಪಲಬ್ಧಿಗಳು ದೊರಕುವ ಸಾಧ್ಯತೆ ಕಡಿಮೆ.

ಹಿಂದಿನ ಲೇಖನದಲ್ಲಿ ಸೋಮದ ಸ್ವರೂಪ,ಕಥೆಗಳು, ವಿವಿಧ ದೃಷ್ಟಿಕೋನಗಳಿಂದ ಸೋಮನ ಪರಿಚಯವನ್ನು ಮಾಡಿಕೊಟ್ಟೆವು. ಲೇಖನದಲ್ಲಿ ಅದೇ ವಸ್ತುವನ್ನು ಮುಂದುವರೆಸುತ್ತ, ಡಾ. ಡೇವಿಡ್ ಫ್ರಾಲಿ (ಪಂ. ವಾಮದೇವ ಶಾಸ್ತ್ರಿ) ಯವರು ಸಮಗ್ರವಾಗಿ, ವಿವಿಧ ದೃಷ್ಟಿಕೋನಗಳಿಂದ ಸೋಮವನ್ನು ಹೇಗೆ ವಿಶ್ಲೇಷಿಸಿದ್ದಾರೆ ಎನ್ನುವುದನ್ನು ನೋಡೋಣ. ಡಾ. ಫ್ರಾಲಿಯವರು ವೇದ, ಯೋಗ, ಆಯುರ್ವೇದ ಇತ್ಯಾದಿ ವಿಷಯಗಳನ್ನು ಆಳವಾಗಿ ಅಭ್ಯಸಿಸಿ, ಹಲವಾರು ಲೇಖನ ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸ್ತುತ ಲೇಖನ ಅವರ ಬರಹಗಳ ಒಂದು ಚಿಕ್ಕ ಪರಿಚಯ.

ಸೋಮವು ಪ್ರಾಯಶಃ ಮಾನವನ ಅಮೃತತ್ವದ ಅನ್ವೇಷಣೆಯ ಅತಿ ಮಹತ್ವಪೂರ್ಣ ಪ್ರತೀಕಸೋಮವು ಒಂದು ವಿಶೇಷ ಪಾನೀಯ ಅಥವಾ ಆಹಾರವಸ್ತು; ಇದನ್ನು ಸೇವಿಸಿದವರಿಗೆ ದೇಹ, ಮನಸ್ಸು, ಹೃದಯಗಳ ವಿಕಾಸ ಸಾಧ್ಯವಾಗುತ್ತದೆಎನ್ನುವುದು ಆಧುನಿಕ ಸಂಶೋಧಕರ ಅಭಿಪ್ರಾಯ. ಆದರೆಸೋಮವು ಯಾವುದೋ ಪದಾರ್ಥ ಮಾತ್ರವಲ್ಲ, ಇದು ಒಂದು ಮಂತ್ರ ಶಕ್ತಿಯೂ ಹೌದು. ಯೋಗದ, ಆಯುರ್ವೇದದ ಅಭ್ಯಾಸ ಮಾಡುವವರು ಕೂಡ ಸೋಮದ ಆರಾಧಕರು. ಸೋಮವೆಂದರೆ, ಆನಂದದ ಸ್ವರೂಪ.

ಡಾ. ಫ್ರಾಲಿಯವರ ಲೇಖನ/ಕೃತಿಗಳನ್ನು ಪ್ರಸ್ತುತ ಲೇಖನದ ಮೂರು ಖಂಡಗಳಲ್ಲಿ ವಿಶ್ಲೇಷಿಸಿ ಓದುಗರ ಸಮಕ್ಷಮಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಸೋಮವು ಅಮೃತತ್ವದ ಪ್ರತೀಕ. ಆದ್ದರಿಂದ, ನಾವು ಮೊದಲಿಗೆ ಸೋಮದ ಸ್ವರೂಪವನ್ನು ಅರಿಯಬೇಕು. ಎರಡನೆಯದಾಗಿ, ಅಮೃತತ್ವ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸೋಮದ ಪ್ರತೀಕಗಳು ಯಾವುವು, ನಾವು ಪ್ರತೀಕಗಳನ್ನು ತಿಳಿದೋ, ತಿಳಿಯದೆಯೋ ನಮ್ಮ ನಿತ್ಯ ಜೀವನದಲ್ಲಿ ನೋಡಿದ್ದೇವೆಯೇ, ಅದನ್ನು ಇನ್ನೂ ಗೌರವದ ದೃಷ್ಟಿಯಿಂದ ನೋಡುತ್ತೇವೆಯೇ? ಪವಿತ್ರವೆಂದು ಪರಿಗಣಿಸುತ್ತೇವೆಯೇ?

ಸೋಮನ ಭೌತಿಕ ಸ್ವರೂಪ: ಸೋಮಲತೆಯೆಂದರೆ ಯಾವುದು?

ಡಾ. ಫ್ರಾಲಿಯವರು, ಸೋಮ ಇಂತಹುದೇ ಒಂದೇ ಸಸ್ಯ ಎಂದು ಹೇಳಲು ಸಾಧ್ಯವಿಲ್ಲ; ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯ ಸೋಮ ಸಸ್ಯಗಳು ದೊರೆಯುತ್ತಿದ್ದವು ಎನ್ನುತ್ತಾರೆ. ಇದಕ್ಕೆ ಆಧಾರವಾಗಿ, ಸುಶ್ರುತನ ಕೃತಿಗಳನ್ನು ಉದಾಹರಿಸುತ್ತಾರೆ.

ಸುಶ್ರುತನು ಭಾರತದ ವಿವಿಧ ಪರ್ವತ ಶ್ರೇಣಿಗಳಲ್ಲಿ ದೊರಕುವ ಇಪ್ಪತ್ತು ನಾಲ್ಕು ಬಗೆಯ ಸೋಮಸಸ್ಯಗಳನ್ನು ಉಲ್ಲೇಖಿಸಿದ್ದಾನೆ ಎಂದು ಫ್ರಾಲಿಯವರು ಹೇಳುತ್ತಾರೆ. ಪ್ರಾಯಶಃ, ಇವು ಹಿಮಾಲಯ ಪ್ರದೇಶದ ಸರೋವರಗಳ ಹತ್ತಿರದಲ್ಲಿ ಬೆಳೆಯುವ ಸಸ್ಯಗಳು. ಇವುಗಳ ಹೆಸರುಗಳು ಕೂಡ ವೇದಗಳಲ್ಲಿ ಉಲ್ಲೇಖಗೊಂಡಿವೆ. ಆದ್ದರಿಂದ, ವಿವಿಧ ಬಗೆಯ ಪವಿತ್ರ ಸಸ್ಯಗಳಿಗೆ ಮತ್ತು ಆ ವಿಜ್ಞಾನಕ್ಕೆ ಸೋಮ ಎನ್ನುತ್ತಾರೆ ಎಂಬುದು ಫ್ರಾಲಿಯವರ ಅಭಿಪ್ರಾಯ. “ಸೋಮವೆಂಬ ದೈವೀ ಸಸ್ಯವು ಹೀಗೆ ವಿವಿಧ ಪ್ರದೇಶ, ಹೆಸರು, ಶಕ್ತಿ ಇವುಗಳ ಆಧಾರದ ಮೇಲೆ ಇಪ್ಪತ್ತು ನಾಲ್ಕು ಬಗೆಯ ಜಾತಿಗಳಾಗಿ ವಿಂಗಡಿಸಲ್ಪಟ್ಟಿದೆ. ಇವು, ಅಂಶುಮತ, ಮುಂಜವತ, ಚಂದ್ರಮಃ, ರಜತಪ್ರಭಾ, ದುರ್ವಾಸೋಮ, ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುತ್ತದೆ. ವೇದಗಳಲ್ಲಿ ಇವುಗಳ ಉಲ್ಲೇಖವಿದೆ“.

ಸುಶ್ರುತ ಸಂಹಿತೆಯ ಚಿಕಿತ್ಸಾ ಸ್ಥಾನವನ್ನು ಉಲ್ಲೇಖಿಸುತ್ತಾ, ಫ್ರಾಲಿಯವರು ಮುಂದುವರೆದು ಹೇಳುತ್ತಾರೆ, “ ಸೋಮಸಸ್ಯಗಳು ಹಿಮಾಲಯ, ಅರ್ಬುದ, ಸಹ್ಯ, ಮಹೇಂದ್ರ, ಮಲಯ, ಶ್ರೀಪರ್ವತ, ದೇವಗಿರಿ, ದೇವಸಹ, ಪರಿಯಾತ್ರ, ವಿಂಧ್ಯ, ಇತ್ಯಾದಿ ಪರ್ವತಶ್ರೇಣಿಗಳಲ್ಲಿ ದೊರೆಯುತ್ತವೆ. ಸೋಮಸಸ್ಯಗಳಲ್ಲೇ ಅತುತ್ತಮ ಜಾತಿಯ ಚಂದ್ರಮಃ ಸಸ್ಯಗಳು ನದಿಗಳಲ್ಲಿ, ಅದರಲ್ಲೂ, ಪಂಚಪರ್ವತಗಳ ಆಚೆಯ ವಿತಸ್ತಾ (ಝೆಲುಮ್) ನದಿಯ ಉತ್ತರತೀರದ ತಪ್ಪಲುಗಳಲ್ಲಿ ತೇಲುತ್ತ ಕಾಣಬರುತ್ತವೆ. ಮುಂಜವತ ಮತ್ತು ಅಂಶುಮತ ಜಾತಿಗಳೂ ಅದೇ ಪ್ರದೇಶದಲ್ಲಿ ದೊರಕುತ್ತವೆ. ಕಾಶ್ಮೀರದ ಮಾನಸ ಸರೋವರದಲ್ಲಿ ಗಾಯತ್ರಿ, ತ್ರೈಷ್ಟುಭ, ಪಂಕ್ತ, ಜಗತ, ಶಂಕರ, ಇತ್ಯಾದಿ ಜಾತಿಗಳು ಚಂದ್ರನಷ್ಟೇ ಸುಂದರವಾಗಿ ಕಾಣಸಿಗುತ್ತವೆ.”

ಋಗ್ವೇದದ ಇತರ ಸೂಕ್ತಗಳಲ್ಲಿ ಸುಷೋಮಾ, ಅರ್ಜಿಕ, ಮತ್ತು ಶರಣ್ಯಾವತಗಳು ಸೋಮಸಸ್ಯಗಳು ದೊರಕುವ ಪ್ರದೇಶಗಳೆಂದು ಉಲ್ಲೇಖಗೊಂಡಿವೆ. (. ಸಂ. 8. 7. 29) ಸಾಯಣರ ಪ್ರಕಾರ, ಬ್ರಾಹ್ಮಣಗಳಲ್ಲಿ ಉಲ್ಲೇಖಗೊಂಡಂತೆ, ಶರಣ್ಯಾವತವು ಕುರುಕ್ಷೇತ್ರದ ಬಳಿಯ ಸರಸ್ವತಿ ಪ್ರದೇಶದಲ್ಲಿದ್ದ ಒಂದು ಸರೋವರ.

ಸೋಮನು ಸದಾ ಸರ್ವದಾ ನೀರು, ನದಿ, ಸಮುದ್ರಗಳ ಸಂಸರ್ಗದಲ್ಲೇ ಇರುವವನು. ಇದರ ಸಮರ್ಥನೆಗಾಗಿ ಋಗ್ವೇದದ ಕೆಳಗಿನ ಸೂಕ್ತಿಯ ಉದಾಹರಣೆಯನ್ನು ನೀಡಬಹುದು.

ಕನ್ಯಾ ವಾರವಾಯತೀ ಸೋಮಮಪಿ ಸ್ರುತಾವಿದತ್ ಅಸ್ತಮ್ ಭರಂತೀ ಅಬ್ರವೀತ್ ಇಂದ್ರಾಯ ಸುನವೈ ತ್ವಾ ಶಕ್ರಾಯ ಸುನವೈ ತ್ವಾ ।। (. ಸಂ. 8. 91. 1) [ನದಿಯಲ್ಲಿ ಸ್ನಾನಕ್ಕಾಗಿ ಹೋಗುತ್ತಿರುವಾಗ ಅಪಾಲಾ ಎಂಬ ಕನ್ಯೆಯು ಸೋಮಲತೆಯನ್ನು ಕಂಡಳು. ಹಿಂತಿರುಗಿ ಬರುತ್ತಾ ಸೋಮವನ್ನು ತರುವಾಗ, ಇಂದ್ರನಿಗೆ ಅರ್ಪಿಸಲು ಯೋಗ್ಯವಾಗುವಂತೆ, ನಿನ್ನನ್ನು ಹಲ್ಲಿನಿಂದ ಕಚ್ಚಿ ರಸವುಕ್ಕುವಂತೆ ಮಾಡುತ್ತೇನೆ ಎಂದಳು.]

ಮುಂಜವತ ಮತ್ತು ಶರಣ್ಯಾವತಗಳು ಬಿದಿರುಮೆಳೆಗಳ ಪ್ರದೇಶಗಳೆಂದು ಉಲ್ಲೇಖಗೊಂಡಿವೆ. ಮುಂಜವೆಂಬುದು ಒಂದು ಜಾತಿಯ ಬಿದಿರು. ಸೋಮವು ನದಿತೀರ ಮತ್ತು ಇತರ ನೀರು ನಿಂತ ಜವುಗು ಪ್ರದೇಶಗಳಲ್ಲಿ ಬೆಳೆಯುತ್ತಿತ್ತೆಂದೂ, ಒಂದು ಜಾತಿಯ ಬಿದಿರು ಒಂದು ಸೋಮ ಸಸ್ಯ ಆಗಿರಬಹುದೆಂದೂ ಫ್ರಾಲಿಯವರು ಊಹಿಸಿದ್ದಾರೆ.

ಇನ್ನೂ ಕೆಲವು ವಿದ್ವಾಂಸರು (Vedic Harappansಭಗವಾನ್ ಸಿಂಗ್) ಸೋಮವು ಕಬ್ಬು ಇರಬಹುದು ಎಂದು ಊಹಿಸಿದ್ದಾರೆ. ಕಬ್ಬಿನ ರಸವನ್ನು ಕೆಲವು ಸೋಮದ ರಾಸಾಯನಗಳಲ್ಲಿ ಉಪಯೋಗಿಸಿದ ಪ್ರಸ್ತಾವಗಳಿವೆ, ಆದರೂ ಅದೇ ಮುಖ್ಯವಾದ ಧಾತುವಾಗಿರಲಾರದು ಎನ್ನುತ್ತಾರೆ, ಫ್ರಾಲಿಯವರು.

ಅಥರ್ವವೇದವು ಐದು ಮುಖ್ಯ ಸಸ್ಯಗಳನ್ನು ಹೆಸರಿಸುತ್ತ, ಅವುಗಳಲ್ಲಿ ಸೋಮವು ಅತ್ಯಂತ ಮಹತ್ವವಾದುದು, ಎನ್ನುತ್ತದೆ. (. ವೇ. 11.6.15) ಮಿಕ್ಕ ನಾಲ್ಕು ದರ್ಭೆ, ಭಾಂಗ, ಯವ (ಬಾರ್ಲಿ,) ಸಹಸ (ಯಾವ ಸಸ್ಯ ಎಂದು ನಿರ್ಣಯಿಸಲಾಗಿಲ್ಲ.) ಅಥರ್ವವೇದವು (. ವೇ. 19.39.5-6) ಕುಷ್ಠ ಎಂಬ ಮೂಲಿಕೆಯನ್ನೂ ಅಶ್ವತ್ಥ ವೃಕ್ಷವನ್ನೂ, ಸೋಮದೊಡನೆ ಜೋಡಿಸಿ ಹೆಸರಿಸುತ್ತದೆ.

ಹೀಗೆ ಎಷ್ಟೋ ವಿಧವಾದ ಗಿಡ, ಮರ, ಮೂಲಿಕೆಗಳು ಸೋಮದೊಡನೆ ಅಥವಾ ಸೋಮವೇ ಎಂದು ವೇದ, ಸುಶ್ರುತ ಸಂಹಿತೆ ಮತ್ತು ಬ್ರಾಹ್ಮಣಗಳಲ್ಲಿ ಹೆಸರಿಸಲಾಗಿವೆ.

ಆಧುನಿಕ ಸಾಹಿತ್ಯದಲ್ಲಿ ಸೋಮ

ಫ್ರಾಲಿಯವರು ಬಾಹ್ಯದೃಷ್ಟಿಯಿಂದ ಸೋಮವನ್ನು ಆಧುನಿಕ ಚಿಂತಕರು ಹೇಗೆ ನೋಡಿದ್ದಾರೆ ಎಂಬುದನ್ನು ವಿಶ್ಲೇಷಿಸುತ್ತಾ, ಪ್ರಸಿದ್ಧ ಸಾಹಿತಿ, ತತ್ವಜ್ಞಾನಿ, ಮತ್ತು ಚಿಂತಕರಾದ ಡಾ. ಆಲ್ಡಸ್ಸ್ ಹಕ್ಸ್ಲಿ (Dr. Aldous Huxley) ಯವರ ದಿ ಬ್ರೇವ್ ನ್ಯೂ ವರ್ಲ್ದ್ (The Brave New World) ಕಾದಂಬರಿಯ ಉದಾಹರಣೆ ನೀಡುತ್ತಾರೆ. ಕೃತಿಯಲ್ಲಿ ಸೋಮವೆಂಬ ಔಷಧಿಯನ್ನು ಹೊಸ ಪ್ರಪಂಚದ ಜನಗಳಿಗೆ ಕೊಡುತ್ತಾರೆ. ಇದನ್ನು ಸೇವಿಸಿದ ಜನಗಳಿಗೆ ದುಃಖ, ಬೇನೆ, ದ್ವೇಷ ಇತ್ಯಾದಿಗಳೆಲ್ಲ ಕಾಡಿಸುವುದಿಲ್ಲ; ಅವರು ಸದಾ ಸುಖಿಗಳು. ಆದರೆ, ಆಳರಸರು ಇದನ್ನು ಜನರ ಮನಸ್ಸುಬುದ್ಧಿಗಳನ್ನು ನಿಯಂತ್ರಿಸುವ ಒಂದು ವಿಧಾನವನ್ನಾಗಿ ಉಪಯೋಗಿಸುತ್ತಾರೆ. ಉದಾಹರಣೆಯ ಮೂಲಕ ಫ್ರಾಲಿಯವರು ಸಿದ್ಧಪಡಿಸುವುದೇನೆಂದರೆ, ಸೋಮವು ಯಾವುದೋ ರಾಸಾಯನಿಕ ವಸ್ತುವಲ್ಲ; ನಮ್ಮ ಮನಸ್ಸುಬುದ್ಧಿಗಳನ್ನು ನಿಯಂತ್ರಿಸುವ ಒಂದು ಮಾದಕ ಪದಾರ್ಥವಲ್ಲ. ಸೋಮವು ನಮ್ಮ ಮನಸ್ಸು ಬುದ್ಧಿಗಳಿಗೆ ಮುಕ್ತವಾಗಿ ಕೆಲಸಮಾಡಲು ನೆರವಾಗುವ ಸಾಧನ. ಭೌತಿಕ ಸ್ತರದಲ್ಲಿ ಮಾತ್ರವಲ್ಲ, ಮಾನಸಿಕ, ಬೌದ್ಧಿಕ, ಮತ್ತು ಪಾರಮಾರ್ಥಿಕ ಸ್ತರಗಳಲ್ಲಿ ಕೂಡ ಮಾನವನ ಅಮರತ್ವದ ಶೋಧನೆಯಲ್ಲಿ ಸೋಮನು ಒತ್ತಾಸೆ ನೀಡುವ ದೇವತೆ. ಸೋಮವು ನಮ್ಮ ಸಾಧನೆಗೆ ಬೇಕಾದ ಯಾವುದೇ ಉಪಕರಣವಾಗಬಹುದು: ಆಹಾರ, ಪಾನೀಯಗಳಾಗಲಿ, ಸಂಗೀತ, ಸಾಹಿತ್ಯ, ಶಿಲ್ಪಕಲೆಗಳಾಗಲಿ, ಧ್ಯಾನ, ಪ್ರಾಣಾಯಾಮಗಳಾಗಲಿ, ಎಲ್ಲವೂ ಸೋಮನ ಸ್ವರೂಪವೇ.

ಅಮೃತತ್ವ ಎಂದರೇನು?

ಡಾ. ಫ್ರಾಲಿಯವರ ಅಭಿಪ್ರಾಯದಲ್ಲಿ ಅಮೃತತ್ವವೆಂದರೆ, ದೇಹವು ಸದಾಕಾಲಕ್ಕೂ ಇರುತ್ತದೆ ಎಂದಲ್ಲ. ಹುಟ್ಟಿದ ಪ್ರತಿ ಜೀವಿಯೂ ಸಾಯುವುದು ಖಂಡಿತ. ಹಾಗಾದರೆ, ಅಮೃತತ್ವ ಎಂದರೇನು? ನಮ್ಮ ದೇಹ ಮನಸ್ಸುಗಳನ್ನು ದೀರ್ಘಕಾಲ ಆರೋಗ್ಯವಾಗಿ ಇಟ್ಟುಕೊಳ್ಳಲು ಶ್ರಮಿಸುವುದು ಅಮೃತತ್ವವೇ? ಮಾತು ಸ್ವಲ್ಪ ಮಟ್ಟಿಗೆ ನಿಜ, ಸಂಪೂರ್ಣವಾಗಿ ಅಲ್ಲ. ನಮ್ಮ ಯೋಗ ಪರಂಪರೆಯಲ್ಲಿ ದೀರ್ಘಾಯುಷ್ಯವನ್ನು, ಆರೋಗ್ಯವನ್ನು ಸಾಧಿಸಿದವರನ್ನು ನೋಡಿದ್ದೇವೆ. ಶಾಸ್ತ್ರೀಯ ತಂತ್ರಯೋಗವು ಕುಂಡಲಿನಿಯಂತಹ ರಹಸ್ಯಗಳನ್ನು ಭೇದಿಸಿ, ಸಾತ್ವಿಕ ಆಹಾರ, ಯೋಗ, ಪ್ರಾಣಾಯಾಮ, ಮಂತ್ರಯಂತ್ರ ಸಾಧನೆಗಳ ಮೂಲಕ ದೇಹ, ಮನಸ್ಸು, ಬುದ್ಧಿಗಳ ದೀರ್ಘಾಯುಸ್ಸನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದೆ.

ಆದರೆ, ಅಮೃತತ್ವವು ಇಷ್ಟು ಸೀಮಿತವಾದ ಗ್ರಹಿಕೆಯಲ್ಲ. ಅಮೃತತ್ವವು ಜನ್ಮಜನ್ಮಾಂತರಗಳಿಗೆ ಮೀರಿದ ಪರಿಕಲ್ಪನೆ. ಮೃತ್ಯುವು ಒಂದು ತೆರೆಯಂತೆ ಸತ್ಯವನ್ನು ಮರೆಮಾಚುವ ಮಾಯೆ. ಯೋಗವು ಮೃತ್ಯುವಿನಿಂದ ಅಮೃತತ್ವದೆಡೆಗಿನ ಆಧ್ಯಾತ್ಮಿಕ ಪರ್ಯಟನ. ಕಠೋಪನಿಷತ್ತು ಮೃತ್ಯುವನ್ನು ಗುರುವೆಂದು ಗೌರವಿಸುತ್ತದೆ. ದಕ್ಷಿಣಾಮೂರ್ತಿಯಾದ ಶಿವನು ವಿರಕ್ತಿಯನ್ನು ಬೋಧಿಸುವ ಗುರು. ಇವನೇ, ಮೃತ್ಯುವಿನ ಪ್ರತೀಕವಾದ ಮಹಾಕಾಲ. ಶಿವನು ಸೋಮಸ್ವರೂಪಿ.

ಸೋಮನ ದೇವತಾ ಸ್ವರೂಪ

ಸೋಮನು ಆನಂದಸ್ವರೂಪಿ; ನಮ್ಮ ಆಜೀವನ ಆನಂದದ ಅನ್ವೇಷಣೆಯ ಪ್ರತೀಕ. ಇಲ್ಲಿ ಆನಂದವು ಅಮೃತತ್ವದ ಪರಿಭಾಷೆ. ಆನಂದದಂತೆಯೇ, ಸೋಮನು ಕೂಡ ಸುಲಭಸಾಧ್ಯನಲ್ಲ. ನಾವು ನಮ್ಮೊಳಗಿನ ಆಳವನ್ನು ಜಾಗರೂಕತೆಯಿಂದ ಹುಡುಕಿದರೆ ಮಾತ್ರ ಸೋಮನ ಸಾಕ್ಷಾತ್ಕಾರ ನಮಗೆ ಸಾಧ್ಯ.

ಸೋಮನೆಂದರೆ, ರಸ. ರಸವೆಂದರೆ, ಯಾವುದೋ ದ್ರವ ಮಾತ್ರವಲ್ಲ, ಅದು ವಸ್ತುವಿನ ತಿರುಳು, ಸತ್ತ್ವ; ಸೌಂದರ್ಯದ, ಆನಂದದ ಸಾರ. ರಸವನ್ನು ತೆಗೆಯಲು ಕೃಷಿ ಮತ್ತು ಸಾಧನೆಗಳು ಬೇಕು. ಸೋಮರಸವನ್ನು ಲತೆಯಿಂದ ತೆಗೆಯುವ ಹಾಗೆ, ನಮ್ಮ ಒಳಗಿನ ಆನಂದವನ್ನು ತೆಗೆಯಲು ಕೂಡ ಸಾಧನೆಯ ಅಗತ್ಯ ಇದೆ.

ಚಂದ್ರ ಮತ್ತು ವರುಣ

ಋಗ್ವೇದದಲ್ಲಿ ವರುಣನು ಸಮುದ್ರಗಳ ಅಧಿದೇವತೆಯಾದರೆ, ಸೋಮನು ಹರಿಯುವ ನೀರಿನ ದೇವತೆ. ಇಂದ್ರ ಮತ್ತು ಅಗ್ನಿಯ ನಂತರ, ಸೋಮನನ್ನು ಆರಾಧಿಸುವ ಸ್ತುತಿಗಳೇ ಹೆಚ್ಚು. ಹಿಂದಿನ ಲೇಖನದಲ್ಲಿ ಹೇಳಿರುವಂತೆ, ಚಂದ್ರನನ್ನೇ ಎಷ್ಟೋ ಬಾರಿ ಸೋಮನೆಂದು ಕರೆದಿದ್ದಾರೆ. ಚಂದ್ರನಿಗೂ ಸಾಗರಕ್ಕೂ ಇರುವ ಸಂಬಂಧವು ತಿಳಿದೇ ಇದೆ. ಸೋಮನು ನದಿಗಳ ರಾಜ, ಎಂದರೆ, ಸಾಗರ.

ಏಷ ರುಕ್ಮಿಭಿರೀಯತೇ ವಾಜೀ ಶುಭ್ರೆರೀರಂಶುಭಿಃ ಪತಿಃ ಸಿಂಧೂನಾಂ ಭವನ್ (. ಸಂ. 9. 15. 5) [ಬೆಳ್ಳಗಿರುವ ಹನಿಗಳಿಂದ ಶೋಭಾಯಮಾನನಾಗಿ ಹರಿಯುವ ರಸಗಳಿಗೆಲ್ಲ ಅಧಿಪತಿಯಾದವನು], ಎಂದರೆ, ಸೋಮನೇ ವರುಣನಂತೆ, ಸಾಗರದ ಅಧಿಪತಿ. ಇದೇ ಅರ್ಥ ಬರುವ ಬೇರೆ ಸೂಕ್ತಗಳು ಕೂಡ ಋಗ್ವೇದದಲ್ಲಿ ಇವೆ.

ರಾಜಾ ಸಮುದ್ರಂ ನದ್ಯೋವಿ ಗಾಹತೇ ಪಾಮೋರ್ಮಿಮ್ ಸಚತೇ ಸಿಂಧುಷು ಶ್ರಿತಃ ಅಧ್ಯ ಸ್ಥಾ ತ್ಸಾನು ಪವಮಾನೋ ಅವ್ಯಯಂ ನಾಭಾ ಪೃಥಿವ್ಯಾ ಧರುಣೋ ಮಹೋ ದಿವಃ ।। (. ಸಂ. 9. 86. 8) [ಸೋಮರಾಜನು ನದಿಗಳನ್ನೂ ಸಮುದ್ರವನ್ನೂ ಪ್ರವೇಶಿಸಿ, ನೀರಿನ ತರಂಗವನ್ನು ಸೇರುತ್ತಾನೆ; ಸಿಂಧುವಿನಲ್ಲಿ ಆಶ್ರಯ ಪಡೆಯುತ್ತಾನೆ.] ಡಾ. ಫ್ರಾಲಿಯವರು ಹೇಳುವಂತೆ, ಋಗ್ವೇದದ ಕಾಲದಲ್ಲಿ ಸಮುದ್ರಯಾನದಲ್ಲಿ ಪರಿಣಿತಿ ಇದ್ದುದರ ಪ್ರಮಾಣ ಸೂಕ್ತಿಗಳಿಂದ ದೊರಕುತ್ತದೆ.

ಸಮುದ್ರದ ವಾತಾವರಣ ಮತ್ತು ಅಲೆಗಳ ಮೇಲೆ ಚಂದ್ರನ ಪ್ರಭಾವದ ಬಗ್ಗೆ ಕೂಡ ಋಗ್ವೇದದಲ್ಲಿ ಉಲ್ಲೇಖಗಳಿವೆ. ಸೋಮನು ವಾಯುವಿನ ಮೂಲಕ ಸಮುದ್ರದ ಅಲೆಗಳನ್ನು ಉಂಟು ಮಾಡುತ್ತಾನೆ. (. ಸಂ. 9. 84. 4) ಸೋಮನಿಂದಲೇ ಸೃಷ್ಟಿ, ಸೋಮನಿಂದಲೇ ಸ್ಥಿತಿ, ಸೋಮನೇ ಚೈತನ್ಯ ಸ್ವರೂಪನು.

ಅಗ್ನಿ ಮತ್ತು ಸೋಮ

ಸೋಮನು ಜಲಸ್ವರೂಪವುಳ್ಳವನಾಗಿದ್ದು, ಋಗ್ವೇದದಲ್ಲಿ ಅವನನ್ನು ಸಮುದ್ರ, ಸಿಂಧು, ನದಿ, ಧಾರೆ, ಸರಸ್ಸು (ಸರೋವರ,) ವೃಷ್ಟಿ, ಊರ್ಮಿ (ಅಲೆ,) ಮತ್ತು ಪವಮಾನ (ಸೃತಿ), ಇತ್ಯಾದಿ ವಿವಿಧ ರೀತಿಯಲ್ಲಿ ಕರೆಯುತ್ತಾರೆ. ಸೋಮನನ್ನು ಆಪ (ನೀರು,) ರಸ, ಪಾಯಸ, ಮಧು, ತುಪ್ಪ, ಅಮೃತವೆಂದೂ ಕರೆಯುತ್ತಾರೆ. ಅಷ್ಟೇ ಎಲ್ಲ, ಸೋಮನು ಜ್ಯೋತಿ ಕೂಡ ಹೌದು.

ಜಗತ್ತು ದ್ವಂದ್ವದಿಂದ ಕೂಡಿದೆ. ಒಂದು ಧ್ರುವ ಇದ್ದೆಡೆ, ಅದಕ್ಕೆ ವಿರುದ್ಧವಾದ ಧ್ರುವ ಇರಲೇ ಬೇಕು. ಅದೇ ರೀತಿ, ಪೋಷಕವಾದ ಶಕ್ತಿಗಳೂ ಇರಲೇ ಬೇಕುಶಿವನಿದ್ದೆಡೆ, ಶಕ್ತಿ ಇರಲೇ ಬೇಕು. ಹೀಗೆ, ನೀರು ಇರುವಾಗ ಬೆಂಕಿ ಇರದೇ ಹೇಗೆ? ವೇದದಲ್ಲಿ ಅಗ್ನಿ ಮತ್ತು ಸೋಮ ಜಗತ್ತಿನ ಶಕ್ತಿಯ ಧ್ರುವಗಳ ಪ್ರತೀಕಗಳು.

ಅಗ್ನಿಯು ಉಷ್ಣದ, ಬೆಂಕಿಯ, ರೂಪಾಂತರದ ಪ್ರತೀಕ. ಸೋಮನು ಉಕ್ಕುವ ಶಕ್ತಿಯ, ಸಮೃದ್ಧತೆಯ, ಶೀತಲತೆಯ ಪ್ರತೀಕ. ಇವರಿಬ್ಬರೂ ಇಡೀ ಜಗತ್ತನ್ನು ವ್ಯಾಪಿಸಿ, ಪ್ರಕೃತಿಯ ದ್ವೈತಭಾವವನ್ನು ಅಭಿವ್ಯಕ್ತಿಗೊಳಿಸುತ್ತಾರೆ. ಅಗ್ನಿಯು ಸೂರ್ಯನಾದರೆ, ಸೋಮನು ಚಂದ್ರನು. ಅಗ್ನಿಯ ಶಕ್ತಿಯು ರಭಸದಿಂದ ಮೇಲೆದ್ದರೆ, ಸೋಮವು ಕೆಳಮುಖವಾಗಿ ಇಳಿಯುತ್ತದೆ.

ಅಗ್ನಿಯು ಆಂದೋಲನ, ಗ್ರಹಣ ಶಕ್ತಿ, ಉದ್ಯಮ. ಸೋಮವು ಪುಷ್ಟಿ, ಉಲ್ಲಾಸ, ಪುನರುಜೀವನ. ನಮ್ಮ ದೇಹದಲ್ಲಿ, ಜಠರಾಗ್ನಿಯು ಜೀರ್ಣಶಕ್ತಿಯನ್ನು ನೀಡುತ್ತದೆ. ಆಯುರ್ವೇದದಲ್ಲಿ ಹೇಳಿರುವ ಪ್ರಕಾರ, ಸೋಮವು ದೇಹದಲ್ಲಿ ರಸ, ರಕ್ತ, ಮಾಂಸ, ಮೇಧಸ್ಸು, ಅಸ್ಥಿ, ಮಜ್ಜ, ಮತ್ತು ಶುಕ್ರ ಎಂಬ ಏಳು ವಿಧವಾದ ಜೀವಕೋಶಗಳನ್ನು ಪುಷ್ಟಿಮಾಡುತ್ತದೆ. ನಮ್ಮ ದೇಹ, ಮನಸ್ಸು ಬುದ್ಧಿಗಳು ಆರೋಗ್ಯವಾಗಿರಬೇಕೆಂದರೆ, ಅಗ್ನಿ ಮತ್ತು ಸೋಮವು ಸಮತೋಲನದಲ್ಲಿ ಇರಬೇಕು.

ಇನ್ನೊಂದು ರೀತಿಯಲ್ಲಿ ವಿಶ್ಲೇಷಿಸಿದರೆ, ಅಗ್ನಿಯು ದೇಹವನ್ನು ನಿಯಂತ್ರಿಸುವಂತೆ, ಸೋಮವು ಮನಸ್ಸನ್ನು ನಿಯಂತ್ರಿಸುತ್ತದೆ. ಪುರುಷ ಸೂಕ್ತದಲ್ಲಿ ಹೇಳುವಹಾಗೆ, ಚಂದ್ರನು (ಸೋಮನು) ವಿರಾಟ್ ಪುರುಷನ ಮನಸ್ಸಿನಿಂದ ಹುಟ್ಟಿದವನು. ಚಂದ್ರನು ಚಿಂತನಾಶೀಲನು; ಮನಸ್ಸನ್ನು ಶಾಂತವಾಗಿ, ಸಮವಾಗಿ ಇಟ್ಟು ಚಿತ್ತಸ್ವಾಸ್ಥ್ಯವನ್ನು ಸಾಧಿಸಲು ಸಹಾಯ ಮಾಡುತ್ತಾನೆ.

ಸೋಮ ಮತ್ತು ಕಲಶ ಪೂಜೆ

ನಮ್ಮ ಪೂಜೆ ಪುನಸ್ಕಾರಗಳಲ್ಲಿ ಬರುವ ಕಲಶ ಕೂಡ ಸೋಮನ ಸಂಕೇತವೇ. ಸೋಮನು ನೀರಿನ ಅಥವಾ ಅಮೃತದ ಬಿಂದಿಗೆ. ಸೋಮ ಅಥವಾ ಪವಮಾನ ಸೂಕ್ತಗಳ ಅರ್ಥ ಕೂಡ ಇದೇ. ಪವಮಾನವೆಂದರೆ, ಶುದ್ಧಿ ಮಾಡುವ ಹೊಳೆ. ಅರ್ಥದಲ್ಲಿ, ಅಭಿಷೇಕ, ತೀರ್ಥ ಸ್ನಾನ, ಇತ್ಯಾದಿಗಳು ಕೂಡ ಸೋಮ ಸಂಸ್ಕಾರಗಳೇ.

ರುದ್ರ ಮತ್ತು ಸೋಮಗಾಯತ್ರಿ

ಋಗ್ವೇದದಲ್ಲಿ ರುದ್ರನನ್ನು ಭವರೋಗದ ವೈದ್ಯನೆನ್ನುತ್ತಾರೆ. ಶಿವನ ಶಕ್ತಿಯು ಸೋಮ ಮತ್ತು ಅಗ್ನಿಯರಿಂದ ಬಂದುದು. ಸೋಮನು ಉಪಶಮನ ನೀಡಿ, ಪುನರುಜ್ಜೀವನಗೊಳಿಸುವ ಶಕ್ತಿ. ಅಗ್ನಿಯು ಶುದ್ಧಿಗೊಳಿಸುವ ಶಕ್ತಿ. ಶಿವನು ಮೃತ್ಯುಂಜಯನು, ಸೋಮೇಶ್ವರನು.

ಸೋಮಗಾಯತ್ರಿ ಮಂತ್ರವನ್ನು ವ್ಯಾಧಿ, ಬೇನೆಗಳಿಂದ ಗುಣಪಡಿಸುವ ವಿಶೇಷ ಆಹಾರ, ಮೂಲಿಕೆಗಳನ್ನು ಸೇವಿಸಿ, ಜಪ ಮಾಡುತ್ತಾರೆ. (ಸೋಮಗಾಯತ್ರಿಯು ಋಗ್ವೇದದಲ್ಲಿಲ್ಲ; ನಂತರದ ತಾಂತ್ರಿಕ ಕೃತಿಗಳಲ್ಲಿ ಇದು ಉಲ್ಲೇಖವಾಗಿದೆ.)

ಸೋಮ, ಯೋಗ, ಮತ್ತು ತಂತ್ರ

ಉಪನಿಷತ್ತು ಆತ್ಮನನ್ನು ರಸ ಅಥವಾ ಸಾರವೆಂದು ಬಣ್ಣಿಸಿ, ಬ್ರಹ್ಮಾಂಡದ ಒಂದು ಅಣುವಾಗಿ ಪರಿಗಣಿಸುತ್ತದೆ. ಎಂದರೆ, ನಮ್ಮ ಅಂತರಾತ್ಮವು ದೇಹವಲ್ಲ, ಆಕಾರವಲ್ಲ, ಯಾವುದೋ ಉಪಕರಣವಲ್ಲ; ಬ್ರಹ್ಮಾಂಡದ ತಿರುಳಿನ ಅಣು. ಯೋಗಿಯು ಸತ್ಯವನ್ನು ಅನುಭವಿಸಲು, ಮಂತ್ರೋಚ್ಚಾರಣೆ, ಸಂಗೀತ, ದರ್ಶನ, ಅಥವಾ ಇತರ ಉಪಕರಣಗಳನ್ನು ಬಳಸುತ್ತಾನೆ. ತನ್ನ ಜ್ಞಾನೇಂದ್ರಿಯಗಳನ್ನೂ, ಪಂಚೋಪಕರಣಗಳನ್ನೂ ತನ್ನ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು, ಕರ್ಮಸಿದ್ಧಿಗಾಗಿ ಬಳಸುತ್ತಾನೆ. ಚಿಂತನೆಯ ಮೂಲಕ ಆತ್ಮನು ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳಿಗೆ ಮಿಗಿಲಾದ ವಸ್ತು ಎಂಬ ಅನುಭವ ಅವನಿಗೆ ಸಿದ್ಧಿಸುತ್ತದೆ.

ತಾಂತ್ರಿಕ ಯೋಗವು ಜೀವನದಿಂದ ಆನಂದದ, ಪ್ರಜ್ಞೆಯ ತಿರುಳನ್ನು ಹೀರಿ ಅನುಭವಿಸುವ ವಿಜ್ಞಾನ. ಯಾವುದೇ ಕಲೆಯ ಅನುಭವವು ಆನಂದದ ಅನುಭವಕ್ಕೆ ಎಡೆಮಾಡಿಕೊಡುತ್ತದೆ. ಹೀಗೆ, ಸೋಮವು ಶಿವಶಕ್ತಿ ಯೋಗದ ಬ್ರಹ್ಮಾನಂದದ ರಸಾನುಭವದ, ಸೃಷ್ಟಿಯ ಆನಂದದ ಪ್ರತೀಕ.

ಇದಕ್ಕೂ ಮೇಲಾಗಿ, ಫ್ರಾಲಿಯವರು ಹೇಳುವಂತೆ, ಸೋಮವೆಂಬ ದೈವೀ ಸಸ್ಯ ನಮ್ಮೊಳಗೇ ಇದೆ. ನಮ್ಮ ದೇಹದ ನರಗಳು ಕೂಡ ಒಂದು ವೃಕ್ಷವನ್ನೇ ಹೋಲುತ್ತಿದ್ದು ನೂರಾರು ರೆಂಬೆಗಳನ್ನು ಹೊಂದಿವೆ. ವೇದದಲ್ಲಿ ಬೆನ್ನೆಲುಬು ಒಂದು ಬಿದಿರಿನ ಮಾದರಿಯಲ್ಲಿ ವರ್ಣಿಸುತ್ತಾರೆ. ವೃಕ್ಷದ ಸೂಕ್ಷ್ಮರೂಪವು ಜೀವನಾಡಿ, ಮತ್ತು ಶಕ್ತಿಕೇಂದ್ರಗಳಾದ ಚಕ್ರಗಳನ್ನು ಒಳಗೊಂಡಿದೆ. ಚಕ್ರಗಳನ್ನು ಕಮಲಗಳ ಸಂಕೇತದಿಂದ ನಿರೂಪಿಸಲಾಗಿದೆ.

ನಮ್ಮ ಜೀವನದ ಪ್ರಕ್ರಿಯೆಗಳೆಲ್ಲವೂ ವಿವಿಧ ರೀತಿಯ ಸೋಮವನ್ನು ನೀಡುತ್ತವೆ, ಅರ್ಥಾತ್, ಸಂತೋಷವನ್ನೂ ಚೈತನ್ಯವನ್ನೂ ನೀಡುತ್ತವೆ. ಆಹಾರಸೇವನೆ, ಉಸಿರಾಟ, ವಿವಿಧ ಅನುಭೂತಿಗಳು, ಭಾವನೆಗಳು, ಚಿಂತನೆಗಳು, ಇವೆಲ್ಲವೂ ನಮ್ಮೊಳಗಿನ ಸೋಮವನ್ನು ಪ್ರಚೋದಿಸುವ ಪ್ರಕ್ರಿಯೆಗಳು. ನಮ್ಮ ಪ್ರಜ್ಞೆಯ ಸ್ತರವು ಹೆಚ್ಚಿದಂತೆ, ನಮ್ಮ ಆನಂದದ ಸಂವೇದನಾಶೀಲತೆ ಕೂಡ ಹೆಚ್ಚುತ್ತದೆ. ಜೀವನವೇ ಸೋಮದ ಅನುಭವ; ನಮ್ಮ ಆನಂದದ ಅನುಭವವು ನಮ್ಮ ಜೀವನದ ಪ್ರತಿ ಕ್ರಿಯೆಯಲ್ಲೂ ವ್ಯಕ್ತವಾಗಬೇಕು. ಇದೇ ಮಾತನ್ನು ಶಂಕರಾಚಾರ್ಯರು ತಮ್ಮ ಶಿವ ಮಾನಸ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ: ‘ಪೂಜಾ ತೇ ವಿಷಯೋಪಭೋಗ ರಚನಾ, ನಿದ್ರಾ ಸಮಾಧಿಸ್ಥಿತಿಃ; ಸಂಚಾರಃ ಪದಯೋಃ ಪ್ರದಕ್ಷಿಣ ವಿಧಿಃ ಸ್ತೋತ್ರಾಣಿ ಸರ್ವಾಗಿರೌ, ಯದ್ಯದ್ ಕರ್ಮ ಕರೋಮಿ ತದ್ತದಖಿಲಂ ಶಂಭೋ ತವಾರಾಧನಂ.’ [ನಾನು ನಿದ್ರಿಸುವಾಗ ಸಮಾಧಿಸ್ಥಿತಿಯನ್ನು ಸೇರಿದಂತೆ. ನಡೆದರೆ, ನಿನ್ನನ್ನು ಪ್ರದಕ್ಷಿಣೆ ಮಾಡಿದಂತೆ. ನಾನು ಯಾವ ಕ್ರಿಯೆಯನ್ನು ಸಂತೋಷದಿಂದ ಮಾಡಿದರೂ, ನಿನ್ನನ್ನು ಅರ್ಚಿಸಿದಂತೆ.]

ಯೋಗಿಗಳು ಸತ್ಚಿತ್ಆನಂದ ಎನ್ನುವ ಪ್ರಜ್ಞಾಪೂರ್ವಕ ಆನಂದವನ್ನು ಹೊಂದಲು, ನಮ್ಮ ಆಂತರಿಕ ಸೋಮದ ಅನ್ವೇಷಣೆಯಲ್ಲಿ ನಾವು ಮಗ್ನರಾಗಬೇಕು. ಫ್ರಾಲಿಯವರು ಹೇಳುವಂತೆ ಆನಂದದ ಅನ್ವೇಷಣೆ ಎನ್ನುವುದು ಯೋಗ. ಬಹಿರಂಗ ಪ್ರಕ್ರಿಯೆಗಳು ಭೋಗ. ಅತಿ ಭೋಗವು ರೋಗಕ್ಕೆ ಎಡೆಮಾಡುತ್ತದೆ. ಯೋಗಸಾಧನೆಗಾಗಿ ಭೋಗವನ್ನು ನಿಯಂತ್ರಿಸುವುದು ಅಗತ್ಯ.

ನಮ್ಮ ಆಂತರಿಕ ಸೋಮನ ಸಾಕ್ಷಾತ್ಕಾರವೆಂದರೆ, ಆತ್ಮ ಸಾಕ್ಷಾತ್ಕಾರ. ಎಂದರೆ, ನಮ್ಮ ಆತ್ಮವೆಂಬುದು ಅನಂತದಲ್ಲಿ ತಲ್ಲೀನವಾದ ಅನುಭೂತಿ.

ಸೋಮ ಮತ್ತು ಕುಂಡಲಿನಿ

ಕುಂಡಲಿನಿ ಎಂದರೆ ಮಹಾ ಪವಿತ್ರವಾದ ಆಧ್ಯಾತ್ಮಿಕ ಶಕ್ತಿ; ನಮ್ಮೊಳಗೆ ಇರುವ ಗುಹ್ಯತಮವಾದ ಶಕ್ತಿ. ಸಾಧಕನು ಮೂಲಾಧಾರದಿಂದ ಸಹಸ್ರಾರದ ಕಡೆಗೆ ತನ್ನ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತ ಹೋದಂತೆ, ಹೆಚ್ಚಿನ ಸಿದ್ಧಿಗಳನ್ನು ಪಡೆಯುತ್ತಾನೆ. ಕೆಳಗಿನ ಪಟ್ಟಿಯಲ್ಲಿ ಪ್ರತಿ ಚಕ್ರದ ಸ್ಥಾನ ಮತ್ತು ಅದಕ್ಕೆ ಸಂಬಂಧಪಟ್ಟ ಬೇಕಾದ ಸೋಮದ ಸ್ವರೂಪ ಮತ್ತು ಸಿದ್ಧಿಗಳ ಅಭಿವ್ಯಕ್ತಿಯನ್ನು ಕೊಟ್ಟಿದೆ. ಕುಂಡಲಿನಿ ಸಿದ್ಧಿಗೆ, ಎಂದರೆ, ಸೋಮನ ಸಾಕ್ಷಾತ್ಕಾರಕ್ಕೆ ಕೆಲವು ಆಸನ, ಪ್ರಾಣಾಯಾಮ, ಯೋಗಕ್ರಿಯೆ ಇತ್ಯಾದಿ ಭೌತಿಕ ಮಟ್ಟದ ಸಾಧನೆ ಮಾತ್ರ ಸಾಲದು, ಇದಕ್ಕೆ ಮಾನಸಿಕ ಸಿದ್ಧತೆ, ಸಾಧನೆ ಕೂಡ ಅತ್ಯಗತ್ಯ.

ಯೋಗದ ಯಮ, ನಿಯಮ, ಪ್ರಾಣಾಯಾಮ, ಮಂತ್ರ, ಮತ್ತು ಧ್ಯಾನಗಳು ಸೋಮನನ್ನು ಶುದ್ಧಿ ಮಾಡುತ್ತಾ ಕುಂಡಲಿನಿಯ ಸಿದ್ಧಿಗೆ ಬುನಾದಿ ಹಾಕುತ್ತವೆ.

ಚಕ್ರ ಮತ್ತು ಅವುಗಳ ಸೋಮವನ್ನು ಸಾಧಿಸಲು, ಕುಂಡಲಿನಿಯನ್ನು ಉದ್ದೀಪನಗೊಳಿಸಲು, ಮೊದಲು ಸುಷುಮ್ನಾ ನಾಡಿಯನ್ನು ಶಕ್ತಿಯುತವನ್ನಾಗಿ ಮಾಡುವುದು ಮೊದಲ ಹೆಜ್ಜೆ. ಸುಷುಮ್ನಾ ಎಂದರೆ, ಆನಂದದಾಯಿ. ಸುಷುಮ್ನಾ ನಾಡಿಯು ವಿಕಸಿತವಾಗಬೇಕಾದರೆ, ಸಾಧಕನು ಕ್ರಮೇಣ, ಭಯ, ಕ್ರೋಧ, ಆಸೆ, ಬಂಧಗಳ ಗಂಟುಗಳನ್ನು ಕಳಚಿ ಅವನ್ನು ತ್ಯಜಿಸುತ್ತ ಮುಂದೆ ಹೋಗಬೇಕು.

ಕುಂಡಲಿನಿಯು ಉದ್ದೀಪನಗೊಂಡರೆ, ನಮ್ಮ ಪ್ರಜ್ಞೆಯನ್ನು ಪ್ರಚೋದಿಸಿ ಸೋಮದೆಡೆಗೆ, ಬ್ರಹ್ಮಾನಂದದೆಡೆಗೆ ಸಾಗಬಹುದು. ತಂತ್ರದ ಸಿದ್ಧಾಂತದ ಪ್ರಕಾರ, ನಮ್ಮ ಬೆನ್ನುಹುರಿಯ ತಳದ ಮೂಲಾಧಾರ ಚಕ್ರದಿಂದ ತಲೆಯ ಮೇಲಿನ ಸಹಸ್ರಾರ ಚಕ್ರದವರೆಗೂ ಸುಷುಮ್ನಾ ನಾಡಿಯ ಮೂಲಕ ಕೊಂಡೊಯ್ದ ಸಾಧಕನು ಶಿವಶಕ್ತಿಯರ ಸಂಯೋಗದಿಂದ ಸೋಮನ ಸಾಕ್ಷಾತ್ಕಾರ ಪಡೆಯುತ್ತಾನೆ.