close logo

ಮಹಾಮೃತ್ಯುಂಜಯ ಮಂತ್ರದ ‘ತ್ರ್ಯಂಬಕ’ ಶಬ್ದದ ಮೇಲೊಂದು ಟಿಪ್ಪಣಿ 

त्र्यम्बकं यजामहे सुगन्धिं पुष्टिवर्धनम्।
उर्वारुकमिव बन्धनान्मृत्योर्मुक्षीय माऽमृतात्॥

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ।
ಉರ್ವಾರುಕಮಿವ ಬಂಧನಾನ್ ಮೃತ್ಯೊರ್ಮುಕ್ಷೀಯ ಮಾऽಮೃತಾತ್।।

ಋಗ್ವೇದ (7.59.12)  ಮತ್ತು ಯಜುರ್ವೇದ (3.60) ದಲ್ಲಿ ಕಾಣಬರುವ ಈ ಮಂತ್ರವು ಮಹಾಮೃತ್ಯುಂಜಯ (महामृत्युञ्जयमन्त्र) ಮಂತ್ರವೆಂದು ಚಿರಪರಿಚಿತವಾಗಿದೆ. ರುದ್ರದೇವನನ್ನು ಆಹ್ವಾನಿಸುವ ಈ ಮಂತ್ರದ ಋಷಿ ವಸಿಷ್ಠ ಮೈತ್ರವರುಣಿ. ಮಹಾಮೃತ್ಯುಂಜಯ ಮಂತ್ರದ ಜಪ ಮತ್ತು ಧ್ಯಾನಗಳಿಂದ  ಹಲವರಿಗೆ ಕೇವಲ ದೇಹ ದೌರ್ಬಲ್ಯವಷ್ಟೇ  ಅಲ್ಲ ವೈಯುಕ್ತಿಕ ಮತ್ತು ಸಾಮೂಹಿಕ ಸ್ತರದಲ್ಲಿ ಉಳಿದೆಲ್ಲ ಅಡೆತಡೆಗಳೂ ನಿವಾರಣೆಯಾಗಿದೆ. ಮುಕ್ತ ಮನಸ್ಸು ಮತ್ತು ಶ್ರದ್ಧೆಗಳೊಂದಿಗೆ ಈ ಮಂತ್ರದ ಸಂಪರ್ಕಕ್ಕೆ ಬಂದವರೆಲ್ಲರಿಗೂ  ಇದರ ಪಾವಿತ್ರ್ಯ ಮತ್ತು ದಿವ್ಯಕಂಪನದ ಅನುಭೂತಿಯಾಗುವುದು ನಿಜ.

ಸ್ಥೂಲವಾಗಿ ಈ ಮಂತ್ರದ ತಾತ್ಪರ್ಯ ಹೀಗಿದೆ,

“ಓ ರುದ್ರನೇ! ತ್ರಿನೇತ್ರನಾದ ನಿನ್ನನ್ನು ನಾವು ಆರಾಧಿಸುತ್ತೇವೆ.ಯಾವ ರೀತಿಯಲ್ಲಿ ಸುಗಂಧಭರಿತವೂ ಪರಿಪಕ್ವವೂ ಆದ ಹಣ್ಣು ಬಳ್ಳಿಯಿಂದ ತಂತಾನೇ ಕಳಚಿಕೊಳ್ಳುತ್ತದೆಯೋ, ಅದೇ ರೀತಿಯಲ್ಲಿ ನಿನ್ನ ಧ್ಯಾನವು ನಮ್ಮನ್ನು ಎಲ್ಲ ರೀತಿಯ ಬಂಧನ-ಮಿತಿ ಗಳಿಂದ ಬಿಡುಗಡೆ ಮಾಡಲಿ. ಆದರೆ ಅಮರತ್ವದಿಂದ ಮಾತ್ರ ನಮ್ಮನ್ನು ವಂಚಿಸಬೇಡ.”

ಈ ಟಿಪ್ಪಣಿಯ ಉದ್ದೇಶ ಮಂತ್ರದ ಪೂರ್ಣ ಪ್ರತಿಪಾದನೆ ಮಾಡುವುದಲ್ಲ ಬದಲಿಗೆ ‘ತ್ರ್ಯಂಬಕಂ’ ಅಥವಾ ‘ತ್ರಿಯಂಬಕ/ತ್ರಯಂಬಕ’ ಶಬ್ದದ ಅರ್ಥವನ್ನು ವಿವರಿಸುವುದು. ಮೃತ್ಯುಂಜಯ ಮಂತ್ರವು ಅನುಷ್ಟುಪ್ ಛಂದಸ್ಸಿನಲ್ಲಿರುವುದರಿಂದ ‘ತ್ರ್ಯಂಬಕಂ’ ಶಬ್ದವನ್ನು  ‘ತ್ರಿಯಂಬಕ’ ಅಥವಾ ‘ತ್ರಯಂಬಕ’ ಎಂದು ಉಚ್ಚಾರಣೆ ಮಾಡಲಾಗುತ್ತದೆ.  ಅನುಷ್ಟುಪ್ ಛಂದಸ್ಸಿನ ಪದ್ಯದಲ್ಲಿ  ನಾಲ್ಕು ಪಾದಗಳಿರುತ್ತವೆ ಮತ್ತು  ಪ್ರತಿ ಪಾದದಲ್ಲಿ ಎಂಟು ಮಾತ್ರೆಗಳಿರುತ್ತದೆ. ಮಾತ್ರೆ ಅಥವಾ ಮಾತ್ರಾಕಾಲವೆಂದರೆ  ಒಂದು ಹ್ರಸ್ವಾಕ್ಷರವನ್ನು ಉಚ್ಚಾರಿಸಲು ಬೇಕಾಗುವ ಸಮಯ.*

ಆದರೆ ಈ ಮಂತ್ರದ ಮೊದಲನೇ ಪಾದದಲ್ಲಿ ಒಂದು ಮಾತ್ರಾಕಾಲದ ಕೊರತೆಯಿದೆ. ವೇದಮಂತ್ರಗಳಲ್ಲಿ ಇದು ಸರ್ವೇಸಾಮಾನ್ಯ.

ಉದಾಹರಣೆಗೆ,  ವಿಶ್ವಾಮಿತ್ರ ಋಷಿಯ ಪ್ರಸಿದ್ಧ ಗಾಯತ್ರಿ ಮಂತ್ರದಲ್ಲೂ (ಗಾಯತ್ರಿ ಛಂದಸ್ಸ್) ಮೊದಲನೇ ಪಾದದಲ್ಲಿ ಎಂಟು ಮಾತ್ರೆಗಳ ಬದಲಿಗೆ ಏಳು ಮಾತ್ರೆಗಳಿವೆ.

ಹೀಗಿರುವ ಸಂದರ್ಭಗಳಲ್ಲಿ  ವೈದಿಕ ನಿಯಮಗಳಂತೆ ಯತಿಯನ್ನು* ಕಾಪಾಡಲು ಸರಿಹೋಲುವಂತಹ ವ್ಯಂಜನಗಳನ್ನು ಕೂಡಿಸಿ ಉಚ್ಚಾರಣೆ ಮಾಡುವ ಪದ್ದತಿಯಿದೆ. ಸರಿಹೋಲುವಂತಹ ವ್ಯಂಜನಗಳನ್ನು ‘ಯ’,’ರ’, ‘ಲ’ ಮತ್ತು ‘ವ’ ಅಕ್ಷರಗಳೊಡನೆ ಸಂಯೋಜಿಸಿ ಎರಡು ಮಾತ್ರೆಗಳಾಗಿ ಪ್ರಯೋಗಿಸಬಹುದು.

ಉದಾಹರಣೆಗೆ-

ವರ್ಷಮ್ – ವರಿಷಮ್
ವರೇಣ್ಯಂ – ವರೇಣಿಯಮ್
ತ್ರ್ಯಂಬಕಂ – ತ್ರಿಯಂಬಕ /ತ್ರಯಂಬಕ
ತನ್ವೆ  – ತನವೆ

*ಯತಿ ಎಂದರೆ ಪದ್ಯವನ್ನು ಓದುವಾಗ ಹಾಗು ಮಂತ್ರವನ್ನು ಉಚ್ಚಾರಿಸುವಾಗ  ಪದಗಳ ಅರ್ಥಭಂಗವಾಗದಂತೆ ಪ್ರತಿಸಾಲಿನಲ್ಲಿ ನಿಯಮಿತವಾಗಿ ವಿರಾಮ ತೆಗೆದುಕೊಳ್ಳುವುದು.

‘ವ್ಯೂಹ’ ಎಂದು ಕರೆಯಲಾಗುವ ಈ ಪ್ರಕ್ರಿಯೆಗೆ ನಿರ್ದಿಷ್ಟ ಅಕ್ಷರ ಸಂಖ್ಯೆಗಳಿರುವ  ವೈದಿಕ ಛಂದೋಪದ್ಧತಿಯಲ್ಲಿ ಬಹಳ ಪ್ರಮುಖ ಪಾತ್ರವಿದೆ.

ಶೌನಕನ ಋಕ್ಪ್ರತಿಶಾಖ್ಯೆಯ ( ऋक्प्रातिशाख्य – xvii, 2, 22)  ಪ್ರಕಾರ ಪದ್ಯದ ಒಂದು ಸಾಲಿನಲ್ಲಿ ಮಾತ್ರೆಗಳ ಕೊರತೆಯನ್ನು ನೀಗಿಸಲು ಏಕಾಕ್ಷರರೂಪ ಪಡೆಯುವ ವ್ಯಂಜನಗಳನ್ನು ಪ್ರತ್ಯೇಕಿಸಿ ಉಚ್ಚರಿಸಬಹುದು (ವ್ಯೂಹೆದೆಕಾಕ್ಷರೀ  ಭಾವಾನ್ ಪದೇಶೂನೇಶು ಸಂಪದೆ).  ಈ ಕಾರಣದಿಂದಲೇ ತ್ರ್ಯಂಬಕದ ಬದಲಿಗೆ ತ್ರ್ಯಂಬಕ – ತ್ರಯಂಬಕ – ತ್ರಿಯಂಬಕ ಪದಗಳು ಕಂಡುಬರುತ್ತದೆ.

ತ್ರ್ಯಂಬಕಂ – ತ್ರಿಯಂಬಕ/ತ್ರಯಂಬಕ ಪದದ ಅರ್ಥವೇನೆಂದು ನೋಡೋಣ. ಮಹಾಮೃತ್ಯುಂಜಯಮಂತ್ರಕ್ಕೆ ಸಂಬಂಧಪಟ್ಟಂತೆ ‘ತ್ರ್ಯಂಬಕ’ ಪದಕ್ಕೆ ಹಲವಾರು ಅರ್ಥಗಳಿವೆ.

ತ್ರ್ಯಂಬಕ-

ತ್ರಿ (त्रि) ಎಂದರೆ ಮೂರು ಮತ್ತು  ಅಂಬಕ (अम्बक) ಎಂದರೆ ಕಣ್ಣು, ಸಂರಕ್ಷಕ, ತಂದೆ,ಕಾಲಜ್ಞಾನಿ ಇತ್ಯಾದಿ.

ಅಂಬಕ (अम्बक) ಪದವು ಅಂಬ್ (अम्ब् ) ಧಾತುವಿನ ಅಂಬ (अम्ब) ಪದದಿಂದ ಜನಿಸಿದೆ.

ಅಂಬ್(अम्ब्) :  “ಚಲಿಸುವುದು’ ಅಥವಾ ‘ಶಬ್ದವನ್ನು  ಉಂಟುಮಾಡುವುದು’

ಅಂಬ್(अम्ब्) :  “ಚಲಿಸುವುದು’ – ಅಂಬಕ (अम्बक)

‘ಅಂಬಕ’ (अम्बक) ಅರ್ಥಗಳು ಹೀಗಿವೆ :

  • ಯಾವುದು  ಚಲಿಸುತ್ತದೆಯೊ
  • ಚಲನವನ್ನು ಉಂಟು ಮಾಡುತ್ತದೆಯೊ
  • ಬೇರೆಯವರಲ್ಲಿ ಚಲನೆಯನ್ನುಂಟುಮಾಡುವ ಶಕ್ತಿ ಪಡೆದಿದೆಯೊ
  • ಯಾವುದಕ್ಕೆ ಶಕ್ತಿ ಇದೆಯೊ
  • ಸಾಮ್ರಾರ್ಥ್ಯವಿದೆಯೊ
  • ತನ್ನನ್ನು ಮತ್ತು ಪರರನ್ನು ಸಂರಕ್ಷಿಸುತ್ತದೆಯೊ
  • ಸಂರಕ್ಷಕ.

ಅಂಬ್(अम्ब्) : ‘ಶಬ್ದವನ್ನು  ಉಂಟುಮಾಡುವುದು’ – ಅಂಬಕ (अम्बक)

ಅಂಬಕ (अम्बक ) ಎಂದರೆ-

  • ಯಾರು  ಶಬ್ದವನ್ನು  ಉಂಟುಮಾಡುತ್ತಾನೊ
  • ಯಾರಿಗೆ ಶಬ್ದವು ಕೇಳುತ್ತದೆಯೊ
  • ಯಾರಿಗೆ ತನ್ನ ಅಂತರಂಗದ ಶಬ್ದ/ಧ್ವನಿ ಯನ್ನು ಆಲಿಸುವ/ಕೇಳುವ  ಶಕ್ತಿಯಿದೆಯೊ*

ತನ್ನ ಅಂತರಂಗದ ಶಬ್ದ/ಧ್ವನಿ ಯನ್ನು ಆಲಿಸುವ/ಕೇಳುವ  ಶಕ್ತಿಯಿರುವವನೇ  ಋಷಿ. ಋಷಿಯೆಂದರೆ सत्यश्रोता  ಸತ್ಯಶ್ರೋತಾ / ಸತ್ಯವನ್ನು ಆಲಿಸುವವ ಎಂದು.

ಅಂಬ್(अम्ब्) ಧಾತುವಿನ ” ಶಬ್ದವನ್ನು  ಉಂಟುಮಾಡುವುದು” ಎಂಬ ಅರ್ಥವನ್ನು ನಾವು “ಧ್ವನಿ/ಶಬ್ದವು ಸಂಚರಿಸುವ ಮಾಧ್ಯಮ” ಎಂದೂ ಅರ್ಥ ಮಾಡಿಕೊಳ್ಳಬಹುದು. ಆಕಾಶಕ್ಕೆ ಅಂಬರ ಎನ್ನುವ ಹೆಸರಿದೆ. ಆಕಾಶಕ್ಕೆ ಹೊದಿಕೆಯ/ಮೇಲ್ಛಾವಣಿಯ/ಮೇಲಾವರಣದ  ಭಾವವಿರುವುದರಿಂದ ವಸ್ತ್ರಕ್ಕೂ ಅಂಬರ ಎನ್ನುತ್ತಾರೆ. ನೀರು ಹರಿಯುವಾಗ ಶಬ್ದ ಮಾಡುವುದರಿಂದ ನೀರಿಗೆ ಸಂಸ್ಕೃತದಲ್ಲಿ ‘ಅಂಬು’ ಎಂದು ಕರೆಯಲಾಗಿದೆ.

ಶಬ್ದವನ್ನು  ಉಂಟುಮಾಡುವುದು

ಶಬ್ದದ ಜಾಡಿ ಹಿಡಿದು ಶಬ್ದದ ಉಗಮಸ್ಥಾನವನ್ನು ತಲುಪಬಹುದು. ಹಾಗಾಗಿ ‘ಅಂಬಕ ‘ ಪದಕ್ಕೆ ದಾರಿ ತೋರಿಸುವವ/ದರ್ಶಕ/ಮಾರ್ಗದರ್ಶಕ ಎಂಬ ಅರ್ಥವೂ ಮೂಡಿಬರುತ್ತದೆ. ಶಬ್ದದಿಂದ ದೃಷ್ಟಿಯೂ ಸಾಧ್ಯವಾಗುತ್ತದೆ.  ಎಲ್ಲ ಗತ್ಯರ್ಥಕ (गत्यर्थक) – ಚಲಿಸುವ/ಚಲನೆಯನ್ನು ಉಂಟುಮಾಡುವ –  ಧಾತುಗಳು  ಜ್ಞಾನಾರ್ಥಕ (ज्ञानार्थक) ಧಾತುಗಳಿಗೆ ಅನ್ವಯವಾಗುತ್ತದೆ.

ಜ್ಞಾನ ज्ञान ಅಂದರೆ ‘ಅಂತರ್ಜ್ಞಾನ’/’ಒಳನೋಟ’/’ಕಾಲಜ್ಞಾನ’ ಎಂಬ ಅರ್ಥಗಳಿವೆ. ಹಾಗಾಗಿ ‘ಅಂಬಕ’ ಪದಕ್ಕೆ ಕಾಲಜ್ಞಾನಿ, ಕಣ್ಣು ಎಂಬ ಅರ್ಥವೂ ಇದೆ.

ಚಲಿಸುವುದು

ಒಂದು ವಸ್ತುವು ಚಲಿಸುತ್ತಿದೆ ಎಂದರೆ ಅದಕ್ಕೊಂದು ಉಗಮಸ್ಥಾನವಿದೆ. ಅಂತೆಯೆ ಈ ಉಗಮಸ್ಥಾನ ಮತ್ತು ಗಮ್ಯಸ್ಥಾನ(ತಲುಪುವ ಸ್ಥಳ) ಇತ್ಯಾದಿ ಸ್ಥಾನಗಳಿಗೂ ಅಂಬಕದ ಅರ್ಥವಿರುವುದು ತಿಳಿಯುತ್ತದೆ.

ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮಹಾಮೃತ್ಯುಂಜಯ ಮಂತ್ರದಲ್ಲಿ ಕಾಣಬರುವ  ‘त्र्यम्बक’ ತ್ರ್ಯಂಬಕ ಶಬ್ದದ ಹಲವಾರು ಅರ್ಥಗಳನ್ನು ನೋಡೋಣ :

1. त्रि-अम्बकम् — त्रयः अकारः ओकारः मकारः अम्बाः शब्दाः वाचका यस्य तं त्र्यम्बकम्।

ತ್ರಿ-ಅಂಬಕಮ್ : ತ್ರಯಃ ಅಕಾರಃ ಓಕಾರಃ ಮಕಾರಃ ಅಂಬಾಃ ಶಬ್ದಾಃ ವಾಚಕಾ ಯಸ್ಯ ತಂ ತ್ರ್ಯಂಬಕಂ .

ತ್ರ್ಯಂಬಕಂ – ಓಂ ಕಾರದ ‘ಆ’,’ಉ’ ಮತ್ತು ‘ಮ’ ಅಕ್ಷರಗಳು ಯಾರನ್ನು ವರ್ಣಿಸುತ್ತದೆಯೋ ಅವನಿಗೆ.

ಪತಂಜಲಿಯ ಯೋಗಸೂತ್ರ (1.27) ದಲ್ಲಿ ಹೇಳಿದಂತೆ  तस्य वाचकः प्रणवः ॥ ತಸ್ಯ ವಾಚಕಃ ಪ್ರಣವಃ ॥ ಎಂದರೆ ಓಂ ಕಾರವು ಅವನನ್ನು ಸೂಚಿಸುತ್ತದೆ.

2. त्रयाणां लोकानां अम्बकं चक्षुःस्वरूपं त्र्यम्बकम्।

ತ್ರಯಾಣಾಂ ಲೋಕಾನಾಂ ಅಂಬಕಂ ಚಕ್ಷುಃಸ್ವರೂಪಂ ತ್ರ್ಯಂಬಕಂ

ತ್ರ್ಯಂಬಕಂ – ಮೂರು ಲೋಕಗಳಿಗೂ ಕಣ್ಣಿನಂತಿರುವವನಿಗೆ.

3. तिसृणाम् अवस्थानाम् -उत्पत्तिस्थिथिप्रलयानाम् अध्यक्षरूपेण द्रष्टारम् सर्वाध्यक्षम् त्रिनेत्रम्।

ತಿಸ್ರುಣಾಂ ಅವಸ್ಥಾನಂ-ಉತ್ಪತ್ತಿಸ್ಥಿಥಿಪ್ರಲಯಾನಾಂ ಅಧ್ಯಕ್ಷರೂಪೇಣ ದ್ರಷ್ಟಾರಂ ಸರ್ವಾಧ್ಯಕ್ಷಂ ತ್ರಿನೇತ್ರಂ

ತ್ರ್ಯಂಬಕಂ – ಯಾರು ಎಲ್ಲ ಸ್ಥಿತಿಗಳನ್ನು (ಸೃಷ್ಟಿ,ಸಂರಕ್ಷಣೆ ಮತ್ತು ಪ್ರಳಯ) ಅಧ್ಯಕ್ಷರೂಪದಲ್ಲಿ (ಮೇಲ್ವಿಚಾರಕನಾಗಿ) ತನ್ನ ತೆರೆದ ಕಣ್ಣುಗಳಿಂದ ನೋಡುತ್ತಾನೊ ಅವನಿಗೆ.

4. त्रिलोक्याः पितरं मातरं च।

ತ್ರಿಲೊಕ್ಯಾಃ ಪಿತರಂ ಮಾತರಂ ಚ

ತ್ರ್ಯಂಬಕಂ – ಮೂರುಲೋಕಗಳ ತಂದೆಯೂ ತಾಯಿಯೂ ಆದವನಿಗೆ.

5. ज्ञाननेत्रेण त्रिलोक्याः द्रष्टारं प्रकाशकं च।

ಜ್ಞಾನನೇತ್ರೇಣ ತ್ರಿಲೊಕ್ಯಾಃ ದ್ರಷ್ಟಾರಮ್ ಪ್ರಕಾಶಕಂ ಚ

ತ್ರ್ಯಂಬಕಂ – ತನ್ನ ಜ್ಞಾನನೇತ್ರಗಳಿಂದ ಮೂರು ಲೋಕಗಳನ್ನು ಕಲ್ಪಿಸಿ ಅದನ್ನು ಪ್ರಕಟಗೊಳಿಸುತ್ತಾನೊ ಅವನಿಗೆ.

6. त्रिमूर्तेः पितरम्।

ತ್ರಿಮೂರ್ತೇಃ ಪಿತರಂ

ತ್ರ್ಯಂಬಕಂ – ತ್ರಿಮೂರ್ತಿಗಳ(ಬ್ರಹ್ಮ, ವಿಷ್ಣು,ಮಹೇಶ್ವರ) ಪಿತನಿಗೆ.

7. वेदत्रय्युपदेष्टारम्।

ವೇದತ್ರಯ್ಯುಪದೇಷ್ಟಾರಂ

ತ್ರ್ಯಂಬಕಂ – ವೇದಗಳನ್ನು ಕಂಡವನು ಮತ್ತು ತಂದವನಿಗೆ.

(ಯಸ್ಯ ನಿಹ್ ಶ್ವಸಿತಂ ವೇದಾಃ )

8. त्रिकालेऽपि त्रयाणां लोकानाम् अम्बास्वरूपं रक्षकम्।

ತ್ರಿಕಾಲೇऽಪಿ ತ್ರಯಾಣಾಂ ಲೋಕಾನಾಂ ಅಂಬಾಸ್ವರೂಪಂ ರಕ್ಷಕಂ

ತ್ರ್ಯಂಬಕಂ – ಭೂತ, ವರ್ತಮಾನ, ಭವಿಷ್ಯತ್ ಎಂಬ ಮೂರು ಕಾಲದಲ್ಲಿಯೂ ಮಾತೃಸ್ವರೂಪವಾಗಿ ನಮ್ಮನ್ನು ಕಾಯುವವನಿಗೆ.

9. त्रिकालज्ञम्।

ತ್ರಿಕಾಲಜ್ಞಾನಂ

ತ್ರ್ಯಂಬಕಂ – ಯಾರು ಭೂತ,ವರ್ತಮಾನ ಮತ್ತು ಭವಿಷ್ಯವನ್ನು ಬಲ್ಲವನೂ ಅವನಿಗೆ.

10. त्रिसृभिः अम्बाभिः सच्चिदानन्दाख्यशक्तिभिः नित्यसंयुतं परमेश्वरम्।

ತ್ರಿಸೃಭಿಃ ಅಂಬಾಭಿಃ ಸಚ್ಚಿದಾನಂದಾಖ್ಯಾಕ್ತಿಭಿಃ ನಿತ್ಯಸಂಯುತಂ ಪರಮೇಶ್ವರಂ

ತ್ರ್ಯಂಬಕಂ – ಮೂವರು ಮಾತೃರೂಪಿ ಆದಿಶಕ್ತಿಗಳಾದ ಸತ್-ಚಿತ್-ಆನಂದ ದ ಚಿರಂತನ ಸಂಪರ್ಕದಲ್ಲಿರುವ  ಪರಮಾತ್ಮನಿಗೆ.

11. त्रयाणां पुराणाम् अम्बकं स्वामिनम्।

ತ್ರಯಾಣಾಂ ಪುರಾಣಾಂ ಅಂಬಕಂ ಸ್ವಾಮಿನಂ

ತ್ರ್ಯಂಬಕಂ –  ತ್ರಿಪುರ (ಮೂರು ಲೋಕಗಳ) ಸ್ವಾಮಿಗೆ.

12. त्रीणि पृथिव्यन्तरिक्षद्युलोकाख्यानि अम्बकानि स्थानानि यस्य तम् त्र्यम्बकम्।

ತ್ರೀಣಿ ಪೃಥಿವ್ಯಾಂತರೀಕ್ಷದ್ಯುಲೋಕಾಖ್ಯಾನಿ ಅಂಬಕಾನಿ ಸ್ಥಾನಾನಿ ಯಸ್ಯ ತಮ್ ತ್ರ್ಯಂಬಕಂ

ತ್ರ್ಯಂಬಕಂ – ಪೃಥ್ವಿ ಅಂತರೀಕ್ಷ ಮತ್ತು ದ್ಯುಲೋಕ ವೆಂಬ ಮೂರು ಲೋಕಗಳನ್ನು ಆವರಿಸಿ ಕೊಂಡಿರುವವನಿಗೆ. 

ವಿ.ಸೂ : ಪಂಡಿತ ಜಗನ್ನಾಥ ವೇದಾಲಂಕಾರಜೀ ಯವರ ಜ್ಯೋತಿಷಾಮ್ ಜ್ಯೋತಿಃ ಗ್ರಂಥದಲ್ಲಿ ಉಲ್ಲೇಖಿಸಿರುವ त्र्यम्बक ತ್ರ್ಯಂಬಕ ಶಬ್ದದ ಹನ್ನೆರಡು ಅರ್ಥಗಳ ವ್ಯಾಖ್ಯಾನವನ್ನು ಮಾಡುವ ಪ್ರಯತ್ನ ನನ್ನದು.

(ಈ ಲೇಖನವು ಮೊದಲು ಇಲ್ಲಿ ಪ್ರಕಟಗೊಂಡಿತ್ತು. ಡಾ. ಮಿಶ್ರ ಅವರ ಅನುಮತಿಯೊಂದಿಗೆ  ಕನ್ನಡಕ್ಕೆ ಭಾಷಾಂತರಿಸಲಾಗಿದೆ).

(This article was first published in English here and has been translated to Kannada with permission from the original’s author, Dr. Mishra)

(Image credit: newspostonline.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply