close logo

ಸರಸ್ವತೀ ಸೂಕ್ತ: ಒಂದು ವಿಚಾರ ಲಹರಿ – ಭಾಗ ೨

ಈ ಲೇಖನದ ಮೊದಲ ಭಾಗದಲ್ಲಿ ಸರಸ್ವತೀ ಸೂಕ್ತದ ಮೊದಲಾರ್ಧದ (ಒಂಭತ್ತು ಮಂತ್ರಗಳು) ದೃಷ್ಟಿಕೋನದ ಜೊತೆಗೆ ಅನುಸಂಧಾನ ನಡೆಸಿದೆವು. ಅದರ ಜೊತೆಯಲ್ಲೇ ಇತಿಹಾಸದ ಕೆಲವು ಮಜಲುಗಳನ್ನು ಶೋಧಿಸಿದೆವು. ಈ ಸೂಕ್ತದ  ಬಹುಮುಖ್ಯ ವಿಚಾರ ಗತಿಶೀಲತೆ. ನದಿಯ ಹರಿವಿಗೆ ಗತಿಯಿರುವುದು ಭೌತಿಕ ಸತ್ಯ. ಆದರೆ, ಸೂಕ್ತದಲ್ಲಿ ಅದು ವಿಶ್ವದ ಗತಿಯನ್ನು ಪ್ರತಿನಿಧಿಸುವ ಪ್ರತಿಮೆಯಾಗಿ ಏರಿಸಲ್ಪಟ್ಟಿದೆ. ಸರಸ್ವತೀ ಆ ಗತಿಯ ಪೂರ್ಣತೆಯನ್ನು ಪ್ರತಿನಿಧಿಸುವ ದೇವಿಯಾಗಿದ್ದಾಳೆ. ಸೂಕ್ತದ ದ್ವಿತೀಯಾರ್ಧದಲ್ಲಿ ಈ ಗತಿಶೀಲತೆ ಯಾವ ಆಯಾಮಗಳನ್ನು ಪಡೆದುಕೊಂಡಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಸಪ್ತಸೋದರಿಯರಿಂದ ಆರಾಧಿತಳು: ಸಂಸ್ಕೃತಿಯ ಮೂಲ ಸೆಲೆಯಿವಳು

ಹತ್ತನೆಯ ಮಂತ್ರದಲ್ಲಿ ಸರಸ್ವತಿಯು ಸಪ್ತಸೋದರಿಯರಿಂದ ಆರಾಧಿಸಲ್ಪಟ್ಟವಳು ಎಂದಿದೆ. ಈ ಮಂತ್ರ ಅತ್ಯಂತ ಗಹನವಾಗಿದೆ ಮತ್ತು ಅನೇಕಾನೇಕ ಅರ್ಥಗಳಿಗೆ ದಾರಿಮಾಡಿಕೊಡುತ್ತದೆ. ಮೊದಲನೆಯದಾಗಿ, ಸರಸ್ವತೀ ನದಿಯಾದ್ದರಿಂದ ‘ಸಪ್ತಸೋದರಿಯರು’ ಬಾಹ್ಯಾರ್ಥದಲ್ಲಿ ನದಿಗಳಾಗಿರುವ ಸಾಧ್ಯತೆಯೇ ಹೆಚ್ಚು.  ಗಮನಿಸಬೇಕಾದ ವಿಷಯವೆಂದರೆ ಸರಸ್ವತೀ ಸೂಕ್ತ ಋಗ್ವೇದದ ಆರನೆಯ ಮಂಡಲದಲ್ಲಿ ಬರುತ್ತದೆ. ಇದೇ ಮಂಡಲದಲ್ಲಿ ಗಂಗೆ, ಯಮುನೆಯರ ಪ್ರಸ್ತಾಪವಿದೆ. ಸರಸ್ವತೀ ಹರಿಯುವ ಭಾಗದಲ್ಲಿ ಅಶಿಕ್ನಿ, ವಿಪಾಶ, ಶತದ್ರು, ದೃಷದ್ವತೀ-ನದಿಗಳು ಹರಿಯುತ್ತವೆ. ಅದೆಲ್ಲ ಭಾಗಗಳಲ್ಲಿ ವೈದಿಕ ಸಂಸ್ಕೃತಿಯ ವಿಕಾಸವಾಗುತ್ತಿದ್ದ ಕಾಲವದು. ಈ ವಿಕಸನದ ಪ್ರಮುಖ ತಾಣ ಸರಸ್ವತೀ ನದಿಯ ದಂಡೆ. ಅದೇ ಬ್ರಹ್ಮಾವರ್ತ. ಅಲ್ಲಿಯೇ ಉತ್ತಮರಲ್ಲಿ ಉತ್ತಮರಾದ ಋಷಿಗಳು ತಪಸ್ಸನ್ನಾಚರಿಸುತ್ತಿದ್ದುದು. ಈ ಭೌತಿಕ ಗೌರವವೇ ಸರಸ್ವತಿ ಸೋದರಿಯರಿಂದ, ಎಂದರೆ ಇತರ ನದಿಗಳಿಂದ, ಆರಾಧಿಸಲ್ಪಟ್ಟವಳು ಎನ್ನುವ ಅರ್ಥವನ್ನು ಮಂತ್ರದಲ್ಲಿ ಪಡೆದುಕೊಂಡಿದೆ. ಅರ್ಥಾತ್ ಇನ್ನಿತರ ನದಿಗಳ ದಂಡೆಯಲ್ಲಿ ನಡೆಯುತ್ತಿದ್ದ ವಿಕಾಸಕ್ಕೆ ಸರಸ್ವತೀ ನದಿಯ ದಂದೆಯೇ ಮೂಲಪ್ರೇರಣೆ ಎಂದು.

ಆದರೆ ಆದರೆ ಮಂತ್ರದಲ್ಲಿ ಸಪ್ತ-ಸಿಂಧು ಎಂದಿಲ್ಲ. ಏಳು ನದಿಗಳು ಎನ್ನುವುದು ಸ್ಪಷ್ಟವಾಗಿ ಉಲ್ಲೇಖಿತವಾಗಿಲ್ಲ. ಇಲ್ಲಿ ಸಪ್ತ ಸೋದರಿಯರು ಎಂದಿರುವುದರಿಂದ ಇದು ನದಿಗಳನ್ನು ಮೀರಿದ ಅನೇಕ ಅಂಶಗಳನ್ನು ಒಳಗೊಂಡಿದೆ. ವೈದಿಕ ಸಂಸ್ಕೃತಿಯಲ್ಲಿ ‘ಸಪ್ತ’ ಎನ್ನುವುದು ಅನೇಕ ಅಂಶಗಳಿಗೆ ಪ್ರತಿನಿಧಿಯಾಗಿದೆ. ಒಂದೆಡೆ ಸಪ್ತರ್ಷಿಗಳಿದ್ದಾರೆ. ಮತ್ತೊಂದೆಡೆ ಸೂರ್ಯನಿಗೆ ಏಳು ಕುದುರೆಗಳು. ಜ್ಞಾನವನ್ನು (ಅಶ್ವಶಕ್ತಿ ಮತ್ತು ವಿಚಾರಶಕ್ತಿ) ಪ್ರತಿನಿಧಿಸುವ ಅನೇಕ ವಿಷಯಗಳು ‘ಸಪ್ತ’ದ ಜೊತೆಗೆ ಸಂಬಂಧ ಪಡೆದುಕೊಂಡಿದೆ. ಸರಸ್ವತೀ ಋತಪೂರ್ಣಳು. ವಿಚಾರಶಕ್ತಿ ಮತ್ತು ಗತಿಶೀಲತೆಯ ಸಂಪೂರ್ಣತೆಯನ್ನು ಪ್ರತಿನಿಧಿಸುವವಳು. ಆದ್ದರಿಂದಲೇ, ಸಪ್ತ’ ಪ್ರತಿನಿಧಿಸುವ ಜ್ಞಾನದ ಎಲ್ಲ ವಿಚಾರಗಳಿಗೆ ಅವಳು ಹಿರಿಯಕ್ಕ. ಪರಿಪೂರ್ಣತೆಯ ಮತ್ತೊಂದು ಆಯಾಮವೆಂದರೆ ಮೂಲತತ್ವ ಅಥವಾ ಆಧಾರವಾಗಿರುವುದು. ಈ ಅರ್ಥದಲ್ಲಿ ಸರಸ್ವತಿ ಒಟ್ಟು ವೈದಿಕ ಸಂಸ್ಕೃತಿಯ, ದೃಷ್ಟಿಯ ಮೂಲಚೈತನ್ಯವಾಗಿದ್ದಾಳೆ, ಆಧಾರವಾಗಿದ್ದಾಳೆ ಎನ್ನುವುದು ಮಂತ್ರದ ದೃಷ್ಟಿಕೋನ. ಈ ಚೈತನ್ಯದ ಬಹುಮುಖ್ಯ ಗುಣ ಗತಿಶೀಲತೆಯನ್ನು ಕಾಯ್ದುಕೊಳ್ಳುವುದು ಎಂದು ಹೇಳಬಹುದಾಗಿದೆ. ಹನ್ನೆರಡನೆಯ ಮಂತ್ರದಲ್ಲಿ ಇದರ ಮತ್ತಷ್ಟು ವಿವರಣೆಯಿದೆ.

ನಿಂದಕರಿಂದ ಗತಿಯನ್ನು ಕಾಯುವವಳು

ಹನ್ನೊಂದನೆಯ ಮಂತ್ರದಲ್ಲಿ ಎರಡು ಮಾರ್ಮಿಕವಾದ ವಿವರಣೆಯಿದೆ. ‘ಸರಸ್ವತೀ ನಮ್ಮನ್ನು ನಿಂದಕರಿಂದ ಕಾಪಾಡಲಿ’ ಎನ್ನುವುದು ಒಂದು ವಿವರಣೆ. ನಿಂದಕರಿಂದ ಏನಾಗುತ್ತದೆ? ನಮ್ಮ ಸಹಜಗತಿಗೆ ಅಥವಾ ನಿರ್ಧಾರಿತ ಗತಿಗೆ ಬಾಧೆಯಾಗುತ್ತದೆ. ನಾವು ಮಾಡುವ, ಮಾಡುತ್ತಿರುವ ಕೆಲಸ, ನಮ್ಮ ಚಾಲನೆ ಇವುಗಳನ್ನು ನಿಂದನೆ ಬಾಧಿಸುತ್ತದೆ. ಆತ್ಮವಿಶ್ವಾಸ ಕುಗ್ಗಿಸುತ್ತದೆ. ನಿಂದಕರಿಂದ ಮುಕ್ತಿಯೆಂದರೆ ನಿರ್ಬಾಧಿತವಾದ ಗತಿ. ಅಂದರೆ, ಈ ವಿವರಣೆ, ಗತಿಶೀಲತೆಗೆ ಕೊಟ್ಟ ಪ್ರಾಮುಖ್ಯತೆಯಾಗಿದೆ. ಸರಸ್ವತಿ ಋತಪ್ರವಾಹವನ್ನು ಪ್ರತಿನಿಧಿಸುವವಳಾದ್ದರಿಂದ, ಋತದ ಗತಿಗೆ ತಕ್ಕಂತೆ ವಿಶ್ವ ನಡೆಯುವುದೇ ಸಂಸ್ಕೃತಿಯ ಬಹುದೊಡ್ಡ ಕಾಳಜಿ. ಆದ್ದರಿಂದ, ನಿಂದಕರೆಂದರೆ ಋತಪ್ರವಾಹಕ್ಕೆ ಅಡ್ಡಿ ತರುವವರೆಂದಾಗುತ್ತದೆ. ಋತಪೂರ್ಣಳಾದ ದೇವಿಯೇ ನಮ್ಮನ್ನು ಋತಘಾತಕರಿಂದ ರಕ್ಷಿಸಬೇಕು ಎನ್ನುದು ಇಲ್ಲಿನ ಅರ್ಥ.

ಇದೇ ಮಂತ್ರ ಮುಂದುವರೆದು, ಸರಸ್ವತೀ ದೇವಿ ಪೃಥ್ವಿಯನ್ನೂ ಅಂತರಿಕ್ಷವನ್ನೂ ತನ್ನ ಪ್ರಕಾಶದಿಂದ ತೋಯಿಸಲಿ ಎನ್ನುತ್ತದೆ. ಋಗ್ವೇದದೆಲ್ಲೆಡೆ ಕಾವ್ಯಾತ್ಮಕತೆ ಮತ್ತು ತಾತ್ವಿಕತೆ ಅಮೋಘವಾಗಿ ಒಡನಾಡುತ್ತದೆ. ಮಂತ್ರದ ಈ ಭಾಗದಲ್ಲಿ ಅದು ಸ್ಪಷ್ಟವಾಗಿ ಗೋಚರವಾಗುತ್ತದೆ. ಪೃಥ್ವಿ ಮತ್ತು ಅಂತರಿಕ್ಷಗಳೆಂದರೆ ಇಹ-ಪರಗಳು. ಜೀವನದ ಸೌಂದರ್ಯವೆಂದರೆ ಇಹ-ಪರಗಳ ಸಾಮರಸ್ಯ. ಅದಕ್ಕೆ ಅತ್ಯಾವಶ್ಯಕವಾದ್ದು ಇಹ-ಪರಗಳು ಸ್ಪಷ್ಟವಾಗಿ ಗೋಚರವಾಗಬೇಕಾದ್ದು.   ಇಹ-ಪರಗಳು ಪ್ರಕಾಶಮಾನವಾಗಿ ಕಾಣಬೇಕಾದ್ದು ಜೀವನಕ್ಕೆ ಅತ್ಯವಶ್ಯ. ಈ ಸಾಮರಸ್ಯದ ಸಾಧ್ಯವಾಗುವುದು ಋತಪ್ರವಾಹದಲ್ಲಿ. ಇಹ-ಪರಗಳ ಜೀವನ ಋತಪ್ರವಾಹಕ್ಕೆ ಅನುಗುಣವಾಗಿ ನಡೆಯಬೇಕಾದರೆ ಋತಪೂರ್ಣಳಾದ ದೇವಿ ತೋರುವ ಬೆಳಕಿನಲ್ಲೇ ಇದು ನಡೆಯಬೇಕು. ಆದ್ದರಿಂದಲೇ ಸರಸ್ವತಿಗೆ ಈ ಪ್ರಾರ್ಥನೆ. ತೋಯಿಸಲಿ ಎನ್ನುವ ಪದಪ್ರಯೋಗ ಗಮನಾರ್ಹ. ಸರಸ್ವತೀ ನದಿಯಾದ್ದರಿಂದ ಈ ಪದ. ತೋಯುವ-ಮೀಯುವ ಅನುಭವ ನಮ್ಮನ್ನು ಬದಲಾಯಿಸುವಂತಹದ್ದು. ಆದರೆ ಈ ಹಾದಿಯಲ್ಲಿ ಪ್ರತಿಕ್ಷಣವೂ ಬದಲಾವಣೆ.

ಅಂತಃಸ್ಫುರಣೆ ಮತ್ತು ಪ್ರಜ್ಞಾವಂತಿಕೆ

ಹಿಂದಣ ಎರಡು ಮಂತ್ರಗಳು ಭೌತಿಕ ಮತ್ತು ಆಧ್ಯಾತ್ಮಿಕ ಆಯಾಮವನ್ನು ಹೊಂದಿವೆ. ಹದಿಮೂರನೆಯ ಮಂತ್ರದಲ್ಲಿ ಹದಿಮೂರನೆಯ ಮಂತ್ರದಲ್ಲಿ ಮಾನಸಿಕವಾದ ಆಯಾಮವಿದೆ.  ಸರಸ್ವತಿ ಇಲ್ಲಿ ಅಂತಃಸ್ಫುರಣೆ ಮತ್ತು ಪ್ರಜ್ಞಾವಂತಿಕೆಯನ್ನು ಪ್ರತಿನಿಧಿಸುತ್ತಾಳೆ. ತಾತ್ವಿಕವಾಗಿಯೂ ಇದು ಬಹುಮುಖ್ಯ ವಿಷಯ. ಋತದ ದಾರಿಯಲ್ಲಿ ನಡೆಯುವುದಕ್ಕೆ ಅಂತಃಸ್ಫುರಣೆ ಮತ್ತು ಪ್ರಜ್ಞಾವಂತಿಕೆ ಮುಖ್ಯ ಎನ್ನುವುದು ಈ ಮಂತ್ರಭಾಗದ ಮುಖ್ಯ ಅಂಶ. ಅರ್ಥಾತ್, ಇದು ಬುದ್ಧಿಮತ್ತೆ ಮತ್ತು ತರ್ಕವನ್ನು ಮೀರಿದ ವಿಷಯ. ಈ ಮಂತ್ರದಲ್ಲಿ ಭಾರತೀಯ ಸಂಸ್ಕೃತಿ ಸಾವಿರಾರು ವರ್ಷಗಳಿಂದ ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿರುವ ಒಂದು ಕಳಕಳಿಯಿದೆ. ಜ್ಞಾನದ ಮೂಲಸೆಲೆ ಏನು ಎನ್ನುವುದೇ ಆ ಪ್ರಶ್ನೆ ಮತ್ತು ಕಳಕಳಿ. ಬುದ್ಧಿ ಮತ್ತು ತರ್ಕವಾದರೆ ಅದೊಂದು ಬಗೆಯ ಸಂಸ್ಕೃತಿ ಮತ್ತು ನಾಗರೀಕತೆಗೆ ದಾರಿಯಾಗುತ್ತದೆ. ಆದರೆ, ಭಾರತೀಯ ಸಂಸ್ಕೃತಿ ಒಟ್ಟು ಕೊಟ್ಟಿರುವುದು ಅಂತಃಸ್ಫುರಣೆ ಮತ್ತು ಪ್ರಜ್ಞಾವಂತಿಕೆಗೆ.

ಇದು ಏಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ವಿಶ್ವದ ಚಲನೆಯ ಮಾರ್ಗ ಬುದ್ಧಿ-ತರ್ಕಗಳನ್ನು ಮೀರಿದ್ದು ಎನ್ನುವ ಮರ್ಮ ಇಲ್ಲಿದೆ. ಋತದ ಮಾರ್ಗದಲ್ಲಿ ನಡೆಯುವುದಕ್ಕೆ ಬುದ್ಧಿ-ತರ್ಕಗಳನ್ನು ಮೀರಿದ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾದ್ದು ಅವಶ್ಯಕ.  ಋತದ ಮಾರ್ಗದಲ್ಲಿ ಸಾಗುವುದಕ್ಕೆ ಧರ್ಮವೇ ಅವಶ್ಯವಾದ್ದರಿಂದ, ಧರ್ಮವೆನ್ನುವುದು ಬಹುಸೂಕ್ಷ್ಮ ಎನ್ನುವ ಅಂಶವು ಇಲ್ಲಿದೆ. ಧರ್ಮವೂ ಕೂಡ ಕೇವಲ ಬುದ್ಧಿ-ಶಕ್ತಿ, ತರ್ಕಗಳನ್ನು ಮೀರಿದ್ದು. ಹೀಗೆ ವೈದಿಕ ಸಂಸ್ಕೃತಿ ಬುದ್ಧಿಯನ್ನು ಮೀರಿದ ಮಾನವಿಕ, ದೈವಿಕ ಶಕ್ತಿಗಳನ್ನು ಬೆಳೆಸುಕೊಳ್ಳುವುದನ್ನು ಬಹುಮುಖ್ಯ ವಿಷಯವಾಗಿ ಸದಾ ಪ್ರತಿಪಾದಿಸುತ್ತಿದೆ. ಅಲ್ಲದೆ, ಮಂತ್ರವು ದೇವಿಯನ್ನು ಸಂಚಾರವೈಶಾಲ್ಯವುಳ್ಳವಳು ಎನ್ನುತ್ತದೆ. ಹೋಲಿಕೆ ರಥಸಂಚಾರಕ್ಕೆ. ಎಲ್ಲದಿಕ್ಕಿನಲ್ಲೂ ಹರಿಯಬಲ್ಲವಳು ಆದರೆ ಚಕ್ರದ ನಿಯಮಕ್ಕೆ ಒಳಪಟ್ಟವಳು. ಅಂತಃಸ್ಫುರಣೆ ಮತ್ತು ಪ್ರಜ್ಞಾವಂತಿಕೆಯಿಂದ ಆ ಚಕ್ರದ ನಿಯಮಗಳನ್ನು ಪ್ರತ್ಯಕ್ಷ ಮಾಡಿಕೊಳ್ಳುವುವುದು ಅತ್ಯವಶ್ಯ. ಈ ಅಂತಃಸ್ಫುರಣೆ ಮತ್ತು ಪ್ರಜ್ಞಾವಂತಿಕೆಯನ್ನು ಬೆಳೆಸುಕೊಳ್ಳುವುದಕ್ಕೆ ಬೇರೆಯೇ ಮಾರ್ಗಗಳು ಬೇಕಾಗುತ್ತದೆ. ಆದ್ದರಿಂದಲೇ ಭಾರತೀಯ ಸಂಸ್ಕೃತಿ ಜ್ಞಾನವನ್ನು ಬೇರೆಯ ರೀತಿಯಲ್ಲಿ ಸೃಷ್ಟಿಸಿತು.  ಅಪರಾವಿದ್ಯೆ ಪರಾವಿದ್ಯೆಗೆ ದಾರಿಮಾಡಿಕೊಡುವ ರೀತಿಯಲ್ಲೇ ನಮ್ಮ ಜ್ಞಾನ ಸೃಷ್ಟಿಯಾಯಿತು.

ಋತಕ್ಕೆ ಬೇಕಾದ ತಪಸ್ಸು

೧೪ನೆಯ ಮಂತ್ರ ಮತ್ತಷ್ಟು ಮಾರ್ಮಿಕವಾಗಿದೆ. ದೇವಿಯನ್ನು ನಮ್ಮ ಇಷ್ಟಾರ್ಥದ ಸಂಪತ್ತನ್ನು ಕೊಡು ಎಂದು ಪ್ರಾರ್ಥಿಸುತ್ತದೆ ಮಂತ್ರಭಾಗ. ಅರ್ಥಾತ್ ಜ್ಞಾನದ ಈ ಮಾರ್ಗದಲ್ಲೇ ನಾವು ಎಲ್ಲಾ ಬಗೆಯ ಸಂಪತ್ತನ್ನು ಗಳಿಸಿಕೊಳ್ಳಬೇಕು. ಸಂಪತ್ತು ಎನ್ನುವುದು ಇಲ್ಲಿ ಕೇವಲ ಭೌತಿಕ ಸಂಪತ್ತಾಗಿರದೆ ಆಧ್ಯಾತ್ಮಿಕ ಸಂಪತ್ತೂ ಆಗಿದೆ. ಋತಮಾರ್ಗದಲ್ಲಿ ಸಾಗಿದರೆ ಎಲ್ಲಾಬಗೆಯ ಸಂಪತ್ತೂ ಇದೆ ಎನ್ನುವ ಅರ್ಥವೂ ಇದೆ. ಆದರೆ ಮಂತ್ರದ ಮುಂದುವರೆದ ಭಾಗ ನಮ್ಮನ್ನು ಬಡಿದೆಚ್ಚರಿಸುತ್ತದೆ.  ‘ದೇವಿ, ನಿನ್ನ ಕಿರಣಗಳಿಂದ ನಮ್ಮನ್ನು ಸುಡಬೇಡ, ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸಬೇಡ’ ಎನ್ನುತ್ತದೆ ಮಂತ್ರ. ಈ ಎಚ್ಚರಿಕೆ ಮೇಲ್ನೋಟಕ್ಕೆ ಆಶ್ಚರ್ಯ ತರಿಸುತ್ತದೆಯಾದರು ಅರ್ಥಗರ್ಭಿತವಾಗಿದೆ. ಋತಪೂರ್ಣದೇವಿಯ ಬೆಳಕು, ಜ್ಞಾನವನ್ನು ಗ್ರಹಿಸಿ ಆ ಮಾರ್ಗದಲ್ಲಿ ಸಾಗುವುದಕ್ಕೆ ಮನುಕುಲಕ್ಕೆ ಒಂದು ತಪಸ್ಸು ಬೇಕು, ವಿಶೇಷ ತಯಾರಿ ಬೇಕು. ಆ ಕಟುಸತ್ಯವನ್ನು ಪ್ರಾರ್ಥನೆಯ ಮೂಲಕ ಈ ಮಂತ್ರದ ಭಾಗ ಪ್ರತಿನಿಧಿಸುತ್ತಿದೆ. ಭಾರತೀಯ ಸಂಸ್ಕೃತಿಯ ಬಹುದೊಡ್ಡ ಯಶಸ್ಸು ಇಲ್ಲಿ ಅಡಗಿದೆ. ಸಹಸ್ರಾರು ವರ್ಷಗಳಿಂದ ಸತತವಾಗಿ ಋತಮಾರ್ಗದ ಭಾರವನ್ನು, ಅದರ ಬೆಳಕಿನ ಅಮೋಘತೆಯನ್ನು ತಡೆದುಕೊಂಡು ವೈಶವಿಕ ಜೀವನವನ್ನು ನಡೆಸಿದಂತಹ ಮಹಾಮಹಿಮರನ್ನು ಸದಾ ಈ ಸಂಸ್ಕೃತಿ ಸೃಷ್ಟಿಸಿದೆ. ಪ್ರತಿಕಾಲದಲ್ಲೂ ಸರಸ್ವತೀ ದೇವಿಯ ಪ್ರೇರಣೆಯಿಂದ ಋತಮಾರ್ಗವನ್ನು ಗ್ರಹಿಸಿ ಸಾಮಾನ್ಯರನ್ನು ಅದರ ದಾರಿಯಲ್ಲಿ ಸುಲಭವಾಗಿ ನಡೆಯುವಂತೆ ಮಾಡುವ ಋಷಿ-ಮುನಿಗಳು ಆಗಿಹೋಗಿದ್ದಾರೆ.

ಹದಿನಾಲ್ಕು ಮಂತ್ರಗಳುಳ್ಳ ಈ ಸರಸ್ವತೀ ಸೂಕ್ತ ಹೀಗೆ ವೈದಿಕ ಸಂಸ್ಕೃತಿಯ ದೃಷ್ಟಿಕೋನದ ಅತ್ಯುತ್ಕೃಷ್ಟ  ನಿದರ್ಶನವಾಗಿದೆ. ಏಕಕಾಲದಲ್ಲಿ ಸರಸ್ವತಿ ನದಿಯಾಗಿ, ಋತಪ್ರವಾಹವನ್ನು ಪ್ರತಿನಿಧಿಸುವ ಒಬ್ಬ ದೇವತೆಯಾಗಿ ಮತ್ತು ಜ್ಞಾನದ ಮೂಲಸೆಲೆಯಾಗಿ ನಮಗೆ ಇಲ್ಲಿ ಗೋಚರವಾಗುತ್ತಾಳೆ. ಈ ಸೂಕ್ತದಲ್ಲೇ ಮುಂದೆ ದೇವಿ ಯಾವ ರೀತಿಯಲ್ಲಿ ಸ್ಪಷ್ಟವಾಗಿ ಜ್ಞಾನದ ಅಧಿದೇವತೆಯಾಗಿ ಪುರಾಣಗಳಲ್ಲಿ ಬರುತ್ತಾಳೆ ಎನ್ನುವುದು ಗೋಚರವಾಗುತ್ತದೆ. ಋತವನ್ನು ಅರ್ಥಮಾಡಿಕೊಳ್ಳುವುದಕ್ಕೂ ಈ ಸೂಕ್ತ ಅತ್ಯುತ್ತಮ ನಿದರ್ಶನವಾಗಿದೆ.

ಪ್ಲವನಾಮ ಸಂವತ್ಸರದಲ್ಲಿ ಸರಸ್ವತಿಯ ಋತಪ್ರವಾಹ, ಋತಪೂರ್ಣತೆ ನಮ್ಮೆಲ್ಲರನ್ನೂ ಅಂತಃಸ್ಫುರಣೆ ಮತ್ತು ಪ್ರಜ್ಞಾವಂತಿಕೆಯನ್ನು ತುಂಬಲಿ. ಅವಳು ಹರಿಸುವ ಬೆಳಕಿನಲ್ಲಿ ನಮಗೆ ಋತದಹಾದಿ ಸ್ಪಷ್ಟವಾಗಿ ಗೋಚರವಾಗಿ ನಮ್ಮೆಲ್ಲರ ಜೀವನವನ್ನು ಬೆಳಗಲಿ ಎಂದು ಪ್ರಾರ್ಥಿಸುತ್ತೇನೆ. ಯುಗಾದಿಯ ಶುಭಾಶಯಗಳು.

(ಮೊದಲ ಲೇಖನವನ್ನು ಇಲ್ಲಿ ಓದಬಹುದು)

(Image credit: Colourbox)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply