close logo

ಋಗ್ವೇದದಲ್ಲಿ ನದಿಗಳ ಮಹತ್ವ

ಋಗ್ವೇದದಲ್ಲಿ ನದಿಗಳ ಪಾತ್ರ ಬಹಳ ಪ್ರಧಾನವಾದದ್ದು. ಋಗ್ವೇದದಲ್ಲಿ ಉಲ್ಲೇಖಗೊಂಡ ನದಿಗಳ ಅಧ್ಯಯನದ ಮೂಲಕ ನಮಗೆ ಬಹಳಷ್ಟು ಪ್ರಜ್ಞೆ, ಒಳನೋಟಗಳು ದೊರಕುತ್ತವೆ. ಹತ್ತನೇ ಮಂಡಲದ 75ನೆಯ ಸೂಕ್ತಕ್ಕೆ ನದೀಸೂಕ್ತ ಅಥವಾ ನದಿಸ್ತುತಿ ಸೂಕ್ತವೆಂದೇ ಹೇಳಲಾಗುತ್ತದೆ. ಇದರಲ್ಲಿ ಒಂಬತ್ತು ಋಕ್ಕುಗಳಿದ್ದು, ಹೆಸರೇ ಹೇಳುವಂತೆ, ನದಿಗಳ ವರ್ಣನೆ ಮತ್ತು ಸ್ತುತಿಗಳೇ ಇದರ ವಸ್ತು.

ಆದರೆ, ನದಿಗಳ ವರ್ಣನೆ ಮತ್ತು ಸ್ತುತಿಗಳು ನದೀಸೂಕ್ತಕ್ಕೆ ಮಾತ್ರ ಸೀಮಿತವಾಗಿಲ್ಲ. ಋಗ್ವೇದದ ಸಮಸ್ತ ಸೂಕ್ತಕಾರರು, ದ್ರಷ್ಟಾರರು ಪ್ರತಿಯೊಂದು ಮಂಡಲದಲ್ಲೂ ಬೇರೆ ಬೇರೆ ನದಿಗಳನ್ನು ವರ್ಣಿಸಿ ಪೂಜಿಸಿದ್ದಾರೆ.

ಋಗ್ವೇದದಲ್ಲಿ ಬರುವ ನದಿಗಳ ಸೂಕ್ತ/ಋಕ್ಕುಗಳಲ್ಲಿ ಇರುವ ಮಾಹಿತಿ

ಋಗ್ವೇದದಲ್ಲಿ ನದಿಗಳ ವಿಷಯವನ್ನು ಕೆಳಗಿನ ಶೀರ್ಷಿಕೆಗಳಲ್ಲಿ ನಾವು ಕಾಣಬಹುದು.

  • ಸಾಧಾರಣ ಮಾಹಿತಿ: ಋಗ್ವೇದದಲ್ಲಿ ಇಪ್ಪತ್ತೊಂದಕ್ಕೂ ಹೆಚ್ಚು ನದಿಗಳು ಉಲ್ಲೇಖವಾಗಿವೆ. ಇವುಗಳಲ್ಲಿ ಸಿಂಧು, ಸರಸ್ವತಿ, ಮತ್ತು ಸರಯೂ ಬಹಳವಾಗಿ ನೀರಿರುವ ನದಿಗಳು. (. ಸಂ. 10.64. 9) ರಸಾ (ಅವೆಸ್ತಾ ಹೆಸರು ರಂಘಾ) ಎಂಬ ನದಿಯು ಬಹಳ ಬಹಳ ಆಳವಾದದ್ದು. (. ಸಂ. 5.53.9, 10.108.1, 2) ಸಾಧಾರಣವಾಗಿ ನದಿಗಳನ್ನು ಸ್ತ್ರೀಲಿಂಗವಾಚಕವಾದ ಶಬ್ದಗಳಿಂದ ಕರೆಯುವುದು ರೂಢಿ. ಆದರೆ, ಕೆಲವು ನದಿಗಳನ್ನು ನದಎಂದು ಪುಲ್ಲಿಂಗವಾಚಕವಾಗಿ ಸೂಚಿಸುತ್ತಾರೆ. ಉದಾಹರಣೆಗೆ, ಸರಸ್ವಾನ್, ಬ್ರಹ್ಮಪುತ್ರ.

ಓದುಗರಿಗೆ ಋಗ್ವೇದದ ಭೂಭಾಗದ ಕಲ್ಪನೆ ನೀಡುವುದಕ್ಕಾಗಿ ಕೆಳಗೆ ನದಿಗಳ ನಕ್ಷೆಯನ್ನು (ಶ್ರೀಕಾಂತ ತಲಗೇರಿಯವರThe Rigveda, A Historical Analysis’ ಪುಸ್ತಕದಿಂದ) ಕೊಟ್ಟಿದ್ದೇನೆ.

  • ಋಗ್ವೇದದ ಋಷಿಗಳು: ಋಗ್ವೇದದ ಸೂಕ್ತಕಾರರಾದ ಋಷಿಗಳು, ಅವರ ವಂಶಾವಳಿ, ಸಾಧನೆ, ಸಿದ್ಧಿಗಳು; ಅವರು ಯಾವ ನದಿಗಳನ್ನು ವರ್ಣಿಸಿದ್ದಾರೆ, ಅವರ ಸೂಕ್ತಗಳಿಂದ ನಮಗೆ ಲಭಿಸುವ ಹೊಸ ಚಿಂತನೆಗಳು ಯಾವುವು, ಇತ್ಯಾದಿ.

  • ಕಥೆಗಳು: ಋಗ್ವೇದದಲ್ಲಿ, ಹೆಚ್ಚೇಕೆ, ನಮಗೆ ಕೊಡುಗೆಯಾಗಿ ಬಂದ ಇತಿಹಾಸ, ಪುರಾಣದ ಕಥೆಗಳೆಲ್ಲ ರೂಪಕಗಳೇ. ಕೌತುಕವೆಂದರೆ, ಋಗ್ವೇದದ ಕಥೆಗಳೇ ಇತರ ಪುರಾಣಇತಿಹಾಸಗಳಲ್ಲೂ ಮತ್ತೊಮ್ಮೆ ಕೇಳಸಿಗುತ್ತವೆ. ಆದರೆ, ಇವುಗಳು ಕಥೆಗಳು ಮಾತ್ರವಲ್ಲ, ಇವುಗಳಿಗೆ ಒಂದು ಗೂಢಾರ್ಥ ಇದೆ, ಇವುಗಳಿಗೆ ಐತಿಹಾಸಿಕ, ಭೌಗೋಳಿಕ, ದಾರ್ಶನಿಕ ಆಯಾಮಗಳಿವೆ ಎಂಬುದನ್ನು ಅಲ್ಲಗಳೆಯಲು ಅಸಾಧ್ಯ.

  • ನಿರುಕ್ತ: ಋಗ್ವೇದದ ನದಿಗಳನ್ನು ಸೂಕ್ತಕಾರರು ಯಾವ ರೀತಿ ವರ್ಣಿಸಿದ್ದಾರೆ? ಯಾವ ಶಬ್ದಗಳನ್ನು ಉಪಯೋಗಿಸಿದ್ದಾರೆ? ನಿರುಕ್ತಕಾರರ ಭಾಷ್ಯದಿಂದ ಶಬ್ದಾರ್ಥ ಮಾತ್ರವಲ್ಲ, ಅವುಗಳ ಭಾಷೆ, ಭಾವ, ಸಂದರ್ಭ ಮತ್ತು ಅನುಭೂತಿಗಳನ್ನೂ ನಾವು ತಿಳಿಯಬಹುದು. ಋಗ್ವೇದದಲ್ಲಿ ನದಿ ಎಂಬ ಅರ್ಥವನ್ನು ಸೂಚಿಸುವ 37 ಶಬ್ದಗಳಿವೆ. ಇವುಗಳ ಅರ್ಥವಿವರಣೆ, ನಿರುಕ್ತ ಇತ್ಯಾದಿಗಳನ್ನು ತರುವಾಯ ಪರಿಚಯಿಸಿಕೊಳ್ಳೋಣ.

  • ಐತಿಹಾಸಿಕ ಮತ್ತು ಭೌಗೋಳಿಕ ವಿಶ್ಲೇಷಣೆ ಮತ್ತು ತೀರ್ಮಾನಗಳು.

ಲೇಖನದಲ್ಲಿ ಋಗ್ವೇದದಲ್ಲಿ ಬರುವ ನದಿಗಳ ಬಗೆಗಿನ ಸೂಕ್ತ/ಋಕ್ಕುಗಳನ್ನು ಅಧ್ಯಯಿಸಿ ಮೇಲೆ ಕೊಟ್ಟ ಎಲ್ಲ ದೃಷ್ಟಿಕೋನಗಳಿಂದ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.

ಸರಸ್ವತಿಯ ಪ್ರಾಮುಖ್ಯತೆ

ಸರಸ್ವತಿಯು ಒಂದು ನದಿ ಅಥವಾ ನದಿಯ ಹೆಸರು ಮಾತ್ರವಲ್ಲ. ಅವಳು ದೇವತಾಸ್ವರೂಪಳು. ಸರಸ್ವತಿಯು ಆಕಾಶದ ಅಭಿಮಾನಿ ದೇವತೆಗಳಾದ, ತಿಸ್ರೋ ದೇವ್ಯಃ ಎಂದು ಹೇಳಲ್ಪಡುವ ಇಳಾ, ಭಾರತಿ, ಮತ್ತು ಸರಸ್ವತಿ ದೇವಿಯರಲ್ಲಿ ಒಬ್ಬಳು, ಎಂದು ಅಪ್ರೀ ಸೂಕ್ತಗಳು ಹೇಳುತ್ತವೆ. [ಋಗ್ವೇದದಲ್ಲಿ ಹತ್ತು ಅಪ್ರೀ ಸೂಕ್ತಗಳಿವೆ.] ಭೂಮಿ, ಅಂತರಿಕ್ಷ, ಮತ್ತು ಸ್ವರ್ಗಗಳಲ್ಲಿ ಅಗ್ನಿಯು ಮೂರು ರೂಪಗಳಲ್ಲಿ ಆರಾಧಿಸಲ್ಪಡುತ್ತಾನೆ. ಸೂರ್ಯನು ಸ್ವರ್ಗದಲ್ಲಿರುವ ಅಗ್ನಿಯ ರೂಪವು. ಭಾರತಿಯು ಸೂರ್ಯನ ಕಿರಣಗಳನ್ನು ಸೂಚಿಸುವ ದೇವತೆಯಾದ್ದರಿಂದ ಸ್ವರ್ಗದಲ್ಲಿರುವ ಅಗ್ನಿಯ ಪ್ರತೀಕ. ಸರಸ್ವತಿಯು ಸಿಡಿಲು ಮಿಂಚುಗಳ ದೇವತೆ. ಹೀಗಾಗಿ ಇವಳು ಅಂತರಿಕ್ಷದಲ್ಲಿರುವ ಅಗ್ನಿಯ ರೂಪವು. ಇಳಾದೇವಿಯು ಭೂಮಿಯ ಮೇಲಿನ ಜನಗಳಿಗೆ ಧನಾದಿಗಳನ್ನೂ ದೀರ್ಘಾಯುವನ್ನೂ ಕೊಡುವವಳಾದ್ದರಿಂದ, ಇಳೆಯು ಭೂಮಿಯಲ್ಲಿನ ಅಗ್ನಿಯ ರೂಪವು.

ಎಲ್ಲಕ್ಕಿಂತ ಮುಖ್ಯವಾಗಿ, ಸರಸ್ವತಿಯು ವಾಗ್ದೇವತೆ, ಜ್ಞಾನಸ್ವರೂಪಿ. ಅವಳು ಶಬ್ದ ಮತ್ತು ಅರ್ಥಗಳ ಅಧಿದೇವತೆ. ಭಕ್ತನಿಗೆ ಮಾತು, ಸಂಗೀತ, ಕಲೆ ಮತ್ತು ಅಭಿವ್ಯಕ್ತಿಗಳನ್ನು ದಯಪಾಲಿಸುವ ಆರಾಧ್ಯದೈವ.

ಸರಸ್ವತಿಯ ಸ್ವರೂಪವು ಆ ನದೀತೀರದಲ್ಲಿ ಬೆಳೆದು ಹೊಮ್ಮಿದ ಭಾರತೀಯ ಸಂಸ್ಕೃತಿಯ ಪ್ರತೀಕ. ನಮ್ಮ ಸನಾತನ ಸಂಸ್ಕೃತಿಯು ಸರಸ್ವತಿ ನದೀ ತೀರದಲ್ಲೇ ಹುಟ್ಟಿತು, ವಿಕಸಿತವಾಯಿತು, ಎಂಬುದರಲ್ಲಿ ಸಂದೇಹವೇ ಇಲ್ಲ. ಸರಸ್ವತಿ ನದೀ ತೀರದಲ್ಲಿ ಎಷ್ಟೋ ಋಷಿಮುನಿಗಳು, ರಾಜರು, ಕವಿಚಿಂತಕರು, ಸಾಮ್ರಾಜ್ಯಗಳು ನಿರ್ಮಾಣವಾದವು, ಅಭಿವೃದ್ಧಿಗೊಂಡವು. ಅದರಿಂದಲೇ ಸರಸ್ವತಿಗೆ ಜ್ಞಾನದೇವತೆಯ ಅಭಿದಾನವಿದೆ, ಎಂಬುದರಲ್ಲಿ ಆಶ್ಚರ್ಯವೇನು?

ಹಿಂದೆ ಹೇಳಿದಂತೆ, ಸರಸ್ವತಿಗೆ ವಾಗ್ರೂಪತ್ವಾದಿಗಳು ಇರುವುದರಿಂದ, ಸರಸ್ವತಿಯು ಉಷೆಯ ಮತ್ತೊಂದು ರೂಪ. ಉಷೆ ಎಂದರೆ ಸಂಧಿಕಾಲ, ತಪಃಚರಣೆಯ ಕಾಲ; ಅಭ್ಯಾಸ, ಅಧ್ಯಯನಗಳ ಕಾಲ. ಉಷೆಯ ಹೆಸರುಗಳಾದ ಸೂನೃತಾ, ಸೂನೃತಾವತಿ, ಸೂನೃತಾವರೀ, ಇತ್ಯಾದಿ ಶಬ್ದಗಳು ಸರಸ್ವತಿಯ ಹೆಸರುಗಳೂ ಆಗಿವೆ. ಸೂನೃತ ಎಂದರೆ, ಪ್ರಿಯವೂ ಸತ್ಯವೂ ಆದ ಮಾತುಗಳು ಎಂಬ ಅರ್ಥ ಬರುತ್ತದೆ.

ಋಗ್ವೇದದಲ್ಲಿ ಅತ್ಯಂತ ಪ್ರಮುಖವಾದ ನದಿಯೆಂದರೆ, ಸರಸ್ವತಿ. ಸರಸ್ವತಿಯು ಋಗ್ವೇದದ ಮೊದಲನೆಯ ಮಂಡಲಗಳಲ್ಲಿ ಸಮುದ್ರದಂತೆ ಭೋರ್ಗರೆಯುತ್ತಾ ಹರಿಯುವ ನದಿಯಾಗಿದ್ದು, ಕಡೆಯ ಮಂಡಲದ ನದೀಸೂಕ್ತವನ್ನು ರಚಿಸುವ ವೇಳೆಗೆ, ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಒಂದು ಚಿಕ್ಕ ನದಿಯಾಗಿತ್ತು. ಮುಂದೆ ನಾವು ನೋಡುವಂತೆ, ನದೀಸೂಕ್ತದಲ್ಲಿ ಸರಸ್ವತಿಯ ಉಲ್ಲೇಖವಿದ್ದರೂ ಕೂಡ, ಅದರ ಪ್ರಮುಖ ದೇವತೆಯೆಂದರೆ, ಸಿಂಧೂ ನದಿ.

ಉದಾಹರಣೆಗೆ, ಮೊದಲನೆಯ ಮಂಡಲದ ಈ ಸೂಕ್ತವನ್ನು ನೋಡೋಣ.

ಮಹೋ ಅರ್ಣಃ ಸರಸ್ವತೀ ಪ್ರ ಚೇತಯತಿ ಕೇತುನಾ ।
ಧಿಯೋ ವಿಶ್ವಾ ವಿ ರಾಜತಿ ।।

(. ಸಂ. 1.3.12)

ಸರಸ್ವತಿ ನದಿಯು ಅಗಾಧವಾದ ಪ್ರವಾಹದಲ್ಲಿ ಹರಿಯುತ್ತಾ, ಈ ದೇವಿಯು ತನ್ನನ್ನು ಆರಾಧಿಸುವ ಜನರ ಮನಸ್ಸನ್ನು ಪ್ರಕಾಶಿಸುವಳು (ಎಂದರೆ, ಅವರ ಬುದ್ಧಿಯು ಚುರುಕಾಗುವಂತೆ ಪ್ರೇರೇಪಿಸುವಳು.)

ಹಿಂದಿನ (ಸೋಮನ ಕುರಿತಾದ) ಒಂದು ಲೇಖನದಲ್ಲಿ ನಾವು ಶ್ರೀಕಾಂತ ತಲಗೇರಿಯವರು ಬೆಳಕಿಗೆ ತಂದ ಋಗ್ವೇದದ ಮಂಡಲಗಳ ಕಾಲಾವಧಿಯ ಬಗ್ಗೆ ತಿಳಿದುಕೊಂಡೆವು. 10ನೇ ಮಂಡಲವು ಎಲ್ಲ ಮಂಡಲಗಳಿಗಿಂತ ಹೊಸತು. (ತಲಗೇರಿಯವರು ನಿರೂಪಿಸಿದ ಚಿತ್ರವನ್ನು ಮತ್ತೊಮ್ಮೆ ಇಲ್ಲಿ ಕೊಟ್ಟಿದ್ದೇನೆ.) ಈ ಪಟ್ಟಿಯನ್ನು ನೋಡಿದರೆ, 1ನೇ ಮಂಡಲವು ಋಗ್ವೇದದ ಮಧ್ಯದ ಕಾಲಾವಧಿಯಲ್ಲಿ ರಚಿತವಾಗಿದೆ. ಈ ಕಾಲದಲ್ಲಿ ಕೂಡ, ಸರಸ್ವತಿಯು ಅಗಾಧವಾದ ಪ್ರವಾಹದಲ್ಲಿಹರಿಯುತ್ತಿದ್ದ ನದಿ. 10ನೇ ಮಂಡಲಕ್ಕೆ ಬರುವ ವೇಳೆಗೆ, ಸರಸ್ವತಿ ನದಿಯ ಪಾತ್ರ ಬಲು ಕಿರಿದಾಗಿದ್ದು, ನದೀ ಸೂಕ್ತದಲ್ಲಿ ಒಂದೇ ಒಂದು ಸ್ತೋತ್ರದಲ್ಲಿ ಸರಸ್ವತಿಯ ಉಲ್ಲೇಖವಿದೆ. ಮಹಾಭಾರತದ ವನಪರ್ವದಲ್ಲಿ, ಸರಸ್ವತಿ ನದಿಯು ಕಣ್ಮರೆಯಾಗುವ ವಿನಶನ ಕ್ಷೇತ್ರದ ಉಲ್ಲೇಖವಿದೆ.

ಸರಸ್ವತಿ ನದಿಯ ಬಗ್ಗೆ ಋಗ್ವೇದದ ಇತರ ಸೂಕ್ತಗಳು

ಮೇಲೆ ಹೇಳಿದಂತೆ, ಋಗ್ವೇದದಲ್ಲಿ ಸರಸ್ವತಿ ನದಿಯ ಗುಣಗಾನ ಮಾಡಿರುವಂತೆ ಬೇರೆ ಯಾವ ನದಿಯನ್ನೂ ಸ್ತುತಿಸಿಲ್ಲ. ಈ ನದಿಗೆ ಮೂರು ಸೂಕ್ತಗಳೂ ಅನೇಕ ಬಿಡಿ ಸ್ತೋತ್ರಗಳೂ ಮೀಸಲಾಗಿವೆ. ಸರಸ್ವತಿ ದಡದಲ್ಲಿರುವ ರಾಜರು, ಜನಗಳ ಬಗ್ಗೆ ಉಲ್ಲೇಖಗಳಿವೆ (. ಸಂ. 7.96.2, 8.21.18)

ಸರಸ್ವತಿಯು ಆಕಾಶದ ಸಾಗರದಿಂದ ಹರಿದು ಬರುತ್ತದೆ. (. ಸಂ. 7.95.1) (ನಮಗೆ ಗಂಗೆ ಆಕಾಶದಿಂದ ಧುಮುಕಿದ ಗಂಗಾವತರಣದ ಕಥೆ ಗೊತ್ತು. ಭಗೀರಥನು ತಪಸ್ಸು ಮಾಡಿದ ನಂತರ ಗಂಗೆಯು ಶಿವನ ಮುಡಿಯೊಳಗೆ ಅಂತರಿಕ್ಷದಿಂದ ಇಳಿದು ಬಂದಳು, ಎಂದು ಮಹಾಭಾರತದ ವನಪರ್ವದಲ್ಲಿ ಕಥೆ ಇದೆ.) ಪ್ರಚಂಡವಾದ ಅಲೆಗಳಿಂದ ಪರ್ವತದ ಶಿಖರಗಳನ್ನೇ ಕೊಚ್ಚಿಕೊಂಡು ಹೋಗುತ್ತದೆ. (. ಸಂ. 6.61.2,8) [ಭೌಗೋಲಿಕ ಮಾರ್ಪಾಡುಗಳ ಬಗ್ಗೆ ಈ ಸೂಕ್ತ ಹೇಳುತ್ತಿದೆಯೇ?]

ಸರಸ್ವತಿಗೆ ಏಳುಜನ ಸೋದರಿಯರು, ಆಕೆ ಏಳು ವಿಧವಾಗಿದ್ದಾಳೆ. (. ಸಂ. 6.61.10,12) ಅವಳು ನದೀ ಮಾತೃ. ಅವಳಿಗೆ ಪಾವೀರವಿ, ಎಂದರೆ ಸಿಡಿಲಿನ ಮಗಳು ಎಂಬ ಅಭಿದಾನವಿದೆ. (. ಸಂ. 6.49.7)

ಸರಸ್ವತಿಯ ನೀರು ಐಶ್ವರ್ಯ, ಸಂತಾನ, ಮತ್ತು ಅಮರತ್ವಗಳನ್ನು ಮಾತ್ರವಲ್ಲ, ವೀರ್ಯವನ್ನೂ ಅನುಗ್ರಹಿಸುತ್ತಾಳೆ. (. ಸಂ. 10.20.12, 2.41.17) ವಧ್ರ್ಯಾಶ್ವನಿಗೆ ಸರಸ್ವತಿಯು ದಿವೋದಾಸನೆಂಬ ಪುತ್ರನನ್ನು ಅನುಗ್ರಹಿಸಿದ ಕಥೆ ಇದೆ. (. ಸಂ. 6.61.1) ಸರಸ್ವತಿಯು ದೇವರನ್ನು ದೂಷಿಸುವವರನ್ನು ನಾಶಮಾಡುತ್ತಾಳೆ. ವೃತ್ತ್ರನನ್ನು ಕೊಲ್ಲುವವಳು. ಆದರೆ, ತನ್ನನ್ನು ಪೂಜಿಸುವವರನ್ನು ರಕ್ಷಿಸಿ, ಅವರ ಶತ್ರುಗಳನ್ನು ನಾಶ ಮಾಡುತ್ತಾಳೆ. (. ಸಂ. 7. 95. 4, 5; 2.30.8; 9.49.7)

ನದೀಸೂಕ್ತ

ಋಗ್ವೇದದಲ್ಲಿ ಸರಸ್ವತಿಗೆ ಇರುವ ಪ್ರಾಮುಖ್ಯತೆ ಬೇರೆ ಯಾವ ನದಿಗೂ ಇಲ್ಲ. ಹಾಗೆಂದು, ಬೇರೆ ನದಿಗಳ ಉಲ್ಲೇಖ ಇಲ್ಲವೆಂದಲ್ಲ. ನದೀಸೂಕ್ತದಲ್ಲಿ ಸರಸ್ವತಿಗಿಂತ ಬೇರೆ ನದಿಗಳಿಗೆ, ಮುಖ್ಯವಾಗಿ, ಸಿಂಧೂ ನದಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ.

ಇದಕ್ಕೆ ಒಂದು ಸ್ವಾರಸ್ಯವಾದ, ಆದರೆ, ವಿಮರ್ಶಾತ್ಮಕ ದೃಷ್ಟಿಗೆ ಮಾತ್ರವೇ ಕಾಣುವ ಕಾರಣ ಇದೆ.

ಕಾಲಾವಧಿಯ ಪಟ್ಟಿಯನ್ನು ನೋಡಿದರೆ, ಹಳೆಯ ಮಂಡಲಗಳು ರಚನೆಯಾದ ಸಮಯದಲ್ಲಿ ಭೋರ್ಗರೆದು ಹರಿಯುತ್ತಿದ್ದ ಸರಸ್ವತಿಯು ನದೀಸೂಕ್ತವು ರಚನೆಯಾಗುವ ವೇಳೆಗೆ ತನ್ನ ರಭಸದೊಡನೆ ಪ್ರಾಮುಖ್ಯತೆಯನ್ನೂ ಕಳೆದುಕೊಂಡಿದ್ದಳು ಎಂಬುದು ಸಿದ್ಧವಾಗುತ್ತದೆ.

ನದಿಸೂಕ್ತದಲ್ಲಿ ಒಂಭತ್ತು ಋಕ್ಕುಗಳಿದ್ದು, ಹೆಚ್ಚಿನ ಮಟ್ಟಿಗೆ ಸಿಂಧೂ ನದಿಯ ವರ್ಣನೆ ಮತ್ತು ಪ್ರಶಂಸೆಗಳಿವೆ. ಈ ಸೂಕ್ತಕ್ಕೆ ಪ್ರಿಯಮೇಧ ಋಷಿಯ ಮಗನಾದ ಸಿಂಧುಕ್ಷಿತ ಎಂಬುವನು ಋಷಿಯು.

ಮೊದಲನೆಯ ಋಕ್ಕಿನಲ್ಲಿ, ಅಂತರಿಕ್ಷದಿಂದ ಭೂಮಿಯ ಮೇಲೆ ವೃಷ್ಟಿರೂಪದಿಂದ ಬೀಳುವ ನೀರು ಮುಖ್ಯವಾಗಿ ಏಳು ನದಿಗಳಾಗಿ ಪ್ರವಹಿಸಿ ಸಮುದ್ರವನ್ನು ಸೇರುತ್ತವೆ. ಆ ಏಳು ನದಿಗಳಲ್ಲಿ ಸಿಂಧುವು ನೀರಿನ ಪ್ರಮಾಣದಲ್ಲೂ, ವಿಸ್ತಾರದಲ್ಲೂ, ಉದ್ಧದಲ್ಲೂ, ವೇಗದಲ್ಲೂ ಬೇರೆಲ್ಲ ನದಿಗಳಿಗಿಂತ ಅತ್ಯಂತ ಮಹತ್ವವುಳ್ಳದ್ದಾಗಿದೆ, ಎಂದು ಋಷಿಯು ವರ್ಣಿಸುತ್ತಾನೆ.

ಎರಡನೆಯ ಋಕ್ಕಿನಲ್ಲಿ ಕವಿಯು ವರುಣನು ಕಡಿದಾದ ಪರ್ವತಗಳನ್ನು ಸೀಳಿ ಸಿಂಧೂನದಿಯು ಹರಿಯುವಂತೆ ಪಾತ್ರವನ್ನು ನಿರ್ಮಿಸಿದ್ದಾನೆ ಎಂದು ವರ್ಣಿಸುತ್ತಾನೆ. ಸಿಂಧುವಿನ ನೀರಿನಿಂದ ಸಸ್ಯಾಭಿವೃದ್ಧಿಯಾಗಿ, ಸಮಸ್ತಪ್ರಾಣಿಗಳಿಗೂ ಅನ್ನಾಹಾರಗಳು ದೊರಕುತ್ತವೆ. ಹೀಗೆ, ಸಿಂಧುವು ಲೋಕೋಪಕಾರಾರ್ಥವಾಗಿ ಪ್ರವಹಿಸುತ್ತಾಳೆ, ಎನ್ನುತ್ತಾನೆ.

ಮೂರನೇ ಋಕ್ಕು, ಸಿಂಧೂ ನದಿಯು ಹರಿಯುವ ವೇಗವನ್ನು ವರ್ಣಿಸುತ್ತಾ, ಅದರ ಪ್ರವಾಹದ ಭೋರ್ಗರೆಯುವ ಶಬ್ದವನ್ನು ಭಾರಿ ಮಳೆಯ ಶಬ್ದಕ್ಕೆ ಹೋಲಿಸುತ್ತದೆ.

ನಾಲ್ಕನೆಯ ಋಕ್ಕಿನಲ್ಲಿ ಸಿಂಧೂ ನದಿಯ ಉಪನದಿಗಳ ಬಗ್ಗೆ ಪ್ರಸ್ತಾಪವಿದೆ. ಗೋವು ತನ್ನ ಎಳೆಯ ಕರುಗಳನ್ನು ಪ್ರೀತಿಯಿಂದ ಕೂಗುತ್ತಾ ಅವರಲ್ಲಿಗೆ ಹೋಗುವ ರೀತಿಯಲ್ಲಿ ನಿನ್ನ ಉಪನದಿಗಳು ಪ್ರವಹಿಸುವಾಗ ಶಬ್ದಮಾಡುತ್ತಾ ನಿನ್ನನ್ನು ಸೇರುತ್ತವೆ, ಎನ್ನುತ್ತಾನೆ, ಸೂಕ್ತದ ಋಷಿ. ಈ ನದಿಗಳಿಗೆಲ್ಲ ನೀನೇ ಮುಖ್ಯಳಾಗಿದ್ದು, ಅವುಗಳ ಉದಕಗಳ ಜೊತೆಗೂಡಿ ನಿನ್ನ ದಡಗಳನ್ನು ಅತಿಕ್ರಮಿಸಿ, ಯುದ್ಧಮಾಡುವ ರಾಜನ ಗಮನದಂತೆ ನುಗ್ಗುತ್ತಾ ಪ್ರವಹಿಸುತ್ತೀಯೆ, ಎನ್ನುತ್ತಾನೆ.

ಐದನೆಯ ಋಕ್ಕು ಬಹಳ ಮಹತ್ವದ್ದು. ಇದರಲ್ಲಿ ಏಳು ಮುಖ್ಯ ನದಿಗಳ ಜೊತೆಗೆ ಇನ್ನೂ ಕೆಲವು ನದಿ, ಉಪನದಿಗಳ ಉಲ್ಲೇಖವಿದೆ. ಎಂದರೆ, ಸಪ್ತಸಿಂಧು ಪ್ರದೇಶದ ಭೂಭಾಗದ ವರ್ಣನೆಯ ಒಂದು ವಿಹಂಗಮ ನೋಟ ಓದುಗನಿಗೆ ಕಾಣಬರುತ್ತದೆ. ಕವಿ ಹೇಳುತ್ತಾನೆ, ಎಲೈ, ಗಂಗೆ, ಯಮುನೆ, ಸರಸ್ವತಿ, ಪರುಷ್ಣಿ (ರಾವಿ)ಯೊಡನೆ ಹರಿಯುವ ಶುತುದ್ರಿ (ಸಟ್ಲೆಜ್), ಅಸಿಕ್ನಿ (ಚೀನಾಬ್) ಯೊಡನೆ ಹರಿಯುವ ಮರುದ್ವೃಧೆ, ವಿತಸ್ತೆ (ಝೇಲಂ) ಯೊಡನೆ ಹರಿಯುವ ಆರ್ಜೀಕಿಯೇ (ಹಾರೋ) ನೀವೆಲ್ಲರೂ ನಾನು ಮಾಡುತ್ತಿರುವ ಸ್ತೋತ್ರವನ್ನು ಕೇಳಿ ಆನಂದಿತರಾಗಿ.

ಇಮಂ ಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿ ಸ್ತೋಮಮ್ ಸಚತಾ ಪರುಷ್ಣ್ಯಾ ।
ಅಸಿಕ್ನಿಯಾ ಮರುದ್ವಧೇ ವಿತಸ್ತಾಯಾರ್ಜೀಕಿಯೇ ಶೃಣುಹ್ಯಾ ಸುಷೋಮಯಾ ।।

[ಮುಂದೆ ಬರುವ ಭಾಗಗಳಲ್ಲಿ ಪ್ರತಿ ನದಿಯ ಹೆಸರಿಗೂ ಯಾಸ್ಕರು ಹೇಳಿದ ನಿರುಕ್ತವನ್ನು ವಿಸ್ತರಿಸೋಣ.]

ಆರನೇ ಋಕ್ಕು ಸಿಂಧುವಿನ ಬೇರೆ ಉಪನದಿಗಳಾದ ಗೋಮತಿ, ತೃಷ್ಟಾಮಾ, ಸುಸರ್ತು, ರಸಾ, ಶ್ವೇತಿ (ಶ್ವೇತ್ಯಾ, ಗಿಲ್ಗಿತ್), ಕುಭಾ (ಕಾಬುಲ್), ಮೆಹಂತುಗಳನ್ನು ಹೆಸರಿಸುತ್ತದೆ. ಏಳನೇ ಋಕ್ಕು ಸಿಂಧೂ ನದಿಯ ಪ್ರವಾಹವನ್ನು ವರ್ಣಿಸುತ್ತಾ ಅದನ್ನು ಆಕರ್ಷಕವಾದ ಹೆಣ್ಣು ಕುದುರೆಗೆ ಮತ್ತು ಸುಂದರವಾದ ಸ್ತ್ರೀ ದೇಹಕ್ಕೂ ಹೋಲಿಸುತ್ತದೆ. ಎಂಟನೇ ಋಕ್ಕು ಮತ್ತೊಮ್ಮೆ ಸಿಂಧೂ ನದಿಯನ್ನು ಉತ್ತಮವಾದ ಅಶ್ವ, ರಥ, ಉಡುಪು, ಆಭರಣಗಳನ್ನು ಧರಿಸಿದ ಒಬ್ಬ ಸುಂದರವಾದ ಸ್ತ್ರೀ ರೂಪಕ್ಕೆ ಹೋಲಿಸಿ, ಅವಳನ್ನು ಅನ್ನವಂತಳು, ಉಣ್ಣೆಯನ್ನು ಧರಿಸುವ ಪ್ರದೇಶಗಳ ರಾಣಿ, ತಾರುಣ್ಯವಂತಳು, ಸಸ್ಯಶೀಲೆ, ಪುಷ್ಪಗಳನ್ನು ಹೊತ್ತಿರುವವಳು ಇತ್ಯಾದಿಯಾಗಿ ಸ್ತುತಿಸುತ್ತದೆ. ಕಡೆಯ ಒಂಬತ್ತನೆಯ ಋಕ್ಕಿನಲ್ಲಿ ಕೂಡ, ಸಿಂಧೂ ನದಿಯ ರಥವನ್ನು ಶ್ಲಾಘಿಸಲಾಗಿದೆ.

ಋಗ್ವೇದದ ನದಿಗಳ ಪ್ರಮಾಣ

ಋಗ್ವೇದದ ನದಿಗಳು ಯಾವ ಸತ್ಯವನ್ನು ಹೊರಗೆಡುಹುತ್ತವೆ? ತಲಗೇರಿಯವರು ಋಗ್ವೇದದ ನದಿಗಳನ್ನು, ಅವುಗಳ ಭೂಭಾಗವನ್ನು ಅಧ್ಯಯಿಸಿ, ಈ ಕೆಳಗಿನ ಮೂರು ಪ್ರದೇಶಗಳ ಅಡಿ ಇವನ್ನು ವಿಂಗಡಿಸುತ್ತಾರೆ:

  1. ಪೂರ್ವ ಪ್ರದೇಶ: ಸರಸ್ವತಿ ನದಿ ಮತ್ತು ಅದರ ಪೂರ್ವಕ್ಕಿರುವ ಭೂಭಾಗ. ಬಹುಪಾಲು ಇಂದಿನ ಹರಿಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗ

  2. ಮಧ್ಯದ ಭೂಭಾಗ: ಸಪ್ತಸಿಂಧು, ಎಂದರೆ, ಸಿಂಧು ಮತ್ತು ಸರಸ್ವತಿ ನದಿಯ ಮಧ್ಯದ ಪ್ರದೇಶ. ಇಂದಿನ ಪಾಕಿಸ್ತಾನದ ಉತ್ತರಾರ್ಧ ಮತ್ತು ಅದಕ್ಕೆ ಸೇರಿದಂತಿರುವ ಭಾರತಕ್ಕೆ ಸೇರಿದ ಪಂಜಾಬ ಭೂಭಾಗ

  3. ಪಶ್ಚಿಮ ಪ್ರದೇಶ: ಸಿಂಧೂ ನದಿ ಮತ್ತು ಅದರ ಪಶ್ಚಿಮಕ್ಕಿರುವ ಭೂಭಾಗ. ಇಂದಿನ ಅಫ್ಘಾನಿಸ್ತಾನ ಮತ್ತು ಅದಕ್ಕೆ ಸೇರಿಕೊಂಡಿರುವ ಪಶ್ಚಿಮೋತ್ತರ ಪಾಕಿಸ್ತಾನದ ಪ್ರದೇಶ.

ಮೊದಲನೆಯ ಪೂರ್ವ ಭೂಭಾಗದಲ್ಲಿ ಇರುವ ನದಿಗಳೆಂದರೆ, ಸರಸ್ವತಿ, ದೃಷದ್ವತೀ (ಹರಿಯೂಪೀಯಾ/ ಯಾವ್ಯಾವತಿ), ಆಪಯಾ, ಅಶ್ಮನ್ವತಿ, ಅಂಶುಮತಿ, ಯಮುನಾ, ಗಂಗಾ, ಜಾಹ್ನವಿ, ಇತ್ಯಾದಿ. ಅಲ್ಲಿರುವ ಸ್ಥಳಗಳ ಹೆಸರುಗಳೆಂದರೆ, ಕೀಕಟ, ಇಳಾಸ್ಪದ (ಇಳಾಯಾಸ್ಪದ), ಮತ್ತು ಪರೋಕ್ಷವಾಗಿ, ವರಾ ಪೃಥಿವ್ಯಾಃ, ನಾಭಾಪೃಥಿವ್ಯಾಃ, ಮಾನುಷ ಸರೋವರ ಇತ್ಯಾದಿ.

ಎರಡನೆಯ, ಎಂದರೆ, ನಡುವಿನ ಭೂಭಾಗದಲ್ಲಿ, ಶುತುದ್ರಿ, ವಿಪಾಶ, ಪರುಷ್ನೀ, ಅಸಿಕ್ನಿ, ವಿತಸ್ತಾ, ಮರುದ್ವೃಧ ಇತ್ಯಾದಿ ನದಿಗಳು ಹರಿಯುತ್ತಿದ್ದು, ಇದನ್ನು ಸಪ್ತಸಿಂಧೂ ಭೂಭಾಗವೆಂದು ಹೇಳುತ್ತಿದ್ದರು.

ಮೂರನೆಯ, ಎಂದರೆ, ಪಶ್ಚಿಮದ ಭೂಭಾಗದಲ್ಲಿ, ತೃಸ್ತಾಮಾ, ಸುಸರ್ತು, ಅನಿತಭಾ, ರಸಾ, ಶ್ವೇತ್ಯಾ, ಕುಭಾ, ಕ್ರಮು, ಗೋಮತಿ, ಸರಯೂ, ಮೆಹತ್ನು, ಶ್ವೇತ್ಯಾವರಿ, ಸುವಾಸ್ತು, ಗೌರಿ, ಸಿಂಧು, ಸುಷೋಮಾ, ಆರ್ಜೀಕೀಯಾ ನದಿಗಳು ಹರಿಯುತ್ತಾ, ಇಲ್ಲಿ ಗಾಂಧಾರದೇಶವು ಹೆಸರುವಾಸಿಯಾಗಿತ್ತು. ಸುಷೋಮಾ, ಆರ್ಜೀಕ, ಮತ್ತು ಮೂಜವತ ಪರ್ವತಗಳು ಗಮನಿಸತಕ್ಕದ್ದಾಗಿದ್ದುವು. ಇಲ್ಲಿನ ಶರಣ್ಯಾವತವೆಂಬ ಸರೋವರವು ಪ್ರಸಿದ್ಧವಾಗಿದ್ದಿತು.

ಆರ್ಯನ್ನರು ಭಾರತವನ್ನು ವಾಯುವ್ಯ ದಿಕ್ಕಿನಿಂದ ಪ್ರವೇಶಿಸಿ, ಉತ್ತರ ಭಾರತದ ಪೂರ್ವ ಪ್ರದೇಶಗಳಲ್ಲಿ ಹರಡಿ, ನೆಲೆಸಿದ್ದರೆ, ಋಗ್ವೇದದ ಮೊದಲ (ಹಳೆಯ) ಮಂಡಲಗಳಲ್ಲಿ ವಾಯುವ್ಯ ಪ್ರದೇಶಗಳ ಪರಿಚಯ, ಒಲವುಗಳನ್ನು ಸೂಚಿಸುತ್ತಿದ್ದವು. ಅಲ್ಲವೇ? ಋಗ್ವೇದದ ಋಕ್ಕುಗಳು ಈ ಸಿದ್ಧಾಂತವನ್ನು ಸಮರ್ಥಿಸುತ್ತವೆಯೇ?

ಮೊದಲೇ ಹೇಳಿದಂತೆ, ನದಿಗಳ ಉಲ್ಲೇಖಗಳು ಋಷಿಗಳ ವಾಸ್ತವ್ಯದ ಸೂಚನೆ ನೀಡುತ್ತವೆ.

ಪೂರ್ವ ಪ್ರದೇಶದ ನದಿಗಳು ಹಳೆಯ ಮತ್ತು ಹೊಸ ಮಂಡಲಗಳಲ್ಲಿ ಈ ಕೆಳಗಿನ ಸಂಖ್ಯೆಯಲ್ಲಿ ಉಲ್ಲೇಖಗೊಂಡಿವೆ.

  1. ಹಳೆಯ ಪುಸ್ತಕಗಳು: ಮಂಡಲ 2,3,4,6,7: 24 ಸೂಕ್ತಗಳು, 45 ಋಕ್ಕುಗಳು, 47 ಹೆಸರುಗಳ ಉಲ್ಲೇಖಗಳು.

  2. ಹೊಸ ಪುಸ್ತಕಗಳು: ಮಂಡಲ 1,5,8,9,10: 30 ಸೂಕ್ತಗಳು, 37 ಋಕ್ಕುಗಳು, 39 ಹೆಸರುಗಳ ಉಲ್ಲೇಖಗಳು.

ಶ್ರೀಕಾಂತ ತಲಗೇರಿಯವರು ಮುಂದುವರೆದು ಒಂದೊಂದು ಮಂಡಲದಲ್ಲೂ ನಾಮಉಲ್ಲೇಖಗಳ ಸಂಖ್ಯೆಯನ್ನು ನೀಡುತ್ತಾರೆ. [ಆಸಕ್ತಿಯಿರುವ ಓದುಗರು ಈ ಲೇಖನವನ್ನು ನೋಡಿ1.]

ಮತ್ತೊಂದು ಕೌತುಕದ ಸಂಗತಿಯೆಂದರೆ, ಪೂರ್ವ ಪ್ರದೇಶದ ನದಿಗಳ ಉಲ್ಲೇಖಗಳು ಋಗ್ವೇದದ ಎಲ್ಲ ಮಂಡಲಗಳಲ್ಲಿ ಏಕಪ್ರಕಾರವಾಗಿ (4ನೇ ಮಂಡಲವನ್ನು ಹೊರತುಪಡಿಸಿ) ಉಲ್ಲೇಖಗೊಂಡಿವೆ.

ಹಳೆಯ ಋಗ್ವೇದವು ಪೂರ್ಣವಾಗಿ ಪೂರ್ವದ ಭೂಭಾಗಕ್ಕೇ ಪ್ರಾಧಾನ್ಯ ನೀಡುತ್ತದೆ. 6, 3, 7, 2ನೇ ಮಂಡಲಗಳಲ್ಲಿ ಪಶ್ಚಿಮದ ಪ್ರದೇಶದ ನದಿಗಳ ಹೆಸರೇ ಇಲ್ಲ. ಹೊಸ ಮಂಡಲಗಳಲ್ಲಿ ಒಂದಾದ 5ನೇ ಮಂಡಲದಲ್ಲಿ ಪಶ್ಚಿಮದ ಪ್ರದೇಶದ ನದಿಗಳ ಉಲ್ಲೇಖವಿದೆ.

ಇತರ ಹೊಸ ಮಂಡಲಗಳಾದ 1, 8, 9, 10ನೇ ಮಂಡಲಗಳಲ್ಲಿ ಪೂರ್ವ ಮತ್ತು ಪಶ್ಚಿಮದ ನದಿಗಳ ಉಲ್ಲೇಖಗಳು ಸುಮಾರು ಸಮವಾಗಿ ಕಾಣಬರುತ್ತವೆ.

ಇದರಿಂದ ಸಿದ್ಧವಾಗುವುದು ಏನೆಂದರೆ, “ವೈದಿಕಆರ್ಯರು, ಎಂದರೆ, ಪೂರುವಿನ ವಂಶಜರು ಪೂರ್ವದಿಂದ ಪಶ್ಚಿಮಕ್ಕೆ ವಿಸ್ತಾರಗೊಂಡರು. ಹಳೆಯ ಪುಸ್ತಕಗಳಲ್ಲಿ ಪೂರ್ವದ ಉಲ್ಲೇಖಗಳು ಮಾತ್ರವಿದ್ದು, ಕ್ರಮೇಣ ಹೊಸ ಪುಸ್ತಕಗಳ ವೇಳೆಗೆ ಪೂರ್ವ ಮತ್ತು ಪಶ್ಚಿಮದ ನದಿಗಳ, ಪ್ರದೇಶಗಳ ಉಲ್ಲೇಖಗಳು ಕಂಡುಬಂದವು. ಋಗ್ವೇದದ ಸ್ತೋತ್ರಗಳು ರಚನೆಯಾಗುತ್ತಿದ್ದ ಸಮಯದಲ್ಲೇ ಈ ವಿಸ್ತರಣೆ ನಡೆಯಿತು, ಎಂದು ನಾವು ತೀರ್ಮಾನಿಸಬಹುದು.

ಈ ವಿಸ್ತಾರ ಪೂರ್ವದಿಂದ ಪಶ್ಚಿಮಕ್ಕೆ ನಡೆಯುತ್ತಿದ್ದಾಗ, ವೈದಿಕರು ಮಧ್ಯಪ್ರದೇಶವನ್ನು (ಎಂದರೆ, ಸರಸ್ವತಿ ಮತ್ತು ಸಿಂಧೂ ನದಿಗಳ ನಡುವಿನ ಪ್ರದೇಶ), ದಾಟಿ ಹೋಗಿರಬೇಕು. ಈ ವಿಸ್ತಾರವು ಇನ್ನೂ ಹಳೆಯ ಪುಸ್ತಕಗಳನ್ನು ರಚಿಸುತ್ತಿದ್ದ ಸಮಯದಲ್ಲೇ ನಡೆದಿರಬೇಕು. ಇದು ಋಗ್ವೇದದಲ್ಲಿನ ಹಳೆಯ ಪುಸ್ತಕಗಳಲ್ಲಿ ಈ ಪ್ರದೇಶಕ್ಕೆ ಸಂಬಂಧಿಸಿದ ಭೌಗೋಳಿಕ ದತ್ತಾಂಶಗಳ ವಿಶ್ಲೇಷಣೆಯಿಂದ ಸ್ಪಷ್ಟವಾಗಬೇಕು. ಅಲ್ಲವೇ?

ಋಗ್ವೇದದಲ್ಲಿ ಈ ನಡುವಿನ ಪ್ರದೇಶದ ನದಿಗಳ ಮತ್ತು ಸ್ಥಳಗಳ ಉಲ್ಲೇಖಗಳು ಹೀಗಿವೆ.

  1. ಹಳೆಯ ಪುಸ್ತಕಗಳು: ಮಂಡಲ 2,3,4,6,7: 7 ಸೂಕ್ತಗಳು, 9 ಋಕ್ಕು/ಸ್ತೋತ್ರಗಳು

  2. ಹೊಸ ಪುಸ್ತಕಗಳು: ಮಂಡಲ 1,5,8,9,10: 12 ಸೂಕ್ತಗಳು, 12 ಋಕ್ಕು/ಸ್ತೋತ್ರಗಳು.

ಈ ದತ್ತಾಂಶಗಳನ್ನು ವಿಶ್ಲೇಷಿಸಿ, ತಲಗೇರಿಯವರು ಕೆಳಗಿನ ನಿರ್ಣಯಗಳನ್ನು ನೀಡಿದ್ದಾರೆ.

  1. ಋಗ್ವೇದದ ಅತ್ಯಂತ ಹಳೆಯ ಮಂಡಲವಾದ 6ನೇ ಮಂಡಲದಲ್ಲಿ ಪೂರ್ವ ಪ್ರದೇಶದ ಭೂಭಾಗಗಳು ಮಾತ್ರ ಉಲ್ಲೇಖವಾಗಿವೆ. ಪಶ್ಚಿಮದ ಪ್ರದೇಶ ಮಾತ್ರವಲ್ಲ, ನಡುವಿನ ಪ್ರದೇಶದ (ಸಪ್ತಸಿಂಧು) ಉಲ್ಲೇಖ ಕೂಡ ಈ ಮಂಡಲದಲ್ಲಿ ಇಲ್ಲ.

  2. 3ನೇ ಮಂಡಲದಲ್ಲಿ (ವಿಶ್ವಾಮಿತ್ರನ ಮಂಡಲ) ಮೊದಲ ಬಾರಿಗೆ ಮಧ್ಯ ಭೂಭಾಗದ ಎರಡು ನದಿಗಳ (ಶುತುದ್ರಿ, ವಿಪಾಶ) ಉಲ್ಲೇಖವಿದೆ. ಇಳಾಯಾಸ್ಪದ, ಇತ್ಯಾದಿ ಸ್ಥಳಗಳ ಉಲ್ಲೇಖ ಕೂಡ ಇದೆ.

  3. 7ನೇ ಮಂಡಲದಲ್ಲಿ, ಮೊದಲ ಬಾರಿಗೆ, ವಿಪಾಶ ಶುತುದ್ರಿಗಳ ಪಶ್ಚಿಮಕ್ಕೆ ಇರುವ ಪರುಷ್ನೀ (ರಾವಿ) ಮತ್ತು ಅಸಿಕ್ನಿ (ಚೀನಾಬ್) ನದಿಗಳ ಉಲ್ಲೇಖವಿದೆ. ಸುದಾಸನು ಹತ್ತು ರಾಜಪುತ್ರರನ್ನು ಎದುರಿಸಿ ಕಾದಿದ ದಶರಾಜ್ಞ ಯುದ್ಧವು ಪರುಷ್ನೀ ನದಿಯ ತಟದಲ್ಲಿ ನಡೆಯಿತು. (. ಸಂ. 7.18) ಸುದಾಸನ ಶತ್ರುಗಳನ್ನು (ಪರುಷ್ನೀ ನದಿಯ ಪಶ್ಚಿಮಕ್ಕೆ ಇರುವ) ಅಸಿಕ್ನಿಯ ಜನರು ಎಂದು ಕರೆಯಲಾಗಿದೆ. ಸುದಾಸನ ಶತ್ರುಗಳು ಸೋತು ಪಶ್ಚಿಮದ ದಿಕ್ಕಿನಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಿಹೋದರು ಎಂದು ವರ್ಣಿಸಲಾಗಿದೆ. (. ಸಂ. 7.5.3; 7.6.3)

  4. 4ನೇ ಮಂಡಲದಲ್ಲಿ ಸುದಾಸನ ವಂಶಸ್ಥ ಸಹದೇವ ಮತ್ತು ಅವನ ಮಗ ಸೋಮಕರು ಪಶ್ಚಿಮದ ದಿಗ್ವಿಜಯವನ್ನು ಮುಂದುವರಿಸುತ್ತಾರೆ. ಮತ್ತೊಮ್ಮೆ ವಿಪಾಶ (4.30.11) ಮತ್ತು ಪರುಷ್ನೀ (4.22.2) ನದಿಗಳ ಉಲ್ಲೇಖವಿದೆ. ಒಂದು ಋಕ್ಕಿನಲ್ಲಿ ಪಶ್ಚಿಮದ ನದಿ ಸರಯವಿನ ತೀರದಲ್ಲಿ ನಡೆದ (4.30.18) ಇನ್ನೊಂದು ಯುದ್ಧವನ್ನು ಉಲ್ಲೇಖಿಸಲಾಗಿದೆ. ಮತ್ತೊಂದು ಯುದ್ಧ ಸಿಂಧು ನದಿಯ ಪಶ್ಚಿಮಕ್ಕೆ ಇರುವ ಹರಿರೂಢ (ಹೆರಾತ್) ನದಿಯ ತೀರದಲ್ಲಿ (4.30.12) ಸಂಭವಿಸುತ್ತದೆ. ಇದು ವಿಸ್ತಾರ ಇನ್ನೂ ಮುಂದುವರಿಯುತ್ತಿದೆ, ಎಂಬುದನ್ನು ಸಮರ್ಥಿಸುತ್ತದೆ.

ಈ ಮಂಡಲದಲ್ಲಿ ಯಾವುದೇ ಪೂರ್ವದ ನದಿಯ ಉಲ್ಲೇಖವಿಲ್ಲ; ಸರಸ್ವತಿ ನದಿಯ ಉಲ್ಲೇಖ ಕೂಡ ಇಲ್ಲ! ಇತರ ಪಶ್ಚಿಮದ ನದಿಗಳನ್ನು ಉಲ್ಲೇಖಿಸಲಾಗಿದೆ: ರಸಾ (4.43.6) ಮತ್ತು ಸಿಂಧು (4.54.6; 4.55.3) ಈ ಮಂಡಲದ ಸಮಕಾಲೀನ ಮಂಡಲವಾದ 2ನೇ ಮಂಡಲ ಸರಸ್ವತಿಯನ್ನು ಬಿಟ್ಟು ಬೇರೆ ಯಾವ ನದಿಯನ್ನೂ ಉಲ್ಲೇಖಿಸುವುದಿಲ್ಲ. ಇದು ಆಶ್ಚರ್ಯದ ಸಂಗತಿ. ಅಲ್ಲವೇ? ಆದರೆ, ಇದರ ವಿವರಣೆ ಸುಲಭ ಸಾಧ್ಯ. 4ನೇ ಮಂಡಲದ ವಸ್ತು ಪಶ್ಚಿಮದಲ್ಲಿ ನಡೆಯುತ್ತಿದ್ದ ವಿಸ್ತಾರ. 2ನೇ ಮಂಡಲವು ಸರಸ್ವತಿಯ ಪೂರ್ವ ಪ್ರದೇಶದ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ. ಅಷ್ಟೇ.

  1. ಮಧ್ಯಕಾಲೀನ ಮಂಡಲವಾದ 5ನೇ ಮಂಡಲವು ಪೂರ್ವದಲ್ಲೇ ಕೇಂದ್ರೀಕೃತವಾಗಿದೆ. ಆದರೆ, ಶ್ಯಾವಶ್ವನೆಂಬ ಒಬ್ಬ ಋಷಿಯು ಪಶ್ಚಿಮಕ್ಕೆ ಪ್ರಯಾಣ ಮಾಡಿ ಆ ಪ್ರದೇಶಗಳ ಬಗ್ಗೆ ಋಕ್ಕುಗಳನ್ನು ರಚಿಸುತ್ತ, ಪಶ್ಚಿಮದ ನದಿಗಳನ್ನು ಉಲ್ಲೇಖಿಸಿದ್ದಾನೆ. ಅದೇ ರೀತಿ, ಸಾಧಾರಣವಾಗಿ ಪೂರ್ವದ ಪ್ರದೇಶದವರಾದ ಅತ್ರಿ ಮಹರ್ಷಿಯು ರಸಾ ನದಿಯನ್ನು (5.41.15) ಉಲ್ಲೇಖಿಸಿದ್ದಾರೆ.

  2. 1 ಮತ್ತು 8ನೇ ಮಂಡಲಗಳು ಒಂದೇ ವಂಶದ ಋಷಿಗಳಿಂದ ರಚಿತವಾಗಿಲ್ಲ. ಇದರ ಹೆಚ್ಚಿನ ಋಕ್ಕುಗಳು ಮೇಲಿನ ಮಂಡಲಗಳಿಗಿಂತ (1ನೇ ಮಂಡಲದ ಕೆಲವು ಋಕ್ಕುಗಳನ್ನು ಬಿಟ್ಟು) ಹೊಸತು. ಮೊದಲ ಬಾರಿಗೆ 1.126.7ರಲ್ಲಿ ಗಾಂಧಾರದ ಉಲ್ಲೇಖವಿದೆ. ಅಲ್ಲದೆ, ಶರಣ್ಯಾವತ ಸರೋವರ (1.84.14; 8.6.39; 8.7.29; 8.64.11; 9.65.22; 9.113.1; 10.35.2); ಪಶ್ಚಿಮೋತ್ತರ ಪರ್ವತಗಳಾದ ಆರ್ಜೀಕ, ಸುಷೋಮಾ, ಮತ್ತು ಮೂಜವತಗಳ (8.7.29; 9.65.23) ಉಲ್ಲೇಖಗಳು ಬರುತ್ತವೆ. ತೃಸ್ತಾಮಾ, ಸುಸರ್ತು, ಶ್ವೇತ್ಯಾ, ಗೋಮತಿ, ಮೆಹತ್ನು, ಶ್ವೇತ್ಯಾವರಿ, ಸುವಾಸ್ತು, ಗೌರಿ, ಸುಷೋಮಾ, ಆರ್ಜಿಕೀಯಾ ಇತ್ಯಾದಿ ಪಶ್ಚಿಮದ ಹಲವಾರು ನದಿಗಳ ಉಲ್ಲೇಖ ಮೊದಲ ಬಾರಿಗೆ ಈ ಮಂಡಲಗಳಲ್ಲಿ ಕಾಣಬರುತ್ತವೆ.

ತಲಗೇರಿಯವರು ನದಿಗಳ ಉಲ್ಲೇಖಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದ್ದಾರೆ.

ಈ ಚಿತ್ರ ತೋರಿಸುವಂತೆ, ನದಿಗಳ ಉಲ್ಲೇಖಗಳ ಆಧಾರದ ಪ್ರಕಾರ, ಋಗ್ವೇದದ ಋಕ್ಕುಗಳೇ ತೋರಿಸುವಂತೆ, ವೈದಿಕರು ತಮ್ಮ ಸ್ವಸ್ಥಾನವಾದ ಸರಸ್ವತಿ ನದಿಯ ತೀರದಿಂದ ಪಶ್ಚಿಮದ ಭೂಭಾಗಗಳಿಗೆ ವಿಸ್ತಾರವನ್ನು ಕೈಗೊಂಡರು.

ಆಕರಗಳು

  1. THE RIGVEDA, A Historical Analysis, SHRIKANT G. TALAGERI
  2. The Rigveda and the Aryan Theory: A Rational Perspective, THE FULL OUT-OF-INDIA CASE IN SHORT, Shrikant Gangadhar Talageri

(1 ಆಕರಗಳ)

(ಮುಂದುವರೆಯುವುದು…)

(ಮೊದಲ ಲೇಖನಗಳನ್ನು ಇಲ್ಲಿ ಓದಬಹುದು)

(Image credit: swarajyamag.com)

 

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply