close logo

ಮಹಾಭಾರತದಲ್ಲಿ ಮಹಾದೇವನ ಮಹಿಮೆ

shaiva

ಮಹಾಭಾರತದಲ್ಲಿ ಮಹಾದೇವನ ಮಹಿಮೆ

ಮಹಾಭಾರತವು ಧರ್ಮ ಸಂಸ್ಥಾಪಕನಾದ, ಶಿಷ್ಟ ರಕ್ಷಕ ಮತ್ತು ದುಷ್ಟ  ಶಿಕ್ಷಕನಾದ,  ನಾರಾಯಣನ ಅವತಾರ ಪುರುಷ ಶ್ರೀ ಕೃಷ್ಣ ವಾಸುದೇವನನ್ನು ಹಾಡಿ ಹೊಗಳುತ್ತದೆ.

ಸಮಾಜದಲ್ಲಿ ಸಮತೆ ಮತ್ತು ಧರ್ಮ ಪರಿಪಾಲನೆಯ ಪುನರುತ್ಥಾನ ಮಾಡುವ ಉದ್ದೇಶದಿಂದ ನಡೆದ ಯುದ್ಧದಲ್ಲಿ  ಶ್ರೀ ಕೃಷ್ಣನು ಅರ್ಜುನ ಮತ್ತು ಅವನ ಸಹೋದರರ ಜ್ಞಾನ ಜ್ಯೋತಿಯಾಗಿ ದಾರಿ ದೀಪವಾಗಿ ಕೈ ಹಿಡಿಯುತ್ತಾನೆ . ದಿಕ್ಕು ಕಾಣದೆ, ಅಕಾರ್ಯದಿಂದಲೂ, ಬೇಸರದಿಂದಲೂ ಕಳೆದುಹೋಗಿರುವವರಿಗೆ ಗೀತಾಚಾರ್ಯನಾಗಿ ಪ್ರಪಂಚಕ್ಕೆಲ್ಲಾ ಗೀತೆಯ ಸುಧೆ ಹಂಚಿದ ಪರಮಾತ್ಮನು ಶ್ರೀ ಕೃಷ್ಣ.

ಮಹಾಭಾರತ ಯುದ್ಧವು ಭೂ ಭಾರ ಇಳಿಸಲು ನಡೆದ ದೈವ ಯೋಜನೆ. ಧರೆಯ ಮೇಲೆ ಅಸುರರು ಅನೇಕಾನೇಕ ರೂಪಗಳಲ್ಲಿ ಜನಿಸಿ ಭೂಮಿಯ ಮೇಲಿನ ತೂಕವು ಭೂ ದೇವಿಯು ತಡೆಯಲಾರದಷ್ಟು  ಹೆಚ್ಚಿ ಹೋಗಿತು. ಆಗ ಭಯ ಭೀತಳಾದ ಆ ಮಾತೆಯು ಸೃಷ್ಟಿಕರ್ತನನ್ನು  ಆಶ್ರಯಿಸಿ ಕೃಪೆಯನ್ನು ಯಾಚಿಸಿದಳು. ಅವಳಲ್ಲಿ ಅನುಕಂಪವನ್ನು ತೋರಿದ ಸೃಷ್ಟಿಕರ್ತ ಬ್ರಹ್ಮನು, ಎಲ್ಲಾ ದೈವಿಕ ಜೀವಿಗಳನ್ನು ಪೃಥ್ವಿಯಲ್ಲಿ ಜನಿಸಿ ಭೂಭಾರ ಇಳಿಸುವ ದೈವ ಸಂಕಲ್ಪದಲ್ಲಿ ಪಾಲ್ಗೊಳ್ಳಲು ನಿರ್ದೇಶಿಸಿದನು.

ವಿಷ್ಣು ಕೃಷ್ಣನ ಅವತಾರವೆತ್ತಿ ಅಧರ್ಮ ಮತ್ತು ಅಧರ್ಮಿಗಳ ವಿರುದ್ಧ ಧಾಳಿ ನಡೆಸಲು ಮುಂದಾಳತ್ವವನ್ನು  ವಹಿಸಿ ಕಂಸ, ಶಿಶುಪಾಲ, ತ್ರಿಣವರ್ತ, ಅಘಾಸುರ, ಬಕಾಸುರರಂತಹ ರಾಕ್ಷಸ ವಧೆ ನಡೆಸಿದನು. ಅರ್ಜುನನ ಸಾರಥ್ಯ ವಹಿಸಿ ಕುರುಕ್ಷೇತ್ರ ಯುದ್ಧದ ಪರಿಣಾಮ ಮತ್ತು ಆಗು ಹೋಗುಗಳನ್ನು  ನಿರ್ದೇಶಿಸಿದನು. ಅಂತ್ಯದಲ್ಲಿ  ಅಧರ್ಮವು ನಾಶವಾಗಿ ಧರ್ಮ ಸಂಸ್ಥಾಪನೆಯಾಯಿತು.

ನಾರಾಯಣನು ಪ್ರತ್ಯಕ್ಷವಾಗಿ ಈ ಕಾರ್ಯದಲ್ಲಿ ಪಾಲ್ಗೊಂಡಿರುವುದು ಅಚ್ಚರಿಯ ವಿಷಯವೇನಲ್ಲ. ಮಹದೇವನಾದ ಶಿವನೂ ಸಹ ಈ ವ್ಯವಸ್ಥೆಯಲ್ಲಿ ಭಾಗ ವಹಿಸಿ ಪಾಪ ಮತ್ತು ಅಧರ್ಮದ ನಿರ್ಮೂಲನೆ  ಮಾಡುವುದರಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತಿರುವ ಪ್ರಸಂಗಗಳನ್ನು ನಾವು ಕಾಣಬಹುದು.

ದ್ರೌಪದಿ ಮತ್ತು ಪಾಂಡವರ ವಿವಾಹದಲ್ಲಿ ಶಿವನ ಪಾತ್ರ

ವೇದವ್ಯಾಸರು ದ್ರುಪದನಿಗೆ ದ್ರೌಪದಿಯ ಹಿಂದಿನ ಜನ್ಮದ ಕಥೆಯನ್ನು ಹೇಳುತ್ತಾರೆ. ದ್ರೌಪದಿಯು ತನ್ನ  ಹಿಂದಿನ ಜನ್ಮದಲ್ಲಿ ನಲಯನಿಯಾಗಿ ಶಿವನಲ್ಲಿ ಐವರು ಪತಿಯರನ್ನು ಅನುಗ್ರಹಿಸಲು ಬೇಡಿಕೊಳ್ಳುತ್ತಾಳೆ. ಭಕ್ತರ ಇಷ್ಟಾರ್ಥಗಳನ್ನು ಅನುಗ್ರಹಿಸುವ ಶಿವನು ಅವಳಿಗೆ ಐವರು ಇಂದ್ರರನ್ನು ಪತಿಯರನ್ನಾಗಿ ಪಡೆಯುವ ವರವನ್ನು ನೀಡುತ್ತಾನೆ. ಈ ವಿವಾಹವೇ ಮಹಾಭಾರತದ ಯುದ್ಧಕ್ಕೆ ನಾಂದಿ ಹಾಡಿದಂತಾಗುತ್ತದೆ.  ಪಾಂಡವರು  ಒಗ್ಗಟ್ಟನ್ನು ಕಾಪಾಡಿಕೊಂಡು, ಸಬಲರಾಗಿ  ಕಲಿಯ ಅಂಶವಾದ ದುರ್ಯೋಧನನ ಸರ್ವನಾಶಕ್ಕೆ ಈ ಮದುವೆಯು ಉಚಿತವೆಂದು ಮಹಾಶಿವನು ತೆರೆಯ ಮರೆಯಿಂದಲೇ  ಆದೇಶಿಸುತ್ತಾನೆ.

ವ್ಯಾಸರ ಈ ಕಥನವನ್ನು ಸಮ್ಮತಿಸಿ  ದ್ರುಪದನು ಐವರು ಪಾಂಡವರೊಂದಿಗೆ ದ್ರೌಪದಿಯ ವಿವಾಹಕ್ಕೆ ಒಪ್ಪುತ್ತಾನೆ.  ಈ ಪರಿಣಯದ ಪರಿಣಾಮವಾಗಿಯೇ ಪಾಂಡವರಿಗೆ ದೃತರಾಷ್ಟ್ರನಿಂದ ರಾಜ್ಯಪ್ರಾಪ್ತಿಯಾಗುತ್ತದೆ .

ಶಿವನ ಕೃಪೆಯಿಂದ ಶಿಖಂಡಿಯಾಗಿ ಅಂಬಾಳ ಜನನ

ಕಾಶಿ ರಾಜ್ಯದ ಯುವರಾಣಿಯಾದ ಅಂಬಾಳನ್ನು ಭೀಷ್ಮನು ಸ್ವಯಂವರ ಮಂಟಪದಿಂದ ತನ್ನ ಬಲವನ್ನೂ ಅಧಿಕಾರವನ್ನೂ ಉಪಯೋಗಿಸಿ ತನ್ನ ರಾಜ್ಯಕ್ಕೆ ಕರೆತರುತ್ತಾನೆ. ಸತ್ಯದ ಅರಿವಾದ ನಂತರ ಅಂಬಾಳನ್ನು ಅವಳ ಪ್ರಿಯತಮ ಶಲ್ವರಾಜ ನಲ್ಲಿ ಹಿಂದಿರುಗಲು ಅವಕಾಶ ಮಾಡಿಕೊಡುತ್ತಾನೆ.  ಶಲ್ವ ನು ಭೀಷ್ಮನಿಗೆ ಹೆದರಿ ಅಂಬಾಳನ್ನು ಒಪ್ಪಿಕ್ಕೊಳ್ಳಲು ನಿರಾಕರಿಸುತ್ತಾನೆ. ಕುಪಿತೆಯಾದ ಅಂಬಾ ಭೀಷ್ಮನ ಗುರುಗಳಾದ ಪರಶುರಾಮನಲ್ಲಿ ಮೊರೆಯಿಡುತ್ತಾಳೆ. ಅವರೀರ್ವರ ನಡುವೆ ಯುದ್ಧ ವಾಗುತ್ತದೆ, ಆದರೆ ಯುದ್ಧವು ಅಂಬಾ ನೆನೆದಂತೆ ಭೀಷ್ಮನ ನಿರ್ನಾಮದಲ್ಲಿ ಮುಗಿಯದೆ ಪರಸ್ಪರ ಒಪ್ಪಂದದ ಮೇರೆಗೆ ಅಂತ್ಯಗೊಳ್ಳುತ್ತದೆ.

ಅಂಬಾಳ ಸಿಟ್ಟು ಸೇಡಿಗೆ ತಿರುಗಿ, ತನಗೆ ಭೀಷ್ಮನಿಂದಾದ ವಂಚನೆಯ ಛಲ ತೀರಿಸಿಕೊಳ್ಳಲು ಸದಾಶಿವನನ್ನು ಉದ್ದೇಶಿಸಿ  ತಪಸ್ಸನ್ನು ಆಚರಿಸುತ್ತಾಳೆ. ಸದಾಶಿವನು ಅಂಬಾಳಿಗೆ ತನ್ನ ಬೇಡಿಕೆಯು ಪೂರ್ಣವಾಗುವಂತೆ ಆಶಿರ್ವದಿಸುತ್ತಾನೆ. ಆದರೆ ಅದಕ್ಕಾಗಿ ಮತ್ತೊಂದು ಜನ್ಮ ಪಡೆಯಬೇಕಾಗಿ ಪರಮೇಶ್ವರನು ಅಂಬಾಳಿಗೆ ಸೂಚಿಸುತ್ತಾನೆ.

ಈ ಘಟನೆಯ ನೆಂಟಸ್ತಿಕೆ ದ್ರುಪದನ ಜೀವನದಲ್ಲೂ ಉಂಟು. ದ್ರುಪದನಿಗೆ ದ್ರೋಣಾಚಾರ್ಯರಿಂದ  ಅವಹೇಳನವಾಗುವ ಮುನ್ನವೇ, ದ್ರೌಪದಿ ಮತ್ತು ದೃಷ್ಟದ್ಯುಮ್ನನ ಜನನದ ಪೂರ್ವವೆ ಭೀಷ್ಮನಿಂದ ತೊಂದರೆಯಾಗಿರುತ್ತದೆ. ಭೀಷ್ಮ ತನ್ನ ಶೌರ್ಯ ಪರಾಕ್ರಮಗಳಿಂದಲೂ ಮತ್ತು ತನ್ನ ಅಖಂಡ ರಾಜ್ಯ ಮತ್ತು ಸೇನೆಯಿಂದಲೂ ದ್ರುಪದನನ್ನು ಬೆದರಿಸಿರುತ್ತಾನೆ.  ತನ್ನ ಕೀಳಿರಿಮೆಗೆ ಕಾರಣನಾಗಿರುವ ಭೀಷ್ಮನನ್ನು ಆಜನ್ಮ ವೈರಿ ಎಂದು ದ್ರುಪದ ಭಾವಿಸುತ್ತಾನೆ. ಶಿವನನ್ನು ಆರಾಧಿಸಿ ಶಿವನ ಮೆಚ್ಚುಗೆ ಪಡೆದು ಭೀಷ್ಮನನ್ನು ವಧಿಸುವ ಪುತ್ರನನ್ನು ವರವನ್ನಾಗಿ ಬೇಡಿಕೊಳ್ಳುತ್ತಾನೆ. ಆಗ ಶಿವನು ದ್ರುಪದನಿಗೆ ತನಗೆ ಜನಿಸುವ ಮಗುವು ಹೆಣ್ಣಾಗಿಯೂ ಗಂಡಾಗಿಯೂ ಇರುವುದಾಗಿ ಹೇಳಿ, ವಿಧಿಯ  ನಿಯಮದಂತೆ ಸಕಲವೂ ಪೂರ್ವಸಿದ್ಧಿಯಾಗಿರುವುದಾಗಿ, ಕಾಲವೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ  ಎಂದು  ಹೇಳಿ ಸಮಾಧಾನ ಪಡಿಸುತ್ತಾ ಅವನಿಗೆ ಸಂತಾನವಾಗುವಂತೆ ಅನುಗ್ರಹಿಸುತ್ತಾನೆ.

ಹೀಗೆ ಅಂಬಾಳನ್ನು ಶಿಖಂಡಿಯಾಗಿ ದ್ರುಪದನ ಮನೆಯಲ್ಲಿ ಜನ್ಮ ಪಡೆಯಲು ಸದಾಶಿವನು ಸಜ್ಜು ಮಾಡುತ್ತಾನೆ. ಭೀಷ್ಮನ ವೈರಿಗಳಾದ ಅಂಬಾ ಮತ್ತು ದ್ರುಪದನು ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನ ಅಂತ್ಯಕ್ಕೆ ಕಾರಣರಾಗುತ್ತಾರೆ .

ಈ  ಮೇಲ್ಕಂಡ ಕಥೆಯನ್ನು ಉದ್ಯೋಗ  ಪರ್ವದಲ್ಲಿ  ಭೀಷ್ಮನು ದುರ್ಯೋಧನನಿಗೆ ಹೇಳುತ್ತಾನೆ. (೫. ೧೯೧)

ಶಿವನ ಕೃಪೆಯಿಂದ ಯಶಸ್ವಿಯಾದ ದ್ರೌಪದಿಯ ಸ್ವಯಂವರ 

ದ್ರುಪದರಾಜನಿಗೆ ಅರ್ಜುನನನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಬಯಕೆಯಿರುತ್ತದೆ. ದ್ರೌಪದಿಯ ವಿವಾಹವು ಅವನೊಂದಿಗೇ ಆಗಬೇಕೆಂದು ಗಾಢವಾದ ಆಸೆಯಿರುತ್ತದೆ. ಲಾಕ್ಷಾಗೃಹದಿಂದ ತಪ್ಪಿಸಿಕೊಂಡು ಪಾಂಡವರು ಜೀವಂತವಾಗಿರುವುದು ತನ್ನ ಗೂಢಾಚಾರರಿಂದ ತಿಳಿದು ಬಂದಿರುತ್ತದೆ.

ಈ ಕಾರಣದಿಂದಾಗಿ ಸ್ವಯಂವರದಲ್ಲಿ ಬಹು ಕಠಿಣವಾದ, ಕೇವಲ ಶ್ರೇಷ್ಠ ಧನುರ್ಧಾರಿಗಳಿಂದ ಸಾಧಿಸಲ್ಪಡುವ ಸ್ಪರ್ಧೆಯನ್ನು ಆಯೋಜಿಸಿದನು. ದೇವತೆಗಳು ಅವನ ಪೂರ್ವಿಕನಾದ  ಶೃಂಜಯ ವೈಯಾಘ್ರಪಾದರಿಗೆ ಅನುಗ್ರಹಿಸಿದ ಕಿಂದುರ ಎಂಬ ಧನುಸ್ಸಿನಿಂದ ಕ್ಲಿಷ್ಟವಾದ ಗುರಿಯಲ್ಲಿ ಬಾಣವನ್ನು ನಾಟಿಸುವ  ಏರ್ಪಾಡು ಮಾಡಿದನು. ಅರ್ಜುನನು ಸಮಯಕ್ಕೆ ಸರಿಯಾಗಿ ಸ್ವಯಂವರ ಸಭೆಯನ್ನು ಸೇರಿ, ಸ್ಪರ್ಧೆಯನ್ನು ಜಯಿಸಿ ದ್ರೌಪದಿಯನ್ನು ವರಿಸಬೇಕೆಂದು ಶಿವನಲ್ಲಿ ಭಕ್ತಿಯಿಂದ ಬೇಡಿಕೊಂಡನು.  ಶಿವನ ಕೃಪೆ ಇದ್ದಲ್ಲಿ ತನ್ನ ಮನೋಕಾಮನೆಯು ಪೂರೈಸುವುದೆಂದು ನಂಬಿದ್ದನೆಂದು ಈ ಕೆಳಗಿನ ಶ್ಲೋಕಗಳಲ್ಲಿ ಕಾಣಬಹುದು.

शङ्करेण वरं दत्तं प्रीतेन च महात्मना ।
तान्निष्फलंस्यान्नतुमेइति प्रामाण्यमागतः ॥
(1-200-15) (8863)

मयाकर्तव्यमधुनादुष्करं लक्ष्यवेधनम् ।
इतिनिश्चित्यमनसाकारितं लक्ष्यमुत्तमम् ॥
(1-200-16) (SE ಆದಿಪರ್ವ)

ಕಿರಾತನಾಗಿ ಅರ್ಜುನನ್ನು ಅನುಗ್ರಹಿಸಿದ್ದು

ಈ ಪ್ರಸಂಗವು ವನಪರ್ವದ ಬಹು ಮುಖ್ಯ ಅಂಗವಾಗಿದೆ. ಸಂಸ್ಕೃತದ ಐದು ಮಹಾಕಾವ್ಯಗಳಲ್ಲಿ ಒಂದಾಗಿರುವ ಭಾರವಿ ವಿರಚಿತ  ಕಿರಾತಾರ್ಜುನೀಯಂ ಈ ಕಥೆಯನ್ನು ಆದರಿಸಿದೆ.

ಮಹಾದೇವನ ಪಾಶುಪತಾಸ್ತ್ರದ ಪ್ರಾಪ್ತಿಯಾಗದಿದ್ದಲ್ಲಿ ದೇವತೆಗಳ ಶ್ರೇಷ್ಠವಾದ ಅಸ್ತ್ರಗಳನ್ನು ಸಂಪಾದಿಸಲು ಸಾಧ್ಯವಾಗದು ಎಂದು ಇಂದ್ರನು ತನ್ನ ಮಗನಾದ ಅರ್ಜುನನಿಗೆ ತಿಳಿ ಹೇಳಿದನು. ಆದಿ ಧನುರ್ಧಾರಿಯಾದ ಶಿವನು ಅನುಗ್ರಹಿಸದಿದ್ದಲ್ಲಿ ಅಗಾಧವಾದ ಶಕ್ತಿಯುಳ್ಳ ದೇವತೆಗಳ ಶಸ್ತ್ರಾಸ್ತ್ರವು ನಿರುಪಯೋಗವಾಗುವುದು ಎಂದು ಅರ್ಜುನನಿಗೆ ಸಂತೈಸಿದನು. ತಂದೆಯ ಆದೇಶವನ್ನು ಪಾಲಿಸಿ ಪಾಶುಪತಾಸ್ತ್ರವನ್ನು ಪಡೆಯಲು ಅರ್ಜುನನು ಕೈಲಾಸಕ್ಕೆ ಹೋಗುತ್ತಾನೆ.  ಅರ್ಜುನನ ಮನೋಭಿಲಾಷೆಯನ್ನು ಅರಿತ ಮಹಾದೇವನು ಅವನನ್ನು ಪರೀಕ್ಷಿಸುವುದಾಗಿ ನಿರ್ಧರಿಸುತ್ತಾನೆ.

ಅರ್ಜುನನ ಧೈರ್ಯ, ಸಾಮರ್ಥ್ಯ ಮತ್ತು ಕೌಶಲ್ಯದ ಪರಿಚಯವಿಲ್ಲದೆ  ಪಾಶುಪತಾಸ್ತ್ರವನ್ನು ಅನುಗ್ರಹಿಸಲಾಗದು ಎಂದ ಶಿವನು ಅರ್ಜುನನ್ನು ಪರೀಕ್ಷಿಸಿ, ಅರ್ಜುನನಲ್ಲಿ ನಂಬಿಕೆ ಪ್ರಬಲವಾದಾಗ ಪಾಶುಪತಾಸ್ತ್ರವನ್ನು ಅನುಗ್ರಹಿಸಿದನು. ಆ ಕಿರಾತನ ಕೃಪೆಯಿಂದ ಅರ್ಜುನನು ಪರಮಾಯುಧವಾದ ಪಾಶುಪತಾಸ್ತ್ರದೊಂದಿಗೆ ದೇವತೆಗಳ ದಿವ್ಯಾಸ್ತ್ರಗಳನ್ನೂ ಸಂಪಾದಿಸಿದನು.

स्वर्गगच्छेत्यनुज्ञातस्त्रयंबकेनतदार्जुनः ।
प्रनम्यशिरसा पार्थः प्राञ्जलिर्देवमैक्षत ॥
(BORI 3.41)

ಜಯದ್ರಥನಿಗೆ ಶಿವನ ವರ

ಶಿವನ ಈ ವರವು ಕುರುಕ್ಷೇತ್ರ ಯುದ್ಧದ ದಿಕ್ಕು ಬದಲಾಯಿಸಿತು.

ದ್ರೌಪದಿಯನ್ನು ಅಪಹರಿಸಿದ ಪರಿಣಾಮವಾಗಿ ಪಾಂಡವರಿಂದ ಅವಮಾನಿತನಾದ ಜಯದ್ರಥ ತನ್ನ ಹಗೆ ಸಾಧಿಸಲು ಶಿವನ ಅನುಗ್ರಹಕ್ಕಾಗಿ ಗಾಢವಾದ ತಪಸ್ಸನ್ನು ಆಚರಿಸುತ್ತಾನೆ.

ಮಹಾದೇವನ ವರದ ಮರ್ಮವನ್ನು ಜಯದ್ರಥ ಅರಿಯದೆ ಹೋಗುತ್ತಾನೆ.  ಒಂದು ದಿನದ ಮಟ್ಟಿಗೆ  ಪಾಂಡವರನ್ನು ಗೆಲ್ಲುವ ಸಾಮರ್ಥ್ಯವನ್ನು ಜಯದ್ರಥ ಹೊಂದಿರುತ್ತಾನೆ. ಆದರೆ ಅರ್ಜುನನನ್ನು ಎಂದಿಗೂ ಗೆಲ್ಲಲಾರನು ಎಂದು ವರವನ್ನಿತ್ತ ಶಿವನು ಜಯದ್ರಥನಿಗೆ ವರದ ಜೊತೆಯೇ ಸಾವಿನ ಸಂಕೇತವನ್ನೂ ನೀಡುತ್ತಾನೆ.  ಆ ವರವು  ಕುರುಕ್ಷೇತ್ರ ಯುದ್ಧದ ಹದಿಮೂರನೇ ದಿನದಂದು ಕೈಗೂಡುತ್ತದೆ. ಅರ್ಜುನ ಮತ್ತು ಕೃಷ್ಣ ರಣರಂಗದಿಂದ ದೂರ ಕಳುಹಿಸಲ್ಪಡುತ್ತಾರೆ, ಇದನ್ನರಿತ ಅಭಿಮನ್ಯು ಚಕ್ರವ್ಯೂಹವನ್ನು ತಾನಾಗಿಯೇ ಬೇಧಿಸಿ ಏಕಾಕಿಯಾಗಿ ಚಕ್ರವ್ಯೂಹದ ನಡು ಮಧ್ಯದಲ್ಲಿ ಹೊರಾಡುತ್ತಾನೆ.  ಅವನ ಸಹಾಯಕ್ಕಾಗಿ ಬಂದ ಉಳಿದ ನಾಲ್ವರು ಪಾಂಡವರನ್ನು ಜಯದ್ರಥ ತನ್ನ ವರದ ಬಲದಿಂದ ತಡೆದು ಜಯಶಾಲಿಯಾಗುತ್ತಾನೆ. ಅಸಹಾಯಕನಾದರೂ  ವೀರಾವೇಶದಿಂದ ಯುದ್ಧಗೈದ ಅಭಿಮನ್ಯು ಮಡಿಯುತ್ತಾನೆ. ಮಗನ ಸಾವಿನ ಬೇಗೆಯಲ್ಲಿ ಬೆಂದ ಅರ್ಜುನ ಮಾರನೇ ದಿನದ ಸೂರ್ಯಾಸ್ತದ ಒಳಗೆ ಜಯದ್ರಥನನ್ನು ಕೊಲ್ಲುವುದಾಗಿ ಪಣವನ್ನು ಸ್ವೀಕರಿಸುತ್ತಾನೆ. ಮರುದಿನ ಪ್ರಪ್ರಥಮ ಬಾರಿಗೆ ಅರ್ಜುನ ಕಠೋರವಾಗಿ ಯುದ್ಧ ನಡೆಸಿ ಕೇವಲ ಒಂದು ದಿನದಲ್ಲಿ ಕೌರವರ ಏಳು ಅಕ್ಷೋಹಿಣಿ ಸೈನ್ಯವನ್ನು ದ್ವಂಸ ಮಾಡುತ್ತಾನೆ. ಜೊತೆಯಲ್ಲೇ ಜಯದ್ರಥನ ನಾಶವಾಗುತ್ತದೆ.

ಶಿವನ ಈ ಹರಕೆಯಿಂದ ಯುದ್ಧದ ದಿಕ್ಕು ಬದಲಾಯಿಸಿ ಪಾಂಡವರು ಜಯಶಾಲಿಗಳಾಗುತ್ತಾರೆ.

ಅರ್ಜುನ ಕೈಲಾಸ  ಪರ್ವತಕ್ಕೆ ಪ್ರಯಾಣ ಮಾಡುವುದು

ಅಭಿಮನ್ಯುವಿನ ಮರಣವಾದ ರಾತ್ರಿ ಬೇಸರಗೊಂಡ ಅರ್ಜುನನಿಗೆ  ಕೈಲಾಸ  ಪರ್ವತಕ್ಕೆ ಪ್ರಯಾಣ ಮಾಡಿದ  ಕನಸಾಗುತ್ತದೆ.  ಸ್ವಯಂ ಮಹದೇವನಿಂದ ಎರಡನೇ ಬಾರಿ ಪಾಶುಪತಾಸ್ತ್ರದ ಅನುಗ್ರಹವಾದಂತೆ ಭಾಸವಾಗುತ್ತದೆ.  ತನ್ನ ಆಪ್ತ ಮಿತ್ರನಾದ ಕೃಷ್ಣನು ಸೂಚನೆಯೊಂದನ್ನು ಕೊಟ್ಟ ಅನುಭೂತಿಯಾಗುತ್ತದೆ. ಆ ಮುಕ್ಕಣ್ಣನಿಗೆ ಶರಣುಹೋಗಿ ಪಾಶುಪತಾಸ್ತ್ರದ ಮಂತ್ರೋಪದೇಶ ಪಡೆದು ಪುನಃ ಸ್ಮರಣೆಗೆ ತಂದುಕೊಳ್ಳುವುದಾಗಿ  ಕೃಷ್ಣನ ಆದೇಶವಿರುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಶಿವನಲ್ಲಿ ಏಕಚಿತ್ತನಾಗಿ ಅರ್ಜುನನು ಧ್ಯಾನಮಾಡುತ್ತಾನೆ. ಕನಸಿನಲ್ಲೇ ಈ ಘಟನೆಗಳು ನಡೆಯುತ್ತಿವೆ ಎಂಬ ಭ್ರಮೆ ಅರ್ಜುನನಲ್ಲಿ ಮೂಡ ತೊಡಗುತ್ತದೆ.  ಶ್ರೀ ಕೃಷ್ಣನ ಜೊತೆಯಲ್ಲೇ ಕೈಲಾಸಕ್ಕೆ ಹೋಗಿ ಶಿವ ಪಾರ್ವತಿಯರ ದರ್ಶನವನ್ನು ಪಡೆದಂತಾಗುತ್ತದೆ. ಸಾಕ್ಷಾತ್ ಪರಮೇಶ್ವರನಿಗೆ ವಂದಿಸಿ ಪಾಶುಪತಾಸ್ತ್ರದ ಮಂತ್ರವನ್ನು ಪುನಃ ಉಪದೇಶಿಸುವುದಾಗಿ ಬೇಡಿಕೊಳ್ಳುತ್ತಾನೆ.  ಮಹದೇವನಿಂದ ಬಾಲ ಬ್ರಹ್ಮಚಾರಿಯೊಬ್ಬ ಹೊರ ಬಂದು ಪಾಶುಪತಾಸ್ತ್ರದ ಬಳಕೆಯ ವಿಧಾನ ಮತ್ತು ಮಂತ್ರೋಪದೇಶವನ್ನು ಬೋಧಿಸುತ್ತಾನೆ. ಹೀಗೆ ಆ ದಿವ್ಯಾಸ್ತ್ರದ ಸಂಪೂರ್ಣ ಜ್ಞಾನ ಪ್ರಾಪ್ತಿ ಪಡೆದ ಅರ್ಜುನನು ಜಯದ್ರಥನನ್ನು ವಧಿಸುತ್ತಾನೆ.

तस्यतन्मतमाज्ञायप्रीतः प्रादाद्वरंभवः ।
तच्चपाशूपतंघोरं प्रतिज्ञायाश्च पारणम् ॥
(BORI 7.58)

ಪರಮೇಶ್ವರನು ಕರ್ಣಾರ್ಜುನರ ಕಲಹವನ್ನು ಸಾಕ್ಷಾತ್ಕರಿಸಿ ವಿಜೇತನನ್ನು ಘೋಷಿಸುತ್ತಾನೆ

ಯುದ್ಧದ ಹದಿನೇಳನೇ ದಿನದಂದು ಕರ್ಣ ಮತ್ತು ಅರ್ಜುನರು ಪರಸ್ಪರ ಯುದ್ಧ ನಡೆಸಲು ಮುಖಾಮುಖಿಯಾಗಿ ಸಜ್ಜಾಗುತ್ತಾರೆ. ಈ ಮಹಾರತಿಗಳ ಪೈಪೋಟಿಯನ್ನು ವೀಕ್ಷಿಸಲು ದೇವಾನುದೇವತೆಗಳು ನೆರೆಯುತ್ತಾರೆ. ಬ್ರಹ್ಮ ದೇವನೂ, ನೀಲಕಂಠನೂ ಯುದ್ಧದ ಈ ಪ್ರಮುಖ ಘಟನೆಯನ್ನು ಸಾಕ್ಷೀಕರಿಸಲು ಬಂದು ನಿಲ್ಲುತ್ತಾರೆ. ಇಂದ್ರನು ತನ್ನ ಮಗನಾದ ಅರ್ಜುನನಿಗೆ ಆಶೀರ್ವದಿಸಬೇಕಾಗಿಯೂ, ಸೂರ್ಯನು ತನ್ನ ಸುಪುತ್ರನಾದ ಕರ್ಣನನ್ನು ಅನುಗ್ರಹಿಸಬೇಕಾಗಿಯೂ ಅವರೀರ್ವರಲ್ಲಿ ಬೇಡಿಕೊಳ್ಳುತ್ತಾರೆ. ಆಗ ಬ್ರಹ್ಮ ದೇವನು ಹಾಗು ಮಹೇಶ್ವರನು ಪಾರ್ಥನನ್ನು ವಿಜಯಿಯಾಗಲೆಂದು ಅರಸುತ್ತಾರೆ. ನರ – ನಾರಾಯಣ ಸ್ವರೂಪಿಗಳು ಅರ್ಜುನ ಮತ್ತು ಕೃಷ್ಣ. ಅವರಿಬ್ಬರನ್ನು ಯಾರಿಂದಲೂ ಜಯಿಸಲಾಗದೆಂದು ಅರ್ಜುನನ್ನನು ಅರಸಿ ಕೌರವರ ವಿನಾಶ ಮತ್ತು ಪಾಂಡವರ ಗೆಲುವನ್ನು ಘೋಷಿಸಲಾಗುತ್ತದೆ.

ब्रह्मशानावथोवाक्यमूचतुस्त्रिदशेश्वरम्
विजयोध्रुवएवास्तुविजयस्यमहात्मनः ॥
(BORI 8.63)

ಅಶ್ವತ್ಥಾಮನು  ಪಾಂಚಾಲರನ್ನು, ಶೃಂಜಯರನ್ನು ಹಾಗು ಉಪ ಪಾಂಡವರನ್ನು ವಧಿಸಲು ಎಡೆ ಮಾಡಿಕೊಡುವವನು ರುದ್ರನೇ

ಯುದ್ಧದ ಘೋರ ಘಟನೆಯೊಂದು ಕೊನೆಯ ದಿನದ ಮಧ್ಯರಾತ್ರಿಯಲ್ಲಿ ಘಟಿಸುತ್ತದೆ.  ಈ ಮೈನಡುಗಿಸುವ ರೌದ್ರ ಮಾರಣಹೋಮಕ್ಕೆ ಜಗದೀಶ್ವರನಾದ ಮಹಾರುದ್ರನ ಸಮ್ಮತಿ ಇರುತ್ತದೆ. ಅಶ್ವತ್ಥಾಮನು ಪಾಂಡವರ ವಿನಾಶವನ್ನು ಉದ್ಧೇಶಿಸಿ ರುದ್ರನಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಪಾಂಡವರ ಶಿಬಿರದಲ್ಲಿ ಜೀವಂತವಾಗಿ ಉಳಿದಿರುವವರನ್ನು ಕೊಲ್ಲುವ ಸಂಕಲ್ಪಕ್ಕೆ ನೆರವು ನೀಡುವುದಾಗಿ ಬೇಡಿಕೊಳ್ಳುತ್ತಾನೆ. ಆಗ ಮಹಾದೇವನು ಮಿಂಚಿನಂತೆ ಹೊಳೆಯುವ ಖಡ್ಗವೊಂದನ್ನು ಅಶ್ವತ್ಥಾಮನಿಗೆ ಕರುಣಿಸಿದಲ್ಲದೆ ಸ್ವಯಂ ತಾನೇ ಅವನ ಶರೀರವನ್ನು ಹೊಕ್ಕುತ್ತಾನೆ. ಆ ನಟರಾಜನ ಚೈತನ್ಯ ತನ್ನಲ್ಲಿ ನೆಲಿಸಿದಾಗ ದ್ರೋಣಾಚಾರ್ಯನ ಮಗನಾದ ಅಶ್ವತ್ಥಾಮನು ದ್ರೌಪದಿಯು ಪಾಂಡವರಿಂದ ಪಡೆದ ಐವರು ಪುತ್ರರನ್ನು, ಉಪಪಾಂಡವರಾಗಿ ಸಣ್ಣ ವಯಸ್ಸಿನ ತರುಣರ ತಲೆಯನ್ನು ಕತ್ತರಿಸುತ್ತಾನೆ. ಇವರಲ್ಲದೆ ದೃಷ್ಟದ್ಯುಮ್ನ, ಶಿಖಂಡಿ, ಯುಧಮನ್ಯು, ಉತ್ತಮೌಜಸ್ ಮತ್ತು ಉಳಿದ ಇತರರನ್ನು ಕಠೋರವಾಗಿ ಸಂಹಾರ ಮಾಡುತ್ತಾನೆ. ಸ್ವಯಂ ರುದ್ರನೇ ಅವತರಿಸಿದ್ದಾನೆಯೋ ಎಂಬಂತೆ ಅಶ್ವತ್ಥಾಮನ ಸುತ್ತಲು, ಸಕಲ ದಿಕ್ಕುಗಳಿಂದ ದೃಶ್ಯಾದೃಶ್ಯ ರಾಕ್ಷಸರು ಹೊರಹೊಮ್ಮಿ ಕಂಡ ಕಂಡವರ ಹತ್ಯೆ ನಡೆಯುತ್ತದೆ.  (೧೦. ೭)

ತನ್ನ ರಥದ ಮುಂದೆ  ಮಹಾದೇವನ ರಥವನ್ನು ಕಂಡ ಅರ್ಜುನ

ದ್ರೋಣ ಪರ್ವದಲ್ಲಿ ಅರ್ಜುನ ವ್ಯಾಸರಲ್ಲೊಂದು ಪ್ರಶ್ನೆಯನ್ನು ಕೇಳುತ್ತಾನೆ. ಅರ್ಜುನನ ದ್ವಂದ್ವವೇನೆಂದರೆ, ರಣರಂಗದಲ್ಲಿ ತನ್ನ ರಥ ತಲುಪುವ ಮುನ್ನವೇ ಬೇರೊರ್ವನ ರಥವು ತಾನು ನಿರ್ಧರಿಸಿದ ಜಾಗಕ್ಕೆ ತನಗಿಂತ ಮುಂಚಿತವಾಗಿಯೇ  ತಲುಪುತಿತ್ತು. ತನ್ನ ಬಾಣವು ಶತ್ರುವನ್ನು ಮೀಟುವ ಮುನ್ನವೇ ತನ್ನ ಮುಂದಿರುವ ರಥದ ವೀರನ ಈಟಿಯು ಶತ್ರುವನ್ನು ನಿರ್ಜೀವಗೊಳಿಸುತಿತ್ತು, ಈ ವಿಸ್ಮಯವು ಕೇವಲ ಭ್ರಮೆಯೋ ಅಥವಾ ಸತ್ಯವೋ? ಎಂದು ಅರ್ಜುನ ಗೊಂದಲದಿಂದ ಕೇಳುತ್ತಾನೆ. ಆಗ ವ್ಯಾಸರು ಬೆಳಕು ಚೆಲ್ಲಿ ಅವನ ಸಂಶಯವನ್ನು ದೂರ ಮಾಡುತ್ತಾರೆ. ಮೊದಲಿಗೆ ‘ಈಶಾನ’ ಎಂದರೆ ಭೂಮಿ, ಆಕಾಶ ಮತ್ತು ಸ್ವರ್ಗದಲ್ಲಿ ಐಕ್ಯನಾಗಿರುವವನು, ಅವನು ಸರ್ವಾಂತರ್ಯಾಮಿಯಾಗಿ ಸಕಲ ಸೃಷ್ಟಿಯನ್ನೇ ರಕ್ಷಿಸುವವನು ಅವನೇ  ಶಿವ, ಮಹಾದೇವ, ಮಹಾರುದ್ರ. ಆ ರಥಾರೂಢಿಯು ಸ್ವಯಂ ಶಂಕರನೇ ಎಂದು ಉತ್ತರಿಸಿ ಅಲ್ಲಿಯೇ ವ್ಯಾಸರು ಶತರುದ್ರೀಯಮ್ನ ಮೂಲಕ ಮಹತ್ತರವಾದ ಶಿವನ ಸ್ತೋತ್ರವನ್ನು ರಚಿಸುತ್ತಾರೆ.

धन्यंयशस्यमायुष्यंपुण्यंवेदैश्चसच्जितम्  ।
देवदेवस्यतेपार्थव्याख्यातंशतरुद्रियम्  ॥
(BORI 7.173)

ಮಹಾದೇವನ ಈ ಶತರುದ್ರೀಯಮ್ನಲ್ಲಿ  ಕಂಡುಬರುವ ಪರಮೇಶ್ವರನ ನಾಮಾಂಕಿತವು ವೇದಗಳಲ್ಲೂ ಕಂಡುಬರುತ್ತದೆ  ಹಾಗು ಈ ಸ್ತೋತ್ರದ ನಾಮಸ್ಮರಣೆ ಅಥವಾ ಶ್ರೋತ ಸ್ಮರಣೆ ಮಾಡಿದವರಿಗೆ ಸಕಲೈಶ್ವರ್ಯವೂ ಜಯವೂ ಪ್ರಾಪ್ತಿಯಾಗುವುದೆಂದು ವ್ಯಾಸರು ವಿಸ್ತರಿಸುತ್ತಾರೆ.

ಮಹಾಭಾರತದಲ್ಲಿ ಅನೇಕಾನೇಕ ಶಿವಭಕ್ತರಿದ್ದು ಅವರಲ್ಲಿ ಪ್ರಮುಖರಾದ ಕೆಲವರು

೧. ಗಾಂಧಾರಿ ಶಿವಭಕ್ತೆ. ಅವಳಿಗೆ ಶಿವನ ಕೃಪೆಯಿಂದಲೇ ಪುತ್ರರರ ಪ್ರಾಪ್ತಿಯಾಗುತ್ತದೆ.

೨. ಅರ್ಜುನರ ಪತ್ನಿಯರಲ್ಲಿ ಒಬ್ಬಳಾದ ಚಿತ್ರಾಂಗದೆ ಶಿವಭಕ್ತನಾದ  ಚಿತ್ರವಾಹನ ಎಂಬ ರಾಜನ ಮಗಳು. ಆಕೆ ಶಿವನ ಅನುಗ್ರಹದಿಂದ  ಜನಿಸಿದವಳು. ಅಲ್ಲದೆ ಶಿವನು ವಂಶವನ್ನು ಮುಂದುವರೆಸುವ ಮಗುವೊಂದನ್ನು ಕರುಣಿಸುತ್ತಾನೆ. . ಆ ಮಗುವೇ ಬಬ್ರುವಾಹನ. ಬಬ್ರುವಾಹನನಿಂದ ಅರ್ಜುನನಿಗಿದ್ದ ಶಾಪದ ವಿಮೋಚನೆಯಾಗುತ್ತದೆ. ಇದೆಲ್ಲಾ ಶಿವನ ಲೀಲೆ ಎಂದು ಕಾಣಬರುತ್ತದೆ.

೩. ಉಪಮನ್ಯು ಶಿವನ ಮಹಾಭಕ್ತ. ಆತ ಶಿವ ಸಹಸ್ರನಾಮವನ್ನು ಕೃಷ್ಣನಿಗೆ ಉಪದೇಶಿಸಿ ತಾನು ಶಿವನ ದರ್ಶನ ಪಡೆದ ವಿಧಿಯನ್ನು ವಿವರಿಸಿ ಹೇಳುತ್ತಾನೆ .

೪. ಕೃಷ್ಣ ರುಕ್ಮಿಣಿಯರು ಶಿವನಲ್ಲಿ ತಪಸ್ಸನ್ನು ಆಚರಿಸಿ ಪುತ್ರರತ್ನನನ್ನು ವರವನ್ನಾಗಿ ಪಡೆಯುತ್ತಾರೆ. ಆ ಪರಮೇಶ್ವರನ ವರದಿಂದಲೇ ಜಾಂಬವತಿಯಲ್ಲಿ ಸಾಂಬಾ ಎಂಬ ಕೃಷ್ಣನ ಮಗನು ಜನಿಸುತ್ತಾನೆ. ಕೃಷ್ಣನ ಕಥೆಯಲ್ಲಿ ಸಾಂಬನ ಪಾತ್ರ ಪ್ರಮುಖವಾಗಿದೆ.

೫. ಅನುಶಾಸನ ಪರ್ವದಲ್ಲಿ ಶಿವ ಪಾರ್ವತಿಯರ ಸಂಭಾಷಣೆಯನ್ನು ಕಾಣಬಹುದು.

ಹರಿ ಸ್ವರೂಪಿಯಾದ ಕೇಶವ  ಮತ್ತು ಪರಮೇಶ್ವರನಾದ ಶಿವನು ಬೇರೆ ಬೇರೆಯಲ್ಲಾ

ಶಿವ ಮತ್ತು ಕೇಶವನ ಅಭಿನ್ನತ್ವವನ್ನು ವ್ಯಾಸರು ಸ್ಪಷ್ಟವಾಗಿ ವಿವರಿಸಿ ಹೇಳಿದ್ದಾರೆ. ವ್ಯಾಸರಿಂದಲೇ ವಿಷ್ಣು ಸಹಸ್ರನಾಮ ಮತ್ತು ಶಿವ ಸಹಸ್ರನಾಮವೆರಡೂ ನಮಗೆ ಪಂಚಮ ವೇದದಲ್ಲಿ ಪ್ರಾಪ್ತಿಯಾಗಿದೆ. ಈ ಮಹಾಕಾವ್ಯದಲ್ಲಿ ಶಿವನು ವಿಷ್ಣುವಿನ ಆತ್ಮಸ್ವರೂಪಿ ಎಂದೂ ವಿಷ್ಣುವೂ ಶಿವನ ಆತ್ಮಸ್ವರೂಪಿ ಎಂದೂ ಸಾಬೀತುಪಡಿಸುವು ಅನೇಕ ಪ್ರಸಂಗಗಳಿವೆ.

ಅರ್ಜುನನಿಗೆ ವನಪರ್ವದಲ್ಲಿ ಶಿವನ ದರ್ಶನವಾದಾಗ ತಾನು ಪ್ರತೀರಾತ್ರಿ  ಕೃಷ್ಣನಿಗೆ ಭಕ್ತಿಯಿಂದ ಅರ್ಪಿಸುತ್ತಿದ್ದ ಪೂಜಾ ಸಾಮಗ್ರಿಗಳನ್ನು  ಆ ಮಹಾದೇವನ ಮೇಲೆ ಕಂಡು ಬೆರಗಾಗುತ್ತಾನೆ.

ವೇದವ್ಯಾಸರು ಈ ಸತ್ಯವನ್ನು ಹರಿವಂಶಪರ್ವದಲ್ಲಿ  ಬೆಳಕಿಗೆ ತರುತ್ತಾರೆ.

शिवायविष्णुरूपाय विष्णवेशिवरूपिणे ।
यथान्तरं नपश्यमितेन तौदिशतः शिवम् ॥

ಹೀಗೆ ಶಿವ ಮತ್ತು ವಿಷ್ಣುವು ಹರಿಹರರಾಗಿ ಜಗತ್ತಿನಲ್ಲಿ ಶುಭವನ್ನುಂಟು ಮಾಡುತ್ತಾರೆ. ಮಹಾಭಾರತದಲ್ಲಿ ಇವರೀರ್ವರು  ಜೊತೆಗೂಡಿ  ದ್ವಾಪರ ಯುಗದಲ್ಲಿ ಧರ್ಮವನ್ನು ಸಂಸ್ಥಾಪಿಸಿ ಜಗದೋದ್ಧಾರಕರಾಗಿ ಮಂಗಳವನ್ನುಂಟು ಮಾಡುತ್ತಾರೆ.

(ಈ ಲೇಖನ ಡಾ|| ಲಕ್ಷ್ಮೀ ತೆಲಿದೇವರ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This is a Kannada translation of an article written in English by Dr. Lakshmi Telidevara)

(Image credit: indiatoday.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply