close logo

ಪಂಚತಂತ್ರ – ನಮಗೇಕಿನ್ನೂ ಪ್ರಸ್ತುತ? ಭಾಗ ೧

ಪಂಚತಂತ್ರ ಕಥೆಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ನಾವೆಲ್ಲರೂ ಬಾಲ್ಯದಲ್ಲಿ ಅನೇಕ ಪಂಚತಂತ್ರದ ಕಥೆಗಳನ್ನು ಕೇಳಿಯೇ ಬೆಳೆದಿರುತ್ತೇವೆ. ಈಗಲೂ ಯಾವುದೇ ಪುಸ್ತಕ ಮಳಿಗೆಯಲ್ಲಿ ಮಕ್ಕಳ ವಿಭಾಗವನ್ನು ನೋಡಿದರೆ ಪಂಚತಂತ್ರದ ಪುಸ್ತಕಗಳು ಕಾಣದೇ ಇರಲಾರದು. ಶತಮಾನಗಳ ಹಿಂದೆ ರಚಿಸಲ್ಪಟ್ಟ ಅಪ್ಪಟ ಭಾರತೀಯ ಕಥೆಗಳು ಮೂಲ ಸಂಸ್ಕೃತದಿಂದ ಬಹುತೇಕ ಎಲ್ಲಾ ಭಾರತೀಯ ಮತ್ತು ಅನೇಕ ವಿದೇಶೀ ಭಾಷೆಗಳಿಗೂ ಭಾಷಾಂತರಗೊಂಡು ಇನ್ನೂ ಮಕ್ಕಳನ್ನು ಸೆಳೆಯುತ್ತಿವೆ ಎಂಬುದು ನಾವು ಹೆಮ್ಮೆಪಡಬೇಕಾದ ವಿಚಾರ.

ಪ್ರಸ್ತುತ ಫೇಸ್ ಬುಕ್ ಹಾಗೂ ಟ್ವಿಟರ್ ಯುಗದಲ್ಲಿ, 2 ನಿಮಿಷಗಳಿಗಿಂತ ಹೆಚ್ಚು ಒಂದು ವಿಷಯದ ಬಗ್ಗೆ ಓದಲು ಯಾರಿಗೂ ಸಾಮನ್ಯವಾಗಿ ಮನಸ್ಸು ಬರುವುದಿಲ್ಲ. ಹಾಗಾಗಿ ಏನಾದರು ಹೇಳುವುದಿದ್ದರೆ ಅದನ್ನು 2 ನಿಮಿಷಗಳ ಒಳಗೆ ಅಥವಾ ಒಂದು ಮೊಬೈಲ್ ಸ್ಕ್ರೀನ್ ಮೀರದಂತೆ ಹೇಳಿ ಮುಗಿಸಬೇಕು. ಹಾಗಿದ್ದರೆ ಮಾತ್ರ ಓದುಗರನ್ನು ತಲುಪಬಹುದು. ಸಾವಿರಾರು ವರ್ಷಗಳ ಹಿಂದೆಯೇ ಇಂತಹ ಪರಿಸ್ಥಿಯು ಪಂಚತಂತ್ರವನ್ನು ರಚಿಸಿದ ಪಂಡಿತ ವಿಷ್ಣುಶರ್ಮನಿಗೂ ಬಂದೊದಗಿತ್ತು ಎಂದರೆ ನಂಬಲು ಸ್ವಲ್ಪ ಕಷ್ಟವೇ ಸರಿ. ಆದರೆ ಇಂತಹ ಒಂದು ಸಂದರ್ಭದಲ್ಲಿಯೇ ಪಂಚತಂತ್ರದ ರಚನೆಯಾಯಿತೆಂದು ವಿಷ್ಣುಶರ್ಮನೇ ಹೇಳಿಕೊಂಡಿದ್ದಾನೆ.

ಅಮರಶಕ್ತಿಯೆಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸುತ್ತಾನೆ. ಪಾಣಿನಿಯ ವ್ಯಾಕರಣ, ಮನುಸ್ಮೃತಿ, ಚಾಣಕ್ಯನ ಅರ್ಥಶಾಸ್ತ್ರ, ವಾತ್ಸಾಯನನ ಕಾಮಶಾಸ್ತ್ರ ಮುಂತಾದವುಗಳನ್ನು ಸಾಂಪ್ರದಾಯಿಕವಾಗಿ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ, ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲಶಾಸ್ತ್ರಕೋವಿದನಾದ 80 ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗುತ್ತದೆ. ಶಾಸ್ತ್ರಗಳಲ್ಲಿ ಸತ್ವವಿಲ್ಲದ್ದನ್ನು ಬಿಟ್ಟು ಸಾರವನ್ನು ಮಾತ್ರ ಬೋಧಿಸಿ ವಿಷ್ಣುಶರ್ಮನು ಆರು ತಿಂಗಳುಗಳಲ್ಲಿ ಅವರನ್ನು ನೀತಿಶಾಸ್ತ್ರದಲ್ಲಿ ಕೌಶಲರನ್ನಾಗಿ ಮಾಡುತ್ತೇನೆಂದು ಅವರಿಗಾಗಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿ ಬೋಧಿಸುತ್ತಾನೆ. ಎಲ್ಲದರಲ್ಲೂ ಸಾರಮಾತ್ರವನ್ನು ಬೇಗನೆ ತಿಳಿದುಕೊಳ್ಳುವ ಹಂಬಲವಿರುವ ಇಂದಿನ ಯುವಜನಾಂಗಕ್ಕೆ, ವಿವಿಧ ಶಾಸ್ತ್ರಗಳ ಸಾರವನ್ನು ಶೋಧಿಸಿಟ್ಟಿರುವ ಪಂಚತಂತ್ರದ ರಚನೆ ಸಹಜವಾಗಿಯೇ ಆಕರ್ಷಣೀಯವಾಗಿ ಕಾಣಬೇಕು.

ಪಂಚತಂತ್ರದ ಕಥಾಮುಖದಲ್ಲಿ ವಿಷ್ಣುಶರ್ಮನು ಇದನ್ನು ಬಾಲಬೋಧನೆಗಾಗಿ ರಚಿಸಿದ್ದೆಂದು ಹೇಳಿಕೊಂಡಿದ್ದಾನೆ. ಆ ಕಾಲದ ಬಾಲಕರಿಗೆ ಇಂದಿನವರಿಗಿಂತ ಹೆಚ್ಚು ಪ್ರೌಢಿಮೆಯಿತ್ತೇನೋ ತಿಳಿಯದು, ಆದರೆ ಇದರಲ್ಲಿರುವ ವಿಷಯಗಳು ನಮ್ಮ ಈ ಕಾಲದಲ್ಲಿ ಮಕ್ಕಳಿಗಷ್ಟೇ ಸೀಮಿತವಾಗಿರದೆ, ದೊಡ್ಡವರಿಗೂ ಸಾಕಷ್ಟು ಗ್ರಹಿಕೆಗೆ ಹಾಗೂ ಕಲಿಕೆಗೆ ವಿಷಯಗಳನ್ನು ಒದಗಿಸುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ವಿಪರ್ಯಾಸವೆಂದರೆ ಈಗ ಲಭ್ಯವಿರುವ ಪಂಚತಂತ್ರದ ಕಥಾಪುಸ್ತಕಗಳನ್ನು ಓದಿದಾಗ, ಮೂಲ ಆಶಯವೇ ಕಳೆದುಹೋಗಿ ಕೇವಲ ಸಣ್ಣ ಮಕ್ಕಳಿಗಾಗಿ ಬರೆದಂತಹ ಕಥೆಗಳಾಗಿ ತೋರಿಬರುತ್ತವೆ. ಪಂಚತಂತ್ರವನ್ನು ಮೂಲ ಸಂಸ್ಕೃತದಲ್ಲಿ ಓದಿದಾಗ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ.

  • ನಮಗೆ ಲಭ್ಯವಿರುವ ಪಂಚತಂತ್ರದ ವಿವಿಧ ಕಥೆಗಳು ಹೆಚ್ಚಿನದಾಗಿ ಸ್ವತಂತ್ರ ರೀತಿಯಲ್ಲಿ ಹೇಳಲ್ಪಟ್ಟಿರುತ್ತವೆ. ಅಂದರೆ ಯಾವುದೇ ಕಥೆಯು ಪಂಚತಂತ್ರದ ಐದು ತಂತ್ರಗಳಲ್ಲಿ ಬರುವ ಮೂಲಕಥೆಗೆ ಹೇಗೆ ಪೂರಕವಾಗಿ ಬರುತ್ತದೆ ಎನ್ನುವುದು ಮೂಲವನ್ನು ಓದದಿದ್ದರೆ ಸ್ಪಷ್ಟವಾಗುವುದಿಲ್ಲ.
  • ಐದು ತಂತ್ರಗಳ ಸೂತ್ರ ಕಥೆಗಳಲ್ಲಿ ಬರುವ ಪಾತ್ರಗಳು, ತಮ್ಮ ಯಾವ ವಾದವನ್ನು ಪ್ರತಿಪಾದಿಸಲು ಉಪಕಥೆಯನ್ನು ಸಂದರ್ಭೋಚಿತವಾಗಿ ಹೇಗೆ ಬಳಸಿವೆ ಎಂಬುದನ್ನು ಅರಿಯುವುದು ಮುಖ್ಯ.
  • ಕಥೆಗಳಲ್ಲಿ ಬರುವ ಪಾತ್ರಗಳು ತಮ್ಮ ವಾದವನ್ನು ಅಥವಾ ನಿಲುವನ್ನು ಸಮರ್ಥಿಸಿಕೊಳ್ಳಲು ಹಲವು ಸುಭಾಷಿತಗಳನ್ನು ಹಾಗೂ ಲೋಕೋಕ್ತಿಗಳನ್ನು ಯಥೇಚ್ಛವಾಗಿ ಬಳಸಿವೆ. ಇದಾವುದು ಬಹುತೇಕ ಮಕ್ಕಳಿಗೆ ಲಭ್ಯವಿರುವ ಕಥೆಗಳಲ್ಲಿ ಬಾರದೇ ಇರುವುದರಿಂದ ಒಂದು ಒಳ್ಳೆಯ ಜ್ಞಾನಭಂಡಾರವನ್ನೇ ಕಳೆದುಕೊಂಡಂತೆ ಆಗಿದೆ.

ಆದ್ದರಿಂದ ಈಗಿನ ಯುವಜನಾಂಗಕ್ಕೆ ನಮ್ಮ ಹಳೆಯ ಪಂಚತಂತ್ರದ ಕಥೆಗಳು ಹೇಗೆ ಇನ್ನೂ ಪ್ರಸ್ತುತವಾಗಿವೆ, ಅದರಿಂದ ನಾವು ಕಲಿಯಬೇಕಾದುದ್ದೇನು, ತಿಳಿಯಬೇಕಾದುದ್ದೇನು ಎಂಬುದರ ಬಗ್ಗೆ ಸ್ವಲ್ಪ ವಿಸ್ತಾರವಾಗಿ ನೋಡಬೇಕಾದ ಅವಶ್ಯಕತೆಯಿದೆ. ಆದರೆ ಮೊದಲು ಪಂಚತಂತ್ರದ ಸ್ಥೂಲ ಪರಿಚಯವನ್ನು ಮಾಡಿಕೊಂಡು ನಂತರ ಅದರ ಪ್ರಸ್ತುತತೆಯ ಬಗ್ಗೆ ದೃಷ್ಟಿಹರಿಸೋಣ.

ಹೆಸರೇ ಹೇಳುವಂತೆ ಪಂಚತಂತ್ರದಲ್ಲಿ ಒಟ್ಟು ಐದು ತಂತ್ರಗಳಿವೆ. ಈ ಐದೂ ತಂತ್ರಗಳಲ್ಲಿ ಒಂದೊಂದು ಪ್ರಧಾನ ಸೂತ್ರಕಥೆಯಿದ್ದು, ಸೂತ್ರಕಥೆಗಳಲ್ಲಿ ಇತರ ಉಪಕಥೆಗಳು ಸಾಂದರ್ಭಿಕವಾಗಿ ಬರುತ್ತವೆ. ಐದು ತಂತ್ರಗಳ ಸ್ಥೂಲ ಪರಿಚಯ ಹೀಗಿದೆ:

  1. ಮಿತ್ರಭೇದ: ಕಾಡಿನ ರಾಜನಾದ ಸಿಂಹ ಹಾಗೂ ನಾಡಿನಿಂದ ಬಂದ ಎತ್ತಿನ ಮಧ್ಯೆ ಉಂಟಾದ ಅಸಹಜ ಮೈತ್ರಿಯ ಮೋಹದಲ್ಲಿ ಸಿಂಹವು ಕರ್ತವ್ಯಭ್ರಷ್ಟನಾಗಿ ಅದರ ಪ್ರಜೆಗಳು ತೊಂದರೆಗೆ ಸಿಲುಕಿದಾಗ, ಸಿಂಹದ ಮಂತ್ರಿಯಾಗಿದ್ದ ನರಿಯು ಈ ಮೈತ್ರಿಯನ್ನು ಹೇಗೆ ಒಡೆಯಿತು ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಈ ತಂತ್ರದಲ್ಲಿ ಒಟ್ಟು 22 ಉಪಕಥೆಗಳಿವೆ.
  2. ಮಿತ್ರಸಂಪ್ರಾಪ್ತಿ: ಒಳ್ಳೆಯ ಮಿತ್ರರನ್ನು ಗಳಿಸುವುದರಿಂದ ಯಾವ ವಿಶೇಷವಾದ ಸಲಕರಣೆಗಳಿಲ್ಲದೆಯೇ ಆಪತ್ತಿನಿಂದ ಹೇಗೆ ದೂರವಾಗಬಹುದೆಂದು ಕಾಗೆ, ಇಲಿ, ಆಮೆ ಮತ್ತು ಜಿಂಕೆಯ ಸೂತ್ರಕಥೆಯ ಮೂಲಕ ತೋರಿಸಲಾಗಿದೆ. ಇಲ್ಲಿ ಉತ್ತಮ ಮಿತ್ರನ ಲಕ್ಷಣಗಳನ್ನು ವಿವರಿಸಲಾಗಿದೆ. ಈ ತಂತ್ರದಲ್ಲಿ ಒಟ್ಟು 6 ಉಪಕಥೆಗಳು ಬರುತ್ತವೆ.
  3. ಕಾಕೋಲೂಕೀಯ: ಕಾಗೆ ಹಾಗೂ ಗೂಬೆಗಳ ಮಧ್ಯೆ ಇರುವ ಸಹಜ ವೈರತ್ವದ ಬಗ್ಗೆ ಸೂತ್ರಕಥೆಯನ್ನುಳ್ಳ ಈ ತಂತ್ರದಲ್ಲಿ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ ಮತ್ತು ದ್ವೈಧೀಭಾವ ಮುಂತಾದ ಶತ್ರುವನ್ನು ಗೆಲ್ಲಲು ಬಳಸುವ ವಿಧಾನಗಳನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕೆಂದು 17 ಉಪಕಥೆಗಳ ಮೂಲಕ ವಿವರಿಸಲಾಗಿದೆ.
  4. ಲಬ್ಧಪ್ರಣಾಶ: ಈ ತಂತ್ರದಲ್ಲಿ ಮಂಗ ಹಾಗೂ ಮೊಸಳೆಯ ಸೂತ್ರಕಥೆಯ ಮೂಲಕ ಪಡೆದುಕೊಂಡದ್ದನ್ನು ಮೂರ್ಖತನದಿಂದ ಕಳೆದುಕೊಳ್ಳುವುದರ ಬಗ್ಗೆ ವಿವರಿಸಲಾಗಿದೆ. ಇದರಲ್ಲಿ 11 ಉಪಕಥೆಗಳಿವೆ.
  5. ಅಪರೀಕ್ಷಿತಕಾರಕ: ಸರಿಯಾಗಿ ವಿಚಾರ ಮಾಡದೆ ಕೈಗೊಂಡ ಕಾರ್ಯಗಳಿಂದ ಆಗುವ ಅನಾಹುತಗಳನ್ನು ವಿವಿಧ ಕಥೆಗಳ ಮೂಲಕ ತೋರಿಸಲಾಗಿದೆ. ಈ ಭಾಗದಲ್ಲಿ ಒಟ್ಟು 14 ಉಪಕಥೆಗಳಿವೆ.

ಹೆಚ್ಚಾಗಿ ಭಾರತೀಯ ಸಂಪ್ರದಾಯದಲ್ಲಿ ಕಥೆಗಳು ನೇರವಾಗಿ ಪ್ರಾರಂಭವಾಗುವುದಿಲ್ಲ. ಕಥೆಗಳು ಹೇಗೆ ಉದ್ಭವವಾಯಿತು, ಯಾರು ಯಾರಿಗೆ ಆ ಕಥೆಗಳನ್ನು ಯಾವ ಕಾರಣದಿಂದ ಹೇಳಿದರು ಎಂದೆಲ್ಲಾ ವಿವರಗಳು ಮೊದಲು ಬಂದು, ಮತ್ಯಾರೋ ಆ ಕಥೆಗಳನ್ನು ಇನ್ನೊಬ್ಬರಿಗೆ ಹೇಳುತ್ತಿರುವಂತೆ ಗ್ರಂಥವು ರಚಿತವಾಗಿರುತ್ತದೆ. ಅಲ್ಲದೆ ಮೂಲ ಕಥೆಯೊಳಗೆ ಉಪಕಥೆಗಳು, ಉಪಕಥೆಗಳಲ್ಲಿ ಮತ್ತೂ ಉಪಕಥೆಗಳು, ಉಪಕಥೆಯು ಮುಗಿದ ನಂತರ ಮೂಲಕಥೆಯು ಮುಂದುವರೆಯುವುದು ಸಾಮಾನ್ಯವಾಗಿ ಕಾಣುವ ರಚನಾವಿಧಾನ. ರಾಮಾಯಣ, ಮಹಾಭಾರತ ಅಲ್ಲದೆ ಕಥೆಗಳ ಆಗರವಾಗಿರುವ ಕಥಾಸರಿತ್ಸಾಗರದಲ್ಲಿ ಕಂಡುಬರುವ ಇಂಥ ರಚನಾವೈಶಿಷ್ಟ್ಯವೇ ಪಂಚತಂತ್ರದಲ್ಲೂ ಕಾಣಸಿಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈಗ ಲಭ್ಯವಿರುವ ಮಕ್ಕಳ ಪಂಚತಂತ್ರ ಪುಸ್ತಕಗಳು ಈ ವೈಶಿಷ್ಟ್ಯವನ್ನು ಉಳಿಸಿಕೊಳ್ಳದೆ ಕಥೆಗಳನ್ನು ಬಿಡಿಬಿಡಿಯಾಗಿ ಪ್ರಸ್ತುತಪಡಿಸುತ್ತವೆ.

ಪಂಚತಂತ್ರವು ಸಾಂಪ್ರದಾಯಿಕವಾಗಿ ಮಾಡಿದಂತಹ ನೀತಿಯ ಪಾಠವಲ್ಲದ್ದರಿಂದ ವಿಷಯವು ಹೆಚ್ಚು practical ಆಗಿದೆ ಎಂದರೆ ತಪ್ಪಾಗಲಾರದು. ವಿವಿಧ ಸಂದರ್ಭಗಳನ್ನು ಹೇಗೆ ಎದುರಿಸಬೇಕು, ಸ್ವಧರ್ಮ ಯಾವಾಗ ಪಾಲಿಸಬೇಕು, ಆಪತ್ ಧರ್ಮ ಯಾವಾಗ ಅನ್ವಯಿಸುತ್ತದೆ, ಧೂರ್ತರನ್ನು, ನೀಚರನ್ನು, ಸಮಬಲರನ್ನು, ಬಲಶಾಲಿಗಳನ್ನು  ಹೇಗೆ ಎದುರಿಸಬೇಕು, ಮೂರ್ಖರೊಂದಿಗೆ ಹಾಗೂ ಬುದ್ಧಿವಂತರೊಂದಿಗಿನ ವ್ಯವಹಾರ ಹೇಗಿರಬೇಕು, ಪರಂಪರೆಯ ಮಹತ್ವವೇನು, ಸ್ವದೇಶದಲ್ಲಿ ಎಲ್ಲಿಯವರೆಗೆ ನೆಲೆನಿಲ್ಲಬೇಕು, ವಿದೇಶವನ್ನು ಯಾವಾಗ ಆಶ್ರಯಿಸಬೇಕು, ಗುರಿ ಮುಟ್ಟಲು ಕಪಟತಂತ್ರವನ್ನು ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳಬೇಕು, ಕಾರ್ಯಾಲಯದ ರಾಜಕೀಯಕ್ಕೆ ಹೇಗೆ ಸ್ಪಂದಿಸಬೇಕು ಮುಂತಾದ ಹತ್ತು ಹಲವು ವಿಷಯಗಳನ್ನು ನಮ್ಮ ವೃತ್ತಿ, ವಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದೆಂದು ಪಂಚತಂತ್ರದಿಂದ ತಿಳಿಯಲು ಸಾಧ್ಯ.

ಪಂಚತಂತ್ರ ಕಥೆಗಳಲ್ಲಿ ಬರುವ ಪ್ರಮುಖ ವಿಷಯಗಳನ್ನು ಈಗ ವಿಂಗಡಿಸಿ ನೋಡೋಣ:

ರಾಜಧರ್ಮ

ಪಂಚತಂತ್ರವು ರಾಜಕುಮಾರರಿಗೆ ಮಾಡಿದ ಪಾಠವಾದ್ದರಿಂದ ರಾಜಧರ್ಮದ ಅನೇಕ ವಿಚಾರಗಳು ಇಲ್ಲಿ ಬರುವುದು ಸಹಜ. ಮಿತ್ರಭೇದದಲ್ಲಿ ದಮನಕ ನರಿಯು ಕಳೆದುಕೊಂಡ ಮಂತ್ರಿಪದವಿಯನ್ನು ಮರುಪಡೆಯಲು ಕಾರ್ಯಪ್ರವೃತ್ತವಾದಾಗ ಕರಟಕ ನರಿಯು ಅದನ್ನು ಎಚ್ಚರಿಸುತ್ತಾ ರಾಜನಾದವನ ಬಹುಮುಖ ವ್ಯಕ್ತಿತ್ವವನ್ನು ಪರ್ವತಕ್ಕೆ ಹಾಗೂ ವಿಷಸರ್ಪಕ್ಕೆ ಹೋಲಿಸುತ್ತದೆ. ಪರ್ವತವು ಹೇಗೆ ಕ್ರೂರಮೃಗಗಳಿಂದ ಕೂಡಿ, ಎತ್ತರತಗ್ಗುಗಳಿಂದ ದುರ್ಗಮವಾಗಿ, ಕಲ್ಲುಮುಳ್ಳುಗಳಿಂದ ಕಠಿಣವಾಗಿ ಏರಲು ಅಸಾಧ್ಯವಾಗಿದೆಯೋ, ಅದೇ ರೀತಿ ರಾಜನೂ ಕೂಡ ದುಷ್ಟಜನರೂ, ಉಪಾಯಬಲ್ಲವರೂ ಹಾಗೂ ಕಪಟಿಗಳಿಂದ ಸುತ್ತುವರಿಯಲ್ಪಟ್ಟಿರುತ್ತಾನೆ. ಹಾಗಾಗಿ ಆತನನ್ನು ತಲುಪುವುದು ಕಷ್ಟಕರವು. ರಾಜರು ಹಾವುಗಳಂತೆ ಭೋಗವಿಲಾಸಿಗಳು, ಕವಚ ಧರಿಸಿರುವವರು, ವಕ್ರಸ್ವಭಾವದವರು, ಕ್ರೂರಿಗಳು, ಅತೀವ ದುಷ್ಟರು ಹಾಗೂ ಮಂತ್ರಗಳಿಗೆ ವಶವಾಗುವವರು. ಹಾವುಗಳು ಹೇಗೆ ಎರಡು ನಾಲಿಗೆಗಳನ್ನು ಹೊಂದಿರುತ್ತವೆಯೋ, ಕ್ರೂರಕಾರ್ಯಗಳನ್ನು ಮಾಡುತ್ತವೆಯೋ, ಬಿಲವನ್ನನುಸರಿಸಿ ನಡೆಯುತ್ತವೆಯೋ, ದೂರದಿಂದಲೇ ಗ್ರಹಿಸುತ್ತವೆಯೋ ಹಾಗೆ ರಾಜರೂ ಕೂಡ ಒಮ್ಮೊಮ್ಮೆ ಒಂದೊಂದು ರೀತಿ ನುಡಿಯುವ ಎರಡು ನಾಲಿಗೆಯುಳ್ಳವರು, ಕ್ರೂರಕಾರ್ಯಗಳನ್ನು ಮಾಡುವವರು, ಇತರರ ದೋಷಗಳನ್ನು ಅನುಸರಿಸಿ ನಡೆಯುವವರು ಹಾಗೂ ದೂರದರ್ಶಿಗಳಾಗಿರುತ್ತಾರೆ. ಈ ಎಲ್ಲಾ ಉಪಮೆಗಳು ಇಂದಿನ ರಾಜಕೀಯ ಮುತ್ಸದಿಗಳಿಗೆ ಯಥಾವತ್ತಾಗಿ ಅನ್ವಯವಾಗುವುದಿಲ್ಲವೇ ?

ಮಿತ್ರಭೇದದ ಸಿಂಹ ಮತ್ತು ಮೊಲದ ಕಥೆಯಲ್ಲಿ ಹೊಟ್ಟೆಯ ಅಗತ್ಯಕ್ಕಿಂತ ಹೆಚ್ಚು ಪ್ರಾಣಿಗಳನ್ನು ಕೊಲ್ಲುತ್ತಿದ್ದ ಸಿಂಹರಾಜನಿಗೆ ದಿನಕ್ಕೊಂದರಂತೆ ಪ್ರಾಣಿಯನ್ನು ಒದಗಿಸುವುದಾಗಿ ಒಪ್ಪಂದವನ್ನು ಮಾಡಿಕೊಳ್ಳುವಾಗ ಕಾಡುಪ್ರಾಣಿಗಳು ತಮ್ಮ ರಾಜನಿಗೆ ಪ್ರಜೆಗಳನ್ನು ಪಾಲಿಸುವ ಸೂಕ್ಷ್ಮತೆಯನ್ನು ಹೇಳಿ ತೋರಿಸುತ್ತವೆ. ಗೋಪಾಲಕನು ಗೋವುಗಳನ್ನು ಪಾಲನೆ ಪೋಷಣೆ ಮಾಡುತ್ತಾ ಮೆಲ್ಲಮೆಲ್ಲನೆ ಹೇಗೆ ಹಾಲನ್ನು ಪಡೆದುಕೊಳ್ಳುವನೋ ಹಾಗೆ ರಾಜನು ತನ್ನ ಪ್ರಜೆಗಳನ್ನು ಪಾಲನೆ ಪೋಷಣೆ ಮಾಡುತ್ತಾ ನಿಧಾನವಾಗಿ ಧನವನ್ನು ಸಂಪಾದಿಸಿಕೊಂಡು ನ್ಯಾಯಮಾರ್ಗದಲ್ಲಿ ನಡೆಯಬೇಕು. ಪ್ರಕಾಶಿಸುತ್ತಿರುವ ದೀಪವು ತನ್ನಲ್ಲಿರುವ ಬಿಳಿಯಾದ ಬತ್ತಿಯಿಂದ ಎಣ್ಣೆಯನ್ನು ಹೀರಿಕೊಳ್ಳುವುದು ಹೇಗೆ ಯಾರಿಗೂ ತಿಳಿಯುವುದಿಲ್ಲವೋ, ಹಾಗೆ ರಾಜನು ತನ್ನ ಒಳ್ಳೆಯ ಗುಣಗಳಿಂದ ಪ್ರಜೆಗಳಿಂದ ಧನವನ್ನು (ಕರ) ತೆಗೆದುಕೊಳ್ಳುವುದು ವಿಶೇಷವಾಗಿ ಯಾರ ಗಮನಕ್ಕೂ ಬರದಂತಿರಬೇಕು.

ಮಿತ್ರಸಂಪ್ರಾಪ್ತಿಯ ಕಥೆಯೊಂದರಲ್ಲಿ ಪಾರಿವಾಳ ರಾಜನು ಬಲೆಯಲ್ಲಿ ಸೆರೆಸಿಕ್ಕ ತಮ್ಮೆಲ್ಲರನ್ನೂ ಇಲಿಯ ಸಹಾಯದಿಂದ ಬಿಡಿಸಿಕೊಳ್ಳುವ ಸಂದರ್ಭದಲ್ಲಿ, ಮೊದಲು ತನ್ನ ಆಪ್ತಜನರನ್ನೆಲ್ಲಾ ಬಿಡಿಸಿ ನಂತರ ತಾನು ಬಿಡುಗಡೆಹೊಂದುವ ಉತ್ತಮ ನಿದರ್ಶನವನ್ನು ತೋರುತ್ತದೆ.

ಹೀಗೆ ಹತ್ತು ಹಲವು ಕಥೆಗಳ ಮೂಲಕ ಆಡಳಿತದಲ್ಲಿರುವವನು ಹೇಗಿರಬೇಕು, ಹೇಗಿರಬಾರದು, ಹೇಗೆ ಆಡಳಿತ ನಡೆಸಬೇಕು, ಆತನ ಆದ್ಯತೆಗಳೇನು, ಗುಣಗಳೇನು, ಪ್ರಜೆಗಳು ಎಂತಹ ರಾಜನನ್ನು ತ್ಯಜಿಸಬೇಕು ಮುಂತಾದ ಉದಾಹರಣೆಗಳು ಬರುತ್ತವೆ. ಇವೆಲ್ಲವೂ ಇಂದಿಗೆ ಹಾಗೂ ಮುಂದೆದಿಗೂ ಪ್ರಸ್ತುತವಾಗಿರುವಂತಹ ವಿಷಯಗಳು.

ಕೇವಲ ರಾಜನ ಬಗ್ಗೆ ಅಲ್ಲದೆ ಮಂತ್ರಿಯ ಕರ್ತವ್ಯಗಳನ್ನೂ ಪರಿಣಾಮಕಾರಿ ಕಥೆಗಳ ಮೂಲಕ ತೋರಿಸಿಕೊಡಲಾಗಿದೆ. ಮಿತ್ರಭೇದದಲ್ಲಿ ಸಂಜೀವಕ ಎತ್ತಿನ ಸ್ನೇಹದಿಂದ ಪಿಂಗಲಕ ಸಿಂಹರಾಜನು ಕರ್ತವ್ಯಭ್ರಷ್ಟನಾದಾಗ, ಮಂತ್ರಿ ದಮನಕ ನರಿಯು ಅವರಿಬ್ಬರಿಗೂ ತಿಳಿಯದಂತೆ ಅವರ ಮಧ್ಯೆ ಕಲಹವನ್ನುಂಟುಮಾಡಿ ಸಿಂಹವೇ ಎತ್ತನ್ನು ಕೊಲ್ಲುವಂತೆ ಮಾಡುತ್ತದೆ. ಪರಂಪರಾಗತವಾಗಿ ಬಂದ ತನ್ನ ಮಂತ್ರಿಪದವಿಯನ್ನು ಉಳಿಸಿಕೊಳ್ಳಲು ಮತ್ತು ರಾಜ್ಯದ ಹಿತದೃಷ್ಟಿಯಿಂದ ಮಂತ್ರಿಯಾದವನು ಎಷ್ಟು ನಿರ್ದಯಿಯಾಗಲು ಸಾಧ್ಯವೆಂದು ಇದು ಚಿತ್ರಿಸುತ್ತದೆ. ಈಗಿನ ಸಂದರ್ಭಕ್ಕೆ ನೋಡುವುದಾದರೆ ಆಡಳಿತ ನಡೆಸುವವನ ಸಲಹೆಗಾರ ಹೇಗಿರಬೇಕು, ಆತನ ಅರ್ಹತೆಗಳೇನು ಮುಂತಾದ ಅನೇಕ ವಿಷಯಗಳನ್ನು ಪಂಚತಂತ್ರದಿಂದ ತಿಳಿಯಲು ಸಾಧ್ಯ.

ಕೇವಲ ಆದರ್ಶಗಳನ್ನು ಮಾತ್ರ ಚಿತ್ರಿಸದೆ ನಿತ್ಯಜೀವನದ ವ್ಯವಹಾರದಲ್ಲಿ ಹೇಗಿರಬೇಕೆಂದು ತೋರಿಸುವುದು ಪಂಚತಂತ್ರದ ವಿಶೇಷ. ರಾಜನ ಸೇವೆಯಲ್ಲಿರುವ ಕಸಗುಡಿಸುವವನಿಗೆ ಗೌರವ ಕೊಡದಿದ್ದರೆ ಏನಾಗತ್ತದೆ ಎಂಬುದಕ್ಕೆ ದಂತಿಲ-ಗೋರಂಭರ ಕಥೆ ಉತ್ತಮವಾದ ನಿದರ್ಶನ.

ಶತ್ರುನಿಗ್ರಹ ಮತ್ತು ರಣತಂತ್ರ

ಪಂಚತಂತ್ರದ ಹಲವೆಡೆ ಶತ್ರುವನ್ನು ಹೇಗೆ ನಿಭಾಯಿಸಬೇಕೆಂದು ಉದಾಹರಣೆಗಳು ಬಂದರೂ, ಮೂರನೆಯ ತಂತ್ರವಾದ ಕಾಕೋಲೂಕೀಯವನ್ನು ಈ ವಿಷಯಗಳಿಗಾಗಿಯೇ ಮೀಸಲಿಡಲಾಗಿದೆ. ರಾಷ್ಟ್ರ ಮತ್ತು ರಾಜ್ಯವನ್ನು ನಡೆಸುವವರಿಗೆ ಉತ್ತಮವಾದ ಪಾಠವನ್ನು ಇಲ್ಲಿ ಕಾಣಬಹುದು.

ಹಗಲುಕುರುಡರಾದ ಗೂಬೆಗಳು ಕತ್ತಲಿನಲ್ಲಿ ಕಾಗೆಗಳ ವಾಸಸ್ಥಾನಕ್ಕೆ ಬಂದು ಅವುಗಳನ್ನು ನಾಶಮಾಡುತ್ತಿದ್ದಾಗ ಅವುಗಳಿಂದ ಹೇಗೆ ಪಾರಾಗಬೇಕೆಂದು ಕಾಗೆಗಳ ರಾಜ ತನ್ನ ಮಂತ್ರಿಗಳ ಸಲಹೆಯನ್ನು ಕೇಳುತ್ತದೆ. ಸತ್ಯಸಂಧನೂ, ಧಾರ್ಮಿಕನೂ ಆದ ಬಲಿಷ್ಠನೊಂದಿಗೆ ಸಂಧಿ, ಅಧಾರ್ಮಿಕ ಮತ್ತು ಲೋಭಿಯಾದವನೊಂದಿಗೆ ಯುದ್ಧ, ಶತ್ರು ದುಷ್ಟನೂ ಹಾಗೂ ಬಲಿಷ್ಠನೂ ಆದರೆ ಪಲಾಯನ, ತನ್ನ ರಕ್ಷಣಾ ವ್ಯವಸ್ಥೆಯ ಮೇಲೆ ನಂಬಿಕೆಯಿದ್ದರೆ ಆಸನ, ಬಲಹೀನನಾಗಿದ್ದಾಗ ಇತರರ ಆಶ್ರಯ ಮತ್ತು ತಂತ್ರಗಾರಿಕೆಯ ಬುದ್ಧಿವಂತಿಕೆಯಿದ್ದರೆ ದ್ವ್ವೈಧೀಭಾವ (double game) – ಈ ಸಲಹೆಗಳು ಮಂತ್ರಿಗಳಿಂದ ದೊರೆಯುತ್ತವೆ. ಈ ಆರು ಉಪಾಯಗಳನ್ನು ಯಾವ ಸಂದರ್ಭದಲ್ಲಿ ಯಾರು ಉಪಯೋಗಿಸಬಹುದೆಂಬ ಸವಿಸ್ತಾರ ವಿವರಣೆಯನ್ನು ಕಥೆಯಲ್ಲಿ ಕಾಣಬಹುದು.

ಶರಣಾಗತನಾಗಿ ಬಂದ ಶತ್ರುಪಕ್ಷದವನನ್ನು ಹೇಗೆ ನೆಡೆಸಿಕೊಳ್ಳಬೇಕೆಂದು ಅನೇಕ ಕಥೆಗಳ ಮೂಲಕ ವಿವರಗಳು ದೊರೆಯುತ್ತವೆ. ಸೆರೆಸಿಕ್ಕ ಶತ್ರುವನ್ನು ವಿಚಾರಮಾಡದೆ ಕೊಲ್ಲಬೇಕೇ, ರಕ್ಷಣೆಯನ್ನು ಬೇಡಿ ಬಂದವರಿಗೆ ಆಶ್ರಯ ನೀಡಬೇಕೇ, ಪರಸ್ಪರ ಕಚ್ಚಾಡುವ ಶತ್ರುಗಳನ್ನು ಹೇಗೆ ಬಳಸಿಕೊಳ್ಳಬೇಕು, ಸಮಯ ಬಂದಾಗ ಅಪಮಾನವನ್ನು ಸಹಿಸಿಕೊಂಡು ನಂತರದಲ್ಲಿ ವಿಜಯಕ್ಕಾಗಿ ಕಾರ್ಯಾಚರಣೆ, ಕೋಟೆ ಅಥವಾ ಇಂದಿನ ಯುಗಕ್ಕೆ ಹೊಂದುವ ರಕ್ಷಾಣಾ ವ್ಯವಸ್ಥೆಯ ಮಹತ್ವ ಮುಂತಾದ ರಣತಂತ್ರಗಳನ್ನು ಸರಳವಾದ ಕಥೆಗಳ ಮೂಲಕ ವಿವರಿಸಲಾಗಿದೆ.

ಎಲ್ಲಾ ವಿವಾದಗಳನ್ನು non-combative ವಿಧಾನ ಅಥವಾ ಮಾತುಕತೆಯಿಂದಲೇ ಬಗೆಹರಿಸಬೇಕೆಂಬ ಈಗಿನ ಮನಸ್ಥಿತಿಯ ಹಿನ್ನಲೆಯಲ್ಲಿ, ನಮ್ಮ ಪೂರ್ವಜರು ಶತ್ರುಗಳನ್ನು ಕೊಲ್ಲಲು ಬಳಸುತ್ತಿದ್ದ ತಂತ್ರಗಳನ್ನು ಈ ಕಥೆಗಳ ಮೂಲಕ ತಿಳಿದಾಗ ನಮ್ಮ ಕ್ಷಾತ್ರ ಸಂಪ್ರದಾಯ ಎಂಥದ್ದೆಂದು ತಿಳಿಯುತ್ತದೆ. ಈ ಸಂದರ್ಭದಲ್ಲಿ ಕಥೆಯಲ್ಲಿ ಬರುವ ಒಂದೆರಡು ಮಾತುಗಳನ್ನು ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ:

“ಆಗ ತಾನೇ ಚಿಗುರುತ್ತಿರುವ ಶತ್ರುವನ್ನು ಮತ್ತು ವ್ಯಾಧಿಯನ್ನು ಯಾರು ನಿವಾರಿಸಿಕೊಳ್ಳದೇ ಅವುಗಳನ್ನು ಬೆಳೆಯಲು ಬಿಡುತ್ತಾರೋ ಅವರು ಅವುಗಳಿಂದಲೇ ನಾಶಹೊಂದುತ್ತಾರೆ.”

“ಒಂದು ವೇಳೆ ಬೇರೆ ಉಪಾಯಗಳಿಂದ ಶತ್ರುನಾಶ ಸಾಧ್ಯವಾಗದೇ ಇದ್ದಾಗ, ತನ್ನ ಮಗಳನ್ನು ಶತ್ರುವಿಗೆ ಮದುವೆ ಮಾಡಿಕೊಟ್ಟು ಆತನ ವಿಶ್ವಾಸಗಳಿಸಿ ಅನಂತರ ಆತನನ್ನು ಕೊಲ್ಲಬೇಕು. ಹೀಗೆ ಮಾಡಿದರೂ ಏನು ದೋಷವಿಲ್ಲ. ಶತ್ರುವಿನೊಂದಿಗೆ ಯುದ್ಧನಿರತನಾದ ಕ್ಷತ್ರಿಯನು ಏನು ಮಾಡಬಹುದು ಅಥವಾ ಏನು ಮಾಡಬಾರದು ಎಂದೆಲ್ಲಾ (ಕೃತ್ಯಾಕೃತ್ಯಗಳನ್ನು) ಪರಿಗಣಿಸುವಂತಿಲ್ಲ.”

ಹೀಗೆ ಆಂತರಿಕ ಹಾಗೂ ಬಾಹ್ಯ ಶತ್ರುಗಳನ್ನು ಗುರುತಿಸುವ ಬುದ್ಧಿವಂತಿಕೆ, ಸಂಧಿ ಮುಂತಾದ ಉಪಾಯಗಳಿಂದ ಹಿಡಿದು ಶತ್ರುವನ್ನು ಬುಡಸಮೇತವಾಗಿ ನಾಶಮಾಡುವ ಛಲ ಹಾಗೂ ಬಲ ದೇಶವನ್ನು ನಡೆಸುವವರಿಗೆ ಇರಬೇಕೆಂದು ಪಂಚತಂತ್ರವು ವಿವರವಾಗಿ ತೋರಿಸಿಕೊಡುತ್ತದೆ.

[ಮುಂದುವರೆಯುವುದು…]

(Image credit: hinduhumanrights.info)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply