close logo

ಪುಸ್ತಕ ವಿಮರ್ಶೆ: Essays on Indic History  ಲೇಖಕ ವಿಜಯೇಂದ್ರ ಶರ್ಮ

ಶಾಲೆಯಲ್ಲಿ ಇತಿಹಾಸ ಓದುವಾಗ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು: ಒಂಟಿ  ಹರಪ್ಪಾ ನಗರವು ಯಾವುದೇ ಹಳ್ಳಿಗಳ ಆಧಾರವಿಲ್ಲದೇ, ದಿನ ನಿತ್ಯಾವಶ್ಯಕ ಸಾಮಾನುಗಳ ಸರಬರಾಜು ವ್ಯವಸ್ಥೆ ಇಲ್ಲದೇ ಹೇಗೆ ಇರಲು ಸಾಧ್ಯ? ಮೂರು ದಶಕಗಳ ನಂತರ, ಈ ಪುಸ್ತಕ ಓದಿದಾಗ ತಿಳಿದಿದ್ದೇನೆಂದರೆ ಹರಪ್ಪಾ ಒಂಟಿ ನಗರವಾಗಿರದೇ, ಲಕ್ಷಾಂತರ ಚದರ ಕಿ.ಮೀ ಹರಡಿದಂಥ ಪರಸ್ಪರಾವಲಂಬಿಸಿದಂಥ ಮಹಾನಗರ, ಉಪನಗರ, ಹಳ್ಳಿಗಳ ಸಮೂಹವಾದ ಸಿಂಧು-ಸರಸ್ವತಿ ಸಭ್ಯತೆಯ, ಒಂದು ಮಹಾನಗರವಾಗಿತ್ತಷ್ಟೆ. ಯಾರಿಗಾದರೂ ಇಂಥಹ ಪ್ರಶ್ನೆಗಳು ಕಾಡಿದ್ದರೆ ಅಥವಾ ಶಾಲೆಯಲ್ಲಿ  ಇತಿಹಾಸ ಓದಿಯೂ ಭಾರತದ ಇತಿಹಾಸದ ಸಮಗ್ರ ಚಿತ್ರಣವಾಗಿಲ್ಲ ಎಂದೆನ್ನಿಸುತ್ತಿದ್ದರೆ, ಈ ಪುಸ್ತಕ ಅವರಿಗೆ ಹೇಳಿಮಾಡಿಸಿದ್ದು.

ಲೇಖಕರ 34 ಪ್ರಬಂಧಗಳ ಈ ಸಂಕಲನವು, ಇತ್ತೀಚಿನ ಪುರಾತತ್ವ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಅಜ್ಞಾತ ಸಂಗತಿಗಳ ಸಹಾಯದಿಂದ ನಮ್ಮ ನಾಗರಿಕತೆಯ ಪ್ರಾಚೀನತೆಯ ಬಗ್ಗೆ, ಅದು ಸಾಧಿಸಿದ ವೈಜ್ಞಾನಿಕ, ತಾಂತ್ರಿಕ, ರಾಜಕೀಯ, ಸಾಮಾಜಿಕ ಪ್ರಗತಿಯ ಬಗ್ಗೆ, ತತ್ವಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಔಷಧ, ಕಲೆ, ವಿಜ್ಞ್ಯಾನ, ಕ್ಷೇತ್ರಗಳಲ್ಲಿ ವಿಶ್ವಕ್ಕೆ ಭಾರತದ ಕೊಡುಗೆ ಬಗ್ಗೆ ಸುಸಂಬದ್ಧವಾದ ಕಥೆಯನ್ನು ಹೆಣೆಯುವ ಪ್ರಯತ್ನವಾಗಿದೆ. ಅಧ್ಯಾಯಗಳನ್ನು ಪೂರ್ವ-ಐತಿಹಾಸಿಕ ಸಮಯದ ಮೆಹರ್ಘರ ಮತ್ತು ಭಿರ್ರಾನಾದ ಉತ್ಖನನಗಳನ್ನು ಚರ್ಚಿಸುವ ಟೇಲ್ ಆಫ್ ಟು ಸಿಟೀಸ್ ದಿಂದ ಹಿಡಿದು ಮಧ್ಯಯುಗದ ಆರಂಭದಲ್ಲಿ ಭಾರತದ ದ್ವಾರದಲ್ಲಿ ಇಸ್ಲಾಮಿಕ್ ಆಕ್ರಮಣಕಾರರ ಸಮಯದವರೆಗೆ ಹೊಂದಿಸಲಾಗಿದೆ.

ಸಾಮಾನ್ಯವಾಗಿ, ಇತಿಹಾಸವು ವಿವಿಧ ರಾಜ್ಯಾಗಳ ಮತ್ತು ರಾಜರ ವಂಶಾವಳಿಗಳ ಹಾಗೂ ಯುದ್ಧಗಳ ಕೇವಲ ಅನುಕ್ರಮಣಿಕೆ   ಅಥವಾ  ಕಾಲಾನುಕ್ರಮವಾಗಿ ಹೋಗಿದೆ. ನಾವು ಈ ರಾಜರ ವಂಶಾವಳಿಗಳ ಹಾಗು ಯುದ್ಧಗಳ ಆಚೆಗಿನ ಇತಿಹಾಸ ಅರಿಯಲು ಬಯಸುತ್ತೆೇವೆ, ಯುದ್ಧ ಮಾಡದ ಸಮಯದಲ್ಲಿ ಜನ ಏನು ಮಾಡುತ್ತಿದ್ದರು? ಜನರ ಜೀವನ ಶೈಲಿ ಹೇಗಿತ್ತು?ಭಾರತೀಯರಿಂದ ಸಮಾಜ ಜೀವನಕ್ಕೆ ಸಂದ ಲಾಭವೇನು? ಜಗತ್ತಿನ ಇತರೆ ಸಂಸ್ಕೃತಿಗಳು ಭಾರತೀಯ ಸಮಾಜ ಹಾಗೂ ಇಲ್ಲಿಯ ವೈವಿಧ್ಯತೆಗಳ ನ್ನು ಹೇಗೆ ನೋಡುತ್ತಿದ್ದವು? ನಮ್ಮ ಇತಿಹಾಸ ಗ್ರಂಥಗಳ ಒಂದು ರೇಗಿಸುವಂಥ ನ್ಯೂನತೆ – ಅವುಗಳ ದೆಹಲಿ ಕೇಂದ್ರಿತ ಅಥವಾ ಉತ್ತರ ಭಾರತ ಕೇಂದ್ರಿತ ನಿರೂಪಣೆ. ಆದರೆ ಈ ಪುಸ್ತಕವು ಮಾತ್ರ ದೇಶದ ಇತರೇ ಭಾಗಗಳಿಗೂ ಪ್ರಾಧಾನ್ಯತೆ ಕೊಡುವ ಪ್ರಯತ್ನ ಮಾಡಿದೆ ಎನ್ನಬಹುದು.

ಸಂಕಲನದಲ್ಲಿ ಚಿತ್ರಿಸಲ್ಪಟ್ಟ ವಿಷಯಗಳ ಸಂಕ್ಷಿಪ್ತಮಾಹಿತಿ ಕೊಡುತ್ತೇನೆ. ಭಾರತದ ನವಶಿಲಾಯುಗದ ಸಭ್ಯತೆಯ ಅತ್ಯಂತ ಪುರಾತನ ಕ್ಷೇತ್ರಗಳಾದ ಮೆಹರ್ಘರ ಮತ್ತು ಭಿರ್ರಾನಾ ನಗರಗಳ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿ. ಇಲ್ಲಿಯವರೆಗೂ ತಿಳಿದಿರುವ 3741 ಕ್ಷೇತ್ರಗಳಲ್ಲಿ 2378  ಕ್ಷೇತ್ರಗಳು ಸರಸ್ವತಿ ನದಿದಡದಲ್ಲಿ ಸಿಕ್ಕಿದರಿಂದ ಈ ನಾಗರಿಕತೆಯನ್ನು ಸಿಂಧು-ಸರಸ್ವತಿ ನಾಗರಿಕತೆಯೆಂದೇ ಉಲ್ಲೇಖಿಸುವುದು ಸರಿಯಲ್ಲವೇ? ಸಿಂಧು-ಸರಸ್ವತಿ ಸಭ್ಯತೆಯು ನಗರ ಯೋಜನೆ, ಕಟ್ಟಡ ನಿರ್ಮಾಣ, ಸ್ಥಾಪತ್ಯಕಲೆ, ಚರಂಡಿ ವ್ಯವಸ್ಥೆ, ನೀರು ಸರಬರಾಜು, ರಸ್ತೆ ನಿರ್ಮಾಣ ಮುಂತಾದ ತಂತ್ರಾಜ್ಞಾನ, ವಿಜ್ಞಾನ, ಅಭಿಯಾಂತ್ರಿಕ ಕ್ಷೇತ್ರಗಳಲ್ಲಿ ಸಾಧಿಸಿದ ಮುನ್ನಡೆ. ಧೊಲವಿರ ಬಂದರು ನಿರ್ಮಾಣ, ನೀರು ಸಂರಕ್ಷಣಾ ಮತ್ತು ಕಾಲುವೆ ವ್ಯವಸ್ಥೆ, ಲೊಥಾಲದ ನೌಕಾಂಗಣ, ಮೊಹಿಂಜೊದಾರೊದ ಬೃಹತ್ ಸ್ನಾನದತೊಟ್ಟಿ, ಕಪ್ಪೆಚಿಪ್ಪು, ಪಚ್ಚೆ, ತಾಮ್ರ  ಇತ್ಯಾದಿಗಳಿಂದ ಮಾಡಿದಮಣಿಗಳು, ವ್ಯಾಪಕವಾದ ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳು, ಇತ್ಯಾದಿ!  ಸಿಂಧೂ-ಸರಸ್ವತಿ ನಾಗರಿಕತೆಯಲ್ಲಿ ಆಡಳಿತ ವ್ಯವಸ್ಥೆ ಯಾವುದಿತ್ತು?  ಪ್ರಜಾಪ್ರಭುತ್ವವೋ ಅಥವಾ ರಾಜಪ್ರಭುತ್ವವೋ? ಸಣ್ಣ ಸಣ್ಣ ರಾಜ್ಯಗಳಿದ್ದವೇ ಅಥವಾ ಒಂದು ದೊಡ್ಡ ಸಾಮ್ರಾಜ್ಯವಿತ್ತೇ? ಇತ್ಯಾದಿ ಪ್ರಶ್ನೆಗಳನ್ನು ಪ್ರೇರೆಪಿಸುತ್ತದೆ.

ಇಂತಹ ಮುಂದುವರೆದ ನಾಗರಿಕತೆಯು ಹೇಗೆ ನಶಿಸಿತೆನ್ನುವದೇ ಒಂದು ಯಕ್ಷಪ್ರಶ್ನೆ?  ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಹೇಳಿರುವಂತೆ ಆರ್ಯರ ಆಕ್ರಮಣ ಅಥವಾ ಆರ್ಯರ ವಲಸೆ ಏನಾದರೂ ಇದಕ್ಕೆ ಕಾರಣವೇ? ಆದರೆ ಪುರಾತತ್ವ ಹಾಗೂ ಪ್ರಾಚೀನ ವಸ್ತುಗಳ ಮತ್ತು ಅವಶೇಷಗಳ ಅಧ್ಯಯನ, ವೈಜ್ಞಾನಿಕ ಹವಾಮಾನ ಮತ್ತು ಇತರೆ ಸಾಕ್ಷ್ಯಾಧಾರಗಳ ಅಧ್ಯಯನ ಒಂದು ಬೇರೆಯೇ ಕಥೆ ಹೇಳುತ್ತದೆ. ಪ್ರಾಕೃತಿಕ ಬದಲಾವಣೆಗಳು, ಮಾನ್ಸೂನಿನ ಬದಲಾವಣೆಗಳು ಹಾಗೂ ಸರಸ್ವತಿ ನದಿಯ  ಬತ್ತುವಿಕೆಯ ಕಾರಣದಿಂದ, ಸರಸ್ವತಿ ನಾಗರಿಕತೆಯ ಜನರು  ಪೂರ್ವಕ್ಕೆ (ಗಂಗಾ-ಯಮುನಾ  ಜಲಾನಯನ ಪ್ರದೇಶಕ್ಕೆ) ಸ್ಥಾನಾಂತರ ಮಾಡಿದ್ದರಿಂದ ಈ ನಾಗರಿಕತೆಯ ಕೊನೆಯಾಯಿತೆ ಹೊರತು ಆರ್ಯರ ಆಕ್ರಮಣ ಅಥವಾ ವಲಸೆಯಿಂದಲ್ಲ.  ಸಿಂಧೂ-ಸರಸ್ವತಿ ನಾಗರಿಕತೆಯ ಕೆಲವೊಂದು ಪದ್ಧತಿಗಳು / ಅಭ್ಯಾಸಗಳು ಈಗಲೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ, ಉದಾಹರಣೆಗೆ ಯೋಗದ ಪದ್ಮಾಸನಡೆಲ್ಲಿ ಕೂತುಕೊಳ್ಳುವ ಶೈಲಿ,  ಹಬ್ಬಗಳಲ್ಲಿ ಸ್ನಾನದ ಮಹತ್ವ, ಆಟದ ದಾಳಗಳು, ಶಿವಲಿಂಗ / ಯೋನಿಲಿಂಗ ಪೂಜೆ, ಅಗ್ನಿಪೂಜೆ ಆಚರಣೆಗಳು ( fire rituals) .

ಒಂದು ಪ್ರಬಂಧದಲ್ಲಿ ಶ್ರುತಿಗಳ ಕಾಲ ನಿರ್ಣಯದ ಬಗ್ಗೆ ಚರ್ಚಿಸಿ , ಋಗ್ವೇದದ ಕಾಲವು 2000 BCE ಗಿಂತಲೂ  ಪೂರ್ವ ದಾಗಿದೆ ಎಂದು  ಮನವರಿಕೆ ಮಾಡಿಕೊಡುತ್ತದೆ.  ಅದೇ ಸಮಯದಲ್ಲಿ, ದಕ್ಷಿಣ ಭಾರತವು ಶಿಲಾಯುಗದಿಂದ ಕಬ್ಬಿಣದ ಯುಗಕ್ಕೆ ಜಿಗಿಯಿತು (ಕಂಚಿನ ಯುಗವನ್ನು ದಾಟಿ).  ಸಾಹಿತ್ತಿಕ ಸಾಕ್ಷಾಧಾರಗಳು ದಕ್ಷಿಣ ಭಾರತದಲ್ಲಿ ಒಂದು ಸುಭಿಕ್ಷ ಹಾಗೂ ವಿಕಸಿತ ನಾಗರಿಕತೆಯು  ಇತ್ತೆಂದು  ತೋರಿಸುತ್ತವೆ. ಈ ನಾಗರಿಕತೆಯು ಉತ್ತಮ ನಗರ ಯೋಜನೆ, ಗೃಹ ನಿರ್ಮಾಣಗಳುಳ್ಳ  ನಗರಗಳನ್ನೂ,  ದೇಶೀಯ ಮತ್ತು ಅಂತರಾಷ್ಟ್ರೀಯ ವ್ಯಾಪಾರ-ವಾಣಿಜ್ಯ,  ಕಡಲ ವ್ಯಾಪಾರ ಹೊಂದಿತ್ತೆಂದೂ ತಿಳಿಯುತ್ತದೆ.  ಆದರೆ ವ್ಯಾಪಕವಾದ ಉತ್ಖನನಗಳು ನಡೆಯದೇ ಇರುವುದರಿಂದ ನಮ್ಮ ನಾಗರಿಕತೆಯ  ಈ ಭಾಗಗಳ ಬಗ್ಗೆ ಹೆಚ್ಚುತಿಳಿದಿರುವುದಿಲ್ಲ.  ಆದ್ದರಿಂದ ಇನ್ನೂ ವ್ಯಾಪಕವಾದ ಉತ್ಖನನ ಕಾರ್ಯಗಳು ನಡೆಯುವ ಅವಶ್ಯಕತೆ ಇದೆ.

ತದನಂತರ, ಉತ್ತರ-ಪಶ್ಚಿಮದ ಹಿಂದೂಕುಶ ಪರ್ವತದಿಂದ  ಪೂರ್ವದ ತಾಮ್ರಲಿಪ್ತಿಯವರೆಗೂ 16 ಮಹಾಜನಪದಗಳು ವ್ಯಾಪ್ತಿಗೊಂಡು, ಆ ಕಾಲದಲ್ಲಿ ಭಾರತೀಯ ಉಪಖಂಡದೊಳಗೆ ಬೃಹತ್ ವ್ಯಾಪಾರ  ಜಾಲ ಬೆಳೆದು ನಿಂತಿತು. ಭಾರತದ ಪಶ್ಚಿಮ, ದಕ್ಷಿಣ ಹಾಗೂ ಪೂರ್ವ ಸಮುದ್ರ ತಟಗಳಲ್ಲಿ ಬಂದರು ನಗರಗಳು ಸ್ಥಾಪನೆಗೊಂಡಿದ್ದು ಅವುಗಳ ಮುಖಾಂತರ  ಈಜಿಪ್ಟ್, ಮೆಸೊಪೊಟೇಮಿಯ ಹಾಗೂ  ದಕ್ಷಿಣಪೂರ್ವ ಏಶಿಯಾ ( ಸುವರ್ಣ ಭೂಮಿ) ಮತ್ತು ಚೀನಾಗಳ  ಜೊತೆ  ಕಡಲ ವ್ಯಾಪಾರ ಹೇರಳವಾಗಿ ನಡೆಯುತ್ತಿತ್ತು.

ಮಹಾಜನಪದಗಳ ಕಾಲದಲ್ಲಿಯೇ ಗ್ರೀಕರ ( ಸಿಕಂದರನ) ಆಕ್ರಮಣವಾಯಿತು,   ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿರುವ (ಇಂದಿನ ಪಾಕಿಸ್ತಾನ ಮತ್ತು ಅಫಗಾನಿಸ್ತಾನ) ಮಹಾಜನಪದಗಳು ಗ್ರೀಕರಿಗೆ ಸೋತುಹೋದವು, ಆದರೆ  ವೀರ ಪರ್ವತರಾಜನು ಘನಘೋರ ಯುದ್ಧಮಾಡಿ ವಿಜಯ ಸಾಧಿಸಿದನು.  ಇದರಿಂದಾಗಿ ಮತ್ತು ಇನ್ನಿತರ ಕಾರಣಗಳಿಂದಾಗಿ ಗ್ರೀಕರು ಭಾರತದಿಂದ ನಿರ್ಗಮನ ಹೊಂದಿದರು.  ಗ್ರೀಕರ ನಿರ್ಗಮನದ ನಂತರ ಭಾರತದ ರಾಜಕೀಯದಲ್ಲಿ ಆದ ಬದಲಾವಣೆಯೇ,  ಮೌರ್ಯ ಸಾಮ್ರಾಜ್ಯದ ಉದ್ಭವ. ಸಿಕಂದರನ ಜೊತೆ ಮತ್ತು ನಂತರ ಬಂದ ಗ್ರೀಕ್ ಚರಿತ್ರೆಕಾರರು ಭಾರತದ ಬಗ್ಗೆ ಬರೆದಿರುವ ಚಿತ್ರಣ,  ಇವೆಲ್ಲವನ್ನೂ  ಗ್ರಂಥವು  ಸುರಳೀತವಾಗಿ ವರ್ಣಿಸಿದೆ.

ವ್ಯಾಪಾರ ಮತ್ತು ವಾಣಿಜ್ಯದ ಮೇಲೆ ಇರುವ ಪ್ರಬಂಧಗಳಲ್ಲಿ ಮಾನ್ಸೂನ್ ವ್ಯಾಪಾರ ಮಾರ್ಗಗಳು ( monsoon trade routes), ಮಾನ್ಸೂನ್ ಸಹಾಯದಿಂದ ಕಡಲ ಸಂಚರಣೆ, ನದಿ ಜಲಮಾರ್ಗಗಳ ಮೇಲಿನ ವಾಣಿಜ್ಯ-ವ್ಯಾಪಾರ, ವ್ಯಾಪಾರ-ವಾಣಿಜ್ಯದ ಪ್ರಭಾವದಿಂದ ಉಂಟಾದ ಸಮ್ಮಿಳಿತ ಸಂಸ್ಕೃತಿ, ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲುತ್ತದೆ.  ಇವಲ್ಲದೇ, ದಕ್ಷಿಣಪೂರ್ವ ಏಷ್ಯಾದಲ್ಲಿ ಭಾರತದ ವಸಾಹತುಗಳು, ಅಲ್ಲಿ ಕೌಂಡಿನ್ಯ ವಂಶದ  ರಾಜ್ಯಸ್ಥಾಪನೆ, ಚೀನದಿಂದ ರೋಮ (ಇಟಲಿದೇಶ)ದವರೆಗೂ ಹಬ್ಬಿದ ವಾಣಿಜ್ಯದ ಹಿಂದೆ ಇರುವ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಸಮುದ್ರತಟವರ್ತಿಯ ಭಾರತೀಯರ ಸಾಹಸ ಮತ್ತು ಉದ್ಯಮ, ಭೂಮಿಯ ಅರ್ಧಭಾಗದಷ್ಟು ಪ್ರದೇಶಗಳಿಗೆ ಭಾರತದ ಉತ್ಪನ್ನಗಳನ್ನು ಹಾಗೂ ಸಂಸ್ಕೃತಿಯನ್ನು ತಲುಪಿಸಿದ ಕಳಿಂಗ ಮತ್ತು ಮುಝಿರಿಸ್ ನಾವಿಕರ ಕೆಚ್ಚೆದೆಯ ಸಾಹಸ ಕಾರ್ಯದ ವರ್ಣನೆ ಇರುತ್ತದೆ.  ಈ ಮಧ್ಯೆ, ಮೌರ್ಯನಂತರ ಕಾಲದಲ್ಲಿ ಕುಶಾನ, ಶಕ,  ಪಹ್ಲಾವರ  ಆಳ್ವಿಕೆಯಲ್ಲಿ ವಾಯುವ್ಯದಲ್ಲಿ ರೇಷ್ಮೆ-ವ್ಯಾಪಾರ ರಸ್ತೆಗಳು (silk routes), ಸಾರಿಗೆ-ವ್ಯಾಪಾರ-ವಾಣಿಜ್ಯ ಕೇಂದ್ರಗಳು ಬೆಳೆದವು,  ಇವೆಲ್ಲವೂ  ಆರ್ಥಿಕ ಜೀವನವಷ್ಟೇ ಅಲ್ಲದೆ ಸಾಮಾಜಿಕ ಸಾಂಸ್ಕೃತಿಕ-ಧಾರ್ಮಿಕ ಜೀವನ, ಸ್ಥಾಪತ್ಯಕಲೆ,  ಪ್ರತಿಮಾಶಾಸ್ತ್ರ ಇತ್ಯಾದಿಗಳ ಮೇಲೆ ಅಪಾರ ಪ್ರಭಾವ ಬೀರಿದವು.

ಅದೇ ಕಾಲದಲ್ಲಿ  ವಿಂಧ್ಯ ಪರ್ವತದ ದಕ್ಷಿಣದಲ್ಲಿ ಶಾತವಾನರ ಸಾಮ್ರಾಜ್ಯವು ಬೆಳೆದಿದ್ದು, ಅಂತರರಾಷ್ಟ್ರೀಯ ವಾಣಿಜ್ಯ ಬೆಳೆಸಲು ಗುಜರಾತಿನ ಭರೂಚ್ ಹಾಗೂ ಆಂಧ್ರದ ಮಚಲೀಪಟ್ಟಣಂ ಎಂಬಲ್ಲಿ ಬಂದರುಗಳ ನಿರ್ಮಾಣ ಮಾಡಿದರು. ನಾನೇಘಾಟ್ ಶಿಲಾಶಾಸನ, ರಾಬಾತಕ ಮತ್ತು ರೇಹ ಶಿಲಾಶಾಸನ ಮುಂತಾದವುಗಳಿಂದ ಈ ಕಾಲದಲ್ಲಿ ವೈದಿಕ ಆಚರಣೆಗಳು, ಪೌರಾಣಿಕ ದೇವತೆಗಳು   ಪುನ:ಪ್ರಸಿದ್ಧಿ ಗೊಂಡಿದ್ದು ತಿಳಿಯುತ್ತದೆ. ಕೌಶಾಂಬಿಯ (UP) ಅರಮನೆ ಸಂಕೀರ್ಣದ ಉತ್ಖನನದಲ್ಲಿ ಕುಶಾನರ ಕಾಲದ ಅಂಡಾಕಾರದ ಗುಮ್ಮಟಗಳು (Elliptical domes)ಇದ್ದದ್ದು ಕಂಡುಬಂದಿದ್ದು, ಗುಮ್ಮಟಗಳು ಇಸ್ಲಾಮಿಯರ ಆಕ್ರಮಣಕಿಂತ ಮೊದಲಿನಿಂದಲೂ ಭಾರತದಲ್ಲಿ ಅಸ್ತಿತ್ವದಲ್ಲಿದ್ದವು ಎಂದು  ರುಜು ವಾಗುತ್ತದೆ.

ನಾಟ್ಯಕಲೆ, ವೈದ್ಯಕೀಯ-ಔಷಧಶಾಸ್ತ್ರ (ಆಯುರ್ವೇದ), ಗಣಿತ, ಖಗೋಳಶಾಸ್ತ್ರ, ತತ್ವಜ್ಞಾನ, ಭಾಷೆ ಮತ್ತು ಜ್ವಿಜ್ಞಾನ  ಕ್ಷೇತ್ರಗಳಲ್ಲಿ ಭಾರತದ ಕೊಡುಗೆಯ ಬಗ್ಗೆ ಇರುವ ಪ್ರಬಂಧಗಳು ಅತ್ಯಂತ  ಆನಂದದಾಯಕವಾದವು. ಸಂಕ್ಷಿಪ್ತ ಹಾಗೂ ಸುಂದರ ರೀತಿಯಲ್ಲಿ ಭರತಮುನಿ ವಿರಚಿತ ನಾಟ್ಯಶಾಸ್ತ್ರ (500 BCE), ಚರಕ ಸಂಹಿತ(400BCE),  ಸುಶೃತ ಸಂಹಿತ, ಋಗ್ವೇದದಲ್ಲಿ ಬರುವಂತಹ ಕಾಲಗಣನೆ ನಕ್ಷತ್ರಗಳ ಗುರುತಿಸುವಿಕೆ ಹಾಗೂ ವರ್ಣನೆ,  ಶತಪಥ-ಬ್ರಾಹ್ಮಣದಲ್ಲಿ ಬರುವಂತಹ ಜ್ಯಾಮಿತಿ, ವರಾಹಮಿಹಿರ ವಿರಚಿತ ಬೃಹತ್ ಸಂಹಿತೆಯಲ್ಲಿ ಬರುವಂತಹ ರಾಶಿಚಕ್ರ, ನಕ್ಷತ್ರ, ಧೂಮಕೇತು ಮುಂತಾದ ಬಾಹ್ಯಾಕಾಶ ಕಾಯಗಳ ಹೆಸರು ಗುಣ- ಪರಿಚಯ ಮತ್ತು ಅವುಗಳ ಚಲನದ ವಿವರಣೆಗಳು, ಸೂರ್ಯ ಸಿದ್ಧಾಂತ ದಲ್ಲಿ ಬರುವ ಗ್ರಹಗಳ ಆಕಾರ,  ಕಕ್ಷೆಗಳಲ್ಲಿ ಚಲನೆಯನ್ನು ಅಳೆಯಲು ತ್ರಿಕೋನಮಿತಿಯ (trigonometry) ಉಪಯೋಗ, (ಸಮಯ ವಲಯಗಳನ್ನು ಗುರುತಿಸಿದ ಪ್ರಥಮ ಗ್ರಂಥ ಇದಾಗಿದೆ), ಬೀಜಗಣಿತ ಸಮೀಕರಣಗಳು,  ಪೈ (pi) ಮೌಲ್ಯವನ್ನು ಅಂದಾಜಿಸುವುದು, ಮುಂತಾದವುಗಳ ಬಗ್ಗೆ ಅತ್ಯಂತ ಮನೋಜ್ಞವಾಗಿ ಚರ್ಚೆ ಮಾಡಲಾಗಿದೆ.

ಭಾರತೀಯ ಪುರಾತತ್ವದ ಅತ್ಯಂತ ಮಹತ್ವದ ಶೋಧವಾದ ಬಖ್ಶಾಲಿ ಹಸ್ತಪ್ರತಿಯು (Bakhshali manuscript) ಕ್ರಿಶ 1881 ರಲ್ಲಿ ದೊರೆಯಿತು. ಈ ಹಸ್ತಪ್ರತಿಯು ಕ್ರಿಶ ಮೂರನೆಯ  ಶತಮಾನದ್ದಾಗಿದ್ದು, ಶೂನ್ಯದ (zero) ಉಲ್ಲೇಖವಿರುವ ಜಗತ್ತಿನ ಅತ್ಯಂತ ಪುರಾತನ ಕೃತಿಯಾಗಿದೆ. ಸೂರ್ಯಸಿದ್ಧಾಂತ ಹಾಗೂ ಆರ್ಯಭಟೀಯಗಳು  ಶತಕೋಟಿವರೆಗೂ ಸಂಖ್ಯೆಗಳನ್ನು ಗಣನೆ ಮಾಡುತ್ತವೆ, ಯಾವುದೇ ನಾಗರೀಕತೆಯಲ್ಲಿ ಅಂದಿನ ಸಮಯದಲ್ಲಿ ದೊಡ್ಡ ಸಂಖ್ಯೆಗಳ ಕಲ್ಪನೆ ಇದ್ದಿರಲಿಲ್ಲವೆಂದು ಹೇಳಬಹುದು. ಪಾಣಿನಿಯ ಅಷ್ಟಾಧ್ಯಾಯಿ, ವ್ಯಾಕರಣದ ನಿಯಮಗಳನ್ನು ಬರೆದಿಟ್ಟ ಜಗತ್ತಿನ ಮೊದಲನೇ ಕೃತಿಯಾಗಿದೆ,  ಇದು ಪ್ರಪಂಚದ ಮೊದಲನೇ ಕೃತ್ರಿಮ ಭಾಷೆಯಾಗಿದ್ದು ಕಂಪ್ಯೂಟರ್ ಲ್ಯಾಂಗ್ವೇಜ್  ಬರೆಯಲು ಸೂಕ್ತವೂ ಆಗಿದೆ.

ಬಹುಶಃ, ತತ್ವಶಾಸ್ತ್ರ ಕ್ಷೇತ್ರಕ್ಕೆ ಭಾರತ ನೀಡಿದ ಅಪ್ರತಿಮ ಕೊಡುಗೆಯೆಂದರೆ ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳುವಂತ  ಸಂಪ್ರದಾಯ.  ಋಗ್ವೇದದ ನಾಸದೀಯ ಸೂಕ್ತವು (10: 129), ಸತ್ಯವನ್ನು ಅರಿಯುವಂತಹ  ಸಾಮರ್ಥ್ಯವು ಆ ಸರ್ವೋಚ್ಚ ಶಕ್ತಿಗೆ ಅಥವಾ ಬ್ರಹ್ಮನಿಗೆ  ಕೂಡ ಇದೆಯೋ ಇಲ್ಲವೋ ಎಂದು ಪ್ರಶ್ನಿಸುತ್ತದೆ.  ಸತ್ಯವನ್ನು ತಿಳಿಯುವ ಈ ಶಾಶ್ವತ ಅನ್ವೇಷಣೆಯೇ,  ನ್ಯಾಯ ವೈಶೇಷಿಕ ಸಾಂಖ್ಯ ವೇದಾಂತ ಬೌದ್ಧ, ಜೈನ ಚಾರ್ವಾಕ ಮುಂತಾದ  ತತ್ವಜ್ಞಾನ ಅಥವಾ ಶಾಸ್ತ್ರ ದರ್ಶನಗಳ ಉಗಮಕ್ಕೆ ಕಾರಣವಾಗಿದೆ.

ಫಾಹಿಯಾನ್ ಮತ್ತು ಹ್ಯುಎಂತ್ಸ್ಯಾಂಗ ಎಂಬ ಇಬ್ಬರು ವಿದೇಶಿ ತೀರ್ಥಯಾತ್ರಿಗಳು ಭಾರತದ ಉದ್ದಗಲಕ್ಕೂ ಸಂಚಾರ ಮಾಡಿ ಬರೆದಿಟ್ಟಿರುವ ಕಥನಗಳು ಅಂದಿನ ಸಾಮ್ರಾಜ್ಯಗಳು, ರಾಜರು, ಆಡಳಿತ ವ್ಯವಸ್ಥೆ, ವೈಭವೋಪೇತ ಸಮಾಜ ಜೀವನ, ಸಂಸ್ಕೃತಿ,  ಸರ್ವಧರ್ಮ ಸಮಭಾವ, ಮುಂತಾದವುಗಳ ಚಿತ್ರಣ ನೀಡುತ್ತವೆ. ದಕ್ಷಿಣ ಭಾರತದಲ್ಲಿ ಕದಂಬರು ಪಲ್ಲವರು ಮತ್ತು ಚಾಲುಕ್ಯರ ಸಾಮ್ರಾಜ್ಯಗಳ ಪ್ರಜಾ ರಂಜಕ ಆಡಳಿತ, ಸಮಾಜವ್ಯವಸ್ಥೆ, ಪ್ರಾದೇಶಿಕ ಭಾಷೆ ಮತ್ತು ಲಿಪಿಗಳ ಬೆಳವಣಿಗೆಯಾಗಿದ್ದು, ರಾಜರುಗಳು ವೈದಿಕ ಆಚರಣೆಗಳು,  ಪೌರಾಣಿಕ, ಜೈನ ಮತ್ತು ಬೌದ್ಧ  ಧರ್ಮಗಳಿಗೆ ಸಮಾನಾಂತರ ಪೋಷಣೆ ನೀಡಿರುವ ಬಗ್ಗೆ ತಿಳಿಯುತ್ತದೆ.  ಈ ಪ್ರಬಂಧವನ್ನು ಓದಿದಾಗ, ಲೇಖಕರು  ಅವಸರವಸರವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೇನೋ ಭಾವನೆ ಬರುತ್ತದೆ. ಕದಂಬ, ಪಲ್ಲವ, ಚಾಲುಕ್ಯ ಸಾಮ್ರಾಜ್ಯದ ಕಾಲದಲ್ಲಿ ಭಾಷೆ,  ಸಂಸ್ಕೃತಿ, ಶಿಲ್ಪಕಲೆ,  ಸ್ಥಾಪತ್ಯ ವಿಜ್ಞಾನ ಕ್ಷೇತ್ರದಲ್ಲಿ ನಡೆದ ಬೆಳವಣಿಗೆಗಳ ಉಚಿತ ಹಾಗೂ ಪರ್ಯಾಪ್ತ ಚರ್ಚೆಯಾಗಿಲ್ಲ ಎಂದನಿಸುತ್ತದೆ.

ಇದೇ ಸಮಯದಲ್ಲಿ ನರ್ಮದೆಯ ಉತ್ತರಕ್ಕೆ ಭಾರತದ ಉದ್ದಗಲಕ್ಕೂ ತನ್ನ ಸಾಮ್ರಾಜ್ಯವನ್ನು ಬೆಳೆಸಿದ ಹರ್ಷವರ್ಧನನು ಕಾನ್ಯಕುಬ್ಜ (ಕನ್ನೌಜ UP) ರಾಜಧಾನಿಯನ್ನಾಗಿ ಮಾಡಿಕೊಂಡು  ಅದೇ ರೀತಿಯಾಗಿ ಪ್ರಜಾ ರಂಜಕ ಆಡಳಿತ  ಮತ್ತು ಸರ್ವಧರ್ಮ ಸಮಭಾವವನ್ನು ತೋರುತ್ತಾ ರಾಜ್ಯವಾಳುತ್ತಿದ್ದನು.  ಹೀಗಾಗಿ ಪ್ರಾಚೀನಕಾಲದಿಂದಲೂ ನಡೆದು ಬಂದಂತ ಸಮ್ಮಿಳಿತ ಸಂಸ್ಕೃತಿ ಇನ್ನಷ್ಟು ಬಲಗೊಂಡಿತು ಎನ್ನಬಹುದು.

ಹೊಸ ಉತ್ಖನನದ ಶೋಧಗಳು ಮತ್ತು ನವೀನ ತಂತ್ರಜ್ಞಾನದ ಉಪಯೋಗದಿಂದ ತಿಳಿಯಲ್ಪಡುವ ತಥ್ಯಗಳು, ಸಾಕ್ಷ್ಯಾಧಾರಗಳು, ನಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಘಟನೆಗಳು ಐತಿಹಾಸಿಕವಾದವು ಎಂದು ಸೂಚಿಸುತ್ತವೆ  ಹಾಗೆಯೇ ನಾವೇನು ಕೆಲವು ಐತಿಹಾಸಿಕ ಸತ್ಯಗಳೆಂದು ನಂಬಿದ್ದೆವೋ ಅವುಗಳು ಆಧಾರರಹಿತವೆಂದೂ ಮತ್ತು ನಾವು ಯಾವುವನ್ನು ದಂತಕಥೆಗಳೆಂದು ತಿಳಿದಿದ್ದೆವೋ ಅವುಗಳಲ್ಲಿಯೂ ಸತ್ಯಾಂಶವಿರುವುದು ಗೋಚರವಾಗುತ್ತದೆ. ಇತಿಹಾಸವು ಸಜೀವವಾಗಿದ್ದು, ಚಲನಶೀಲವಾಗಿದ್ದು ಕಾಲಕಾಲಕ್ಕೆ ಪರಿಷ್ಕರಣೆಯ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಇದು ಮಹತ್ತರವಾದ ಕೃತಿಯಾಗಿದ್ದು ಸಾಮಾನ್ಯ ಓದುಗರಿಗೆ ಇತ್ತೀಚಿನ ಸಂಶೋಧನೆಗಳ ಬಗ್ಗೆ ಹಾಗೂ ನಮ್ಮ ಬದಲಾಗುತ್ತಿರುವ ಇತಿಹಾಸದ ಅರಿವಿನ ಬಗ್ಗೆ ಸುಲಲಿತವಾಗಿ ತಿಳಿಸುತ್ತದೆ.

ಈ ಕೃತಿಯಲ್ಲಿ ಚರ್ಚಿಸುವಂತೆ ಬಹುತೇಕ ತಥ್ಯಗಳು ನಮ್ಮ ಇತಿಹಾಸ ಪಠ್ಯಗಳಲ್ಲಿ ಇರದಿರುವದನ್ನು  ನೋಡಿ, ಹೊಸ ಸಂಶೋಧನೆಗಳ ಹಾಗೂ ಸಾಕ್ಷಾಧಾರಗಳನ್ನು  ಇತಿಹಾಸ ಪಠ್ಯಗಳಲ್ಲಿ  ಸೇರಿಸಲು ನಮ್ಮ ಇತಿಹಾಸಜ್ಞರಲ್ಲಿ ಇರುವ ಅಸಹ್ಯವಾದ ಹಿಂಜರಿಕೆ ಹಾಗೂ ಆಲಸ್ಯ ದ ಬಗ್ಗೆ ಮನವರಿಕೆ ಆಗುತ್ತದೆ.

ಈ ಸಂಕಲನ ವಾಚನದ ನಂತರ, ಕೆಲವೊಂದು ವಿಷಯಗಳ ಬಗ್ಗೆ ಇನ್ನೂ ಹೆಚ್ಚಾದ ಚರ್ಚೆಯ ಅವಶ್ಯಕತೆ ಇತ್ತು  ಎಂದನಿಸುತ್ತದೆ. ಬಂದರು ನಗರಗಳ ಮತ್ತು ಕಡಲ ವ್ಯಾಪಾರದ ಬಗ್ಗೆಉಲ್ಲೇಖವಿದೆ. ಆದರೆ ಸಮುದ್ರ ನೌಕೆಯ ನಿರ್ಮಾಣ ಸಾಮರ್ಥ್ಯ, ಮೂಲವಸ್ತು, ತಂತ್ರಜ್ಞಾನ, ಬಗ್ಗೆ ಚರ್ಚೆಯಾಗಿಲ್ಲ. ಹಡಗು ನಿರ್ಮಾಣದಾಣದ   ಪುರಾತತ್ವ ಸಾಕ್ಷಾಧಾರಗಳೇನಾದರೂ ದೊರೆತಿವೆಯೇ?

ಪ್ಪ್ರಾಚೀನ ಕಾಲದ ಉಳುಮೆಯ ಪದ್ಧತಿಗಳ ಬಗ್ಗೆ ಬಹಳ ತಿಳಿದಿರುವುದಿಲ್ಲ; ಮಳೆಯಾಧಾರಿತ ಬೇಸಾಯದ  ಜೊತೆಗೆ  ಯಾವುದೇ ಪ್ರಕಾರದ ನೀರಾವರಿ  ವ್ಯವಸ್ಥೆ ಏನಾದರೂ ಇದ್ದವೇ? ಯಾವ ಕ್ಷೇತ್ರಗಳಲ್ಲಿ ಯಾವುದು ಮುಖ್ಯ ಬೆಳೆಯಾಗಿತ್ತು?  ನಮ್ಮ ಪೂರ್ವಜರು ಮುಖ್ಯವಾಗಿ ಮಾಂಸಹಾರಿಗಳೇ  ಅಥವಾ ಧವಸ ಧಾನ್ಯ ಮೇಲೆ ಅವಲಂಬಿತರಾಗಿದ್ದಾರೇ? ಮುಂತಾದ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ  ವಾಚಕರಲ್ಲಿ ಸಹಜ, ಪ್ರಬಂಧ ಸಂಕಲನವು ಈ ವಿಷಯದಲ್ಲಿ  ಸ್ವಲ್ಪ ನಿರಾಸೆ ಉಂಟು ಮಾಡುತ್ತದೆ.

ಪ್ರಾಚೀನ ಇತಿಹಾಸದಲ್ಲಿ ಕಬ್ಬಿಣ ಯುಗ, ತಾಮ್ರಯುಗ, ಕಂಚಿನ ಯುಗಗಳ ಬಗ್ಗೆ ಓದುತ್ತೇವೆ ಆದರೆ ಕಬ್ಬಿಣದ ಅಥವಾ ತಾಮ್ರದ ಅದಿರಿನಿಂದ ಲೋಹವನ್ನು ಹೇಗೆ ತಯಾರಿಸುತ್ತಿದ್ದರು ಎಂಬುದು ಮಾತ್ರ ತಿಳಿದಿಲ್ಲ.   ಕಬ್ಬಿಣದ ಅದಿರನ್ನು ಕರಗಿಸಲು ಬೇಕಾಗುವ ಅತಿ ಹೆಚ್ಚಿನ ಉಷ್ಣತೆ ಹೇಗೆ ಪಡೆಯುತ್ತಿದ್ದರು, ಯಾವತರಹದ ಕುಲುಮೆ ಉಪಯೋಗಿಸುತ್ತಿರಬಹುದು? ಅಂತಹ ಯಾವುದೇ ಕುಲುಮೆಯ ಅವಶೇಷ ಸಿಗದ ಹಿನ್ನೆಲೆಯಲ್ಲಿ, ಅಸ್ಥಿರ ಅಥವಾ ಸ್ಥಳದಿಂದ ಸ್ಥಳಕ್ಕೆಸಾಗಿಸಬಲ್ಲ ಕುಲುಮೆ ಏನಾದರೂ ಉಪಯೋಗಿಸುತ್ತಿದ್ದರೇನೋ ಎಂದು ವಿಚಾರ ಬರುವುದು ಸಹಜ. ಬಹುಶಃ ಆ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದು ಈಗಿನ ಕಾಲದ ಅವಶ್ಯಕತೆಯೂ ಇದೆ.

ಪ್ರಸ್ತುತ ಪ್ರಬಂಧ ಸಂಕಲನವು ಬಿಟ್ಟಿರುವ ಇನ್ನೊಂದು ಮುಖ್ಯವಾದ ವಿಷಯವೆಂದರೆ ಕಟ್ಟಡ ನಿರ್ಮಾಣ,  ವಾಸ್ತು-ವಿಜ್ಞಾನ ಮತ್ತು ಸ್ಥಾಪತ್ಯ ಶಾಸ್ತ್ರ ಶಿಲ್ಪಕಲೆ. ಶಾತವಾಹನರ ಮತ್ತು ವಕಾಟಕರ ಕಾಲದ ಕಟ್ಟಡ ಅವಶೇಷಗಳು (ರಾಮಟೆಕ ಹತ್ತಿರದ ನಂದಿವರ್ಧನ ಕೋಟೆ , ಮಾಂಸರದಲ್ಲಿರುವ ಪ್ರವರೇಶ ಶಿವಮಂದಿರ, ಅಜಂತಾದ ಗುಹೆಗಳು) ಹಾಗೂ ಕದಂಬ, ಪಲ್ಲವ,  ಚಾಲುಕ್ಯರ ಕಾಲದ ಭವ್ಯವಾದ ಮಂದಿರಗಳು  ಎತ್ತಿ ತೋರಿಸುವಂತೆ ಆ ಕಾಲದಲ್ಲಿ ವಾಸ್ತುಶಿಲ್ಪ ಶಾಸ್ತ್ರವು ಬೆಳೆದು ಉತ್ತುಂಗದಲ್ಲಿತ್ತು. ಐಹೊಳೆಯ ವಾಸ್ತುಶಿಲ್ಪ ಶಾಸ್ತ್ರದ ಕಾರ್ಯಾಗಾರದಲ್ಲಿ  3 ವಿಭಿನ್ನ ಮಂದಿರ ನಿರ್ಮಾಣ ಶೈಲಿಗಳು  ವಿಕಸಿತಗೊಂಡವು.  ಈ ವಿಷಯದ ಮೇಲೆ ಪ್ರಬಂಧ ಇಲ್ಲದಿರುವುದು, ಪ್ರಸ್ತುತ ಸಂಕಲನದ  ನ್ಯೂನತೆಯೇ ಸರಿ.

ಆದಾಗ್ಯೂ, ಒಂದು ಉತ್ತಮವಾದ,  ಸಹಜವಾಗಿ ಓದಿಸಿಕೊಂಡು ಹೋಗುವಂಥ, ಸುಲಲಿತವಾದ ಸಾಮಾನ್ಯ ಜನರ ಮನರಂಜಿಸುವಂಥ ಇತಿಹಾಸದ ಪುಸ್ತಕವನ್ನು ಬರೆದಿರುವ ಪೂರ್ಣ ಶ್ರೇಯ ಲೇಖಕರಾದ ಶ್ರೀ ವಿಜೇಂದ್ರಶರ್ಮಾರವರಿಗೆ ಸಲ್ಲುತ್ತದೆ. ಈಗಿನ ಕಾಲದಲ್ಲಿ ಜನಸಾಮಾನ್ಯ ಭಾರತೀಯರಿಗೆ ನಮ್ಮ ವೈಭವೋಪೇತ ಇತಿಹಾಸದ ಅರಿವು ಮೂಡಿಸುವಂತಹ ಇತಿಹಾಸ ಪುಸ್ತಕದ ಅವಶ್ಯಕತೆಯಿತ್ತು, ಪ್ರಸ್ತುತ ಪ್ರಬಂಧ ಸಂಕಲನವು ಈ ಅವಶ್ಯಕತೆಯನ್ನು ಪೂರೈಸುವುದರಲ್ಲಿ ಬಹುತೇಕ ಯಶಸ್ವಿಯಾಗಿದೆ. ಈ ಹೊತ್ತಿಗೆಯಲ್ಲಿ ಉಲ್ಲೇಖಿಸಲ್ಪಟ್ಟ ಅವಿಶ್ವಸನೀಯ ತಥ್ಯಗಳು, ನಮಗೆ ನಮ್ಮ ಇತಿಹಾಸದ ಬಗ್ಗೆ ಎಷ್ಟು ಕಡಿಮೆ ಅರಿವು ಇದೆ ಎಂಬುದನ್ನು ಮನವರಿಕೆ ಮಾಡಿಸುತ್ತದೆ. ಇಲ್ಲಿ ಕೊಟ್ಟಿರುವ ಟಿಪ್ಪಣಿಗಳು ಹಾಗೂ ಉಲ್ಲೇಖಗಳು, ಈ ವಿಷಯಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಉತ್ಸಾಹವಿರುವವರಿಗೆ ಮಾರ್ಗದರ್ಶನ  ನೀಡುತ್ತವೆ.

ಪ್ರಾಚೀನ ಭಾರತವು ಪಶ್ಚಿಮದಲ್ಲಿ ಬಲೂಚಿಸ್ತಾನದಿಂದ ಪೂರ್ವದಲ್ಲಿ ಬ್ರಹ್ಮದೇಶದವರೆಗೂ, ಉತ್ತರದಲ್ಲಿ ತುರ್ಕಮೆನಿಸ್ತಾನದಿಂದ (ಹಿಂದು-ಕುಶ್ ಪರ್ವತ) ದಕ್ಷಿಣದಲ್ಲಿ ಹಿಂದೂ ಮಹಾಸಾಗರದವರೆಗೂ ಹರಡಿದ್ದು ಗೊತ್ತೇ ಇದೆ. ನೂರಾರು  ಕಾಲಮಾನಗಳು ( ಯುಗಗಳು /ಶಕಗಳು), ಸಾವಿರಾರು ಸಾಮ್ರಾಜ್ಯಗಳು ಹಾಗೂ ರಾಜರ  ವಂಶಾವಳಿ ಗಳಿಂದ ಆಳಲ್ಪಟ್ಟ ಭಾರತವು,  ಅಸಂಖ್ಯ ಕೊಡುಗೆಗಳನ್ನು ವಿಜ್ಞಾನ, ತತ್ವಶಾಸ್ತ್ರ ಗಣಿತ ವಾಸ್ತುಶಿಲ್ಪಶಾಸ್ತ್ರ ಜ್ಯೋತಿರ್ವಿಜ್ಞಾನ ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ನೀಡಿದೆ. ಇವೆಲ್ಲವುಗಳನ್ನು ಸಂಕ್ಷೇಪವಾಗಿಯ ಮತ್ತು ಸತ್ವಯುತವಾಗಿ, ಬಿಗಿಯಾದ ನಿರೂಪಣೆಯೊಂದಿಗೆ ಸಾಮಾನ್ಯ ವಾಚಕರೆದುರು ಇಡುವುದು ಕಷ್ಟಸಾಧ್ಯವಾದ ಕೆಲಸವೇ ಸರಿ. ಇತಿಹಾಸದ ಬಗ್ಗೆ ಒಲವು ಇರುವ ಹಾಗೂ ಅಧ್ಯಯನ ಮಾಡುವ ಉತ್ಸಾಹ ಇರುವವರಿಗೆ ಪ್ರಬಂಧ ಸಂಕಲನವೊಂದು ಕೊಡುಗೆ ಎನ್ನಬಹುದು.

ಭಾರತರತ್ನ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ, “ಒಬ್ಬ ಇತಿಹಾಸಕಾರರು ನಿಖರವಾಗಿಯೂ ಪ್ರಾಮಾಣಿಕನು ನಿಷ್ಪಕ್ಷಪಾತಿಯು, ಅನುರಾಗರಹಿತನು, ಪೂರ್ವಾಗ್ರಹ ಅಥವಾ ಮುನ್ನೊಲವುರಹಿತನು, ಸತ್ಯನಿಷ್ಠನು ಆಗಿರಬೇಕು…“ ಪ್ರಸ್ತುತ ಪ್ರಬಂಧಗಳ ಲೇಖಕರು ಮೇಲಿನ ಎಲ್ಲ ಮಾನದಂಡಗಳಲ್ಲಿ ಉತ್ತೀರ್ಣರಾಗುತ್ತಾರೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply