close logo

ಮಹಾಭಾರತದ ಸಂವಾದಗಳು – ಪತಿವ್ರತೆ ಹಾಗು ಧರ್ಮವ್ಯಾಧ ಪ್ರಕರಣ- ಭಾಗ ೨

ಇಂದ್ರಿಯ ನಿಗ್ರಹ ಮತ್ತು ಬ್ರಹ್ಮಜ್ಞಾನ

ಕೌಶಿಕನು ವ್ಯಾಧನ ಧರ್ಮಜ್ಞಾನಕ್ಕೆ ಬೆರಗಾಗಿ ನಮಸ್ಕರಿಸುತ್ತಾನೆ. ತನಗೆ ಬ್ರಹ್ಮವಿದ್ಯೆಯನ್ನು ಬೋಧಿಸಬೇಕು ಎಂದು ಪ್ರಾರ್ಥಿಸುತ್ತಾನೆ. ಈ ಪ್ರಸಂಗದಲ್ಲಿ ವೇದಾಂತಸಾರವನ್ನು ಭಗವಾನ್ ವ್ಯಾಸರು ಸ್ಥೂಲವಾಗಿ ಪ್ರಸ್ತಾವಿಸಿದ್ದಾರೆ. ವೇದಾಂತದ ಅನೇಕ ಆಕರಗಳಾದ ಕಪಿಲರ ಸಾಂಖ್ಯಶಾಸ್ತ್ರ, ಮಹರ್ಷಿ ಪತಂಜಲಿಗಳ ಯೋಗಶಾಸ್ತ್ರ, ಭಗವದ್ಗೀತೆಯ ಸಾಂಖ್ಯಯೋಗ ಇತ್ಯಾದಿಗಳಲ್ಲಿ ಈ ವಿಷಯವು ವಿಸ್ತೃತವಾಗಿ ಬರುತ್ತದೆ.

ಮೊದಲಿಗೆ ವ್ಯಾಧನು ವ್ಯಕ್ತಅವ್ಯಕ್ತಗಳಿಂದ ಕೂಡಿದ ೨೪ ತತ್ವಗಳನ್ನು ವಿವರಿಸುತ್ತಾನೆ.

ಸಕಲ ಬ್ರಹ್ಮಾಂಡವು ಪಂಚಮಹಾಭೂತಗಳಿಂದ ಕೂಡಿದೆ (ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ). ಅವುಗಳ ಗುಣಗಳು ಶಬ್ದ, ಸ್ಪರ್ಶ, ರೂಪ, ರಸ, ಗಂಧ. (ಇವುಗಳನ್ನು ತನ್ಮಾತ್ರಗಳೆಂದೂ ಕರೆಯುತ್ತಾರೆ). ಕರ್ಮೇಂದ್ರಿಯಗಳು (), ಜ್ಞಾನೇಂದ್ರಿಯಗಳು(), ಚೇತನ (ಮನಸ್ಸು), ಬುದ್ಧಿ , ಅಹಂಕಾರ ಮತ್ತು ಬ್ರಹ್ಮವಸ್ತು (ಪರಂ) – ಒಟ್ಟುಗೂಡಿ ಇವು ಬ್ರಹ್ಮಾಂಡದ ೨೪ ತತ್ವಗಳೆಂದು ಗುರುತಿಸಲ್ಪಡುತ್ತವೆ.

ಪಂಚಭೂತಗಳ ಗುಣಗಳ ವಿವರ ಹೀಗಿದೆ :-

ಪಂಚಭೂತಗಳು

ಗುಣಗಳು

ಆಕಾಶ

ಶಬ್ದ

ವಾಯು

ಶಬ್ದ, ಸ್ಪರ್ಶ

ಅಗ್ನಿ

ಶಬ್ದ, ಸ್ಪರ್ಶ, ರೂಪ

ನೀರು

ಶಬ್ದ, ಸ್ಪರ್ಶ, ರೂಪ, ರಸ

ಭೂಮಿ

ಶಬ್ದ, ಸ್ಪರ್ಶ, ರೂಪ, ರಸ, ಗಂಧ

ಜಗತ್ತಿನ ಸ್ಥಾವರ ಜಂಗಮಗಳೆಲ್ಲವೂ ಪಂಚಭೂತಗಳ ಧಾತು(ಗುಣ)ಗಳಿಂದ ಆವೃತವಾಗಿವೆ. ಪಂಚಭೂತಗಳಲ್ಲಿ ಗುಣಗಳು ಪರಸ್ಪರ ವಿರುದ್ದವಾಗಿರುವುದಿಲ್ಲ, ಬದಲಿಗೆ ಸರಿಯಾದ ಪ್ರಮಾಣದಲ್ಲಿರುತ್ತವೆ. ಆದರೆ ಚರಾಚರಗಳಲ್ಲಿ ಇವುಗಳ ವೈಷಮ್ಯವುಂಟಾದಾಗ ದೇಹಿಯು (ಆತ್ಮನು) ಮತ್ತೊಂದು ದೇಹವನ್ನು ಪ್ರವೇಶಿಸುತ್ತಾನೆ.

ಶಬ್ದಾದಿ ಗುಣಗಳನ್ನು ಗ್ರಹಿಸುವ ಇಂದ್ರಿಯಗಳೇ ನಾನು ಎಂಬ ತಪ್ಪು ತಿಳುವಳಿಕೆಯಿಂದ ದೇಹಿಯು ಪರಿತಪಿಸುತ್ತಾನೆ. ಪುರುಷನು ತನ್ನ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿದರೆ ಲೋಕದಲ್ಲಿ ತನ್ನನ್ನು ಹಾಗು ಸಮಸ್ತ ಲೋಕವನ್ನು ತನ್ನಲ್ಲಿ ಕಾಣುತ್ತಾನೆ. ಇದೇ ಬ್ರಹ್ಮವಸ್ತುವನ್ನು ಸೇರುವ ದಾರಿ. ಬ್ರಹ್ಮವಸ್ತುವಿನಲ್ಲಿ ಸೇರಿ ಪುರುಷನು ಸದಾಕಾಲವೂ ಸರ್ವಭೂತಗಳ ಸರ್ವಾವಸ್ಥೆಗಳನ್ನು ನೋಡಲು ಸಮರ್ಥನಾಗುತ್ತಾನೆ.

ಮೋಹದಿಂದ ಉಂಟಾಗುವ ಕ್ಲೇಶವನ್ನು(ಭ್ರಮೆ) ಜ್ಞಾನದಿಂದ ತೆಗೆಯಬಹುದು. ಜ್ಞಾನವು ನಮ್ಮ ಬುದ್ಧಿಯನ್ನು ಪ್ರಕಾಶಿಸುತ್ತದೆ(ಜಾಗೃತಗೊಳಿಸುತ್ತದೆ). ಇಂದ್ರಿಯಗಳಿಂದಲೇ ಸ್ವರ್ಗನರಕಗಳೆರಡೂ ಇವೆ. ಅವುಗಳನ್ನು ನಿಗ್ರಹದಲ್ಲಿಟ್ಟುಕೊಂಡರೆ ಸ್ವರ್ಗ, ಸ್ವಚ್ಛಂದವಾಗಿ ಬಿಟ್ಟರೆ ನರಕ. ಇಂದ್ರಿಯಗಳ ಪ್ರಸಂಗದಿಂದ ದೋಷವುಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವುಗಳನ್ನು ಸಂಯಮದಲ್ಲಿಟ್ಟುಕೊಂಡರೆ ಸಿದ್ಧಿಯನ್ನು ಹೊಂದುತ್ತೇವೆ. ನಮ್ಮಲ್ಲಿರುವ ಆರು ಇಂದ್ರಿಯಗಳ (ಪಂಚೇಂದ್ರಿಯಗಳು ಮತ್ತು ಮನಸ್ಸು) ಮೇಲೆ ಅಧಿಕಾರವನ್ನು ಸಾಧಿಸುವ ಜಿತೇಂದ್ರಿಯನನ್ನು ಪಾಪಗಳು ಅಂಟುವುದಿಲ್ಲ. ಇನ್ನು ಅನರ್ಥವು ಎಲ್ಲಿಂದ?

ಶರೀರವೇ ರಥ. ಆತ್ಮವೇ ಸಾರಥಿ. ಇಂದ್ರಿಯಗಳೇ ಈ ರಥದ ಕುದುರೆಗಳು. ಕುಶಲ ಸಾರಥಿಯು ಅಪ್ರಮತ್ತನಾಗಿ ಕುದುರೆಗಳನ್ನು ನಡೆಸುತ್ತಾನೆ ಮತ್ತು ಧೀರ ರಥಿಕನಿಗೆ ಸುಖವನ್ನು ತರುತ್ತಾನೆ.

ಹಾಗೆಯೇ ಯಾರಿಗೆ ಇಂದ್ರಿಯಗಳ ಮೇಲೆ ಹತೋಟಿಯಿಲ್ಲವೋ, ಅಂಥವನ ಬುದ್ಧಿಯು ಸಮುದ್ರದಲ್ಲಿ ಗಾಳಿಗೆ ಸಿಲುಕಿದ ನಾವೆಯಂತೆ ಕಳೆದುಹೋಗುತ್ತದೆ! ಇಂದ್ರಿಯಗಳ ಫಲಗಳ ಆಸೆಯಿಂದ ಜನರು ಮೋಹಿತರಾಗುತ್ತಾರೆ. ಆದರೆ ಅವುಗಳನ್ನು ಅಧ್ಯಯನ ಮಾಡುವವನು ಧ್ಯಾನದ ಮೂಲಕ ಅವುಗಳ ಫಲವನ್ನು ಅನುಭವಿಸುತ್ತಾನೆ.”

ಕೌಶಿಕನು ನಂತರ ಸತ್ವರಜತಮಗಳನ್ನು ವಿವರಿಸಲು ಕೇಳಿಕೊಳ್ಳುತ್ತಾನೆ.

ತಮಸ್ಸು ಮೋಹಾತ್ಮಕವಾದದ್ದು. ರಜಸ್ಸು ಪ್ರವರ್ತಕ (ಕಾರ್ಯದಲ್ಲಿ ತೊಡಗಿಸುವುದು). ಸತ್ವವು ಪ್ರಕಾಶವನ್ನು ಕೊಡುವುದು ಹಾಗು ಈ ಮೂರರಲ್ಲಿ ಅತ್ಯಂತ ಶ್ರೇಷ್ಠವು.

    • ತಾಮಸಿಯ ಲಕ್ಷಣ ಅವಿದ್ಯೆ, ಮೂಢ, ಬರಿ ಕನಸುಗಾರ, ವಿಚೇತನ, ಸೋಮಾರಿ, ಸಿಟ್ಟು ಮತ್ತು ಸೊಕ್ಕಿಗೆ ಸದಾ ಸಿಲುಕುವನು.
    • ರಾಜಸನ ಲಕ್ಷಣ ಚೆನ್ನಾಗಿ ಮಾತನಾಡುವವನು, ಚಿಂತಕ (ಮಂತ್ರಿತ್ವ), ಅನುರಾಗವುಳ್ಳವನು, ಅಸೂಯೆ ಪಡದವನು, ಫಲವನ್ನು ಬಯಸಿ ಕಾರ್ಯನಿರತನಾದವನು, ಸ್ನೇಹಶೀಲನು.
    • ಸಾತ್ವಿಕನ ಲಕ್ಷಣ ಅಚಲ, ಧೀರ, ಸ್ವಾರ್ಥಫಲಾಪೇಕ್ಷೆಯಿಲ್ಲದೆ ಕಾರ್ಯ ನಿರತನಾದವನು, ಅಸೂಯೆ ಇಲ್ಲದವನು, ತಾಳ್ಮೆಯುಳ್ಳವನು, ಸಂಯಮಿ, ಜ್ಞಾನಿ (ಧೀಮಾನ್)

ಸಾತ್ವಿಕನು ಲೋಕವೃತ್ತಿಯಲ್ಲಿ ಮೊದಲು ಕಷ್ಟವನ್ನು ಅನುಭವಿಸುತ್ತಾನೆ. ತಿಳುವಳಿಕೆ ಬಂದ ಮೇಲೆ ಅವುಗಳಿಂದ ಅವನು ವಿಚಲಿತನಾಗುವುದಿಲ್ಲ. ಅಹಂಕಾರವು ಕಡಿಮೆ ಆಗುತ್ತದೆ ಮತ್ತು ನಿಷ್ಠುರತೆ (ಸತ್ಯಸಂಧತೆ) ಹೆಚ್ಚಾಗುತ್ತದೆ. ಆಗ ಗೊಂದಲಗಳು ಪರಿಹಾರವಾಗಿ ಎಲ್ಲವನ್ನು ಸರಾಗವಾಗಿ, ಸುಲಲಿತವಾಗಿ ನಿರ್ವಹಿಸುತ್ತಾನೆ. ಹೇ ಬ್ರಾಹ್ಮಣ! ಹುಟ್ಟು ಮುಖ್ಯವಲ್ಲ, ಹುಟ್ಟಿನಿಂದ ನಮ್ಮ ವರ್ಣ(ಜಾತಿ) ಸಿದ್ಧಿಯಾಗುವುಲ್ಲ! ನಮ್ಮ ಸಾಧನೆ ಮುಖ್ಯ, ಅದನ್ನು ನಾವು ವರ್ಣವೆಂದು ಗುರುತಿಸಬೇಕು!

ಆಗ ಕೌಶಿಕನು ಪಂಚಭೂತಗಳಿಂದ ಕೂಡಿದ ಶರೀರದಲ್ಲಿ ಚೈತನ್ಯವು ಹೇಗೆ ಬರುತ್ತದೆ? ಹೇಗೆ ಪ್ರಾಣವಾಯು ದೇಹದಲ್ಲಿ ಕೆಲಸ ಮಾಡುತ್ತದೆ ಎಂದು ಪ್ರಶ್ನಿಸುತ್ತಾನೆ.

ವ್ಯಾಧ: ಮೂರ್ಧನಿ (ತಲೆಯ ಮೇಲ್ಭಾಗ, ಪ್ರಜ್ಞಾಕೇಂದ್ರ) ಯಲ್ಲಿ ಆಶ್ರಿತವಾಗಿರುವ ಅಗ್ನಿಯು (ಚೈತನ್ಯವು) ಶರೀರವನ್ನು ಪಾಲಿಸುತ್ತದೆ. ಇವೆರಡರಲ್ಲೂ ಇರುವ ಪ್ರಾಣ (ಆತ್ಮ)ನು ಕ್ರಿಯೆಯನ್ನು ನಡೆಸುತ್ತಾನೆ. ಭೂತ, ವರ್ತಮಾನ ಹಾಗು ಭವಿಷ್ಯಗಳೆಲ್ಲ ಈ ಆತ್ಮವು ಪ್ರತಿಷ್ಠಿತವಾಗಿರುತ್ತದೆ. ಇದೇ ಜೀವಿಗಳಿಗೆ ಶ್ರೇಷ್ಠವಾದುದು; ಬ್ರಹ್ಮಜ್ಯೋತಿಯೆಂದು ಉಪಾಸನೆಗೊಳ್ಳುವುದು. ಇದೇ ಎಲ್ಲ ಜಂತುಗಳ ಜೀವಾತ್ಮ ಮತ್ತು ಸನಾತನ ಪುರುಷ. ಇದುವೇ ಜೀವಿಗಳ ಮನಸ್ಸು, ಬುದ್ಧಿ, ಅಹಂಕಾರ ಮತ್ತು ಎಲ್ಲ ವಿಷಯಗಳ ಸ್ಥಾನ.

ಆತ್ಮನು ದೇಹದಲ್ಲಿ ಸೂಕ್ಷ್ಮವಾದ ಪ್ರಾಣವಾಯುವಿನಿಂದ ಪೋಷಿಸಲ್ಪಡುತ್ತಾನೆ. ಪ್ರಾಣ, ಅಪಾನ, ವ್ಯಾನ, ಉದಾನ ಹಾಗೂ ಸಮಾನ ಈ ಐದು ವಾಯುಗಳು ನಮ್ಮ ದೇಹದಲ್ಲಿವೆ. ಪ್ರಾಣವಾಯುವು ಬೇರೆ ಬೇರೆ ಜೀವಿಗಳಲ್ಲಿ ಬೇರೆ ಗತಿಯಲ್ಲಿ ಸಮಾನವಾಯುವಾಗಿ ಮುಂದುವರೆಯುತ್ತದೆ. ಹೊಟ್ಟೆಯಲ್ಲಿ ಅಗ್ನಿಯ ಜೊತೆ ಇದು (ವೈಶ್ವಾನರ) ಪಚನಕಾರ್ಯದಲ್ಲಿ ನೆರವಾಗುತ್ತದೆ. ನಂತರ ಅಪಾನವಾಯುವಾಗಿ ಪರಿವರ್ತನೆಗೊಂಡು ಮಲಮೂತ್ರಗಳನ್ನು ಕೊಂಡೊಯ್ಯುತ್ತದೆ. ಹೀಗೆಯೇ ಕೆಲಸ, ಬಲ, ಪ್ರಯತ್ನ ಈ ಮೂರರಲ್ಲಿಯೂ ಇರುವುದು ಉದಾನವಾಯು. ಕಡೆಯದಾಗಿ ಶರೀರದ ಎಲ್ಲ ಕೀಲುಸಂಧಿಗಳಲ್ಲಿ ಇರುವ ಅನಿಲವೇ ವ್ಯಾನ‘.”

ಅನಂತರ ವ್ಯಾಧನು ಈ ವಾಯುಗಳ ಸಂಚಾರ, ಪರಸ್ಪರ ಸಮನ್ವಯ ಹಾಗೆಯೇ ಒಳಗಿರುವ ಅಗ್ನಿಯು ಜೊತೆಗೂಡಿ ನಮ್ಮ ಆಹಾರವನ್ನು, ಧಾತುಗಳನ್ನು ಮತ್ತು ದೋಷಗಳನ್ನು ಪರಿವರ್ತಿಸುವ ಸಂಪೂರ್ಣ ಮಾರ್ಗವನ್ನು ವಿವರಿಸುತ್ತಾನೆ. ಹಾಗೆಯೇ ಹೃದಯದಿಂದ ಹೊರಟ ಅಪಧಮನಿಗಳು ಮೇಲ್ಮುಖವಾಗಿ, ಕೆಳಕ್ಕೆ, ಮತ್ತು ಅಡ್ಡವಾಗಿ ಹರಿದು ಅನ್ನರಸಗಳನ್ನು ಹತ್ತು ಪ್ರಾಣ(ವಾಯು)ಗಳಿಂದ ಪ್ರಚೋದಿತವಾಗಿ ಕೊಂಡೊಯ್ಯುತ್ತವೆ. [ಹತ್ತು ವಾಯುಗಳು ಮೇಲೆ ಹೇಳಿದ ಐದು ವಾಯುಗಳು, ಮತ್ತು ನಾಗ, ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯ ಎಂಬ ಐದು ಉಪವಾಯುಗಳು].

ಈ ಪಥದಲ್ಲಿ ಇದ್ದುಕೊಂಡು ಮೂರ್ಧನಿಯಲ್ಲಿರುವ ಆತ್ಮದಿಂದ, ದುಃಖಗಳನ್ನು ಜಯಿಸಿದ, ಎಲ್ಲವನ್ನೂ ಸಮನಾಗಿ ಕಾಣುವ ಧೀರ ಯೋಗಿಗಳು ಆ ಬ್ರಹ್ಮವಸ್ತುವನ್ನು (ತತ್ಪರಂ) ಸೇರುತ್ತಾರೆ.

ನಿತ್ಯವೂ, ಶುದ್ದವು ಆದ ಆತ್ಮವು ದೇಹದಲ್ಲಿ ಹನ್ನೊಂದು (ಪ್ರಾಣ, ಇಂದ್ರಿಯ ಮೊದಲಾದ) ಪ್ರಾಣಿವಿಕಾರಗಳನ್ನು ಹೊಂದಿ, ಹದಿನಾರು ಕಲೆಗಳಿಂದ (ಪ್ರಾಣ, ಶ್ರದ್ಧೆ, ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ, ಇಂದ್ರಿಯ, ಮನಸ್ಸು, ಅನ್ನ, ವೀರ್ಯ, ತಪಸ್ಸು, ಮಂತ್ರ, ಕರ್ಮ, ಲೋಕ ಮತ್ತು ನಾಮ) ಕೂಡಿ ಇರುತ್ತಾನೆ.

ಪಾತ್ರೆಯಲ್ಲಿ ಇಡಲ್ಪಟ್ಟ ಅಗ್ನಿಯಂತೆ ಈ ಶರೀರಮಧ್ಯದಲ್ಲಿ ಜೀವವೆಂಬ ಅಗ್ನಿಯು ಉರಿಯುತ್ತಿರುತ್ತದೆ. ಯೋಗಜಿತಾತ್ಮಕನಾದ ಅವನನ್ನೇ ನಿತ್ಯಆತ್ಮನೆಂದು ತಿಳಿ. ಅವನು ತಾವರೆ ಮೇಲಿರುವ ನೀರಿನ ಬಿಂದುವಂತೆ (ಗೀತೆಯಲ್ಲಿ ಪದ್ಮಪತ್ರಮಿವಾಂಭಸ) ಎಂದು ತಿಳಿ. ಅವನೇ ತ್ಯಾಗಜಿತಾತ್ಮಕನಾದ ಆ ನಿತ್ಯಕ್ಷೇತ್ರಜ್ಞನೆಂದು ತಿಳಿ. ರಜ, ಸತ್ವ ಮತ್ತು ತಮಗಳಿಗೂ ಇವನು ಜೀವಾತ್ಮಕನೆಂದು ತಿಳಿ. ಜೀವವು ಆತ್ಮಗುಣವೆಂದೂ ಆತ್ಮವು ಪರಾತ್ಮಕವೆಂದೂ ತಿಳಿ.

ಆತ್ಮವು ಸಚೇತನವು. ಅದು ಎಲ್ಲವನ್ನು ಕ್ರಿಯೆಗೆ ಒಳಪಡಿಸುತ್ತದೆ ಮತ್ತು ತಾನು ಕ್ರಿಯೆಗೆ ಒಳಪಡುತ್ತದೆ. ಆದ್ದರಿಂದಲೇ ಸಪ್ತಲೋಕಗಳನ್ನು ಕ್ರಿಯೆಯಲ್ಲಿ ತೊಡಗಿಸುವ ಇದನ್ನು ಜ್ಞಾನಿಗಳು ಪರಂಎಂದಿರುವುದು. ಎಲ್ಲ ಜೀವಿಗಳಲ್ಲೂ ಆತ್ಮನು ಪ್ರಕಾಶಿಸುತ್ತಾನೆ. ಆದರೆ ಜ್ಞಾನವೇದಿಗಳು ಮಾತ್ರ ಸೂಕ್ಷ್ಮಬುದ್ಧಿಯಿಂದ ಅವನನ್ನು ಕಾಣಲು ಸಮರ್ಥರಾಗುತ್ತಾರೆ.

ಚಿತ್ತಸ್ಯ ಹಿ ಪ್ರಸಾದೇನ ಹಂತಿ ಕರ್ಮ ಶುಭಾಶುಭಂ।
ಪ್ರಸನ್ನಾತ್ಮಾತ್ಮನಿ ಸ್ಥಿತ್ವಾ ಸುಖಮಾನಂತ್ಯಮಶ್ನುತೇ ॥

ಪರಿಶುದ್ಧವಾದ ಚಿತ್ತ (ಆತ್ಮ) ದಿಂದ ಶುಭಅಶುಭ ಕರ್ಮಗಳು ನಾಶವಾಗುತ್ತವೆ. ಪರಿಶುದ್ಧವಾದ ಆತ್ಮವನ್ನು ಹೊಂದಿದವನು ಅನಂತ ಆನಂದವನ್ನು ಪಡೆಯುತ್ತಾನೆ. ನಾವು ಪ್ರಶಾಂತವಾಗಿ ನೆಮ್ಮದಿಯಿಂದ ನಿದ್ರಿಸುವಾಗ ಈ ಆನಂದ ನಮ್ಮಲ್ಲಿರುತ್ತದೆ. ದೀಪವು ಬತ್ತಿಯ ಕರಿಯನ್ನು ಉದುರಿಸಿ ಪ್ರಶಾಂತವಾಗಿ ಬೆಳಗುವುದು ಹೀಗೆಯೇ.

[ಚಿತ್ತ ಸಮಸ್ತ ಜಗತ್ತನ್ನು ಆವರಿಸಿರುವ ಒಂದು ಭಾಗ ನಮ್ಮಲ್ಲಿರುವುದು; ಆತ್ಮ. ಇದು ಮೈತ್ರೇಯ ಉಪನಿಷತ್ತಿನಲ್ಲಿ ಸಹ ಬರುವ (. ೧೦) ಒಂದು ಸೂಕ್ತಿ. ]

ಪ್ರಾತಃಸಾಯಂ ಸತತವಾಗಿ ಮನಸ್ಸನ್ನು ಯೋಗದಲ್ಲಿ ತೊಡಗಿಸಿ, ಮಿತಆಹಾರಿಯಾಗಿ ಪರಿಶುದ್ಧನಾದವನು ಆತ್ಮವನ್ನು ಕಂಡುಕೊಳ್ಳುತ್ತಾನೆ ಹಾಗು ಮುಕ್ತಿಯನ್ನು ಹೊಂದುತ್ತಾನೆ. ಎಲ್ಲ ಉಪಾಯಗಳಿಂದಲೂ ಲೋಭ ಕ್ರೋಧಗಳನ್ನು ನಿಗ್ರಹಿಸಬೇಕು. ಅದೇ ಮುಕ್ತಿಗೆ ದಾರಿ, ಶ್ರೇಷ್ಠ ತಪಸ್ಸು. ನಿತ್ಯವೂ ತಪಸ್ಸನ್ನು ಕ್ರೋಧದಿಂದ, ಸಂಪತ್ತನ್ನು ಮತ್ಸರದಿಂದ, ವಿದ್ಯೆಯನ್ನು ಮಾನಾಪಮಾನದಿಂದ ಮತ್ತು ಆತ್ಮವನ್ನು ಭ್ರಮೆಯಿಂದ ರಕ್ಷಿಸಿಕೊಳ್ಳಬೇಕು.

ಆನೃಶಂಸ್ಯಂ ಪರೋ ಧರ್ಮಃ ಕ್ಷಮಾ ಚ ಪರಮಂ ಬಲಂ
ಆತ್ಮಜ್ಞಾನಂ ಪರಂ ಜ್ಞಾನಂ ಪರಂ ಸತ್ಯವ್ರತಂ ವ್ರತಂ

ಸುಳ್ಳು ಹೇಳದೆ ಇರುವುದು ಪರಮ ಧರ್ಮ. ಕ್ಷಮೆಯೇ ಪರಮ ಬಲ. ಆತ್ಮಜ್ಞಾನವು ಪರಮಜ್ಞಾನ ಮತ್ತು ಸತ್ಯನಡತೆಯು ಪರಮವ್ರತ.

ಯಾರ ಎಲ್ಲ ಕಾರ್ಯಗಳೂ ಸದಾ ಆಸೆಗಳ ಬಂಧನಗಳಿಲ್ಲದೆ (ಫಲಾಪೇಕ್ಷೆ ಇಲ್ಲದೆ) ಇರುತ್ತವೆಯೋ ಮತ್ತು ಎಲ್ಲವನ್ನು ಯಾರು ತ್ಯಾಗದಿಂದ ತೊರೆದಿದ್ದಾನೋ, ಅವನೇ ನಿಜವಾದ ಸನ್ಯಾಸಿ ಮತ್ತು ಬುದ್ಧಿವಂತ. ಗುರುವೂ ಸಹ ನಮಗೆ ಬ್ರಹ್ಮಸಂಧಾನವನ್ನು ಕೊಡಲಾರ. ಕೇವಲ ಮಾರ್ಗವನ್ನು ತೋರಿಸಬಹುದು ಅಷ್ಟೇ. ಏಕೆಂದರೆ ಅದು ಸ್ವಾನುಭವ ವೇದ್ಯ. ಸಂಸಾರದಿಂದ ಮುಕ್ತಗೊಳಿಸುವ ಆ ಪರಬ್ರಹ್ಮವನ್ನು ನಾವೇ ಸಾಕ್ಷಾತ್ಕಾರಗೊಳಿಸಿಕೊಳ್ಳಬೇಕು.

ಒಟ್ಟಿನಲ್ಲಿ ಬ್ರಹ್ಮಜ್ಞಾನಿಯ ಲಕ್ಷಣಗಳು:

    • ಸಕಲಭೂತಗಳಲ್ಲಿ ಹಿಂಸೆಯನ್ನು ಮಾಡಬಾರದು; ಎಲ್ಲದರೊಡನೆ ಮಿತ್ರತ್ವದಿಂದ ನಡೆದುಕೊಳ್ಳಬೇಕು. ಈ ಜೀವಿತದಲ್ಲಿ ಯಾರೊಂದಿಗೂ ವೈರತ್ವವನ್ನು ಸಾಧಿಸಬಾರದು.
    • ತನ್ನ ಸರ್ವವನ್ನು ತ್ಯಾಗ ಮಾಡುವುದು, ಸಂತೋಷವಾಗಿರುವುದು, ಆಸೆಗಳನ್ನಿಟ್ಟುಕೊಳ್ಳದೇ ಇರುವುದು, ಚಪಲನಾಗದೇ ಇರುವುದು ಇವುಗಳಿಂದಲೇ ಪರಮಜ್ಞಾನವನ್ನು ಪಡೆಯಬಹುದು.
    • ಸಕಲವನ್ನೂ ತ್ಯಜಿಸಿ, ಬುದ್ಧಿ ಪೂರ್ವಕವಾಗಿ ತನ್ನ ಧರ್ಮವನ್ನು ಪಾಲಿಸಿದಲ್ಲಿ ಇಹ ಮತ್ತು ಪರದಲ್ಲಿ ಶೋಕವಿಲ್ಲದ ನಿಶ್ಚಲ ಸ್ಥಾನವನ್ನು ಪಡೆಯಬಹುದು.

ಎಲೈ ಬ್ರಾಹ್ಮಣ! ಇಂತಹ ನಡತೆಯೇ ಆನಂದಕ್ಕಿರುವ ಒಂದೇ ದಾರಿಯೆಂದು ಹೇಳುತ್ತಾರೆ. ಯಾರು ಸುಖದುಃಖಗಳನ್ನು ತೊರೆದು ಬಂಧಮುಕ್ತನಾಗಿರುತ್ತಾನೋ ಅವನು ಪರಬ್ರಹ್ಮವನ್ನು ಪಡೆಯುತ್ತಾನೆ.

ನಿನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿರುವೆ. ಮತ್ತಿನ್ನೇನಾದರು ಇದ್ದರೆ ಕೇಳು!”

ಕೌಶಿಕ – “ನನಗೆ ನಿನ್ನ ಉತ್ತರಗಳಿಂದ ಅತ್ಯಂತ ಸಂತಸವಾಗಿದೆ. ಧರ್ಮದ ವಿಷಯದಲ್ಲಿ ನಿನಗೆ ತಿಳಿದಿಲ್ಲದ ವಿಷಯವು ಯಾವುದು ಇಲ್ಲ ಅನ್ನಿಸುತ್ತದೆ!”

ವ್ಯಾಧ – “ಅಹುದು. ಇದನ್ನು ನಾನು ತಪಸ್ಸಿನಿಂದ ತಿಳಿದಿದ್ದೇನೆ. ಅಂದ ಹಾಗೆ ಈ ತಪಸ್ಸಿಗೆ ನಾನು ಕಾಡಿಗೆ ಹೋಗಲಿಲ್ಲ. ಸನ್ಯಾಸವನ್ನು ಸ್ವೀಕರಿಸಲಿಲ್ಲ. ನನ್ನ ತಪಸ್ಸೇನೆಂದು ನೀನೇ ಪ್ರತ್ಯಕ್ಷವಾಗಿ ನೋಡು! ಭಗವನ್! ಏಳು. ಮನೆಯ ಒಳಗೆ ಬಾ. ನನ್ನ ತಂದೆತಾಯಿಯರನ್ನು ನೀನು ನೋಡಬೇಕು. ಅವರೇ ನನ್ನ ಪರಮ ದೇವತೆಗಳು. ಅವರ ಶುಶ್ರೂಷೆಯೇ ನನ್ನ ತಪಸ್ಸು.”

ಹೀಗೆಂದು ವ್ಯಾಧನು ಕೌಶಿಕನನ್ನು ತನ್ನ ತಂದೆತಾಯಿಯರ ಬಳಿ ಕರೆದುಕೊಂಡು ಹೋದನು. ಹಿರಿಯರ ಪಾದಗಳಲ್ಲಿ ತನ್ನ ಶಿರವಿಟ್ಟು ನಮಸ್ಕರಿಸಿದನು. ವೃದ್ಧರು ಅವನಿಗೆ – “ಧರ್ಮಜ್ಞ! ಮೇಲೇಳು! ಧರ್ಮವು ನಿನ್ನನು ರಕ್ಷಿಸಲಿ. ನಿನ್ನ ನಿರಂತರವಾದ ಕಾಯಾವಾಚಾಮನಸಾ ಸೇವೆಯಿಂದ ನಾವು ಸುಪೂಜಿತರಾಗಿದ್ದೇವೆ. ಧೀರ್ಘಾಯುಷಿಯಾಗುಎಂದು ಆಶೀರ್ವದಿಸಿದರು.

ವ್ಯಾಧನು ಹಿರಿಯರಿಗೆ ಕೌಶಿಕನನ್ನು ಪರಿಚಯಿಸಿದನು. ಕೌಶಿಕನು ಅವರಿಗೆ ವಂದಿಸಲಾಗಿ ಅವರು ಅವನ ಯೋಗಕ್ಷೇಮವನ್ನು ವಿಚಾರಿಸಿದರು.

ವ್ಯಾಧ – “ಬ್ರಹ್ಮನ್! ಈ ತಂದೆತಾಯಿಯರೇ ನನ್ನ ಸರ್ವಸ್ವವೂ. ಅವರೇ ನನಗೆ ಯಜ್ಞ ಹಾಗು ವೇದಗಳು. ನಾನು, ನನ್ನ ಪತ್ನಿ ಮತ್ತು ಮಕ್ಕಳೂ ಸೇರಿ ನಿತ್ಯವೂ ಇವರ ಶುಶ್ರೂಷೆ ಮಾಡುತ್ತೇವೆ. ನಾವು ಅವರಿಗೆ ಸಂತೋಷಕರವಾದ ವಿಷಯಗಳಿಂದ ಮಾತನಾಡಿಸುತ್ತೇವೆ; ಅಹಿತಕರ ಮಾತುಕತೆ ಹಾಗು ವಿವಾದವಿಲ್ಲ. ಅವರ ಸಂತೋಷಕ್ಕೆ ಅಧರ್ಮವಾದರೂ ಮಾಡುತ್ತೇನೆ!

ಪುರುಷರಿಗೆ ಐದು ಗುರುಗಳಿದ್ದಾರೆಂದು ಹೇಳುತ್ತಾರೆ ತಂದೆ, ತಾಯಿ, ಅಗ್ನಿ, ಆತ್ಮ ಮತ್ತು ಗುರು. ಒಳ್ಳೆಯದನ್ನು ಬಯಸುವವರು ಇವರೊಂದಿಗೆ ಸರಿಯಾಗಿ ನಡೆದುಕೊಳ್ಳಬೇಕು. ಅವರನ್ನು ಸರಿಯಾಗಿ ಪೂಜಿಸುವುದು ಗಾರ್ಹಪತ್ಯ ಅಗ್ನಿಯನ್ನು ಕಾದಿರಿಸಿಕೊಂಡ ಹಾಗೆ. ಇದು ಸನಾತನ ಧರ್ಮ.

ಈ ತಪಸ್ಸಿನಿಂದಲೇ ನಾನು ದಿವ್ಯದೃಷ್ಟಿ ಪಡೆದದ್ದು. ಅದೇ ದಿವ್ಯದೃಷ್ಟಿಯನ್ನು ಪಡೆದ ಕಾರಣದಿಂದ ಆ ಪತಿವ್ರತೆಯು ನಿನಗೆ ನನ್ನ ಬಗ್ಗೆ ಹೇಳಿದ್ದು! ಇದರಲ್ಲಿ ಸಂಶಯಿಲ್ಲ. ಹೇ ಬ್ರಾಹ್ಮಣ ಕುಮಾರ! ನಿನ್ನನ್ನು ಅನುಗ್ರಹಿಸಲೆಂದೇ ನಾನು ನಿನಗೆ ಇವೆಲ್ಲವನ್ನೂ ಹೇಳಿದೆ. ಈಗ ಕೇಳು. ನಿನಗೆ ಹಿತವಾದದ್ದು ಯಾವುದು ಎಂದು ತಿಳಿಸುವೆ.

ನೀನು ನಿನ್ನ ತಂದೆತಾಯಿಯರ ಜೊತೆ ಸರಿಯಾಗಿ ನಡೆದುಕೊಂಡಿಲ್ಲ. ಅವರನ್ನು ಉಪೇಕ್ಷಿರುವೆ! ಅವರಿಗೆ ಹೇಳದೆ, ಅವರ ಅನುಮತಿ ಪಡೆಯದೇ ನಿರ್ಲಕ್ಷ್ಯದಿಂದ ನೀನು ವೇದಾಭ್ಯಾಸಕ್ಕೆಂದು ಮನೆಗೆ ಹೊರಗೆ ಹೋದೆ. ನಿನ್ನ ಶೋಕದಿಂದ ನೊಂದ ಆ ತಪಸ್ವಿಗಳು ಅವರು ಕಣ್ಣುಗಳನ್ನು ಕಳೆದುಕೊಂಡು ಕುರುಡರಾಗಿದ್ದಾರೆ!

ಅವರನ್ನು ಸಂತೈಸಲು ಬೇಗ ಹೋಗು! ನೀನು ತಪಸ್ವಿ, ಮಹಾತ್ಮ ಹಾಗು ಸದಾ ಧರ್ಮನಿರತ. ಆದರೆ ನೀನು ಸ್ವಧರ್ಮವನ್ನು ತ್ಯಜಿಸಿದ ಕಾರಣ ಇವೆಲ್ಲವೂ ನಿನಗೆ ನಿರರ್ಥಕವಾಗಿವೆ! ಆದ್ದರಿಂದ ಬೇಗನೆ ಹೋಗಿ ನಿನ್ನ ಮಾತಾಪಿತೃಗಳ ಪೂಜೆಯನ್ನು ಮಾಡು. ಅದೇ ನಿನಗೆ ಪರಮಧರ್ಮ.”

ಈ ಶ್ರೇಯಸ್ಕರ ನುಡಿಗಳಿಂದ ಅತ್ಯಂತ ತೃಪ್ತನಾದ ಬ್ರಾಹ್ಮಣನು ತನ್ನ ಸ್ವಧರ್ಮವನ್ನು ತಿಳಿಸಿಕೊಟ್ಟ ವ್ಯಾಧನನ್ನು ನಮಸ್ಕರಿಸಿದನು. ಅವನ ಅಪ್ಪಣೆ ಪಡೆದು ತನ್ನ ತಂದೆತಾಯಿಯರನ್ನು ಸೇರಿ ಅವರ ಶುಶ್ರೂಷೆಯಲ್ಲಿ ತೊಡಗಿದನು.

ಟಿಪ್ಪಣಿ

ಈ ಲೇಖನ ಬರೆಯಲು ಉಪಯೋಗಿಸಿಕೊಂಡ ಪುಸ್ತಕಗಳು/ಉಪನ್ಯಾಸಗಳು
. ಭಂಡಾರ್ಕರ್ ಓರಿಯೆಂಟಲ್ ಸಂಶೋಧನಾ ಸಂಸ್ಥೆಯ ಪರಿಷ್ಕೃತ ವ್ಯಾಸಭಾರತ ಇದನ್ನು ನಾನು ಹೆಚ್ಚಾಗಿ vyasaonline.com ಮೂಲಕ ಕನ್ನಡಲಿಪಿಯಲ್ಲಿ ಓದಿದ್ದು. (ಶ್ರೀಯುತ ಬಿ.ಎಂ. ರಮೇಶ್ ಅವರ ಈ ಅಂತರ್ಜಾಲ ಮುದ್ರಣ, ಅನುವಾದ ತುಂಬಾ ಸಹಕಾರಿಯಾದದ್ದು.)
ಅಲ್ಲಲ್ಲಿ ಪರಿಶೀಲನೆಗೆ ಸಂಸ್ಕೃತಪಾಠವನ್ನು https://sanskritdocuments.org/mirrors/mahabharata/mahabharata-bori.html ಜಾಲತಾಣದಲ್ಲಿ ಉಪಯೋಗಿಸಿಕೊಂಡಿರುವೆ.
. ಶ್ರೀ ಎ. ಆರ್. ಕೃಷ್ಣಶಾಸ್ತ್ರಿಗಳ ವಚನಭಾರತ ಗ್ರಂಥ. ವ್ಯಾಸಭಾರತದ ಸೊಗಸಾದ ಕನ್ನಡ ಅನುವಾದ.
. ಬೆಂಗಳೂರಿನ ಗೋಖಲೆ ಸಂಸ್ಥೆ (GIPA) ಯಲ್ಲಿ ಡಾ. ರಾ. ಗಣೇಶ್ ನಡೆಸಿಕೊಟ್ಟ ಪ್ರೇರಣಾದಾಯಕವಾದ ಭಗವಾನ್ ಶ್ರೀ ವೇದವ್ಯಾಸ ಮಹರ್ಷಿಗಳ ಮಹಾಭಾರತ ವಿಹಾರಉಪನ್ಯಾಸ ಮಾಲೆ.

(ಮೊದಲ ಲೇಖನವನ್ನು ಇಲ್ಲಿ ಓದಬಹುದು.)

(Image credit: menmystiquesnmysticism.wordpress.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply