close logo

ಋಗ್ವೇದದಲ್ಲಿ ಉಷೆ

ಉಷೆಯ ಹೆಸರೇ ಮನಸ್ಸಿಗೆ ಮುದ ಕೊಡುವಂತಹುದು. ಹೊಸ ಸೃಷ್ಟಿಯ ರೀತಿಯೇ ಅದು. ತಣ್ಣಗಿನ ಮುಂಜಾನೆಯ ಭಾವವೇ ಬೇರೆ, ಧಗಧಗಿಸುವ ನಡು ಮಧ್ಯಾಹ್ನದ ಭಾವವೇ ಬೇರೆ. ಬೆಳಗಿನ ಜಾವ ಹೊಸ ಪ್ರಯತ್ನ, ನಿಶ್ಚಯ, ಕನಸುಗಳ ಸಾಧನೆಯ ಶುಭಾರಂಭದ ಸಮಯ. ಬ್ರಾಹ್ಮೀ ಮುಹೂರ್ತದ, ಉಷಸ್ಸಿನ ಮಹತ್ವ ಅದೇ! ಉಷೆಯ ಉಲ್ಲೇಖ ಬಂದಾಗಲೆಲ್ಲ ಅರುಣೋದಯವು ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ.

ಉಷಸ್ಸು ಎಂಬ ಪದವು ಉಷಃ ಕಾಲವನ್ನೂ, ಉಷೆ ಅಥವಾ ಉಷೋದೇವಿ ಎಂಬ ದೇವತೆಯನ್ನೂ ಸೂಚಿಸುತ್ತದೆ. ಋಗ್ವೇದದಲ್ಲಿ ಉಷೋ ದೇವಿಯಷ್ಟು ರಮ್ಯ ಮನೋಹರ ರೂಪ ಬೇರೆ ಯಾವ ದೇವತೆಗೂ ಇಲ್ಲ. ಇಂತಹ ಸರಸ, ಸುರಸ ಸೊಗಸು, ಬೇರೆ ಯಾವ ಸಾಹಿತ್ಯದಲ್ಲೂ ಬರಲು ಸಾಧ್ಯವೇ ಎನ್ನುವಷ್ಟು ಸುಂದರವಾದ ಸೂಕ್ತಗಳು ಋಗ್ವೇದದಲ್ಲಿ ಉಷೆಯನ್ನು ವರ್ಣಿಸುತ್ತವೆ.

ಉಷಃಕಾಲದಲ್ಲಿ ಗಂಗೆ, ವಾರಾಣಸಿ

ಉದಾಹರಣೆಗೆ ಈ ಸೂಕ್ತವನ್ನು ನೋಡಿ-

ಸುಸಂಕಾಶಾ ಮಾತೃಮೃಷ್ಟೇವ ಯೋಷಾವಿಸ್ತನ್ವಮ್ ಕೃಣುಷೇ ದೃಶೇ ಕಂ
ಭದ್ರಾ ತ್ವಮುಷೋ ವಿತರಂ ವ್ಯುಚ್ಛ ತತ್ತೇ ಅನ್ಯಾ ಉಷಸೋ ನಶಂತ (ಋ. ಸಂ. 1.123.11)

ಇದರ ಭಾವಾರ್ಥ, ಉಷೋದೇವಿಯೇ, ತಾಯಿಯಿಂದ ಅಲಂಕೃತಳಾದ ಸ್ತ್ರೀಯಂತೆ ವಿಶೇಷವಾಗಿ ಲಾವಣ್ಯಯುತಳಾದ ನೀನು, ನಿನ್ನ ಮಂಗಳಕರವಾದ ಸ್ವರೂಪವು ಎಲ್ಲರಿಗೂ ಕಾಣಿಸುವಂತೆ ಮಾಡುತ್ತಾ, ಎಲ್ಲೆಲ್ಲೂ ಆವರಿಸಿರುವ ಅಂಧಕಾರವನ್ನು (ತಮಸ್ಸನ್ನು) ನಿವಾರಿಸು.

ಈ ಪದ್ಯದ ಕಾವ್ಯ-ಮಾಧುರ್ಯ, ಸೊಬಗು, ಚೆಲುವು-ವಾತ್ಸಲ್ಯಗಳ ಅನುಭೂತಿಯನ್ನು ಬೇರೆಲ್ಲಿ ಕಾಣಲು ಸಾಧ್ಯ?

ಋಗ್ವೇದದಲ್ಲಿ ಉಷೆಯನ್ನು ಹೊಗಳುವ ಇಪ್ಪತ್ತು ಸೂಕ್ತಗಳಿದ್ದು, ಉಷಸ್ ಎಂಬ ಪದವು ಮುನ್ನೂರಕ್ಕೂ ಹೆಚ್ಚು ಬಾರಿ ಉಲ್ಲೇಖಿತವಾಗಿದೆ. ಋಗ್ವೇದದಲ್ಲಿ ಉಷಸ್ಸನ್ನು ಸ್ತುತಿಸುವ ಸೂಕ್ತಗಳಿಗೆ ದೀರ್ಘತಮಸ್ ಎಂಬ ಋಷಿಯ ಮಗನಾದ ಕಕ್ಷೀವಾನ, ರಹೂಗಣನ ಮಗನಾದ ಗೋತಮ, ವಸಿಷ್ಠ, ಇತ್ಯಾದಿಗಳು ಋಷಿಗಳು.

ನಿರುಕ್ತದಲ್ಲಿ ಉಷೆ

ಉಷೋ ದೇವತೆಯು ಯಾರು? ಇವಳ ಸ್ವರೂಪವೇನು? ಇವಳಿಗೆ ಈ ಹೆಸರು ಬರಲು ಕಾರಣವೇನು? ಈ ಪ್ರಶ್ನೆಗಳಿಗೆ ಯಾಸ್ಕರು ಉತ್ತರ ನೀಡುತ್ತಾರೆ.

ಹೊರದೂಡು ಎಂಬ ಅರ್ಥವುಳ್ಳ ಉಚ್ಛೀ-ವಿವಾಸೇ ಎಂಬ ಧಾತುವಿನಿಂದ ಉಷಃ ಶಬ್ದದ ನಿರುಕ್ತಿ ಎನ್ನುವ ಯಾಸ್ಕರು, ಕತ್ತಲೆಯನ್ನು ಹೊರದೂಡಿ ಬೆಳಕನ್ನು ಪಸರಿಸುವ ದೇವತೆಗೆ ಉಷಾಃ ಎಂದು ಹೆಸರು, ಎಂದು ವಿಶ್ಲೇಷಿಸುತ್ತಾರೆ.  ರಾತ್ರಿಯ ಕಡೆಯ ಭಾಗವು ಮುಗಿದು ಸೂರ್ಯೋದಯವಾಗುವ ಮುಂಚಿನ ಕತ್ತಲೆ ಇನ್ನೇನು ಮುಗಿದು ಬೆಳಕು ಮೂಡುತ್ತಿರುವ ಕಾಲಕ್ಕೆ ಉಷಃಕಾಲವೆಂದು ಹೆಸರು, ಎಂದು ಅರ್ಥ ವಿವರಣೆ ಮಾಡುತ್ತಾರೆ. ಉಷಃಕಾಲದ ನಂತರ ಸೂರ್ಯೋದಯವಾಗುತ್ತದೆ. ಉಷಸ್ಸಿನಿಂದ ಸೂರ್ಯನು ಉತ್ಪನ್ನನಾಗುತ್ತಾನೆ. ಹೀಗೆ, ಉಷೆಯು ಸೂರ್ಯನ ತಾಯಿಯ ರೂಪ.

ಉಷೋದೇವಿಯ ಸ್ವರೂಪವನ್ನು ಋಷಿಗಳು ವಿಧವಿಧವಾಗಿ ವರ್ಣಿಸಿದ್ದಾರೆ. ಈ ವರ್ಣನೆಗೆ ಅನುಸಾರವಾಗಿ ಯಾಸ್ಕರು ಈ ಕೆಳಗಿನ ವಿಶೇಷಣಗಳನ್ನು ಹೀಗೆ ಅನ್ವಯಿಸಿದ್ದಾರೆ:

  1. ವಿಭಾವರೀ: ವಿಶಿಷ್ಟ ಪ್ರಕಾಶಯುಕ್ತಳಾದವಳು
  2. ಸೂನರೀ: ಸುಂದರವಾದವಳು
  3. ಭಾಸ್ವತಿ: ತೇಜಸ್ವತಿ, ಹೊಳೆಯುತ್ತಿರುವವಳು
  4. ಓದತಿ: ಹರಿಯುತ್ತಿರುವ, ಚಿಮ್ಮುತ್ತಿರುವ, ಪಸರಿಸುತ್ತಿರುವ, ಮಂಜಿನಿಂದ ಎಲ್ಲವನ್ನೂ ನೆನೆಸುತ್ತಿರುವವಳು
  5. ಚಿತ್ರಾಮಘಾ: ವಿಚಿತ್ರ ಧನಾ, ವಿವಿಧ ಅಥವಾ ಪ್ರಕಾಶಮಾನ ಐಶ್ವರ್ಯವುಳ್ಳ
  6. ಅರ್ಜುನೀ: ಶುಭ್ರವರ್ಣೆ, ಬೆಳ್ಳಗಿರುವವಳು
  7. ವಾಜಿನೀ (ವಾಜಿನೀವತಿ): ಅನ್ನಯುಕ್ತವಾದವಳು, ಅನ್ನವನ್ನು ತಂದು ಕೊಡುವವಳು
  8. ಸುಮ್ನಾವರೀ: ಸಂತೋಷವನ್ನು ಉಂಟುಮಾಡುವವಳು
  9. ಅಹನಾ: ಪ್ರಕಾಶಮಾನವಾದವಳು
  10. ಶ್ವೇತ್ಯಾ: ಶುಭ್ರವರ್ಣವುಳ್ಳವಳು
  11. ಅರುಷೀ: ರಕ್ತವರ್ಣೆ, ಕೆಂಪು ಛಾಯೆಯುಳ್ಳವಳು
  12. ಸೂನೃತಾ, ಸೂನೃತಾವರೀ, ಸೂನೃತಾವತೀ: ಪ್ರಿಯಸತ್ಯರೂಪಾ, ಪ್ರಿಯವಾದ ಮತ್ತು ಹಿತವಾದ ಮಾತನ್ನಾಡುವವಳು

ಈ ಶಬ್ದಗಳು ಸಾಧಾರಣವಾಗಿ ಉಷೆಗೇ ಅನ್ವಯಿಸಲ್ಪಟ್ಟರೂ ಕೆಲವು ಸಂದರ್ಭಗಳಲ್ಲಿ ಬೇರೆ ದೇವತೆಗಳಿಗೂ ಉಪಯೋಗಿಸಲ್ಪಡುತ್ತವೆ.

ಈ ಮೇಲಿನ ಪದಗಳ ಸೊಬಗು, ಶಕ್ತಿಗಳನ್ನು ಅನುಭವಿಸಿದಾಗ ಓದುಗರಿಗೆ ಉಲ್ಲಾಸ ಉಂಟಾಗುವುದರಲ್ಲಿ ಆಶ್ಚರ್ಯವೇನಿದೆ?

ಋಗ್ವೇದದಲ್ಲಿ ಉಷೆಯ ಸೌಂದರ್ಯದ ವರ್ಣನೆ

ಅನೇಕ ಋಕ್ಕುಗಳಲ್ಲಿ ಉಷೆಯ ಸೌಂದರ್ಯವನ್ನು ವಿವಿಧವಾಗಿ ವರ್ಣಿಸುತ್ತಾರೆ.

ಅತುಲವಾದ ಸೌಂದರ್ಯದಿಂದ ಬೆಳಗುತ್ತಾ, ಚಿಕ್ಕವರು, ದೊಡ್ಡವರೆಂಬ ತಾರತಮ್ಯವಿಲ್ಲದೆ ಉಷೆಯು  ಎಲ್ಲರಿಗೂ ಬೆಳಕನ್ನು ಬೀರುತ್ತಾಳೆ. ಸ್ನಾನ ಮುಗಿಸಿಕೊಂಡು ಶುದ್ಧವಾಗಿ ಬರುವಂತೆ ಉದಿಸಿ ಬಂದು ಕತ್ತಲನ್ನು ಓಡಿಸಿ ಬೆಳಕನ್ನು ಹರಡುತ್ತಾಳೆ. ತೇಜೋಯುಕ್ತವಾಗಿ ಪೂರ್ವದಿಕ್ಕಿನಲ್ಲಿ ಕಾಣಿಸಿಕೊಂಡು ತನ್ನ ಸೊಬಗನ್ನು ತೋರುತ್ತಾಳೆ.

ಪುನರುಜ್ಜೀವನ/ಪುನರ್ಜನ್ಮ

ಉಷೆಯು ಪುನರುಜ್ಜೀವನದ ಸಂಕೇತ.

ಋಗ್ವೇದ ಹೇಳುವಂತೆ, ಉಷೆಯು ಪುರಾತನಳಾದರೂ ಮತ್ತೆ ಮತ್ತೆ ಜನಿಸುವುದರಿಂದ, ಅವಳು ಸದಾ ತರುಣಿಯೇ! ಯಾವಾಗಲೂ ಹೊಸಬಳಾಗಿ ಚಕ್ರದಂತೆ ತಿರುಗುತ್ತಿರುತ್ತಾಳೆ. ಒಂದೇ ಸಮವಾಗಿ ಪ್ರಕಾಶಿಸುತ್ತಾ ಅವಳು ಮನುಷ್ಯರ ಆಯುಸ್ಸನ್ನು ಕ್ಷೀಣಿಸುತ್ತಾಳೆ. ಹಿಂದೆ, ಇಂದು, ಮುಂದೆಯೂ ಪ್ರಕಾಶಿಸುವ ಉಷೆಯು ಅಮರಳು, ಅವಳಿಗೆ ವಾರ್ಧಕ್ಯವಿಲ್ಲ. ಇತ್ಯಾದಿ.

ಈ ಕೆಳಗಿನ ಋಕ್ಕನ್ನು ಸ್ವಲ್ಪ ನಿಧಾನವಾಗಿ ಅಧ್ಯಯಿಸೋಣ:

ಪುನಃ ಪುನರ್ಜಾಯಮಾನಾ ಪುರಾಣೀ ಸಮಾನಂ ವರ್ಣಮಭಿ ಶುಂಭಮಾನಾ
ಶ್ವಘ್ನೀವ ಕೃತ್ನುರ್ವಿಜ ಆಮಿನಾನಾ ಮರ್ತ್ಯಸ್ಯ ದೇವೀ ಜರಾಯನ್ತ್ಯಾಯುಃ(ಋ. ಸಂ. 1.92.10)  

ಇದರ ಭಾವಾರ್ಥ ಹೀಗೆ: ಕಾಂತಿಯುತಳಾದ ಉಷೋದೇವಿಯು ಅನಾದಿಯಾಗಿ ಪ್ರತಿದಿನವೂ ಒಂದೇ ರೀತಿಯಾಗಿ ಆವಿರ್ಭವಿಸುತ್ತಾ ಕೊಂಚವೂ ಬದಲಾಗದ ರೂಪವಿರುವವಳು. ಹಾರುತ್ತಿರುವ ಪಕ್ಷಿಗಳ ರೆಕ್ಕೆಗಳನ್ನು ಸೀಳಿ, ಹಿಂಸಿಸಿ, ಅವನ್ನು ಕತ್ತರಿಸಿ ಸಾಯಿಸುವ ಬೇಡರ ಹೆಣ್ಣಿನಂತೆ, ಉಷೋದೇವಿಯೂ ಸಹ ಮರಣ ಧರ್ಮವುಳ್ಳ ಸಕಲ ಪ್ರಾಣಿಗಳಿಗೂ ಮುಪ್ಪನ್ನು ಕೊಟ್ಟು ಅವುಗಳ ಆಯುಸ್ಸನ್ನು ಕ್ಷೀಣಿಸುತ್ತಾಳೆ.

ಈ ಋಕ್ಕಿನಲ್ಲಿ ಅಶಾಶ್ವತವಾದ ಜೀವನದ ಜೊತೆಜೊತೆಗೆ ಶಾಶ್ವತವಾದ ತಾರುಣ್ಯವನ್ನೂ ಸೌಂದರ್ಯವನ್ನೂ ಕವಿಯು ವರ್ಣಿಸುತ್ತಾನೆ. ಈ ಋಕ್ಕಿನಲ್ಲಿ ಸಂತೋಷದೊಂದಿಗೆ ಸ್ವಲ್ಪ ವ್ಯಾಕುಲತೆಯೂ ವ್ಯಕ್ತವಾಗುತ್ತದೆ. ಲೋಕಕ್ಕೆಲ್ಲ ಚೈತನ್ಯವನ್ನೂ ಬೆಳಕನ್ನೂ ಕೊಟ್ಟು ಜೀವಕಲೆಯನ್ನು ತುಂಬುವ ಉಷೆಯ ಸೊಬಗು-ಸೌಂದರ್ಯಗಳನ್ನು ವರ್ಣಿಸಿ, ಆನಂದಾನುಭವವನ್ನು ವ್ಯಕ್ತಪಡಿಸುವ ಕವಿಯು ಮಾನವಾದಿ ಸಕಲ ಪ್ರಾಣಿಗಳೂ ಅತ್ಯಲ್ಪ ಕಾಲದಲ್ಲಿಯೇ ವಾರ್ಧಕ್ಯವನ್ನು ಹೊಂದಿ ಮೃತರಾಗುವ ದುಃಖವನ್ನೂ ವ್ಯಕ್ತಪಡಿಸುತ್ತಾನೆ.

ಸೂರ್ಯನ ಪ್ರಿಯತಮೆ

ಉಷಸ್ಸು ಸೂರ್ಯನಿಗೆ ಪ್ರಿಯತಮಳಾದ ಪತ್ನಿಯೆಂದು ಕೆಲವೆಡೆ (ಸೂರ್ಯಸ್ಯ ಯೋಷಾ), ಸೂರ್ಯಮಾತೆಯೆಂದು ಮತ್ತು ಕೆಲವು ಕಡೆ ವರ್ಣಿಸಲ್ಪಟ್ಟಿದ್ದಾಳೆ. ಕೆಲವು ಋಕ್ಕುಗಳಲ್ಲಿ (ಭಗಸ್ಯ ಸ್ವಸಾ ವರುಣಸ್ಯ ಜಾಮಿಃ) (ಆದಿತ್ಯನಾದ) ಭಗನ ಸಹೋದರಿ ಮತ್ತು ವರುಣನ ನಿಕಟಬಂಧು ಎಂದು ಬಣ್ಣಿಸಲಾದವಳು ಉಷೆ. ಅಶ್ವಿನೀ ದೇವತೆಗಳ ಜೊತೆಗೂ ಇವಳಿಗೆ ನಿಕಟ ಸಂಬಂಧವಿದೆ.  (ಉತ ಸಖ್ಯಾಸ್ಯಾಶ್ವಿನೋಃ).

ಸೂರ್ಯನಿಗೂ ಉಷಸ್ಸಿಗೂ ನಿಕಟ ಬಾಂಧವ್ಯವಿರುವುದು ಸ್ವಾಭಾವಿಕವೇ! ಯುವಕನು ಯುವತಿಯನ್ನು ಅನುಸರಿಸುವಂತೆ, ಸೂರ್ಯನು ಅವಳನ್ನು ಅನುಸರಿಸುತ್ತಾನೆ. ಆಕಾಶದಲ್ಲಿ ಅವನಿಂದ ಅನುಸೃತಳಾಗುವ ಅವಳು ಸೂರ್ಯನ ಪತ್ನಿ. ಉಷೆಯು ಸೂರ್ಯನ ಸಂಚಾರಕ್ಕಾಗಿ ಮಾರ್ಗವನ್ನು ತೆರೆಯುತ್ತಾಳೆ. ತನ್ನ ಪ್ರಿಯನಾದ ಸೂರ್ಯನ ತೇಜಸ್ಸಿನಿಂದ ಬೆಳಗುತ್ತಾಳೆ. ಹೀಗೆ ಉಷೆಯು ಪ್ರೇಮ-ಪ್ರಣಯಗಳ ಸಂಕೇತ.

ಕಾಲದೃಷ್ಟಿಯಿಂದ ಸೂರ್ಯನಿಗಿಂತ ಮೊದಲು ಬರುವ ಉಷೆಯು ಅವನ ತಾಯಿ ಎಂಬ ಗಣನೆ ಇದೆ. ಅವಳು ಸೂರ್ಯ, ಯಜ್ಞ, ಮತ್ತು ಅಗ್ನಿಗಳನ್ನು ಉತ್ಪತ್ತಿ ಮಾಡಿದವಳು. ನಮ್ಮ ಸಂಸ್ಕೃತಿಯಲ್ಲಿ ಪತ್ನಿ ಮತ್ತು ಪ್ರಿಯತಮೆಯರಲ್ಲೂ ತಾಯಿಯ ಒಂದು ಅಂಶವನ್ನು ಕಾಣುವ ಎಂತಹ ಸುಂದರ ಉದಾಹರಣೆ. ಉಷೆಯು ರಾತ್ರಿಯ ಸೋದರಿ. ರಾತ್ರಿ ಮತ್ತು ಉಶಸ್ಸುಗಳನ್ನು ಋಗ್ವೇದದಲ್ಲಿ ನಕ್ತೋಷಾಸಾ ಅಥವಾ ಉಷಾಸಾನಕ್ತಾ ಎಂದು ದ್ವಿವಚನಾಂತವಾಗಿ ಪ್ರಯೋಗಿಸಲ್ಪಟ್ಟಿವೆ.

ಗೋವು ಮತ್ತು ಉಷೋದೇವಿ

ಗೋವು ಎಂದರೆ ಶಾಂತಿ ಮತ್ತು ಸಂಪತ್ತುಗಳ ಪ್ರತೀಕ. ಉಷೋದೇವಿಯು ಉದಿಸಿದಾಗ ಗೋವುಗಳು ಗೋಶಾಲೆಯ ಬಾಗಿಲನ್ನು ತೆರೆಯುವಂತೆ ಆಕಾಶದ ಬಾಗಿಲನ್ನು ತೆರೆಯುತ್ತಾಳೆ. ಗೋವುಗಳ ಹಿಂಡುಗಳಂತೆ ಆಕೆಯ ಕಿರಣಗಳು ಕಾಣಿಸುತ್ತವೆ. ಕೆಂಪುಬಣ್ಣದ ಅವಳ ಕಿರಣಗಳು ಬೆಳಕಿನ ಜಾಲವನ್ನು ಬೀಸುತ್ತ, ಕಪಿಲ ಗೋವುಗಳಂತೆ ಕಾಣುತ್ತವೆ. ಹೀಗೆ, ಉಷೋದೇವಿಯು ದನಕರುಗಳ ಮಾತೆ.

ಅರುಣೋದಯದೊಡನೆ ಬರುವ ಚೈತನ್ಯ

ನಮ್ಮ ಸಂಸ್ಕೃತಿಯಲ್ಲಿ ಅರುಣೋದಯಕ್ಕೆ ಎಷ್ಟು ಮಹತ್ವ! ಹೊಸ ಬೆಳಕನ್ನು, ಬ್ರಾಹ್ಮೀ ಮುಹೂರ್ತವನ್ನು, ಎಳೆ ಮುಂಜಾನೆಯನ್ನು ಹೊಗಳಿ ಹಾಡುವ ಕವನಗಳೆಷ್ಟೋ! ಅರುಣೋದಯವಾದೊಡನೆಯೇ ಇಡೀ ಜಗತ್ತೇ ಎಚ್ಚೆತ್ತುಕೊಳ್ಳುತ್ತದೆ. ಪ್ರತಿಯೊಂದು ಜೀವಿಯೂ—ಪ್ರಾಣಿ, ಪಕ್ಷಿ, ದ್ವಿಪಾದಿ, ಚತುಷ್ಪಾದಿ—ಗಳಿಗೂ ಉಷೆಯೇ ಉಸಿರು, ಪ್ರಾಣ. ಅರುಣೋದಯವಾದ ತಕ್ಷಣ ಪಕ್ಷಿಗಳು ಗೂಡಿನಿಂದ ಹಾರುತ್ತವೆ, ಮನುಷ್ಯರು ಆಹಾರಾನ್ವೇಷಿಗಳಾಗುತ್ತಾರೆ. ಎಲ್ಲ ಜೀವಿಗಳಿಗೂ ಅವಳು ಹೊಸ ಚೇತನವನ್ನು ಕೊಡುತ್ತಾಳೆ.

ಋತ ಮತ್ತು ಸತ್ಯ

ಪ್ರಕೃತಿಯ ಮತ್ತು ದೈವೀ ವ್ಯವಸ್ಥೆ-ನಿಯಮಗಳನ್ನು ಮೀರದೆ, ಉಷಸ್ಸು ದಿನದಿನವೂ ಅದೇ ಸ್ಥಳ-ದಿಕ್ಕುಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಅದೇ ವ್ಯವಸ್ಥಿತ ಮಾರ್ಗದಲ್ಲಿಯೇ ಸಂಚರಿಸುತ್ತಾಳೆ. ತಾನು ಅನುಸರಿಸಬೇಕಾದ ಮಾರ್ಗವು ತಿಳಿದ ಉಷೆಯು ಎಂದೂ ದಾರಿ ತಪ್ಪುವುದಿಲ್ಲ. ಉಷೆಯು ಮನುಷ್ಯರು ಅನುಸರಿಸಬೇಕಾದ ಮಾರ್ಗವನ್ನು ತೋರುತ್ತಾಳೆ.

ಋತ ಶಬ್ದವು ಭೌತಿಕವಾದುದೂ ನೈತಿಕವಾದುದೂ ಆದ ವಿಶ್ವನಿಯಮವನ್ನು ಸೂಚಿಸುತ್ತದೆ. ಆದಿತ್ಯರಲ್ಲಿ ಪ್ರಧಾನರಾದ ಮಿತ್ರಾವರುಣರು ಈ ನಿಯಮದ ಕಡು ಪಾಲಕರು. ಉಷೋ ದೇವತೆಯೂ ಅಶ್ವಿನೀ ದೇವತೆಗಳೂ ಈ ನಿಯಮವನ್ನು ಯಾವರೀತಿಯಲ್ಲಿ ತಾವು ಅನುಸರಿಸಿ ಲೋಕಕ್ಕೆ ಹೇಗೆ ಸಹಾಯ ಮಾಡುತ್ತಾರೆ ಎಂದು ಹಲವು ಋಕ್ಕುಗಳಲ್ಲಿ ಉಲ್ಲೇಖವಾಗಿದೆ: ಋತಸ್ಯ ದೇವೀಃ ಸದಸೋ ಬುಧಾನಾ ಗವಾಂ ನ ಸರ್ಗಾ ಉಷಸೊ ಜರಂತೇ, (4.51.8) ಋತಸ್ಯ ಬುಧ್ನ ಉಷಸಾಮಿಷಣ್ಯನ್ವೃಷಾ ಮಹೀ ರೋದಸೀ ಆ ವಿವೇಶ (3.61.7) ಇತ್ಯಾದಿ ಋಕ್ಕುಗಳಲ್ಲಿ ಉಷಸ್ಸು ನಿತ್ಯವೂ ಋತದ ಮಾರ್ಗವನ್ನು ತಪ್ಪದೇ ತನ್ನ ನಿಯಮವನ್ನು ಅನುಸರಿಸುವುದೂ ವಿವರಿಸಲ್ಪಟ್ಟಿದೆ. ಋತದ ಪಥವನ್ನು ಅನುಸರಿಸುವುದರಲ್ಲಿ ಉಷಸ್ಸಿಗೂ ಅಶ್ವಿನೀ ದೇವತೆಗಳಿಗೂ ಸಾಪೇಕ್ಷಿತ ಸಂಬಂಧವಿದೆ. ಹೀಗೆ ಭೌತಿಕ ವಿಶ್ವದ ವ್ಯವಹಾರಗಳಲ್ಲಿ ಋತದ ನಿಯಮದಲ್ಲಿ ಕರ್ತವ್ಯ ತತ್ಪರರಾದ ಉಷಸ್ಸು ಮತ್ತು ಅಶ್ವಿನೀ ದೇವತೆಗಳನ್ನು ಋಗ್ವೇದದಲ್ಲಿ ಋತಪಾಃ, ಋತಾಯನ್ ಎಂಬ ವಿಶೇಷಣಗಳಿಂದ ವರ್ಣಿಸಿದ್ದಾರೆ.

ಯಾಗಕರ್ತೃಗಳನ್ನು ನಿದ್ರೆಯಿಂದ ಎಬ್ಬಿಸಿ, ಹೋಮಾಗ್ನಿಯನ್ನು ಹೊತ್ತಿಸುವಂತೆ ಮಾಡುವ ಉಷೋದೇವಿಯು ತಪಸ್ವಿಗೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಮಂಗಳಕಾರಿಣಿ. ಉಷೋದೇವಿಯನ್ನು ಸೋಮಪಾನಕ್ಕಾಗಿ ದೇವತೆಗಳನ್ನು ಕರೆತರಬೇಕೆಂದು ಪ್ರಾರ್ಥಿಸುತ್ತಾರೆ. ದೇವತೆಗಳು ಉಷೆಯೊಂದಿಗೆ ಏಳುತ್ತಾರೆ ಎನ್ನುವ ಕಾರಣ ಇದೇ. ಸೋಮನು ಆನಂದ ಮತ್ತು ಅಮೃತತ್ವದ ಪ್ರತೀಕ ಎಂದು ಈಗಾಗಲೇ ಹೇಳಿದ್ದೇವೆ. ಸೋಮನನ್ನು ಪ್ರಪಂಚಕ್ಕೆ ನೀಡುವ ಧಾತ್ರಿ ಉಷೋದೇವಿಯು ಪ್ರಪಂಚಕ್ಕೇ ಆನಂದ ಮತ್ತು ಅಮೃತತ್ವವನ್ನು ಕೊಡುತ್ತಾಳೆ.

ಯಜ್ಞಾದಿಗಳ ಅಗ್ನಿಯನ್ನು ಜ್ವಲಿಸುವ ಕಾರ್ಯ, ತಮಸ್ಸಿನಿಂದ ಆವೃತವಾದ ಸಮಸ್ತ ಪ್ರಪಂಚದ ಅಭಿವ್ಯಕ್ತಿ ಮತ್ತು ಯಜ್ಞಕರ್ತೃಗಳಾದ ಮನುಷ್ಯರ ಕಾರ್ಯತತ್ಪರತೆ, ಎಂಬ ಮೂರು ಶುಭ ಕರ್ಮಗಳನ್ನು ಅವಳೇ ಮಾಡಿಸುವವಳೆಂದು, ಇನ್ನೊಂದು ಋಕ್ಕಿನಲ್ಲಿ ಋಗ್ವೇದದ ಋಷಿಯು ಉಷೆಯನ್ನು ಸಂಬೋಧಿಸುತ್ತ ಹೇಳುತ್ತಾನೆ.

ಸತ್ಯಾ ಸತ್ಯೇಭಿರ್ಮಹತೀ ಮಹದ್ಭಿರ್ದೇವೀ ದೇವೇಭಿರ್ಯಜತಾ ಯಜತ್ರೈಃ ।
ರುಜದ್ದೃಳ್ಹಾನಿ ದದದುಸ್ರಿಯಾಣಾಮ್ ಪ್ರತಿ ಗಾವ ಉಷಸಂ ವಾವಶಂತ ॥ (ಋ. ಸಂ. 7.75.7)

ಈ ಋಕ್ಕಿನ ಭಾವಾರ್ಥ ಹೀಗಿದೆ: ಪ್ರಕಾಶಮಾನವಾದ ದೇವತೆಗಳಲ್ಲಿ ಅತ್ಯಂತ ಪ್ರಕಾಶಮಾನಳೂ, ಸತ್ಯದಲ್ಲಿ ಸತ್ಯಸ್ವರೂಪಳೂ, ಮಹದ್ಗುಣಗಳುಳ್ಳ ದೇವತೆಗಳಲ್ಲಿ ಮಹತ್ವವುಳ್ಳವಳೂ ಯಜ್ಞಾರ್ಹರಲ್ಲಿ ಪೂಜ್ಯಳೂ ಆದ ಉಷೋದೇವಿಯು ಅತ್ಯಂತ ಗಭೀರವಾದ ಕತ್ತಲೆಯನ್ನು ನಾಶಮಾಡುತ್ತಾಳೆ. ಉಷೆಯು ಸತ್ಯಸ್ವರೂಪಿಣಿ. ತಮಸ್ಸಿನ ಅಂಧಕಾರವನ್ನು ಕಳೆದು ಅವಳು ಸತ್ಯ ಮತ್ತು ಜ್ಞಾನಗಳ ಪ್ರಕಾಶವನ್ನು ಮೂಡಿಸುತ್ತಾಳೆ.

ಜ್ಞಾನ, ವಿಜ್ಞಾನ, ಪ್ರಜ್ಞಾನಗಳನ್ನು ನೀಡುವ ಉಷಸ್ಸು

ಅರವಿಂದರ ವ್ಯಾಖ್ಯಾನದ ಪ್ರಕಾರ, ವೇದದಲ್ಲಿ ಉಷೋ ದೇವಿಯ ಸ್ವಕಾರ್ಯ ಸದಾ ಒಂದೇ: ಅವಳು ಎಲ್ಲ ಜೀವಿಗಳ ಜಾಗೃತಿ, ಅನುಷ್ಠಾನ ಮತ್ತು ವಿಕಾಸಗಳ ಮಾಧ್ಯಮ. ಅವಳು ವೈದಿಕ ಸಾಕ್ಷಾತ್ಕಾರದ ಮೊದಲ ಸ್ತರ. ಅವಳ ಹೆಚ್ಚುತ್ತಿರುವ ಪ್ರಕಾಶದಿಂದ, ಮಾನವನ ಸಂಪೂರ್ಣ ಸ್ವರೂಪದ ಸಾಕ್ಷಾತ್ಕಾರವಾಗುತ್ತದೆ; ಅವಳ ಮೂಲಕ, ಅವನು ಸತ್ಯ ಮತ್ತು ಸೌಂದರ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ; ಆನಂದಾನುಭವವನ್ನು ಹೊಂದುತ್ತಾನೆ.

ದೈವಿಕ ಬೆಳಕು ಗಾಢಾಂಧಕಾರದ ಮುಸುಕನ್ನು ಕಳೆದು, ಮನುಷ್ಯನನ್ನು ದೈವೀ ಉದಯದೆಡೆಗೆ ಕರೆದೊಯ್ಯುತ್ತದೆ. ಉಷೆಯ ಆ ಬೆಳಕಿನಲ್ಲೇ ಕಾರ್ಯ ಸಾಧನೆ, ಯಜ್ಞ ಮತ್ತು ಅದರ ಫಲವೇ ಮಾನವನಿಗೆ ಅಮೃತತ್ವದ ಪ್ರಾಪ್ತಿ.

ಉಷೆಯು ಪ್ರಜ್ಞಾದೇವಿಯಾಗಿ ಬುದ್ಧಿಯನ್ನು ಪ್ರಚೋದಿಸುತ್ತಾಳೆಂಬ ಅರ್ಥ ಬರುವ ವಸಿಷ್ಠರಿಂದ ರಚಿತವಾದ ಋಕ್ಕೊಂದು ಹೀಗಿದೆ:

ಏತೇ ತ್ಯೇ ಭಾನವೋ ದರ್ಶತಾಯಾಶ್ಚಿತ್ರಾ ಉಷಸೋ ಅಮೃತಾಸ ಆಗುಃ ।
ಜನಯಂತೋ ದೈವ್ಯಾನಿ ವ್ರತಾನ್ಯಾಪೃಣಂತೋ ಅಂತರಿಕ್ಷಾ ವ್ಯಸ್ಥುಃ ॥ (ಋ. ಸಂ. 7.75.3)

ಇದರ ಭಾವಾರ್ಥ ಹೀಗಿದೆ: ಸುಂದರಳಾದ ಉಷೋದೇವಿಯ ಆಕರ್ಷಕವಾದ, ನಾಶರಹಿತವಾದ ರಶ್ಮಿಗಳು ದೇವತಾಕಾರ್ಯ ರೂಪವಾದ ಬುದ್ಧಿಯನ್ನು ಉತ್ಪನ್ನ ಮಾಡುತ್ತಾ ಪ್ರಸರಿಸುತ್ತಿವೆ.

ಮಹರ್ಷಿ ವಿಶ್ವಾಮಿತ್ರರು ಉಷೋದೇವಿಯ ಅಂತಃಸತ್ಯವನ್ನು ತಮ್ಮ ಸ್ತುತಿಯಲ್ಲಿ ತಿಳಿಯ ಹೇಳುತ್ತಾರೆ. ಉಷೋದೇವಿಯೆಂದರೆ ತನ್ನ ಬೆಳಕಿನಿಂದ ತಮಸ್ಸಿನ ಅಂಧಕಾರವನ್ನು ಹೊರದೂಡಿ ಜ್ಞಾನ, ವಿಜ್ಞಾನ, ಪ್ರಜ್ಞಾನಗಳನ್ನು ಉಷಃಕಾಲದಲ್ಲಿ ತಪೋನಿಷ್ಠನಾದ ಸಾಧಕನಿಗೆ ಪ್ರದಾನ ಮಾಡುವ ಜ್ಞಾನದೇವಿ.

ಭಾಸ್ವತೀ ನೇತ್ರೀ ಸೂನೃತಾನಾಮಚೇತಿ ಚಿತ್ರಾ ವಿ ದುರೋ ಆವಃ
ಪ್ರಾರ್ಪ್ಯಾ ಜಗದ್ವ್ಯು ನೋ ರಾಯೋ ಅಖ್ಯದುಷಾ ಅಜೀ ಗರ್ಭುವನಾನಿ ವಿಶ್ವಾ ॥ (ಋ. ಸಂ. 1.113.4)

ಈ ಋಕ್ಕಿನ ಭಾವಾರ್ಥ ಹೀಗಿದೆ: ಪ್ರಕಾಶಮಾನಳಾದ ಉಷಸ್ಸು ಶಬ್ದದ ಜನಯಿತ್ರಿ. ಅಂಧಕಾರದಿಂದ ಮುಚ್ಚಿದ್ದ ಎಲ್ಲ ದ್ವಾರಗಳನ್ನೂ ನಮಗೆ ಕಾಣುವಂತೆ ಬೆಳಕನ್ನು ಕೊಡುವ ಉಷೆಯು ತಮಸ್ಸಿನಿಂದ ನಷ್ಟಪ್ರಾಯವಾಗಿದ್ದ ಸಮಸ್ತ ಪ್ರಪಂಚವನ್ನೂ ಪ್ರಕಟಪಡಿಸುತ್ತಾಳೆ. ಹೀಗೆ ಉಷೆಯು ಜ್ಞಾನಧಾತ್ರಿ.

ಅರವಿಂದರು ಹೇಳುವಂತೆ, “ಉಷೋದೇವಿಯು ದೈವೀಶಕ್ತಿಯನ್ನು ಪುನಃ ಪುನಃ ಸೃಷ್ಟಿಸುತ್ತಾಳೆ. ಅವಳು ಋಗ್ವೇದವು ವರ್ಣಿಸುವಂತೆ, ಅವಳು ‘ಅಮೃತಸ್ಯ ಕೇತುಃ‘ ಮತ್ತು ‘ಸ್ವಸರಸ್ಯ ಪತ್ನಿಃ‘ ಸತ್ಯದ ಪ್ರಭೆ, ಪ್ರಜ್ಞೆಯ ಸೆಲೆ, ಆನಂದದ ಅಧಿದೇವತೆ, ಮತ್ತು ಅಮೃತವರ್ಷಿಣಿ.”

ಆಕರಗಳು–

  • ಋಗ್ವೇದ ಸಂಹಿತಾ, ಆಸ್ಥಾನ ಮಹಾವಿದ್ವಾನ್ HP ವೆಂಕಟ ರಾವ್ (ಸಂಪಾದಕರು)
  • The Secret of the Veda, Sri Aurobindo

(Image credit: Wikimedia Commons)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

Previous Next