close logo

ಮಹಾಪ್ರಯತ್ನದ ಸಂಕಲ್ಪ

ಪ್ರತಿಯೊಬ್ಬ ಮನುಷ್ಯನೂ ಒಮ್ಮೊಮ್ಮೆ ಜೀವನದಲ್ಲಿ ನಿರಾಶೆ ಹೊಂದುವುದು ಸಾಮಾನ್ಯ. ಒಳ್ಳೆಯ ಕೆಲಸವಿಲ್ಲ. ಹೆಂಡತಿಯ ಆಸೆಗೆ ಮಿತಿಯಿಲ್ಲ. ಗಂಡನ ದುಶ್ಚಟಗಳಿಗೆ ಅಂತ್ಯವಿಲ್ಲ. ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ. ಸ್ವಂತ ಮನೆಯಿಲ್ಲ. ಹೀಗೆ ಈಡೇರದ ಹಂಬಲಗಳ ಪಟ್ಟಿ ತುಂಬಾ ಉದ್ದವಾಗಿರುತ್ತದೆ. ಆದರೆ ಈ ನಿರಾಶೆಗಳಿಗೆ ಕಾರಣ ಕೇಳಿದರೆ ಸಿಗುವ ಉತ್ತರ ಜೀವನದ ಬಗೆಗೆ ನಮ್ಮ ಧೋರಣೆ ಏನೆಂಬುದನ್ನು ತಿಳಿಸಿಕೊಡುತ್ತದೆ.

ದೇವರು ಕರುಣಿಸಲಿಲ್ಲ, “ಹಿತಶತ್ರುಗಳು ಮೋಸ ಮಾಡಿಬಿಟ್ಟರು, “ನಮ್ಮ ಹಣೆಬರಹವೇ ಸರಿಯಿಲ್ಲ” – ಹೀಗೆ ನೆಪಗಳ ಸರಮಾಲೆಯೇ ಹೊರಡುತ್ತದೆ.

ನಮಗೆ ಬೇಕಾದದ್ದು ದಕ್ಕದೇ ಇದ್ದಾಗ ನಮ್ಮಿಂದಲೇ ಏನು ಕಮ್ಮಿಯಾಗಿದೆ ಎಂದು ಮೆಲಕು ಹಾಕುವವರು ತುಂಬಾ ಕಡಿಮೆ.

ವೈಯಕ್ತಿಕ ಮಟ್ಟದಲ್ಲಿ ಹೀಗಾದರೆ ಸಾಮಾಜಿಕ ಮಟ್ಟದಲ್ಲೂ ನಮ್ಮ ಧೋರಣೆ ಈ ರೀತಿಯದ್ದೇ ಆಗಿ ಬಿಟ್ಟಿದೆ. ಸ್ವಾತಂತ್ರ್ಯ ಬಂದು ೭೫ ವರುಷಗಳ ನಂತರ ನಾವು ನಿಜವಾದ ಅರ್ಥದಲ್ಲಿ ವಿದೇಶೀ ಸಂಸ್ಕೃತಿಯ ದಾಸರಾಗಿ ಬಿಟ್ಟಿದ್ದೇವೆ. ನಮ್ಮ ಆಚಾರವಿಚಾರವೆಂದರೆ ವಾಕರಿಕೆ. ಪಾಶ್ಚಾತ್ಯರ ವೇಷಭೂಷ ನಮ್ಮ ಗುರಿ. ಅವರ ನಡವಳಿಕೆಯ ಅನುಕರಣೆ ನಮ್ಮಲ್ಲಿ ಮುನ್ನಡೆಯ ಸಂಕೇತ. ಇದರ ಜೊತೆಯಲ್ಲೇ ನಮ್ಮ ಸಂಸ್ಕೃತಿ, ಪರಂಪರೆ, ಭಾಷೆ ಇವುಗಳ ಮೇಲೆ ಅಸಡ್ಡೆ.

ಇಂತಹ ಪರಿಸ್ಥಿತಿಯನ್ನು ಸಮಗೊಳಿಸಬೇಕು ಎಂಬ ಆಸೆ ಹಲವು ಜನರಲ್ಲಿ ಇದ್ದರೂ ಸಾಧನೆ ಕಡಿಮೆ. ಬಯಸಿದ್ದು ಹೆಚ್ಚು. ಮಾಡಿದ್ದು ಕಮ್ಮಿ. ಹಾಗಾದರೆ ನಮ್ಮಲ್ಲಿ ಸಾಧನೆಯ ಕೊರತೆಗೆ ಕಾರಣವೇನು? ಪಂಚಮ ವೇದವೆಂದೇ ಪ್ರಖ್ಯಾತವಾದ, ಧರ್ಮಾಧರ್ಮಗಳ ಸಂಗ್ರಹವಾದ, ನೀತಿದರ್ಶಕ ಗ್ರಂಥ ಮಹಾಭಾರತ ಈ ವಿಚಾರದಲ್ಲಿ ಅತ್ಯಂತ ಮಹತ್ವದ ಪಾಠವೊಂದನ್ನು ಕಲಿಸುತ್ತದೆ.

ಧರ್ಮರಾಜ ಯುಧಿಷ್ಠಿರನಿಗೆ ಇಂದ್ರಪ್ರಸ್ಥದಲ್ಲಿ ಪಟ್ಟಾಭಿಷೇಕವಾದ ನಂತರ ಒಂದು ದಿನ ಅವನ ಸಭೆಗೆ ನಾರದ ಮುನಿಗಳು ಬರುತ್ತಾರೆ. ಕುಶಲೋಪರಿಗಳೆಲ್ಲ ಆದ ನಂತರ ರಾಜನ ಕೋರಿಕೆಯ ಮೇರೆಗೆ ವಿವಿಧ ದೇವತೆಗಳ ಸಭೆಗಳ ವೈಭವ ಹಾಗೂ ಅಲ್ಲಿ ನೆರೆದವರ ವಿವರಗಳನ್ನು ನಾರದರು ನೀಡುತ್ತಾರೆ. ಹಾಗೆ ನುಡಿಯುತ್ತಾ ಇಂದ್ರ ಸಭೆಯಲ್ಲಿ ರಾಜಾ ಹರಿಶ್ಚಂದ್ರನನ್ನು ಕಂಡೆ ಮತ್ತು ಯಮ ಸಭೆಯಲ್ಲಿ ನಿನ್ನ ತಂದೆ ಪಾಂಡುವನ್ನು ಕಂಡೆ ಎಂದವರು ಹೇಳುತ್ತಾರೆ.

ತಕ್ಷಣ ಧರ್ಮರಾಜನಲ್ಲಿ ಕುತೂಹಲ ಕೆರಳಿ ನಾರದರನ್ನು ಕೇಳುತ್ತಾನೆ – “ವರ್ಯರೇ! ನನ್ನ ತಂದೆ ದೇವತೆಯ ಅವತಾರ. ಹರಿಶ್ಚಂದ್ರ ಚಕ್ರವರ್ತಿಯಾದರೂ ಮನುಷ್ಯ ಮಾತ್ರ. ಹೀಗಿದ್ದರೂ ನನ್ನ ತಂದೆಗೇಕೆ ದೇವೇಂದ್ರನಿಗಿಂತ ತಾರತಮ್ಯದಲ್ಲಿ ಚಿಕ್ಕವನಾದ ಯಮನ ಸಭೆಯಲ್ಲಿ ಸ್ಥಾನ?”

ಅದಕ್ಕೆ ನಾರದರು ಸಮಂಜಸವಾದ ಉತ್ತರ ನೀಡುತ್ತಾರೆ – “ಧರ್ಮರಾಜ! ನಿನ್ನ ತಂದೆ ತಾರತಮ್ಯದಲ್ಲಿ ಎತ್ತರದಲ್ಲಿದ್ದಾನೆ ನಿಜ. ಆದರೆ ದೇವೇಂದ್ರನ ಶಾಪದ ನಿಮಿತ್ತ ಭೂಲೋಕದಲ್ಲಿ ಅವತರಿಸಿದ. ಇಂದ್ರನ ಸಭೆಯಲ್ಲಿ ಮತ್ತೆ ಅವನಿಗೆ ಸ್ಥಾನ ದೊರೆಯಬೇಕಾದರೆ ರಾಜಸೂಯ ಯಾಗ ಮಾಡಬೇಕಾಗಿತ್ತು. ಅದು ಅವನ ಕೈಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ ಯಮಸಭೆಯಲ್ಲಿ ಸ್ಥಾನ. ಹರಿಶ್ಚಂದ್ರನಾದರೋ ರಾಜಸೂಯ ಮಾಡಿ ಚಕ್ರವರ್ತಿ ಪಟ್ಟ ಪಡೆದು ಇಂದ್ರ ಸಭೆಯಲ್ಲಿ ರಾರಾಜಿಸುತ್ತಿರುವನು. ನೀವುಗಳು ಸೇರಿ ರಾಜಸೂಯ ಯಾಗ ಮಾಡಿ ಅದರ ಪುಣ್ಯವನ್ನು ನಿಮ್ಮ ತಂದೆಗೆ ನೀಡಿರಿ. ಅವನಿಗೂ ಇಂದ್ರಸಭೆ ದೊರೆಯುವುದು“.

ಹೀಗೆ ಹೇಳಿದ ತಕ್ಷಣ ಪಾಂಡವರು ರಾಜಸೂಯ ಯಜ್ಞ ಮಾಡುವ ಹಂಬಲದಿಂದ ಶ್ರೀ ಕೃಷ್ಣನನ್ನು ಕರೆಸಿಕೊಂಡು ಸಮಾಲೋಚನೆ ನಡೆಸುತ್ತಾರೆ. ಪರಮಾತ್ಮ ಅವರಿಗೆ ಯಾಗ ಮಾಡುವ ಯೋಚನೆ ಒಳ್ಳೆಯದು ಎಂದು ತಿಳಿಸಿ ತನ್ನ ಒಪ್ಪಿಗೆ ನೀಡುತ್ತಾನೆ. ಆದರೆ ಯಾಗಕ್ಕೆ ಅಡಚಣೆಯಾಗುವ ದೊಡ್ಡ ಸಮಸ್ಯೆಯ ಪ್ರಸ್ತಾಪ ಮಾಡುತ್ತಾನೆ.

ರಾಜಸೂಯ ಯಾಗ ಮಾಡುವ ರಾಜ ಸಮಸ್ತ ಜಗತ್ತಿನ ರಾಜರಿಂದ ಕಪ್ಪ ತರಬೇಕಷ್ಟೆ! ಒಂದೋ ರಾಜರನ್ನು ಯುದ್ಧದಲ್ಲಿ ಸೋಲಿಸಬೇಕು ಇಲ್ಲವೇ ರಾಜರೇ ಸಂತೋಷದಿಂದ ಪಾಂಡವರ ಅಧಿಪತ್ಯವನ್ನು ಒಪ್ಪಿ ಕಪ್ಪ ನೀಡಬೇಕು. ಎಲ್ಲಾ ರಾಜರನ್ನೂ ಈ ಎರಡರಲ್ಲಿ ಒಂದು ಪಂಗಡಕ್ಕೆ ಸೇರಿಸಬಹುದು. ಆದರೆ ಜರಾಸಂಧ ಕಪ್ಪವನ್ನೂ ನೀಡದೆ ಸೋಲಿಸಲೂ ಕಷ್ಟವಾಗುವ ಕಂಟಕ. ಅವನೇ ರಾಜಸೂಯ ಯಾಗಕ್ಕೆ ಅತಿದೊಡ್ಡ ಮುಳ್ಳು ಎಂದು ಶ್ರೀಕೃಷ್ಣ ತಿಳಿಸಿದ.

ಶ್ರೀಕೃಷ್ಣ ಜರಾಸಂಧನ ಜೊತೆಗಿನ ತನ್ನ ಯುದ್ಧಗಳು, ಬಲರಾಮನಿಂದಲೂ ಅವನನ್ನು ಸೋಲಿಸಲು ಅಶಕ್ಯವಾದದ್ದು, ಯಾದವರು ದ್ವಾರಕೆಗೆ ವಲಸೆ ಬಂದದ್ದು ಎಲ್ಲವನ್ನೂ ವಿವರಿಸಿದಾಗ ಧರ್ಮರಾಜನಿಗೆ ಯಾಗದ ಸಾಫಲ್ಯದ ಬಗೆಗೇ ಸಂದೇಹ ಮೂಡಿತು. ತಮ್ಮಿಂದ ಇದು ಸಾಧ್ಯವಾಗಲಿಕ್ಕೆ ಇಲ್ಲ ಎಂದು ಯೋಚಿಸಿ ರಾಜಸೂಯದ ಆಲೋಚನೆಯನ್ನೇ ಕೈ ಬಿಡೋಣ ಎಂದ.

ಆ ಸಂದರ್ಭದಲ್ಲಿ ಭೀಮಸೇನ ಎದ್ದು ನಿಂತು ರಾಜಸೂಯ ಯಾಗವನ್ನು ಮಾಡಿಯೇ ತೀರಬೇಕು ಎಂದು ಗಟ್ಟಿಯಾಗಿ ಪ್ರತಿಪಾದಿಸಿದ. ಜರಾಸಂಧನನ್ನು ಖಂಡಿತ ವಧೆ ಮಾಡುವುದಾಗಿ ಆಶ್ವಾಸನೆ ನೀಡಿದ.

ಇಲ್ಲಿ ಒಂದು ಧಾರ್ಮಿಕ, ಆಧ್ಯಾತ್ಮಿಕ ಪ್ರಶ್ನೆ ಎದುರಾಗುತ್ತದೆ. ಶ್ರೀಕೃಷ್ಣ ಪಾಂಡವರ ಪರಮ ಹಿತೈಷಿ. ಅಚಿಂತ್ಯಾದ್ಭುತ ಶಕ್ತಿ ಉಳ್ಳವ. ಜರಾಸಂಧನನ್ನು ಹತ್ತಾರು ಬಾರಿ ಸೋಲಿಸಿದವ. ಅವನ ೨೩ ಅಕ್ಷೌಹಿಣಿ ಸೇನೆಯನ್ನು ಸದೆಬಡಿದವ. ಕಂಸ, ಪೂತನ, ಚಾಣೂರ, ಮುಷ್ಟಿಕ, ಶಕಟ ಮುಂತಾದ ಹಲವಾರು ಮಹಾ ದೈತ್ಯರನ್ನು ಕೊಂದವ. ಹೀಗಿದ್ದರೂ ಜರಾಸಂಧನನ್ನು ಏಕೆ ಕೊಲ್ಲದೆ ಬಿಟ್ಟಿದ್ದ? ಸರ್ವೇಶ್ವರನಾದ ಅವನಿಗೆ ಅಶಕ್ಯವಂತೂ ಅಲ್ಲವೇ ಅಲ್ಲ. ಹಾಗಾದರೆ ಕಾರಣವೇನು?

ಈ ಪ್ರಶ್ನೆಗೆ ಉತ್ತರ ಭೀಮಸೇನ ಧರ್ಮರಾಜನಿಗೆ ನೀಡುವ ಉತ್ತರದಲ್ಲೇ ಅಡಗಿದೆ. ತಮ್ಮ ಅತ್ಯದ್ಭುತ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದಲ್ಲಿ ಶ್ರೀ ಮಧ್ವಾಚಾರ್ಯರು ಭೀಮಸೇನನ ಉತ್ತರವನ್ನು ಒಂದೇ ಶ್ಲೋಕದಲ್ಲಿ ಸಂಗ್ರಹಿಸಿದ್ದಾರೆ.

ನಿಜಾನುಭಾವವರ್ಜಿತಾ ಹರೇರನುಗ್ರಹೋಜ್ಜ್ಹಿತಾಃ ।
ಮಹಾಪ್ರಯತ್ನವರ್ಜಿತಾ ಜನಾ ನ ಜಗ್ಮುರುನ್ನತಿಮ್ ॥ ೨೧೯೫ ॥

ಸ್ವರೂಪ ಯೋಗ್ಯತೆ ಇಲ್ಲದೆ, ದೇವರ ಅನುಗ್ರಹ ಪಡೆಯದೆ, ಮಹಾ ಪ್ರಯತ್ನ ಮಾಡದೆ ಜನರು ಎಂದಿಗೂ ಅಭ್ಯುದಯ ಹೊಂದರು

ಯಾವುದೇ ಒಂದು ಸಾಧನ ಮಾಡುವುದಕ್ಕೆ ಬೇಕಾದ ಮೂರು ಸಾಮಗ್ರಿಗಳನ್ನು ಭೀಮ ಇಲ್ಲಿ ವಿವರಿಸುತ್ತಾನೆ. ಮಾಡುವ ಕಾರ್ಯಕ್ಕೆ ತಕ್ಕ ಯೋಗ್ಯತೆ ಇರಬೇಕು. ದೇವರಲ್ಲಿ ಭಕ್ತಿ ಮಾಡಿ, ಎಲ್ಲಾ ನಿನ್ನ ಅನುಗ್ರಹದಿಂದಲೇ ಆಗುವುದು ಎಂಬ ಸಮರ್ಪಣಾ ಭಾವ ತೋರಿಸಿ ಅವನ ಅನುಗ್ರಹ ಪಡೆಯಬೇಕು. ಮೂರನೆಯದಾಗಿ ಮಹಾ ಪ್ರಯತ್ನಮಾಡಬೇಕು.

ಪಾಂಡವರು ದೇವಾಂಶ ಸಂಭೂತರು. ಕುರುಕುಲದ ಉತ್ತರಾಧಿಕಾರಿಗಳು. ಅತ್ಯಂತ ಧೀರರು, ಸಮರ್ಥರು. ಹೀಗಾಗಿ ಅವರಲ್ಲಿ ರಾಜಸೂಯ ಮಾಡುವ ಯೋಗ್ಯತೆ ಅವಶ್ಯವಾಗಿ ಇತ್ತು. ಶ್ರೀಕೃಷ್ಣನೇ ಖುದ್ದಾಗಿ ಇಂದ್ರಪ್ರಸ್ಥಕ್ಕೆ ಬಂದು ಯಾಗ ಮಾಡುವ ವಿಧಿ ವಿಧಾನಗಳನ್ನು ವಿವರಿಸಿದ. ತನ್ನ ಸಂಪೂರ್ಣ ಸಹಕಾರವಿದೆಯೆಂದು ಸೂಚನೆ ನೀಡಿದ. ಹೀಗಾಗಿ ದೇವರ ಅನುಗ್ರಹ ಕೂಡ ಅವರಿಗೆ ಹೇರಳವಾಗಿತ್ತು.

ಇನ್ನು ಉಳಿದದ್ದು ಮಹಾ ಪ್ರಯತ್ನ. ಯಾವುದೇ ಕೆಲಸಕ್ಕೆ ಸಾಫಲ್ಯದ ಅಚ್ಚು ಬೀಳುವುದಕ್ಕೆ ಜೀವದ ಪ್ರಯತ್ನ ಅತ್ಯವಶ್ಯಕ. ಎಷ್ಟೇ ದೊಡ್ಡ ಭಕ್ತರಾದರೂ, ಎಷ್ಟೇ ಯೋಗ್ಯರಾದರೂ ಕಷ್ಟ ಪಡದೆ, ಪ್ರಯತ್ನ ಮಾಡದೆ ಫಲ ನೀಡುವುದಿಲ್ಲ ಎಂಬಾ ಸಂದೇಶವನ್ನು ಜಗತ್ತಿಗೆ ಸಾರುವುದಕ್ಕೋಸ್ಕರವಾಗಿಯೇ ಶ್ರೀಕೃಷ್ಣ ಜರಾಸಂಧನನ್ನು ಕೊಳ್ಳದೆ ಭೀಮಸೇನನಿಗೆ ಮೀಸಲಾಗಿಟ್ಟದ್ದು.

ಸಂಕಲ್ಪ ಮಾತ್ರದಿಂದಲೇ ಎಲ್ಲವನ್ನೂ ನಡೆಸಬಲ್ಲ ಸಾಮರ್ಥ್ಯ ಪರಮಾತ್ಮನದು. ಆದರೂ ಜರಾಸಂಧನ ವಧೆ ದೇವನ ಕೈಯಿಂದಲ್ಲದೆ ಜೀವನ ಪ್ರಯತ್ನದಿಂದಲೇ ಆಗಬೇಕು ಎಂಬ ಕಾರಣದಿಂದ ಅವನನ್ನು ಹಾಗೆ ಉಳಿಸಿದ್ದು.

ಮುಂದೆ ಶ್ರೀಕೃಷ್ಣ ಧರ್ಮರಾಜನಿಗೆ ಧೈರ್ಯ ತುಂಬಿ ಭೀಮ ಮತ್ತು ಅರ್ಜುನನ ಜೊತೆ ಮಗಧ ದೇಶಕ್ಕೆ ಹೋಗಿ ಅಲ್ಲಿ ಜರಾಸಂಧನನ್ನು ಕೆಣಕಿ ಭೀಮನ ಜೊತೆ ಯುದ್ಧ ಮಾಡಿಸಿ ಅವನನ್ನು ಕೊಲ್ಲಿಸಿದ. ೧೫ ದಿನಗಳ ಕಾಲ ಅವನೊಡನೆ ಹೋರಾಡಿ ಭೀಮಸೇನ ಜರಾಸಂಧನನ್ನು ಇಬ್ಬಾಗವಾಗಿ ತುಂಡು ಮಾಡಿ ಅವನನ್ನು ಕೊಂದ. ಯಾಗದ ಉದ್ದೇಶವಾಗಿ ಮಹಾ ಪ್ರಯತ್ನಮಾಡಿದ.

ಶ್ರೀಕೃಷ್ಣ ದೇವೋತ್ತಮ. ಭೀಮ ಜೀವೋತ್ತಮ. ನರೋತ್ತಮ. ದೇವ ಪಾಂಡವರ ಪಾಲಿನ ಅತಿ ದೊಡ್ಡ ಸಂಕಷ್ಟವಾಗಿದ್ದ ಜರಾಸಂಧನನ್ನು ಸೋಲಿಸಿ ಸದೆ ಬಡಿದು ಕ್ಷೀಣಿಸಿದ್ದ. ಅವನ ಸೈನ್ಯವನ್ನು ನುಚ್ಚು ನೂರು ಮಾಡಿ ಪಾಂಡವರ ಕೆಲಸ ಸುಲಭ ಮಾಡಿದ್ದ. ಆದರೆ ಅವನನ್ನು ಕೊಲ್ಲುವ ಕಾರ್ಯ ತಾನು ಮಾಡದೆ ಜೀವನ ಕೈಯಲ್ಲೇ ಮಾಡಿಸಿದ.

ನಮ್ಮ ನಿಮ್ಮ ಜೀವನದಲ್ಲೂ ರಾಜಸೂಯ ಯಾಗದ ಪ್ರಸಂಗ ಆಗಾಗ ಒದಗುತ್ತದೆ. ಅಂತಹ ಸಂದರ್ಭಗಳಲ್ಲಿ ಬಹು ಬಾರಿ ನಮಗೆ ಆ ಕೆಲಸಕ್ಕೆ ಬೇಕಾದ ಯೋಗ್ಯತೆಯೂ ಇರುತ್ತದೆ. ಸಂದರ್ಭ, ಅನುಕೂಲ ಸೂಚಿಸಿದಾಗ ದೇವರ ಅನುಗ್ರಹವಿದೆ ಎಂದು ಕೂಡ ಗೋಚರಿಸುತ್ತದೆ. ಆದರೆ ನಮ್ಮ ಕಡೆಯಿಂದ ಆ ಕೆಲಸಕ್ಕೆ ತಕ್ಕ ಮಹಾ ಪ್ರಯತ್ನದ ವರ್ಜನೆಯಾಗಿರುತ್ತದೆ. ನಮ್ಮ ಮಹಾಪ್ರಯತ್ನವಿಲ್ಲದೆ ನಮ್ಮ ಜೀವನದ ಜರಾಸಂಧನನ್ನು ಭೇದಿಸಲಾಗುವುದಿಲ್ಲ. ಯಶಸ್ಸು ದೊರೆಯುವುದಿಲ್ಲ. ಅದರಿಂದಾಗಿ ಕೆಲಸದಲ್ಲಿ success ಸಿಗುವುದಿಲ್ಲ!

ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ.

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈ:
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ

ಕೇವಲ ಮನೋಸಂಕಲ್ಪದಿಂದ ಯಾವುದೇ ಕೆಲಸ ಸಾಧಿಸುವುದಿಲ್ಲ. ಪರಿಶ್ರಮದಿಂದ ಮಾತ್ರ ಅದು ಸಾಧ್ಯ. ಮಲಗಿರುವ ಸಿಂಹದ ಬಾಯಿಗೆ ತಾನಾಗಿಯೇ ಮೃಗವು ಎಂದೂ ಬೀಳುವುದಿಲ್ಲ

ಮಹಾಭಾರತದ ಈ ಪ್ರಸಂಗ ಮತ್ತು ಅದರಲ್ಲಿ ಅಡಗಿರುವ ಪಾಠದಿಂದ ಸ್ಫೂರ್ತಿ ಪಡೆದು ಈ ಶುಭಾಷಿತ ರಚನೆಗೊಂಡಂತಿದೆ.

ವೈಯಕ್ತಿವಾಗಿ ಅಥವಾ ಸಾಮಾಜಿಕವಾಗಿ ಈ ಪಾಠವನ್ನು ಅಳವಡಿಸಿ ಕೊಳ್ಳುವ ಅಗತ್ಯ ನಮಗೆ ಈಗ ಅತಿ ಹೆಚ್ಚು ಅವಶ್ಯವಾಗಿದೆ. ನಮ್ಮ ಕೆಲಸದ ವಿಷಯವಿರಬಹುದು. ಸಮಾಜದ ಉದ್ಧಾರದ ಕನಸಿರಬಹುದು. ದೇಶ ಕಟ್ಟುವ ವಿಷಯವಿರಬಹುದು. ಮಾಡುವ ಕೆಲಸದಲ್ಲಿ ಮಹಾಪ್ರಯತ್ನವಿರಬೇಕು. ಪರಿಶ್ರಮ ಉತ್ತುಂಗಕ್ಕೇರಬೇಕು. ಆಗಲೇ ಫಲ. ಆಗಲೇ ಯಶಸ್ಸು.

ಮಹಾ ಪರಿಶ್ರಮದ ಬುನಾದಿಯ ಮೇಲೆ ನಮ್ಮ ಸಾಧನೆಯ ಅರಮನೆಯನ್ನು ಕಟ್ಟೋಣ. ಮಹಾಪ್ರಯತ್ನದ ಬೆಂಗಾವಲಲ್ಲೇ ಸಾಧನಮಾರ್ಗದ ಪಯಣ ಮಾಡೋಣ. ಬನ್ನಿ ಮಹಾಭಾರತದ ಈ ನೀತಿಯನ್ನು ನಮ್ಮ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ!

॥ ಶ್ರೀಕೃಷ್ಣಾರ್ಪಣಮಸ್ತು

(Image credit: epicstorymahabharata.blogspot.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply