close logo

ಮಹಾಭಾರತದ ಪ್ರತಿಮೆಗಳು: ಸಹದೇವನ ಪ್ರಾಮುಖ್ಯತೆ 

ಮಹಾಭಾರತದಲ್ಲಿ ಅನೇಕ ಪ್ರಾತಃಸ್ಮರಣೀಯ ಪಾತ್ರಗಳಿವೆ. ಕೆಲವರು ಎದ್ದು ಕಂಡರೆ ಇನ್ನಿತರರು ಹಿನ್ನೆಲೆಯ ದಿವ್ಯಮೌನದಲ್ಲಿರುತ್ತಾರೆ. ಆದಾಗ್ಯೂ, ಮಹಾಭಾರತದಲ್ಲಿ ಅವರಿಗೆ ಪ್ರಮುಖವಾದ ಸ್ಥಾನವಿದೆ.  ಕಥೆಯ ದಿವ್ಯಸೌಧದಲ್ಲಿ ಮಹತ್ತರವಾದ ಪಾತ್ರವಹಿಸುತ್ತಾರೆ. ತಮ್ಮ ಛಾಪನ್ನು ಉಳಿಸಿ ಹೋಗುತ್ತಾರೆ. ದಿವ್ಯಮೌನದಲ್ಲಿಯೂ ಸಹ ಈ ಪಾತ್ರಗಳು ಕಥಾಸೌಧದ ಮಹಾಪ್ರತಿಮೆಗಳೇ ಸರಿ. ಅದರಲ್ಲೂ, ನಕುಲ ಸಹದೇವರು ಪ್ರಮುಖರು. ಆದಿಪರ್ವದಿಂದ ಮೊದಲುಗೊಂಡು ಸ್ವರ್ಗಾರೋಹಣ ಪರ್ವದವರೆಗೂ ಅವರ ಮೌನ ಅಸ್ತಿತ್ವವಿದೆ. ಕಥೆಯ ಪ್ರತಿಯೊಂದು ಪ್ರಸಂಗದಲ್ಲಿಯೂ ಭಾಗವಹಿಸುತ್ತಾರೆ. ಆದರೆ, ಹಿನ್ನೆಲೆಯಲ್ಲೇ ಇದ್ದು ಹೆಚ್ಚು ಕಾರ್ಯನಿರ್ವಹಿಸದ ರೀತಿಯಲ್ಲಿ ನಾವು ಯಮಳರನ್ನು ಪರಿಭಾವಿಸುತ್ತೇವೆ. ಅವರ ಮೌನ ಮತ್ತು ಸರಿದುನಿಲ್ಲುವ ರೀತಿಯಲ್ಲಿ ಒಂದು ವೈಶಿಷ್ಟ್ಯವಿದೆ. ಕಥೆಯನ್ನು ಇಡಿಯಾಗಿ ಗ್ರಹಿಸಿದರೆ, ಅವರ ಪಾತ್ರ ಮಹಾಭಾರತಕ್ಕೆ ಒಂದು ಮಹತ್ವಪೂರ್ಣ ಆಯಾಮವನ್ನೊದಗಿಸುತ್ತದೆ ಎನ್ನುವುದು ಗಮನಕ್ಕೆ ಬರುತ್ತದೆ. ಅದಕ್ಕೆ ಉದಾಹರಣೆಯಾಗಿ ಸಹದೇವನ ಪಾತ್ರವನ್ನು ಪರಿಗಣಿಸೋಣ.

ದುರಂತಮಯವಾದ ಸಭಾಪರ್ವಕ್ಕೆ ಬರೋಣ. ಅದರ ದಾರುಣವಾದ ವಿವರಗಳಲ್ಲಿ, ಒಂದು ಪ್ರಮುಖವಾದ ಆದರೆ ಹೀಗೆ ಬಂದು ಹಾಗೆ ಹೋಗುವ ಒಂದು ವಿವರ ನಮ್ಮ ಗಮನಕ್ಕೆ ಬಂದಂತಿಲ್ಲ. ಸಹದೇವನನ್ನು ಧರ್ಮಜ ಶಕುನಿಗೆ ಪರಿಚಯಿಸುವ ರೀತಿಯನ್ನೇ ನೋಡಿ. “ಎಲೈ ಶಕುನಿಯೇ, ಈತ ನನ್ನ ತಮ್ಮನಾದ ಸಹದೇವ. ನೀತಿಶಾಸ್ತ್ರ ಪರಿಣತ, ನ್ಯಾಯ ನಿರ್ಣಯ ಮಾಡುವವನು. ಶಾಸ್ತ್ರಜ್ಞ ಮತ್ತು ಜ್ಞಾನಿ”.

ಸ್ವಲ್ಪ ಸಮಯದಲ್ಲಿ ಯುಧಿಷ್ಠಿರ ಸಕಲವನ್ನೂ ಕಳೆದುಕೊಂಡಿದ್ದನು. ಸಹಧರ್ಮಿಣಿಯಾದ ದ್ರೌಪದಿಯನ್ನು ಪಣಕ್ಕಿಟ್ಟು ಅವಳನ್ನೂ ಕಳೆದುಕೊಂಡಿದ್ದನು. ಅದಾಗಿ ಸ್ವಲ್ಪ ಸಮಯದಲ್ಲೇ ಭರತವಂಶ ಕಂಡರಿಯದಂತಹ ಕೃತ್ಯ ಕುರುಸಭೆಯ ಮಧ್ಯದಲ್ಲಿ ನಡೆದುಹೋಯಿತು. ಸಾಮ್ರಾಜ್ಞಿಯಾದ ದ್ರೌಪದಿಯ ವಸ್ತ್ರವನ್ನು ದುಶ್ಯಾಸನ ಸೆಳೆದದ್ದೂ, ಶ್ರೀಕೃಷ್ಣನ ಕೃಪೆಯಿಂದ ದ್ರೌಪದಿ ಪಾರಾದದ್ದೂ ಸರ್ವವಿದಿತವಾದ ಕಥೆ. ಕ್ರೋಧಾವಿಷ್ಟನಾದ ಭೀಮಸೇನ ಧರ್ಮಜನ ಕೈಗಳನ್ನು ಸುಟ್ಟುಬಿಡುವ ಆಲೋಚನೆ ಮಾಡಿದ್ದೂ ಜನಜನಿತ. “ಅಗ್ನಿಯನ್ನು ತಾರೋ” ಎಂದು ಭೀಮಸೇನ ಕರೆಕೊಟ್ಟದ್ದು ಮಾತ್ರ ಸಹದೇವನಿಗೆ ಎನ್ನುವ ಪ್ರಮುಖವಾದ ವಿವರ ನಾವು ಗಮನಿಸಿದಂತಿಲ್ಲ. ಅರ್ಜುನನ ಮೂಲಕ ಭೀಮಸೇನನ ಕೋಪ ಶಮನಗೊಳ್ಳುವುದರಿಂದ ಪ್ರಸಂಗ ಮುಂದುವರೆಯುವುದಿಲ್ಲ. ಸಹದೇವನಾದರೂ ಭೀಮಸೇನನ  ಕೋಪಕ್ಕೆ ಕೈಕೊಡುವುದಿಲ್ಲ. ಆದಾಗ್ಯೂ, ಭೀಮಸೇನನು ಸಹದೇವನನ್ನೇ ಕರೆದುದು ಏಕೆ? ಸಹದೇವನ ವೈಶಿಷ್ಟ್ಯವಾದರೂ ಏನು?

ನಕುಲ ಸಹದೇವರು ಮಾದ್ರೀಸುತರು. ಅಶ್ವಿನಿ ದೇವತೆಗಳ ಅಂಶದಿಂದ ಹುಟ್ಟಿದವರು. ಅಶ್ವಿನಿಗಳು ದಿವ್ಯ ಔಷಧದ ಪ್ರತೀಕ. ಅದಲ್ಲದೆ, ಅಪ್ರತಿಮ ಸ್ಫುರದ್ರೂಪಿಗಳು. ಅಶ್ವಿನಿಗಳ ಒಟ್ಟು ದಿವ್ಯಗುಣ ನಕುಲ-ಸಹದೇವರಲ್ಲಿ ಸಮನಾಗಿ ಒಡಮೂಡಿತ್ತು. ಅದಲ್ಲದೆ, ಅವರಿಗೆ ಸ್ವಂತವಾದ ವಿಶಿಷ್ಟಗುಣಗಳು ಇದ್ದವು. ಮಾದ್ರಿಯ ಸಹಗಮನದ ನಂತರ ಕುಂತಿಯ ಕಣ್ರೆಪ್ಪೆಗಳಂತೆ ಬೆಳೆದರು. ಅದರಲ್ಲೂ, ಸಹದೇವ ಕುಂತಿಗೆ ಅತಿಪ್ರಿಯನಾದ ಬೆಳೆದ ಮಗ. ಆದ್ದರಿಂದ, ಕುಂತಿಯ ಸುಖದುಃಖಗಳು ಸಹದೇವನ ಮೇಲೆ ವಿಶೇಷವಾದ ಪರಿಣಾಮ ಬೀರಿದವು.

ಕುಂತಿಯ ವಿಶೇಷವಾದ ಆರೈಕೆಯಲ್ಲಿ ಮಕ್ಕಳು ಬೆಳೆದಂತೆ, ಸಹದೇವ ಕುಂತಿ ದೃಷ್ಟಿಕೋನದಲ್ಲಿ ಪ್ರಪಂಚವನ್ನು ಗ್ರಹಿಸುವುದಕ್ಕೆ ಮೊದಲಾದನು. ಸಕಲವನ್ನೂ ಮೌನದಲ್ಲಿ ಗ್ರಹಿಸಿ, ಮೌನದಲ್ಲಿ ಪ್ರತಿಕ್ರಿಯಿಸುವ ರೀತಿಯನ್ನು ಬೆಳೆಸಿಕೊಂಡನು. ಪಾಂಡವರು ಅಪರಿಮಿತವಾದ ಏಳು-ಬೀಳುಗಳ ಮೂಲಕ ಸಾಗಿದಂತೆಲ್ಲ ಸಹದೇವನ ಮೌನ ಮಿಗಿಲಾಯಿತು. ಪಾಂಡವರ ದಿವ್ಯಸಂಕಲ್ಪಶಕ್ತಿಗೆ ಅವನ ಮೌನ ಪ್ರತಿಮೆಯಾಯಿತು. ಪ್ರತಿಯೊಂದನ್ನೂ ಅಳತೆಗಣ್ಣಿನಿಂದ ನೋಡುವುದು, ಆಳವಾಗಿ ಗ್ರಹಿಸುವುದು ಮತ್ತು ಮೌನದಿಂದಲೇ ಮಿಡಿಯುವುದು ಸಹದೇವನ ರೀತಿಯಾಯಿತು.

ದ್ರೋಣರ ಶಿಷ್ಯವೃತ್ತಿಯಲ್ಲಿ ಸಹದೇವ ಖಡ್ಗಧಾರಿಯಾದನು. ಹಸುಗಳ ಪಾಲನೆ, ರೀತಿಯಲ್ಲಿ ಪರಿಣತನಾದನು. ಆದರೆ ಸಹದೇವ ಮಿಗಿಲಾಗಿ ಪಡೆದುಕೊಂಡದ್ದು ನೀತಿಶಾಸ್ತ್ರವನ್ನು – ಅದರಲ್ಲೂ ಸ್ವತಃ ದೇವಗುರು ಬೃಹಸ್ಪತಿಗಳಿಂದ. ತನ್ಮೂಲಕ, ಎಲ್ಲ ಸಂದರ್ಭಕ್ಕೂ ಸರಿಯಾದ ವಿಧಾನ-ನೀತಿಗಳ ವಿಷಯದಲ್ಲಿ ಸಹದೇವನನ್ನು ಮೀರಿಸಿದ ಜ್ಞಾನಿಯಿರಲಿಲ್ಲ. ಪ್ರತಿಯೊಬ್ಬರ ಸ್ವಧರ್ಮಕ್ಕೆ ಅನುಗುಣವಾದ ವಿದ್ಯಾರ್ಜನೆಯೇ ರೀತಿಯಾಗಿದ್ದ ಕಾಲದಲ್ಲಿ ಇದೇನು ಆಶ್ಚರ್ಯವಲ್ಲ. ಗುರುಹಿರಿಯರಿಗೆ ಮಕ್ಕಳ ಸ್ವಧರ್ಮವನ್ನು ಗ್ರಹಿಸುವ ಜ್ಞಾನ ತಪಃಶಕ್ತಿಗಳಿದ್ದವು. ಅದೇನೇ ಇರಲಿ, ದ್ರೌಪದಿ ಸ್ವಯಂವರದ ನಂತರ ಸಹದೇವನಿಗೆ ಮತ್ತೊಂದು ಮದುವೆಯೂ ನಡೆಯಿತು. ಮದ್ರದೇಶದ ರಾಜವಂಶದ ದ್ಯುತಿಮಂತನ ಮಗಳಾದ ವಿಜಯಳೊಂದಿಗೆ. ದ್ರೌಪದಿಯಲ್ಲಿ ಶ್ರುತಸೇನ ಮತ್ತು ವಿಜಯಾಳಲ್ಲಿ ಸುಹೋತ್ರರೆಂಬ ಮಕ್ಕಳು ಜನಿಸಿದರು.

ಯುದ್ಧದಲ್ಲಾದರೂ ಸಹದೇವನೇನೂ ಕಡಿಮೆಯಿರಲಿಲ್ಲ. ರಾಜಸೂಯಕ್ಕಾಗಿ ನಡೆದ ದಿಗ್ವಿಜಯದಲ್ಲಿ ಸಹದೇವ ಇಡಿಯ ದಕ್ಷಿಣಭಾರತದ ದಿಗ್ವಿಜಯ ನಡೆಸಿದವನು. ನಂತರ ಘಟೋತ್ಕಚನ ಮೂಲಕ ಲಂಕೆಯ ವಿಭೀಷಣನಿಗೆ ಸಂದೇಶ ಕಳಿಸಿದನು. ಸಂದೇಶವನ್ನೋದಿದ ವಿಭೀಷಣ ಕಾಲನ ಲಿಖಿತವೆನ್ನುವಂತೆ ಯುಧಿಷ್ಠಿರನ ಚಕ್ರವರ್ತಿತ್ವವನ್ನು ಒಪ್ಪಿದನು. ಸಹದೇವನ ಸಂದೇಶದ ರೀತಿಯೇ ಹಾಗಿತ್ತು. ಖಡ್ಗವನ್ನು ಹಿಡಿದು ಗೆಲ್ಲುವಂತೆಯೇ, ಖಡ್ಗರಹಿತವಾಗಿ ಗೆಲ್ಲುವುದನ್ನೂ ಅರಿತಿದ್ದನು.

ಮಾಹಿಷ್ಮತಿಯ ರಾಜನಾದ ನೀಲನೊಡನೆ ನಡೆದ ಯುದ್ಧ ವಿಶೇಷವಾದುದಾಗಿತ್ತು. ಸ್ವತಃ ಅಗ್ನಿದೇವನೇ ನೀಲನ ರಕ್ಷಣೆಗೆ ನಿಂತಿದ್ದನು. ಅಗ್ನಿದೇವನ ಜ್ವಾಲೆಗಳು ಪಾಂಡವ ಸೇನೆಯನ್ನು ಆಹುತಿ ತೆಗೆದುಕೊಳ್ಳುತ್ತಿತ್ತು. ಇದು ಕ್ಷಾತ್ರದಿಂದ ಗೆಲ್ಲುವ ಯುದ್ಧವಲ್ಲ ಎನ್ನುವುದು ಸಹದೇವನಿಗೆ ಅರಿವಾಯಿತು. ನಿಂತ ಸ್ಥಳದಿಂದ ಅಲುಗಾಡದೆ ಕಠಿಣ ತಪಸ್ಸಿನಿಂದ ಸಹದೇವನು ಅಗ್ನಿದೇವನನ್ನು ಪ್ರಾರ್ಥಿಸಿದನು. “ಓ ಅಗ್ನಿದೇವನೇ, ನಮ್ಮೀ ಯುದ್ಧವು ರಾಜಸೂಯ ಯಜ್ಞದ ಸಲುವಾಗಿ. ಪ್ರತಿಯೊಂದು ಯಜ್ಞವೂ ನಿನಗಾಗಿಯೇ ಅಲ್ಲವೇ, ನಿನ್ನದೇ ಅಲ್ಲವೇ? ನಿಜಕ್ಕಾದರೂ, ಯಜ್ಞವೆಂದರೆ ನೀನೇ ಅಲ್ಲವೇ? ನಿನ್ನ ಅನುಗ್ರಹವಿಲ್ಲದೆ ನಮ್ಮ ಯಜ್ಞವು ನಡೆಯುವುದುಂಟೇ? ನಮ್ಮನ್ನು ಜಯಶಾಲಿಯನ್ನಾಗಿ ಮಾಡು ಅಗ್ನಿದೇವನೇ. ನಿನಗಾಗಿಯೇ ಆದ ಯಜ್ಞಕ್ಕೆ ನೀನೆ ಅಡ್ಡಿಪಡಿಸುವುದುಂಟೆ?” ಎಂದು ವಿನಮ್ರನಾಗಿ ನುಡಿದನು.

ಅಗ್ನಿದೇವನು ಸುಪ್ರೀತನಾದನು. “ಎಲೈ ಸಹದೇವನೇ, ನಾನು ವರವನ್ನಿತ್ತಿರುವುದರಿಂದ ನೀಲನನ್ನು ಅವನ ಶತ್ರುಗಳಿಂದ ಸಂರಕ್ಷಿಸಿಯೇ ತೀರುತ್ತೇನೆ. ಆದರೆ ರಾಜಸೂಯದ ಸಲುವಾಗಿ ಬಂದಿರುವ ನಿನ್ನನ್ನು ಸೋಲಿಸುವುದೂ ಇಲ್ಲ. ಯುಧಿಷ್ಠಿರನ ರಾಜಸೂಯಾಕಾಂಕ್ಷೆ ನನಗೆ ತಿಳಿದಿದೆ. ಅದು ಧರ್ಮಸಮ್ಮತವೂ ಆಗಿದೆ”. ಇದಾದ ಸ್ವಲ್ಪದರಲ್ಲಿ, ಅಗ್ನಿಯು ನೀಲನನ್ನು ಯುಧಿಷ್ಠಿರನ ಚಕ್ರವರ್ತಿತ್ವಕ್ಕೆ ಒಪ್ಪಿಸಿದನು. ಯುದ್ಧವು ನಿಂತಿತು. ನೀಲನು ಸಹದೇವನನ್ನು ಆದರಿಸಿದನು. ಹೀಗೆ ನರ್ಮದಾ ನದಿಯ ನಂತರದ ಭೂಭಾಗವನ್ನೆಲ್ಲ ಸಹದೇವನು ಗೆದ್ದು ಯುಧಿಷ್ಠಿರನಿಗೆ ಅರ್ಪಿಸಿದನು.

ಯುಧಿಷ್ಠಿರನ ಮಂತ್ರಿಗಳಲ್ಲೆಲ್ಲ ಸಹದೇವನು ಪ್ರಮುಖನಾಗಿದ್ದನು. ಅವನ ಅತಿಮುಖ್ಯ ಸಲಹೆಗಾರನಾಗಿದ್ದನು. ರಾಜ್ಯಪಾಲನೆಯ ಬಹುಮುಖ್ಯವಾದ ನ್ಯಾಯನಿರ್ಣಯ ಸಹದೇವನದಾಗಿತ್ತು. ಸಹದೇವನ ವ್ಯಕ್ತಿತ್ವ, ಅವನ ನೀತಿಶಾಸ್ತ್ರದ ಜ್ಞಾನ ಮತ್ತು ಮೌನದಿಂದ ಪ್ರಪಂಚವನ್ನು ಅರಿಯುವ ರೀತಿಗೆ ಇದು ಸಹಜವೇ ಆಗಿತ್ತು. ಯಾವುದಕ್ಕೆ ಮೊದಲಾಗಬೇಕಾದರೂ ಯುಧಿಷ್ಠಿರ ಮೊಟ್ಟಮೊದಲು ಚರ್ಚಿಸುತ್ತಿದ್ದುದು ಸಹದೇವನ ಜೊತೆಯಲ್ಲಿ (ಅಂತಿಮವಾಗಿ ಶ್ರೀಕೃಷ್ಣನ ಜೊತೆಯಲ್ಲಿ). ಸದಾ ಸಹದೇವ ತನ್ನ ಹತ್ತಿರದಲ್ಲಿರಬೇಕು ಎಂದು ಯುಧಿಷ್ಠಿರ ಬಯಸುತ್ತಿದ್ದನು. ಶ್ರೀಕೃಷ್ಣನನ್ನು ಅಗ್ರಪೂಜೆಗೆ ಕರೆದುತಂದುದು ಸಹ ಸಹದೇವನೇ. ಶಿಶುಪಾಲ ಶ್ರೀಕೃಷ್ಣನನ್ನು ದೂಷಿಸಿದಾಗ ಅವನನ್ನು ಕಟುವಾಗಿ ಆಕ್ಷೇಪಿಸಿದ್ದು ಸಹದೇವನೇ. ಸಭೆಯಲ್ಲಿ ಕುಂತಿ ಆಸೀನಳಾದಾಗಲೆಲ್ಲ ಸಹದೇವನೇ ಅವಳ ಪಕ್ಕದಲ್ಲಿರುತ್ತಿದ್ದನು.

ದ್ಯೂತದಲ್ಲಿ ಸಕಲವನ್ನೂ ಕಳೆದುಕೊಂಡ ಪಾಂಡವರು ಕಾಡಿಗೆ ಹೋರಾಟ ರೀತಿಯನ್ನಾದರೂ ನೋಡಿ. ತನ್ನ ಉರಿಯುವ ಕಣ್ಣುಗಳು ಏನನ್ನು ಸುಟ್ಟುಬಿಡಬಾರದೆಂದು ಯುಧಿಷ್ಠಿರನು ಮುಖವನ್ನೇ ಮುಚ್ಚಿಕೊಂಡನು. ಅಂತೆಯೇ ಭೀಮನು ತನ್ನ ಬಾಹುಗಳನ್ನು ಬಂಧಿಸಿಕೊಂಡು ನಡೆದನು. ಅರ್ಜುನ ತನ್ನ ಅಸ್ತ್ರ-ಶಾಸ್ತ್ರಗಳನ್ನು ಮುಚ್ಚಿಕೊಂಡು ಹೊರಟನು. ನಕುಲನು ತನ್ನ ಸ್ಪುರದ್ರೂಪ ಯಾವ ಸ್ತ್ರೀಯನ್ನು ವಿಚಲಿತಗೊಳಿಸಬಾರದೆಂದು ದೇಹಕ್ಕೆ ಬೂದಿಬಳಿದುಕೊಂಡು ನಡೆದನು. ಸಹದೇವನು ಸಹ ತನ್ನನ್ನು ಯಾರೂ ಗುರುತಿಸಬಾರದೆಂದು ಬೂದಿಯಿಂದ ಆವೃತನಾಗಿ ನಡೆದನು. ಜ್ಞಾನಿಯಾದ  ಸಹದೇವ ಹಸ್ತಿನಾಪುರದಿಂದ ನಿರ್ಗಮಿಸುವುದನ್ನು ಗುರುತಿಸುವ ಜನರು ಜ್ಞಾನವೇ ನಗರವನ್ನು ಬಿಟ್ಟಿತೆನ್ನುವ ಭಾಸಕ್ಕೆ ಒಳಗಾಗಬಾರದೆಂದು.

ಕುಂತಿ ದ್ರೌಪದಿಗೆ ಹೇಳುವುದನ್ನಾದರೂ ನೋಡಿ. “ಸಹದೇವನ ಮೇಲೆ ಯಾವಾಗಲೂ ಗಮನವಿರಲಿ ದ್ರೌಪದಿ. ಸಹದೇವ ನನಗೆ ಅತ್ಯಂತ ಪ್ರೀತಿಪಾತ್ರ. ಅವನ ಹೃದಯಕ್ಕೆ ಯಾವುದೇ ಕಾರಣಕ್ಕೂ ಘಾಸಿಯಾಗದಿರಲಿ”. ಸಹದೇವನೇ ಪಾಂಡವರ ಹೃದಯ ಎನ್ನುವುದನ್ನು ಕುಂತಿ ಚೆನ್ನಾಗಿ ಅರಿತಿದ್ದಳು. ಸಹದೇವನ ಸೌಖ್ಯವೆಂದರೆ ಪಾಂಡವರ ಸೌಖ್ಯ. ತಮ್ಮ ತಾಯಿಯಾದ ಕುಂತಿಯ ಕ್ಷೇಮವನ್ನು ಯಾವರೀತಿಯಲ್ಲಿ ಕಾಯುತ್ತಿದ್ದರೋ ಅದೇ ರೀತಿ ಸಹದೇವನ ಕ್ಷೇಮ-ಸೌಖ್ಯಗಳನ್ನು ಪಾಂಡವರು ಕಾಯುತ್ತಿದ್ದರು. ಸಹದೇವನ ರಕ್ಷಣೆಯಲ್ಲಿ ತಮ್ಮ ಪರಿಶುದ್ಧತೆ, ಧರ್ಮವಂತಿಕೆ ಮತ್ತು ತೇಜಸ್ಸನ್ನು ಪಾಂಡವರು ರಕ್ಷಿಸುತ್ತಿದ್ದರು. ಕುಂತಿ, ದ್ರೌಪದಿಯರು ಹಲವಾರು ಬಾರಿ ಸಹದೇವನ ಶೌರ್ಯ, ಬುದ್ಧಿವಂತಿಕೆ, ಜ್ಞಾನ ಮತ್ತು ಕ್ಷಾತ್ರಧರ್ಮಪರತೆಯನ್ನು ಹಾಡಿಹೊಗಳುತ್ತಾರೆ. ಧರ್ಮವಿಹೀನನಾಗುವುದಕ್ಕಿಂತ ಅಗ್ನಿಪ್ರವೇಶವನ್ನು ಸಹದೇವ ಪರಿಗಣಿಸುತ್ತಾನೆ. ಒಳ್ಳೆಯ ನಡತೆ, ಸಿಹಿಯಾದ ಮಾತುಗಾರಿಕೆ ಮತ್ತು ಪರಿಶುದ್ಧವಾದ ನಡೆ-ನುಡಿಗೆ ಸಹದೇವ ಪ್ರತಿಮೆಯಾಗಿದ್ದನು ಎನ್ನುವುದನ್ನು ಅನೇಕಬಾರಿ ಕುಂತಿ-ದ್ರೌಪದಿಯರು ಎತ್ತಿ ಹಿಡಿಯುತ್ತಾರೆ.

ಇಷ್ಟಲ್ಲದೆ ಸಹದೇವನು ಪ್ರಾಪಂಚಿಕ ವಿಷಯಗಳಲ್ಲೂ ಪರಿಣತಿಯನ್ನು ಪಡೆದಿದ್ದನು. ಬಿಲ್ಲು-ಖಡ್ಗಳಲ್ಲದೆ ಹಸುಗಳ ಪಾಲನೆ-ಪೋಷಣೆಯಲ್ಲಿ ಸಹದೇವ ಮಿಗಿಲಾಗಿದ್ದನು. ವಿರಾಟನ ಅರಮನೆಯಲ್ಲಿ ತನ್ನನ್ನು ತಾನೇ ಪರಿಚಯಿಸಿಕೊಳ್ಳುವಾಗ “ಇಪ್ಪತ್ತು ಯೋಜನೆಗಳ ದೂರದ ಪ್ರತಿಯೊಂದು ಹಸುವಿನ ನಿನ್ನೆ, ಇಂದು, ನಾಳೆಗಳು  ನನಗೆ ತಿಳಿದಿದೆ” ಎನ್ನುತ್ತಾನೆ ಸಹದೇವ. ಅಷ್ಟಲ್ಲದೇ, ಸ್ಪಷ್ಟವಾದ ಆಲೋಚನೆ, ಸ್ಥಿರವಾದ ನಿರ್ಧಾರ ಮತ್ತು ಖಚಿತವಾದ ಕೃತಿಗೆ ಸಹದೇವ ಹೆಸರುವಾಸಿಯಾಗಿದ್ದನು. ಅಜ್ಞಾತವಾಸದ ನಂತರ ವಿರಾಟನ ಅರಮನೆಯಲ್ಲಿ ಮುಂದಿನ ನಡೆಯ ಬಗ್ಗೆ ಸಹದೇವನ ಅಭಿಪ್ರಾಯವನ್ನು ಕೇಳಿದಾಗ ಯುದ್ಧ ನಡೆಯಲೇಬೇಕೆನ್ನುವ ತನ್ನ ಖಚಿತವಾದ ಅಭಿಪ್ರಾಯವನ್ನು ತಿಳಿಸಿದನು. ದ್ಯೂತದಲ್ಲಿ ನಡೆದ ಅಕೃತ್ಯಕ್ಕೆ ಪ್ರತೀಕಾರ ಅಗತ್ಯವಾಗಿತ್ತು. ಧರ್ಮವನ್ನು ಮತ್ತೆ ಖಚಿತವಾಗಿ ನಿಲ್ಲಿಸಬೇಕಿತ್ತು. ಅಲ್ಲದೆ, ಸಂಪತ್ತಿನ ಗಳಿಕೆಯಿಂದಲೇ ಕಾಮದ ಪೂರೈಕೆ ಮತ್ತು ಧರ್ಮದ ಸ್ಥಾಪನೆ ಎನ್ನುವುದು ಸಹದೇವನ ಖಚಿತ ನಿಲುವಾಗಿತ್ತು. ತನ್ನೆಲ್ಲ ಪರಿಶುದ್ಧತೆಯಲ್ಲಿ ಸಹದೇವನು ವ್ಯವಹಾರಸ್ಥನಾಗಿದ್ದನು.

ಕುಂತಿ ವಾನಪ್ರಸ್ಥಕ್ಕೆ ಹೊರಟಾಗ ಮತ್ತು ಅಗ್ನಿದುರಂತದಲ್ಲಿ ಮಡಿದಾಗ ಸಹದೇವನೇ ಅತಿಹೆಚ್ಚು ದುಃಖಪಟ್ಟದ್ದು. ಕುರುವಂಶದ ಭಾವಸಂಪತ್ತಿನ ಮಿಗಿಲಾದ ಪ್ರತೀಕ ಸಹದೇವ. ಹೀಗೆ ಸಹದೇವ, ತನ್ನದೇ ಮೌನಪ್ರಪಂಚದಲ್ಲಿ, ಸದ್ದಿಲ್ಲದ ಒಂದು ದೂರದಲ್ಲಿ ಎಲ್ಲವನ್ನೂ ಗ್ರಹಿಸುವ, ಎಲ್ಲವನ್ನೂ ಅರ್ಥೈಸುವ ವಿಶಿಷ್ಟ ವ್ಯಕ್ತಿಯಾಗಿದ್ದನು. ಪರಮಜ್ಞಾನಿಯಾಗಿದ್ದನು. ಇಷ್ಟಾಗಿಯೂ ತನ್ನ ಅಣ್ಣಂದಿರ ಹಿಂಬಾಲಕನಾಗಿ, ಅವರ ಮಾತನ್ನು ಚಾಚೂ ತಪ್ಪದೆ ನಡೆಯಿಸುವ ಸಹವರ್ತಿಯಾಗಿದ್ದನು. ಧರ್ಮವನ್ನು ಕೃತಿಗಿಳಿಸುವುದರಲ್ಲಿ ಭೀಮಾರ್ಜುನರೇ ಮುಂದಿರಬೇಕಾದವರು ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿದ್ದನು. ಅದಕ್ಕೆ ಪ್ರತಿಯಾಗಿ, ಸಹದೇವನ ಪೋಷಣೆಯಲ್ಲಿ ಪಾಂಡವರು ತಾವು ಸಂರಕ್ಷಿಸಿಕೊಳ್ಳಬೇಕಾದ ಗುಣಗಳೆಲ್ಲದರ ಪೋಷಣೆಯನ್ನು ಪರಿಕಲ್ಪಿಸಿಕೊಂಡರು.

ನೆಲದ ಮೇಲಿನ ಧರ್ಮಾಚರಣೆ ಎಂದಿಗೂ ಕಠಿಣ. ಆ ಹಾದಿಯಲ್ಲಿ ಸಹದೇವನ ಸ್ಪಷ್ಟತೆ ತಮಗೆ ಸಾಧ್ಯವಾಗದೆ ಹೋಗಬಹುದು ಎನ್ನುವುದು ಪಾಂಡವರಿಗೆ ತಿಳಿದಿತ್ತು. ಆದರೆ ಸಹದೇವನ ರಕ್ಷಣೆಯಲ್ಲಿ ಆ ಪರಿಶುದ್ಧತೆ ತಮಗೆ ಮತ್ತೆ ದೊರೆಯುತ್ತದೆ ಎನ್ನುವುದು ಪಾಂಡವರಿಗೆ ಅರಿವಿತ್ತು. ಅದಕ್ಕೆ ಪ್ರತಿಯಾಗಿ ಸಹದೇವನಿಗೆ ತನ್ನ ಜ್ಞಾನದೀಪ್ತಿ ಭೀಮಾರ್ಜುನರ ಆಚರಣೆಯಲ್ಲೇ ಸಾರ್ಥಕವಾಗುವುದು ಎನ್ನುವುದು ತಿಳಿದಿತ್ತು. ಅವನ ಜ್ಞಾನ ಮತ್ತು ದೃಷ್ಟಿ – ಧರ್ಮದ ಸ್ಥಾಪನೆ ಮತ್ತು ಪಾಂಡವರ ಏಕತೆ, ಅಭಿವೃದ್ಧಿಗೆ ಮೀಸಲಾಗಿತ್ತು.

ಪಾಂಡವರ ಒಗ್ಗಟ್ಟಿಗೆ ಈ ಸಮತೋಲನವೇ ಕಾರಣವಾಗಿತ್ತು. ಈ ಸಮತೋಲನವನ್ನು ಕುಂತಿಯ ದೂರದೃಷ್ಟಿ ಮತ್ತು ಸಹದೇವನ ಮೌನವಾದ ಆಚರಣೆ ಸಾಧ್ಯವಾಗಿಸಿತು. ಮುಖ್ಯವಾಗಿ, ಚಕ್ರವರ್ತಿಯಾದ ಯುಧಿಷ್ಠಿರನಿಗೆ ಅಗತ್ಯವಾದ ಸಕಲ ಸ್ಪಷ್ಟತೆ, ದೂರದೃಷ್ಟಿಗಳು ಸಹದೇವನಲ್ಲಿ ಸ್ಥಾಪನೆಯಾಗಿತ್ತು. ಪಾಂಡವರು ಅದನ್ನು ಸಾಧ್ಯವಾಗಿಸಿದರು. ತನ್ನ ರಾಜಧರ್ಮ ಪರಿಪಾಲನೆಯ ಕಾಠಿಣ್ಯದಲ್ಲಿ ಯುಧಿಷ್ಠಿರನ ದೃಷ್ಟಿಗೆ ದೋಷಬಂದರೂ ಸಹದೇವನ ಸ್ಪಷ್ಟತೆ ಅವನ ಪಕ್ಕದಲ್ಲೇ ಇದ್ದು ಸದಾ ಯುಧಿಷ್ಠಿರನಿಗೆ ಲಭ್ಯವಾಗುತ್ತಿತ್ತು.

ಇಷ್ಟಾಗಿಯೂ, ಸ್ವರ್ಗಾರೋಹಣಕ್ಕೆ ಮೊದಲಾದ ಪಾಂಡವರಲ್ಲಿ ಮೊದಲು ಕೆಳಗೆ ಬಿದ್ದದ್ದು ಸಹದೇವನೇ. ಭೀಮನಿಗೆ ವಿಪರೀತ ದುಃಖವಾಯಿತು. ಯುಧಿಷ್ಠಿರನಿಗೆ ಮಾತ್ರ ಸಹದೇವನ ಜ್ಞಾನದ ಮಿತಿ ತಿಳಿದಿತ್ತು. ಸಹದೇವನಿಗೆ ತನ್ನ ಜ್ಞಾನದ ಬಗೆಗೆ ಅತೀವವಾದ ಹೆಮ್ಮೆಯಿತ್ತು. ಅದೆಂದಿಗೂ ಪ್ರಕಟವಾಗದೇ ಹೋದರೂ ಮೌನದಲ್ಲೇ ಅದು ಸಹದೇವನನ್ನು ಆವರಿಸಿತ್ತು. ತನ್ನದ ಜ್ಞಾನ ಬಗೆಗಿನ ಅತಿಯಾದ ಅರಿವೇ ಅವನಲ್ಲಿ ಒಂದು ಬಗೆಯ ಅವ್ಯಕ್ತ ಅಹಂಕಾರವನ್ನು ಸೃಷ್ಟಿಸಿತ್ತು. ಜ್ಞಾನಮಾರ್ಗದ ಕಾಠಿಣ್ಯಕ್ಕೆ ಇದು ಪ್ರತಿಮೆಯಾಗಿದೆ.

ಯುಧಿಷ್ಠಿರ ಮಾತ್ರ ಇದನ್ನು ಮೀರಿದ ಸ್ಥಿತಿಯನ್ನು ಸಂಪಾದಿಸಿಕೊಂಡಿದ್ದನು. ಧರ್ಮಾಚರಣೆ ಮತ್ತು ಅದರಲ್ಲಿನ ಸೋಲು ಅವನಲ್ಲಿ ನಮ್ರತೆಯನ್ನು ಸಾಧ್ಯವಾಗಿಸಿತ್ತು. ಆದರೆ ಸಹದೇವನ ಶಾಸ್ತ್ರೀಯವಾದ ಜ್ಞಾನ ಅವ್ಯಕ್ತವಾದ ಅಹಂಕಾರ ಸಂಗ್ರಹಣೆಗೆ ದಾರಿಮಾಡಿತ್ತು. ಆದ್ದರಿಂದ ಸಹದೇವ ಸಶರೀರವಾಗಿ ಸ್ವರ್ಗಕ್ಕೆ ಹೋಗುವಂತಿರಲಿಲ್ಲ.

ಸಹದೇವನ ಪಾತ್ರಪರಿಕಲ್ಪನೆ ಮತ್ತು ಪ್ರತಿಮೆ ವ್ಯಾಸ ಮಹರ್ಷಿಗಳ ಅಪ್ರತಿಮ ದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ. ಸಹದೇವ ಮಹಾಭಾರತದುದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುವ ನದಿಯಂತೆ. ಎಲ್ಲಿಯೂ ಮುನ್ನೆಲೆಗೆ ಬಾರದೇ ಸದಾ ಪ್ರಸ್ತುತ. ಸದಾ ಅಗತ್ಯ. ಮಹಾಭಾರತದ ಪಾತ್ರ, ಕಾವ್ಯ, ದೃಷ್ಟಿ ಸೌಧಗಳಲ್ಲಿ ಸಹದೇವ ಅತಿಮುಖ್ಯ ಅಂಗ.

ಕುಂತಿಯು ಪಾಂಡವರ ರಕ್ಷಣೆ,  ಭರತವಂಶದ ಸಾತತ್ಯ ಮತ್ತು ಧರ್ಮಾಚರಣೆಗೆ ನಡೆಸುವ ಕಠಿಣ ತಪಸ್ಸಿನ ಬಹುಮುಖ್ಯ ಅಂಗ ಸಹದೇವ. ತನ್ನ ಮಕ್ಕಳು ವ್ಯಕ್ತಿವಿಶೇಷವಾಗಿಯೂ, ಭ್ರಾತೃ-ವಿಶೇಷರಾಗಿಯೂ ಬೆಳೆಯಬೇಕೆನ್ನುವ ಸಂಕಲ್ಪದಲ್ಲಿ ಕುಂತಿ ಪ್ರತಿಯೊಬ್ಬರನ್ನು ಒಂದು ವೈಶಿಷ್ಟ್ಯದಲ್ಲಿ ಬೆಳೆಸಿದಳು. ಪಾಂಡವರು ತಮ್ಮ ಆಚರಣೆಗಳ ಸಿದ್ಧಿಯನ್ನು ಸಹದೇವನಲ್ಲಿ ಕಾಣುವಂತೆ ಅವನನ್ನು ಬೆಳೆಸಿದಳು. ಸಹದೇವ ತನ್ನ ಪರಿಪೂರ್ಣತೆಯನ್ನು ತನ್ನ ಶಾಸ್ತ್ರೀಯ ಪರಂಪರೆಯ, ವಂಶದ, ಮನುಕುಲದ,  ಶುದ್ಧ ಪ್ರತಿನಿಧಿಯಾಗುವುದರಲ್ಲಿ ಕಂಡುಕೊಂಡನು.

(ಈ ಲೇಖನ ಶಿವಕುಮಾರ ಜಿ.ವಿ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This is a translation of an article in English written by Shivakumar GV)

(Image credit: Wikipedia Commons, Ramanarayanadatta Astri)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply