close logo

ಕವಿಕುಲಗುರು ಕಾಳಿದಾಸ: ಭಾರತದ ರಾಷ್ಟ್ರೀಯ ಕವಿ – ಭಾಗ ೧

ಭಾರತ ದೇಶ ವಿಶಿಷ್ಟವಾದ ಮತ್ತು ರೋಮಾಂಚಕವಾದ ನಾಗರಿಕತೆಗೆ ನೆಲೆಯಾಗಿದೆ. ಕಾಲಪುರುಷನ ವಿಪರೀತದೃಷ್ಟಿಯನ್ನು ಮೀರಿನಿಂತ ಏಕೈಕ ಪ್ರಾಚೀನ ಸಾಂಸ್ಕೃತಿಕನಾಗರಿಕತೆಯಾಗಿರುವುದು ಭರತವರ್ಷದ ವಿಶೇಷ. ಪ್ರಾಚೀನ ಈಜಿಪ್ಟ್, ಮೆಸೊಪೊಟೋಮಿಯಾ ಮತ್ತು ಅಸ್ಸಿರಿಯಾದ ಸಂಸ್ಕೃತಿಗಳು ಇಂದು ಕೇವಲ ಅಧ್ಯಯನದ ಆಸಕ್ತಿಯನ್ನು ಉಳಿಸಿಕೊಂಡಿವೆ, ಜೀವಂತವಾದ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ. ಅಷ್ಟು ಪ್ರಾಚೀನವಲ್ಲದ ಗ್ರೀಕ್ ನಾಗರಿಕತೆ ಸಹ ತನ್ನ ತಾಯ್ನಾಡಿನಿಂದ ಸಂಪೂರ್ಣವಾಗಿ ಅಳಿಸಿಹೋಗಿದೆ. ಇಷ್ಟಾದರೂ, ಸಿಂಧೂಸರಸ್ವತಿ ಕಣಿವೆಯಲ್ಲಿ ಮೂಲವನ್ನು ಹೊಂದಿರುವ ಭಾರತದ ವೈದಿಕ ನಾಗರಿಕತೆಯು ಜೀವಂತವಾಗಿರುವುದು ಮಾತ್ರವಲ್ಲದೆ ತನ್ನದೇ ಹರಿವಿನಲ್ಲಿ ಸಾಗಿದೆ. ವೈದಿಕ ಸಂಸ್ಕೃತಿ ಮತ್ತು ನಾಗರಿಕತೆಯ ಕೆಲವು ಮೂಲಭೂತ ಅಂಶಗಳು ಜನಜೀವನದಲ್ಲಿ ವಿವಿಧರೀತಿಯಲ್ಲಿ ಸಮ್ಮಿಳಿತವಾಗಿರುವುದೇ ಇದಕ್ಕೆ ಕಾರಣ. ಸಾಮಾಜಿಕ ಜೀವನದ ಚಿಹ್ನೆಗಳು, ಉತ್ಸವಗಳು ಮತ್ತು ಕಲಾ ಪ್ರಕಾರಗಳಲ್ಲಿ ವೈದಿಕ ಸಂಸ್ಕೃತಿನಾಗರಿಕತೆಗಳ ಅಭಿವ್ಯಕ್ತಿಯಾಗಿದೆ. ತನ್ಮೂಲಕ ಸಂಸ್ಕೃತಿ ಪ್ರಸಾರ ಸಂಭವಿಸಿದೆ. ಮಹಾಕವಿ ಕಾಳಿದಾಸನಾದರೋ ಈ ಸಾಂಸ್ಕೃತಿಕ ಪರಾಗಸ್ಪರ್ಶದ ಅತ್ಯಂತ ಮಹತ್ವಪೂರ್ಣ ಮತ್ತು ಅಧಿಕೃತ ಎನ್ನಬಹುದಾದ ಪ್ರತಿನಿಧಿಯಾಗಿದ್ದಾನೆ.

ಕನಿಷ್ಠ 1600 ವರ್ಷಗಳಿಂದ ಭಾರತೀಯ ಸಂಸ್ಕೃತಿಯು ಕಾಳಿದಾಸನನ್ನು ’ಕವಿಕುಲಗುರು’ ಎಂದು ಹೃತ್ಪೂರ್ವಕವಾಗಿ ಕರೆದಿದೆ. ಪರಂಪರೆಯ ಯಾವುದೇ ಮಹಾಕವಿ, ವ್ಯಾಖ್ಯಾನಕಾರ, ಆಧುನಿಕ ವಿಮರ್ಶಕನಾಗಲಿ ಕಾಳಿದಾಸನ ಕಾವ್ಯಕ್ಕೆ ಗೌರವ ಸಲ್ಲಿಸುವುದು ಅತ್ಯಾವಶ್ಯವೆಂದು ಭಾವಿಸಿದ್ದಾನೆ(ಳೆ). ಉದಾಹರಣೆಗಳಂತೆ, ಈ ಕೆಲವು ಉಲ್ಲೇಖಗಳನ್ನು ಪರಿಶೀಲಿಸಬಹುದು.

ಸಂಸ್ಕೃತಗದ್ಯದ ಶ್ರೇಷ್ಠ ಪ್ರತಿನಿಧಿಯಾದ, ಬಹುಶಃ ಕಾಳಿದಾಸನಿಗೆ ನಂತರದ ಗೌರವ ಸಂಪಾದಿಸಿರುವ ಬಾಣಭಟ್ಟ (7ನೇ ಶತಮಾನ) – ಹೀಗೆ ಹೇಳುತ್ತಾನೆ.

ನಿಗರ್ತಾಸು ನ ವಾ ಕಸ್ಯ ಕಾಲಿದಾಸೇಷು ಸೂತ್ತ್ರಿಷು
ಪ್ರೀತಿರ್ಮಧುರಸಾಂದ್ರಾಸು ಮಂಜರೀಷ್ವಿವ ಜಾಯತೆ

ಮಕರಂದಭರಿತವಾದ ಹೂವುಎಲೆಗಳಿಂದ ಆವೃತವಾದಾಗ ಉಲ್ಲಾಸವಾಗುವಂತೆ ಕಾಳಿದಾಸನ ಅಭಿವ್ಯಕ್ತಿಯಿಂದ ಸಂತೋಷಪಡದವರಿದ್ದಾರೆಯೇ? “

ವಿಜಯನಗರ ಸಾಮ್ರಾಜ್ಯದ ಮೊದಲ ರಾಜರಲ್ಲಿ ಒಬ್ಬನಾದ ಬುಕರಾಯನ ಸೊಸೆ ಗಂಗಾದೇವಿ (14ನೇ ಶತಮಾನ) ಹೀಗೆ ಹೇಳುತ್ತಾಳೆ.

ದಾಸತಾಂ ಕಾಲಿದಾಸಸ್ಯ ಕವಯಃ ಕೇನ ಬಿಭ್ರತಿ |
ಇದಾನೀಮಪಿ ತಸ್ಯಾರ್ಥಾನುಪಜೀವ್ಯಂತ್ಯಮೀ ಯತಃ ||

ಕಾಳಿದಾಸನಿಗೆ ಋಣಿಯಾಗದ ಕವಿಗಳು ಇದ್ದಾರೆ ಎಂದರೆ ಆಶ್ಚರ್ಯದ ಮಾತೇ ಸರಿ. ಇಂದಿಗೂ ಕವಿಗಳು ಕಾಳಿದಾಸನ ಪರಿಕಲ್ಪನೆಗಳ ಮೇಲೆಯೇ ಜೀವನ ನಡೆಸುತ್ತಾರೆ.”

ಕಾಳಿದಾಸನ ಕಾಲದಿಂದಲೂ ಅವನೇರಿದ ಎತ್ತರಕ್ಕೇರಲು ಅನೇಕರು ತಲುಪಲು ಪ್ರಯತ್ನಿಸಿದ್ದಾರೆ ಮತ್ತು ವಿಫಲರಾಗಿದ್ದಾರೆ. ಕಾಳಿದಾಸನಾದರೋ ನಿಯಮಿತವಾಗಿ, ಸುಲಲಿತವಾಗಿ ಅದೇ ಎತ್ತರವನ್ನು ಪದೇ ಪದೇ ಏರುತ್ತಾನೆ. ಈ ಅಂಶವನ್ನು ಭಾರತೀಯ ಸಂಸ್ಕೃತಿಯ ಇನ್ನೊಬ್ಬ ಶ್ರೇಷ್ಠ ಪ್ರತಿನಿಧಿ ಮತ್ತು ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಸ್ತಂಭಗಳಲ್ಲಿ ಒಬ್ಬರಾದ ಸಾಯಣಾಚಾರ್ಯ (ವಿದ್ಯಾರಣ್ಯ ಮಹರ್ಷಿಗಳ ಕಿರಿಯ ಸಹೋದರ) ಹೀಗೆ ಹೇಳಿದ್ದಾರೆ.

ಪದವೀಂ ಕಾಲಿದಾಸಸ್ಯ ಲಲಿತಾಂ ಮೃದುಲೈಃ ಪದೈಃ |
ನ ಶಕ್ಯವನ್ತ್ಯಹೋ ಗಂತುಂ ಪಶ್ಯನ್ತೋಪಿ ಕವೀಶ್ವರಾಃ ||

ಸುಮಧುರ ಸ್ಪಷ್ಟವಾದ ಅಭಿವ್ಯಕ್ತಿಯಿಂದ ಕೂಡಿದ ಕಾಳಿದಾಸನ ಹಾದಿ ಎಲ್ಲರಿಗೂ ಕಾಣುವಂತಿದೆ. ಅಯ್ಯೋ! ಆದರೇನು! ಇಷ್ಟು ಸ್ಪಷ್ಟವಾಗಿ ಕಾಣುವಂತಹ ಮಾರ್ಗವಾದರೂ ಇನ್ನಿತರ ಕವಿಗಳು ಅದರ ಮಾರ್ಗದರ್ಶನದಲ್ಲಿ ನಡೆಯಲು ಅಸಮರ್ಥರಾಗಿದ್ದಾರೆಯೇ!”

ಕಾಳಿದಾಸನ ರಘುವಂಶ, ಕುಮಾರಸಂಭವ ಮತ್ತು ಮೇಘದೂತ ಕಾವ್ಯಗಳ ಮೇಲೆ ಬಹುಶಃ ಅತ್ಯಂತ ಮಹತ್ವಪೂರ್ಣವಾದ ಮತ್ತು ವಿವರವಾದ ವ್ಯಾಖ್ಯಾನ ಬರೆದಿರುವ ಮಲ್ಲಿನಾಥ ಸೂರಿ ಹೇಳಿರುವ ಮಾತುಗಳು ಹೀಗಿವೆ.

ಕಾಲಿದಾಸಗಿರಾಂ ಸಾರಂ ಕಾಲಿದಾಸಃ ಸರಸ್ವತೀ |
ಚತುರ್ಮುಖೋತವಾ ಸಾಕ್ಷಾದ್ವಿದುರ್ನಾನ್ಯೇ ತು ಮಾದೃಶಾಃ ||

ಕಾಳಿದಾಸನ ಕಾವ್ಯದ ಹಿರಿಮೆ ಮತ್ತು ಆಳಗಳನ್ನು ಸ್ವತಃ ಕಾಳಿದಾಸ, ದೇವಿ ಸರಸ್ವತಿ ಅಥವಾ ಚತುರ್ಮುಖ ಬ್ರಹ್ಮ ಇವರುಗಳು ಮಾತ್ರವೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದು, ಪ್ರಶಂಸಿಸಬಹುದು. ನನ್ನಂತಹ ಸಾಮಾನ್ಯ ಮನುಷ್ಯನಿಂದ ಇದನ್ನು ಅರ್ಥಮಾಡಿಕೊಳ್ಳವುದು ಅಸಾಧ್ಯವೇ ಸರಿ”

ಇದು ಜ್ಞಾನಿಗಳಾದವರು ಕಾಳಿದಾಸನನ್ನು ಪ್ರಶಂಸಿಸಿರುವ ರೀತಿಯಾಗಿದ್ದರೆ, ಅಷ್ಟು ವಿದ್ವಾಂಸರಲ್ಲದವರು ಆತನನ್ನು ಶ್ಲಾಘಿಸಲು ಹಲವಾರು ದಂತಕಥೆಗಳನ್ನು ರಚಿಸಿದ್ದಾರೆ. ಅವನ ಪ್ರಭಾವ ಈ ಮಟ್ಟದಲ್ಲಿ ಜನಸಾಮಾನ್ಯರನ್ನು ಸ್ಪರ್ಷಿಸಿದೆ ಎನ್ನುವುದು ಕಾಳಿದಾಸನ ಹಿರಿಮೆಯನ್ನು ತೋರುತ್ತದೆ. ದಂತಕಥೆಯೊಂದರ ಪ್ರಕಾರ ದೇವಿ ಕಾಳಿಯ ಕೃಪೆಯಿಂದ ಹಸುಗಳನ್ನು ಕಾಯುವ ಸಾಮಾನ್ಯನೊಬ್ಬನು ಮಹಾನ್ ಕವಿಯಾದನು. ಆದ್ದರಿಂದ ಕಾಳಿದಾಸ ಎನ್ನುವ ಹೆಸರನ್ನು ಸ್ವೀಕರಿಸಿದನು. ಈ ದಂತಕಥೆಯನ್ನು ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ರಚಿತವಾದ ಚಲನಚಿತ್ರಗಳಲ್ಲಿ ಚಿತ್ರಿಸಲಾಗಿದೆ. ಮತ್ತೊಂದು ದಂತಕಥೆಯ ಪ್ರಕಾರ, ಅವನು ರಾಜ ವಿಕ್ರಮಾದಿತ್ಯನ (ಅವನ ನಂತರವೇ ವಿಕ್ರಮ ಶಕೆ) ಆಸ್ಥಾನದಲ್ಲಿದ್ದ ನವರತ್ನಗಳಲ್ಲೊಬ್ಬನು.

ಆದಾಗ್ಯೂ ಕಾಳಿದಾಸನ ದಂತಕಥೆಗಳು ಧಾರಾನಗರದ (ಇಂದಿನ ಮಧ್ಯಪ್ರದೇಶದ ಧಾರ್) ಭೋಜರಾಜನಿಗೇ ಹೆಚ್ಚು ಸಂಬಂಧಿಸಿವೆ. ಭೋಜ ರಾಜನಾದರೂ ದೇಶದ ಸಾಂಸ್ಕೃತಿಕರಾಜಕೀಯ ಭಿತ್ತಿಯಲ್ಲಿ ತನ್ನದೇ ಪ್ರಸಿದ್ಧಿ ಪಡೆದವನು. ಮಹಾನ್ ಯೋಧನೂ, ಅನೇಕ ಪ್ರಕಾರಗಳಲ್ಲಿ ಬಹುದೊಡ್ಡ ವಿದ್ವಾಂಸನೂ ಆಗಿದ್ದನು. 84 ಕೃತಿಗಳನ್ನು ರಚಿಸಿದವನು. ಭರತವರ್ಷದ ರಾಜ್ಯಗಳ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿದ್ದ, ಮುಸ್ಲಿಮ್ ಆಕ್ರಮಣಕಾರರಲ್ಲಿ ಕುಖ್ಯಾತನಾದ, ಕ್ರೂರಿಯಾದ ಘಝನಿ ಮೊಹಮ್ಮದನ ದಂಡುದಾಳಿಗೆ ಬಹುದೊಡ್ಡ ಅಡಚಣೆಯಾಗಿದ್ದವನು ಭೋಜ ಎಂದು ತಿಳಿದು ಬಂದಿದೆ. ಸ್ವತಃ ರಾಜ ಭೋಜನೇ ಭಾರತೀಯರಿಗೆ ದೊಡ್ಡ ದಂತಕಥೆಯಾಗಿದ್ದಾನೆ.

ಆದ್ದರಿಂದ, ಭಾರತೀಯ ದಂತಕಥೆ ಭೋಜನನ್ನು ಮತ್ತೊಂದು ದಂತಕಥೆಯಾದ ಕಾಳಿದಾಸನೊಂದಿಗೆ ಸಂಯೋಜಿಸುವುದು ಸೂಕ್ತವೆಂದು ಭಾರತೀಯ ಮನಸ್ಸು, ಪರಂಪರೆ ಭಾವಿಸಿದೆ. ಈ ಹೆಚ್ಚಿನ ದಂತಕಥೆಗಳನ್ನು ದಾಖಲಿಸಲಾಗಿದೆ. ಭೋಜನ ಜೀವನದ ಕುತೂಹಲಕಾರಿ ಘಟನೆಗಳಿಂದ ಕೂಡಿದ್ದೂ, ಮನರಂಜನಾತ್ಮಕವೂ ಆದ ’ಭೋಜಪ್ರಬಂಧ’ ಕೃತಿಯಲ್ಲಿ ಈ ದಂತಕತೆಗಳನ್ನು ಕಾಣಬಹುದು. ಈ ಕೃತಿಯಲ್ಲಿ ಕಾಳಿದಾಸನಿಗೆ ಪ್ರಮುಖವಾದ ಸ್ಥಾನವಿದೆ.

ವೇಶ್ಯೆಯರೊಂದಿಗಿನ ಅವನ ಸಂಬಂಧವಿರುವ ಅವನ ಕೆಲವು ದಂತಕಥೆಗಳು ಅವನ ಹಿರಿಮೆಯನ್ನು ಅಷ್ಟೇನೂ ಹೆಚ್ಚಿಸುವುದಿಲ್ಲ. ಆದರೆ ದಂತಕಥೆಗಳು ಬೆಳೆಯುವ ರೀತಿಯೇ ಅದು. ಸಮಾಜದ ಎಲ್ಲಾ ವರ್ಗದವರ ಕೊಡುಗೆಗಳಿಂದ ದಂತಕಥೆಗಳು ಬೆಳೆಯುತ್ತವೆ. ಪ್ರತಿಯೊಬ್ಬರೂ ತಮಗೆ ಮುಖ್ಯ ಎನ್ನಿಸಿದ ಗುಣಗಳನ್ನು ತಮ್ಮ ನಾಯಕನಲ್ಲಿ ಕಾಣಬಯಸುತ್ತಾರೆ. ಅದೇನಾದರೂ ಕಾಳಿದಾಸನ ಬಗೆಗಿನ ವೈವಿಧ್ಯಮಯಾದ ದಂತಕಥೆಗಳಿಂ ಒಂದಂತೂ ಸ್ಪಷ್ಟವಾಗಿದೆ. ಭಾರತೀಯ ಜನಮಾನಸದಲ್ಲಿ, ಸಮಾಜದ ಎಲ್ಲ ವರ್ಗಗಳಲ್ಲಿ ಅತ್ಯಂತ ಜನಪ್ರಿಯನಾಗಿದ್ದ ಕವಿಸಾಂಸ್ಕೃತಿಕ ಪುರುಷ ಕಾಳಿದಾಸ.

ಈ ಕಿರುಪರಿಚಯದಿಂದ ಪ್ರಾರಂಭಿಸಿ, ಈ ಸರಣಿಯಲ್ಲಿ ಭಾರತದ ರಾಷ್ಟ್ರೀಯ ಕವಿಯೆನ್ನಬಹುದಾದ ಕಾಳಿದಾಸನ ಜೀವನ, ಕಾವ್ಯ, ಕೊಡುಗೆ ಮತ್ತು ಶಾಶ್ವತ ಪರಂಪರೆಯನ್ನು ಸಮಗ್ರವಾಗಿ ಅನ್ವೇಷಿಸೋಣ.

ಈ ಲೇಖನ H.A.ವಾಸುಕಿರವರ ಆಂಗ್ಲ ಲೇಖನದ ಅನುವಾದವಾಗಿದೆ.

This is a translation of  an article written in English by Vasuki HA.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply