close logo

ಪುರಾಣಗಳಲ್ಲಿ ಗೀತೋಪದೇಶ – ಭಾಗ ೧

ಮಾನವ ತನ್ನ ಜೀವನದಲ್ಲಿ ಸಾರ್ಥಕ್ಯಕ್ಕೆ, ನೆಮ್ಮದಿಗೆ ನಡೆಸುವ ಶೋಧ ಕಾಲದಂತೆ ಅನಾದಿ. ತಾನು ಹುಟ್ಟಿರುವುದೇಕೆ? ಅಧ್ಯಾತ್ಮಪಥದಲ್ಲಿ ಸಾಗಬೇಕಾಗಿರುವುದು ಎಲ್ಲಿಗೆ? ಮಾನವಜೀವನದಲ್ಲಿ ಈ ಪ್ರಶ್ನೆಗಳ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳುವ ಬಯಕೆ ಇಂದು ನಿನ್ನೆಯದ್ದಲ್ಲ. ನಮ್ಮ ಇತಿಹಾಸದ ಪುಟಗಳಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ.

ಈ ಜಿಜ್ಞಾಸೆಗೆ ಅನೇಕ ಬಾರಿ ಜೀವನದಲ್ಲಿನ ಘಟನಾಸರಣಿಯೇ ಕಾರಣವಾಗಬಹುದು. ಕೆಲವು ನಮ್ಮ ನಿಯಂತ್ರಣ ಮೀರಿದವು ಎನಿಸುತ್ತವೆ, ಮತ್ತೆ ಕೆಲವು ನಮ್ಮ ಗ್ರಹಿಕೆಯನ್ನೂ ಮೀರಿರುತ್ತವೆ. ವಯೋಸಹಜ ಮಿಡ್ ಲೈಫ್ ಕ್ರೈಸಿಸ್, ಹಣೆಬರಹ, ದಿಕ್ಕು ತೋಚದಂತೆ ಮಾಡಿಬಿಡುವ ಕೆಲ ಸಂದರ್ಭಗಳು – ಯಾವ ಕಾರಣದಿಂದಲೋ ಅಂತೂ ಈ ಜಿಜ್ಞಾಸೆ ಕಾಡುತ್ತದೆ.

ಬೇರೆ ಎಲ್ಲ ಉಪಾಯಗಳೂ ವಿಫಲವಾದಾಗ ನಮ್ಮ ಕೈ ಹಿಡಿದು ಕಾಪಾಡುವುದು ಭಗವಂತನ ಮೇಲಿನ  ಅಚಲ ನಂಬಿಕೆಯೊಂದೇ. ಜನರಿಗೆ ದೈವದ ಭಯವಿದೆ ಎಂಬುದು ಸಾಮಾನ್ಯ ಧೋರಣೆಯಾದರೂ, ಅದೇ ಭಯ ಸಹಿತ ವಿಶ್ವಾಸ ಪ್ರೇಮವಾಗಿ ಪರಿಣಮಿಸಿದಾಗ, ಭಗವಂತನ ಸಾನ್ನಿಧ್ಯದ ದಿವ್ಯಾನುಭವವಾಗುವುದರಲ್ಲಿ ಸಂದೇಹವಿಲ್ಲ.

‘ನಾನು’ ಯಾರು? ನನ್ನ ಇರುವುಕೆಯ ಅರ್ಥವೇನು? ಭಗವಂತನನ್ನು ಹೊಂದುವುದು ಹೇಗೆ? – ಈ ಪ್ರಶ್ನೆಗಳೇ ನಮ್ಮ ಸಾಧನೆಗೆ ಮುನ್ನುಡಿ. ಜನನ ಮರಣದ ಚಕ್ರದಿಂದ ಬಿಡಿಸಬಲ್ಲಂತಹ, ಮೋಕ್ಷಸಾಧನೆಗೆ ದಾರಿತೋರಿಸಬಲ್ಲಂತಹ ಮಾನವ ಜನ್ಮವೇ ಎಲ್ಲಕ್ಕಿಂತ ಶ್ರೇಷ್ಠ ಎಂಬ ಅಂಶವನ್ನೇ ವಿಷ್ಣು ಪುರಾಣದ ಸ್ಕಂಧ ೨, ಅಧ್ಯಾಯ ೩ ರಲ್ಲಿ ಪರಾಶರ ಮುನಿಗಳು ಈ ರೀತಿಯಾಗಿ ಹೇಳಿದ್ದಾರೆ –

ಇತಸ್ಸ್ವರ್ಗಶ್ಚ ಮೋಕ್ಷಶ್ಚ ಮಧ್ಯಂ ಚಾನ್ತಶ್ಚ ಗಮ್ಯತೇ
ನ ಖಲ್ವನ್ಯತ್ರ ಮರ್ತ್ಯಾನಾಂ ಕರ್ಮಭೂಮೌ ವಿಧೀಯತೇ ॥ 2.3.5 ॥

ಮಾನವನಿಗೆ ಸ್ವರ್ಗ, ಮೋಕ್ಷ, ಮಧ್ಯಮಲೋಕ (ಅಂತರಿಕ್ಷ ಲೋಕ), ಪಾತಾಳಲೋಕಗಳು ಅವನ ಕರ್ಮಫಲಕ್ಕನುಗುಣವಾಗಿ ಇಲ್ಲಿಂದಲೇ ಪ್ರಾಪ್ತಿಯಾಗುತ್ತದೆ.

ಜನ್ಮಭೂಮಿ, ಕರ್ಮಭೂಮಿ, ತಪೋಭೂಮಿ, ಯೋಗಭೂಮಿಯಾದ ಭರತವರ್ಷದಲ್ಲಿ ಜನಿಸುವುದೇ ಎಲ್ಲ ಲೋಕಗಳನ್ನು ಹೊಂದಲು ಸಾಧನವಾಗಿದೆ.

ಭರತವರ್ಷದಲ್ಲಿ ಜನಿಸುವುದರ ಮಹತ್ವ, ಲಾಭ, ವೈಶಿಷ್ಟ್ಯಗಳನ್ನು ಸಾರುವ ಶ್ಲೋಕವಿದು. ಸವಾಲುಗಳು, ತೊಳಲಾಟಗಳೇ ತುಂಬಿರುವ ಮನುಜನ ಬದುಕಿನಲ್ಲಿ ಒಮ್ಮೆ ಅಧ್ಯಾತ್ಮದ, ಅರ್ಥಜಿಜ್ಞಾಸೆಯ ಕಿಡಿಯೊಂದು ಹೊತ್ತಿಬಿಟ್ಟರೆ,  ಅದು ಅವನನ್ನು ಜೀವ-ಜನ್ಮ-ದೈವಶೋಧದ ಪಥದಲ್ಲಿ ದಾರಿದೀಪವಾಗಿ ಮುನ್ನಡೆಸುತ್ತದೆ.. ಇದೇ ಅವನ ಜೀವನದಲ್ಲಿ ಭಕ್ತಿಯ ವಿಕಾಸಕ್ಕೆ ನಾಂದಿ ಹಾಡುತ್ತದೆ.

ಪರಮತತ್ವದ ಸಾರವಾದ ಶ್ರೀಮದ್ಭಗವದ್ಗೀತೆಯ ಶ್ಲೋಕವೊಂದು ಇಲ್ಲಿ ಪ್ರಸ್ತುತ.

ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ

ಆತ್ಮನೇ ಆತ್ಮನ ಬಂಧುವು, ಆತ್ಮನೇ ಆತ್ಮನ ಶತ್ರು.

ಈ ಮೂಲಕ ಶ್ರೀಕೃಷ್ಣನು ಅತ್ಯಂತ ಸರಳವಾದ , ಅತಿ ಗಹನವಾದ ಸಂದೇಶವನ್ನು ತಿಳಿಸಿದ್ದಾನೆ. ಧಾರ್ಮಿಕ ಚಿಂತನೆಗಳನ್ನು ನಡೆಸುತ್ತಾ, ಆತ್ಮಶೋಧದ, ಆತ್ಮವಿಕಸನದ ಮಾರ್ಗದಲ್ಲಿ ಮಾನವ ಉತ್ಸಾಹಿಯಾಗಿ ಮುನ್ನುಗ್ಗಬೇಕು. ಇದಿಲ್ಲದೇ, ಜೀವಿಯು ದುರಾಚಾರದ ಬೀಡಾಗಿ ಅಧರ್ಮದ ಸುಳಿಯಲ್ಲಿ ಸಿಕ್ಕಂತಾಗುತ್ತದೆ.

ಧರ್ಮಮಾರ್ಗದಲ್ಲಿ ಸಾಗಿ ಪರಮಾತ್ಮನನ್ನು ಹೊಂದುವುದೇ ಧರ್ಮಭೂಮಿ ಕರ್ಮಭೂಮಿಯಾದ ಭಾರತದಲ್ಲಿ ಮಾನವನ ಧ್ಯೇಯ. ಈ ಪಥದಲ್ಲಿ ಸಾಗಲು ಪ್ರೇರಕಶಕ್ತಿಯೊಂದರ, ನೀಲಿನಕ್ಷೆಯೊಂದರ ಅಗತ್ಯವಿದೆ. ತನ್ನ ಸ್ನೇಹಿತ ಹಾಗು ಬಂಧುವಾದ ಅರ್ಜುನನಿಗೆ ಅಪೂರ್ವ ಸಂದರ್ಭದಲ್ಲಿ ಸರ್ವಾಂತರ್ಯಾಮಿಯಾದ ಶ್ರೀಕೃಷ್ಣನು ನೀಡಿದ ಶ್ರೀಮದ್ಭಗವದ್ಗೀತೆಯೆಂಬುದು ಮನುಜಕುಲಕ್ಕೆ ದೊರೆತಿರುವ ಅಮೂಲ್ಯ ಉಡುಗೊರೆ. ಅತ್ಯಂತ ಲೋಕಪ್ರಿಯವಾದ ಪರಮಪವಿತ್ರವಾದ ದಿಕ್ಸೂಚಿ. ಮೋಕ್ಷಸಾಧನೆಗೆ ಕರ್ಮ, ಜ್ಞಾನ, ಭಕ್ತಿಯ ತ್ರಿವಿಧ ಪಥವನ್ನು ಶ್ರೀಮದ್ಭಗವದ್ಗೀತೆಯು ವಿವರಿಸುತ್ತದೆ. ಇದು ಸನಾತನ ಧರ್ಮದ ಆಕರಗಳಲ್ಲಿ ಅತ್ಯಂತ ಜನಪ್ರಿಯವಾದ ಮಾರ್ಗದರ್ಶಿ, ಉಲ್ಲೇಖನೀಯ ಪಠ್ಯ ಎನಿಸಿದೆ. ನಮ್ಮ ಪ್ರಾಚೀನ  ಜ್ಞಾನನಿಧಿಯೊಳಗೆ ಜೀವನಧರ್ಮವನ್ನು ಸಾರುವ ಇನ್ಯಾವುದಾದರೂ ಆಕರಗಳಿವೆಯೇ, ಅವುಗಳ ಸಂದೇಶವೇನು, ಅದರ ಬೋಧಕರು ಯಾರು ಎಂಬ ಪ್ರಶ್ನೆಗಳು ಪುರಾಣದಲ್ಲಿ ಆಸಕ್ತಿಯುಳ್ಳ   ಜಿಜ್ಞಾಸುವಿಗೆ ಎದುರಾಗುತ್ತವೆ.

ಪುರಾಣಗಳ ಬೃಹತ್ ಭಂಡಾರದೊಳಗೆ ಒಮ್ಮೆ ಇಣುಕಿನೋಡಿದರೆ ಅದರೊಳಗಿನ ಜ್ಞಾನದ, ಆರ್ಷಪ್ರಜ್ಞೆಯ ಅಗಾಧತೆಯ ಅರಿವಾಗತೊಡಗುತ್ತದೆ. ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ೧೮ ಮಹಾಪುರಾಣಗಳ ಸಹಿತ ಇನ್ನಿತರ ಸಾಹಿತ್ಯದಿಂದ ಸಮೃದ್ಧವಾದ ಸನಾತನ ಧರ್ಮದ  ಜ್ಞಾನಜಗತ್ತಿನ ವಿಸ್ತಾರವನ್ನು ಅರಿಯುವುದು ಮನುಷ್ಯಮಾತ್ರರಿಗೆ ಅಸಾಧ್ಯ.

ಈ ಆಕರಗಳಲ್ಲಿ ಶ್ರೀಮದ್ಭಾಗವತ ಮತ್ತು ವಿಷ್ಣುಪುರಾಣಗಳು ಅನೇಕರಲ್ಲಿ ಆಸಕ್ತಿ ಹುಟ್ಟಿಸಿವೆ. ಭಗವಾನ್ ವೇದವ್ಯಾಸವಿರಚಿತ ಈ ಎರಡು ಮಹಾಗ್ರಂಥಗಳಲ್ಲಿ ಮಹಾವಿಷ್ಣುವಿನ ವಿವಿಧ ಅವತಾರಗಳ ಉಪಾಖ್ಯಾನಗಳಿವೆ. ಈ ಮೂಲಕ ಭಗವಂತನು ಪರಮಪದವನ್ನು ಹೊಂದಲು ಅನುಸರಿಸಬೇಕಾದ ಮಾರ್ಗವನ್ನು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸೂಚಿಸಿದ್ದಾನೆ.  ಈ ಲೇಖನಾಸರಣಿಯ ಉದ್ದೇಶ ಗೀತೋಪದೇಶ – ಎಂದರೆ  ಶ್ರೀಮದ್ಭಾಗವತ ಹಾಗು ವಿಷ್ಣುಪುರಾಣದಲ್ಲಿ ಹುದುಗಿರುವ ಭಗವಂತನ ಸಂದೇಶದ ನಿದರ್ಶನಗಳ ಅವಲೋಕನ ಮಾಡುತ್ತ ತನ್ಮೂಲಕ ಪ್ರಾಚೀನ ಗ್ರಂಥಗಳ ಕಾಲಾತೀತ  ಜ್ಞಾನವನ್ನು ಪ್ರಸ್ತುತಪಡಿಸುವುದಾಗಿದೆ.

ಯಮಗೀತ

ಸೂರ್ಯಪುತ್ರ ಯಮ, ಅವಸಾನದ ಅಧಿಪತಿ, ಭವದಲ್ಲಿ ಜೀವಾತ್ಮದ  ಕರ್ಮನಿಯಾಮಕ. ಜೀವಾತ್ಮನ ಪಾಪ – ಪುಣ್ಯಗಳಿಗನುಸಾರವಾಗಿ ಅವನ ಮುಂದಿನ ಜನ್ಮದ, ಪಾಪಫಲದ ನಿಷ್ಕರ್ಷೆಯಾಗುತ್ತದೆ. ಧರ್ಮಕಾರ್ಯಗಳ ತುಲನೆ ಮಾಡಿ ಭಾಗಲಬ್ಧವನ್ನು ನಿರ್ಣಯ ಮಾಡುವವನೊಬ್ಬನಿದ್ದರೆ ಅದು ಯಮನೇ.

ಪುರಾಣಗಳಲ್ಲಿ, ಮಾನವನ ಸದ್ಗತಿಸಿದ್ಧಿಗೆ ಯಮನು ನೀಡಿರುವ ನೀಲಿನಕ್ಷೆಯ ಎರಡು ನಿರ್ದಿಷ್ಟ ಸಂದರ್ಭಗಳನ್ನು ಕಾಣುತ್ತೇವೆ. ಇದೇ ಯಮಗೀತೆ.

ಯಮನು ಸಾರಿದ ಸಂದೇಶ ಎಂಬುದಾಗಿ ಹೇಳಿದೆಯಾದರೂ ಇದರ ಆಧಾರವಾಗಿರುವುದು ಶ್ರೀಮನ್ನಾರಾಯಣನ  ಅನುಗ್ರಹವೇ.

ಯಮ ಮತ್ತು ಯಮಭಟ್ಟ/ಯಮಕಿಂಕರರ ನಡುವಣ ಸಂವಾದವೇ ಯಮಗೀತೆ. ಇದು ಎರಡು  ಸನ್ನಿವೇಶಗಳಲ್ಲಿ ಉದ್ಧೃತವಾಗಿದೆ –

ವಿಷ್ಣು ಪುರಾಣದಲ್ಲಿ ಭೀಷ್ಮರು ನಕುಲನಿಗೆ ಯಮಗೀತೆಯ ಬಗೆಗೆ ತಿಳಿಸುವಾಗ, ಮತ್ತು, ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಅಜಾಮಿಳನ ಸಾವಿನಲ್ಲಿ ಯಮಭಟ್ಟರ ಮತ್ತು ವಿಷ್ಣುಸೇವಕರ ನಡುವಿನ ಚರ್ಚೆಯ ವೇಳೆ ಅವರನ್ನುದ್ದೇಶಿಸಿ ಯಮನು ಉಪದೇಶಿಸಿದಾಗ. ಈ ಎರಡು ಸನ್ನಿವೇಶಗಳಲ್ಲಿ ಸಾಮ್ಯವಿದ್ದರೂ  ಅವುಗಳದ್ದೇ ಆದ ವಿಶಿಷ್ಟ ಸೆಳವು, ಛಾಪುಗಳಿವೆ. ಮುಂದಿನ ಎರಡು ಲೇಖನಗಳಲ್ಲಿ ಈ ಎರಡು ಸನ್ನಿವೇಶಗಳನ್ನು ಕೂಲಂಕುಷವಾಗಿ ಗಮನಿಸುತ್ತಾ ಸ್ವಯಂ ಯಮನೇ ನೀಡಿರುವ ಜ್ಞಾನಸಾರವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸೋಣ.

ವಿಷ್ಣುಪುರಾಣ

ವಿಷ್ಣು ಪುರಾಣದ ೩ನೇ ಸ್ಕಂಧ, ೭ನೇ ಅಧ್ಯಾಯದಲ್ಲಿ ಯಮಗೀತೆಯಿದೆ. ಈ ಅಧ್ಯಾಯವು ಮೈತ್ರೇಯರ ಮತ್ತು ಅವರ ಗುರು ಪರಾಶರಮುನಿಗಳ ಸಂವಾದದೊಂದಿಗೆ ಆರಂಭವಾಗುತ್ತದೆ. ಹಿಂದಿನ ಅಧ್ಯಾಯದಲ್ಲಿ ಸಪ್ತಲೋಕಗಳು, ಸಪ್ತ ಅಧೋಲೋಕಗಳು, ಸಪ್ತದ್ವೀಪಗಳನ್ನು ವಿವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೈತ್ರೇಯ ಗುರುಗಳನ್ನು ಕೇಳುತ್ತಾರೆ –

ಸರ್ವೇ ಚೈತೇ ವಶಂ ಯಾಂತಿ ಯಮಸ್ಯ ಭಗವನ್ ಕಿಲ
ಆಯುಷೋऽನ್ತೇ ತಥಾ ಯಾಂತಿ ಯಾತನಾಸ್ತತ್ಪ್ರಚೋದಿತಃ ॥ 3.7.5 ॥

ಮಹಾತ್ಮನೇ, ಆಯುಷ್ಯವು ಕಳೆದ ನಂತರ ಜೀವಾತ್ಮರು ಯಮನ ಸೆರೆಯಲ್ಲಿ ಪಾಪಫಲವನ್ನು ಅನುಭವಿಸಬೇಕಲ್ಲವೇ?

ಯಮನ ಶಿಕ್ಷೆಯಿಂದ ತಪ್ಪಸಿಕೊಳ್ಳಲು ಯಾವ ಮಾರ್ಗವನ್ನು ಅನುಸರಿಸಬೇಕು, ಯಾವ ಸತ್ಕರ್ಮಗಳನ್ನು ಮಾಡಬೇಕು ಎಂದು ಪ್ರಶ್ನೆ ಮಾಡುತ್ತಾರೆ.

ಸೋऽಹಮಿಚ್ಛಾಮಿ ತತ್ ಶ್ರೋತುಂ ಯಮಸ್ಯ ವಶವರ್ತಿನಃ
ನ ಭವನ್ತಿ ನರಾ ಯೇನ ತತ್ಕರ್ಮ ಕಥಯಸ್ಯ ಮೇ ॥ 3.7.7 ॥

ಹೀಗಾಗಿ, ಯಮನ ವಶವಾಗದೇ ಇರುವಂತೆ ನರರು ಯಾವ ಕರ್ಮಾನುಷ್ಠಾನ ನಡೆಸಬೇಕು ಎಂದು ತಿಳಿಯಬಯಸುತ್ತೇನೆ.

ಮೈತ್ರೇಯರು ಯಮಪಾಶದಿಂದ ಪಾರಾಗುವ ಉಪಾಯವನ್ನಲ್ಲದೇ ಪರಿಹಾರದ ಅಪೇಕ್ಷೆಯಿಂದ ಪ್ರಶ್ನಿಸಿರುವುದು ಇಲ್ಲಿ ಗಮನಾರ್ಹ.  ಇಲ್ಲಿ ಯಮಪಾಶದ ಪಾರ ಎಂದರೆ ಶಬ್ದಶಃ ಅರ್ಥೈಸದೆ  ಮೋಕ್ಷಪಥ,  ಜನನ – ಮರಣಗಳ ಪುನರಾವರ್ತನೆಯಿಂದ ಮುಕ್ತಿ ಎಂಬ ಸೂಚ್ಯವನ್ನು ಗ್ರಹಿಸಬೇಕು. ಮುಕ್ತಿ ಹೊಂದಿದ ಮೇಲೆ ಯಮನ ಸೆರೆ ಇನ್ನೆಲ್ಲಿ? ಈ ಅರ್ಥದಲ್ಲಿ ಮೈತ್ರೇಯರು ಹೇಳಿದ್ದಿರಬೇಕು.

‘ಇದೇ ಪ್ರಶ್ನೆಯನ್ನು ನಕುಲನು ಭೀಷ್ಮರನ್ನು ಆ ಯುಗದಲ್ಲಿ ಕೇಳಿದ್ದು ಅವರು ಹೇಳಿದ ಉತ್ತರವನ್ನು ಕೇಳು’ ಎಂದು ಪರಾಶರರು ವಿವರಿಸುತ್ತಾರೆ.

ಭೀಷ್ಮರಿಗೆ ಪ್ರಸ್ತುತ ಒಡಿಷಾ, ಆಗಿನ ಕಳಿಂಗದ ಒಬ್ಬ ಬ್ರಾಹ್ಮಣ ಮಿತ್ರನಿದ್ದನು. ಆ ಬ್ರಾಹ್ಮಣನಿಗೆ ಒಬ್ಬ ಮಹಾಮುನಿಯ ಭೇಟಿಯಾಗಿತ್ತು. ಆ ಮುನಿಯು ಭೂತ- ವರ್ತಮಾನ – ಭವಿಷ್ಯಗಳನ್ನು ಬಲ್ಲ ಕಾಲಜ್ಞಾನಿಯಾಗಿದ್ದು  ಕೆಲವು ಘಟನೆಗಳನ್ನು ನಿಖರವಾಗಿ ನುಡಿದಿದ್ದನು. ವಿಸ್ಮಯದಿಂದ ಮತ್ತಷ್ಟು ಪ್ರಶ್ನೆ ಮಾಡಿದಾಗಲೂ ಎಲ್ಲವನ್ನೂ ಸರಿಯಾಗಿಯೇ ಹೇಳಿದ್ದನು. ಹಾಗಾಗಿ ಯಮಪಾಶದ ಬಗೆಗಿನ ಪ್ರಶ್ನೆಯನ್ನು ಭೀಷ್ಮರು ಆ ಬ್ರಾಹ್ಮಣನಲ್ಲಿ ಕೇಳಿದಾಗ ಮಹಾಮುನಿಯೊಂದಿಗೆ ನಡೆಸಿದ ಸಂವಾದದ ಆಧಾರದ ಮೇಲೆ ಬ್ರಾಹ್ಮಣನು ಉತ್ತರಿಸಿದನು.

ಈ ನಿಟ್ಟಿನಲ್ಲಿ ತಲತಲಾಂತರದಿಂದ  ಒದಗಿ ಬಂದಿರುವ ಜ್ಞಾನದ ಮಹತ್ವವನ್ನು ಅರಿಯಬೇಕಾದರೆ ಸಂದರ್ಭೋಚಿತ ಉಲ್ಲೇಖಗಳು ಪ್ರಸ್ತುತವೆನಿಸತ್ತವೆ.

ಮೈತ್ರೇಯ → ಪರಾಶರ → ನಕುಲ → ಭೀಷ್ಮ → ಕಳಿಂಗ ವಿಪ್ರ → ಮುನಿ

ಅನೇಕ ಬಾರಿ, ಸಂವಾದಗಳಲ್ಲಿ ಬರುವ ಪಾತ್ರಗಳ ಗೋಜಲಿನೊಳಗೆ ಸಿಲುಕಿಬಿಡುವ ಪ್ರಮೇಯ ಎದುರಾಗುತ್ತದೆ. ಆಗೆಲ್ಲ, ಅವುಗಳ ಪರಸ್ಪರ ಸಂಬಂಧವನ್ನು ಮನದಟ್ಟು ಮಾಡಿಕೊಳ್ಳುತ್ತಾ ಸನ್ನಿವೇಶವನ್ನು  ಸಮಗ್ರವಾಗಿ ಪರಾಮರ್ಶಿಸುವುದು ಅಗತ್ಯವಾಗುತ್ತದೆ.

ಯಮನು ತನ್ನ ಪಾಶ ಹೊತ್ತ ಸೇವಕನನ್ನು ಕುರಿತು

ಪರಿಹರ ಮಧುಸೂದನಪ್ರಪನ್ನಾನ್
ಪ್ರಭುರಹಮನ್ಯನ್ರಣಾನಾಮವೈಷ್ಣವಾನಾಂ

ದಾಸನೇ, ಯಾರು ಪ್ರಭು ಮಧುಸೂದನನಿಗೆ ಶ್ರೀಹರಿಗೆ ಶರಣಾಗಿದ್ದಾರೋ, ಅಂಥವರನ್ನು ಬಿಟ್ಟುಬಿಡು. ವಿಷ್ಣು ಭಕ್ತರಲ್ಲದವರಿಗೆ ಮಾತ್ರ ನಾನು ನಿಯಾಮಕನು.

ಅಹಮಮರವರಾರ್ಚಿತೇನ ಧಾತ್ರಾ ಯಮ ಇತಿ ಲೋಕಹಿತಾಹಿತೇ ನಿಯುಕ್ತಃ

ಯಮನು ತನ್ನ ಪಾತ್ರವನ್ನು, ವಿಷ್ಣು ಭಕ್ತನ ವಿಶೇಷತೆಗಳನ್ನು ವಿಷದ ಪಡಿಸುತ್ತಾನೆ

ಲೋಕದ ಹಿತಾಹಿತಗಳ, ಎಂದರೆ, ಪುಣ್ಯಪಾಪಗಳ ನಿರ್ಣಾಯಕನಾಗಿ ಬ್ರಹ್ಮನಿಂದ ನಾಮಕಗೊಂಡವನು ತಾನು ಎಂದು ತಿಳಿಸುತ್ತಾನೆ. ಆದರೆ, ಅವನು ಮುಂದೆ ತಿಳಿಸುವ ಅಂಶವೇ ಅತಿ ಮುಖ್ಯ.

ಹರಿಗುರುವಶಗೋऽಸ್ಮಿ ನ ಸ್ವತಂತ್ರಃ
ಪ್ರಭವತಿ ಸಂಯಮನೇ ಮಾಮಾಪಿ ವಿಷ್ಣುಃ

ನಾನು ಶ್ರೀಹರಿಯ ದಾಸ. ನಾನು ಸ್ವತಂತ್ರನಲ್ಲ. ವಿಷ್ಣುವೇ ನನಗೆ ಸ್ವಾಮಿ.

ಸರ್ವಾಂತರ್ಯಾಮಿಯಾದ  ಮಹಾವಿಷ್ಣುವನ್ನು ಕುರಿತು ಯಮನು ತಿಳಿಸಿರುವ ಅತ್ಯಂತ ಗಹನವಿಚಾರವಿದು. ಮುಂದೆ ಯಮಗೀತೆ ಎಂದು ಪ್ರಖ್ಯಾತವಾಗಿರುವ ಭಾಗದಲ್ಲಿ ಮಹಾವಿಷ್ಣುವಿನ ವೈಶಿಷ್ಟ್ಯ, ವಿಷ್ಣುಭಕ್ತರ ಅಪೂರ್ವ ಗುಣಗಳ ಕುರಿತಾಗಿ ವಿವರಿಸುತ್ತಾನೆ.

ಸಹಜವಾಗಿ, ಧಾರ್ಮಿಕವಾಗಿ ಮುನ್ನಡೆಯುತ್ತಾ ಭಕ್ತಿಮಾರ್ಗದಲ್ಲಿ ಸಾಗಿ, ಕಡೆಗೆ ಮೋಕ್ಷವನ್ನು ಹೊಂದಲು ಪಾಲಿಸಬೇಕಾದ ನಿಯಮದ ರೂಪುರೇಷೆಯೇ ಇಲ್ಲಿ ಉಲ್ಲೇಖಿತವಾಗಿರುವ ತತ್ವ.   ಕಾಲಾತೀತವಾದ ಅಮೂಲ್ಯವಾದ  ಈ ತತ್ವವಿಚಾರಗಳು ಆ ಯುಗಕ್ಕೆ ಮಾತ್ರವಲ್ಲದೆ ಕಲಿಯುಗದಲ್ಲೂ ಪ್ರಸ್ತುತ.

ಈ ಸೂಚನೆಗಳ ಸರಳತೆ, ಪ್ರಾಯೋಗಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಯಾವುದೇ ವಿಶೇಷ ಅರ್ಹತೆಯ ಅವಶ್ಯಕತೆಯಿಲ್ಲ, ಅವು ಸಾರ್ವತ್ರಿಕ. ಕವಿ ಸೋಮೇಶ್ವರ ತನ್ನ ಶತಕದಲ್ಲಿ, ಡಿವಿಜಿ ಯವರು ತಮ್ಮ ಕಗ್ಗದಲ್ಲಿ, ಇನ್ನೂ ಅನೇಕ ಕವಿಗಳು ತಮ್ಮ ಕೃತಿಗಳಲ್ಲಿ ಈ ಸಾರ್ವಕಾಲಿಕ ಮೌಲ್ಯಗಳನ್ನು ಪುನುರುಚ್ಚರಿಸಿರುವುದು ವಿಶೇಷ.

ಪ್ರಸಂಗ

ಆರಂಭದಲ್ಲಿ, ಯಮನು, ಗಾಳಿ, ಹೊನ್ನುಗಳ ರೂಪಕಗಳ ಮೂಲಕ ದೇವ – ಮಾನವ – ಜಂತುಗಳು ಹುಟ್ಟಿ ಮತ್ತೆ ಸರ್ವವ್ಯಾಪಿ ಭಗವಂತನಲ್ಲಿ ಲೀನವಾಗುವ ಜೀವನಚಕ್ರವನ್ನು ವಿವರಿಸುತ್ತಾನೆ.

ಪಾಪವು ಕಳೆದು, ಯಜ್ಞದಲ್ಲಿ ಆಜ್ಯಸೇವಿತ ಅಗ್ನಿಯಂತೆ ಪ್ರಕಾಶಿಸುವ ಶೀಹರಿಯ ಭಕ್ತರನ್ನು ಮುಕ್ತಗೊಳಿಸೆಂದು ಭಟ್ಟನಿಗೆ ಆದೇಶಿಸುತ್ತಾನೆ. ಭಟ್ಟನಾದರೋ ಶ್ರೀಹರಿಯ ಭಕ್ತರ ಗುರುತೇನೆಂದು ಪ್ರಶ್ನಿಸುತ್ತಾನೆ.

ಈ ಪ್ರಶ್ನೆಗೆ ಉತ್ತರರೂಪದಲ್ಲಿ ಶ್ರೀಹರಿಯ ಭಕ್ತರ ಗುಣ ವಿಶೇಷಗಳನ್ನು ನಿರೂಪಿಸಿರುವುದೇ ಯಮಗೀತೆ.

ಯಮಗೀತೆ

 

  1. ವರ್ಣಧರ್ಮವನ್ನು ಚ್ಯುತಿಯಿರದೆ ಪಾಲಿಸುವ, ಶತ್ರು-ಮಿತ್ರರಲ್ಲಿ ಭೇದವಿರದಿರುವ, ಪರವಸ್ತುವನ್ನು ಹರಣ ಮಾಡದ, ಪರರಿಗೆ ಆಹಿತಕಾರಿಯಾಗದ ಪುಣ್ಯಾತ್ಮನೇ ವಿಷ್ಣುಭಕ್ತ.
    ಸ್ವಾರಸ್ಯವೆಂದರೆ, ಶತ್ರು – ಮಿತ್ರರ ನಡುವೆ ಅಭೇದಸಾಧನೆ ಸಮತ್ವದೆಡೆಗೆ ಶಾಂತಿಯೆಡೆಗೆ ಹೆಜ್ಜೆಯಿಟ್ಟಂತೆ.  ಆಂಗ್ಲಕಾವ್ಯಾಸ್ವಾದಿಗಳು ರಡ್ಯರ್ಡ್ ಕಿಪ್ಲಿಂಗ್ ಕವಿಯ ಅಮರ ಕಾವ್ಯ ‘ಇಫ್ ‘ ನ ಭಾವಕ್ಕೆ ಹೋಲಿಕೆಯಿರುವುದನ್ನು ಗಮನಿಸಬಹುದು.
  2. ಕಲಿಯುಗದ ಆಕರ್ಷಣೆಗಳನ್ನು ಮೀರಿ ಜನಾರ್ದನಧ್ಯಾನನಿರತನಾಗಿರುವ ಆತ್ಮನೇ ವಿಷ್ಣುಭಕ್ತ.
    ಕಲಿಯುಗದಲ್ಲಿ ಭಕ್ತಿಮಾರ್ಗವೇ ಮೊಕ್ಷದಾಯಕ ಎಂಬ ನಂಬಿಕೆಯನ್ನೇ ಇಲ್ಲಿ ಒತ್ತಿಹೇಳಿದೆ.
  3. ದಾರಿಯಲ್ಲಿ ಬಿದ್ದಂತೆ ಕಂಡ ಹೊನ್ನನ್ನು ಮಣ್ಣೆಂದು ಬಗೆವವನು, ಭಗವಂತನಲ್ಲಿ ಪರಮ ಭಕ್ತಿಯಿರುವವನೆ ವಿಷ್ಣು ಭಕ್ತ.
    ನಮ್ಮದಲ್ಲದ ವಸ್ತುವನ್ನು ಭೋಗಿಸುವುದು ಸಲ್ಲ ಎಂಬುದು ಗೊತ್ತೇ ಇದೆ. ಜೊತೆಗೆ, ಇದರೊಂದಿಗೆ ಆಂಟಿಕೊಳ್ಳಬಾಹುದಾದ ಕರ್ಮಫಲವನ್ನು ಈ ಸಂದರಭದಲ್ಲಿ ಅನುಮಾನಿಸಬಹುದು. ಶ್ರೀಮದ್ಭಾಗವತದಲ್ಲಿ, ನಾವು ಮಾಡುವ ಯಾವುದೇ ದುಸ್ಸಾಹಸದ ಪರಿಣಾಮಗಳಿಗೆ ನಾವೇ ಹೊಣೆಗಾರರು, ಎಂಬ ವಿಚಾರವನ್ನಂತೂ ವಿಸ್ತಾರವಾಗಿ ತಿಳಿಸಲಾಗಿದೆ.
  4. ನಿಷ್ಕಲ್ಮಶವಾದ ಹೃದಯವಿರುವ, ಮಾತ್ಸರ್ಯವಿರದ, ಭೇದವರಿಯದ, ಧರ್ಮಮಾರ್ಗದಲ್ಲಿ ನಡೆಯುವ, ಪ್ರಾಣಿದಯೆಯಿರುವ, ಸೌಮ್ಯವಾದ ನಡತೆಯಿರುವ, ಅಹಂಕಾರ, ಮದವಿರದ ನರನ ಹೃದಯದಲ್ಲಿ ವಾಸುದೇವನು ಸದಾ ನೆಲೆಸಿರುತ್ತಾನೆ.
  5. ಭಟ್ಟನೇ, ಯಮ – ನಿಯಮಗಳನ್ನು ಪಾಲಿಸುವ, ಯೋಗಾಭ್ಯಾಸದಿಂದ ಪಾಪಗಳನ್ನು ತೊಳೆದು, ಅಚ್ಯುತನನ್ನು ಸದಾ ಸ್ಮರಿಸುವ, ದರ್ಪ, ಅಸೂಯೆಗಳನ್ನು ತೊರೆದ ಪವಿತ್ರಾತ್ಮರಿಂದ ದೂರವಿರು.
  6. ಅನಾದಿ, ಅನಂತ, ಅವ್ಯಯನಾದ, ಶಂಖ ಗದಾ – ಧಾರಿ ಶ್ರೀಹರಿಯು ಯಾರ ಹೃದಯದಲ್ಲಿ ವಾಸಿಸುವನೋ ಆ ನರನು ಪಾಪಕರ್ಮಗಳನ್ನು ಮಾಡಲಾರ. ಬೆಳಗುವ ಸೂರ್ಯನು ತಮವನ್ನು ಕಳೆಯುವಂತೆ ಶ್ರೀಹರಿಯು ಪಾಪವನ್ನು ಕಳೆಯುತ್ತಾನೆ.
  7. ತನ್ನನ್ನೊಳಗೊಂಡ ಸಮಸ್ತಬ್ರಹ್ಮಾಂಡವೇ ವಾಸುದೇವನ ಅಂಶವೆಂದು ತಿಳಿದು,   ಜಗದ್ವ್ಯಾಪಿ ಭಗವಂತನನ್ನು  ಮನಃಪೂರ್ವಕವಾಗಿ ಆರಾಧಿಸುವ ಭಕ್ತರಿಂದ ದೂರವಿರು.
  8. ‘ಹೇ ಕಮಲಾಕ್ಷ, ವಾಸುದೇವ, ವಿಷ್ಣು, ಭೂಧರ, ಅಚ್ಯುತ, ಶಂಖಪಾಣಿ, ಚಕ್ರಪಾಣಿ, ನನ್ನನ್ನು ಕಾಪಾಡು’  ಎಂದು ಬಗೆಬಗೆಯಾಗಿ ಕೊಂಡಾಡುವ ಸದಾತ್ಮರಿಂದ ದೂರವಿರು.
  9. ಯಾರ ಹೃತ್ಕಮಲದಲ್ಲಿ ವಾಸುದೇವನ ವಾಸವೋ, ನೀನಾಗಲೀ ನಾನಾಗಲೀ, ಅವನ್ನು ಎದುರಿಸಲಾಗದು. ನಮ್ಮ ಶಕ್ತಿ ಸಾಮರ್ಥ್ಯಗಳೆಲ್ಲ ಆ ದಿವ್ಯಚಕ್ರದೆದುರಿನಲ್ಲಿ ನಶಿಸುತ್ತವೆ. ವೈಕುಂಠವೇ ಮೊದಲಾದ ದಿವ್ಯ ಲೋಕಗಳನ್ನು ಆ ಪುಣ್ಯಾತ್ಮರು ಹೊಂದಲರ್ಹರು.

ಇಲ್ಲಿಯವರೆಗೆ, ಸಜ್ಜನರ, ಪುಣ್ಯಾತ್ಮರ ಗುಣವಿಶೇಷಗಳನ್ನು ಅವಲೋಕಿಸಿದ್ದೇವೆ. ಮುಂದೆ ಯಮನು, ಯಾರ ಹೃದಯದಲ್ಲಿ ಶ್ರೀಮನ್ನಾರಾಯಣನು ನೆಲೆಸಲು ಸಾಧ್ಯವಿಲ್ಲವೋ ಆ ನರರ ಅವಗುಣಗಳನ್ನು ತಿಳಿಸುತ್ತಾನೆ. ಜಾಗೃತಮನಸ್ಕರಾಗಿ ಸದಾ ಇಂತಹ ದುರಾಚಾರಗಳಿಂದ ದೂರವಿರುವುದು ಶ್ರೇಯಸ್ಕರ.

  1. ಪರರ ವಸ್ತುವನ್ನು ಹರಣ ಮಾಡುವವನು, ಪ್ರಾಣಿಹಿಂಸೆಗೈಯುವವನು, ಅಸತ್ಯದ, ಕಟುವಾದ ಮಾತನ್ನಾಡುವವನು, ಇಂತಹ ದುರ್ಮತಿಯಲ್ಲಿ ಪರಮಾತ್ಮನ ನೆಲೆಯಿರದು.
  2. ಅನ್ಯರ ಅಭ್ಯುದಯಕ್ಕೆ ಮತ್ಸರಪಡುವ, ಸಜ್ಜನರ ನಿಂದೆ ಮಾಡುವ, ಯಜ್ಞಕರ್ಮಗಳನ್ನು ಮಾಡದೆ, ಸಮರ್ಥನಾಗಿದ್ದರೂ ದಾನಧರ್ಮಗಳನ್ನು ಮಾಡದ ನರನ ಹೃದಯವೆಂದೂ ಜನಾರ್ದನನ ನಿವಾಸವಾಗದು.
  3. ಬಂಧು ಮಿತ್ರರು, ಪಾಲಕರು, ಮಕ್ಕಳನ್ನು ಅನಾದರದಿಂದ ಕಾಣುವ, ಧನಕನಕಗಳ ಅತಿಯಾದ ತೃಷೆ ಹೊಂದಿರುವ ನರನು ವಿಷ್ಣು ಭಕ್ತನಲ್ಲ.
  4. ಕುಬುದ್ಧಿಯಿಂದ ಅಡ್ಡದಾರಿ ಹಿಡಿಯುವ, ದುರಾತ್ಮರ ಸಂಗ ಬಯಸುವ, ಪ್ರತಿದಿನವೂ ಪಾಪಕರ್ಮಗೈಯುವ, ಮಾನವರೂಪದ ಪಶುವು ವಾಸುದೇವನ ಭಕ್ತನೆನಿಸಲು ಅರ್ಹನಲ್ಲ.

ಹೀಗೆ ಹೇಳುತ್ತಾ, ಭೀಷ್ಮರು ನಕುಲನಿಗೆ, ಈ ಭವಾಸಾಗರದಲ್ಲಿ ನಮ್ಮನ್ನು ಪೊರೆಯಲು ಮಹಾವಿಷ್ಣುವಲ್ಲದೇ ಬೇರೆಯಿಲ್ಲ ಎನ್ನುತ್ತಾರೆ. ಶ್ರೀಮನ್ನಾರಾಯಣಧ್ಯಾನಿರತ ನರನ ಮೇಲೆ ಯಮಭಟ್ಟರಾಗಲೀ, ಯಮದಂಡ-ಪಾಶಗಳಾಗಲೀ ಯಮಲೋಕವಾಗಲೀ ಪ್ರಭಾವ ಬೀರವು.

ಸೂಕ್ಷ್ಮವಾಗಿ ಗಮನಿಸಿದಾಗ, ಅರಿಷಡ್ವರ್ಗಗಳನ್ನು ಮೆಟ್ಟಿನಿಲ್ಲುವ, ಧರ್ಮಪಥದ ಸಾಧನೆಯ ಕುರಿತ ತತ್ವವೇ ಇದರಲ್ಲಿ ಅಂತರ್ಗತವಾಗಿರುವುದು ಸ್ಪಷ್ಟವಾಗುತ್ತದೆ.

ಕವಿ ಸೋಮೇಶ್ವರನು ಹೇಳುವಂತೆ-

ಅರಿಷಡ್ವರ್ಗಂಗಳಂ ಗೆಲ್ವೋಡೇ ತೆರ ಬಲ್ಲರ್ಪೋಣೆಯಪ್ಪುದೈ
ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ

ಆರು ವೈರಿಗಳ ಗೆಲ್ಲಬಲ್ಲನೇ ಯೋಗಿಯಾಗಲು ಯೋಗ್ಯನು.

ಯಮನ ಸೂಚನೆಗಳು ಪ್ರಾಯೋಗಿಕವೂ, ಸುಲಭವೂ ಆದಲ್ಲಿ, ಕಾಲಾತೀತವಾದ ಈ ವಿವೇಕವನ್ನು ಕಾರ್ಯರೂಪಕ್ಕೆ ತರಲು ನಾವು ಸೋಲುವುದೇಕೆ? ಈ ಆತ್ಮವಿಮರ್ಶೆಯೇ ಸಾಧನೆಯ ಮೊದಲ ಹೆಜ್ಜೆ.

ಮುಂದಿನ ಲೇಖನದಲ್ಲಿ ಅಜಾಮಿಳನ ಕಥೆಯಲ್ಲಿ ವಿಷ್ಣು ಸೇವಕರ ಮತ್ತು ಯಮ ಭಟ್ಟರ ನಡುವಿನ ವಾಗ್ವಾದದ ಸಂದರ್ಭದಲ್ಲಿ ಯಮನ ಉದ್ಬೋಧೆಯನ್ನು ಅವಲೋಕಿಸೋಣ.

ಗ್ರಂಥಸೂಚಿ

  1. ವಿಷ್ಣುಪುರಾಣ – ಭಾರತ ದರ್ಶನ ಪ್ರಕಾಶನ
  2. ಸೋಮೇಶ್ವರ ಶತಕ – https://archive.org/details/bvpciilkspsomeshwarashataka

 

(ಈ ಲೇಖನ ಗಣೇಶ್ ವಿಜಯನ್ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This is a Kannada translation of an English article by Ganesh Vijayan)

(Image credit: dollsofindia.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply