close logo

ಪುರಾಣಗಳಲ್ಲಿ ಗೀತೋಪದೇಶ : ಭಾಗ ೨

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ

ಏವಂ ತ್ವಯಿ ನಾನ್ಯಥೇತೋಸ್ತಿ ಕರ್ಮ ಲಿಪ್ಯತೇ ನರೇ . .

ನೂರು ವರ್ಷಕಾಲ  ಬಾಳಬೇಕೆಂದು ಇಚ್ಛಿಸುವವನು ಕರ್ಮವನ್ನು ಮಾಡುತ್ತಲೇ  ಆಯುಷ್ಯವನ್ನು ಕಳೆಯಬೇಕುಸಮರ್ಪಿತವಾದ ಕರ್ಮದ ಹೊರತಾಗಿ ಬೇರೆ ಮಾರ್ಗವಿಲ್ಲ, ಕರ್ಮದ ಲೇಪವು ಆಗ ನರನಿಗಿರದು.

ಕರ್ಮ/ಕೆಲಸ/ಕರ್ತವ್ಯ –  ಈ ತತ್ವವು ನಮ್ಮ ಪುರಾಣ  ಮತ್ತು ಇತಿಹಾಸಗಳಲ್ಲಿ ಗಹನ ಸೂತ್ರವಾಗಿ ಹಾಸುಹೊಕ್ಕಾಗಿರುವುದನ್ನು ಕಾಣುತ್ತೇವೆ. ಈಶಾವಾಸ್ಯೋಪನಿಷತ್ತಿನ ಈ ಶ್ಲೋಕವು ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಾರಿರುವ ಸಂದೇಶವನ್ನೇ ಬೋಧಿಸಿದೆ.

ಕರ್ಮತತ್ವವನ್ನು ಅನೇಕ ಪುರಾಣಗಳಲ್ಲಿ ಅತ್ಯಂತ ವಿಷದವಾಗಿ ಚರ್ಚಿಸಲಾಗಿದೆ. ಮೇಲಿನ ಶ್ಲೋಕದಲ್ಲಂತೂ ಕರ್ಮ ಮತ್ತು ಭಕ್ತಿ – ಈ ಎರಡು ವಿಚಾರಗಳು ಭಾವತುಂಬಿ ಹೊಮ್ಮಿವೆ.

ಜೀವಾತ್ಮನು ತನ್ನ ಮಾನವಜನ್ಮದಲ್ಲಿ ಅನುಸರಿಸಬೇಕಾದ ವಿಧಿವಿಧಾನಗಳನ್ನು ನಮ್ಮ ಪುರಾಣಗಳು ಸವಿಸ್ತಾರವಾಗಿ ವರ್ಣಿಸಿವೆ. ವಿಷ್ಣುಪುರಾಣದ ೩ನೇ ಸ್ಕಂಧದಲ್ಲಿ ಜನ್ಮದಿಂದ ಶ್ರಾದ್ಧಕರ್ಮದವರೆಗಿನ ಎಲ್ಲ ಕರ್ತವ್ಯಗಳ ವಿವರಣೆ ನೀಡುವ ಅನೇಕ ಅಧ್ಯಾಯಗಳೇ ಇವೆ.

ಬ್ರಹ್ಮಚರ್ಯದಿಂದ ವಾನಪ್ರಸ್ಥದವರೆಗಿನ  ಮಾನವ ಜೀವನದ ವಿವಿಧ ಹಂತಗಳಲ್ಲಿ ಗೃಹಸ್ಥಾಶ್ರಮವು ಸುದೀರ್ಘವಾದದ್ದು ಹಾಗು ಬಹುಮುಖ್ಯವಾದದ್ದೆನಿಸಿದೆ. ಇದರ ಮಹತ್ವವನ್ನು ಸಾರುವ ಹಲವಾರು ಉದಾಹರಣೆಗಳೂ ನಮಗೆ ಕಾಣಸಿಗುತ್ತವೆ. ಪುರಾಣಗಳಲ್ಲಿ  ಗೃಹಸ್ಥಾಶ್ರಮದ ಬಗೆಗಿರುವ  ವ್ಯಾಖ್ಯಾನಗಳಲ್ಲಿ  ಶುಕಮುನಿ (ವೇದವ್ಯಾಸರ ಪುತ್ರ)   ಹಾಗು ಜನಕರಾಜನ (ಮಿಥಿಲೆಯ ರಾಜ) ನಡುವೆ ನಡೆಯಿತೆನ್ನಲಾದ ಸಂವಾದವು ವಿಶೇಷ ಮನ್ನಣೆಗೆ ಪಾತ್ರವಾಗಿದೆ . ಮತ್ತೊಂದು ಸುದೀರ್ಘ ಲೇಖನದ ವಸ್ತುವಿಗೆ ಸಾಕಾಗುವಷ್ಟು ಗಹನ ತಾತ್ಪರ್ಯಗಳು ಈ ವಿಷಯದಲ್ಲಿ ಅಡಕವಾಗಿವೆ.  ಆದರೆ ಈ ಲೇಖನದ ಮಿತಿಗೆ, ಗೃಹಸ್ಥಾಶ್ರಮಕ್ಕೆ  ಪುರಾಣಗಳಲ್ಲಿ ಎಷ್ಟು ಮಹತ್ವವನ್ನು ನೀಡಿಲಾಗಿದೆ, ಅದರ ಎಲ್ಲ ಆಯಾಮಗಳನ್ನು ಎಷ್ಟು ವಿಸ್ತೃತವಾಗಿ, ಆಳವಾಗಿ ಚರ್ಚಿಸಲಾಗಿದೆ  ಎಂಬುದನ್ನು ತಿಳಿಯಪಡಿಸುವ ಉದ್ದೇಶವಷ್ಟೇ ಪ್ರಸ್ತುತ.

ಮನುಸ್ಮೃತಿಯಲ್ಲಿ ಮನುವು ಜೀವನದ ಎಲ್ಲ ಅಂಶಗಳ ಬಗೆಗೂ ಪ್ರಸ್ತಾಪಿಸಿದ್ದು  , ಜೀವಾತ್ಮನು ಗೃಹಸ್ಥಾಶ್ರಮದಲ್ಲಿ ಹೊಂದಬೇಕಾದ  ಪ್ರಮುಖ ಧ್ಯೇಯಗಳಲ್ಲೊಂದು ಪುತ್ರಸಂತಾನಪ್ರಾಪ್ತಿ ಎಂದು ವಿವರಿಸಿದ್ದಾನೆ.

ಪುತ್ ನಾಮ್ನೋ ನರಕಾದ್ಯಸ್ಮಾತ್ತ್ರಾಯತೇ ಪಿತರಂ ಸುತಃ

ತಸ್ಮಾತ್ ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ .೧೩೮

ಪುತ್ರನೆಂಬುವನು ತನ್ನ ಪಿತನನ್ನು ಪುತ್ ಎಂಬ ನರಕದಿಂದ ಪಾರುಮಾಡುತ್ತಾನಾದ್ದರಿಂದ ಅವನು ಪುತ್  ಎಂದು ಸ್ವಾಯಂಭುವ ಮನುವೇ ತಿಳಿಸಿದ್ದಾನೆ.

೧೨ನೇ ಶತಮಾನದ ಕನ್ನಡದ ಕವಿ ಸೋಮೇಶ್ವರನು ಇದೇ ಮೌಲ್ಯವನ್ನು ತನ್ನ ಸುಪ್ರಸಿದ್ಧ ಶತಕದಲ್ಲಿ ಸೆರೆಹಿಡಿದಿದ್ದಾನೆ. ತನ್ನ ೮ನೇ ಶತಕದಲ್ಲಿ –

ಸುತನೇ ಸದ್ಗತಿದಾತನೈ ಹರ ಹರಾ ಶ್ರೀ ಚೆನ್ನ ಸೋಮೆಶ್ವರಾ

ಎಂದಿದ್ದಾನೆ

ಇದೇ ಶತಕದಲ್ಲಿ ಉದ್ಧೃತವಾದ, ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾದ ಮತ್ತೊಂದು ಉಕ್ತಿ

ವರ್ಣಮಾತ್ರಂ ಗುರು

ಒಂದು ವರ್ಣವನ್ನು ಹೇಳಿಕೊಡುವವನೂ ಗುರುವೇ

ಆನಂದಮಯ ಜೀವನಕ್ಕೆ ಅಗತ್ಯವಾದ ಸಂಗತಿಗಳನ್ನು ತಿಳಿಸುವುದರ ಜೊತೆಗೆ ಧಾರ್ಮಿಕ ಪಥದಲ್ಲಿ ಯಾರು ಒಂದೇ ಒಂದು ಅಕ್ಷರವನ್ನಾದರೂ ಕಲಿಸಿ  ಕೊಡಬಲ್ಲನೋ ಆತನೂ ಗುರುವೆನಿಸಿಕೊಳ್ಳುತ್ತಾನೆ ಎಂದು ಕವಿ ಸೋಮೇಶ್ವರನು ತನ್ನ ಶತಕದಲ್ಲಿ ಹೇಳಿದ್ದಾನೆ.

ಶ್ರೀಮದ್ಭಾಗವತಪುರಾಣದ ಅಜಮಿಳನ ಕಥಾನಕದವೊಂದರಲ್ಲೇ  ಮೇಲೆ ಚರ್ಚಿಸಲಾದ ಎಲ್ಲ ವಿಷಯಗಳೂ  ಸುಂದರವಾಗಿ ನಿರೂಪಿತವಾಗಿರುವುದನ್ನು ಕಾಣಬಹುದು.

ತನ್ನ ಪುತ್ರನ ಕಾರಣದಿಂದ, ಎಂದರೆ, ತನ್ನ ಪುತ್ರನ ಹೆಸರಿನಿಂದಾಗಿ, ತಾನು ಎಷ್ಟೇ ತುಚ್ಛವಾದ ಬಾಳನ್ನು ನಡೆಸಿದ್ದರೂ ವೈಕುಂಠಪ್ರಾಪ್ತಿಯು ಅಜಮಿಳನಿಗೆ ಉಂಟಾದದ್ದು ಹೇಗೆ ಎಂಬುದು ಕಥಾವಸ್ತು. ತನ್ನ ಪುತ್ರನ ಹೆಸರಿನ ಒಂದಕ್ಷರವು ಹೇಗೆ ಅಜಮಿಳನ ಪಾಲಿಗೆ  ಜೀವನಪರ್ಯಂತ ತೋರುವ ಭಗವದ್ಭಕ್ತಿಗೆ ಸಮಾನವಾಯಿತು ಎನ್ನುವ ಸ್ವಾರಸ್ಯವು ಈ ಕಥಾನಕದ ಮೂಲಕ  ನಮಗೆ ವೇದ್ಯವಾಗುತ್ತದೆ.

ಈ ಲೇಖನದ ಮೊದಲ ಭಾಗದಲ್ಲಿ, ಭೀಷ್ಮಾಚಾರ್ಯರು ನಕುಲನಿಗೆ ತಿಳಿಸಿದ ಯಮಗೀತದ ವರ್ಣನೆಯಿತ್ತು. ಈ ಭಾಗದಲ್ಲಿ, ಅಜಮಿಳನ ಮರಣಾನಂತರ ಅವನನ್ನು ಯಮಲೋಕಕ್ಕೆ ಕರೆದೊಯ್ಯಲು ಬಂದ ಯಮನು  ತನ್ನ ಕಿಂಕರರಿಗೆ, ಭಟ್ಟರಿಗೆ,   ಹರಿಭಕ್ತಿಯ ಮೌಲ್ಯವನ್ನು ಉಪದೇಶಿಸಿದ ಯಮಗೀತೆಯ ಬಗ್ಗೆ ತಿಳಿಯೋಣ.

ಶ್ರೀಮದ್ಭಾಗವತಪುರಾಣದ ೬ನೇ ಸ್ಕಂಧದ  ಮೊದಲ ೨ ಅಧ್ಯಾಯಗಳಲ್ಲಿ ಅಜಮಿಳನ ಕಥೆಯಿದೆ.

ಅಜಮಿಳನು ಅನ್ಯಧರ್ಮದ ಸ್ತ್ರೀಯನ್ನು ವಿವಾಹವಾಗಿದ್ದು ಅವರಿಗೆ ಹತ್ತು ಮಂದಿ ಗಂಡುಮಕ್ಕಳಾದರು. ಕಾಲಕ್ರಮೇಣ ಕೊನೆಯ  ಮಗನಾದ ನಾರಾಯಣನನ್ನು ಅಜಮಿಳನು ಬಹುವಾಗಿ ಪ್ರೀತಿಸುತ್ತ ಪುತ್ರವ್ಯಾಮೋಹದಲ್ಲಿ ಸಿಲುಕಿಹೋದನು.

ಮಗನಿಗೆ ಮೊದಲು ಉಣಿಸದೆ ತಾನು ಅಹಾರವನ್ನು ಸ್ವೀಕರಿಸುತ್ತಿರಲಿಲ್ಲ. ಕಾಲಚಕ್ರ ಉರುಳಿ, ಮುಂದೆ, ಅಜಮಿಳನ ಅಂತ್ಯಕಾಲವು ಸನ್ನಿಹಿತವಾದಾಗ, ದುರ್ಬಲಶರೀರನಾಗಿ ಭೀಕರಸ್ವರೂಪಿಗಳಾದ ಯಮದೂತರು ತನ್ನನ್ನು ಸಮೀಪಿಸುತ್ತಿರುವುದನ್ನು ಕಂಡು, ನಿಸ್ಸಹಾಯಕನಾಗಿ ಕರುಣಾಪೂರ್ಣನಾಗಿ ತನ್ನ ಪ್ರೀತಿಪಾತ್ರನಾದ ಪುತ್ರನನ್ನು ಕೂಗಿ ಕರೆದನು –

ಪಾಶಹಸ್ತಾಂಸ್ತ್ರೀನ್ ದೃಷ್ಟ್ವಾ ಪುರುಷಾನತಿದಾರುಣಾನ್

ವಕ್ರತುಂಡಾನೂರ್ಧ್ವರೋಮ್ಣ ಆತ್ಮಾನಂ ನೇತುಮಾಗತಾನ್೨೮

 ದೂರೇ ಕ್ರೀಡನಕಾಸಕ್ತಂ ಪುತ್ರಂ ನಾರಾಯಣಾಹ್ವಯಂ

ಪ್ಲಾವಿತೇನ ಸ್ವರೇಣೋಚ್ಚೈರಾಜುಹಾವಾಕುಲೇಂದ್ರಿಯಃ೨೯

ಬಾಷ್ಪಪೂರ್ಣ ಕಣ್ಣುಗಳುಳ್ಳವನಾಗಿನಾರಾಯಣ, ನನ್ನ ಬಳಿಗೆ ಬಾ! ನಾರಾಯಣ!” ಎಂದು ಪ್ರಲಾಪಿಸುತ್ತಾ ಮರಣ ಹೊಂದಿದನು.

ಯಮಭಟ್ಟರು ಅಜಮಿಳನ ಆತ್ಮವನ್ನು ಯಮಲೋಕಕ್ಕೆ ಒಯ್ಯಲು ಆಗಮಿಸಿದಾಗ, ಶ್ರೀಮನ್ನಾರಾಯಣನ ಚಾರರಾದ ವಿಷ್ಣುದತ್ತರು ಅವರನ್ನು ತಡೆದರು.

ಮರಣಾನಂತರ ಸಾಮಾನ್ಯವಾಗಿ ಯಮಭಟ್ಟರು ಆಗಮಿಸುವರು. ಆದರೆ ಅಜಮಿಳನ ಪ್ರಸಂಗದಲ್ಲಿ  ವಿಷ್ಣುದತ್ತರು  ಅವನ ಆತ್ಮವನ್ನು ವೈಕುಂಠಕ್ಕೆ ಒಯ್ಯಲು ಬಂದದ್ದೇಕೆ ಎಂಬುದೇ ಆಶ್ಚರ್ಯ!  ಮರಣಕಾಲದಲ್ಲಿ ನಾರಾಯಣನಾಮವನ್ನು ಅಜಮಿಳನು ಉಚ್ಚರಿಸಿದ್ದೇ ಅವನಿಗೆ ಸದ್ಗತಿ ಪ್ರಾಪ್ತಿಯಾಗಲು ಕಾರಣವಾಯಿತು ಎಂಬುದಾಗಿ  ಇದಕ್ಕೆ ವಿಷ್ಣುದೂತರೇ ಉತ್ತರವನ್ನು ನೀಡಿದ್ದಾರೆ.

ವಿಷ್ಣುದೂತರ ಹಾಗು ಯಮಭಟ್ಟರ ನಡುವೆ ನಡೆದ ವಾಗ್ವಾದ

ಈ ಪ್ರಮುಖ ಘಟ್ಟದಲ್ಲಿ, ಧರ್ಮದ ಅನೇಕ ಆಯಾಮಗಳ ಬಗೆಗೆ ವಿಷ್ಣುದೂತರ ಮತ್ತು ಯಮಭಟ್ಟರ ನಡುವೆ ವಿವರವಾದ ಸಂಭಾಷಣೆ  ನಡೆಯುತ್ತದೆ.

ಆಧುನಿಕ ಬದುಕಿಗೆ ಒದಗುವ ಅನೇಕ ಸಂದರ್ಭಗಳಲ್ಲಿ ನಿಯಮಗಳ ಪಾಲನೆ ಮತ್ತು ಸಾಂದರ್ಭಿಕ ಮೌಲ್ಯಗಳ ನಡುವೆ ಸಂದಿಗ್ಧತೆಯೆಯನ್ನು ಎದುರಿಸಬೇಕಾಗುತ್ತದೆ. ಒಂದು ಪ್ರಸಂಗಕ್ಕೆ ಹಲವು ಆಯಾಮಗಳಿದ್ದು, ಅವುಗಳ ಸಾಧಕ ಬಾಧಕಗಳನ್ನು ಕುರಿತು ಅನೇಕ ರೀತಿಗಳಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಮಭಟ್ಟರ ಮತ್ತು ವಿಷ್ಣುದತ್ತರ ನಡುವೆ ನಡೆದ ಸಂವಾದ ಪ್ರಸ್ತುತವೆನಿಸುತ್ತದೆ.

ಧರ್ಮದ ಸ್ವರೂಪ, ಅಜಮಿಳನ ದುಷ್ಕೃತ್ಯಗಳು,  ಅವುಗಳಿಂದಾದ ಪರಿಣಾಮಗಳು ಇನ್ನಿತರ ವಿಚಾರಗಳನ್ನು ಸವಿವರವಾಗಿ ಯಮಭಟ್ಟರು ತಮ್ಮ ವಾದದಲ್ಲಿ ಮಂಡಿಸುತ್ತಾರೆ.  ಅವರ ವಾದದಲ್ಲಿ ನಿಯತವಾಗಿ ತೋರುವ ವಸ್ತುವೆಂದರೆ ಮಾನವನ ನಿತ್ಯಜೀವನದಲ್ಲಿ ಸತ್ವ-ರಜ-ತಮಗಳೆಂಬ ತ್ರಿಗುಣಗಳ ಗಾಢ ಪ್ರಭಾವ.

ಸಂಭವಂತಿ ಹಿ ಭರ್ದ್ರಾಣಿ ವಿಪರೀತಾನಿ ಚಾನಘಾಃ

ಕಾರಿಣಾಂ ಗುಣಸಂಗೋಸ್ತಿ ದೇಹವಾನ್ನ ಹ್ಯಕರ್ಮಕೃತ್  ..೪೪

ಎಲೈ ಭದ್ರರೇ! ಕರ್ಮಗಳನ್ನು ಮಾಡುವ ಎಲ್ಲ ಜೀವರಿಗೂ ಗುಣಗಳ ಸಂಗ ತಪ್ಪದು. ಗುಣಗಳಿಂದಾಗಿ ಪಾಪ ಪುಣ್ಯಗಳು ಉಂಟಾಗುವವು. ಮಾನವ ಶರೀರಿಯಾದ ಯಾರಿಗೂ ಕರ್ಮದ ಹೊರತಾಗಿ  ಅನ್ಯಮಾರ್ಗವಿಲ್ಲ.

ಜೀವಿಯು ತನ್ನ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುವುದರ ಮಹತ್ವವೇನು ,  ತ್ರಿಗುಣಗಳು ಜೀವಾತ್ಮನ ಮೇಲೆ ಬೀರುವ ಪ್ರಭಾವವೇನು ಅದರ ಜಟಿಲತೆಗಳೇನು ಎಂಬೆಲ್ಲ ವಿಚಾರಗಳನ್ನು ಮನೋಜ್ಞವಾಗಿ ಯಮಭಟ್ಟರ ಮಾತುಗಳ ಮೂಲಕ ವಿವರಿಸಲಾಗಿದೆ.

ತೀರ್ಪು ನೀಡುವ ಸಲುವಾಗಿ ಅಜಮಿಳನನ್ನು ಯಮಲೋಕದಲ್ಲಿನ ಸಮ್ಯಮನಿ ಎಂಬ ಸ್ಥಳಕ್ಕೆ ಕರೆದೊಯ್ಯಬೇಕಾದ ಅನಿವಾರ್ಯತೆಯನ್ನು ಯಮಭಟ್ಟರು ಸಮರ್ಥಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವನ ಹುಟ್ಟು, ವಿದ್ಯಾಭ್ಯಾಸದ ವಿವರಗಳನ್ನು , ಅವನು ವೇದಪಾರಂಗತನಾಗಿರುವುದನ್ನೂ ಅವರು ಉದಾಹರಿಸುತ್ತಾರೆ.

ಆಕಸ್ಮಿಕ  ಘಟನೆಯೊಂದರ ಪ್ರಭಾವದಿಂದ ಅವನ ಜೀವನದ ಮಾರ್ಗವೇ ಬದಲಾಗಿ ದುಷ್ಕರ್ಮಗಳ ಹಾದಿ ಹಿಡಿಯುತ್ತಾನೆ.

ಇಲ್ಲಿ ಕೆಲವು ಪ್ರಮುಖಾಂಶಗಳನ್ನು ಗಮನಿಸುವುದು ಸೂಕ್ತ. ಜೀವನದಲ್ಲಿ ಒದಗಿದ ವಿಷಮ ಸನ್ನಿವೇಷವೊಂದರಲ್ಲಿ ಅಜಮಿಳನು ಕಲಿತ ವಿದ್ಯೆಯು ಅವನನ್ನು ದುರ್ಮಾರ್ಗದಿಂದ ತಪ್ಪಿಸಲಾಗಲಿಲ್ಲ. ಇದಕ್ಕೆ ಕಾರಣ  ಧೀ ಶಕ್ತಿಯ ಅಭಾವವೇ? ಪ್ರಾರಬ್ಧ ಕರ್ಮ, ಮಾಯೆಗಳ ಮಹಾಜಾಲವೇ ?

ಯಮಭಟ್ಟರು ತಮ್ಮ ವಾದವನ್ನು ಮಂಡಿಸಿ ಅಜಮಿಳನ ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯುವ ನಿರ್ಧಾರವನ್ನು ತಿಳಿಸುತ್ತಾರೆ.

ವಿಷ್ಣುದೂತರಾದರೋ ತಮ್ಮ ವಾದವನ್ನೂ ಅತ್ಯಂತ ಪರಿಣಾಮಕಾರಿಯಾಗಿ ಸವಿಸ್ತಾರವಾಗಿ ಮಂಡಿಸುತ್ತಾರೆ. ಈ ವಾದದ ಪೂರ್ವಭಾಗದಲ್ಲಿ ಸತ್ಪುರುಷನ ಸ್ವಭಾವ, ನಡತೆಗಳು ಹೇಗೆ ಸಮುದಾಯಕ್ಕೆ ಮಾದರಿಯಾಗಿ ಅನುಕರಣೀಯವಾಗಬಹುದು ಎಂದು ತಿಳಿಸುತ್ತಾರೆ.

ನಮ್ಮ ನಡತೆ,  ಸುತ್ತಮುತ್ತಲೂ ಇರುವ ಎಳೆಯ, ನಿರ್ವಿಕಾರ ಮನಸ್ಸುಗಳ ಮೇಲೆ ಗಾಢವಾದ ಪ್ರಭಾವ ಬೀರಿ, ಅವರ ಭವಿಷ್ಯಯದ ಮೇಲೆ  ನಿರ್ಣಾಯಕವಾದ ಪರಿಣಮಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ.  ಧರ್ಮಮಾರ್ಗ, ಸನ್ನಡತೆಯ ಮಹತ್ವವವನ್ನು ಇಲ್ಲಿನ ಕೆಲವು ಶ್ಲೋಕಗಳಲ್ಲಿ ವರ್ಣಿಸಲಾಗಿದೆ.

ವಿಷ್ಣುದತ್ತರ ಈ ವಿಚಾರಮಂಡನೆಯ ನಡುವೆ, ಮತ್ತೊಂದು ಪ್ರಶ್ನೆ ಎದುರಾಗುತ್ತದೆ.  ಯಾವುದೇ ಚ್ಯುತಿಯಿಲ್ಲದ ನಿಯಮಪಾಲನೆಯೇ ಸರಿಯಾದ ಮಾರ್ಗವೋ? ಇಲ್ಲವೆ, ನಿಯಮಗಳ ಚೌಕಟ್ಟನ್ನು ಮೀರಿದ ಸಾಂದರ್ಭಿಕ ಸತ್ಯವೇ ಪ್ರಬಲವಾಗಿ ತೋರುವ ಹರಹೊಂದು ಇದೆಯೋ? ಎಂಬುದು.

ಈ ವಾದದ ಪ್ರಮುಖ ವಿಚಾರವನ್ನು ವಿವರಿಸುತ್ತಾ ವಿಷ್ಣುದೂತರೇ ಈ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ –

ಅಯಂ ಹಿ ಕೃತನಿರ್ವೇಶೋ ಜನ್ಮಕೋಟ್ಯಂಹಸಾಮಪಿ

ಯದ್ ವ್ಯಾಜಹಾರ ವಿವಶೋ ನಾಮ ಸ್ವಸ್ಯಯನಂ ಹರೇಃ..

ಅಜಮಿಳನ ಜನ್ಮದ ಪಾಪಗಳಿಗಷ್ಟೇ ಅಲ್ಲ, ನಾರಯಣ ಎಂಬ ನಾಮವನ್ನು ಉಚ್ಚರಿಸಿದ ಪರಿಣಾಮ, ಅವನ ಜನ್ಮಕೋಟಿಗಳ ಪಾಪಗಳಿಗೆ ಪ್ರಾಯಶ್ಚಿತ್ತ ಉಂಟಾಗಿದೆಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ, ಆಕಸ್ಮಿಕವಾಗಿ ಮಾತ್ರವೇ ಆದರೂ, ಯಾವುದೇ ಕ್ಲೇಶವಿಲ್ಲದೇ ಮಾಡಿದುದರಿಂದ ನಾರಾಯಣನ ಪಾದಕಮಲವನ್ನು ಅಜಮಿಳನು ಹೊಂದಲರ್ಹನು.

ಯಾವ ಮೋಕ್ಷಪದವಿಗೆ ಮರ್ತ್ಯಮಾತ್ರರ ಸಹಸ್ರವರ್ಷಗಳ ತಪ್ಸ್ಸಾಧನೆಯ ಅಗತ್ಯವಿದೆಯೋ, ಅನಿರೀಕ್ಷಿತವಾಗಿ  ಆಡಿದ ತನ್ನ ಪುತ್ರನ ಹೆಸರೆಂಬ ಒಂದು ನುಡಿ ಅಜಮಿಳನ ಪಾಲಿಗೆ ಆ ಪದವಿಯ ಕ್ಷಿಪ್ರಪ್ರಾಪ್ತಿಗೆ ಕಾರಣವಾಯಿತು.

ನಾ-ರಾ-ಯ-ಣ ಎಂಬ ನಾಲ್ಕು ವರ್ಣಗಳಿಂದ ಕೂಡಿದ ನಾರಾಯಣ ನಾಮದ ವೈಶಿಷ್ಟ್ಯವನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾರೆ –

ಏತೇನೈವ ಹ್ಯಘೋನೋಸ್ಯ ಕೃತಂ ಸ್ಯಾದಘನಿಷ್ಕೃತಂ

ಯದಾ ನಾರಾಯಣಾಯೇತಿ ಜಗಾದ ಚತುರಕ್ಷರಮ್ ..

ತನ್ನ ಅಂತ್ಯಕಾಲಕ್ಕೆ ಮುನ್ನವೂ ಅಜಮಿಳನು ತನ್ನ ಪುತ್ರನನ್ನುನಾರಾಯಣಎಂದೇ ಸಂಬೋಧಿಸುತ್ತಿದ್ದನು. ತನ್ನ ಪುತ್ರನ  ನಾಮವನ್ನು ಉಚ್ಚರಿಸುತ್ತಿದ್ದನಾದರೂ ಭಗವನ್ನಾಮದ ಸರಿಯಾದ ಉಚ್ಚಾರಣೆಯಿಂದಾಗಿ ಅವನ ಹಿಂದಿನ ಕರ್ಮೆವೆಲ್ಲವೂ ನಾಶವಾದವು.

ಎಲ್ಲ ವಾದ-ವಿವಾದಗಳ ನಂತರ ವಿಷ್ಣುದೂತರ ವಾದಕ್ಕೇ ಜಯ ದೊರೆತು ಅಜಮಿಳನನ್ನು ವೈಕುಂಠಕ್ಕೆ ಕರೆದೊಯ್ಯುತ್ತಾರೆ. ಈ ಪ್ರಸಂಗದ ನಂತರ ಯಮ ಮತ್ತು ಅವನ ಭಟ್ಟರ ನಡುವೆ ನಡೆಯುವ ಸಂವಾದವೇ ಯಮಗೀತದ ಎರಡನೇ ಭಾಗವೆನಿಸುತ್ತದೆ.

ಯಮ ಗೀತ

ಯಮಭಟ್ಟರು, ತಮ್ಮ ಮತ್ತು ವಿಷ್ಣುದೂತರ ನಡುವೆ ನಡೆದ ವೃತ್ತಾಂತವನ್ನು ಯಮನಲ್ಲಿ ನಿವೇದಿಸುತ್ತಾರೆ. ಒಂದು ನಾಮಮಾತ್ರದ ಉಚ್ಚಾರಣೆಗೆ  ಯಮನ ಆದೇಶವನ್ನೇ ಮೀರಿ ನಿಲ್ಲುವ ಶಕ್ತಿ ಇರುವುದು ಹೇಗೆ ಎಂದು ಕುತೂಹಲ ವ್ಯಕ್ತಪಡಿಸುತ್ತಾರೆ. ಯಮಪಾಶವನ್ನು ಕಡಿದು ಅಜಮಿಳನನ್ನು ಕರೆದೊಯ್ದ ವಿಷ್ಣುದೂತರ ಸಾಮರ್ಥ್ಯದ ಹಿಂದಿರುವ ರಹಸ್ಯವನ್ನು ತಿಳಿಯಬಯಸುತ್ತಾರೆ.

ಯಮನು ಅವರ ಅನೇಕ ಪ್ರಶ್ನೆಗಳಿಗೆ ಮುಗುಳ್ನಗುತ್ತಲೇ ಉತ್ತರಿಸುತ್ತಾನೆ –

ಮೂರುಲೋಕಗಳ ಅಧಿಷ್ಠಾನವಾಗಿರುವ, ಬ್ರಹ್ಮ-ವಿಷ್ಣು-ಮಹೇಶ್ವರರ ಇರುವಿಕೆಗೆ ಕಾರಣವಾಗಿರುವ, ಸೃಷ್ಟಿ , ಸ್ಥಿತಿ, ಲಯಗಳ ನಿಯಾಮಕವಾದ,  ಎತ್ತಿನ ಮೂಗುದಾರವನ್ನು ಗಾಡಿಯ ಚಾಲಕ ನಿಗ್ರಹಿಸುವಂತೆ,  ನಮ್ಮೆಲ್ಲರನ್ನೂ ಮೀರಿದ ಪರಮ ತತ್ವವೊಂದಿದೆ.

ಪರೋ ಮದನ್ಯೋ ಜಗತಸ್ತಸ್ಥಷುಶ್ಚ

ಓತಂ ಪ್ರೋತಂ ಪಟವದ್ಯತ್ರ ವಿಶ್ವಂ

ಯದಂಶತೋಸ್ಯ ಸ್ಥಿತಿಜನ್ಮನಾಶಾ

ನಸ್ಯೋತವದ್ಯಸ್ಯ ವಶೋ ಲೋಕಃ ..೧೨

ಈ ಪರಮತತ್ವದ  ಸಾರ್ವಭೌಮತ್ವ ಸಂಪೂರ್ಣ ಸೃಷ್ಟಿಗೆ ಅನ್ವಿಯಿಸುತ್ತದೆಂದೂ ಕೇವಲ ಕೆಲವು ವಸ್ತುವಿಶೇಷಗಳಿಗೆ ಮಾತ್ರ ಸೀಮಿತವಲ್ಲವೆಂದೂ ಈ ಶ್ಲೋಕದಲ್ಲಿ ವಿವರಿಸುತ್ತಾನೆ.

ಅಹಂ ಮಹ್ಂದ್ರೋ ನಿಋತಿಃ ಪ್ರಚೇತಾಃ

ಸೋಮೋಗ್ನಿರೀಶಃ ಪವನೋ ವಿರಿಂಚಿಃ

ಆದಿತ್ಯವಿಶ್ವೇ ವಸವೋ ಸಾಧ್ಯಾ

ಮರುದ್ಗಣಾ ರುದ್ರಗಣಾಃ ಸಸಿದ್ಧಾಃ ..೧೪

ಅನ್ಯೇ ಯೇ ವಿಶ್ವಸೃಜೋಮರೇಶಾ

ಭೃಗವಾದಯೋಸ್ಪೃಷ್ಟರಜಸ್ತಮಸ್ಕಾಃ

ಯಸ್ಯೇಹಿತಂ ವಿದುಃ ಸ್ಪೃಷ್ಟಮಾಯಾಃ

ಸತ್ವಪ್ರಧಾನಾ ಅಪಿ ಕಿಂ ತತೋನ್ಯೇ ..೧೫

ಇಂದ್ರ, ನಿಋತಿ, ವರುಣ, ಚಂದ್ರ, ಅಗ್ನಿ, ಶಂಕರ, ವಾಯು, ಸೂರ್ಯ, ಬ್ರಹ್ಮ, ೧೨ ಆದಿತ್ಯರು, ವಿಶ್ವದೇವತೆಗಳು , ವಸುಗಳು, ೪೯ ಮರುದ್ಗಣ, ೧೧ ರುದ್ರರು, ಪ್ರಜಾಪತಿ ಮುಂತಾದುವೆಲ್ಲ ಭಗವಂತನ ಮಾಯೆಯ ಪ್ರಭಾವಕ್ಕೊಳಗಾಗಿದ್ದಾರೆ.

ಈ ಮೂಲಕ ಭಗವಂತನ ಸಾರ್ವಭೌಮತ್ವವನ್ನು ದೃಢಪಡಿಸುತ್ತಾನೆ.  ಮುಂದೆ ವಿವರಿಸುತ್ತಾ, ದೇವತೆಗಳಿಂದಲೂ ಪೂಜಿಸಲ್ಪಡುವ, ಮರ್ತ್ಯಮಾತ್ರರನ್ನು ಮೃತ್ಯುವಿನಿಂದ ರಕ್ಷಿಸುವ ವಿಷ್ಣುದೂತರ ಸ್ವರೂಪವನ್ನು ಸಾಮಾನ್ಯ ಮನುಷ್ಯರು ಸುಲಭವಾಗಿ ಗ್ರಹಿಸಲಾರರು ಎಂದು ತಿಳಿಸುತ್ತಾನೆ.

ಸಿದ್ಧರು, ಅಸುರರು, ಮಾನವರು, ಇವರು ಯಾರೂ ಮಹಾವಿಷ್ಣುವು ಪ್ರತಿಪಾದಿಸಿರುವ ಧರ್ಮದ ಸಿದ್ಧಾಂತವನ್ನು ಅರ್ಥೈಸಿಕೊಳ್ಳಲಾರರು.  ಈ ದಿವ್ಯವಾದ,  ಅತ್ಯಂತ ಪವಿತ್ರವಾದ,  ಅತ್ಯಂತ ರಹಸ್ಯಮಯವಾದ ಭಾಗವತ ಧರ್ಮವನ್ನು ಅರಿತಿರುವವರು ಸೃಷ್ಟಿಯಲ್ಲಿ ಕೇವಲ ೧೨  ಜೀವಿಗಳು.

ಸ್ವಯಂಭೂರ್ನಾರದಃ ಶಂಭುಃ ಕುಮಾರಃ ಕಪಿಲೋ ಮನುಃ

ಪ್ರಹ್ಲಾದೋ ಜನಕೋ ಭೀಷ್ಮೋ ಬಲಿರ್ವೈಯಾಸಕಿರ್ವಯಮ್ ..೨೦

ದ್ವಾದಶೈತೇವಿಜಾನೀಮೋ ಧರ್ಮಂ ಭಗವತಂ ಭಟಾಃ

ಗುಹ್ಯಂ ವಿಶುದ್ಧಂ ದುರ್ಬೋಧಂ ಯಂ ಜ್ಞಾತ್ವಾಮೃತಮಶ್ನುತೇ..೨೧

ಬ್ರಹ್ಮ, ನಾರದ, ಶಿವಸನತ್ಕುಮಾರರು, ಭಗವಾನ್ ಕಪಿಲ, ಸ್ವಾಯಂಭುವ ಮನು, ಪ್ರಹ್ಲಾದ, ಜನಕ, ಭೀಷ್ಮ, ಬಲಿ ಚಕ್ರವರ್ತಿ, ಶುಕಮುನಿ (ವ್ಯಾಸರ  ಪುತ್ರ) ಮತ್ತು ಸ್ವತಃ ಯಮ.

ಭಾಗವತ ಧರ್ಮವೆಂಬುದು ಸಾಮಾನ್ಯರಿಗೆ ದುರ್ಲಭವಾದದ್ದು. ಅದನ್ನು ಯಾರು  ತಿಳಿಯಬಲ್ಲರೋ  ಅವರಿಗೆ ಜನನ-ಮರಣಗಳ  ಬಂಧನದಿಂದ ಮೋಕ್ಷಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ.

ಅಂಥವರಿಗೆ, ಅಜಮಿಳನಂತೆ ಪಾಪಕರ್ಮಗಳನ್ನು ಮಾಡಿದ್ದರೂ ಹರಿನಾಮದ ಪ್ರಭಾವಮಾತ್ರದಿಂದಲೇ ಜನ್ಮ-ಮೃತ್ಯುಗಳ ವಿಷಮಚಕ್ರದಿಂದ ಮುಕ್ತಿ ದೊರೆಯುತ್ತದೆ.

ಅಚಲವಾದ, ದೃಢವಾದ  ಸಮರ್ಪಣಾಭಾವದಿಂದ ಭಕ್ತಿಮಾರ್ಗದಲ್ಲಿ ಸಾಗವುದರಿಂದ ಉಂಟಾಗುವ ಲಾಭಗಳನ್ನು ಯಮ ವಿವರಿಸುತ್ತಾನೆ. ಈ ಮಾರ್ಗದಲ್ಲಿ ನಡೆಯುವವರು ಒಂದು ವೇಳೆ ಪಾಪಕೃತ್ಯವನ್ನು ಮಾಡಿದರೂ ಅದರ  ಫಲವನ್ನು ತೊಡೆಯುಲು ಭಗವಂತನ ನಾಮವೊಂದೇ ಸಾಕು.

ಯಾರನ್ನು ಯಮಲೋಕಕ್ಕೆ ಕರೆತರಬೇಕು ಯಾರನ್ನಲ್ಲ  ಎಂಬ ಎಚ್ಚರಿಕೆಯನ್ನು  ಹಿಂದಿನ ಯಮಗೀತದಂತೆ ಇಲ್ಲಿಯೂ ಯಮ ತನ್ನ ಭಟ್ಟರಿಗೆ ನೀಡುತ್ತಾನೆ.

ಸದಾ ಭಗವಂತನ ನಾಮ ಸ್ಮರಣೆ ಮಾಡುತ್ತಾ ಅವನ ಲೀಲೆಗಳನ್ನು ಕೊಂಡಾಡುವ ಸದಾಚಾರಿಗಳು ಸಾತ್ವಿಕರು ಸಿದ್ಧರು ದೇವತೆಗಳು ಭಗವಂತನ ಕೃಪೆಯಿಂದ ಸುರಕ್ಷಿತವಾಗಿರುತ್ತಾರೆ. ಅಂಥವರಿಂದ ದೂರವಿರಿ.

  • ಭಗವನ್ನಾಮವನ್ನುಚ್ಚರಿಸದ
  • ಶ್ರೀಮನ್ನಾರಾಯಣನ ಪಾದಕಮಲಗಳನ್ನು ಧ್ಯಾನಿಸದ
  • ಶ್ರೀ ಕೃಷ್ಣನಿಗೆ ನಮಸ್ಕರಿಸದ
  • ಒಮ್ಮೆಯೂ ಮಹಾವಿಷ್ಣುವಿನ ಸೇವೆ ಮಾಡದ

ಜೀವಗಳನ್ನು ಎಳೆದು ತನ್ನಿ.

ತನ್ನ ಭಟ್ಟರು ವಿಷ್ಣುದೂತರನ್ನು ತಡೆದದ್ದು ಪಾಪಕರ್ಮವೆಂದು ಎಣಿಸಿದ ಯಮನು ಶ್ರೀಹರಿಯಲ್ಲಿ ಕ್ಷಮೆ ಯಾಚಿಸುತ್ತಾನೆ.

ಈ ರೀತಿಯಾಗಿ ಯಮಗೇತೆಯು ಜೀವನದಲ್ಲಿ ನಾವು ನಡೆದುಕೊಳ್ಳಬೇಕಾದ ರೀತಿಗೆ  ಮಾರ್ಗದರ್ಶಿಯಾಗಿದೆ. ಮೊದಲ ಭಾಗದಲ್ಲಿ ಆತ್ಮವಿಮರ್ಶೆ, ಅರಿಷಡ್ವರ್ಗಗಳ ಮೇಲೆ ನಿಗ್ರಹ ಇವುಗಳ ವಿಚಾರವಿದ್ದರೆ, ಎರಡನೆಯ ಭಾಗದಲ್ಲಿ ನಾಮಸಂಕೀರ್ತನೆಯ ಮಹತ್ವದ ವಿಚಾರವಿದೆ.

ಭಗವಂತನ ನಾಮಜಪದಲ್ಲಿ ಸದಾ ನಿರತನಾಗಿದ್ದು, ತನ್ನೊಳಗಿನ ದುರ್ಗುಣಗಳನ್ನು ನಿಗ್ರಹಿಸುವ ಜೀವಾತ್ಮನು ಶ್ರೀಮನ್ನಾರಾಯಣನ ಪಾದತಲದ ಪರಂಧಾಮವನ್ನು ಹೊಂದುವುದರಲ್ಲಿ ಸಂದೇಹವಿಲ್ಲ ಎಂಬುದೇ ಸಾರಾಂಶ.

ಗ್ರಂಥಸೂಚಿ

ದಿ ಪ್ರಿನ್ಸಿಪಲ್ ಉಪನಿಷದ್ಸ್ – ಪ್ರೊ. ಎಸ್. ರಾಧಾಕೃಷ್ಣನ್

ದಿ ಪ್ರಿನ್ಸಿಪಲ್ ಉಪನಿಷದ್ಸ್ – ಪ್ರೊ. ಕೆ. ಟಿ. ಪಾಂಡುರಂಗಿ

ಸೋಮೇಶ್ವರ ಶತಕ – ಕನ್ನಡ ಸಾಹಿತ್ಯ ಪರಿಷತ್

ಶ್ರೀಮದ್ಭಾಗವತ ಮಹಾಪುರಾಣಮ್ – ಗೀತಾ ಪ್ರೆಸ್

ಶ್ರೀಮದ್ಭಾಗವತ ಮಹಾಪುರಾಣಮ್ – ಗೀತಾ ಪ್ರೆಸ್ (ವಿಶೇಷ ಆವೃತ್ತಿ)

ಶ್ರೀಮದ್ಭಾಗವತಮ್  – ಕಮಲಾ ಸುಬ್ರಮಣಿಯಮ್

ವಿಷ್ಣಪುರಾಣ – ಭಾರತ ದರ್ಶನ ಪ್ರಕಾಶನ

ಶ್ರೀಮದ್ಭಾಗವತಮ್ ಶ್ಲೋಕಗಳು –

https://vedabase.io/en/library/sb/

(This is a Kannada translation of an English article by Ganesh Vijayan)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply