close logo

ಮನುಸ್ಮೃತಿಯ ಪರಿಚಯ – ಭಾಗ ೧ –  ಸ್ತ್ರೀ ಮತ್ತು ಸ್ವಾತಂತ್ರ್ಯ 

पिता रक्षति कौमारे भर्ता रक्षति यौवने ।
रक्षन्ति स्थाविरे पुत्राः न स्त्री स्वातन्त्र्यमर्हति ॥ 9.3 ॥

(ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ  ।
ರಕ್ಷಂತಿ ಸ್ಥಾವಿರೇ ಪುತ್ರಾಃ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ॥ )
ಮನುಸ್ಮೃತಿ – 9.3 

ಮನುಸ್ಮೃತಿಯ ಈ ಸಾಲುಗಳ ತಪ್ಪು ಗ್ರಹಿಕೆ ಬಹಳ ಜನಪ್ರಿಯವಾಗಿದೆ. ಅಷ್ಟೇ ಅಲ್ಲ, ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಈ ಸಾಲುಗಳನ್ನು ಉಲ್ಲೇಖಿಸಿ ಹಿಂದೂಧರ್ಮದ ಮೂಲತತ್ತ್ವವೇ ಸ್ತ್ರೀದ್ವೇಷವಾದ ಎಂದು ಬಲವಾಗಿ ಪ್ರತಿಪಾದಿಸುವ ಪ್ರಯತ್ನ ಬಹಳ ಕಾಲದಿಂದ ನಡೆಯುತ್ತಲೇ ಇದೆ.

ಆದರೆ, ಮೇಲಿನ ಸಾಲುಗಳನ್ನು ಗಮನವಿಟ್ಟು ಓದಿ ಮನನ ಮಾಡಿಕೊಂಡಾಗ ಅವುಗಳನ್ನು ಎಷ್ಟರ ಮಟ್ಟಿಗೆ ತಿರುಚಿ ಅಪಾರ್ಥ ಮಾಡಲಾಗಿದೆ ಎಂದು ತಿಳಿದುಬರುತ್ತದೆ.

ಬನ್ನಿ,  ಮನುಸ್ಮೃತಿಯ ಈ ಶ್ಲೋಕದ  ಸೂಚ್ಯ ಅರ್ಥ ತಿಳಿಯೋಣ.

ಮೊದಲಿಗೆ ಈ ಶ್ಲೋಕದ  ಹಿನ್ನೆಲೆ ಮತ್ತು ಸಂಧರ್ಭವನ್ನು ನೋಡೋಣ. ಇದು ಮನುಸ್ಮೃತಿಯ ಒಂಬತ್ತನೇ ಅಧ್ಯಾಯದಲ್ಲಿ ಕಂಡುಬರುತ್ತದೆ. ಸಮಾಜದ ಸ್ತ್ರೀ-ಪುರುಷರ ಪಾತ್ರಗಳ ಮೌಲ್ಯವಿಶ್ಲೇಷಣೆಯನ್ನು ಬಹಳ ವಿವರವಾಗಿ ಚಿತ್ರಿಸಿರುವ ಈ ಅಧ್ಯಾಯದ ಪ್ರಾರಂಭದಲ್ಲಿ ಮನು ನಿರ್ದಿಷ್ಟವಾಗಿ ಹೀಗೆ ಹೇಳುತ್ತಾನೆ,

“ಧರ್ಮಸಮ್ಮತವಾದ ವರ್ತನೆಯುಳ್ಳ ಸ್ತ್ರೀ-ಪುರುಷರು ಹೇಗೆ ಇರುವರು ಎಂಬುದನ್ನು ವಿವರಿಸುತ್ತೇನೆ. ಹೆಣ್ಣಿನ ಮತ್ತು ಗಂಡಿನ ವರ್ತನೆಯು ಸಾಂಗತ್ಯ ಮತ್ತು ವಿರಹದಲ್ಲಿ  (ಪ್ರಯಾಣ ಇತ್ಯಾದಿ ಕಾರಣಗಳಿಂದಾಗಿ) ಯಾವ ರೀತಿಯಿದ್ದರೆ ಧರ್ಮವಿರುದ್ಧವಲ್ಲ, ಇಬ್ಬರ ಸುಖವೂ   ಸಂಪೂರ್ಣವಾಗುವುದು ಎನ್ನುವುದೇ ಇದರ ಉದ್ದೇಶ.”1

ಸ್ತ್ರೀ-ಪುರುಷರ ಪರಸ್ಪರ ಕರ್ತವ್ಯ ಅಥವಾ ದಾಂಪತ್ಯಧರ್ಮ ಅಥವಾ ಗೃಹಸ್ಥಧರ್ಮ – ಈ ವಿಷಯಗಳ ಹಿನ್ನೆಲೆಯಲ್ಲಿ ಹೇಳಿರುವ ಸಾಲುಗಳು ಇವು. ಇದೇ ಅಧ್ಯಾಯದ ಮೂರನೇ ಶ್ಲೋಕವೇ “ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ …”    ಈ ಸಾಲನ್ನು ಹೆಚ್ಚಾಗಿ ಹೀಗೆ ಅರ್ಥೈಸಲಾಗಿದೆ-

“ಹೆಣ್ಣಿಗೆ ಕನ್ಯತ್ವದಲ್ಲಿ ತಂದೆ, ಯೌವ್ವನದಲ್ಲಿ ಗಂಡ ಹಾಗು ವೃದ್ಧಾಪ್ಯದಲ್ಲಿ ಗಂಡುಮಕ್ಕಳು ರಕ್ಷಿಸಬೇಕು. ಹೀಗಾಗಿ ಸ್ತ್ರೀಯರು ಸ್ವತಂತ್ರವಾಗಿರಲು ಅರ್ಹರಲ್ಲ.”

ಇಲ್ಲಿ रक्षति ಎನ್ನುವ ಪದವನ್ನು “ರಕ್ಷಿಸಬೇಕು” ಎಂದು ಅನುವಾದಮಾಡಲಾಗಿದೆ. ಆದರೆ रक्षति ಪದವು ಸಾಧಾರಣ ವರ್ತಮಾನಕಾಲ ಕ್ರಿಯಾಪದವಾಗಿದ್ದು ಅದನ್ನು “ರಕ್ಷಿಸುತ್ತಾರೆ” ಎಂದು ಅರ್ಥ ಮಾಡಿಕೊಳ್ಳಬೇಕು.

ಮನುಸ್ಮೃತಿಯ ಪ್ರಸಿದ್ಧ ಭಾಷ್ಯಕಾರರಲ್ಲಿ ಒಬ್ಬನಾದ ಮೇಧಾತಿಥಿ ಹೀಗೆ ಹೇಳುತ್ತಾನೆ,

“रक्षतीति भवन्तिः लिङर्थे छान्दसत्वात् ततो रक्षेद् इति विधेयप्रत्ययः” (ರಕ್ಷತೀತಿ ಭವಂತಿ ಲಿಙ್ ರ್ಥೇ ಛಾಂದಸತ್ವಾತ್ ತತೋ ರಕ್ಷೇದ್ ಇತಿ ವಿಧೇಯಪ್ರತ್ಯಯಃ)  ಅರ್ಥಾತ್ “रक्षति” ಯನ್ನು  ಸಂಭಾವ್ಯ ಮನಸ್ಥಿತಿಯಲ್ಲಿ ಎಂದರೆ ಆದೇಶ ರೂಪದಲ್ಲಿ ಅರ್ಥೈಸಿಕೊಳ್ಳಬೇಕು.

ಸಮಾಜದಲ್ಲಿ ತಂದೆ, ಪತಿ ಮತ್ತು ಗಂಡುಮಕ್ಕಳು ಕಡ್ಡಾಯವಾಗಿ /ನಿರ್ಬಂಧವಾಗಿ ಸ್ತ್ರೀಯರನ್ನು ಎಲ್ಲ ಕಾಲದಲ್ಲಿಯೂ ರಕ್ಷಿಸಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಶ್ಲೋಕವು ಸ್ತ್ರೀಯರಿಗೆ ಸಂಬಂಧಿಸಿದಂತೆ ಪುರುಷರ ಕರ್ತವ್ಯವು ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುತ್ತದೆ.

ಈ ಶ್ಲೋಕದ ಕೊನೆಯಲ್ಲಿರುವ  “ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ” ಎಂಬ ಸಾಲಂತೂ ಇಂದಿನ ದಿನಗಳಲ್ಲಿ ಬಹಳ ವಿವಾದಕ್ಕೊಳಗಾಗಿದೆ. ಇದು ಕೂಡ ತಪ್ಪಾಗಿ ಅನುವಾದಗೊಂಡು ಈ ರೀತಿಯ ಅಪವಾದಕ್ಕೊಳಗಾಗಿದೆ. ಮನುಸ್ಮೃತಿಯ  ಭಾಷ್ಯಕಾರರು ಈ ಸಾಲನ್ನು ಹೇಗೆ ವಿವರಿಸಿದ್ದಾರೆ ಎಂದು ನೋಡೋಣ.

ಮೇಧಾತಿಥಿ ಹೀಗೆ ಹೇಳುತ್ತಾನೆ-

“न स्त्री स्वतन्त्र्यम् अर्हति इति उच्यते । न अनेन सर्वक्रियाविषयम् अस्वातन्त्र्यम् विधीयते । किं तर्हि न अस्वतन्त्रा=अन्यमनस्कता स्वात्मसंरक्षणाय प्रभवति शक्तिविकलत्वात् स्वतः”

(ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಇತಿ ಉಚ್ಯತೆ . ನ ಅನೇನ ಸರ್ವಕ್ರಿಯಾವಿಷಯಂ ಅಸ್ವಾತಂತ್ರ್ಯಂ ವಿಧೀಯತೆ । ಕಿಮ್ ತರ್ಹಿ ನ ಅಸ್ವತಂತ್ರ=ಅನ್ಯಮನಸ್ಕತಾ ಸ್ವಾತ್ಮಸಂರಕ್ಷಣಾಯ ಪ್ರಭವತಿ ಶಕ್ತಿವಿಕಲತ್ವಾತ್ ಸ್ವತಃ )

ಅರ್ಥಾತ್ ” ಇಲ್ಲಿ ‘ಅಸ್ವತಂತ್ರ’ ವನ್ನು  ಸ್ತ್ರೀಯರನ್ನು ಸಂಬಂಧಿಸಿದಂತೆ ಎಲ್ಲಾ ವಿಷಯದಲ್ಲೂ ಎಂದು ತಿಳಿದುಕೊಳ್ಳಬಾರದು. ಸ್ತ್ರೀಯರ ದೇಹಪ್ರಕೃತಿಯ ಕಾರಣದಿಂದಾಗಿ ಎಲ್ಲಾ ಸನ್ನಿವೇಶಗಳಲ್ಲಿ ಅವರು ತಮ್ಮನು ತಾವು ರಕ್ಷಿಸಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಹಾಗಾಗಿ ಸ್ತ್ರೀಯರನ್ನು ರಕ್ಷಿಸಬೇಕು ಎಂಬುದು ಈ ಸಾಲಿನ ತಾತ್ಪರ್ಯ.2

ಮತ್ತೊಂದು ಭಾಷ್ಯದಲ್ಲಿ ಸರ್ವನಾರಾಯಣ ಹೀಗೆ ವಿವರಿಸಿದ್ದಾನೆ “पिता रक्षति कन्यादूषणादेः” ಅರ್ಥಾತ್ ತಂದೆಯು ಕನ್ಯೆಯನ್ನು ಅವಮಾನ/ಕಿರುಕುಳ/ಹಿಂಸೆಗಳಿಂದ ರಕ್ಷಿಸಬೇಕು.

ಮನುಸ್ಮೃತಿಯ ಮತ್ತೊಬ್ಬ ಭಾಷ್ಯಕಾರನಾದ ರಾಘವಾನಂದ ಕೊನೆಯ ಸಾಲನ್ನು ಹೀಗೆ ವಿವರಿಸುತ್ತಾನೆ “स्वातन्त्र्यं रक्षितृरहितत्वम्” (ಸ್ವಾತಂತ್ರ್ಯಂ  ರಕ್ಷಿತೃರಹಿತತ್ವಂ) – “स्वातन्त्र्यम् (ಸ್ವಾತಂತ್ರ್ಯಂ) ಎಂದರೆ (ಸ್ತ್ರೀಯರು) ರಕ್ಷಣೆಯಿಲ್ಲದೆ ಇರಬಾರದು.”

ಹಾಗಾಗಿ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎಂಬ ಸಾಲಿನ ಸರಿಯಾದ ಅನುವಾದ  “ಯಾವ ಸ್ತ್ರೀಯು  ರಕ್ಷಣೆ ಇಲ್ಲದೆ  ಇರಬಾರದು” ಎಂದು. ಹಾಗಾಗಿ ಶ್ಲೋಕವು ಪುರುಷರಿಗೆ ಸ್ತ್ರೀಯರನ್ನು ರಕ್ಷಿಸುವ ಕರ್ತವ್ಯವನ್ನು ಒಪ್ಪಿಸುತ್ತಿದೆ ಎಂದು ತಿಳಿದುಕೊಳ್ಳಬಹುದು.

ಈ ರೀತಿಯಲ್ಲಿ ವಿಶ್ಲೇಷಿಸಿದಾಗ “ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ” ಎಂದು ಅನುವಾದ ಮಾಡಿ ಅರ್ಥವನ್ನು ತಿರುಚಿ ಹೇಳಿರುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಕಾರಣ ಹಲವರು ಮನುಸ್ಮೃತಿಯನ್ನು ಸರಿಯಾಗಿ ಮನನ ಮಾಡದೆ ಶ್ಲೋಕದ ಸೂಚ್ಯ ಅರ್ಥವನ್ನು ತಿಳಿಯದಿರುವುದು.

ಟೆರ್ರಿ ಬ್ರೌನ್  ಎಂಬ ಲೇಖಕಿ  ತನ್ನ ‘ಎಸ್ಸೇನಿಷಿಯಲ್ ಟೀಚಿಂಗ್ಸ್  ಆಫ್ ಹಿಂದೂಯಿಸಂ” ಪುಸ್ತಕದಲ್ಲಿ ಸನಾತನ ಧರ್ಮದಲ್ಲಿ ಸ್ತ್ರೀಯ ಮಹತ್ವವನ್ನು ಹೀಗೆ ವಿವರಿಸಿದ್ದಾರೆ.

“ಹಿಂದೂಧರ್ಮದಲ್ಲಿ ಸ್ತ್ರೀ ರಕ್ಷಣೆಯ ನಿರ್ಬಂಧವಿರುವುದು ಆಕೆ ಅಬಲೆ ಅಥವಾ ಕೀಳು ಎಂಬ ಕಾರಣಕ್ಕಾಗಿ ಅಲ್ಲವೇ ಅಲ್ಲ. ಹೆಣ್ಣು ಸಮಾಜದ ಹೆಮ್ಮೆ ಮತ್ತು ಶಕ್ತಿ. ಹೇಗೆ ರಾಜರತ್ನವನ್ನು ಸದಾಕಾಲ ರಕ್ಷಿಸಲಾಗುತ್ತದೆಯೊ, ಹಾಗೆಯೇ ಸ್ತ್ರೀಯರ ರಕ್ಷಣೆ ಸದಾಕಾಲವೂ ಇರಬೇಕು. ಬೆಲೆಬಾಳುವ ಆಭರಣಗಳನ್ನು ನಾವು  ತಾಮ್ರದ ಪಾತ್ರೆಗಳಂತೆ ಅಲ್ಲಿ ಇಲ್ಲಿ ಬಿಸಾಡುವುದಿಲ್ಲ. ಅತ್ಯಮೂಲ್ಯ ವಸ್ತುವನ್ನು ರಕ್ಷಿಸುವದು ಸಹಜವೇ.”

ಆಕೆ “न स्त्री स्वातन्त्र्यमर्हति” ಸಾಲನ್ನು ಅದರ ಸೂಚ್ಯ ಅರ್ಥದಲ್ಲಿ ಸರಿಯಾಗಿ ವ್ಯಾಖ್ಯಾನಿಸಿದ್ದಾರೆ – ಈ ಸಾಲಿನ ಅರ್ಥ ಹೆಣ್ಣು ದಾಸಿಯಾಗಿರಬೇಕು ಎಂದೇನೂ ಅಲ್ಲ ಎಂದು ಬರೆದಿದ್ದಾರೆ. ಹೆಣ್ಣಿಗೆ  ಬಾಲ್ಯದಲ್ಲಿ ತನ್ನ ತಂದೆಯ ರಕ್ಷಣೆ ಅಗತ್ಯ, ಮದುವೆಯ ನಂತರ ಆಕೆಗೆ ಪತಿಯ ರಕ್ಷಣೆ ಅಗತ್ಯ ಮತ್ತು ವೃದ್ಧಾಪ್ಯದಲ್ಲಿ ಆಕೆಯ ಪತಿಯೂ ವಯಸ್ಕನಾಗಿರುವ ಕಾರಣ ಆಕೆಯ ಗಂಡು ಮಕ್ಕಳು ಅವಳನ್ನು ರಕ್ಷಿಸುತ್ತಾರೆ. ಸ್ತ್ರೀಯರ ರಕ್ಷಣೆಯು ಪುರುಷರ ಕರ್ತವ್ಯ.

ಅಲ್ಲದೆ ಮನುಸ್ಮೃತಿಯ ಐದನೇ ಅಧ್ಯಾಯ ದಲ್ಲಿ ಹೀಗೆ ಹೇಳಿದೆ-

बाल्ये पितुर्वशे तिष्ठेत् पाणिग्राहस्य यौवने।
पुत्राणां भर्तरि प्रेते न भजेत्स्त्री स्वतन्त्रताम्।

(ಬಾಲಯೇ ಪಿತುರ್ವಶೆ ತಿಷ್ಠೆತ್ ಪಾಣಿಗ್ರಾಹಸ್ಯ ಯೌವನೇ।
ಪುತ್ರಾಣಾಂ ಭರ್ತರಿ ಪ್ರೇತೇ ನ ಭಜೇಸ್ತ್ರೀ ಸ್ವತಂತ್ರತಾಂ)

(ಮ.ಸ್ಮೃ5.148).

ಇಲ್ಲಿಯೂ ಕೂಡ ಮನು ಸ್ತ್ರೀಯರ ರಕ್ಷಣೆ ಮತ್ತು ಅವರನ್ನು ರಕ್ಷಿಸುವ ಬಗ್ಗೆ ಹೇಳುತ್ತಾನೆ.  ಇದಕ್ಕೆ ಪೂರಕವಾಗಿ ನಾರದ ಸ್ಮ್ರಿತಿಯಲ್ಲಿ ಹೀಗೆ ಹೇಳಿದೆ. ” “पक्षद्वयावसाने तु राजा भर्ता स्त्रियां मतः” (ಪಕ್ಷಾದ್ವಯಾವಸಾನೇ ತು ರಾಜಾ ಭರ್ತಾ ಸ್ತ್ರೀಯಾಂ ಮತಃ) ಅರ್ಥಾತ್ ಸ್ತ್ರೀಯರಿಗೆ ಎರಡೂ ಕಡೆ (ತಾನು ಹುಟ್ಟಿದ ಮನೆ ಮತ್ತು ಮದುವೆಯಾಗಿ ಸೇರಿದ ಮನೆ) ರಕ್ಷಣೆ ಇಲ್ಲದಿದ್ದರೆ, ಆಕೆಯ ರಕ್ಷಣೆಯು ರಾಜನ ಕರ್ತವ್ಯ ಎಂದು.

ದೇವಣಭಟ್ಟನ  ಸ್ಮೃತಿಚಂದ್ರಿಕಾ ಗ್ರಂಥದಲ್ಲಿ ಹೀಗಿದೆ-

“रक्षेत्कन्यां पिता विन्नां पतिः पुत्रास्तु वार्धके।
अभावे ज्ञातयस्तेषां न स्वातन्त्र्यं क्वचित्स्त्रियाः॥”

(ರಕ್ಷೇತ್ಕನ್ಯಾಂ ಪಿತಾ ವಿನ್ನಾಂ ಪತಿಃ ಪುತ್ರಾಸ್ತು ವಾರ್ಧಕೆ ।
ಅಭಾವೇ ಜ್ಙಾತಯಸ್ತೇಷಾಮ್ ನ ಸ್ವಾತಂತ್ರ್ಯಂ ಕ್ವಚಿಸ್ತ್ರೀಯಾಃ ॥
)

ಇಲ್ಲಿ ಕೂಡ ಸ್ಪಷ್ಟವಾಗಿ  ಅವಳು (ಸ್ತ್ರೀಯು) “ಕನ್ಯೆ”ಯಾಗಿದ್ದಾಗ ತಂದೆ ಮತ್ತು ನಂತರ ಪತಿ ; ತದನಂತರ ವೃದ್ಧಾಪ್ಯದಲ್ಲಿ ಗಂಡು ಮಕ್ಕಳು ಆಕೆಗೆ  ಸುರಕ್ಷತೆಯ ಭರವಸೆಯನ್ನು ನೀಡಬೇಕು. ಆಕೆಗೆ ಪುತ್ರರಿಲ್ಲದಿದ್ದರೆ, ಆಕೆಯ ಪತಿಯ ಸಂಬಂಧಿಕರು ಅವಳಿಗೆ ಸುರಕ್ಷತೆ ನೀಡಬೇಕು.

ಮಹಾಭಾರತದಲ್ಲಿ ಕೂಡ ಇದೇ ಪರಿಕಲ್ಪನೆಯನ್ನು ಅಷ್ಟಾವಕ್ರ ತನ್ನನ್ನು ವರಿಸು ಎಂದು ಬೇಡಿಕೊಳ್ಳುವ ಯುವತಿಗೆ ಹೀಗೆ ವಿವರಿಸುತ್ತಾನೆ. ತಪೋಋಷಿ ಅಷ್ಟಾವಕ್ರ ” पिता रक्षति कौमारे भर्ता रक्षति यौवने । पुत्रश्च स्थाविरे काले नास्ति स्त्रीणां स्वतन्त्रता ॥ (ಮ.ಭಾ 13-20-21 ದಾನ-ಧರ್ಮ-ಪರ್ವ ) ಎಂದು ಹೇಳುತ್ತಾ

ಸ್ತ್ರೀಯರ ರಕ್ಷಣೆಯನ್ನು ತಂದೆ, ಗಂಡ ಮತ್ತು ಮಕ್ಕಳು ಕ್ರಮವಾಗಿ ಬಾಲ್ಯ, ಯೌವ್ವನ ಮತ್ತು ವೃದ್ಧಾಪ್ಯದಲ್ಲಿ ಮಾಡಬೇಕು, ನಿನ್ನನ್ನು ರಕ್ಷಿಸುವರ ಅನುಮತಿಯಿಲ್ಲದೆ ನಾನು ನಿನ್ನನ್ನು ವರಿಸಲಾರೆ ಎಂದು ಹೇಳುತ್ತಾನೆ. ಇಲ್ಲಿ ಕೂಡ “ಅಸ್ವತಂತ್ರ” ಎನ್ನುವ ಪದವನ್ನು “ರಕ್ಷಣೆ ಇಲ್ಲದವಳು” ಎನ್ನುವ ಅರ್ಥದಲ್ಲೇ ಬಳಸಲಾಗಿದೆ.

ಇದನ್ನು ನೀಲಕಂಠ ಮತ್ತೂ ನಿರ್ದಿಷ್ಟವಾಗಿ ಇದೇ ಅಧ್ಯಾಯದ ಹದಿನಾಲ್ಕನೇ ಶ್ಲೋಕವನ್ನು ವಿವರಿಸುತ್ತಾ ಹೀಗೆ ಹೇಳುತ್ತಾನೆ. “नास्ति स्वतन्त्रता स्त्रीणाम्” (ನಾಸ್ತಿ ಸ್ವತಂತ್ರತಾ ಸ್ತ್ರೀಣಾಂ – “नास्ति इति। अप्रदत्तां त्वां न कामये” (ನಾಸ್ತಿ ಇತಿ. ಅಪ್ರದತ್ತಾಂ ತ್ವಾಂ ನ ಕಾಮಯೇ)  ಎಂದರೆ “ನಿನ್ನನ್ನು (ನಿನ್ನ ರಕ್ಷಕರಿಂದ ) ಪಡೆಯದೆ ನಾನು ಮನಸಿನಲ್ಲೂ (ನಿನ್ನನ್ನು) ಬಯಸುವುದಿಲ್ಲ.”

ಕಾತ್ಯಾಯನ ಸ್ಮೃತಿಯಲ್ಲಿ ಹೀಗೆ ಹೇಳಿದೆ-

“सौदायिके सदा स्त्रीणां स्वातन्त्र्यं परिकीर्तितम्”

(ಸೌದಾಯಿಕೇ ಸದಾ ಸ್ತ್ರೀಣಾಂ ಸ್ವಾತಂತ್ರ್ಯಮ್  ಪರಿಕೀರ್ತಿತಂ)
(ಕಾ.ಸೂ.106)

“ಸದಾಕಾಲದಲ್ಲಿ ಸ್ತ್ರೀಯರಿಗೆ ಸ್ವತ್ತಿನ ಸಂಪೂರ್ಣ ಸ್ವಾತಂತ್ರವಿರಬೇಕು.”

ಮಹಾಭಾರತದ ಇನ್ನೊಂದು ಸನ್ನಿವೇಶದಲ್ಲಿ ಪಾಂಡು ಕುಂತಿಗೆ ಹೀಗೆ ಹೇಳುತ್ತಾನೆ-

नातिवर्तव्य इत्येवं धर्मं धर्मविदो विदुः।
शेषेष्वन्येषु कालेषु स्वातन्त्र्यं स्त्री किलार्हति ॥

(ನಾತಿವರ್ತವ್ಯ ಇತ್ಯೇವಂ ಧರ್ಮಂ ಧರ್ಮವಿದೋ ವಿದುಃ ।
ಶೇಷೇಷ್ವನ್ಯೇಷು ಕಾಲೇಷು ಸ್ವಾತಂತ್ರ್ಯಂ  ಸ್ತ್ರೀ ಕಿಲಾರ್ಹತಿ ॥
)3
(ಮ.ಭಾ1-122-26)

ಇಲ್ಲಿ ಪಾಂಡು ಕುಂತಿಗೆ, ಆಕೆ ದೂರ್ವಾಸರಿಂದ ಪಡೆದ ಉಪದೇಶದಂತೆ ಮಂತ್ರಶಕ್ತಿಯ ಮೂಲಕ ಮಕ್ಕಳನ್ನು ಹೆರುವಂತೆ ಕೇಳಿಕೊಳ್ಳುತ್ತಾನೆ. ಈ ಸನ್ನಿವೇಶ ಸಂಪೂರ್ಣವಾಗಿ ವಿಭಿನ್ನವಾದರೂ “ಸ್ತ್ರೀ ಋತುಕಾಲದಲ್ಲಿ ಪತಿಯೊಂದಿಗೆ ಪ್ರಣಯದ ಉಲ್ಲಂಘನೆ ಮಾಡುವಂತಿಲ್ಲ ಮತ್ತು ಉಳಿದ ಕಾಲದಲ್ಲಿ ಅವಳು ಸ್ವತಂತ್ರಳು” ಎಂಬ ಮಾತು ಸ್ತ್ರೀಯರಿಗಿದ್ದ ಸ್ವಾತಂತ್ರ್ಯವನ್ನು ತೋರಿಸುತ್ತದೆ.

ಹೀಗೆ ಸಾಕಷ್ಟು ವಿವಾದಕ್ಕೊಳಗಾದ ಮನುಸ್ಮೃತಿಯ ಈ ಶ್ಲೋಕ ಹಲವು ಕಡೆ ತಿರುಚಿ ಹೇಳಿರುವಂತೆ ಸ್ತ್ರೀದ್ವೇಷವಾದವನ್ನು ಬೆಂಬಲಿಸುತ್ತಿಲ್ಲ. ಇದರಲ್ಲಿ ಸ್ತ್ರೀಯರ ವಿರುದ್ಧವಾಗಿ  ಏನೂ ಇಲ್ಲ. ಬದಲಾಗಿ ಈ ಶ್ಲೋಕವು ಆದೇಶರೂಪದಲ್ಲಿ  ಸ್ತ್ರೀಯರನ್ನು ಹಿಂಸೆ ,ಕಿರುಕುಳ ಇತ್ಯಾದಿಗಳಿಂದ ರಕ್ಷಿಸುವುದು ಪುರುಷರ ಕರ್ತವ್ಯ ಎಂದು ಹೇಳಿದೆ.

(ಈ ಲೇಖನ ರಾಮಾನುಜ ದೇವನಾಥನ್ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This article is the translation of an article in English by Ramanuja Devanathan.)

Footnotes:

1.ಪುರುಷಸ್ಯ ಸ್ತ್ರೀಯಾಶ್ಚೈವ ಧರ್ಮೇ ವರ್ತನಿ ತಿಷ್ಠತೋಃ।ಸಂಯೋಗೇ ವಿಪ್ರಯೋಗೇ ಚ ಧರ್ಮಾನ್ ವಕ್ಷ್ಯಾಮಿ ಶಾಶ್ವತಾನ್ ।।9.1||*
(ಕನ್ನಡ ಅನುವಾದ : ಚಕ್ರಕೋಡಿ ಈಶ್ವರಶಾಸ್ತ್ರೀ  (ಮನುಧರ್ಮಶಾಸ್ತ್ರದ ಸಮಗ್ರ ಅನುವಾದ -ಮೂಲ ಶ್ಲೋಕ ಸಹಿತ) ಸಮಾಜ ಪುಸ್ತಕಾಲಯ ,ಧಾರವಾಡ )

2. ಎಲ್ಲ ಹೆಂಗಸರಿಗೂ ತಪ್ಪದೆ ರಕ್ಷಕರು ಸಿಗುವುದಿಲ್ಲ. ಆಗ ಯುಧೋಚಿತವಾಗಿ ಗೃಹಾಭಾರವನ್ನು ಪುರುಷ ಮುಖವಾಗಿ ಸ್ತ್ರೀಯು ಹೊರಬೇಕಾಗುವುದು. ಕುಂತಿಯು ಗಂಡನನ್ನು ಕಳಕೊಂಡು ಮಕ್ಕಳನ್ನು ಸಾಕಿದಳು. ಕುಂತಿಯು ಪಾಂಡವರಿಗೆ ನಿರ್ದೇಶಕಳಾಗಿದ್ದಳು. (ಚಕ್ರಕೋಡಿ ಈಶ್ವರಶಾಸ್ತ್ರೀ  (ಮನುಧರ್ಮಶಾಸ್ತ್ರದ ಸಮಗ್ರ ಅನುವಾದ -ಮೂಲ ಶ್ಲೋಕ ಸಹಿತ) ಸಮಾಜ ಪುಸ್ತಕಾಲಯ ,ಧಾರವಾಡ )

3. ನಾತಿವರ್ತವ್ಯ ಇತ್ಯೇವಂ ಧರ್ಮಂ ಧರ್ಮವಿದೋ ವಿದುಃ|  (ಧರ್ಮವನ್ನು ತಿಳಿದ ಪತಿವ್ರತೆಯರಾದ ಸ್ತ್ರೀಯರು ಪತಿಯ ಮಾತನ್ನು ಉಲ್ಲಂಘಿಸದೇ ಇರುವುದೇ ಧರ್ಮವೆಂದು ತಿಳಿಯುತ್ತಾರೆ.) ಶೇಷೇಷ್ವನ್ಯೇಷು ಕಾಲೇಷು ಸ್ವಾತಂತ್ರ್ಯಂ ಸ್ತ್ರೀ ಕಿಲಾರ್ಹತಿ (ಬೇರೆ ಎಲ್ಲ ಕಾಲದಲ್ಲಿಯೂ ಸ್ತ್ರೀಯು ಸ್ವತಂತ್ರಳಾಗಿದ್ದಾಳೆ ಸರಿ.)

(Image credit: www.indigalleria.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply