close logo

ಕಥಾಮಾಲಿಕೆ- ಜರತ್ಕಾರು

[ನಮ್ಮ ಪುರಾಣದ ಕಥೆಗಳಲ್ಲಿ ಹಲವಾರು ಮಹಿಳೆಯರ ಪ್ರಸ್ತಾಪ ಕಾಣಲು ಸಿಗುವುದು. ಕೆಲವರು ತ್ಯಾಗದ ಮೂರ್ತಿಗಳು, ಇನ್ನು ಕೆಲವರು ಧೈರ್ಯಶಾಲಿಗಳು. ಅಚಲ ನಿರ್ಧಾರಗಳ ಕೈಗೊಂಡವರು , ಧರ್ಮವ ನಿಷ್ಠೆಯಿಂದ ಪಾಲಿಸಿದವರು, ಶಪಥ ಪಾಲನೆಗೆ ಪ್ರಾಣ ತೆತ್ತವರು, ಗಂಡನೇ ಪರದೈವವೆಂದು ಕಣ್ಣು ಇದ್ದೂ ಕುರುಡರಂತೆ ಜೀವನ ಮಾಡಿದವರು, ಪ್ರಜೆಗಳಿಗಾಗಿ ಅವಮಾನವ ಸಹಿಸಿದವರು. ಹೀಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಿರುವ ಎಷ್ಟೋ ಹೆಣ್ಣುಮಕ್ಕಳು ನಮ್ಮ ಭಾರತ ಸಂಸ್ಕೃತಿಯ ಪ್ರತೀಕ, ನಮ್ಮ ಮೌಲ್ಯಗಳಿಗೆ ಹಿಡಿದ ಕೈಗನ್ನಡಿ. ಇವರ ಮೌಲ್ಯಧಾರಿತ ನಡವಳಿಕೆ, ನಿರ್ಧಾರ ಹಾಗು ಸಹನಶೀಲತೆ ನವ ಪೀಳಿಗೆಯವರಿಗೆ ದಾರಿ ದೀಪ. ಇಂದು ಅಂತ ಒಬ್ಬ ಮಹಿಳೆಯ ಪರಿಚಯ ಮಾಡಿಕೊಳ್ಳೋಣ.

“ಜರತ್ಕಾರು” ನಮ್ಮ ಪುರಾಣಗಳಲ್ಲಿ ಸಿಗುವ ಅಪರೂಪದ, ಅಸಾಮಾನ್ಯ ಜೋಡಿಯ ಕಥೆ. ಒಂದೇ ದಿನಾಂಕದಲ್ಲಿ ಹುಟ್ಟಿರುವ ಜೋಡಿಗಳು ಸಿಗಬಹುದು, ಹೆಸರಿನ ಮೊದಲಿನ ಅಕ್ಷರ ಒಂದೇ ಇರಬಹುದು. ಆದರೆ ಒಂದೇ ಹೆಸರಿನ ಜೋಡಿ ಬಲು ಅಪರೂಪ. ಈ ಕಥೆಯು ಅಂತ ಜೋಡಿಯದು. ಶಾಪಗಳೇ ವಿಧಿ ನಿಯಮವಾಗಿ,  ಭಾತೃ ಪ್ರೇಮ, ಪಿತೃ ಋಣ ತೀರಿಸುವ ಸಲುವಾಗಿ ಬ್ರಹ್ಮ ಹಾಕಿದ ಗಂಟಿನ ಕಥೆ.]

“ನಿನ್ನ ಮಗ ಒಬ್ಬ ಮಾತ್ರ ನಾಗ ಸಂಕುಲ ಅಗ್ನಿಗೆ ಆಹುತಿ ಆಗುವುದರಿಂದ ತಡೆಯಲು ಸಾಧ್ಯ” ಎಂಬ ಭವಿಷ್ಯವಾಣಿ ಪ್ರತಿ ರಾತ್ರಿ ಎಂಥಾ ಗಾಢ ನಿದ್ರೆಯಲ್ಲಿದ್ದರು ಬೆಚ್ಚಿ ಬೀಳಿಸಿ, ಎದ್ದೇಳಿಸುತ್ತಿತ್ತು ನಾಗಲೋಕದ ಯುವ ರಾಣಿ ಜರತ್ಕಾರುವನ್ನು.

ಜರತ್ಕಾರು – ನಾಗಲೋಕದ ಯುವರಾಣಿ, ಈಕೆ ವಾಸುಕಿಯ ತಂಗಿ. ವಾಸುಕಿ ಆಕೆಗೆ ಬರಿ ಅಣ್ಣ ಆಗಿರಲಿಲ್ಲ ರಕ್ಷಕ ಹಾಗು ಗುರುವು ಆಗಿದ್ದ.  ಅವರಿಬ್ಬರ ಮಧ್ಯೆ ಅಗಾಧ ನಂಬಿಕೆ, ಅನರ್ಘ್ಯ ಪ್ರೀತಿ, ಗೌರವ ಸಹ ಇತ್ತು. ಇವರ ತಾಯಿ ಕದ್ರು, ಪ್ರಜಾಪತಿ ಬ್ರಹ್ಮನ ಮಗಳು, ಕಶ್ಯಪ ಮುನಿಯ ಹೆಂಡತಿ. ಕದ್ರುವಿನ ಮಕ್ಕಳು ಶೇಷ, ವಾಸುಕಿ, ತಕ್ಷಕ, ಕರ್ಕೋಟಕ ಮುಂತಾದ ಸರ್ಪಗಳು.

ಪ್ರಜಾಪತಿ ಬ್ರಹ್ಮನಿಗೆ ವಿನತಾ ಎಂಬ ಇನ್ನೊಬ್ಬಳು ಮಗಳಿದ್ದಳು, ಅವಳು ಸಹ ಕಶ್ಯಪ ಮುನಿಯ ಹೆಂಡತಿ. ವಿನತೆಯ ಮಕ್ಕಳು ಗರುಡ ಹಾಗು ಅರುಣ.

ಕ್ಷೀರಸಾಗರ ಕಡೆದಾಗ ಉದ್ಭವವಾದ ‘ಉಚ್ಚೈಶ್ರವಸ್ಸು’ ಎಂಬ ಶ್ವೇತ ವರ್ಣದ ಕುದುರೆಯ ಬಾಲ ಕಪ್ಪು ಬಣ್ಣದ್ದು ಎಂದು ಕದ್ರುವು, ಇಲ್ಲಾ ಅದರ ಬಾಲ ಬಿಳಿಯ ಬಣ್ಣದ್ದು ಎಂದು ಆಕೆಯ ಅಕ್ಕ ವಿನತೆ ಊಹೆ ಮಾಡ ತೊಡಗಿದರು. ಈ ಚರ್ಚೆ ಗಂಭೀರ ಸ್ವರೂಪ ಪಡೆದು, ಯಾರ ಊಹೆ ತಪ್ಪಾಗುವುದೋ ಅವರು ಮತ್ತೊಬ್ಬರ ದಾಸಿಯಾಗಬೇಕು ಎಂದು ನಿರ್ಧಾರ ಮಾಡಿದರು.

ಅದು ಹೇಗೋ ಬಾಲದ ಬಣ್ಣ ಬಿಳಿ ಎಂದು ತಿಳಿದ ಕದ್ರುವು, ತನ್ನ ಪುತ್ರರತ್ನರನ್ನು ಕರೆದು, ಕುದುರೆಯ ಬಾಲವನ್ನು ನಿಮ್ಮ ದೇಹದಿಂದ ಮುಚ್ಚಿ, ಎಲ್ಲರಿಗೂ ಬಾಲ ಕರಿಬಣ್ಣದಂತೆ ಗೋಚರವಾಗಲಿ ಎಂದಳು. ಇದನ್ನು ಸರ್ಪಗಳು ವಿರೋಧಿಸಲು ಕುಪಿತಗೊಂಡ ಆಕೆ, ಒಂದು ಶಾಪವ ನೀಡಿದಳು. “ನನ್ನ ಮಾತಿಗೆ ಎದುರಾಡುವಿರಾ? ನೀವೆಲ್ಲಾ ಅಗ್ನಿಕುಂಡದಲ್ಲಿ ಬಿದ್ದು ಸಾಯುವಂತಾಗಲಿ” ಎಂದು. ಕೊನೆಗೆ ತಾಯಿಯ ಆಜ್ಞೆಗೆ ಮಣಿದು ಕುದುರೆಯ ಬಾಲ ಕಪ್ಪಗೆ ಕಾಣುವ ಹಾಗೆ ಮಾಡಿ, ತಮ್ಮ ದೊಡ್ಡಮ್ಮ ವಿನತೆ ಹಾಗು ಅವರ ಮಕ್ಕಳನ್ನು ಮೋಸದಿಂದ ದಾಸರನ್ನಾಗಿಸಿಕೊಂಡರು.

ಎಷ್ಟೇ ದಿನ ಕಳೆದರೂ ಮನಸಿಗೆ ಶಾಂತಿ ಇರಲಿಲ್ಲ ವಾಸುಕಿಗೆ. ಅದಕ್ಕೆ ಕಾರಣ ತನ್ನ ತಾಯಿ ಕದ್ರುವಿನ ಶಾಪ. ಈ ಶಾಪಕ್ಕೆ ಏನಾದರು ಪರಿಹಾರ ಇರಬೇಕಲ್ಲ ಎಂದು ಪರಿತಪಿಸಿ. ಕೊನೆಗೆ ಪ್ರಜಾಪತಿ ಬ್ರಹ್ಮನ ಬಳಿ ಕೇಳಲು, ಬ್ರಹ್ಮನು ವಾಸುಕಿಯ ಕುರಿತು ಹೀಗೆಂದನು “ವಾಸುಕಿ, ನೀನು ನಿನ್ನ ತಂಗಿಯನ್ನು ಅವಳ ಹೆಸರುಳ್ಳ ವರನಿಗೆ ​ಧಾರೆ ಎರೆದು ಕೊಡು. ಅವರಿಗೆ ಹುಟ್ಟುವ ಮಗ ಒಬ್ಬ ಮಾತ್ರ ನಾಗ ಸಂಕುಲ ಅಗ್ನಿಗೆ ಆಹುತಿ ಆಗುವುದರಿಂದ ತಡೆಯಲು ಸಾಧ್ಯ ಎಂದು ಶಾಪ ವಿಮೋಚನ ತಂತ್ರ ಹೇಳಿದರು. ಈ ಮಾತುಗಳನ್ನು ವಾಸುಕಿ ತನ್ನ ಪ್ರೀತಿಯ ತಂಗಿ ಜರತ್ಕಾರುವಿಗೆ ಬಂದು ಯಥಾವತ್ತಾಗಿ ಹೇಳಿದ.

ಜರತ್ಕಾರು ಅಂದಿನಿಂದ ತನ್ನ ಜೀವನ ಧ್ಯೇಯ, ನಾಗ ಕುಲ ಕಾಪಾಡುವ ಸಲುವಾಗಿ ತನ್ನ ಅಣ್ಣ ಹುಡುಕುವ ವರನನ್ನು ವರಿಸಿ ಒಬ್ಬ ಪುತ್ರನನ್ನು ಪಡೆಯುವುದು ಆಗಿತ್ತು. ಆದರೆ ಅವಳಿಗೆ ಹೇಗೆ ತಿಳಿದಿರಲು ಸಾಧ್ಯ, ಆಕೆಯ ವರಿಸುವವನು ಓರ್ವ ಋಷಿ ಎಂದು.

ಹೌದು, ಆಕೆ ಮದುವೆ ಆಗುವ ವರನ ಹೆಸರು ಜರತ್ಕಾರು, “ಯಯಾವರ” ವಂಶದ ಕೊನೆಯ ಸಂತತಿ.

ಋಷಿ ಜರತ್ಕಾರು ಬ್ರಹ್ಮಚಾರಿ, ಸಾಧಕ ಹಾಗು ಸದಾ ತಪೋನಿರತ.  ಒಮ್ಮೆ ಕಾಡಿನಲ್ಲಿ ಸಂಚರಿಸುವಾಗ, ಬೆಟ್ಟದ ತುದಿಯಲ್ಲಿ ಹಲವು ಕೃಶ ವ್ಯಕ್ತಿಗಳು ಏಕಶ್ಚಿತ್ ಹುಲ್ಲು ಕಡ್ಡಿಯ ಸಹಾಯದಿಂದ ತಲೆಕೆಳಕಾಗಿ ನೇತು ಹಾಕಿರುವುದ ಕಂಡನು, ಆ ಹುಲ್ಲು ಕಡ್ಡಿಯ ಇಲಿ ಅಗಿಯುತಲಿತ್ತು. ಅವರ ತಲೆಯ ಕೆಳಗೆ ನೆರಕಕ್ಕೆ ಹೋಗಲು ರಂಧ್ರವಿತ್ತು . ಇದನ್ನು ನೋಡಿ ಮರುಕ ಹುಟ್ಟಿ ಅವರನ್ನು ವಿಚಾರಿಸಲು, ತಿಳಿಯಿತು ಅವರೆಲ್ಲ “ಯಯಾವರ” ವಂಶದವರೆಂದು. ಅವರ ಕೊನೆಯ ಸಂತತಿ ಜರತ್ಕಾರು ಮದುವೆ ಆಗಿ ಅವನ ಸಂತತಿ ಬೆಳೆದರೆ ನಮಗೆ ಮುಕ್ತಿ, ಇಲ್ಲವಾದಲ್ಲಿ ನರಕ ನಿಶ್ಚಿತ ಎಂದರು. ತಾನು “ಯಯಾವರ” ವಂಶದವನು, ಹೆಸರು ಜರತ್ಕಾರು ಎಂದು ಹೇಳಲು. ಕೃಶ ರೂಪದ ಪಿತೃಗಳು, ಜರತ್ಕಾರುವಿಗೆ “ನೀನು ಒಂದು ಮದುವೆಯಾಗಿ, ನಮ್ಮ ಸಂತತಿ ಮುಂದುವರೆದರೆ ನಮಗೆ ಮುಕ್ತಿ, ಇಲ್ಲವಾದಲ್ಲಿ ನರಕ. ಬೇಗ ಒಂದು ಮದುವೆಯಾಗಿ ಸಂತತಿ ಬೆಳಸಿ ನಮಗೆ ಮುಕ್ತಿ ನೀಡು” ಎಂದು ಆಜ್ಞೆ ಮಾಡಿದರು. ಅವರ ಮಾತಿಗೆ ಮಣಿದು ಜರತ್ಕಾರು “ನಾನು ಯಾರ ಬಳಿಯೂ ಹೋಗಿ ಮದುವೆಯ ಪ್ರಸ್ತಾಪ ಮಾಡುವುದಿಲ್ಲ , ಸ್ವಯಂಪ್ರೇರಿತರಾಗಿ ನನಗೆ ವಧು ಧಾರೆಯೆರೆದರೆ ಮದುವೆ ಮಾಡಿಕೊಳ್ಳುವೆ . ಆದರೆ ಆ ವಧುವಿನ ಹೆಸರು ‘ಜರತ್ಕಾರು’ ಆಗಿರಬೇಕು” ಎಂದು ಹೇಳಿ ತನ್ನ ಪಯಣ ಮುಂದುವರಿಸಿದನು.

ಮನಸಿನಲ್ಲಿ ಇದು ನಡೆಯುವುದಿಲ್ಲ ಎಂಬ ಭಾವನೆ ನಿಶ್ಚಲವಾಗಿತ್ತು “ನನ್ನ ಹೆಸರಿನ ಹುಡುಗಿ ಎಲ್ಲಿ ಇರುವಳು”? ಎಂದು ಮನದಲ್ಲೇ ಹುಸಿ ನಕ್ಕು ಕಾಡಿನ ಪರ್ಯಟನೆ ಮುಂದುವರಿಸಿದನು.

ಇಲ್ಲಿ ವಾಸುಕಿ, ಆ ಹೆಸರುಳ್ಳ ಹುಡುಗನ ಶೋಧ ನಡೆಸಿದ್ದ. ಅವನಿಗೆ ಜರತ್ಕಾರು ಹೆಸರಿನ ಓರ್ವ ಋಷಿ ತಮ್ಮ ರಾಜ್ಯಕ್ಕೆ ಸೇರಿದ ಕಾಡಿನಲ್ಲಿ ಇರುವ ವಿಷಯ ತಿಳಿಯಿತು. ಅವನು ಮೊದಲು ಅವರ ಭೇಟಿ ಮಾಡಿ ತನ್ನ ತಂಗಿಯ ಮದುವೆಯ ವಿಚಾರ ತಿಳಿಸಬೇಕೆಂದು ಎಲ್ಲಾ ತಯಾರಿ ಮಾಡಿಕೊಂಡ. ತನ್ನ ತಂಗಿ ಜರತ್ಕಾರುವಿಗೆ ಅಲಂಕಾರ ಮಾಡಿಕೊಂಡು ತನ್ನೊಡನೆ ಬರುವಂತೆ ಹೇಳಿದ. ಅಣ್ಣನ ಆಜ್ಞೆಯಂತೆ ಬಹಳ ಸುಂದರವಾಗಿ ಅಲಂಕಾರ ಮಾಡಿಕೊಂಡು, ವರನ ಸಂಧಿಸಲು ತಯಾರಾದಳು. ಅವಳಿಗೆ ಯಾರು ತಾನು ಮದುವೆ ಆಗುವ ವರ ಎಂದು ಇನ್ನು ತಿಳಿದಿಲ್ಲ.

ಋಷಿ ಜರತ್ಕಾರು ಕಾಡಿನಲ್ಲಿ ತಂಗಿದ್ದ ಬಿಡಾರಕ್ಕೆ ವಾಸುಕಿ ಹಾಗು ಅವನ ತಂಗಿ ಹೊರಟರು. ಅಲ್ಲಿ ವಾಸುಕಿ ಋಷಿಯ ಕಂಡು ತನ್ನ ತಂಗಿಯ ವಿವಾಹದ ವಿಷಯ ಪ್ರಸ್ತಾಪಿಸಿದ. ಋಷಿ ಜರತ್ಕಾರು ಒಲ್ಲೆ ಎನ್ನಲು ಕಾರಣಗಳಿರಲಿಲ್ಲ. ಒಂದೇ ಮನಸಿನಲಿ ವಿವಾಹಕ್ಕೆ ಸಮ್ಮತಿಸಿದ. ಆದರೆ, ಲೌಕಿಕ ವಸ್ತುಗಳ ಮೇಲೆ ಯಾವ ಮೋಹವಿಲ್ಲದ ಕಾರಣ ತನ್ನ ತಂಗಿ ಎದುರಿಸಬೇಕಾದ ದುಮ್ಮಾನಗಳ ಬಗ್ಗೆ ವಾಸುಕಿಯ ಬಳಿ ಚರ್ಚಿಸಿದ. ವಾಸುಕಿ ಅದರ ಬಗ್ಗೆ ಚಿಂತೆ ಬೇಡ, ನಿಮ್ಮಬರ ಜವಾಬ್ದಾರಿ ಹೊರುವ ಭಾರ ನನ್ನದು ಎಂದು ಹೇಳಿ ವಿವಾಹ ನಿಶ್ಚಯ ಮಾಡಿ, ಮುಂದಿನ ಶುಭ ಮುಹೂರ್ತದಲ್ಲಿ ವಿಧಿಪೂರ್ವಕವಾಗಿ ಮದುವೆಯ ಮಾಡಿ ಮುಗಿಸಿದ.

ಮದುವೆಯ ಬಳಿಕ ಋಷಿ ತನ್ನ ಹೆಂಡತಿಯ ಕುರಿತು “ಜರತ್ಕಾರು, ನಿನ್ನ ನಡವಳಿಕೆಯಿಂದ ನನಗೆ ಬೇಸರ ಮೂಡಿದರೆ, ಮರುಕ್ಷಣವೇ ನಾ ನಿನ್ನ ಬಿಟ್ಟು ಹೊರಡುವೆ, ನಿನಗಿದು ತಿಳಿದಿರಲಿ ಎಂದು ಹೇಳಿದ.” ಯುವರಾಣಿ ಜರತ್ಕಾರು ತನ್ನ ಅಣ್ಣ ತಮ್ಮಂದಿರ ಅಗ್ನಿಗಾಹುತಿ ತಡಿಯಲು ಮೌನ ತಾಳಿದಳು, ಸಹನೆಯ ಮೂರ್ತಿಯಾದಳು. ಲೌಕಿಕ ವಸ್ತುಗಳ  ಮೋಹವ ತೊರೆದಳು. ಗಂಡನ ಸೇವೆಯಲ್ಲಿ ನಿರತಳಾದಳು. ತನ್ನ ಎಲ್ಲಾ ಹೆಜ್ಜೆ ಯೋಚಿಸಿ ಇಡುತಿದ್ದಳು  ಎಲ್ಲಿ ನನ್ನ ಒಂದು ತಪ್ಪಿನಿಂದ ಕುಪಿತಗೊಂಡು ಇವರು ಹೊರಟುಹೋದರೆ, ಏನು ಗತಿ ಎಂದು. ಹೀಗೆ ದಿನಕಳೆದವು, ಒಂದು ದಿನ ಋಷಿ ಗಾಢ ನಿದ್ರೆಗೆ ಜಾರಿದ, ತನ್ನ ತಲೆಯ ಜರತ್ಕಾರುವಿನ ತೊಡೆಯಮೇಲೆ ಇರಿಸಿದ್ದ. ಸೂರ್ಯ ಮುಳುಗುವ ಹೊತ್ತು ಆಗುತಿತ್ತು, ಆದರೂ ಏಳುವ ಯಾವ ಲಕ್ಷಣಗಳು ಕಾಣಲಿಲ್ಲ. ಜರತ್ಕಾರು ನಿದ್ದೆಯಿಂದ ಏಳಿಸುವುದೋ ಬೇಡವೋ ಎಂದು ತನ್ನನ್ನು ತಾನೇ ಪ್ರಶ್ನೆ ಕೇಳಿಕೊಂಡಳು. ದೈನಂದಿನ ಕೈಂಕರ್ಯ ತಪ್ಪಿದರೆ ಮಹಾಪರಾಧವಾದೀತು, ಏಳಿಸುವುದೇ ಉತ್ತಮ ಎಂದು ಭಾವಿಸಿ ಗಂಡನನ್ನು ಎಚ್ಚರ ಮಾಡಿದಳು. ಗಾಢ ನಿದ್ದೆ ಹಾಳು ಮಾಡಿದೆ ಎಂದು ಕೋಪಗೊಂಡ ಋಷಿ “ನಿನಗೆ ಅರಿವಿಲ್ಲವೇ ನಾ ಪೂಜೆ ಸಲ್ಲಿಸುವವರೆಗೂ ಸೂರ್ಯಾಸ್ತ ಆಗಲಾರದೆಂದು, ಅಧಿಕಪ್ರಸಂಗಿ. ನಿನ್ನ ಜೊತೆ ನಾ ಇರಲಾರೆ” ಎಂದು ಹೇಳಿ ಹೊರಡಲು ಮುಂದಾದನು. ಜರತ್ಕಾರು “ತಪ್ಪಾಯಿತು ಕ್ಷಮಿಸಿ” ಎಂದಳು. “ನಮ್ಮ ಸಂತತಿ ಎರಡು ಕುಲವ ಕಾಪಾಡುವ ಮೂರ್ತಿ, ಹೀಗೆ ನೀವು ಹೊರಟು ಹೋದರೆ ಅವರ ಗತಿ ಏನಾದೀತು” ಎಂದು ಅಂಗಲಾಚಿದಳು. ಅವಳ ಬೇಡಿಕೆಗೆ ಸ್ಪಂದಿಸಿ ಮಗುವಿನ ಯೋಗ ಕರುಣಿಸಿ ಹೊರಟು ನಿಂತನು.

ಜರತ್ಕಾರು “ಆಸ್ತೀಕ”ನಿಗೆ ಜನ್ಮ ಕೊಟ್ಟಳು. ಆಸ್ತೀಕನಿಗು ಹಾಗು ಸರ್ಪಗಳ ಮೇಲಿರುವ ಶಾಪಕ್ಕು ಇರುವ ನಂಟು ಜನಮೇಜಯ ರಾಜನ ತಂದೆ ಮಾಡಿದ್ದ ಒಂದು ಅಪಮಾನಕ್ಕೆ ನೇರ ಸಂಬಂಧವಿದೆ.ಆ ಅಪಮಾನವೇನು? ಯಾರಿಗೆ ಯಾರು ಮಾಡಿದರು ಎಂದು ತಿಳಿಯೋಣ ಬನ್ನಿ.

ಒಮ್ಮೆ ಪರೀಕ್ಷಿತ ಮಹಾರಾಜ ಕಾಡಿನಲ್ಲಿ ಒಂದು ಜಿಂಕೆಯ ಬೇಟೆಯಾಡಲು ಅದನ್ನು ಅಟ್ಟಿಸಿಕೊಂಡು ಹೋದನು. ಆ ಜಿಂಕೆ, ಮೌನವ್ರತದಲ್ಲಿ ತಲ್ಲಿನರಾದ ಶಮಿಕ ಮಹರ್ಷಿಗಳ ಕಣ್ಣ ಮುಂದೆ ಹಾದು ಹೋಗಿತ್ತು. ಕೆಲವೇ ಕ್ಷಣಗಳ ಅಂತರದಲ್ಲಿ ಬಂದ ಪರೀಕ್ಷಿತನು, ಅಲ್ಲೇ ಕಣ್ಣು ತೆರೆದು ಮೌನ ಧ್ಯಾನದಲ್ಲಿ ನಿರತರಾಗಿದ್ದ ಶಮಿಕ ಮುನಿಗಳನ್ನು ಜಿಂಕೆಯ ಕಂಡಿರಾ ಎಂದು ವಿಚಾರಿಸಲು, ಅವರು ಅದಕ್ಕೆ ಯಾವ ಪ್ರತಿಕ್ರಿಯೆ ನೀಡದೇ ಇದ್ದ ಕಾರಣ ಕುಪಿತಗೊಂಡು ಅಲ್ಲೇ ಸತ್ತು ಬಿದ್ದಿದ್ದ ಹಾವ ಅವರ ಕೊರಳಿಗೆ ಮಾಲೆಯಂತೆ ಹಾಕಿ ಅಲ್ಲಿಂದ ಜಿಂಕೆಯ ಹುಡುಕಲು ಮುಂದೆ ಹೊರಟನು. ಇದಾದ ಸ್ವಲ್ಪ ಹೊತ್ತಿಗೆ ಅಲ್ಲಿಗೆ ಶಮಿಕ ಮುನಿಯ  ಮಗ ಶೃಂಗಿ ಅಲ್ಲಿಗೆ ಆಗಮಿಸಲು, ತನ್ನ ತಂದೆಗೆ ಈ ರೀತಿ ಯಾರು ಅವಮಾನ ಮಾಡಿದರೋ ಅವರು ಇನ್ನು ಏಳು ದಿನಗಳಲ್ಲಿ ತಕ್ಷಕನ ಕಡಿತದಿಂದ ಸಾವನ್ನಪ್ಪಲಿ ಎಂದು ಶಾಪವಿತ್ತನು. ಈ ಶಾಪದಂತೆ ತಕ್ಷಕನು ಪರೀಕ್ಷಿತ ಮಹಾರಾಜರ ಸಾವಿಗೆ ಕಾರಣನಾದನು.

ಈ ಸಂಗತಿಯು ಪರೀಕ್ಷಿತ ರಾಜನ ಮಗ ಜನಮೇಜಯನಿಗೆ ಸಹಿಸಲಸಾಧ್ಯವಾಗಿ , ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಹಾಗು ಅವನ ಕುಲದವರನ್ನು ನಾಶ ಮಾಡುವುದಾಗಿ ಶಪಥ ಮಾಡಿದನು. ಅಂತೆಯೇ, ಒಂದು ಮಹಾಯಾಗವನ್ನು ಮಾಡಲು ಮುಂದಾದನು. ಆ ಯಜ್ಞ ಕುಂಡಕ್ಕೆ ನಾಗ ಸಂಕುಲ ಆಹುತಿ ನೀಡಲು ನಿರ್ಧರಿಸಿದನು.

ಜನಮೇಜಯ ತನ್ನ ತಂದೆ ಪರೀಕ್ಷಿತ ಮಹಾರಾಜರನ್ನು ಕೊಂದ ತಕ್ಷಕನ ಮೇಲಿನ ಕೋಪಕ್ಕೆ ಇಡೀ ನಾಗ ಸಂತತಿ ಅಗ್ನಿಗೆ ಆಹುತಿ ನೀಡಲು ಮಹಾಯಜ್ಞ ಮಾಡುತಲಿದ್ದ. ಸರ್ಪಗಳು ಎಲ್ಲಿ ಅವಿತು ಕೊಳ್ಳಲು ಸಾಧ್ಯವೋ ಅಲ್ಲಿ ಎಲ್ಲಾ ಹೋಗಿ ಅವಿತುಕೊಂಡವು . ಆದರೆ ಮಹಾಮಂತ್ರಗಳ ಪರಿಣಾಮ ಅಗ್ನಿಕುಂಡವು, ಅಗ್ನಿ ಇರುವೆಡೆಗೆ ಒಂದೊಂದೇ ಹಾವುಗಳನ್ನು ಆಯಸ್ಕಾಂತ ಸೆಳೆದ ಹಾಗೆ  ಸೆಳೆದು, ಎಳೆದು ತಂದು ಅಗ್ನಿಗೆ ಆಹುತಿ ನೀಡಿತು.

ಸಣ್ಣ ಗಾತ್ರದಿಂದ ಹಿಡಿದು ದೊಡ್ಡ ಗಾತ್ರದ ಹಾವುಗಳು, ಕರೆ ಹಾವು ಹೆಬ್ಬಾವು, ವಿಷ ಪೂರಿತ ಹಾವುಗಳು ಎಲ್ಲವೂ ಅಗ್ನಿಗೆ ಆಹುತಿಯಾಯಿತು.  ವಾಸುಕಿಗೆ ಭಯ ಶುರುವಾಯಿತು, ಕಣ್ಣು ಮಂಜಾಗಿ, ಎದೆ ಬಡಿತ ಏರಿತು. ಇನ್ನು ನಮ್ಮ ಸರದಿ ನಮ್ಮ ಕಥೆ ಅಂತ್ಯ ಅನ್ನೋ ಮನೋಭಾವ ಆವರಿಸಿತು. ಭಯಭೀತನಾದ ತನ್ನ ಅಣ್ಣನ ಕಂಡು ಜರತ್ಕಾರು ತನ್ನ ಮಗ ಆಸ್ತೀಕನನ್ನು,ಜನಮೇಜಯ ನೆಡೆಸುತಿದ್ದ ಯಜ್ಞದ ಬಳಿ ಕಳುಹಿಸುವ ನಿರ್ಧಾರ ಮಾಡಿ ಕಳುಹಿಸಿ ಕೊಡುತ್ತಾಳೆ.

ಇನ್ನೇನು ತಕ್ಷಕನ ಅಗ್ನಿಗೆ ಆಹುತಿ ಆಗಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಆಸ್ತೀಕ ಪ್ರವೇಶ ಮಾಡಿ ತಡೆಯುತ್ತಾನೆ. ನಾಗಕುಲ ಉಳಿಸಿದ ಶ್ರೇಯಸ್ಸು ಜರತ್ಕಾರು ಮಗ “ಆಸ್ತೀಕ”ನಿಗೆ ಸಲ್ಲುತ್ತದೆ. ಇಂತಹ ಸಾಧ್ವಿ ಹೆಣ್ಣುಮಕ್ಕಳು ನಮ್ಮ ಪುರಾಣ ಕಥೆಗಳಲ್ಲಿ ಬಹಳ ಪ್ರಸ್ತಾಪಿಸಲ್ಪಡುವರು. ತಮ್ಮ ಜೀವನದ ಪರಮ ಉದ್ದೇಶ ಸ್ವಾರ್ಥವಿಲ್ಲದ ಬದುಕು. ಪರರ ಏಳಿಗೆಗೆ ತಮ್ಮ ಆಸೆ ಏನೇ ಇದ್ದರು ವಿಧಿ ಪಾಲನೆ ಮಾಡಿದ ಜರತ್ಕಾರು ನಮ್ಮೆಲ್ಲರಿಗೆ ಆದರ್ಶ.

ಇಂದಿಗೂ ಪಶ್ಚಿಮ ಬಂಗಾಳ , ಝಾರಖಂಡದಲ್ಲಿ ಜರತ್ಕಾರು “ಮಾನಸ ದೇವಿ” ಎಂಬ ಹೆಸರಿನಲ್ಲಿ ಪ್ರಸಿದ್ಧ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

More Articles By Author