close logo

ಕರ್ನಾಟಕ ಸಂಗೀತದಲ್ಲಿ ಕನ್ನಡ

ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ಕರ್ನಾಟಕ ಸಂಗೀತವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದು ಸರಿಯಷ್ಟೇ. ಆದರೆ ಈ ಸಂಗೀ ಪ್ರಕಾರದಲ್ಲಿ ಆಸಕ್ತಿಯುಳ್ಳ ಕೇಳುಗರು ಒಂದಂಶವನ್ನು ತಪ್ಪದೇ ಗಮನಿಸುತ್ತಾರೆ. ಕರ್ನಾಟಕ ಸಂಗೀತವು ಕರ್ನಾಟಕವೊಂದೇ ಅಲ್ಲದೆ, ಬೇರೆ ರಾಜ್ಯಗಳಲ್ಲೂ ರೂಢಿಯಲ್ಲಿದೆ, ಇಲ್ಲಿಗಿಂತ ಹೆಚ್ಚಾಗಿಯೇ! ಸುಪ್ರಸಿದ್ಧರೆನಿಸಿದ ಬಹಳಷ್ಟು ಕರ್ನಾಟಕ ಸಂಗೀತಗಾರರು ತಮಿಳರು ಅಥವ ತೆಲುಗರು. ತ್ಯಾಗರಾಜರೇ ಮೊದಲಾದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳನ್ನೊಳಗೊಂಡು ಬಹಳಷ್ಟು ಜನ ವಾಗ್ಗೇಯಕಾರರು ಕನ್ನಡಿಗರಲ್ಲ. ಇನ್ನು ಕನ್ನಡದವರೇ ಆದ ಮೈಸೂರು ವಾಸುದೇವಾಚಾರ್ಯರಂಥವರೂ ಕನ್ನಡದಲ್ಲಿ ಬರೆದಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ — ಒಂದೋ ಎರಡೋ. ಹೀಗಾಗಿ ಹರಿದಾಸರ ರಚನೆಗಳನ್ನು ಬಿಟ್ಟರೆ, ಇಂದು ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಾಗಿರುವ ಅತಿ ಹೆಚ್ಚು “ಕೃತಿ” ಎಂಬ ಪ್ರಕಾರದ ರಚನೆಗಳು ತೆಲುಗು, ಸಂಸ್ಕೃತ, ಮತ್ತು ಕೆಲಮಟ್ಟಿಗೆ ತಮಿಳು ಭಾಷೆಯವು. ಹರಿದಾಸರ ಹೆಚ್ಚಿನ ರಚನೆಗಳ ಮೂಲ ಸಂಗೀತರೂಪವೂ ಉಳಿಯದೇ ಹೋಗಿರುವುದರಿಂದ, ನಾವು ಕೇಳುವ ಹರಿದಾಸ ‘ಕೃತಿ’ಗಳಲ್ಲಿ ಹೆಚ್ಚಿನವು ಸಂಗೀತದ ಮಟ್ಟಿಗೆ ಹೇಳುವುದಾದರೆ, ತ್ಯಾಗರಾಜಾದಿಗಳ ನಂತರದವು. ಅಂದಮೇಲೆ ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ? ಎಂಬ ಪ್ರಶ್ನೆಗಳು ಏಳುವುದು ಸಹಜವೇ.

Northern wall of Bucheshwara temple, Koravangala; Karnataka. Notice various musicians and their instruments

ಆದರೆ ಮೇಲ್ನೋಟಕ್ಕೆ ಕನ್ನಡ ಹೆಚ್ಚಾಗಿ ಕಾಣದಿದ್ದರೂ, ಸ್ವಲ್ಪ ಒಳಹೊಕ್ಕು ನೋಡಿದಾಗ, ಸಂಗೀತದಲ್ಲಿ ಕನ್ನಡವು ಹಾಸುಹೊಕ್ಕಾಗಿರುವುದು ಕಂಡು ಬರುತ್ತದೆ.

ಅಂದಹಾಗೆ ಕರ್ನಾಟಕ ಸಂಗೀತವೆಂಬ ಹೆಸರು ನಮ್ಮ ಸಂಗೀತಕ್ಕೆ ಬಹಳ ಹಳೆಯ ಹೆಸರಲ್ಲ. ಅದು ಸುಮಾರಾಗಿ ಪ್ರಚಾರಕ್ಕೆ ಬಂದು ಒಂದೂವರೆ ಶತಮಾನವಷ್ಟೇ ಆಗಿರಬಹುದು. ಕರ್ನಾಟಕ ಸಂಗೀತದ ಪಿತಾಮಹರೆಂದು ಪುರಂದರ ದಾಸರ ಹೆಸರು ದಾಖಲಾಗಿರುವುದೂ ೧೯೦೪ ರಲ್ಲಿ ಪ್ರಕಟವಾದ, ಸುಬ್ಬರಾಮ ದೀಕ್ಷಿತರ ಸಂಗೀತ ಸಂಪ್ರದಾಯ ಪ್ರದರ್ಶಿನಿಯಲ್ಲಿ. ಹಾಗೆಂದರೆ ಆ ಪುಸ್ತಕದಲ್ಲಿ ದಾಖಲಾಗುವ ಮೊದಲು ತಮಿಳುನಾಡಿನ ತಂಜಾವೂರು ಪ್ರಾಂತ್ಯದಲ್ಲಿ ಪುರಂದರ ದಾಸರು “ಕರ್ನಾಟಕ” ಸಂಗೀತದ ಬಾಲ ಪಾಠಗಳ ಪದ್ಧತಿಯನ್ನು ಸಿದ್ಧಮಾಡಿದವರು ಎಂಬ ನಂಬಿಕೆ ಹಾಸುಹೊಕ್ಕಾಗಿದ್ದಿರಬೇಕು. ಸುಮಾರಾಗಿ ೧೮ನೇ ಶತಮಾನದ ಮೊದಲ ದಶಕಗಳಲ್ಲಿ ತಂಜಾವೂರಿನ ರಾಜ ತುಳಜಾಜಿ ಬರೆದ ‘ಸಂಗೀತ ಸಾರಾಮೃತ’ವೆಂಬ ಹೊತ್ತಿಗೆಯಲ್ಲಿ ಆತ ಈ ಬಗ್ಗೆ ಪ್ರಸ್ತಾಪಿಸುತ್ತಾನೆ. ಹಾಗಾಗಿ ಕರ್ನಾಟಕ ಸಂಗೀತವೆಂಬ ಹೆಸರು ಮೊದಲು ಬಂದದ್ದು ತಮಿಳು ಮಾತನಾಡುವ ಪ್ರದೇಶದಲ್ಲೇ ಎಂಬುದರಲ್ಲಿ ಅನುಮಾನವಿಲ್ಲ,

ಭಾರತೀಯ ಸಂಗೀತವು ಸುಮಾರು ೧೨-೧೩ನೇ ಶತಮಾನಗಳ ತನಕ ಏಕರೂಪವಾಗಿತ್ತೆಂಬುದು, ನಂತರ ಮಹಮ್ಮದೀಯರ ಆಕ್ರಮಣದೊಡನೆ, ಅವರೊಡನೆ ಬಂದ ಪರ್ಶಿಯನ್ ಹಾಗೂ ಇತರ ಮಧ್ಯಪೂರ್ವ ದೇಶಗಳ ಸಂಗೀತದ ಪ್ರಭಾವದಿಂದ ಎರಡು ಕವಲಾಯಿತೆಂಬುದು ಸುಸ್ಪಷ್ಟ. ಇದನ್ನು ಸಂಗೀತ ಶಾಸ್ತ್ರ ಗ್ರಂಥಗಳ ಹಿನ್ನೆಲೆಯಿಂದ ಗುರುತಿಸಬಹುದು. ದಕ್ಷಿಣದ ಕವಲಿಗೆ ಕರ್ನಾಟಕದ, ಕನ್ನಡಿಗರ ಕೊಡುಗೆ ಮಹತ್ವದ್ದು. ಸಂಗೀತವೆನ್ನುವುದು ನಿಂತ ನೀರಲ್ಲ — ಹರಿವ ನದಿಯಂತೆ. ಅಲ್ಲಲ್ಲಿ ಹೊಸ ಸಂಪ್ರದಾಯ ಸ್ವೋಪಜ್ಞತೆಗಳ ನದಿಗಳು ಅದಕ್ಕೆ ಸೇರುತ್ತಿರುವುದುಂಟು. ಹಾಗಾಗಿ ಶಾಸ್ತ್ರಜ್ಞರು , ಆಗಿಂದಾಗ್ಗೆ ಅವರ ಕಾಲದ ಸಂಗೀತ ಹೇಗಿತ್ತೆಂಬುದನ್ನು ದಾಖಲಿಸದಿದ್ದರೆ, ಈ ಸಂಗೀತವೆಂಬ ಹೊನಲಿನ ಹರಿವನ್ನು ಗುರುತಿಸುವುದು ಸಾಧ್ಯ. ಈ ರೀತಿಯ ಶಾಸ್ತ್ರಜ್ಞರಲ್ಲಿ ಕನ್ನಡಿಗರ ಸಂಖ್ಯೆ ಬಹಳ ಹೆಚ್ಚೆನ್ನುವುದು ನಿರ್ವಿವಾದ.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು — ಕೆಲವರನ್ನುಳಿದು ಈ ಗ್ರಂಥಕಾರರಲ್ಲಿ ಯಾರೂ ಕನ್ನಡದಲ್ಲಿ ಬರೆಯಲಿಲ್ಲ. ಆದರೆ ಅದಕ್ಕೆ ಕಾರಣವೂ ಇದೆ — ಏಕೆಂದರೆ ಅವರಿಗೆ ತಮ್ಮ ವಿಚಾರಗಳು ಕನ್ನಡ ಮಾತನ್ನಾಡುವ ವಲಯದಿಂದಲೂ ಹೊರಕ್ಕೂ ತಿಳಿಸುವುದು ಮುಖ್ಯವಾಗಿತ್ತು. ಏಕೆಂದರೆ ಈ ಸಂಗೀತದ ಭೌಗೋಳಿಕ ಹರಹು ಕನ್ನಡ ಮಾತನಾಡುವ ಪ್ರದೇಶಗಳಿಗೂ ಹೊರಗೂ ಹಬ್ಬಿತ್ತು. ಅಲ್ಲದೇ ಇನ್ನು ಈ ಕೆಲವು ಆ ಕಾರಣದಿಂದ ಈ ಗ್ರಂಥಕಾರರು ಬಹುಪಾಲು ತಮ್ಮ ಪುಸ್ತಕಗಳನ್ನ ಕನ್ನಡಕ್ಕೆ ಬದಲಾಗಿ ಸಂಸ್ಕೃತದಲ್ಲಿ ಬರೆದರು. ಇದು ಸುಮಾರಾಗಿ, ಹಲವು ದೇಶಗಳ ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಪ್ರಚಂಚದಲ್ಲಿ ಆದಷ್ಟೂ ಹೆಚ್ಚು ಜನರಿಗೆ ತಿಳಿಯಲೆಂದು ಇಂಗ್ಲಿಷ್ ಭಾಷೆಯಲ್ಲಿ ಬರೆಯುವುದಕ್ಕೆ ಹೋಲಿಸಬಹುದು. ಹೀಗೆ ನಮ್ಮ ಸಂಗೀತದ ಲಕ್ಷಣಗಳ ಬಗ್ಗೆ ಬರೆದವರಲ್ಲಿ ನಾವು ವಿದ್ಯಾರಣ್ಯ (ಸಂಗೀತಸಾರ), ಕಲ್ಲಿನಾಥ, ರಾಮಾಮಾತ್ಯ (ಸ್ವರಮೇಳ ಕಲಾನಿಧಿ), ಪಂಡರೀಕ ವಿಠಲ (ಸದ್ರಾಗಚಂದ್ರೋದಯ ), ಗೋವಿಂದ ದೀಕ್ಷಿತ ( ಸಂಗೀತ ಸುಧಾ) , ವೆಂಕಟ ಮಖಿ (ಚತುರ್ದಂಡಿ ಪ್ರಕಾಶಿಕಾ) ಮುದ್ದು ವೆಂಕಟಮಖಿ (ರಾಗಲಕ್ಷಣ) — ಈ ಗ್ರಂಥಕಾರರನ್ನೂ, ಅವರ ಹೊತ್ತಿಗೆಗಳನ್ನೂ ನೆನೆಯಬೇಕಾಗುತ್ತದೆ. ಹೀಗೆ ಹಲವರು ಕನ್ನಡಿಗರ ಈ ಸಂಗೀತವು ಬೆಳೆದು ಬಂದ ದಾರಿಯನ್ನು ದಾಖಲು ಮಾಡುವುದೂ ದಕ್ಷಿಣಾದಿ ಸಂಗೀತಕ್ಕೆ “ಕರ್ನಾಟಕ” ಸಂಗೀತವೆಂದು ಹೇಳುವುದಕ್ಕೆ ಇದೂ ಒಂದು ಪ್ರಮುಖ ಕಾರಣವಿರಬೇಕೆಂದು ಮಹಾಮಹೋಪಾಧ್ಯಾಯ ರಾ.ಸತ್ಯನಾರಾಯಣ ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ “ಕರ್ನಾಟಕ”ಕ್ಕೆ ಕರ್ನಾಟಕ ಸಂಗೀತವೆಂದು ಹೆಸರು ಕೊಟ್ಟವರು ಕನ್ನಡಿಗರಲ್ಲ. ಇದರಲ್ಲಿ ಆಶ್ಚರ್ಯವೂ ಇಲ್ಲ. ಉದಾಹರಣೆಗೆ, ಸಾಮಾನ್ಯವಾಗಿ ರಾಗಿಮುದ್ದೆ ಪರಿಚಿತವಾಗಿರುವ ದಕ್ಷಿಣ ಕರ್ನಾಟಕದಲ್ಲಿ , ಮುದ್ದೆ ಎಂದರೆ ರಾಗಿ ಮುದ್ದೆ ಎಂದೇ ಅರ್ಥ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಪ್ರದೇಶದಿಂದ ಹೊರಗಡೆಯಾದರೆ ಅದನ್ನು “ರಾಗಿ ಮುದ್ದೆ” ಎಂದೇ ಹೇಳಬೇಕಾಗುತ್ತದೆ. ಅದೇ ರೀತಿ ಈ ಸಂಗೀತವು, ಕರ್ನಾಟಕ ಸಂಗೀತವೆಂದು ಹೆಸರು ಬರಲು, ಕರ್ನಾಟಕದಿಂದ ಬಂದ ಲಾಕ್ಷಣಿಕರು ಹೆಚ್ಚಾಗಿ ಈ ಸಂಗೀತ ಪರಂಪರೆಯ ಬುನಾದಿಯಾಗಿ ಇದ್ದಿರುವುದೂ, ಕನ್ನಡಿಗ ಪುರಂದರ ದಾಸರ ಸಂಗೀತ ಕಲಿಸುವ ಪದ್ಧತಿಯನ್ನೇ ಎಲ್ಲಕಡೆ ಮಾನ್ಯ ಮಾಡಿರುವುದೂ, ಇವೆಲ್ಲವೂ ಕರ್ನಾಟಕ ಸಂಗೀತವೆನ್ನುವ ಹೆಸರು ಬರಲು ಕಾರಣವಾಗಿವೆಯೆಂದು ರಾ.ಸತ್ಯನಾರಾಯಣರ ಅಭಿಪ್ರಾಯ. ಇಂದಿನ ಕರ್ನಾಟಕ ಸಂಗೀತ ತೆಗೆದುಕೊಳ್ಳುವ ರೂಪಕ್ಕೆ, ಇದರಲ್ಲಿ ಹಾಡುವ ರಚನೆಗಳಿಗೆ, ನೇರವಾಗಿಯೋ, ಇಲ್ಲ ತಮ್ಮ ಶಿಷ್ಯ ಪರಂಪರೆಯ ಮೂಲಕವೋ, ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ಸುತ್ತಮುತ್ತ್ತ ಬಾಳಿದ ಸಂಗೀತ ತ್ರಿಮೂರ್ತಿಗಳ (ತ್ಯಾಗರಾಜ, ಮುದ್ದುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ) ಪಾಲು ಹಿರಿದು. ಈ ವಾಗ್ಗೇಯಕಾರರ ಕಾಲಕ್ಕೆ ಸ್ವಲ್ಪ ಮೊದಲು ಬಂದದ್ದೇ ತುಳಜಾಜಿಯ ಸಂಗೀತ ಸಾರಾಮೃತ . ಈ ಪುಸ್ತಕ ಆಧರಿಸಿರುವ, ಉದ್ಧರಿಸುವ ಬಹುಪಾಲು ಶಾಸ್ತ್ರ ಗ್ರಂಥಗಳು, ಅವನಿಗೂ ಮುಂಚೆ ಕನ್ನಡಿಗ ಸಂಗೀತಜ್ಞರು ಬರೆದಿರುವಂತಹುವೇ!

ಅದೇನೇ ಇರಲಿ — ಇಂದಿನ ಕರ್ನಾಟಕ ಸಂಗೀತದ ಪಾರಿಭಾಷಿಕ ಶಬ್ದಗಳನ್ನು ನೋಡಿದಾಗ, ಅದರಲ್ಲಿ ಹಲವು ಕನ್ನಡ ಪದಗಳಿರುವುದನ್ನು ನೋಡಬಹುದು. ಕರ್ನಾಟಕ ಸಂಗೀತದ ಬಾಲಪಾಠಗಳು, ಅಂದರೆ ಸಂಗೀತ ಕಲಿಯ ಹೊರಟವರಿಗೆ ಮೊದಮೊದಲು ಹೇಳಿಕೊಡುವ ಪಾಠಗಳಾದ — ಸರಳೆ, ಜಂಟಿವರಸೆ, ಹೆಚ್ಚುಸ್ಥಾಯಿ ವರಸೆ, ತಗ್ಗು ಸ್ಥಾಯಿ ವರಸೆ, ದಾಟು ವರಸೆ — ಇಂತಹ ಹೆಸರುಗಳಲ್ಲಿ ಕನ್ನಡವು ಢಾಳಾಗಿ ಕಾಣುತ್ತದೆ. ಇದರಲ್ಲಿ ಸರಳೆ ಎನ್ನುವ ಹೆಸರು, ಸ್ವರಾಲೀ ಅಥವಾ ಸ್ವರಾವಳೀ ಎಂಬ ಸಂಸ್ಕೃತ ಪದದ ಬದಲಾದ ರೂಪ. ಅದರೆ ಸರಳೆಗಳನ್ನು ಕಲಿತ ನಂತರ ಹೇಳಿಕೊಡುವ ಜಂಟಿ ವರಸೆ, ಹೆಚ್ಚುಸ್ಥಾಯಿ ವರಸೆ ( ಅಥವಾ ಮೇಲುಸ್ಥಾಯಿ ವರಸೆ), ತಗ್ಗುಸ್ಥಾಯಿ ವರಸೆ ಇತ್ಯಾದಿ ಹೆಸರುಗಳೆಲ್ಲಾ ಕನ್ನಡದ್ದೇ ಆಗಿವೆ ಎನ್ನುವುದನ್ನು ಗಮನಿಸಬಹುದು. ನೆರಹೊರೆಯ ಭಾಷೆಗಳಾದ ತಮಿಳು ತೆಲುಗುಗಳಲ್ಲೂ ಇವಕ್ಕೆ ಸಮಾನವಾದ ಪದಗಳೇ ( ಉದಾ: ತಮಿಳಿನಲ್ಲಿ ಸರಳೈ, ಜಂಟ ವರಿಸೈ, ಮೇಲ್ ಸ್ಥಾಯಿ/ಕೀಳ್ ವರಿಸೈ ಹೀಗೆ) ಬಳಕೆಯಲ್ಲಿವೆ, ಬಾಲ ಪಾಠಗಳನ್ನು ರೂಢಿಗೆ ತಂದದ್ದು ಕನ್ನಡಿಗರಾದ ಪುರಂದರ ದಾಸರೇ ಎಂಬ ಪರಂಪರಾಗತ ನಂಬಿಕೆಯಿರುವುದನ್ನು ಗಮನಿಸಿದಾಗ ಈ ಹೆಸರುಗಳು ಮೊದಲಿಗೆ ಕನ್ನಡದಲ್ಲೆ ಹುಟ್ಟಿ ನಂತರ, ತಮಿಳು ತೆಲುಗು ಮಲಯಾಳಂ ಭಾಷಿಕರೂ ಅದೇ (ಇಲ್ಲವೇ ಅವಕ್ಕೆ ಸಮಾನವಾದ) ಹೆಸರುಗಳನ್ನೇ ಬಳಸಿದ್ದಾರೆಂಬ ಊಹೆಯನ್ನು ಮಾಡಬಹುದು. ಕರ್ನಾಟಕ ಸಂಗೀತವನ್ನು ಕಲಿಯುವ ವಿದ್ಯಾರ್ಥಿಗಳೆಲ್ಲ ಮೊದಮೊದಲು ಈ ಪಾಠಗಳನ್ನು ಮಾಯಾಮಾಳವ ಗೌಳರಾಗದಲ್ಲೂ, ನಂತರ ಹಲವು ಬೇರೆ ಬೇರೆ ರಾಗಗಳಲ್ಲೂ ಹಾಡಿ ಅಭ್ಯಾಸ ಮಾಡುವುದು ಎಲ್ಲ ರಾಜ್ಯಗಳಲ್ಲಿಯೂ ಇರುವ ಪದ್ಧತಿ.

ಇನ್ನು ಕನ್ನಡದಲ್ಲಿ ಸಂಗೀತ ರಚನೆಗಳನ್ನು ಮಾಡಿರುವ ಹರಿದಾಸರ ರಚನೆಗಳನ್ನೇ ತೆಗೆದುಕೊಳ್ಳೋಣ — ಹರಿದಾಸರು ಮೂರು ರೀತಿಯ ರಚನೆಗಳನ್ನು ಮಾಡಿದ್ದಾರೆ; ಅವೆಂದರೆ ಪದಗಳು, ಸುಳಾದಿಗಳು ಮತ್ತು ಉಗಾಭೋಗಗಳು. ಪದಗಳು ಎಣಿಕೆಯಲ್ಲಿ ಉಗಾಭೋಗ ಮತ್ತು ಸುಳಾದಿಗಳಿಗಿಂತ ಪದಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಈಗ “ಪದ” ಎಂಬ ಪದದ ಬಗ್ಗೆ ಒಂದಿಷ್ಟು ವಿಚಾರಗಳು — ಕರ್ನಾಟಕ ಸಂಗೀತದಲ್ಲಿರುವ ರಚನೆಗಳಲ್ಲಿ ಇದು ಒಂದು ಪ್ರಮುಖ ಬಗೆಯ ರಚನೆ. ಪದ ಎನ್ನುವ ಪದ (word) ಸಂಸ್ಕೃತದ್ದೇ ಆದರೂ, ಸಂಗೀತ ಪರಿಭಾಷೆಯಲ್ಲಿ ಅದಕ್ಕೆ ಸಾಮಾನ್ಯಾರ್ಥವಲ್ಲದೆ, ಅದಕ್ಕೆ ಪಲ್ಲವಿ, ಅನುಪಲ್ಲವಿ ಮತ್ತು ಹಲವು ಚರಣಗಳಿರುವಂತಹ ಒಂದು ನಿಬದ್ಧ ಸಂಗೀತರಚನೆ ಎಂದು ಅರ್ಥೈಸಲಾಗುತ್ತೆ. ಹದಿನಾಲ್ಕನೇ ಶತಮಾನದ ನರಹರಿತೀರ್ಥರೇ ಮೊದಲ ಹರಿದಾಸರೆಂಬ ಪ್ರತೀತಿ ಇದೆ. ಇದು ಸರಿಯಾಗಿದ್ದರೆ ಈ “ಪದ” ಎಂಬ ಸಂಗೀತ ರಚನೆ ಮೊದಲು ಹುಟ್ಟಿದ್ದೂ ಕನ್ನಡದಲ್ಲೇ. ಇವರನಂತರ ಹದಿನೈದನೇ ಶತಮಾನದಲ್ಲಿ ಹೆಚ್ಚಾಗಿ ಪದಗಳನ್ನು ಬರೆದದ್ದೆಂದರೆ ತೆಲುಗಿನಲ್ಲಿ ಅನ್ನಮಯ್ಯ, ಮತ್ತೆ ಕನ್ನಡದಲ್ಲಿ ಅವರ ಸರಿಸುಮಾರು ಸಮಕಾಲೀನರಾದ ಶ್ರೀಪಾದರಾಯರು. ಇದಾದಮೇಲೆ ವ್ಯಾಸರಾಯರು , ಪುರಂದರದಾಸ, ಕನಕದಾಸರಾದಿಯಾಗಿ ನೂರಾರು ಹರಿದಾಸರು ಸಾವಿರಾರು ಪದಗಳನ್ನು ರಚಿಸಿದ್ದಾರೆ.ಈ ಪದಗಳು ಶೃಂಗಾರ ಆಧ್ಯಾತ್ಮ ಮತ್ತು ಭಕ್ತಿ ಎಲ್ಲ ಭಾವನೆಗಳನ್ನು ಹೊರಹೊಮ್ಮಿಸುತ್ತಿದ್ದ ಸಾಹಿತ್ಯ ಹೊಂದಿರುತ್ತಿದ್ದವು. ಆ ನಂತರ ೧೮ನೇ ಶತಮಾನದ ಮೇಲೆ ಪದಗಳು ಕೇವಲ ಶೃಂಗಾರ ರಚನೆಗಳು ಮಾತ್ರ ಎಂಬ ಸೀಮಿತವಾದ ಅರ್ಥ ಪಡೆದುಕೊಂಡಿತು. ಇದಕ್ಕೆ ೧೭ನೇ ಶತಮಾನದ ವಾಗ್ಗೇಯಕಾರ ಕ್ಷೇತ್ರಯ್ಯನು ತೆಲುಗಿನಲ್ಲಿ ಹೆಚ್ಚಾಗಿ ಶೃಂಗಾರ ಪದಗಳನ್ನು ರಚಿಸಿದ್ದು ಕಾರಣವಿರಬಹುದು. ಇಂತಹ ಬದಲಾವಣೆಗಳು ಸಂಗೀತ ಪ್ರಪಂಚದಲ್ಲಿ ನಡೆಯುತ್ತಿರುವಂತವಹವೇ. ಆದರೆ ಇಂದಿಗೂ “ದಾಸರ ಪದ” ಗಳು, ಕ್ಷೇತ್ರಯ್ಯನ ಶೃಂಗಾರ ಪದಗಳು ಮತ್ತೆ ಅದರ ವ್ಯಾಕರಣಾರ್ಥ (word) ದಿಂದ ಬೇರೆಯಾದ ಅಸ್ತಿತ್ವವನ್ನು ಹೊಂದಿರುವುದಂತೂ ನಿಜ.

ಪದಗಳಷ್ಟೇ ಅಲ್ಲದೆ, ಹರಿದಾಸರು ಸುಳಾದಿಗಳೆಂಬ ರಚನೆಗಳನ್ನೂ ಮಾಡಿದ್ದಾರೆ. ತಾಳಮಾಲಿಕೆಗಳಾಗಿ ಹಾಡುವ ಸುಳಾದಿಗಳಲ್ಲಿ ಒಂದು ಪಲ್ಲವಿಯೂ, ಹಲವಾರು (೫-೭) ಚರಣಗಳೂ, ಮತ್ತೆ “ಜೊತೆ” ಎಂಬ ಹೆಸರಿನ ಕೊನೆಯೆರಡು ಸಾಲುಗಳೂ ಇರುತ್ತವೆ. ಸುಳಾದಿ ಎಂಬುದರ ಅರ್ಥ ಹಲವಾರು ವಿಶ್ಲೇಷಣೆಗಳ ನಂತರವೂ ಸ್ವಲ್ಪ ಅಸ್ಪಷ್ಟವಾಗಿದೆ. “ಸುಳುಹು ಹಾದಿ”, “ಸೂಳ್ ಹಾದಿ” (ಅಂದರೆ ಒಳ್ಳೆಯ ದಾರಿ) ಎಂಬುದೇ ಸುಳಾದಿ ಎಂದಾಗಿದೆ ಎಂದು ಒಂದು ಅಭಿಪ್ರಾಯವಿದ್ದರೆ, ಸಾಲಗಸೂಡ ವೆಂಬ ಹೆಸರಿನ ಹಿಂದಿದ್ದ ಸಂಗೀತ ರಚನೆಯೇ ’ಸೂಳಾದಿ” ಆಗಿದೆ ಎನ್ನುವುದು ಇನ್ನೊಂದು ಅಭಿಪ್ರಾಯ. ಒಂದು ವೇಳೆ ಮೊದಲನೆಯದೇ ಸರಿಯಾಗಿದ್ದರೆ, ಈ ರಚನೆಯ ಹೆಸರೂ ಕನ್ನಡವೇ ಎಂದಾಗುತ್ತದೆ. ಇನ್ನು ಸುಳಾದಿಯ ಕೊನೆಯ “ಜೊತೆ” ಎನ್ನುವುದು ಕನ್ನಡ ಪದವೇ ಎನ್ನುವುದು ತಿಳಿದದ್ದೇ. ಎರಡು ಸಾಲಿಗಳಿರುವುದರಿಂದ, ಇದು “ಜೊತೆ”. ಜೋಡಿ ಎನ್ನುವ ಅರ್ಥದಲ್ಲಿ ಜೊತೆ ಅನ್ನುವುದು ಕನ್ನಡದಲ್ಲಿ ಮಾಮೂಲಿ ಬಳಕೆ ಇರುವುದನ್ನು ಗಮನಿಸಬಹುದು.

ಆದರೆ ಹರಿದಾಸರ ಮೂರನೆಯ ಬಗೆಯ ರಚನೆಗಳಾದ ಉಗಾಭೋಗಗಳಿಗೆ ಆ ಹೆಸರು ಹೇಗೆ ಬಂದಿತೆಂಬುದರ ಬಗ್ಗೆ ಇನ್ನೂ ವಿವಾದವಿದ್ದು, ಆ ಹೆಸರಿಗೆ ಕನ್ನಡ ಮೂಲವಿಲ್ಲವೆಂದು ಮಾತ್ರ ಹೇಳಬಹುದು. ಅವು ರಚನೆಯಲ್ಲಿ ವೀರಶೈವ ಶರಣರ ವಚನಗಳನ್ನು ಹೋಲುವಂತೆ ಕಂಡರೂ, ವಚನಗಳಂತಲ್ಲದೆ ಉಗಾಭೋಗಗಳ ಪ್ರಮುಖ ಉದ್ದೇಶ ಹಾಡುವುದಾಗಿದೆ. ಈಚೆಗೆ ವಚನಗಳನ್ನೂ ಹಾಡುವ ಪದ್ಧತಿ ಇದ್ದರೂ ಕೂಡ, ಎಲ್ಲಾ ವಚನಗಳೂ ಹಾಡುವ ಉದ್ದೇಶದಿಂದ ಬರೆದವುಗಳಲ್ಲ.

ರಚನೆಗಳಿಂದ ಈಗ ಕರ್ನಾಟಕ ಸಂಗೀತದಲ್ಲಿ ಬಳಕೆಯಿರುವ ರಾಗಗಳ ಹೆಸರಿನ ಕಡೆಗೊಮ್ಮೆ ದೃಷ್ಟಿ ಹಾಯಿಸೋಣ. ರಾಗಗಳ ಹೆಸರುಗಳಲ್ಲಿ ಕೆಲವು ಪ್ರದೇಶಗಳ ಹೆಸರುಗಳು ಕಂಡುಬರುವುದು ಒಂದು ವಿಶೇಷ ಸಂಗತಿ. ಆದರೆ ಹೀಗೆ ಹೆಸರಿಸಿಕೊಳ್ಳುವ ರಾಗಗಳಲ್ಲಿ ಭಾರತದ ಮೂರು ಭಾಗಗಳ ಹೆಸರು ಮಾತ್ರ ಕಂಡು ಬರುತ್ತವೆ. ಅವು ಕರ್ನಾಟ, ಬಂಗಾಲ/ಗೌಡ (ಬಂಗಾಳ) ಮತ್ತೆ ಗುರ್ಜರ/ಸೌರಾಷ್ಟ್ರ (ಗುಜರಾತ್). ಹೀಗಾಗಿ ಕರ್ನಾಟಕ ಸಂಗೀತದಲ್ಲಿ ಗುರ್ಜರಿ, ಸೌರಾಷ್ಟ್ರ, ಸುರುಟೀ, ಬಂಗಾಳ, ಶುದ್ಧ ಬಂಗಾಳ, ಕನ್ನಡ, ಕನ್ನಡಬಂಗಾಳ, ಕನ್ನಡ ಗೌಳ, ಸಿಂಧು ಕನ್ನಡ, ಮಾರುವ ಕನ್ನಡ ಮೊದಲಾದ ಹೆಸರಿನ ರಾಗಗಳಿವೆ. ಈ ಹೆಸರುಗಳು ಈ ರಾಗಗಳಿಗೆ ಏಕೆ ಬಂದವು ಎಂಬುದನ್ನು ಇದಮಿತ್ಥಂ ಎಂದು ಹೇಳಲು ಅಸಾಧ್ಯವಾದರೂ, ಈ ರಾಗಗಳು ಮೊದಮೊದಲು ಪ್ರಸಿದ್ಧವಾದ ಪ್ರದೇಶಗಳ ಸೂಚಕವಾಗಿರಬಹುದೇ ಎಂಬ ಊಹೆಯನ್ನು ಮಾಡಬಹುದು.

ಇಷ್ಟೇ ಅಲ್ಲ , ಕರ್ನಾಟ ಎನ್ನುವ ಪದವು ದೇಶ ಮತ್ತೆ ಬಾಷಾ ವಾಚಿ ಎಂಬ ಮಾತಿಗೂ ರಾಗಗಳ ಹೆಸರಿನಿಂದ ಪುಷ್ಟಿ ಸಿಗುತ್ತದೆ. ಮೊದಮೊದಲು ನಮ್ಮ ನಾಡಿಗೆ ಕರ್ನಾಟಕ ವೆಂಬ ಹೆಸರು ಬಂದಿದ್ದು ಕನ್ನಡ ಎಂಬ ಭಾಷೆಯಿಂದಲೋ? ಅಥವಾ ನಮ್ಮ ನಾಡಿನ ಕರ್ನಾಟ(ಕ) ಎಂಬ ಹೆಸರಿನಿಂದ ಕನ್ನಡ ಎಂಬ ಭಾಷೆಯ ಹೆಸರು ಬಂತೋ? ಎಂಬ ಚರ್ಚೆಯೂ ಆಗಿತ್ತು. ಹೀಗಾಗಿ ಕರ್ನಾಟ(ಕ) ಎಂಬುದು ದೇಶವಾಚಿಯೆಂದೂ ಕನ್ನಡ ಎಂಬುದು ಭಾಷಾವಾಚಿಯೆಂದೂ ಅಭಿಪ್ರಾಯ ಪಟ್ಟವರೂ ಇದ್ದರು. ನಂತರ, ಕನ್ನಡವೆಂಬ ಪದವೇ ಸಂಸ್ಕೃತಕ್ಕೆ ಹೋದಾಗ ಕರ್ನಾಟ(ಕ) ಎಂದಾಗಿದೆ ಎಂಬ ಅಭಿಪ್ರಾಯವನ್ನು ಹಲವು ವಿದ್ವಾಂಸರು ಬೆಂಬಲಿಸುವುದನ್ನು ಕಾಣಬಹುದು. ಇದಕ್ಕೆ ಒಂದು ಆಧಾರವಾಗಿ ಕರ್ನಾಟಕ ಸಂಗೀತದ ಹಲವು ರಾಗಗಳ ಹೆಸರುಗಳನ್ನೂ ನಿದರ್ಶನವಾಗಿ ನೋಡಬಹುದು. ಸುಮಾರಾಗಿ ೧೪ನೇ ಶತಮಾನದಿಂದ ಇರುವ ಸಂಗೀತ ಲಕ್ಷಣಗ್ರಂಥಗಳಲ್ಲಿ ರಾಗಗಳನ್ನು ವಿವರಿಸುವಾಗ, ಕರ್ನಾಟ ಮತ್ತು ಕನ್ನಡ ಪದಗಳನ್ನು ಒಂದರ ಸ್ಥಳದಲ್ಲಿ ಒಂದನ್ನು ಬಳಸಲಾಗಿದೆ. ಒಂದೇ ರಾಗಕ್ಕೆ ಕನ್ನಡ ಗೌಳ ಮತ್ತು ಕರ್ನಾಟ ಗೌಡ, ಕರ್ಣಾಟ ಗೌಡ ಎನ್ನುವ ಹೆಸರುಗಳನ್ನು ನಾವು ಕಾಣಬಹುದಾಗಿದೆ!

ಇನ್ನು ಇಂದು ಬಳಕೆಯಲ್ಲಿರುವ ರಾಗಗಳನ್ನು ಅಭ್ಯಾಸದ ಅನುಕೂಲಕ್ಕೆಂದು ವಿಂಗಡಿಸುವ ಪದ್ಧತಿ ಹುಟ್ಟಿದ್ದು ಕರ್ನಾಟಕದಲ್ಲೇ ಇರಬೇಕು. ಇದರ ಮೊದಲ ಮೊಳಕೆಯನ್ನು ನಾವು ೧೪ನೇ ಶತಮಾನದಲ್ಲಿದ್ದ ವಿದ್ಯಾರಣ್ಯರಲ್ಲಿ ನೋಡಬಹುದು. ಇವರ ಕಾಲದಲ್ಲಿ ಪ್ರಚಾರದಲ್ಲಿದ್ದ ಸುಮಾರು ೫೦ ರಾಗಗಳನ್ನು ಅವುಗಳ ಲಕ್ಷಣಗಳು ತಿಳಿಯಲು ಅನುಕೂಲವಾಗುವಂತೆ ಮೇಳ (ಗುಂಪು)ಗಳಲ್ಲಿ ವಿಂಗಡಿಸಿದ್ದು ವಿದ್ಯಾರಣ್ಯರೇ. ಈ ಮೇಳ ಪದ್ಧತಿಯನ್ನು ಮುಂದೆ ೧೬ ನೇ ಶತಮಾನದಲ್ಲಿಯೂ ಪುಂಡರೀಕ ವಿಠಲ (ಅಕ್ಬರನ ಸಮಕಾಲೀನ), ರಾಮಾಮಾತ್ಯ (ವಿಜಯನಗರದ ಕೊನೆಯ ರಾಜ ಅಳಿಯ ರಾಮರಾಯನ ಮಂತ್ರಿ) ಇವರು ಬೆಳೆಸಿದರು. ನಂತರ ಇದಕ್ಕೆ ಇನ್ನೂ ಪೂರ್ಣ ರೂಪ ಕೊಟ್ಟವನು, ತಂಜಾವೂರಿನ ನಾಯಕ ದೊರೆಗಳ ಮಂತ್ರಿಯಾಗಿದ್ದ ವೆಂಕಟಮಖಿ. ಈತನೂ ಕೂಡ, ತಾನು ಕನ್ನಡದವನೆಂದು ಹೇಳಿಕೊಂಡಿದ್ದಾನೆ. ರಾಗಗಳ ವಿಂಗಡಣೆಗೆ ಇವನು ಬುನಾದಿ ಹಾಕಿಕೊಟ್ಟ ಎಪ್ಪತ್ತೆರಡು ಮೇಳಗಳ ಪದ್ಧತಿಯೇ ಇಂದಿಗೂ ಕರ್ನಾಟಕ ಸಂಗೀತದಲ್ಲಿ ಬಳಕೆಯಲ್ಲಿದೆ. ಇದನ್ನು ನೋಡಿದಾಗ ವೆಂಕಟ ಮಖಿ ಅವನ ‘ಚತುರ್ದಂಡೀ ಪ್ರಕಾಶಿಕೆ’ ಯಲ್ಲಿ ರಾಗಗಳ ವಿಂಗಡಣೆಗೆ ಎಪ್ಪತ್ತೆರಡು ಮೇಳಗಳು ಬೇಕು, ಮತ್ತೆ ಸಾಕು — ಇದಕ್ಕಿಂದ ಹೆಚ್ಚಾಗಲೀ , ಕಡಿಮೆಯಾಗಲೀ ಮೇಳಗಳನ್ನು ಹೇಳಲು ಸಾಕ್ಷಾತ್ ಶಿವನಿಗೂ ಸಾಧ್ಯವಾಗುವುದಿಲ್ಲ ಎಂದು ಸಾರಿ ಹೇಳಿದ ಮಾತು ಸಾರ್ಥಕವೇ ಆಗಿದೆ ಎನ್ನಿಸುತ್ತದೆ.

ಸಂಗೀತ ರಚನೆಗಳಷ್ಟೇ ಅಲ್ಲದೇ ಇನ್ನೂ ಹಲವು ಪಾರಿಬಾಷಿಕ ಪದಗಳಲ್ಲೂ ಕನ್ನಡವನ್ನು ಕಾಣಬಹುದು. ಕರ್ನಾಟಕ ಸಂಗೀತದಲ್ಲಿ ಒಂದು ರಾಗಕ್ಕೆ ಅದರ ರೂಪ ಕೊಡುವುದರಲ್ಲಿ ಗಮಕ ( ornamentation) ಎನ್ನುವುದು ಬಹಳ ಮುಖ್ಯ. ಗಮಕಗಳಲ್ಲಿ ಹಲವು ವಿಧಗಳಿದ್ದು — ದಶವಿಧ ಗಮಕಗಳೆಂಬ ಒಂದು ವಿಂಗಡಣೆ ಪ್ರಖ್ಯಾತವಾಗಿದೆ. ಈ ಗಮಕಗಳ ಹೆಸರುಗಳಲ್ಲಿ, ಹೊಮ್ಮು, ಜಾರು, ರವೆ, ಓರಿಕೆ ಮೊದಲಾದ ಗಮಕಗಳ ಹೆಸರುಗಳು ಕನ್ನಡ ಇಲ್ಲವೇ ತೆಲುಗು ಭಾಷಾಮೂಲದ್ದೆಂದು ಸುಲಭವಾಗಿ ತಿಳಿಯುತ್ತದೆ. ಎರಡೂ ಭಾಷೆಗಳಲ್ಲಿ ಅವೇ ಪದಗಳ ಬಳಕೆ ಇರುವುದರಿಂದ ಇದರದ್ದೇ ಎಂದು ಹೇಳಲಾಗುವುದಿಲ್ಲವಾದರೂ, ಈ ಗಮಗಕಳಿಗೆ ಹೆಸರು ಕೊಟ್ಟಿದ್ದು ಈ ಮಾತುಗಳನ್ನಾಡುವ ಪ್ರದೇಶದವರು ಎಂಬುದನ್ನು ಮಾತ್ರ ನಿಶ್ಚಿತವಾಗಿ ಹೇಳಬಹುದು.

ಇಷ್ಟೇ ಅಲ್ಲ -ತೀರಾ ಮೊದಮೊದಲು ಪಾಠಮಾಡುವ ಬಾಲ ಪಾಠಗಳನ್ನು ಬಿಟ್ಟರೆ, ಉಳಿದ ಯಾವುದೇ ಸಂಗೀತ ರಚನೆಯಲ್ಲಿಯೂ, ಸಾಹಿತ್ಯವನ್ನೂ, ಮತ್ತು ಆ ಸಾಹಿತ್ಯ ಭಾಗವನ್ನು ಹಾಡುವುದು ಹೇಗೆಂಬ ಸಂಗೀತದ ಭಾಗವೂ ಇರುತ್ತದೆ. ಸಂಗೀತದ ಭಾಗಕ್ಕೆ “ಧಾತು” ಎಂದು ಕರೆದರೆ, ಸಾಹಿತ್ಯದ ಭಾಗವನ್ನು ಸೂಚಿಸುವ ಪಾರಿಭಾಷಿಕ ಪದ “ಮಾತು”. ಇದು ಕನ್ನಡದ್ದೆಂದು ವಿಶೇಷವಾಗಿ ಹೇಳಬೇಕಿಲ್ಲವಷ್ಟೇ!

ಹೀಗೆ, ಕರ್ನಾಟಕ ಸಂಗೀತದಲ್ಲಿ ಬೇರೆ ಭಾಷೆಯ ರಚನೆಗಳನ್ನು ಹಾಡುವ ಮಾತ್ರಕ್ಕೆ, ಅದು ನಮ್ಮದಾಗದೇ ಹೋಗುವುದಿಲ್ಲ. ಇದೇ ರೀತಿಯಲ್ಲೇ, ಕರ್ನಾಟಕ ಸಂಗೀತವೆಂಬ ಹೆಸರಿದ್ದರೂ, ಅದರ ಸಂಪ್ರದಾಯವನ್ನು ಉಳಿಸಿಕೊಂಡ ಎಲ್ಲ ಪ್ರದೇಶಗಳಿಗೂ ಅದು ಒಟ್ಟಾರೆ ಸೇರಿದ್ದೇ. ಆಧುನಿಕ ಕಾಲದಲ್ಲಿ ಕರ್ನಾಟಕ ಸಂಗೀತದ ಕುರಿತು ಹೇಳುವಾಗ, ಕನ್ನಡಿಗರೂ “ಕಾರ್ನಾಟಿಕ್” ಎಂದು ಹೇಳುವ ಚಾಳಿಯಿದೆ. ಇದು ಬ್ರಿಟಿಷರ ಬಳುವಳಿ. ಅಲ್ಲದೇ “ಕಾರ್ನಾಟಿಕ್” ಎಂಬುದು ಬ್ರಿಟಿಷರು ವಾಲಾಜಾಪೇಟೆ ವೆಲ್ಲೂರು ಸುತ್ತ ಮುತ್ತಲ (ಇಂದಿನ ತಮಿಳುನಾಡಿನಲ್ಲಿ) ಇರುವ ಪ್ರದೇಶಕ್ಕೆ ಕೊಟ್ಟ (ತಪ್ಪಾದ) ಹೆಸರು, ಮತ್ತು ಚಾರಿತ್ರಿಕವಾಗಿ ಆ ಪ್ರದೇಶದಿಂದ ಕರ್ನಾಟಕ ಸಂಗೀತಕ್ಕೇನೂ ಗಮನಾರ್ಹ ಕೊಡುಗೆಯೇನೂ ಬಂದಂತಿಲ್ಲ. ಹಾಗಾಗಿ ಕನ್ನಡಿಗರಾದರೂ ನಮ್ಮ ಸಂಗೀತವನ್ನು ಕರ್ನಾಟಕ ಸಂಗೀತವೆಂದು ಕರೆಯುವುದೇ ಒಳಿತು. ಹಾಗೆಯೇ ಕನ್ನಡಿಗರು ನಮ್ಮದೇ ಆದ ಈ ಸಂಗೀತವನ್ನು ಕೇಳಿ ಆನಂದಿಸುವುದು, ಕಲಿತು, ಮುಂದಿನ ಪೀಳಿಗೆಗೂ ಅದನ್ನು ಮುಂದುವರೆಸುವುದು ಆದರೆ ಮತ್ತೂ ಒಳಿತು.

ಆಕರ-

೧) ವೀಣಾಲಕ್ಷಣ ವಿಮರ್ಶೆ — ರಾ. ಸತ್ಯನಾರಾಯಣ
೨) ಕರ್ನಾಟಕ ಸಂಗೀತ ವಾಹಿನಿ — ರಾ. ಸತ್ಯನಾರಾಯಣ
೩) ಚತುರ್ದಂಡಿ ಪ್ರಕಾಶಿಕಾ (ಕನ್ನಡ ಮತ್ತು ಇಂಗ್ಲಿಷ್ ಅನುವಾದ) — ರಾ. ಸತ್ಯನಾರಾಯಣ
೪) Ragas of Sangeeta Saramrta — S.R.Janakiraman

(ಸೂಚನೆ: ಇದು ಬೆಂಗಳೂರಿನಲ್ಲಿ ೪ ಜನವರಿ, ೨೦೧೫ರಂದು ಬೆಂಗಳೂರಿನಲ್ಲಿ ನಡೆದ “ಪದಾರ್ಥ ಚಿಂತಾಮಣಿ”- ಪದಕಮ್ಮಟದ ಸ್ಮರಣ ಸಂಚಿಕೆಗೆಂದು ಬರೆದ ಆಹ್ವಾನಿತ ಬರಹ)

ಕೊಸರು- ಐದು ವರ್ಷಗಳ ಹಿಂದೆ ಇದೇ ದಿನ ಬರೆದಿದ್ದ ಬರಹವಿದು. ಯಾವುದೇ ಬದಲಾವಣೆ ಇಲ್ಲದೆ ಇಲ್ಲಿ ಹಾಕುತ್ತಿದ್ದೇನೆ.

(This article was first published here and has been republished by Indic Today with the author’s permission.)

(Featured image credit: thoughts4ideas.eu)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply