close logo

ಪಂಚತಂತ್ರ – ನಮಗೇಕಿನ್ನೂ ಪ್ರಸ್ತುತ? ಭಾಗ ೨

ಸೇವಾವೃತ್ತಿ

ರಾಜನ ಸೇವೆಯಲ್ಲಿರುವ ಭೃತ್ಯರು (employees) ರಾಜನೊಂದಿಗೆ ಹೇಗೆ ನಡೆದುಕೊಳ್ಳಬೇಕು ಹಾಗೂ ರಾಜನು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ವಿವರಗಳು ಪಂಚತಂತ್ರದಲ್ಲಿ ಬರುತ್ತವೆ.

ದಮನಕನು ಪಿಂಗಲಕನಿಗೆ ರಾಜ-ಸೇವಕರ ನಡುವಿನ ಸಂಬಂಧವನ್ನು ವಿವರಿಸುತ್ತಾ ನುಡಿದ ಕೆಲವು ಮಾತುಗಳು ಹೀಗಿವೆ – “ರಾಜನಿಲ್ಲದೆ ಸೇವಕರಿಲ್ಲ ಹಾಗೂ ಸೇವಕರಿಲ್ಲದೆ ರಾಜನಿಲ್ಲ. ಅವರ ವ್ಯವಹಾರವು ಪರಸ್ಪರ ಅವಲಂಬಿತವಾಗಿರುತ್ತದೆ. ಚಕ್ರದಲ್ಲಿ ಹೇಗೆ ಕಡ್ಡಿಗಳೂ ಹಾಗೂ ನಾಭಿಯು (ಮಧ್ಯಬಿಂದು ಪ್ರದೇಶ) ಒಂದಕ್ಕೊಂದು ಆಧರಸಿ ನಿಂತಿವೆಯೋ, ಹಾಗೆ ಸೇವಕರೂ ಮತ್ತು ರಾಜನು ವೃತ್ತಿ ಚಕ್ರದಲ್ಲಿ ಪರಸ್ಪರ ಅವಲಂಬಿಗಳಾಗಿದ್ದಾರೆ. ಭೃತ್ಯರು ರಾಜನನ್ನು ಮೂರು ಕಾರಣಗಳಿಂದ ತ್ಯಜಿಸುತ್ತಾರೆ – ಸಮಾನರಲ್ಲದ ಎಲ್ಲರನ್ನೂ ಸಮಾನರಾಗಿ ಪರಿಗಣಿಸುವುದು, ಸಮಾನರನ್ನು ಸತ್ಕರಿಸುವಾಗ ಒಬ್ಬನನ್ನು ಸತ್ಕರಿಸದೇ ಇರುವುದು ಹಾಗೂ ಸರಿಯಾದ ಸ್ಥಾನದಲ್ಲಿ ನಿಯೋಜಿಸಿಕೊಳ್ಳದಿರುವುದು. ಯಾವ ರಾಜನು ಅವಿವೇಕತನದಿಂದ ಉತ್ತಮ ಪದವಿಯ ಯೋಗ್ಯತೆಯುಳ್ಳ ಭೃತ್ಯನನ್ನು ನೀಚ ಅಥವಾ ಅಧಮ ಸ್ಥಾನದಲ್ಲಿರುಸುತ್ತಾನೋ, ಅಂತಹವನ ಬಳಿ ಸೇವಕನು ನಿಲ್ಲುವುದಿಲ್ಲ.”

ಹೀಗೆ ಎಂತಹ ಸೇವಕರನ್ನು ರಾಜನು ತ್ಯಜಿಸುತ್ತಾನೆ ಮತ್ತು ಎಂತಹ ರಾಜನನ್ನು ಸೇವಕರು ಬಿಟ್ಟು ಹೋಗುತ್ತಾರೆ ಎಂಬ ವಿವರಗಳು ಬರುತ್ತವೆ.

ಈಗಿನ ಸಂದರ್ಭಕ್ಕೆ ಸಮನ್ವಯ ಮಾಡಿ ನೋಡಿದಾಗ ಸೇವಾವೃತ್ತಿಯಲ್ಲಿರುವ ನೌಕರರ ಮತ್ತವರ ಮೇಲಾಧಿಕಾರಿಗಳ ನಡುವಿನ ಸಂಬಂಧಕ್ಕೆ ಅನೇಕ ಸನ್ನಿವೇಶಗಳನ್ನು ಕಂಡುಕೊಳ್ಳಬಹುದು. ಈಗಿನ ಸರ್ಕಾರಿ ಕಚೇರಿಗಳಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲರೂ ಯೋಗ್ಯರೆಂದು ಎಲ್ಲರನ್ನೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳುವ ಹಿನ್ನಲೆಯಲ್ಲಿ, ಗುಣಗಳಿಗೆ ಮಾನ್ಯತೆ ದೊರೆಯಬೇಕೆಂಬ ಪ್ರತಿಪಾದನೆಯನ್ನು ಪಂಚತಂತ್ರದಲ್ಲಿ ಕಾಣಬಹುದು.

ಯಜಮಾನ-ನೌಕರರ ಸಂಬಂಧ ಸಂಯೋಗವು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಇಬ್ಬರ ಹೊಣೆಗಾರಿಕೆಯೂ ಇದೆ ಎಂಬುದನ್ನು ಕಾಣಬಹುದು.

ಧನದ ಮಹತ್ವ

ಧನದ ಮಹತ್ವವೇನು, ಹಣವಿದ್ದವನ ಬಾಳು ಹೇಗಿರುತ್ತದೆ, ಹಣವಿಲ್ಲದವನ ಬಾಳು ಎಷ್ಟು ಕಷ್ಟಕರ, ಹಣದ ಸಂಪಾದನೆ ಹಾಗೂ ವಿನಿಯೋಗ ಹೇಗೆ, ದಾನದ ಮಹತ್ವ ಮುಂತಾದ ವಿಷಯಗಳ ಉಲ್ಲೇಖ ಪಂಚತಂತ್ರದ ಉದ್ದಗಲಕ್ಕೂ ಬರುತ್ತದೆ.

ಧನವಿಲ್ಲದವರ ಶೋಚನೀಯ ಪರಿಸ್ಥಿಯನ್ನು ಚಿತ್ರಿಸಲು ಅವರನ್ನು ಹಲ್ಲಿಲ್ಲದ ಹಾವು ಹಾಗೂ ಮದವಿಲ್ಲದ ಆನೆಗೆ ಹೋಲಿಸಿರುವುದನ್ನು ಕಾಣಬಹುದು. ಧನವಿಲ್ಲದವನು ಏನೆಲ್ಲಾ ಪರಿಸ್ಥಿತಿಯನ್ನು ಎದುರಿಸುತ್ತಾನೆಂದು ವಿಸ್ತಾರವಾಗಿ ಅನೇಕ ಉಕ್ತಿಗಳ ಮೂಲಕ ವಿವರಿಸಲಾಗಿದೆ. ಹಾಗೆಯೇ ಹಣವಿದ್ದವರ ಅನುಕೂಲಗಳನ್ನು ವಿವರಿಸಲೂ ಅಷ್ಟೇ ಸ್ವಾರಸ್ಯಕರವಾದ ಉಕ್ತಿಗಳನ್ನು ಬಳಸಿಕೊಳ್ಳಲಾಗಿದೆ. ಉದಾಹರಣೆಗೆ, ಹಣವಿದ್ದವನು ದಾನವನ್ನು ಮಾಡದಿದ್ದರೂ ಆತನು ಎಂದಾದರೊಂದು ದಿನ ಕೊಡಬಹುದೆಂಬ ನಿರೀಕ್ಷೆಯಲ್ಲೇ ಆತನ ಸುತ್ತ ಜನ ಸೇರಿರುತ್ತಾರೆ ಎಂಬ ಸತ್ಯವನ್ನು ತೋರಿಸಲು ಕಥೆಯೊಂದಿದೆ. ಎಷ್ಟೇ ಹಣವಿದ್ದರೂ ಕೂಡ ದಾನ ಹಾಗೂ ಭೋಗಕ್ಕೆ ಸಲ್ಲದ ಹಣದಿಂದ ಏನೂ ಉಪಯೋಗವಿಲ್ಲವೆಂದು ಕಥೆಯ ಮೂಲಕ ನಿದರ್ಶಿಸಲಾಗಿದೆ.

ಪ್ರಾಯಶಃ ಪಂಚತಂತ್ರದಲ್ಲಿ ಹೆಚ್ಚು ವ್ಯಂಗ್ಯನುಡಿಗಳನ್ನು ಧನದ ವಿಷಯಕ್ಕೇ ಮೀಸಲಿಡಲಾಗಿದೆಯೆಂದು ಭಾಸವಾಗುತ್ತದೆ.

ಸ್ನೇಹ

ಪಂಚತಂತ್ರದ ಮೊದಲೆರಡು ತಂತ್ರಗಳನ್ನೇ ಮೈತ್ರಿಯೆಂಬ ಮುಖ್ಯ ವಿಷಯದ ಮೇಲೆ ರಚಿಸಲಾಗಿದೆ. ಮಿತ್ರಭೇದವು ಸಮಾಜಕ್ಕೆ ಹಾನಿಯಾಗುವಂತಹ ಅಸಹಜ ಮೈತ್ರಿಯನ್ನು ಹೇಗೆ ಒಡೆಯಬೇಕೆಂಬ ವಿಚಾರವನ್ನು ಹೊಂದಿದ್ದರೆ, ಮಿತ್ರಸಂಪ್ರಾಪ್ತಿಯಲ್ಲಿ ಮೈತ್ರಿಯ ಲಕ್ಷಣಗಳು, ಉತ್ತಮ ಮಿತ್ರರನ್ನು ಸಂಪಾದಿಸುವುದು, ಸಮಾಜದಲ್ಲಿ ಮಿತ್ರನಿಗಿರುವ ವಿಶಿಷ್ಟವಾದ ಸ್ಥಾನ, ಪ್ರಾಣಕ್ಕೆ ಪ್ರಾಣ ಕೊಡುವಂತಹ ಮಿತ್ರರು, ಯಾರೊಡನೆ ಸ್ನೇಹ ಮಾಡಬೇಕು, ಎಂಥವರೊಂದಿಗೆ ಮಾಡಬಾರದು ಮುಂತಾದ ವಿಷಯಗಳನ್ನು ಕಥೆಗಳ ಮೂಲಕ ವಿವರಿಸಲಾಗಿದೆ.

ಸುಭಾಷಿತಪ್ರಿಯರಿಗೆ ಮೈತ್ರಿಯ ಬಗ್ಗೆ ಅನೇಕ ಉತ್ತಮ ಉಕ್ತಿಗಳು ಪಂಚತಂತ್ರದಲ್ಲಿ ದೊರೆಯುತ್ತವೆ. “ಮಿತ್ರ ಎಂಬ ಎರಡಕ್ಷರದ ಅಮೃತವನ್ನು ಯಾರು ಸೃಷ್ಟಿಸಿದರೋ? ಇದು ಕಷ್ಟಗಳಿಗೆ ಪರಿಹಾರವು ಹಾಗೂ ಶೋಕಸಂತಾಪಗಳಿಗೆ ಔಷಧಿಯಿದ್ದಂತೆ” ಎಂಬುದೊಂದು ಉದಾಹರಣೆ.

ಶತ್ರುತ್ವದ ಬಗ್ಗೆಯೂ ವಿವರಗಳನ್ನು ಇಲ್ಲಿ ಕಾಣಬಹುದು.  ಬೆಕ್ಕು-ನಾಯಿ, ಅತ್ತೆ-ಸೊಸೆಯರ ಮಧ್ಯೆ ಕಾರಣವಿಲ್ಲದೆಯೇ ಇರುವ, ಎಂದೆಂದಿಗೂ ಶಮನವಾಗದ ಸಹಜ/ಸ್ವಾಭಾವಿಕ ಶತ್ರುತ್ವ ಮತ್ತು ಯೋವುದೋ ಕಾರಣದಿಂದ ಹುಟ್ಟಿಕೊಂಡು ಬಗೆಹರಿಸಿಕೊಳ್ಳಬಹುದಾದ ಕೃತ್ರಿಮ ಶತ್ರುತ್ವ ಮುಂತಾದ ವಿಷಯಗಳ ಬಗ್ಗೆ ವಿವರಣೆಯನ್ನು ಕಾಣಬಹುದು.

ತಂತ್ರ ಮತ್ತು ಕಪಟತನದ ಬಳಕೆ

ಪಂಚತಂತ್ರದ ಹೆಸರೇ ಹೇಳುವಂತೆ ಇದು ನಿರ್ಧಾರಿತ ಗುರಿ ಸಾಧನೆಗಾಗಿ ಮಾಡುವಂತಹ ತಂತ್ರಗಳ ಕಥೆ. ಮೇಲ್ನೋಟಕ್ಕೆ ಅನೇಕ ಕಡೆ ಕಥೆಯಲ್ಲಿ ಬರುವ ತಂತ್ರಗಳ ಬಳಕೆ ಸಮಜಂಸವೇ ಅಥವಾ ಧರ್ಮಕ್ಕೆ ವಿರುದ್ಧವಾಗಿಲ್ಲವೇ ಎಂಬ ಸಂಶಯವು ಮೂಡುತ್ತದೆ. ಉದಾಹರಣೆಗೆ ಈ ಶ್ಲೋಕವು ಮಿತ್ರಭೇದದ ಸೂತ್ರಕಥೆಯನ್ನು ಹೀಗೆ ಪರಿಚಯಿಸುತ್ತದೆ – “ಒಂದು ಕಾಡಿನಲ್ಲಿ, ಒಮ್ಮೆ ಸಿಂಹ ಹಾಗೂ ಎತ್ತಿಗೂ ಗಾಢವಾದ ಸ್ನೇಹವುಂಟಾಗಿರಲು, ದುಷ್ಟನಾದ ಹಾಗೂ ಅತಿಲೋಭಿಯಾದ ನರಿಯಿಂದ ಆ ಸ್ನೇಹವು ನಾಶಮಾಡಲ್ಪಟ್ಟಿತು”

ಸಿಂಹ ಮತ್ತು ಎತ್ತಿನ ಸ್ನೇಹವನ್ನು ಮುರಿದಿದ್ದು ತಪ್ಪೇ ? ನರಿಯು ನಿಜವಾಗಲೂ ದುಷ್ಟನೇ, ಲೋಭಿಯೇ ? ಸ್ನೇಹವನ್ನು ಒಡೆಯುವ ತರವಲ್ಲದ ವಿಷಯವನ್ನು ವಿವರಿಸಲು ಒಂದು ಪೂರ್ಣ ಅಧ್ಯಾಯವೇ ? ಉತ್ತಮ ಮಿತ್ರರಾಗಿದ್ದ ಸಿಂಹ ಹಾಗೂ ಎತ್ತಿನ ಮಧ್ಯೆ ಅವರಿಬ್ಬರಿಗೂ ತಿಳಿಯದ ಹಾಗೆ ಕಾದಾಡುವಂತಹ ವೈರವನ್ನು ಉಂಟುಮಾಡಿ ಸಿಂಹದ ಕೈಯಿಂದಲೇ ಎತ್ತನ್ನು ಕೊಲ್ಲಿಸಿದ ನರಿಯು ಕಪಟಿಯೇ ?

ಹೀಗೆ ಅನೇಕ ಕಥೆಗಳಲ್ಲಿ ಹಲವು ಬಾರಿ ಸರಿ-ತಪ್ಪುಗಳ ಮಧ್ಯೆ ಇರುವ ಅಂತರವು ಮಾಸಿಹೋದಂತೆ ಕಂಡರೂ, ಕೂಲಂಕುಷವಾಗಿ ನೋಡಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ತನ್ನ ನಂಬಿಕೆಗೆ ಮತ್ತು ಧರ್ಮಕ್ಕೆ (ಸ್ವಧರ್ಮ ಅಥವಾ ಆಪತ್ ಧರ್ಮ) ಸರಿಯೆನಿಸಿದ ಕಾರ್ಯವನ್ನು ಅಥವಾ ಸಮಾಜಕ್ಕೆ ಹಿತವನ್ನುಂಟುಮಾಡುವ ಕಾರ್ಯವನ್ನು ಸಾಧಿಸಿಕೊಳ್ಳಬೇಕಿದ್ದಾಗ, ನಮ್ಮ ಪರಂಪರೆಗೆ ಧಕ್ಕೆಯುಂಟಾದಾಗ, ಸ್ವಸ್ಥಾನವನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿಯುಂಟಾದಾಗ, ಶತ್ರುವನ್ನು ಸೋಲಿಸಬೇಕಾದಾಗ ಹಾಗೂ ಇನ್ನಿತರ ಸಂದರ್ಭಗಳಲ್ಲಿ, ಗುರಿಯನ್ನು ತಲುಪಲು ಸೂಕ್ತವಾದ ಯಾವುದಾದರೂ ಮಾರ್ಗವನ್ನು (ಸಾಮ, ಭೇದ, ದಾನ, ದಂಡ, ಕಪಟ, ಬೇರೆಯವರನ್ನು ಬಳಸಿಕೊಳ್ಳುವುದು ಇತ್ಯಾದಿ) ಹಿಡಿದಾದರೂ ಕಾರ್ಯವನ್ನು ಸಾಧಿಸಿಕೊಳ್ಳಬಹುದು ಎಂದು ಕಥೆಗಳು ಸಾರುತ್ತಿರುವಂತೆ ಕಾಣುತ್ತದೆ.

ಎಲ್ಲರಿಗೂ ಎಲ್ಲರೂ ಒಳ್ಳೆಯವರಾಗಿ ಸಾಧುಪ್ರಾಣಿಗಳಂತೆ ಇರಬೇಕೆಂದು ತಿಳಿಸಿಕೊಡುವ ಇಂದಿನ ಶಿಕ್ಷಣಪದ್ದತಿಯಲ್ಲಿ ಬೆಳೆದುಬಂದ ಯುವಜನಾಂಗಕ್ಕೆ, ನಿರ್ಧಿಷ್ಟವಾದ ಗುರಿಗಾಗಿ, ತಂತ್ರ, ಬುದ್ಧಿಶಕ್ತಿ ಮತ್ತು ಕಪಟತನವನ್ನು ಬಳಸಿಯಾದರೂ ಕಾರ್ಯಸಾಧನೆ ಮಾಡಿಕೊಳ್ಳುವ ಉದಾಹರಣೆಗಳು ವಿಸ್ಮಯವನ್ನು ತರಬಹುದು.

ಒಳ್ಳೆಯತನ ಮತ್ತು ಧರ್ಮದಲ್ಲಿ ನಡೆಯುವುದು ಆರೋಗ್ಯಕರ ಸಮಾಜಕ್ಕೆ ಅವಶ್ಯಕ. ಆದರೆ ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರಾಗಿರುವುದಿಲ್ಲ, ಎಲ್ಲರೂ ಧರ್ಮದಂತೆ ನಡೆಯುವುದಿಲ್ಲ. ಸಮಾಜದ ಯಾವುದೇ ವ್ಯವಸ್ಥೆಯಲ್ಲಿ ಧೂರ್ತರು ಇದ್ದೇ ಇರುತ್ತಾರೆ. ನಮ್ಮಲ್ಲಿ ಒಳ್ಳೆಯತನವಿದ್ದರೆ ಮಾತ್ರ ಸಾಲದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಕಪಟಿಗಳನ್ನು ಕಪಟತನದಿಂದಲೇ ಹತ್ತಿಕ್ಕಬೇಕು ಹಾಗೂ ಧೂರ್ತರ ಧೂರ್ತಮಾರ್ಗಗಳ ತಿಳುವಳಿಕೆಯಿರಬೇಕು. ಸಮಾಜವು ಧರ್ಮದ ಆದರ್ಶದಂತೆ ನಡೆಯುವುದಿಲ್ಲ ಎಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮವನ್ನು ಎತ್ತಿಹಿಡಿಯಲು ಏನೇನು ತಂತ್ರ ಮಾಡಬೇಕೋ ಅದೆಲ್ಲವನ್ನು ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬುದು ಪಂಚತಂತ್ರದಿಂದ ಕಲಿಯಬಹುದಾದ ಅತಿದೊಡ್ಡ ಪಾಠ.

ಬುದ್ಧಿಯ ಶ್ರೇಷ್ಠತೆ

ಬುದ್ಧಿಶಕ್ತಿಯ ಹಿರಿಮೆಯನ್ನು ತೋರಿಸಲು ಪಂಚತಂತ್ರದಲ್ಲಿ ಅನೇಕ ಕಥೆಗಳು ಬರುತ್ತವೆ. ಬೇರೆ ಯಾವ ರೀತಿಯಿಂದಲೂ ಸಾಧ್ಯವಾಗದ ಕೆಲಸಗಳನ್ನು ಬುದ್ಧಿಯ ಮೂಲಕ ಸಾಧಿಸಬಹುದೆಂದು ಈ ಕಥೆಗಳು ತೋರಿಸಿಕೊಡುತ್ತವೆ.

ಬುದ್ಧಿಶಕ್ತಿಯ ಪ್ರಭಾವವನ್ನು ಎತ್ತಿಹಿಡಿಯುವ ಅನೇಕ ಉಕ್ತಿಗಳು ಕಾಣಸಿಗುತ್ತವೆ. ವಿದ್ಯೆಗಿಂತ ಬುದ್ಧಿಯೇ ಶ್ರೇಷ್ಠವೆಂದು ಎಂದು ಸಾರುವ ಹಲವು ಕಥೆಗಳನ್ನು ಕಾಣಬಹುದು.

ಬುದ್ಧಿವಂತನಾದವನು ರಾಜನನ್ನೇ ತನ್ನ ವಶದಲ್ಲಿಟ್ಟುಕೊಳ್ಳಬಹುದು, ಪ್ರತಿಕೂಲ ಪರಿಸ್ಥಿಯಲ್ಲೂ ಬುದ್ಧಿ ನಷ್ಟವಾಗಬಾರದು, ಬುದ್ಧಿವಂತನೇ ನಿಜವಾದ ಬಲಶಾಲಿ, ಬುದ್ಧಿವಂತನಿಗೆ ಸ್ವದೇಶ ಪರದೇಶವೆಂಬ ಭೇದವಿಲ್ಲ, ಆತ ಎಲ್ಲಿಯಾದರು ಬದುಕಿಯಾನು, ಬುದ್ಧಿವಂತರು ಬುದ್ಧಿಶಕ್ತಿಯಿಂದ ಸ್ವಾರ್ಥಸಾಧನೆ ಮಾಡಿಕೊಳ್ಳಬಲ್ಲರು, ಅತಿಶಯ ಬುದ್ಧಿವಂತರು ಹೇಗೆ ಅನ್ಯರನ್ನು ವಂಚಿಸಲು ಶಕ್ತರು ಮುಂತಾದ ವಿಚಾರಗಳೆನ್ನೆಲ್ಲಾ ಹಲವು ಕಥೆಗಳ ಮೂಲಕ್ ವಿಮರ್ಶಿಸಲಾಗಿದೆ.

ಮೂರ್ಖರೊಂದಿಗಿನ ವ್ಯವಹಾರ

ಪಂಚತಂತ್ರದಲ್ಲಿ ಮೂರ್ಖರನ್ನು ಅತ್ಯಂತ ನಿಕೃಷ್ಟರಾಗಿ ಚಿತ್ರಿಸಿರುವ ಅನೇಕ ಉಕ್ತಿಗಳು ಹಾಗೂ ಕಥೆಗಳು ಕಂಡುಬರುತ್ತವೆ. ಅಲ್ಲದೆ ಮೂರ್ಖರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ನೀತಿ, ಮೂರ್ಖರಿಗೆ ಉಪದೇಶ ಮಾಡಿದರೆ ಏನಾಗುತ್ತದೆಂದು ತಿಳಿಸುವುದಕ್ಕಾಗಿಯೇ ಕೆಲವು ಕಥೆಗಳು ಬರುತ್ತವೆ.

ಅದೃಷ್ಟದ ಪಾತ್ರ

ಕೇವಲ ಅದೃಷ್ಟವನ್ನು ನಂಬಿ ಇರಲಾಗದು, ಪುರುಷಪ್ರಯತ್ನ ಬೇಕೆಂದು ಪ್ರತಿಪಾದಿಸುವ ಕಥೆಯ ಜೊತೆಗೇ ವಿಧಿನಿಯಮವನ್ನು ಮೀರಲು ಯಾರಿಗೆ ತಾನೇ ಸಾಧ್ಯ ಅಥವಾ ದೈವಾನುಕೂಲವಿಲ್ಲದಿದ್ದರೆ ಕಾರ್ಯಸಾಧನೆಯಾಗದು ಎಂದು ತೋರಿಸುವ ಕಥೆಯೂ ಇದೆ!

ಪ್ರಯತ್ನಶೀಲನಾಗಿರುವ ಪುರುಷಸಿಂಹನಿಗೆ ಲಕ್ಷ್ಮಿಯು ಒಲಿಯುವಳು ಆದರೆ ಹೇಡಿಗಳು ಅದೃಷ್ಟದಿಂದಲೇ ಎಲ್ಲವೂ ಪ್ರಾಪ್ತವಾಗುವುದು ಎಂದು ನುಡಿಯುತ್ತಾರೆ ಎಂಬ ಉಕ್ತಿಯು ಕಥೆಯೊಂದರಲ್ಲಿ ಬಂದರೆ, ಕಥೆಯೊಂದರಲ್ಲಿ ವ್ಯಾಪಾರಿಯ ಪುತ್ರನೊಬ್ಬನು ಏನೇನೂ ಪ್ರಯತ್ನವಿಲ್ಲದಿದ್ದರೂ ತನಗೆ ಪ್ರಾಪ್ತವಿದ್ದಷ್ಟನ್ನು ಪಡೆದನು ಎಂದು ವಿವರಿಸಲು ಈ ಮಾತು ಬರುತ್ತದೆ – “ಮನುಷ್ಯನು ತನಗೆ ಪ್ರಾಪ್ತವಿದ್ದಷ್ಟು ಹಣವನ್ನು ಮಾತ್ರ ಪಡೆಯುತ್ತಾನೆ. ದೇವರಿಗೂ ಕೂಡ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾನು ದುಃಖಿಸುವುದಿಲ್ಲ ಅಥವಾ ಆಶ್ಚರ್ಯವನ್ನೂ ಪಡುವುದಿಲ್ಲ. ನನ್ನದು ಯಾವುದಿದೆಯೋ ಅದೆಂದಿಗೂ ಪರರದಾಗುವುದಿಲ್ಲ”

ಕೊನೆಗೆ…

ಇವಿಷ್ಟೇ ಅಲ್ಲದೆ ಇತರ ಅನೇಕ ವಿಷಯಗಳನ್ನು ಪಂಚತಂತ್ರದಿಂದ ಕಲಿತು ಇಂದಿನ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದು. ಹೇಗೆ ಎಲ್ಲಾ ಕಡೆ ಸತ್ಯ ನುಡಿದರೆ ಸ್ವಾರ್ಥದ ನಾಶವಾಗುತ್ತದೆ, ಮಾತನಾಡಬಾರದ ಸಂದರ್ಭದಲ್ಲಿ ಅತಿಯಾಗಿ ಮಾತನಾಡಿದರೆ ಏನಾಗುತ್ತದೆ, ಹಿತವಚನವನ್ನು ಕೇಳದಿದ್ದರೆ ಆಗುವ ಪರಿಣಾಮ, ಬಡತನದ ಕಷ್ಟಗಳು, ಸರಿಯಾಗಿ ಪರೀಕ್ಷಿಸದೆ ಕೈಗೊಂಡ ಕೆಲಸಗಳಿಗಾಗುವ ಸೋಲು, ಅಯೋಗ್ಯರನ್ನು ಪೂಜಿಸುವುದರ ದುಷ್ಪರಿಣಾಮ, ಅತಿಯಾಸೆಯ ಫಲ, ನೀಚರನ್ನು ಆಡಳಿತಸ್ಥಾನದಲ್ಲಿ ನೇಮಿಸಿಕೊಳ್ಳುವುದರಿಂದಾಗುವ ಹಾನಿ, ಅನೇಕ ಜನರ ವಿರೋಧವನ್ನು ಕಟ್ಟಿಕೊಳ್ಳಬಾರದೆಂಬ ವಿವೇಕ, ಯಾರಿಗೆ ಆಶ್ರಯ ನೀಡಬೇಕು, ಯಾರಿಗೆ ನೀಡಬಾರದೆಂಬ ವಿವೇಕ, ಒಗ್ಗೂಡಿ ಬಲವಂತನನ್ನು ಎದುರಿಸುವ ಬಗೆ, ಕಾಲಬಂದಾಗ ಸೇವಕನ ಮಾತನ್ನೂ ಯಜಮಾನನು ನಡೆಸಿಕೊಡಬೇಕಾಗುವ ಸಂದರ್ಭಗಳು, ಸ್ವಯಂಕೃತ ಅಪರಾಧಗಳ ಫಲ, ಶೌರ್ಯ ಮತ್ತು ವೀರಸ್ವರ್ಗದ ಮಹತ್ವ, ಸ್ವಾರ್ಥ ಸಾಧನೆ, ಉಪಾಯ ಅಪಾಯಗಳ ಮುಂದಾಲೋಚನೆ ಮುಂತಾದ ನಾವು ಪ್ರಸ್ತುತ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದ ಅನೇಕ ವಿಷಯಗಳ ಬಗ್ಗೆ ಪಂಚತಂತ್ರದ ಕಥೆಗಳಲ್ಲಿ ಬರುತ್ತವೆ.

ಪಂಚತಂತ್ರದ ಕಥೆಗಳು ಕೇವಲ ಮಕ್ಕಳ ಕಥೆಗಳಲ್ಲ, ಬದಲಾಗಿ ಈಗಿನ ಪರಿಸ್ಥಿತಿಯಲ್ಲಿ ಅದರಿಂದ ಎಲ್ಲರಿಗೂ ತಿಳಿದುಕೊಳ್ಳುವುದು ಬಹಳಷ್ಟಿದೆ. ಆದರೆ ಅದಕ್ಕಾಗಿ ಈಗಿರುವ ಮಕ್ಕಳ ಪುಸ್ತಕಗಳನ್ನು ಅವಲಂಭಿಸದೆ, ಮೂಲ ಸಂಸ್ಕೃತವನ್ನೋ ಅಥವಾ ಮೂಲದ ಅನುವಾದವನ್ನೋ ನಾವು ಓದಿಕೊಂಡೂ ಮಕ್ಕಳಿಗೂ ತಿಳಿಸಿಕೊಡಬೇಕಾಗಿದೆ.

(ಮೊದಲ ಲೇಖನವನ್ನು ಇಲ್ಲಿ ಓದಬಹುದು.)

(Image credit: kamat.org)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

IndicA Today - Website Survey

Namaste,

We are on a mission to enhance the reader experience on IndicA Today, and your insights are invaluable. Participating in this short survey is your chance to shape the next version of this platform for Shastraas, Indic Knowledge Systems & Indology. Your thoughts will guide us in creating a more enriching and culturally resonant experience. Thank you for being part of this exciting journey!


Please enable JavaScript in your browser to complete this form.
1. How often do you visit IndicA Today ?
2. Are you an author or have you ever been part of any IndicA Workshop or IndicA Community in general, at present or in the past?
3. Do you find our website visually appealing and comfortable to read?
4. Pick Top 3 words that come to your mind when you think of IndicA Today.
5. Please mention topics that you would like to see featured on IndicA Today.
6. Is it easy for you to find information on our website?
7. How would you rate the overall quality of the content on our website, considering factors such as relevance, clarity, and depth of information?
Name

This will close in 10000 seconds